Thursday, September 07, 2023

BHIMAA TATA VIHAR ಭೀಮಾತಟ ವಿಹಾರ

 ಭೀಮಾತಟ ವಿಹಾರ 

ಜಗದ ಗುರಿಗಳ ಭಾರ | ಬೆಂಬಿಡದ ಸಂಸಾರ 
ವಹಿಸುವ ಮನಬಲವ ನೀಡು ಕರುಣಾಪಾರ | ಭೀಮಾತಟ  ವಿಹಾರ || ಪ ||

ಜಾಣ್ಮೆಯದು ಮಗುವಾಗಿ | ತಾಳ್ಮೆಯದು ಮಗನಾಗಿ 
ಹಿರಿಮೆಯದು ಎಲ್ಲದಕು ಮನೆತನದ ಕುಡಿಯಾಗಿ | ಬಯಸುವರು ಹರಿಯೆ ||

ಗಂಡಾಗಿ ಗಾಂಭೀರ್ಯ | ಹೆಣ್ಣಾಗಿ ಸೌಂದರ್ಯ |
ಇಬ್ಬರು ಸೇರಿರಲು ಸಂಸಾರ ಮಾಧುರ್ಯ | ಬಯಸುವರು ಹರಿಯೇ ||

ಪತಿಯಲ್ಲಿ ರಾಮನನು | ಸತಿಯಲ್ಲಿ ಸೀತೆಯನು |
ಸೇವಕನ ಪರಿಯಲ್ಲಿ ವೈರಾಗಿ ಹನುಮನನು | ಬೇಡುವರು ಹರಿಯೇ ||

ಧರ್ಮದಲಿ ಕರ್ಮವನು | ಕರ್ಮದಲಿ ಧರ್ಮವನು |
ಹುಡುಕಾಡಿ ತಳಕಾಡಿ ತಿಳಿಯದೇ ಮರ್ಮವನು | ಕೇಳುವರು ಹರಿಯೇ ||

ಇಹಲೋಕ ಸುಖವನ್ನು | ಪರಲೋಕ ನಾಕವನು |
ಇಹ-ಪರದ ಗಡಿದಾಟಿ ಹರಿಚರಣ ಮುಕುತಿಯನು | ಬೇಡುವರು ಹರಿಯೇ ||

ಜಗವನ್ನು ನಾನರಿತು | ಜಗದಲ್ಲಿ ನಾ ಬೆರೆತು |
ಜಗವ ನಾ ಬಿಡುವಾಗ ಮೊಗದಿ ನಗು ಒಂದಿನಿತು | ಸಾಕು ಸುರ ತರುವೇ ||

                                        ಜಾನಕಿರಾಮ (ಸೀತಾರಾಮಾಚಾರ್ಯ ಕಟ್ಟಿ) 

No comments:

Post a Comment