Friday, October 04, 2019

KRUSHNAM VANDE JAGAD GURUM ಕೃಷ್ಣಂ ವಂದೇ ಜಗದ್ಗುರುಂ

ಕೃಷ್ಣಂ ವಂದೇ ಜಗದ್ಗುರುಂ

ಅವರವರ ಭಾವದಂತೆ ಬಂದು ಹೃದಯಮಂದಿರದಲ್ಲಿ ನೆಲೆಸುವ ಸಖ ಅವನೊಬ್ಬನೇ.
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದವನಲ್ಲವೇ.

ನಂಬಿದ ಭಕುತರ ಬಳಿಗೆ ಓಡೋಡಿ ಬರುವ ನಮ್ಮ ಕೃಷ್ಣ,

ತುಲಾಭಾರ ಸಮಯದಲ್ಲಿ ಶ್ರೀಸತ್ಯಭಾಮೆ ದೇವಿಯು ಶ್ರೀಕೃಷ್ಣನಿಗಿಂತ ಜಾಸ್ತಿ ಭಾರ ಇರುವ ಧನಕನಕಗಳನ್ನೆಲ್ಲ ಒಂದು ತಕ್ಕಡಿಗೆ ಹಾಕಿದ್ದರೂ ಶ್ರೀಕೃಷ್ಣ ಕುಳಿತಿದ್ದ ತಕ್ಕಡಿ ಮೇಲೇಳಲೇ ಇಲ್ಲ. 
ಅದೇ ಶ್ರೀರುಕ್ಮಿಣಿ ದೇವಿಯು ಬಂದು ಭಕ್ತಿಯಿಂದ ಇಟ್ಟ ಒಂದು ತುಳಸೀದಳಕ್ಕೆ ಕೃಷ್ಣನ ತುಲಾಭಾರದ ತಕ್ಕಡಿ ಎದ್ದಿತು. 
ತಾತ್ಪರ್ಯ ಇಷ್ಟೇ.
ಶ್ರೀರುಕ್ಮಿಣಿ ಸತ್ಯಭಾಮೆಯರ ಮೂಲಕ ಜಗತ್ತಿಗೆ ಭಕ್ತಿ,ಹಾಗೂ ಪ್ರೀತಿಯ ಮಹತ್ವ ತೋರಿಸಿಕೊಟ್ಟ ಭಗವಂತನು ತಾನು ಧನಕನಕ, ಆಡಂಬರಕ್ಕೆ ಒಲಿಯುವುದಿಲ್ಲ.ತಾನು ಭಕ್ತಿಗೆ ಮಾತ್ರ  ಒಲಿಯುವನೆಂಬ ಸರಳವಾದ  ಸತ್ಯವನ್ನು ಶ್ರೀಸತ್ಯಭಾಮೆ ದೇವಿಯ ಮುಖಾಂತರ ತಿಳಿಸಿಕೊಟ್ಟ ಭಗವಂತ. 
ಜೀವನದಲ್ಲಿ ಕಷ್ಟ ಸುಖ, ನೋವು, ನಲಿವು, ಏಳುಬೀಳು, ಬರುವುದು ಸಹಜವೇ.
ಕೆಲವೊಮ್ಮೆ ಎಲ್ಲೋ ಒಂದು ಕಡೆ ಅನಾಥಪ್ರಜ್ಞೆ ಕಾಡದಿರದು. ಆದರೆ ಸರ್ವಶಕ್ತನಾದ ಭಗವಂತ ನಮ್ಮೊಡನಿರುವಾಗ ಚಿಂತೆ
ಮಾಡಬಾರದು. 
ಅನಾಥಬಂಧು ಆ  ಜಗನ್ನಾಥನಿರುವಾಗ ನಾವು ಹೇಗೆ ಅನಾಥರಾಗುತ್ತೇವೆ?  
