Sunday, October 06, 2024

SHANAISHCHARA CHARITAM V ( 01- 113 ) ಶ್ರೀ ಶನೈಶ್ಚರ ಚರಿತಂ ೫

SHANAISHCHARA CHARITAM  V ( 01- 113 )
            ಶ್ರೀ ಶನೈಶ್ಚರ ಚರಿತಂ  ೫
               || श्री शनैश्चर देवताभ्यो नमः || 


( ಕನ್ನಡ ಭಾಮಿನಿ ಮತ್ತು ವಾರ್ಧಿಕ ತ್ರಿಪದಿಗಳಲ್ಲಿ  ಒಟ್ಟು ಹತ್ತು ಸಂಧಿಗಳು  )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾಣಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರ ಅಷ್ಟಕಂ ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರ ಸಹಿತ )

ಪಂಚಮ ಸವಿಗಥಾ ಸಂಧಿ ೫

( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )

 ಓಂ ನಮೋ ಗಣಪತಯೇ ವಂದಿಪೆ 
ಸನ್ನುತಿಪೆ ಶಾರದೆಯೆ ವೀಣೆಯೇ 
ಮುನ್ನುಡಿಯ ಮೊದಲಲ್ಲಿ ನಿಮ್ಮಯ ಕೃಪೆಯ ಬೇಡುವೆನು 1
ಶ್ರೀ ಗುರುವೇ ಕೃತಿ ಮೊದಲು ಒಂದಿಪೆ 
ನೀಗಿಪುದು ಬೌದ್ಧಿಕದ ತೊಂದರೆ 
ರಾಗ ರಂಜನೆ ನವ ರಸಂಗಳ ತಾನೆ ಬರುವಂತೆ.  2
ಮಂದಮತಿಗೆ ಮತಿಯ ನೀಯಲು 
ಮಂದ ದೇವನೇ ನಿನಗೆ ನಮಿಸುವೆ 
ಅಂದದಿಂದಲೇ ಆಜ್ಞೆ ಕೊಡಲು ಮಹತಿಯಂ ನುತಿಸೆ6. 3
ನಾಲ್ಕನೆಯ ಸವಿಗತೆಯ ಸಂಶಯ 
ತಲ್ಬಲಣ ವಿಕ್ರಮ ನಿಧಿಯ ಕುಂಬಳ 
ಕೇಳಿ ನೀಗಿಪುದಾಗದೆ ತನ್ನಂತೆಯಾಗಿಹುದು  4
ಮೂಲ ಗುರ್ಜರ ಭಾಷೆಯಿಂದಲೇ 
ಮೇಳವಿಸಿ ರಸ ಉಸಿರು ಕನ್ನಡ 
ಮೇಲುನುಡಿ ಗ್ರಹಗಳರಿವೆನು ತೊಡರು ನೀಗಿಸುವ 5
ಭಾರತಿಯ ನಾಭಿಯನೆ ಶೋಭಿಪ
ತೋರುತಿಹ ಉಜ್ಜಯಿನಿ ಜೈ ಪುರಿ 
