Tuesday, August 21, 2018

BRAHMA IDU YAARA KAASHMIRA (ಇದು ಯಾರ ಕಾಶ್ಮೀರ)

                                                                                                ಸಂಗ್ರಹಿತ
                                                                ಇದು ಯಾರ ಕಾಶ್ಮೀರ
ಇದು ಯಾರ ಕಾಶ್ಮೀರ ?
ಇದು ಋಷಿ ಕಶ್ಯಪರ ಕಾಶ್ಮೀರ...
'ಮೈರಾ' ಎನ್ನುವ ಸಂಸ್ಕೃತ ಪದದ ಅರ್ಥ ಸರೋವರ ಎಂದು. ಮನ್ವಂತರದ , ಸಪ್ತರ್ಷಿಗಳಲ್ಲಿ ಒಬ್ಬರು ಕಶ್ಯಪರು, ಇವರು ಬ್ರಹ್ಮನ ಮೊಮ್ಮಗ. ಇವರ ತಂದೆಯಾದ ಮಹರ್ಷಿ ಮರೀಚಿ, ಬ್ರಹ್ಮನ ಮಾನಸ ಪುತ್ರರು. ಪ್ರಜಾಪತಿ ದಕ್ಷ ತನ್ನ ಹದಿಮೂರು ಹೆಣ್ಣುಮಕ್ಕಳನ್ನು ಕಶ್ಯಪ ಮುನಿಗೆ ಕೊಟ್ಟು ಮದುವೆ ಮಾಡಿ ಕೊಡುತ್ತಾರೆ.
ಕಶ್ಯಪ ಗೋತ್ರ ಆರಂಭವಾಗುವುದೇ ಇಲ್ಲಿಂದ. ಇವರ ಸಂತಾನದಲ್ಲಿ, ದೇವತೆಗಳು, ದೈತ್ಯರು, ದಾನವರು, ನಾಗಾಗಳು, ಮಾನವರು ಎಲ್ಲಾ ಪಂಗಡಗಳ ಜೀವಿಗಳು ಸೇರಿರುತ್ತಾರೆ.
ನೀಲಮತ ಪುರಾಣದ ಪ್ರಕಾರ ಈಗಿನ ಕಾಶ್ಮೀರವಿರುವ ಸ್ಥಳದಲ್ಲಿ 'ಸತೀಸರ'ಎನ್ನುವ ಬಹುದೊಡ್ಡ ಸರೋವರವಿತ್ತಂತೆ. ಶಿವನ ಪತ್ನಿ ಸತಿಗೆ ಅದು ತುಂಬಾ ಪ್ರಿಯವಾದ ಸರೋವರವಾಗಿದ್ದರಿಂದ ಕಶ್ಯಪರು ಈ ಸರೋವರವನ್ನು ಶಿವ ಸತಿಯರೀರ್ವರಿಗೆ  ಬಳುವಳಿಯಾಗಿ ಕೊಟ್ಟಿದ್ದರಂತೆ. ಆದರೆ ಆ ಸರೋವರದಲ್ಲಿ ಜಲೋಧ್ಭವ ಎನ್ನುವ ರಾಕ್ಷಸ ಅಡಗಿಕೊಂಡು ಕಶ್ಯಪರ ಸಂತಾನಗಳಿಗೆ ಕಿರುಕುಳ ಕೊಡುತ್ತಿದ್ದ. ಆಗ ಕಶ್ಯಪರು ಅವರ ಮಗ 'ಅನಂತ ನಾಗನ ಜೊತೆಗೂಡಿ ಒಂದು ವರಾಹ ಮುಖ (ಇಂದಿನ ಬಾರಮುಲ್ಲ) ಎನ್ನುವ ಕಣಿವೆಯನ್ನು ಕಡಿದು ಆ ಸರೋವರದ ನೀರನ್ನು ಹೊರ ಹರಿಸುತ್ತಾರೆ. ಹೀಗೆ ಹರಿದ ನೀರು ಪಶ್ಚಿಮದ ಇನ್ನೊಂದು ಕಣಿವೆಗೆ ಹರಿಯುತ್ತದೆ. ಅದನ್ನು ಕಶ್ಯಪ ಸಾಗರವೆಂದೂ (ಇಂದಿನ ಕ್ಯಾಸ್ಪಿಯನ್ ಸಮುದ್ರ) ಕರೆಯುತ್ತಾರೆ.
ನಂತರ ವಿಷ್ಣು ಆ ಜಲೋಧ್ಭವ ರಾಕ್ಷಸನ  ಸಂಹಾರ ಮಾಡುತ್ತಾರೆ.  ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದಾಭ್ಯಾಸಕ್ಕೆಂದೇ ವಿಷೇಶವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆ...ಅದನ್ನು 'ಕಶ್ಯಪ ಮೈರಾ'..ಕಶ್ಯಪ ಪುರ...ಕ್ರಮೇಣ "ಕಾಶ್ಮೀರ"  ಎಂದು  ಹೆಸರು ವಾಸಿಯಾಗುತ್ತದೆ. 
ಈ ಸುಂದರ ಕಾಶ್ಮೀರವನ್ನು ನೋಡಲು ಗೌರಿಯೂ ಗಣೇಶನ ಜೊತೆ ಹಿಮಚ್ಚಾದಿತ ಪರ್ವತಮಾರ್ಗವಾಗಿ ಬರುತ್ತಿದ್ದಳು. ಅದನ್ನು ಗೌರೀ ಮಾರ್ಗಎಂದು ಕರೆಯುತ್ತಿದ್ದರು. ಅದೂ ಸಹಾ ಇಸ್ಲಾಮೀಕರಣಗೊಂಡು ಗುಲ್ಮರ್ಗವಾಗಿದೆ.
