Thursday, April 25, 2019

YAKSHA Questions of & Pakistaana ( ಯಕ್ಷಪ್ರಶ್ನೆ ಮತ್ತು ಪಾಕಿಸ್ತಾನ )

                                                                                                                                            ಸಂಗ್ರಹಿತ 
ಯಕ್ಷಪ್ರಶ್ನೆ ಮತ್ತು ಪಾಕಿಸ್ತಾನ
ಯುಧಿಷ್ಠಿರ ಮತ್ತು ಯಕ್ಷಪ್ರಶ್ನೆ ನೆನಪಿದೆಯೇ?                                                                  

ಪಾಂಡವರು ವನವಾಸಕ್ಕೆ ಹೋಗಿದ್ದಾಗ ನಡೆಯಿತು ಈ ಘಟನೆ. ಬಳಲಿಕೆಯಿಂದ ನೀರಡಿಸಿದ ಪಾಂಡವರು ಸಮೀಪದ ಕೊಳದಿಂದ ನೀರು ತರಲು ಹೋಗಿ ಅಲ್ಲಿ ಅದೃಶ್ಯ ರೂಪದಲ್ಲಿದ್ದ ಯಕ್ಷನು ಕೇಳಿದ ಪ್ರಶ್ನೆಗಳನ್ನು ಉಪೇಕ್ಷಿಸಿದ ದ್ರೌಪತಿ, ಸಹದೇವ, ನಕುಲ, ಅರ್ಜುನ ಕೊನೆಗೆ ಭೀಮ ಎಲ್ಲರೂ ಸತ್ತು ಬೀಳುತ್ತಾರೆ. ಆದರೆ ಸಹನೆ ಹಾಗೂ ಧಾರ್ಮಿಕ ಸ್ವಭಾವಕ್ಕೆ ಹೆಸರುವಾಸಿಯಾದ ಪಾಂಡವರ ಹಿರಿಯಣ್ಣ ಯುಧಿಷ್ಠಿರ ಅಥವಾ ಧರ್ಮರಾಜ ಯಕ್ಷನು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಾನೆ. ಆಗ ಯಕ್ಷನ ವೇಷದಲ್ಲಿದ್ದ ಯಮ ಪ್ರಸನ್ನವಾಗಿ ಸತ್ತವರನ್ನು ಬದುಕಿಸಿಕೊಡುತ್ತಾನೆ ಎಂಬುದು ಮಹಾಭಾರತದ ಕಥೆ. ಇದು ನಡೆದದ್ದು ಈಗ ಪಾಕಿಸ್ತಾನದಲ್ಲಿರುವ ಕಟಾಸ್ ರಾಜ್ ಎಂಬಲ್ಲಿ.