ವೀರ ವಿಕ್ರಮನಲ್ಲಿ ಜರುಗಿತು ಒಂದು ಘಟನೆಯದು 6
ಒಂದು ದಿನ ಮುಂಜಾವು ಸಭೆಯೊಳು 
ಬಂದ ಶಂಕೆಯ ವಿವರಿಸುತ ನೃಪ 
ನಂದ ಪಂಡಿತರಲ್ಲಿ ಗ್ರಹಗಳ ಕುರಿತು ಪ್ರಶ್ನಿಸಿದ  7
ಕಾಡುವವು ಕಲ್ಯಾಣ ಮಾಳ್ಪವು 
ಆಡಿಪವು ನರರನ್ನು ಕಟುಬರ 
ನೋಡು ಬೊಂಬೆಯ ತೆರದಿ ಕುಣಿಸುತವೆಂದು ಕೇಳಿದನು 8
ಗೃಹಗಳಲಿ ಗ್ರಹ ಶ್ರೇಷ್ಠ ಗ್ರಹವದು 
ಇಹುದು ಯಾವುದು ಎಂತು ಪೂಜೆಯು 
ಮಹತಿ ಹೇಳಿರಿ ಗತಿ ಮತಿಯ ಸ್ಥಿತಿ ರೂಹ ವಿಸ್ತರಿಸಿ 9
ಬುಧರು ಹೇಳಿದ ನೃಪನ ಮಾತಿಗೆ 
ವಿಧ ವಿಧದ ಹೊತ್ತಿಗೆಗಳಾಲಿಸಿ 
ಸದವಕಾಶವು ಎಂದು ತಮ ಪಾಂಡಿತ್ಯ ತೋರಿದರು  10
ಮಿತ್ರ ಗ್ರಹ ಬಹು ಶ್ರೇಷ್ಠ ಕಶ್ಯಪ 
ಗೋತ್ರಜನು ಕಾಳಿಂಗ ದೇಸಿಗ 
ಕ್ಷತ್ರಿಯನು ವರಹಸ್ತ ಕೆಂದಾವರೆಗಳಿಂ ಶೋಭೆ   11
ಸಪ್ತ ಕುದುರೆಗಳಿಂದ ಒಪ್ಪುವ 
ತಪ್ತ ವರ್ಣ ಉಪಸ್ಥ ಆಸನ 
ಸಪ್ತ ಸಾಸಿರ ಜಪಗಳಿಂ ಖಗದೇವ ಒಲಿಯುವನು 12
ರನ್ನ ಮಣಿ ಗೋಧೂಮ ಧಾನ್ಯವು 
ಅನ್ನ ಗುಡ ನೈವೇದ್ಯ ವರ್ಪಿಸಿ 
ಸನ್ನುತಿಸೆ ನಡು ತಾಮ್ರ ಧಾತುರ್ ಮೂರ್ತಿ ಸ್ಥಾಪಿಸುವ 13
ಪ್ರತ್ಯಕ್ಷದಲ್ಲಿ ತಾ ಕಾಣುವ ಗ್ರಹ 
ನಿತ್ಯವೂ ನಿಜ ರಶ್ಮಿ ತೋರ್ಪ್ಪನು 
ಸತ್ಯವೂ ಇವನಾಗಜ್ಞೆ ಪಾಲಿಸೆ ಇತರ ಗ್ರಹಗಳವು 14
ಭಾನುಪಾಸನೆ ಜಪ ಪರಾಯಣ 
ಮಾನವಗೆ ಬಹ ವಿಘ್ನ ದೂಷಣ 
ಜ್ಞಾನುದಯದಿಂದ ದೂರದೂರಿತವು ಆದಿ ವ್ಯಾದಿಗಳು 15
ನೆನಹಿನಿಂದಲೇ ಚಿಂತಿಸಿದ ಇಹ 
ಮನದ ಬೇಡಿಕೆ ಪೂರ್ತಿ ಮಾಳ್ಪನು 
ಜನಜನಿತ ಆಗಿರ್ಪನೆಮ್ ಪಂಡಿತನು ಹೇಳಿದನು 16
ದ್ವಿತೀಯ ಪಂಡಿತನೆದ್ದು ಪೇಳ್ದ ನ- 
ದ್ವಿತೀಯನಿಹ ಚಂದ್ರತ್ರಿ ಗೋತ್ರಜ 