'ನೀಲಮತಿ ಪುರಾಣ' ಮತ್ತು ಅದರ ಆಧಾರಿತ 'ರಾಜತರಂಗಿಣಿ' ಇವು ಕಾಶ್ಮೀರದ ಪೌರಾಣಿಕ ಮತ್ತು ಐತಿಹಾಸಕದ ದಾಖಲೆಗಳು. ಹನ್ನೆರಡನೇ ಶತಮಾನದಲ್ಲಿ  'ಬಿಲ್ಹಣ' , 'ಕಲ್ಹಣ' ಎಂಬ ಪಂಡಿತರು ಬರೆದ ಗ್ರಂಥಗಳ ಸರಮಾಲೆ ವಿಶ್ವದೆಲ್ಲೆಡೆ ಬಹಳ ಕುತೂಹಲ ಮತ್ತು ಆಸ್ಥೆಯಿಂದ ಅಭ್ಯಸಿಸಲಾಗುತ್ತಿದೆ....ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಇದರ ಬಗ್ಗೆ ಯಾರೂ ಹೆಚ್ಚು ತಲೆಕೆಡಿಕೊಳ್ಳುವುದಿಲ್ಲ...ಯಾಕೆಂದರೆ ಮಾಧ್ಯಮಗಳು ಬಿಂಬಿಸುವ ಕಾಶ್ಮೀರವೇ ಬೇರೆ.
 ನಮ್ಮ  ದುರದೃಷ್ಟ….
ಇದು ಯಾರ ಕಾಶ್ಮೀರ?
ಇದು ಶಾರದಾದೇವಿಯ ಕಾಶ್ಮೀರ.
"ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ | ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ  ದೇಹಿಮೇ |"
 ಹೀಗೆ...ಶಾರದಾದೇವಿಯನ್ನು ಸ್ತುತಿಸುವುದೇ 'ಕಾಶ್ಮೀರ ಪುರವಾಸಿನಿ' ಎಂದು.ಕಾಶ್ಮೀರದ ಲಿಪಿಯ ಹೆಸರೇನು ಗೊತ್ತೇ?... 'ಶಾರದ
 ಅಂದಿನ ಕಾಶ್ಮೀರದ ವೇದಶಾಲೆಗಳನ್ನು ಏನೆಂದು ಕರೆಯುತ್ತಿದ್ದರು?....ಶಾರದ ಪೀಠ!
ಇದೆಲ್ಲಾ ಇರಲಿಬಿಡಿ.. ಅಂದೊಮ್ಮೆ ಇಡೀ ಕಾಶ್ಮೀರವನ್ನೇ ಶಾರದ ದೇಶ' ಎಂದು ಕರೆಯುತ್ತಿದ್ದರು.
ಇಷ್ಟಿಲ್ಲದಿದ್ದರೆ ಶಂಕರಾಚಾರ್ಯರು ಕಾಶ್ಮೀರಕ್ಕೆ ಏಕೆ ಹೋಗುತ್ತಿದ್ದರು.
ಅಲ್ಲಿಯ ಕೃಷ್ಣಗಂಗೆ ನದಿಯ ತೀರದಲ್ಲಿರುವ ಶಾರದ ಪೀಠದ ಸೊಬಗನ್ನು ನೋಡಿ, ಅದೇ ತರಹದ ಇನ್ನೊಂದು ಶಾರದ ದೇವಸ್ಥಾನವನ್ನು ತುಂಗಭಧ್ರಾ ನದಿಯ ತೀರದ ಶೃಂಗೇರಿಯಲ್ಲಿ ಸ್ಥಾಪಿಸಲು ಪ್ರೇರಣೆ ಸಿಕ್ಕಿದ್ದು ಆ ಕಾಶ್ಮೀರದ ಶಾರದ ಪೀಠದಿಂದ. ಶಾರದಾ ದೇವಿಯ ಶ್ರೀಗಂಧದ ಮೂಲ ವಿಗ್ರಹವನ್ನು ಕಾಶ್ಮೀರದಿಂದಲೇ ಶೃಂಗೇರಿಗೆ ತರಲಾಗಿತ್ತಂತೆ.