ಮಾತುಮಾತಿಗೆ ಹೇಳುತ್ತೇವೆ. ನಮಗೆ ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ, ಇವರನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂತ. ಆದರೆ ಒಂದಲ್ಲ ಒಂದು ಸಮಯದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರುವುದಷ್ಟೇ ಅಲ್ಲ ನಮ್ಮ ನಮ್ಮ ಕೆಲಸಕಾರ್ಯಗಳಲ್ಲಿ ಮುಳುಗಿ ಹೋಗಿರುತ್ತೇವೆ. ಗಂಡಹೆಂಡತಿ ಕೆಲಸಗಳಿಗೆ ಹೋದಾಗ, ಊರುಗಳಿಗೆ ಪರಸ್ಪರ ಬಿಟ್ಟಿರಬೇಕು. ಮಕ್ಕಳು ಶಾಲೆಕಾಲೇಜುಗಳಿಗೆ ಹೋದಾಗ, ಒಂದು ಕ್ಷಣವೂ ಬಿಡಲಾಗದವರು ಮದುವೆಯ ನಂತರ ಹೆತ್ತವರಿಂದ ದೂರವಿರುತ್ತೇವೆ. ಒಡಹುಟ್ಟಿದವರಿಂದ, ಸ್ನೇಹಿತರಿಂದ, ಹೀಗೆ ಯಾವುದೋ ಕಾರಣದಿಂದ ಬಿಟ್ಟಿದ್ದೇ ಇರುತ್ತೇವೆ.
 ಆದರೆ ಅರೆಕ್ಷಣವೂ ಬಿಟ್ಟಿರಲು ಸಾಧ್ಯವೇ ಇಲ್ಲ ಎಂದಾದರೆ ಅದು ಭಗವಂತನನ್ನು ಮಾತ್ರ.
ಅವನ ನಾಮಸ್ಮರಣೆ ಇಲ್ಲದ ಹೊರತು ಈ ಉಸಿರು ಇರಲು ಸಾಧ್ಯವೇ?? ಎಲ್ಲರನ್ನೂ ಬಿಟ್ಟಿರಬಹುದು, 
ಇವನನ್ನು ಬಿಟ್ಟಿರಲಾದೀತೇ??
ಅವರಿವರ ಮನೆಗೆ ಹೋಗಬೇಕಾದರೆ ವಾರದ ಮುಂಚೆಯೇ ದೂರವಾಣಿಯಲ್ಲಿ ತಿಳಿಸಿ, ಅವರು ಬಿಡುವಾಗಿದ್ದರಿಲ್ಲವೋ ತಿಳಿದುಕೊಂಡು, ನಾವು ಬಿಡುವಿರುವ ವಿಷಯ ತಿಳಿಸಿ , ಹೋಗುವುದು ಬರುವುದು ಮಾಡುವ ನಾವು ಅಷ್ಟೊಂದು ಬಿಡುವೇ ಇಲ್ಲದಂತಿರುತ್ತೇವೆ.
 ಸದಾ ನಮ್ಮ, ನಮ್ಮವರ ಊಟ,ಪಾಠ, ಅದು ಇದು ಮತ್ತೊಂದು ಮಗದೊಂದು ವಿಷಯಾಸಕ್ತಿಗಳಲ್ಲೇ ಜೀವನ ಕಳೆಯುತ್ತೇವೆ. ನಮಗೆ ಸಮಯ ಸಾಲುತ್ತಿಲ್ಲ ನಮ್ಮ ಸುಖದ ಲಾಲಸೆಗಳಿಗಾಗಿ ಸಮಯ ಕೊಡುತ್ತೇವೆ. 
ಆದರೆ ಅವನಿಗಾಗಿ ಜಪ,ತಪ,ಪಾರಾಯಣ,ಪೂಜೆ,ಮಂತ್ರೋಚ್ಛಾರಣೆಗಳಿಗೆ ನಮಗೆ ಸಮಯವಿಲ್ಲ. 