ತೃತೀಯ ನೇತ್ರನ ಪ್ರೀತಿ ಪಾತ್ರನು ಯಮುನೆ ತೀರಿಗನು 17
ಕವಲು ಕರಗದೆ ಅಭಯ ತೋರ್ಪವು 
ಧವಲದಾರ್ಣವ ಧವಲ ವಸ್ತ್ರವು 
ಪೂವಡಿಯ ಕುಲಜನಿಸಿದವ ಪಾಲಡಿಗೆ ಪ್ರಿಯಕರನು 18
ಪತ್ತು ಹಯರತ ಸ್ಪಟಿಕಮೂರ್ತಿಯ 
ಮುತ್ತು ಮಣಿ ನೆಲ್ಲಕ್ಕಿ ಈವುದು 
ಮತ್ತೆ ಜಪ ಪನ್ನೊಂದುಸಾಸಿರ ಮಾಳ್ಪುದೇ ಲೇಸು 19
ಆಗ್ನೇ ದಿಕ್ಕಿಗೆ ನಿಲಿಸಿ ಜಪಿಸಲು 
ವಿಘ್ನವೆಲ್ಲವೂ ಪರಿಹರಿಪ ಮನ 
ಭಗ್ನವಂ ದೂರಿಪನು ಅಮೃತವರ್ಷಣಿಯ ಮಾಡಿ 20
ಸಸ್ಯಗಳಿಗತಿ ಪ್ರಿಯನಾಗಿಹ 
ಆಸರದಿ ರಕ್ಷಿಪನು ವನಗಳ 
ಆಸತಿಯೇ ತಾ ರಜನಿ ದೇವಿಯು ತಾರೆ ವೃಂದದಲಿ. 21
ಕಾಡದೇ ಕಲ್ಯಾಣ ಬಯಪನು 
ಮಾಡಿರಲು ಜಪ ತಪವು ಭಕ್ತನು 
ಷೋಡಶದ ಕಲೆ ಕಲೆಗಳಿಂ ಕಾಣುವನು ಚಂದ್ರಮನು 22
ಅಕ್ಕಸಾಲಿಗನಿಹನು ಮಂಗಳ 
ಅಕ್ಕು ಭಾರದ್ವಾಜ ವಂಶಜ
ಇಕ್ಕು ದೇಶವವಂತಿ ಎಂಬುದು ಇಹುದು ಭೌಮನಿಗೆ. 23
ಶಕ್ತಿ ಶೂಲ ಗದೆಗಳಿಂ ವರ 
ಹಸ್ತನಾಗಿಯೇ ಟಗರ ದೇರನು. 
ತಪ್ತಮೈ ವೈವಸ್ತ್ರ ಧಾರಿಯು ಕ್ರೂರ ಮಂಗಳನು 24
ಹವಳ ರತ್ನ ಅಢಳ ಧಾನ್ಯವು 
ಅವಗೆ ಸಲ್ವುದು ಹವಿಷ್ಯಾನ್ನವು
ತಾವು ಕುಜನ ಮೂರುತಿ ಚಂದನ ಕಾಷ್ಟ ನಿರ್ಮಿತವು 25
ಜಪದ ಸಂಖ್ಯೆಯು ಒಂದು ಸಾವಿರ 
ತಪಿಸಿ ಗೈಯಲು ಮನದಬಿಷ್ಟವ 
ಸಫಲ ಮಾಳ್ಪನು ನಾಸ್ಥಿಕಂಗೆ ನಾಶ ಮಾಡುವನು. 26
ಸಿಂಡರಿಸಿದ ನೋಟ ಕೆರಳಿದ 
ಖಂಡ ಧಾರೆಯ ತೆರದಿ ಇರಲದು
ಭಂಡ ಗರ್ವದ ನಿಂದಕರ ಕಳುಹುವನು ಯಮಪುರಿಗೆ  27
ಭೌಮ ತೆಂಕಣ ದೆಸೆಗೆ ಸ್ಥಾಪಿಸಿ 
ಪ್ರೇಮದಿಂ ಪೂಜಿಪರ ಉದ್ಧರ 
ಕಾಮಿತಾರ್ಥವ ಗೊಳಿಪ ನೀಚರ ಘಾತ ಗೊಳಿಸುವನು 28
ತೃತೀಯ ಪಂಡಿತ ನುಡಿದು ಕೂಡ್ರಲು 
ಅತಿಯ ಚತುರದಿ ಚತುರ ಜಾಣನು 