        ಕಾಶ್ಮೀರಕ್ಕೆ ತಮ್ಮ ಕೆಲವು ಶಿಷ್ಯರೊಂದಿಗೆ ಹೋದ ಹೊಸತರಲ್ಲಿ ಶಂಕರಾಚಾರ್ಯರು ಒಬ್ಬ ಕಾಶ್ಮೀರಿ ಪಂಡಿತರ ಅತಿಥಿಯಾಗಿದ್ದರಂತೆ. ಮೊದಲ ದಿನವೇ ಅವರ ಪಾಂಡಿತ್ಯಕ್ಕೆ ಬೆರಗಾದ ಪಂಡಿತ ದಂಪತಿಗಳು ಅವರನ್ನು ಇನ್ನಷ್ಟು ದಿನಗಳು ತಮ್ಮ ಅತಿಥಿ ಸತ್ಕಾರವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡರಂತೆ. ಅದಕ್ಕೆ ಒಪ್ಪಿಕೊಂಡ ಶಂಕರಾಚಾರ್ಯರು ಒಂದು ಶರತ್ತು ಹಾಕುತ್ತಾರೆ, ಅದೇನೆಂದರೆ ನಮ್ಮ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದು. ಇದು ಪಂಡಿತ ದಂಪತಿಗಳಿಗೆ ಸ್ವಲ್ಪ ಅವಮಾನಿತವಾಗಿ ಕಂಡರೂ..ಅವರಿಷ್ಟ ಎಂದು ಅಡುಗೆಗೆ ಬೇಕಾದ ದವಸ ಧಾನ್ಯಗಳನ್ನು, ಪಾತ್ರೆ ಕಟ್ಟುಗೆಗಳನ್ನು ಕೊಟ್ಟು ವಿರಮಿಸುತ್ತಾರೆ.ಆದರೆ ಅಡುಗೆ ಮಾಡಲು ಬೇಕಾದ ಬೆಂಕಿಯನ್ನು ಕೊಡಲು ಮರೆತು ಬಿಡುತ್ತಾರೆ. ಇನ್ನೊಮ್ಮೆ ಅವರನ್ನು  ಕರೆದು ತೊಂದರೆ ಕೊಡುವುದರ ಬದಲು ಹಾಗೇ ಹಸಿದ ಹೊಟ್ಟೆಯಲ್ಲೇ ಮಲಗಿ ಬಿಡುತ್ತಾರೆ. ಬೆಳಗ್ಗೆದ್ದು ಪಂಡಿತ ದಂಪತಿಗಳು ಬಂದು ನಮಸ್ಕರಿಸಿ ಮಾತನಾಡಿಸುವಾಗ ಅಡುಗೆಯ ಪಧಾರ್ಥಗಳೆಲ್ಲಾ ಹಾಗೇ ಇರುವುದನ್ನು ನೋಡಿ ಏಕೆಂದು ವಿಚಾರಿಸುತ್ತಾರೆ. ಆಗ ಅವರ ಶಿಷ್ಯರುಗಳು ಬೆಂಕಿ ಇಲ್ಲದ್ದರಿಂದ ಅಡುಗೆ ಮಾಡಲಾಗಲಿಲ್ಲ ಎಂದು ಹೇಳುತ್ತಾರೆ. ತಕ್ಷಣ ಆ ಗೃಹಿಣಿ ಅಲ್ಲೇ ಇದ್ದ ನೀರನ್ನು ಕಟ್ಟಿಗೆಯ ಮೇಲೆ ಚಿಮುಕಿದಾಕ್ಷಣ ಬೆಂಕಿ ಉರಿಯ ತೊಡಗುತ್ತದೆ !.
ಈ ಪ್ರಸಂಗದಿಂದ ಶಂಕರಾಚಾರ್ಯರಿಗೆ ತಾವಿನ್ನೂ ತುಂಬಾ ಕಲಿಯುವುದಿದೆ ಈ ಶಾರದ ದೇಶದಲ್ಲಿ ,ಎನಿಸಿ ಹಲವುದಿನಗಳ ಕಾಲ ಅಲ್ಲೇ ನೆಲೆಸುತ್ತಾರೆ. ಅವರು ನೆಲಸಿದ ಬೆಟ್ಟ ಈಗಲೂ 'ಶಂಕರಾಚಾರ್ಯ ಬೆಟ್ಟ' ಎಂದು ಪ್ರಸಿಧ್ಧ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಇದು ಶ್ರೀನಗರದ ನಟ್ಟ ನಡುವೆ , ಪ್ರಸಿಧ್ಧವಾದ 'ದಲ್ 'ಸರೋವರದ ಪಕ್ಕದಲ್ಲಿದೆ. ಅಂದಿನ ಶಾರದಾ ಪೀಠ, ದುರದೃಷ್ಟವಶಾತ್ ಈಗ ಪಾಕೀಸ್ತಾನದ ಆಳ್ವಿಕೆಯ ಕಾಶ್ಮೀರದ ಭಾಗದಲ್ಲಿದೆ. ಅಲ್ಲಿಗೆ ಹೋಗಲು ಯಾರಿಗೂ ಅನುಮತಿ ಸಿಗುತ್ತಿಲ್ಲ. ಶಾರದಾ ದೇವಸ್ಥಾನ ಶಿಥಿಲಗೊಂಡು ದಿನೇ ದಿನೇ ಧರೆಗುರುಳುತ್ತಿದೆ.
ವಿಷಿಷ್ಟಾದೈತ ಸಿಧ್ಧಾಂತ ನಾಥಮುನಿಯಿಂದ ಪ್ರಾರಂಭವಾದುದು ಎಂದು ಉಲ್ಲೇಖವಿದೆ, ಅದನ್ನು ಯಮುನಾಚಾರ್ಯರು ವಿಸ್ತರಿಸಿದರು ಮತ್ತು ರಾಮಾನುಜರು ಬ್ರಹ್ಮ ಸೂತ್ರದ ಚೌಕಟ್ಟಿನಲ್ಲಿ ಪ್ರತಿಪಾದಿಸಿ,' ಶ್ರೀ ಭಾಷ್ಯಂ' ಎನ್ನುವ ಮೇರುಗ್ರಂಥವನ್ನು ಸೃಷ್ಟಿಸಿದರು. ಇದೇ ಶ್ರೀ ವೈಷ್ಣವರ ಮೂಲಗ್ರಂಥ.ಇಂತಹದ್ದೊಂದು ಗ್ರಂಥವನ್ನು ಸೃಷ್ಟಿಸಲು ರಾಮಾನುಜರು ತಮ್ಮ ಶಿಷ್ಯ ಕುರುತ್ತಾಳ್ವಾರ್ (ಕುರೇಸಿ) ಜೊತೆಗೂಡಿ ಬ್ರಹ್ಮಸೂತ್ರವನ್ನು ಹುಡುಕಿಕೊಂಡು ಕಾಶ್ಮೀರಕ್ಕೆ  ಹೋಗಿದ್ದರು. ಅವರಿಗಾಗಲೇ ಅರವತ್ತು ವರ್ಷ  !. ಹೀಗೆ ಶಾರದಾದೇವಿಯ ಕೃಪಾಕಟಾಕ್ಷ ಅನಾದಿಕಾಲದಿಂದಲೂ ಕಾಶ್ಮೀರದ ಮೇಲಿರುವಾಗ..ಕಾಶ್ಮೀರ ಇನ್ನಾರದಾಗಲು ಸಾಧ್ಯ?