ಈ ದೇಹವನ್ನು ನೀಡಿ, ಇದರಲ್ಲಿ ಜೀವವಿಟ್ಟು, ಎಲ್ಲ ಸುಖಗಳನ್ನು ನೀಡುತ್ತಿರುವ ಅವನ ಉಪಕಾರ ಸ್ಮರಣೆ ಮಾಡಲು ನಮಗೆ ಸೋಮಾರಿತನ. ಒಂದೆರಡು ಕೆಲಸ ಮಾಡಿದರೂ ನಮಗೆ ಇನ್ನಿಲ್ಲದ ಆಯಾಸ.  
ಆಲಸ್ಯ, ನಿರ್ಲಕ್ಷ್ಯ. 
ಇದೇ ನಿರ್ಲಕ್ಷ್ಯವನ್ನು ನಮ್ಮ ಹೃದಯದಲ್ಲಿ ಪ್ರತೀಕ್ಷಣ ಹಂಸ ಮಂತ್ರಗಳನ್ನು ಜಪಿಸುತ್ತಿರುವ ಆ ಮುಖ್ಯಪ್ರಾಣದೇವರು ಏನಾದರೂ ಅರೆ ಕ್ಷಣ ಬೇಸರಿಸಿಕೊಂಡರೂ , 
ಮುಗಿತು ನಮ್ಮ ಕತೆ...., ಓಡಬೇಕು ಆಸ್ಪತ್ರೆಗೆ. ಹೃದಯಾಘಾತ ಅಂತ ಹೇಳ್ತಾರೆ ವೈದ್ಯರು. 
 ಲಕ್ಷಗಟ್ಟಲೆ ಹಣ ಆಸ್ಪತ್ರೆ ಖರ್ಚು.ಆರೇಳು ತಿಂಗಳು ವಿಶ್ರಾಂತಿ.ನಾವು ಚೆನ್ನಾಗಿದ್ದರೆ ಮಾತ್ರ ಎಲ್ಲ ನೆಂಟರು ಇಷ್ಟರು. ಸ್ವಲ್ಪ ದಿಕ್ಕು ತಪ್ಪಿದರೂ ಯಾರೂ ಮುಂದೆ ಬರುವುದಿಲ್ಲ. ಪರಿಚಿತರೇ ಅಪರಿಚಿತರಂತೆ ವರ್ತಿಸುತ್ತಾರೆ.  ಬಂಧುಬಾಂಧವರು,ಮನೆಯವರಿಗೆಲ್ಲ ಹೊರೆಯಾಗಿ ಭಾರವಾದ ಬದುಕು ಕಳೆಯಬೇಕಾದ ಪರಿಸ್ಥಿತಿ ಎಷ್ಟೋ ಜನರಿಗಿದೆ. 
ಆದರೆ ಆ ದೇವರು ಮಾತ್ರ ಪ್ರತೀಕ್ಷಣವೂ ನಮ್ಮೊಡನಿರುತ್ತಾನೆ. 
ಯಾವ ಕ್ಷಣ ಕರೆದರೂ ಬರುತ್ತಾನೆ. ನಮ್ಮೊಂದಿಗಿರುತ್ತಾನೆ. ಅವನು ಯಾವತ್ತೂ ನೆಪ ಹೇಳಿ ಜಾರಿಕೊಳ್ಳಲಾರ. ಮುಗ್ಧ ಪ್ರೀತಿಗೆ , ಭಕ್ತಿಗೆ ಒಲಿವ. 
ಅಳುವ ಕಂದನ ತಾಯಿಯು ರಮಿಸುವಂತೆ ಬಂದು ನಮ್ಮನ್ನು ಸಲಹುವ ಅವ ಭಕ್ತಾಪರಾಧೀನನಲ್ಲವೇ. 