ಗತಿಪ ಗ್ರಹಗಳ ನಡು ಹಿರಿಯ ಬುಧ ಮಹಾಪ್ರಭುವು. 29
ಬುಧನು ಬಣಜಿಗ ಅತ್ರಿಯಜನು ಮ-
ಗಧ ವಾಸಿಯು ಹಸ್ತ ಚತುರಸ್
ಗದೆ ಗುರಾಣಿ ವರ ಖಂಡೆಯನು ಝಳಪಿಸುತ್ತಿರುವ  30
ಪೀತ ಮೈ ನೀಲೋಪ‌ ವಸ್ತ್ರವು
ಖ್ಯಾತಿ ಕೇಸರಿ ಏರಿ ಕುಳಿತಿಹ
ಮೂರ್ತಿ ಕನಕಗದಿ ರಚಿಸೇ ಪೂಜೆಯ ತಾಣ ಈಶಾನ್ಯ 31
ಪಂಚರತ್ನದ ಮುದ್ಗದಾನ್ಯವು 
ಮೆಚ್ಚುತಿರೆ ಪಾಲ್ ಬೆರೆತ ಅನ್ನವು 
ಇಚ್ಛೆ ಪೂರ್ತಿಪ ನಾಲ್ಕು ಸಾವಿರ ಜಪಗಳಿ ನುತಿಸೆ   32
ಚಂದ್ರ ಪುತ್ರನು ಬುದ್ಧಿವಂತನು 
ಅಂದದಿಂದದಿ ಪೂಜಿಪರ ಭಯ
ಹಿಂದೆ ಮಾಳ್ಪನು ಸಚ್ಚರಿತ್ರನು ಚೆಲುವ ಮೂರುತಿಯ  33
ಯಾವ ಕಾರ್ಯಕು ವಿಘ್ನ ತಾರನು
ಭಾವ ಮೃದು ಮನ ಜ್ಞಾನ ಜ್ಞೇಯನು
ದೇವಕಲ್ಪಾಂತರದಿ ಮಾಡನು ಕೇಡ ಕಾರ್ಪಣ್ಯ  34
ಪರಮ ಪಂಡಿತ ಪಂಚಮಸ್ಥನು 
ಗುರುವ ಮಹಿಮೆಯನರುಹುತಿರಲಾ 
ಅರಿವಮೂರ್ತಿಯ ಮೋಕ್ಷಕಾರಣ ಭವದಬಿಡುಗಡೆಯ 35
ಹಿಂದೂ ಪ್ರಾದೇಶಿಕನು ಪಾರ್ವನು 
ವಂದ್ಯ ಅಂಗೀರಸನೊಳಾಗಿರೇ 
ಗಂಧ ಅರಿಶಿಣ ಮೈಯ ವರ್ಣವು ವಸ್ತ್ರಸಹಿತಾಗಿ  36
ದಂಡ ದಾರಿಯು ಅಕ್ಷಮಾಲೆ ಕ-
ಮಂಡಲವು ವರ ಹಸ್ತ ನಾಲ್ಕು ಉ
ದ್ದಂಡ ಗಜವೇರಿದನು ಗುರು ಮೊಸರನ್ನ ಒಲವಿಗನು 37
ಉತ್ತರ ವದಿಷ್ಠಾನವಿರುತಿಹ 
ಮತ್ತೆ ಚೆನ್ನಗಿ ಕಾಳು ಪ್ರಿಯನಿಹ
ಕತ್ತು ಮಾಲೆಯ ಮಧ್ಯ ಪುಷ್ಯರಾಗ ರತ್ನಮಣಿ 38
ಜಪವು ಹತ್ತೊಂಬತ್ತು ಸಾವಿರ 
ತಪವ ಗೈವೊಡೆ ಕರುಣೆ ತೋರುವ 
ಉಪದಿ ಜನನವು ದಾಟಿ ಅಮೃತ ರೂಪ ಮಾಡುವನು  39  
ಜ್ಞಾನ ನಿಧಿ ಕರ್ಮವನು ಕಳೆಯುವ ಮನ 
ಮಾನ ಮೊದಲಿಹ ಅಮರರೊಳು ತಾಮ್. 
ಮಾನವಗೆ ಮಂಗಳವ ಬಯಸುವ ದೇವ ಗುರುರಾಯ  40 