ಇದು ಯಾರ ಕಾಶ್ಮೀರ
ಇದು ಭಟ್ಟರ ಕಾಶ್ಮೀರ...
ನೀಲಮತ ಪುರಾಣದ ಪ್ರಕಾರ ಕಾಶ್ಮೀರಕ್ಕೆ ಸುಮಾರು 5100 ವರ್ಷದ ಇತಿಹಾಸವಿದೆ. 13 ನೇ ಶತಮಾನದವರೆಗೂ ಕಾಶ್ಮೀರದಲ್ಲಿ ಶತಪ್ರತಿಶತ ಹಿಂದು ಮತ್ತು ಬೌಧ್ಧ ಧರ್ಮಿಗಳಿದ್ದರು.ಕೇವಲ ಏಳು ಶತಕಗಳಲ್ಲಿ ಕಾಶ್ಮೀರದ ಕಣಿವೆಯಲ್ಲಿ 97 ಪ್ರತಿಶತ ಮುಸ್ಲೀಮರು!
ಏನೇನೆಲ್ಲಾ ಆಗಿರ ಬಹುದು ಈ ಏಳು ಶತಕಗಳಲ್ಲಿ.ಕಾಶ್ಮೀರದ ಪಂಡಿತರನ್ನು 'ಭಟ್ಟರು' ಎಂದು ಕರೆಯುತ್ತಾರೆ. ಇವರು ಶೈವ ಸಾರಸ್ವತ ಬ್ರಾಹ್ಮಣರು. ಸುಂದರ ಕಾಶ್ಮೀರದ ಜನಾಂಗ ಶಾಂತಿ ಪ್ರಿಯರು . ವೇದ ಪಾರಾಯಣ, ಪೂಜೆ ಪುನಸ್ಕಾರಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಖೀಜೀವನ ನಡೆಸುತ್ತಿದ್ದ  ಜನಾಂಗ. ಕಣಿವೆಯ ಜನರಲ್ಲಿ ಒಂದು ರೀತಿಯ ಭೌಗೋಳಿಕ ಏಕಾಂತತೆ ಇರುತ್ತದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯುವುದಿಲ್ಲ, ಹಾಗೇ ಹೊರಗಿನವರಿಗೆ ಸುಲಭವಾಗಿ ಒಗ್ಗಿ ಕೊಳ್ಳುವುದಿಲ್ಲ, ಹಾಗೂ ತಮ್ಮ ತಮ್ಮಲ್ಲೇ ಒಗ್ಗಟ್ಟೂ ಇರುವುದಿಲ್ಲ.
13 ನೇ ಶತಮಾನದ ಲೋಹಾನರ ರಾಜವಂಶದ ರಾಜ ರಾಮಚಂದ್ರನೇ ಕೊನೆಯ ಹಿಂದೂ ರಾಜ.ಅಷ್ಟೊತ್ತಿಗಾಗಲೇ ತುರ್ಕಿಸ್ಥಾನದ 'ದುಲ್ಚ 'ಎನ್ನುವ ದುಷ್ಟ ಕಾಶ್ಮೀರದ ಮೇಲೆ ಆಕ್ರಮಣ ಮಾಡಿ, ಕೊಳ್ಳೆ ಹೊಡೆದು, ಸುಮಾರು ಐವತ್ತು ಸಾವಿರ ಕಾಶ್ಮೀರಿಗಳನ್ನು ಗುಲಾಮನರನ್ನಾಗಿ ಸೆರೆಹಿಡಿದು ಕೊಂಡು ಹೋದ.ಮುಂದೆ 'ರಿನ್ಚೆನ್' ಎನ್ನುವ ಬೌಧ್ಧ ಧರ್ಮದ ಸೇನಾನಿ ರಾಮಚಂದ್ರ ರಾಜನನ್ನು ಮೋಸದಿಂದ ಕೊಂದು ತಾನೇ ರಾಜನಾದ.ಇಲ್ಲೊಂದು ಕುತೂಹಲಕಾರಿ ವಿದ್ಯಮಾನ ನಡೆಯುತ್ತದೆ. 'ರಿನ್ಚೆನ್' ಕಾಶ್ಮೀರದ ಪ್ರಜೆಗಳನ್ನು ಓಲೈಸಲು "ಶೈವ" ಮತಕ್ಕೆ ಮತಾಂತರಗೊಳ್ಳಲು ನಿರ್ಧರಿಸುತ್ತಾನೆ. ಇದನ್ನು ರಾಜಗುರು ದೇವಸ್ವಾಮಿಯ ಹತ್ತಿರ ವಿಚಾರಣೆ ಮಾಡುತ್ತಾನೆ. ದೇವಸ್ವಾಮಿ ಈ ವಿಷಯವನ್ನು ಕಾಶ್ಮೀರಿ ಪಂಡಿತರ ಬಳಿ ನಿಷ್ಕರ್ಶಿಸಿ, ಇದಕ್ಕೆ ಶೈವ ಮತದಲ್ಲಿ ಅವಕಾಶವಿಲ್ಲವೆಂದು ಹೇಳಿಬಿಡುತ್ತಾರೆ!