ಅದಕೆ ದೇವರು ಕೊಟ್ಟ ಈ ಜನ್ಮವನ್ನು ಸಾಧ್ಯವಾದಷ್ಟು ಸತ್ಕರ್ಮಗಳನ್ನು ಮಾಡುತ್ತಾ, ಅಸಹಾಯಕರಿಗೆ ತಿಳಿದುಕೊಂಡು ಸಹಾಯ ಮಾಡುತ್ತಾ, ದಾನಧರ್ಮ ಮಾಡುತ್ತಾ ಈ ನಮ್ಮ ಜನ್ಮವನ್ನು ಸಾರ್ಥಕಗೊಳಿಸಬೇಕಲ್ಲವೆ.
ಇನ್ನು , ಜೀವನಮೌಲ್ಯಗಳನ್ನು  ತಿಳಿಸಿಕೊಡುವ  ಶ್ರೀ ಮದ್ ಭಾಗವತ ಸಾರ್ವಕಾಲಿಕವಾದುದು. ಸಾಕ್ಷಾತ್ ಶ್ರೀವಿಷ್ಣುವಿನ ಅವತಾರವಾದ ಶ್ರೀವೇದವ್ಯಾಸರು ರಚಿಸಿದ  ಶ್ರೀ ಮದ್ಭಾಗವತ,ಮಹಾಭಾರತಾದಿ ಗ್ರಂಥಗಳು ಜೀವನಕ್ಕೆ ಬೇಕಾದ ನಿಷ್ಠೆ, ಭಕ್ತಿ, ಧೈರ್ಯ, ಸ್ಥೈರ್ಯ,ಸ್ಫೂರ್ತಿ ತುಂಬುವ  ಸಾರ್ಥಕ ಜೀವನದ ದಾರಿದೀಪಗಳಾಗಿವೆ. 
ಹೆಜ್ಜೆಹೆಜ್ಜೆಗೆ ನೋವುಗಳನ್ನು ಅನುಭವಿಸಿದ ಕುಂತೀದೇವಿ ಶ್ರೀಕೃಷ್ಣನಲ್ಲಿ ಮತ್ತೆ ಕಷ್ಟಗಳನ್ನೇ ಬೇಡುತ್ತಾಳೆ. ಆ ಕಷ್ಟಪಡುವ ಭಕುತರ ಜೊತೆ ಅವನಿರುತ್ತಾನೆ. ಅವನಿಲ್ಲದ ಸುಖ ಬೇಡ ಅನ್ನುವುದು ಅವಳ ಆಸೆಯಾಗಿತ್ತು. ಸ್ವಲ್ಪ ಕಷ್ಟ ಬಂದರೂ ದೇವರನ್ನು ಬೈಯ್ಯುವ ನಾವೆಲ್ಲಿ? ಆ ಮಹಾತಾಯಿ ಕುಂತಿ ಎಲ್ಲಿ? ಶ್ರೀಹರಿಯಲ್ಲಿ ತೋರುವ ಭಕ್ತಿ ಎಂದರೆ ಕುಂತಿಯ ಭಕ್ತಿಯಂತಿರಬೇಕು. 
ಇನ್ನು ಮಕ್ಕಳಿಲ್ಲದ ತಾಯಂದಿರಿಗೆ  ಇವನೇ ಮಗುವಾಗಿ ಮನದ ಬಂಜೆತನವನ್ನು ನೀಗಿಸುವ ಕಂದ ಈ ಮುದ್ದು ಬಾಲಗೋಪಾಲ.
 ಇವನನ್ನೇ ಮಗುವೆಂದಾಡಿಸುವ ಯಶೋದೆಯಂತೆ. ಮಕ್ಕಳಿರದ ತಾಯಂದಿರು ತಾಯ್ತನವನ್ನು ಅನುಭವಿಸುತ್ತಾರೆ.  
ಸ್ನೇಹಿತರೊಂದಿಗೆ ಹೇಗಿರಬೇಕು. 