ಆ ಘಟನೆಗೆ ಸಾಕ್ಷಿಯಾಗಿ ಇಲ್ಲಿರುವ ಕೊಳ ಹಾಗೂ ಈಶ್ವರ ದೇವಸ್ಥಾನಗಳು ಇಂದಿಗೂ ಪಾಕಿಸ್ತಾನದಲ್ಲಿ ಉಳಿದುಕೊಂಡಿವೆ. ಪಾಕಿಸ್ತಾನ ಸರ್ಕಾರ ಅವುಗಳನ್ನು ಸಂರಕ್ಷಿಸಿದೆ. ಹಿರಿಯ ಮುತ್ಸದ್ದಿ ರಾಜಕಾರಣಿಗಳಾದ ಧುರೀಣ ಲಾಲ್ ಕೃಷ್ಣ ಅದ್ವಾನಿಯವರು ಈ ದೇವಸ್ಥಾನಕ್ಕೆ ಅನೇಕ ಸಲ ಭೇಟಿ ನೀಡಿದ್ದಾರೆ. ಯಾಕೆಂದರೆ ಅವಿಭಾಜಿತ ಭಾರತದ ಭಾಗವಾಗಿದ್ದ ಕಟಾಸ್ ಅವರ ಆರಾಧ್ಯ ದೈವವಿರುವ ತಾಣ. ಸುಂದರವಾದ ಮ್ಯೂರಲ್ ಚಿತ್ರಾವಳಿ, ಮುಸ್ಲಿಂ ಶೈಲಿಯ ಗೋಪುರ, ವಿಶಾಲವಾದ ಪುಷ್ಕರಣಿ, ಸುಂದರ ಕೆತ್ತನೆಯುಳ್ಳ ಪ್ರಾಕಾರ,  ಭವ್ಯ ಶಿವಲಿಂಗ ಈ ದೇವಾಲಯ ಸಮುಚ್ಚಯದ ವೈಶಿಷ್ಠ್ಯ.
ಪಾಕಿಸ್ತಾನದ ಪಂಜಾಬ್ ನ ಚಕ್ವಾಲ್ ಜಿಲ್ಲೆಯಲ್ಲಿರುವ ಈಶ್ವರ ದೇವಸ್ಥಾನವು ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವವನ್ನು ಹೊಂದಿದೆ.  ಇಲ್ಲಿರುವ ಈಶ್ವರ ಲಿಂಗವನ್ನು ಸಾಕ್ಷಾತ್ ಶ್ರೀ ಕೃಷ್ಣನೇ ತನ್ನ ಕೈಯಾರೆ ಕೆತ್ತಿ ಸ್ಥಾಪಿಸಿದ ಎಂದು ನಂಬಲಾಗಿದೆ. ಪಾಂಡವರು ತಮ್ಮ ೧೨ ವರುಷಗಳ ವನವಾಸದ ಮೊದಲ ನಾಲ್ಕು ವರ್ಷಗಳನ್ನು ಇಲ್ಲಿಯೇ ಕಳೆದರೆಂಬ ಪೌರಾಣಿಕ ಉಲ್ಲೇಖ ಇದೆ. ಆಗ ಇದನ್ನು ದ್ವೈತವನ ಎಂದು ಕರೆಯಲಾಗುತ್ತಿತ್ತು. ಯುಧಿಷ್ಠಿರನಿಗೆ ಯಕ್ಷರೂಪಿಯಾಗಿ ಬಂದ ಯಮ ಯಕ್ಷಪ್ರಶ್ನೆಗಳನ್ನು ಕೇಳಿದ್ದು ಇಲ್ಲಿಯೇ ಎಂಬ ಬಲವಾದ ನಂಬಿಕೆ ಇದೆ.
ಈ ದೇವಾಲಯದ ಮುಂದೆ ಇರುವ ಪುಷ್ಕರಣಿಯ ಕುರಿತಾದ ರೋಚಕ ವಿವರವೊಂದಿದೆ. ದಕ್ಷಯಜ್ಞದಲ್ಲಿ ತನ್ನ ಪತ್ನಿ ಸತಿಯು ಹುತಾತ್ಮಳಾದ ವಿವರ ತಿಳಿದು ಈಶ್ವರನ ಕಣ್ಣಿಂದ ಎರಡು ಹನಿ ನೀರು ತೊಟ್ಟಿಕ್ಕಿದುವಂತೆ! ಅವುಗಳೇ ಎರಡು ಪುಷ್ಕರಣಿಗಳಾದವು ಒಂದು ರಾಜಾಸ್ಥಾನದ ಅಜ್ಮೀರ್ ನಲ್ಲಿರುವ ಪುಷ್ಕರ್,  ಇನ್ನೊಂದು ಈ ಕಟಾಸ್ ರಾಜ್ ಕೊಳ. ಹಾಗೆ ನೋಡಿದರೆ ಕಟಾಸ್ ಎಂಬ ಶಬ್ದವು ಕಟಾಕ್ಷ ಎಂಬ ಸಂಸ್ಕೃತ ಶಬ್ದದ ರೂಪಾಂತರ. ಕಟಾಕ್ಷ ಎಂದರೆ ನೀರು ಸುರಿದ ಕಣ್ಣು ಎಂದರ್ಥ. ಸುಮಾರು ನೂರಾ ಐವತ್ತು ಫೂಟು ಉದ್ದ ಹಾಗೂ ತೊಂಬತ್ತು ಫೂಟು ಅಗಲವಿರುವ ಈ ಪುಷ್ಕರಣಿಯು ಮಳೆಗಾಲದಲ್ಲಿ ತುಂಬಿರುತ್ತದೆ. ಆದರೆ ಸುತ್ತ ಮುತ್ತಲೂ ಹಬ್ಬಿರುವ ಉದ್ಯಮಗಳಿಂದಾಗಿ ಅಂತರ್ಜಲವು ಬತ್ತಿ ಆಗಾಗ ಕೊಳ ಒಣಗುತ್ತದೆ.
ಕಾಶ್ಮೀರಿ ಶೈಲಿಯಲ್ಲಿರುವ ಈ ದೇವಸ್ಥಾನವನ್ನು ಸುಮಾರು ಆರು ಅಥವಾ ಏಳನೆಯ ಶತಮಾನದಲ್ಲಿ ರಾಜಾ ಕಾರ್ಕೋತಾಂಡ ವರ್ಮ ಕಟ್ಟಿಸಿದ್ದ ಎಂದು ಇತಿಹಾಸಕಾರರು ನಂಬಿದ್ದಾರೆ. ಏಳನೆಯ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸುಪ್ರಸಿದ್ಧ ಚೀನಿ ಪ್ರವಾಸಿ ಹ್ಯೂಯನ್ ತ್ಸ್ಯಾಂಗ್ ಇಲ್ಲಿರುವ ಅಶೋಕ ಸ್ತಂಭದ ಪ್ರಸ್ತಾಪ ಮಾಡಿದ್ದಾನೆ. ಭಾರತೀಯ ಪ್ರಾಚ್ಯ ವಸ್ತು ಸರ್ವೇಕ್ಷಣಾ ಇಲಾಖೆಯ ಪ್ರಪ್ರಥಮ ಮಹಾನಿರ್ದೇಶಕ ಅಲೆಗ್ಸಾಂಡರ್ ಕನ್ನಿಂಗಹ್ಯಾಂ ಈ ದೇವಾಲಯ ಸಂಕೀರ್ಣಕ್ಕೆ ೧೮೭೦ರಲ್ಲಿ ಭೇಟಿ ನೀಡಿ ಸಂರಕ್ಷಣೆಯ ಕಾರ್ಯವನ್ನು ಆರಂಭಿಸಿದ ದಾಖಲೆಗಳಿವೆ.
 ಈ ಸಂಕೀರ್ಣದಲ್ಲಿ ಒಟ್ಟು ಏಳು ದೇವಾಲಯಗಳು ಹಾಗೂ ಒಂದು ಬೌದ್ಧ ಸ್ತೂಪ ಇವೆ. ರಾಮಚಂದ್ರ ಮಂದಿರ, ಹರಿಸಿಂಗ ಹವೇಲಿ, ಹನುಮಾನ ಮಂದಿರ, ಶಿವ ದೇವಾಲಯ, ಎರಡು ಸುಂದರ ಬಾಲ್ಕನಿಗಳು ಇಲ್ಲಿಯ ಮುಖ್ಯ ಕಟ್ಟಡಗಳಾಗಿವೆ.
ಮುಖ್ಯ ದೇವಸ್ಥಾನದ ಛತ್ತಿನಲ್ಲಿರುವ ನೈಸರ್ಗಿಕ ಬಣ್ಣದ ಚಿತ್ತಾರಗಳು ಇಂದಿಗೂ ಹೊಚ್ಚ ಹೊಸದರಂತೆ ಇವೆ.
ಕಟಾಸ್ ರಾಜ್ ದೇವಾಲಯವನ್ನು ಒಮ್ಮೆ ನೋಡಿದರೂ ಅದು ಇಡೀ ಜೀವಮಾನದ ಸುಂದರ ಅನುಭವವಾಗಬಲ್ಲುದು. 

No comments:

Post a Comment