ಇದರಿಂದ ಅವಮಾನಿತನಾದ ರಿನ್ಛೆನ್ ಮುಸ್ಲೀಮ್ ಧರ್ಮಕ್ಕೆ ಮತಾಂತರಗೊಂಡು, ಜೊತೆಗೆ ಹತ್ತು ಸಾವಿರ ಪಂಡಿತರನ್ನೂ ಮುಸ್ಲೀಮರನ್ನಾಗಿ ಮತಾಂತರಗೊಳಿಸಿಬಿಡುತ್ತಾನೆ.
ಇಲ್ಲಿಂದ ಶುರುವಾಗುತ್ತದೆ ನೋಡಿ ಭಟ್ಟರ ಮತಾಂತರದ, ಮಾರಣಹೋಮದ ವೃತ್ತಾಂತ.
ಇದು ಯಾರ ಕಾಶ್ಮೀರ
ಇದು ಋಷಿಗಳ, ಸಂತರ, ಕವಿಗಳ ಕಾಶ್ಮೀರ..
13 ನೇ ಶತಮಾನದಿಂದ ಆರಂಭವಾದ ಮತಾಂತರ, ಕೇವಲ ಏಳು ಶತಮಾನಗಳಲ್ಲಿ ಹಿಂದೂ ಮತ್ತು ಬೌಧ್ಧರ ಸಂಖ್ಯೆಯನ್ನು..... ಶತ ಪ್ರತಿಶತದಿಂದ ಕೇವರ ಮೂರು ಪ್ರತಿಶತಕ್ಕಿಳಿಸಿ ಬಿಟ್ಟಿತ್ತು!.ಭಾರತದಲ್ಲಿ ಈ ತರಹದ ಕ್ಷಿಪ್ರವಾಗಿ ನಡೆದ ಮತಾಂತರದ ಉದಾಹರಣೆಗಳು ಬಹುಷಃ ಬೇರೆಲ್ಲೂ ಕಾಣಸಿಗದು.... ಗೋವಾ ಒಂದನ್ನು ಹೊರತು ಪಡಿಸಿ.
ಇಲ್ಲಿ ಒಂದು ಕುತೂಹನ ವಿದ್ಯಮಾನವೆಂದರೆ ಈ ಎರಡೂ ರಾಜ್ಯಗಳ ಮತಾಂತರದ ಮಂಥನದಲ್ಲಿ ಸಿಲುಕಿದವರು ಪ್ರಮುಖವಾಗಿ ಸಾರಸ್ವತ ಬ್ರಾಹ್ಮಣರು! ಕಶ್ಯಪರ ಕಾಶ್ಮೀರದಲ್ಲಿ ಶೈವ ಸಾರಸ್ವತ ಬ್ರಾಹ್ಮಣರು ಮತ್ತು ವಿಶ್ವಾಮಿತ್ರರ ಗೋಮಾಂತದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರು.
ಈ ರಕ್ತಸಿಕ್ತ ಇತಿಹಾಸದ ಅವಧಿಯಲ್ಲೂ ಕಾಶ್ಮೀರದಲ್ಲಿ ಹಲವು ಕ್ರಾಂತಿಕಾರಕ ಘಟನೆಗಳು ನಡೆಯುತ್ತವೆ, ಸೂಫಿ ಸಂತರ, ನಂದ ರಿಷಿಯಂತಹ ಮುಸ್ಲಿಂ ಸನ್ಯಾಸಿಯ ಮತ್ತು ಲಲ್ಲೇಶ್ವರಿಯಂತಹ ಸಂತ ಕವಿಗಳ ಉಧ್ಭವವಾಗುತ್ತದೆ.
ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಅಕ್ಕಮಹಾದೇವಿಯ ವೃತ್ತಾಂತ ಹದಿನಾಲ್ಕನೇ ಶತಮಾನದಲ್ಲಿ ಕಾಶ್ಮೀರದಲ್ಲಿ ಲಲ್ಲೇಶ್ವರಿಯ ಹೆಸರಿನಲ್ಲಿ ಪುನಾರಾವರ್ತನೆಯಾಗುತ್ತದೆಯೇನೋ ಎನ್ನುವಷ್ಟು ಹೊಂದಾಣಿಕೆ.ಇಬ್ಬರೂ ಶಿವಾರಾಧಕರು, ಇಬ್ಬರೂ ಅಪ್ರತಿಮ ಸುಂದರಿಯರು, ಇಬ್ಬರೂ ವಿವಾಹ ಬಂಧನದಿಂದ ಹೊರಬಂದು ಆಧ್ಯಾತ್ಮದ ಹಾದಿಯಲ್ಲಿ ನಡೆದವರು ಮತ್ತು ಇಬ್ಬರೂ ಅಧ್ಭುತ ಕಾವ್ಯಗಳ, ಸಾಹಿತ್ಯದ ರಚನಾಕಾರರು...ಅಕ್ಕಮಹಾದೇವಿ ವಚನನಗಳನ್ನು ರಚಿಸಿದರೆ ಲಲ್ಲೇಶ್ವರಿಯ ರಚನೆಗಳು 'ವಾಕ್' ಹೆಸರಿನಲ್ಲಿ ವಿಶ್ವವದೆಲ್ಲೆಡೆ ಹೆಸರುವಾಸಿಯಾಗಿವೆ.
ಅಕ್ಕಮಹಾದೇವಿಯನ್ನು 'ಅಕ್ಕ' ಎಂದು ಸಂಭೋದಿಸದರೆ ಲಲ್ಲೇಶ್ವರಿಯನ್ನು ಅಮ್ಮ (ಲಾಲ್ ದೇಡ್) ಎಂದು ಸಂಭೋದಿಸಲಾಗುತ್ತದೆ.ಇಬ್ಬರೂ ಆಕಾಶವೇ ಹೊದಿಕೆ ಎಂದು ಕೇಶವಸ್ತ್ರಧಾರಿಗಳಾಗಿ ನಡೆದಾಡುತ್ತಿದ್ದರಂತೆ ಎನ್ನುವ ಪ್ರತೀತಿ.