ಸ್ನೇಹಕ್ಕೆ ಎಂಥ ಮಹತ್ವವಿದೆ ಎನ್ನುವುದನ್ನು ಶ್ರೀಕೃಷ್ಣನು ಸುಧಾಮನೊಂದಿಗೆ ನಡೆದುಕೊಂಡ ರೀತಿ, ಸುಧಾಮ ತಂದ ಮುಷ್ಟಿ ಅವಲಕ್ಕಿಯನ್ನು ಅಕ್ಕರೆಯಿಂದ ಹಿಡಿದೆಳೆದು  ಸಂತೋಷದಿಂದ ಮುಕ್ಕಿದ ರೀತಿ, ವರ್ಣಿಸಲಸದಳ.
 ಅತಿಥಿಗಳನ್ನು, ಬ್ರಾಹ್ಮಣರನ್ನು, ಗೋವುಗಳ ಪಾಲನೆಯನ್ನು, ಗುರುಹಿರಿಯರಿಗೆ ಸತ್ಕರಿಸುವ ರೀತಿಯನ್ನೂ ತೋರಿಸಿಕೊಟ್ಟವ ಶ್ರೀಕೃಷ್ಣ.
ರಾಜಸೂಯಯಾಗದಲ್ಲಿ , ಅಲ್ಲಿ ಸೇರಿದ್ದ ಸರಿಸುಮಾರು ಮೂವತ್ತು ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರಲ್ಲಿ  ಅಗ್ರಪೂಜೆಗೆ ಭಾಜನನಾದವ   ಶ್ರೀಕೃಷ್ಣ. 
ಯಾಗಕ್ಕೆ ಬಂದ ಅತಿಥಿಗಳ ಸತ್ಕಾರ ಮಾಡಿ, 
ಬ್ರಾಹ್ಮಣರ ಎಂಜಲೆಲೆ ತೆಗೆದು ಸರಳತೆಯನ್ನು ತೋರಿದ. ಗುರುಹಿರಿಯರಲ್ಲಿ ಮಾಡುವ ಭಕ್ತಿ,  
ಹಾಗೂ ಕರ್ತವ್ಯವನ್ನು ಮೆರೆದ.  
"ಏನು ಸವಿಯೋ ನಿನ್ನ ಕೊಳಲು"  ಎನ್ನುವ ಹಾಡಿನಲ್ಲಿ ದಾಸರು ಗೋಪಿಯರ ಸ್ಥಿತಿಯನ್ನು ಬಹಳ ಸುಂದರವಾಗಿ ಬಣ್ಣಿಸುತ್ತಾರೆ. ಜೊತೆಗೆ
ಗೋಪಿಕಾಸ್ತ್ರೀಯರು ವೇಣುನಾದಕ್ಕೆ ಮೈಮರೆತು ಮಾಡಿದ ಅವಾಂತರಗಳನ್ನು, ಶ್ರೀಕೃಷ್ಣನ ಮೇಲಿನ ಮೋಹವನ್ನು, ಪ್ರೀತಿ ಬಯಸಿದ್ದನ್ನು ಹೇಳುತ್ತಾರೆ. 
 ( ಅವರೆಲ್ಲ ಹಿಂದಿನ‌ ಜನುಮದಲ್ಲಿ ವೃತ.ನೇಮ.ಹೋಮ,ತಪಸ್ಸು ಮಾಡಿ ಶ್ರೀಕೃಷ್ಣನನ್ನು ಒಲಿಸಿಕೊಂಡ ಗೋಪಿಕಾಸ್ತ್ರೀಯರು)  ಪಶು,ಪಕ್ಷಿ,ಪ್ರಾಣಿಗಳು ಕೂಡಾ ಮೈಮರೆತು ತಲೆತೂಗುತ್ತಿದ್ದವಂತೆ. ಇನ್ನು ಇವರ ಸ್ಥಿತಿ ದೇವರಿಗೇ ಪ್ರೀತಿ. 
ವೇಣುನಾದಕ್ಕೆ ಮೋಹಗೊಂಡ ಗೋಪಿಕೆಯರು ಹಾಲುಕರೆಯುವುದನ್ನು ಬಿಟ್ಟರು,ಮಗುವಿಗೆ ಹಾಲುಣಿಸುವುದನದನು ಬಿಟ್ಟರು, ಪತಿಸೇವೆ ಬಿಟ್ಟೋಡಿ ಕಾನನಕೆ ಬಂದರು. 
