Wednesday, August 14, 2019

ANGAARA & AKSHATE ( ಅಂಗಾರ ಮತ್ತು ಅಕ್ಷತೆ )

ಅಂಗಾರ ಮತ್ತು ಅಕ್ಷತೆ 
ಪ್ರತಿಯೊಂದು ಧರ್ಮ, ಜಾತಿ, ಮತಗಳಿಗೆ ಅವರವೇ ಆದ ಚಿಹ್ನೆ, ಮುದ್ರೆ, ನಾಮ, ವೇಷ-ಭೂಷಣಗಳು ಇವೆ. ಅವು ಕೇವಲ ಅಲಂಕಾರಕ್ಕಾಗಿರದೇ ಆಧ್ಯಾತ್ಮಿಕ ಅರ್ಥಗಳನ್ನೂ ಪ್ರತಿನಿಧಿಸುವ ಸಂಕೇತಗಳಾಗಿವೆ.
ನಾನು ಪ್ರತಿನಿಧಿಸುವ ಮಾಧ್ವ ಮತವೂ ಇದಕ್ಕೆ ಹೊರತಾಗಿಲ್ಲ. ಹದಿಮೂರನೆಯ ಶತಮಾನದಿಂದಲೂ ಆಚರಣೆಯಲ್ಲಿರುವ ಗೋಪಿಚಂದನ, ಪಂಚಮುದ್ರೆ, ಶ್ರೀಗಂಧಲೇಪನ, ಅಂಗಾರ, ಅಕ್ಷತೆಗಳು ಮಾಧ್ವ ಮತ ಅನುಯಾಯಿಗಳ ಅಲಂಕಾರಗಳಾಗಿವೆ.
ಪ್ರಾತಃಕಾಲದ ಸಂಧ್ಯಾವಂದನೆಗೆ ಮೊದಲು ಗೋಪಿಚಂದನದಿಂದ ದ್ವಾದಶ ನಾಮಗಳು ಹಾಗೂ ಮುದ್ರಾಧಾರಣೆ ಕಡ್ಡಾಯವಾಗಿದೆ. ನಂತರ ಷೋಡಶೋಪಚಾರ ಪೂಜೆಯ ನಂತರ ಮಧ್ಯಾಹ್ನದ ಭೋಜನ ಕಾಲಕ್ಕೆ ಶ್ರೀಹರಿ-ವಾಯು-ಗುರುಗಳಿಗೆ ನಿವೇದಿಸಿದ ಶ್ರೀಗಂಧವನ್ನು ಹಣೆ, ಹೊಟ್ಟೆ, ಎದೆ, ಭುಜ, ಕುತ್ತಿಗೆ, ಬೆನ್ನು ಮುಂತಾದ ದೇಹದ ಹನ್ನೆರಡು ಪವಿತ್ರ ಸ್ಥಳಗಳಿಗೆ ಊರ್ಧ್ವಮುಖವಾಗಿ (vertical) ಲೇಪಿಸಬೇಕು. ಇದು ಇಡೀ ದಿನ ದೇಹವನ್ನು ಉಲ್ಲಸಿತವಾಗಿಯೂ, ಸುಗಂಧಮಯವಾಗಿಯೂ ಇಡುತ್ತದೆ. ಬೆವರಿನ ದುರ್ಗಂಧವನ್ನು ಹೋಗಲಾಡಿಸುತ್ತದೆ.
ಹಣೆಗೆ ಊರ್ಧ್ವಮುಖವಾಗಿ ಅಂಗಾರವನ್ನು ಹಚ್ಚಿ ಅದರ ಕೆಳಗೆ ಅಕ್ಷತೆಯ ಬೊಟ್ಟನ್ನು ಇಟ್ಟರೆ ಅಲ್ಲಿಗೆ ಅಲಂಕಾರ ಮುಗಿಯಿತು. (ಅಕ್ಷತೆಯೆಂದರೆ ಮಂತ್ರಾಕ್ಷತೆಯಲ್ಲ. ವಿಶೇಷ ವಿಧಾನದಿಂದ ತಯಾರಿಸಿದ ಕಂದು ಬಣ್ಣದ ಸೆಮಿ ಲಿಕ್ವಿಡ್ ನಾಮ)