ಲಲ್ಲೇಶ್ವರಿಯ ವೈಶಿಷ್ಟ್ಯವೆಂದರೆ ಅವರ ಶಿಷ್ಯವರ್ಗದಲ್ಲಿ ಮುಸ್ಲೀಮರೇ ಹೆಚ್ಚು!
'ಹಿಂದೂ ಮುಸ್ಲೀಮರೆನ್ನುವ ಭೇದ ಭಾವ ಬೇಡ, ಶಿವ ಸೂತ್ರವೇ ಎಲ್ಲದರ ಮೂಲ' ಎಂದು ಭೋಧಿಸಿ ಶಿವಾರಾಧಕರ.. ಸೂಫಿ ಸಂತರ..ಮಾತೆಯಾಗಿ ಮೆರೆದಳು  ಕಾಶ್ಮೀರದ ಲಲ್ಲೇಶ್ವರಿ.
ಇದು ಯಾರ ಕಾಶ್ಮೀರ
ಕರ್ನಾಟಕದ ಬಿಲ್ಹಣ..
ಕಾಶ್ಮೀರದ ಕಲ್ಹಣ...
ಕಾಶ್ಮೀರದ ನಂಟು ಕರ್ನಾಟಕಕ್ಕೂ ಇತ್ತು..!
ಅದು ಹೇಗೆ?
ಅನಾದಿಕಾಲದಿಂದಲೂ ಈ ದೇವನಾಡಿನಲ್ಲಿ ಪ್ರಚಲಿತವಾದ ದೇವಭಾಷೆ ಸಂಸ್ಕೃತ.
ಹನ್ನೊಂದನೇ ಶತಮಾನದಲ್ಲಿ 'ಕಲ್ಹಣ' ಎಂಬ ಮಹಾನ್ ಕವಿ ಕಾಶ್ಮೀರದ ಇತಿಹಾಸದ ಬಗ್ಗೆ, ಇಲ್ಲಿಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಒಂದು ಬೃಹತ್ ಗ್ರಂಥವನ್ನು ಬರೆಯುತ್ತಾರೆ. ಅದೇ "ರಾಜತರಂಗಿಣಿ".ಇದೇ ಸಮಯದಲ್ಲಿ "ಬಿಲ್ಹಣ" ಎನ್ನುವ ಬಹುಮುಖ ಪ್ರತಿಭೆಯ ಕಾಶ್ಮೀರದ ಕವಿಯೊಬ್ಬರ ರಚನೆಗಳು ಬೆಳಕಿಗೆ ಬರುತ್ತವೆ. ಆದರೆ ಅವರು ಪ್ರಖ್ಯಾತಿ ಪಡೆದಿದ್ದು ಮತ್ತು ಅವರ ರಚನೆಗಳು ಬೆಳಕು ಕಂಡಿದ್ದು ಅಂದಿನ ಕರ್ನಾಟಕದಲ್ಲಿ!
ಕಾಶ್ಮೀರದಿಂದ ಹೊರಬಂದು ವಿಧರ್ಭ, ವಂಗ, ಮಾಳವ ದೇಶಗಳನ್ನೆಲ್ಲಾ ಸುತ್ತಾಡಿ ಅಂದಿನ ಕಲ್ಯಾಣಕಟಕಕ್ಕೆ ಬಂದು ಸೇರುತ್ತಾರೆ. ಅದು ಚಾಳುಕ್ಯ ವಂಶದ ರಾಜರಾದ ಆರನೇ ವಿಕ್ರಮಾದಿತ್ಯರ ರಾಜಧಾನಿ. ವಿಕ್ರಮಾದಿತ್ಯರು ಇವರ ಸಂಸ್ಕೃತದ ಪಾರಂಗತ್ಯವನ್ನು ಮೆಚ್ಚಿ  ಅವರಿಗೆ ಆಸ್ಥಾನ ಕವಿಯ ಸ್ಥಾನವನ್ನು ಕೊಟ್ಟು ಗೌರವಿಸುತ್ತಾರೆ.
ಇಲ್ಲಿ ಅವರು "ವಿಕ್ರಮಾಂಕ ದೇವಚರಿತ" ವನ್ನು ಬರೆಯುತ್ತಾರೆ.ಆದರೆ ಬಿಲ್ಹಣರ ರಸಿಕತೆಯ ಪರಿಚಯವಾಗುವುದು ಅವರ ಇನ್ನೊಂದು ಕೃತಿ.."ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮಗೀತೆಗಳ ಕೃತಿಯಿಂದ.
ಇದರ ಹಿನ್ನಲೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ಇದೆ. ವಿಕ್ರಮಾದಿತ್ಯರ ರಾಜ್ಯಕ್ಕೂ ಬರುವ ಮೊದಲು, ಬಿಲ್ಹಣ ಅಂದಿನ ಗುಜರಾತಿನ ವೀರಸೇನರ ಆಸ್ಥಾನದ ವಿದ್ವಾಂಸರಾಗಿರುತ್ತಾರೆ. ಈ ಯುವ ಕವಿಗೆ ರಾಜಕುಮಾರಿ ಚಂಪಾವತಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿದ್ದರು.  ಆದರೆ ಇದಕ್ಕೆ ಕೆಲವು ನಿರ್ಭಂದನೆಗಳನ್ನು ವಹಿಸಿದ್ದರು.
ಅಪ್ರತಿಮ ಸುಂದರಿಯಾದ ರಾಜಕುಮಾರಿ ಈ ಸುಂದರ, ಪ್ರತಿಭಾನ್ವಿತ ಕವಿಯಿಂದ ಸಾಹಿತ್ಯದ, ಸಂಸ್ಕೃತದ ಶಿಕ್ಷಣದ ಸಮಯದಲ್ಲಿ ವಯೋಸಹಜವಾದ ವಾಂಛನೆಗಳು ಬರಬಾರದು ಎಂದು ರಾಜ ವೀರಸೇನ ಬಿಲ್ಹಣನ ಕಣ್ಣು ಕಟ್ಟಿ..ಇವರು ಕುರುಡರು ಎಂದು , ರಾಜಕುಮಾರಿ ಕುಷ್ಟರೋಗಿ ಎಂದು ಒಬ್ಬರಿಗೊಬ್ಬರನ್ನು ಪರಿಚಯಿಸಿ ನಡುವೆ ಒಂದು ದಪ್ಪನೆಯ ಪರದೆಯನ್ನು ಹಾಕುತ್ತಾರೆ. ಇದೇ ನಿಜವೆಂದು ನಂಬಿ ರಾಜಕುಮಾರಿಯ ವ್ಯಾಸಂಗ ನಡೆಯುತ್ತಿರುತ್ತದೆ.
ಒಮ್ಮೆ ಬೆಳದಿಂಗಳ ಚಂದ್ರನನ್ನು ವರ್ಣಿಸುತ್ತಾ ಒಂದು ಪ್ರೇಮಕವಿತೆಯನ್ನು ಹೇಳಿಕೊಡುತ್ತಾರೆ. ಆಗ ಬರುತ್ತದೆ ನೋಡಿ ರಾಜಕುಮಾರಿಗೆ ಬಿಲ್ಹಣನ ಬಗ್ಗೆ ಅನುಮಾನ...ಒಬ್ಬ ಕುರುಡನು, ಎಂದೂ ಚಂದ್ರನನ್ನು ನೋಡದವನು ಇಷ್ಟು ಸುಂದರವಾದ ವಿವರಣೆ ಕೊಡುವುದು ಹೇಗೆ ಸಾಧ್ಯ? ಕುತೂಹಲ ತಾಳಲಾರದೆ ರಾಜಕುಮಾರಿ ಪರದೆಯಿಂದ ಹೊರಗೆ ಬಂದು ಬಿಲ್ಹಣನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಬಿಲ್ಹಣನೂ ರಾಜಕುಮಾರಿಯ ಸೌಂದರ್ಯಕ್ಕೆ ಮಾರು ಹೋಗುತ್ತಾನೆ.
ಇಬ್ಬರೂ ರೋಮಾಂಚಿತರಾಗಿ ಕ್ಷಣಾರ್ಧದಲ್ಲಿ ಪ್ರೇಮಾಂಕುರವಾಗಿ ಬಿಡುತ್ತದೆ! ಕಾಲಾನಂತರ ವಿಷಯ ತಿಳಿದ ರಾಜ, ಕೋಪಗೊಂಡು ಬಿಲ್ಹಣನನ್ನು ಸೆರೆಮನೆಗೆ ತಳ್ಳಿಬಿಡುತ್ತಾನೆ. ಅಲ್ಲಿ ರಚಿತವಾಗುತ್ತದೆ "ಚೌರ ಪಂಚಶಿಖಾ" ಎನ್ನುವ ಐವತ್ತು ಪ್ರೇಮ ಮತ್ತು ವಿರಹಗೀತೆಗಳ ಸಂಗ್ರಹ. ಸೆರೆಮನೆಯಲ್ಲಿ ಇನ್ನೂ ಉತ್ಕಟಕ್ಕೇರಿದ ಪ್ರೇಮಾಯಣದ ಅರಿವಾದ ರಾಜ ವಿರಸೇನ ಬಿಲ್ಹಣನನ್ನು ಸೆರೆಯಿಂದ ಬಿಡುಗಡೆ ಮಾಡಿ ಅವರಿಬ್ಬರ ಮದುವೆಗೆ ಸಮ್ಮತಿಸುತ್ತಾನೆ ಎನ್ನುವ ಪ್ರತೀತಿ.
ಅಂತೂ ಬಿಲ್ಹಣ ಮತ್ತು ಚಂಪಾವತಿಯರ ಪ್ರೇಮಗಾಥೆ ಸುಖಾಂತ್ಯವನ್ನು ಕಾಣುತ್ತದಂತೆ.ಮುಂದೊಮ್ಮೆ ಈ ಪ್ರೇಮಗ್ರಂಥ ಹಲವಾರು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟು ದೇಶವಿದೇಶಗಳಲ್ಲಿ ಪ್ರಸಿಧ್ಧಿ ಪಡೆಯುತ್ತದೆ. 1948 ರಲ್ಲಿ  ಮದ್ರಾಸಿನಲ್ಲಿ ಈ ಕಥೆಯಾಧಾರಿತ ಚಲನಚಿತ್ರವೊಂದೂ ಸಹ ಬಿಡುಗಡೆಯಾಗುತ್ತದೆ!