ಕೆಲವರು ಕುಳಿತಲ್ಲಿಯೇ ಕಣ್ಮುಚ್ಚಿ ಧೇನಿಸಿದರು. ಪರಬ್ರಹ್ಮ ನನ್ನು ಆಲಂಗಿಸಿದರು. ಮೈಮರೆತರು. ಇವರ ಸ್ಥಿತಿಗತಿಭಕ್ತಿಗೆಗೆ ನಸುನಕ್ಕ‌ ಮಾಧವನು ಅಂಗಸಂಗವ‌ ನೀಡಿ ಗೋಪಿಕಾಸ್ತ್ರೀಯರನ್ನು ರಮಿಸಿದ. ಅವರು ಮಾಡಿದ ತಪಸಿನ‌ ಫಲವಾಗಿ, ರಮೆಯಲ್ಲಿ ತನ್ನ ಹೆಣ್ಣುರೂಪದೊಂದಿಗೇ, ಅವರ ತನುವಿನ ತಾಪವನ್ನು‌ ತಣಿಸಿದ ಸ್ವರಮಣನಲ್ಲವೇ. ಬ್ರಹ್ಮಾಂಡ ನಾಯಕ ಅವರಿಗೆ ಲೋಕವನ್ನೆ ಮರೆಸಿದ. ಅವರ ಭಕ್ತೀಪ್ರೀತಿಯಲ್ಲಿ ತನ್ನ ಬಾಹುವಿನಲ್ಲಿ ಅವರನ್ನು ಮೆರೆಸಿದ. 
ರಾಮಕೃಷ್ಣರಿಬ್ಬರೂ ಒಬ್ಬರೇ, ಆದರೆ ರಾಮಾವತಾರದಲ್ಲಿನ ರಾಮ ಮರ್ಯಾದಾ ಪರುಷೋತ್ತಮನೆಂದೇ ಕರೆಯುತ್ತೇವೆ.
 ಕೃಷ್ಣನನ್ನು ಮಾತ್ರ ನಾವು ಜಾರ, ಚೋರ, ಕಪಟನಾಟಕ ಸೂತ್ರಧಾರಿ ಅಂತಲೇ ಕರೆಯುತ್ತೇವೆ.
ಯಾಕೆಂದರೆ ಅವನು ಮಾಡಿದ್ದೇ ಹಾಗೆ, ಮಾಡುವುದೇ ಹಾಗೆ ಅಲ್ಲವ.  
ರಾಮ ಮರ್ಯಾದೆಯ, ಧರ್ಮದ ಚೌಕಟ್ಟಿನಲ್ಲಿ ಅತ್ಯಂತ ಮೃದುಹೃದಯಿಯಾಗಿ ನಡೆದು ರಾಜ್ಯವಾಳಿದವನು. ರಾಮನಲ್ಲಿ ಭಕ್ತಿ ಗೌರವವಿದ್ದರೆ, 
ಕೃಷ್ಣನಲ್ಲಿ ಮಾತ್ರ ಭಕ್ತಿ, ಸಲುಗೆ ಜಾಸ್ತಿ. 
ಶ್ರೀಕೃಷ್ಣ ಮಾತ್ರ ಹುಟ್ಟಿದಾಗಿನಿಂದಲೂ ತನ್ನ ಆಟವನ್ನು, ಮಹಿಮೆಯನ್ನು ತೋರಿಸುತ್ತಾ ಬಂದವನು. ರಾಜ್ಯವಾಳಲಿಲ್ಲ, ರಾಜ್ಯವಾಳಿಸಿದವನು. ಧರ್ಮದ ಪಕ್ಷ ಪಾಂಡವರು. ಪಾಂಡವರ ಕ್ಷ ಈ ಧರ್ಮ ಸಂಸ್ಥಾಪಕ.