ಇದು ಕೇವಲ ಅಲಂಕಾರಕ್ಕಾಗಿಯೊ, ಧಾರ್ಮಿಕ ಲಾಂಛನಕ್ಕಾಗಿಯೊ ಅಲ್ಲದೇ ಸಾಂಕೇತಿಕವಾಗಿ ಆಧ್ಯಾತ್ಮಿಕ ಅರ್ಥ ಹೊಂದಿರುವುದು ವಿಶೇಷವಾಗಿದೆ.
ಅಕ್ಷತೆಯನ್ನು ನೆರಳಿನಲ್ಲಿ ಒಣಗಿಸಿದ ಬಾಳೆ ಹಣ್ಣಿನ ಸಿಪ್ಪೆಯನ್ನು ಸುಟ್ಟು ಬಾಳೆಹಣ್ಣಿನ ಲೇಪದಲ್ಲಿ ಉಂಡೆಯಾಕಾರ ಮಾಡಿ ನೆರಳಿನಲ್ಲಿ ಒಣಗಿಸಿ ಇದನ್ನು ತಯಾರಿಸಲಾಗಿದೆ. ಇದು ಶುದ್ಧ ನೈಸರ್ಗಿಕ ಹಾಗೂ ವೈಜ್ಞಾನಿಕವಾಗಿ ಪರೀಕ್ಷಿಸಲ್ಪಟ್ಟ ಪದಾರ್ಥ. ಅರಿಷಿಣವನ್ನು ತೇಯ್ದು ಅದರಲ್ಲಿ ಅಕ್ಷತೆಯ ಉಂಡಿಯನ್ನು ಸಮಾನವಾಗಿ ತೇಯ್ದರೆ ನಾಮ ಧರಿಸಲು ಅರ್ಧ ದ್ರವರೂಪದ ಕಂದು ಬಣ್ಣದ ಅಕ್ಷತೆ ತಯಾರಾಗುತ್ತದೆ. 
ಇನ್ನು ಅಂಗಾರವೆಂದರೆ ದಶಾಂಗ ಗುಗ್ಗಳವನ್ನು ಬೆಂಕಿಗೆ ಹಾಕಿ ದೇವತಾ ಮೂರ್ತಿಗಳಿಗೆ ಆಘ್ರಾಣಿಸುವ ಸಲುವಾಗಿ ಧೂಪದಾರತಿ ಮಾಡಿದ ಮೇಲೆ ಉಳಿದ ಇದ್ದಿಲು. ಇವೆರಡನ್ನೂ ಉಪಯೋಗಿಸಿ ಹಣೆಯ ಮೇಲೆ ಧರಿಸುವುದೇ ಮಾಧ್ವ ಅಂಗಾರ ಅಕ್ಷತೆ.
ಅಂಗಾರ ಅಕ್ಷತೆಯ ಸಾಂಕೇತಿಕ ಗೂಡಾರ್ಥ ಸ್ವಾರಸ್ಯಕರವಾಗಿದೆ. ಅರಿಷಿಣವು ಸುಖ, ಸೌಭಾಗ್ಯ ಹಾಗೂ ಆರೋಗ್ಯಗಳನ್ನು ಪ್ರತಿನಿಧಿಸುತ್ತದೆ. ಅರಿಷಿಣದಿಂದ ತಯಾರಾದ ಅಕ್ಷತೆ ಸುಖವನ್ನು ನೀಡುವ  ಸಂಸಾರವನ್ನು ಪ್ರತಿನಿಧಿಸುತ್ತದೆ. ಇದರಿಂದ ಎದ್ದು ಮೇಲಕ್ಕೇರುವ ಅಂಗಾರವು ಇದ್ದಲಿಯಿಂದ ರೂಪಿಸಿದ್ದು, ಇದು ವೈರಾಗ್ಯಸೂಚಕವಾಗಿದೆ. ಸಂಸಾರದಿಂದ ಮೇಲೆದ್ದು ವೈರಾಗ್ಯದ ಸಹಾಯದಿಂದ ಮೋಕ್ಷದೆಡೆಗೆ ಸಾಗುವ ಪ್ರಕ್ರಿಯೆಯಲ್ಲಿ ನಾವು ತೊಡಗಿದ್ದೇವೆ ಎಂದು ಜಗತ್ತಿಗೆ ಸಾರಿ ಹೇಳುವುದೇ ಹಣೆಯ ಮೇಲೆ ಧರಿಸುವ ಅಂಗಾರ ಮತ್ತು ಅಕ್ಷತೆಯ ಸಾಂಕೇತಿಕ ಅರ್ಥ.

No comments:

Post a Comment