ಹತ್ತು- ಹನ್ನೊಂದನೇ ಶತಮಾನದಲ್ಲಿ ಭಾರತದ ಮೇಲೆ ಘಜ್ನಿ ಮೊಹಮ್ಮದನ ದಾಳಿಗಳು ನಡೆಯುತ್ತವೆ. ಸತತವಾಗಿ ಹದಿನೇಳು ಬಾರಿ ದಂಡೆತ್ತಿ ಬಂದು ಭಾರತದ ಸಂಪತ್ತನ್ನು, ವಿಷೇಶವಾಗಿ ದೇವಸ್ಥಾನಗಳಲ್ಲಿದ್ದ ಅಪಾರ ಧನಕನಕಗಳನ್ನು ಲೂಟಿ ಮಾಡಿಕೊಂಡು ಹೋಗುತ್ತಾನೆ.ವಿಚಿತ್ರವೆಂದರೆ ಈ ದುಷ್ಟನ ಜೊತೆ ಅಲ್ ಬಿರೂನಿ ಎನ್ನುವ ಒಬ್ಬ ಮಿತ್ರನೂ ಭಾರತಕ್ಕೆ ಬರುತ್ತಾನೆ.  ಇವನೊಬ್ಬ ಮೇಧಾವಿ, ವಿಜ್ಞಾನಿ, ಖಗೋಳ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ವಿಧ್ಯಾರ್ಥಿ. ಗಾಂಧಾರ ದೇಶದ ಸಾಹಿ ರಾಜನ ಆಸ್ಥಾನದಲ್ಲಿ ಇವನಿಗೆ ವಿಶೇಷ ಗೌರವ ಕೊಟ್ಟು ಸನ್ಮಾನಿಸುತ್ತಾರೆ. ಅಲ್ಲಿದ್ದ ಕೆಲವು ಗ್ರಂಥಗಳನ್ನು ಅಭ್ಯಾಸ ಮಾಡಿ ಭಾರತದ ಬಗ್ಗೆ, ಸನಾತನ ಧರ್ಮದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿರುತ್ತಾನೆ.ಘಜ್ನಿ಼ಯ ಜೊತೆ ಕಾಶ್ಮೀರಕ್ಕೆ ಬಂದ ಅಲ್ ಬಿರೂನಿ ಮೊದಲು ಹೋಗುವುದೇ ಅಲ್ಲಿಯ ಗ್ರಂಥಾಲಯಗಳಿಗೆ. ಸಂಸ್ಕೃತ ಕಲಿಯದೇ ಈ ಗ್ರಂಥಗಳನ್ನು ಅರ್ಥ ಮಾಡಿಕೊಳ್ಳಲು ಅಸಾಧ್ಯ ಎಂದರಿತವನು ಕೂಡಲೇ ಕೆಲವು ಪಂಡಿತರ ಸಹಾಯದಿಂದ ವಿದ್ಯಾರಂಭ ಪ್ರಾರಂಭಿಸಿ ಬಿಡುತ್ತಾನೆ.ಘಜ್ನಿ ಮೊಹಮ್ಮದನಿಗೆ ಇಲ್ಲಿನ ಧರ್ಮ ಗ್ರಂಥಗಳನ್ನು ಮಾತ್ರ ಮುಟ್ಟಬೇಡ...ಎನ್ನುವ ಕೋರಿಕೆಗೆ ಮನಸ್ಸಿಲ್ಲದ  ಸಮ್ಮತಿಯೂ ಸಿಗುತ್ತದೆ. 
ಸಾಯವಬಾಲ ಎನ್ನುವ ಕಾಶ್ಮೀರಿ ಬ್ರಾಹ್ಮಣ ಮಿತ್ರನ ಯನ್ ಭಾಷೆಗೆ ಭಾಷಾಂತರಿಸುತ್ತಾನೆ. 
ಹಾಗೆ ಭಾಷಾಂತರಿಸಿದ ಅನೇಕ ಪುಸ್ತಕಗಳಲ್ಲಿ ಒಂದು ಕಿತಾಬ್ ಎಲ್ ಬತಾಂಜಲ್”...ಇದು ಪತಂಜಲಿಯ ಯೋಗಸೂತ್ರದ ಅವತರಣ!
ನಮಾಜ಼್ ಎನ್ನುವ ಪದ ನಮಃಎನ್ನುವ ಮೂಲ ಪದದಿಂದ ಬಂದಿತಂತೆ. ನಮಾಜಿನಲ್ಲಿ ಬರುವ ಸಲ್ಹಾ ವಿಧಾನಗಳು ಪತಂಜಲಿಯ ಯೋಗಸೂತ್ರದ ಅಳವಡಿಕೆಗಳೆಂದು ಹಲವೆಡೆಗಳಲ್ಲಿ ಉಲ್ಲೇಖಿಸಲಾಗಿದೆ.
…..ವಿಂಗ್ ಕಮಾಂಡರ್ ಸುದರ್ಶನ
ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ಕೇಳಿ..    ಶ್ರೀ ಸುಶೀಲ ಪಂಡಿತ  ಕಾಶ್ಮೀರಿ ವಿದ್ವಾನರಿಂದ ಬೆಳಗಾವಿಯಲ್ಲಿಯ   " ಪ್ರಬುದ್ಧ ಭಾರತ " ದ ಸಭೆಯಲ್ಲಿ ಸ್ಪೀಚ್ 
https://www.youtube.com/watch?v=vMrggO9kSfo
ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ವಿಡಿಯೋ ಕೇಳಿ..    ಶ್ರೀ ಸುಶೀಲ ಪಂಡಿತ  ಕಾಶ್ಮೀರಿ ವಿದ್ವಾನರಿಂದ ಮುಂಬೈ ಯಲ್ಲಿಯ   " ಪ್ರಬೋಧನ ಮಂಚ  " ದ ಸಭೆಯಲ್ಲಿ ಸ್ಪೀಚ್ https://www.youtube.com/watch?v=d3UfkYtQrEM
https://www.facebook.com/theindianthingofficial/videos/372271323435224/


No comments:

Post a Comment