ಮಾಯಾವಿ ಶ್ರೀಕೃಷ್ಣ. 
ಯುದ್ಧದ ಸಮಯದಲ್ಲಿ ದ್ರೋಣಾಚಾರ್ಯರಿಗೆ, ಧರ್ಮರಾಯನಿಂದ ಸುಳ್ಳು ಹೇಳುವಂತೆ ಮಾಡಿದ್ದು, 
ರಥದ ಚಕ್ರವನ್ನು ನೆಲದಡಿ ಸಿಕ್ಕಿಸಿದ್ದು, 
ಒಂದಾ ಎರಡಾ?
ಮಹಾಭಾರತದುದ್ದಕ್ಕೂ ಇಂತಹ ಪ್ರಸಂಗಗಳು ಬರುತ್ತಲೇ ಇರುತ್ತವೆ.  
ಅವನ ಲೀಲೆಗಳ ಮರ್ಮವನ್ನು ಬಲ್ಲರಾರು? 
ಶ್ರೀಕೃಷ್ಣನೂ ಕೂಡಾ ಧರ್ಮದ  ಚೌಕಟ್ಟನ್ನು ಮೀರದವನೇ. ಆದರೆ ದುಷ್ಟತನವನ್ನು ಹೆಚ್ಚಾಗಿ ದುಷ್ಟತನದಿಂದಲೇ ಸದೆ ಬಡಿದವನು. ಇವುಗಳನ್ನೆಲ್ಲ ನೋಡಿದಾಗ
ಮಹಾಭಾರತದುದ್ದಕ್ಕೂ ಶ್ರೀಕೃಷ್ಣ ಪಕ್ಷಪಾತಿಯಂತೆ ಕಾಣುತ್ತಾನೆ. ಹೌದು. ಅವನು ಧರ್ಮದ ಪಕ್ಷಪಾತಿಯಲ್ಲವೇ? 
ಇನ್ನು ಮೋಹಿನಿ ವೇಷ ಧರಿಸಿ ಅಮೃತ ಹಂಚುವಾಗಲೂ ಕೂಡಾ ಸ್ವಾಮಿ, 
ಮೋಹಕ್ಕೆ, ಸೌಂದರ್ಯಕ್ಕೆ ಮರುಳಾಗಬಾರದು, ಸದಾ ಎಚ್ಚರದಲ್ಲಿರಬೇಕು. 
ಒಳ್ಳೆಯ ವಸ್ತು ದುರ್ಜನರ ಪಾಲಾಗಬಾರದು. ಒಳ್ಳೆಯವರ ಕೈ ಸೇರಬೇಕು. 
ಎನ್ನುವ ಸಂದೇಶವನ್ನು ಕೊಟ್ಟನಲ್ಲವೇ. ಪ್ರತಿಯೊಂದರಲ್ಲೂ ಮನುಕುಲಕ್ಕೆ ನೀತಿಪಾಠವನ್ನು ತಿಳಿಸಿಕೊಡುತ್ತಾನೆ.
ಅವನು ಮಾಡಿದ್ದೆಲ್ಲ ಸರಿಯೇ. ಮಾಡುವುದೆಲ್ಲವೂ ಸರಿಯೇ. (ಆದರೂ ಕೂಡಾ ಕೊನೆಗೆ  ಶ್ರೀಕೃಷ್ಣ ಸಂಪ್ರಶ್ನೆಯಾಗಿಯೇ ಉಳಿಯುತ್ತಾನೆ. )
ಅಹಂಕಾರ ತೋರಿದವರಿಗೆ ಸದಾ ಅವರ ಅಹಂಕಾರ ಮುರಿಯುತ್ತಲೇ ಇರುವ. 
ನಿರ್ವಾಜ ಭಕ್ತಿಗೆ, ಪ್ರಾರ್ಥನೆಗೆ ಒಲಿಯುವ ದೊರೆಯು ನಮ್ಮೆಲ್ಲರ ಮೊರೆ ಕೇಳಿ ಓಡೋಡಿ ಬರುವ.
ಮಹಾಭಾರತದ ಯುದ್ಧದ ಸಮಯದಲ್ಲಿ  ಅರ್ಜುನನು ಮಮಕಾರಕ್ಕೆ ಕಟ್ಟುಬಿದ್ದು ನಮ್ಮವರೊಡನೆ ಹೋರಾಡಿ, ಅವರನ್ನು ಕೊಂದು ಬರುವ ಈ ರಾಜ್ಯ ಯಾರಿಗೆ ಬೇಕು?? ಎಂದು ಮಾನಸಿಕವಾಗಿ, ಕಂಗಾಲಾಗಿ, ಕುಸಿದು ಕುಳಿತಾಗ, ಅಧರ್ಮನ್ನು ನಾಶ ಮಾಡಲು, ಧರ್ಮವನ್ನು ಉಳಿಸಲು ಮಾಡಲೇಬೇಕಾದ ಕರ್ತವ್ಯವನ್ನು ತಿಳಿಸುತ್ತಾ, ಮಮಕಾರ, ಮೋಹವನ್ನು ತೊರೆದು ಹೇಗಿಬೇಕು ಎನ್ನುವುದನ್ನು 
ಅರ್ಜುನನಿಗೆ ಲೋಕೋತ್ತರವಾಗಿ ಶ್ರೀಕೃಷ್ಣ ಮಾಡಿದ ಉಪದೇಶವಾದ   
ಶ್ರೀ ಭಗವದ್ಗೀತೆಯು ಇಂದು ಇಡೀ ಮನುಕುಲಕ್ಕೆ ಗುರುವಾಗಿ ನಮ್ಮ ಬದುಕನ್ನು ಮುನ್ನಡೆಸಿಕೊಂಡು ಹೋಗುವಂಥದ್ದು. 
ಭವಬಂಧಮೋಚಕ ಭಗವಂತ.
ದೇವಕಿಯ ಗರ್ಭದಲ್ಲಿ ಹುಟ್ಟುತ್ತಲೇ ಶಂಖಚಕ್ರಕಿರೀಟ ಧಾರಿಯಾಗಿ ಅವರಿಗೆ ದರುಶನ ಕೊಟ್ಟ. ದರುಶನವಾಗುತ್ತಲೇ ವಸುದೇವ ದೇವಕಿಯರ ಬಂಧನ ಕಳಚಿತು. ಇದರರ್ಥ ನಾವು  ತತ್ವಜ್ಞಾನ ಪ್ರಸಾರ, ಧರ್ಮಕಾರ್ಯ,ಸತ್ಯ,ನಿಷ್ಠೆ,ದಾನ,ಧರ್ಮ,ಭಕ್ತಿ ಯಿಂದ ಭಗವಂತನನ್ನು  ಉಪಾಸನೆ ಮಾಡಿದಾಗ, ಭಗವಂತನ ಅನುಗ್ರಹವಾಗಿ ನಮ್ಮ ಭವಬಂಧನಗಳೆಲ್ಲ ಕಳಚುತ್ತವೆ. 
ಮುದ್ದುಕಂದ , ಜಗದೊಡೆಯ, ಪೊಡವಿಗೊಡೆಯ ಶ್ರೀಕೃಷ್ಣ ಮನೆಮನಕೆ ಬರುವ. 
ನಂಬಿದ ಭಕುತರ ಹೃದಯ ಮಂದಿರಕೆ ಅಂಬೆಗಾಲಿಟ್ಟು ಬರುವ.  
ಶ್ರೀಕೃಷ್ಣ ಜನ್ಮಾಷ್ಟಮಿಯ ಪರ್ವ ಕಾಲದಲ್ಲಿ, ತೀರ್ಥದ ಬಿಂದುವಿನಷ್ಟಾದರೂ  ಶ್ರೀ ಮದ್ ಭಾಗವತ ಶ್ರವಣ ಮಾಡುತ್ತಾ, ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ

No comments:

Post a Comment