ಶಿವನೇ ಗುರುವಿನ ಪೂಜೆ ಮಾಡಿರೆ

ಭವಿಯ ಪಾಡೇನಿಹುದು ಅದರಲಿ 

ನವಗ್ರಹಗಳಿಗೆ ಗುರುವೇ ಶಾಂತಿ ಪೂರ್ಣವದು  ೪೧

ಮಂತ್ರಗಳಿಗೂ ಭಾಷ್ಯಗಳಿಗೂ 

ಯಂತ್ರಗಳಿಗೂ ಸಿದ್ಧಿ ಭೂತನು 

ತಂತ್ರಿಗ್ರಹಗಳು ಭಜಿಸಿ ಇವನೊಳು ತುಷ್ಟಿಗೊಂಡಿರುವ ೪೨

ಆರನೆಯ ಪಂಡಿತನು ಪೇಳಿದ 

ಭಾರ್ಗವಸ ಗೋತ್ರಜನು ಶುಭ್ರನು 

ಪಾರ್ವನಿಹ ಭೋಜಕಟ ದೇಶಿಗ ದೈತ್ಯ ರಕ್ಷಿಸಿದ  ೪೩

ಅಕ್ಷಸರ ದಂಡ ಕಮಂಡಲ 

ರಕ್ಷಕರವಿಹ ಹುಲಿಯ ನೇರಿದ 

ಅಕ್ಷ ಒಂದಾಗಿರಲು ಸಂಜೀವನವೆ ಮಂತ್ರಿಸಿದ  ೪೪

ಅದುವೇ ಪೂಜೆಯು ಪೂರ್ವದಿಸೆಯೋಳು 

ಅಧಿಕ ಅಭಿರುಚಿ ಹವಿಷ್ಯಾನ್ನವು

ಹದಿನಾರುಸಾವಿರ ಜಪವ ಮಾಡಲು ಒಲಿವ ಭಕ್ತಂಗೆ  ೪೫

ಬೆಳ್ಳಿ ಮೂರ್ತಿ ವಜ್ರ ರತ್ನವು 

ಮೆಳ್ಳಳಿತ ಉಪ ವಸ್ತ್ರ ವಿರುತಿರೆ 

ಶಾಳೆ ಅಕ್ಕಿಯ ಪ್ರೀತಿಪನು ದಾನವಗೆ ಗುರುವೆನಿಸಿ ೪೬

ಜೀವವಿಲ್ಲದ ಜೀವಿಗಳಿಗೆಯೇ

ಜೀವ ಮಾಡಲು ಬರುವ ತೆರ ಸಂ 

ಜೀವ ಮಂತ್ರದಶಕ್ತಿ ಮಹತಿಯು ಹೇಳಲಸದಳವು ೪೭

ಭಯವು ತೋರಿಪನಾದರೂ ಅ

ಭವು ಪೂಜಿಸೆ ಒಳ್ಳೆ ಸ್ಥಾನದಿ

ದಯವು ಮಾಡಲು ಸಂಪದವು ನರ ಪಡೆದುಕೊಳ್ಳುವನು ೪೮

ಕೇಳಿ ಷಡ್ ಗ್ರಹಗಳಿಹ ಕಥೆಯನು

ಮೇಳವಿಸಿ ತಲೆವಾಗಿ ತರ್ಜನಿ

ತಾಳ ಹಾಕುತ ಮಾತಿನಲಿ ನಲಿದಾಡಿದನು ಅರಸ  ೪೯

ಇನ್ನುಳಿದವವು ಆ ಯಾವಗ್ರಹಗಳು 

ಬಿನ್ನೈಸಿಕೊಂಡಿರಲು ಪಂಡಿತ 

ಮನ್ನಣೆಯ ಕೊಡು ಕೊಡುತ ಹೇಳಿದರಾಗ ರಾಯನೊಳು ೫೦

ಏಳನೆಯ ಪಂಡಿತನು ಏಳುತ

ಹೇಳುವನು ರಾಹುವಿನ ಕಥೆಯನು 

ಮೇಲೆ ತಲೆಯದು ಅರ್ಧ ಭಾಗವೇ ಈ ಗ್ರಹವು ಇಹುದು ೫೧

ರಾಹುಮುಖ ಅಕ್ರಾಳ ಭೀಕರ 

ಬಾಹ್ಯ ದಂತಿಯು ಬಹಳ ಕ್ರೂರನು 

ಶಿಂಹಿಕೆಯ ಗರ್ಭದೊಳು ಜನಿಸಿದ ಭಯದ ಗ್ರಹವಾಗಿ ೫೨

ಪೈಠಿನಸ ಗೋತ್ರದೊಳು ಹುಟ್ಟಿದ 

ರಾಠಿನಾಪುರದುದಿಸಿ ಮಾದಿಗ 

ಶ್ರೇಷ್ಠ ನಿಲ್ಲಲೇ ಶ್ರೇಷ್ಠತೆಯ ತಾ ಪಡೆದ ನೀಲಮಯ ೫೩

ನಾಲ್ಕು ಕರೆದೊಳ್ ಖಂಡೆ ಢಾಲೆ ತ್ರಿ-

ಶೂಲ್ಗಳಿಂ ಕೂಡಿರುವ ಅಭಯವು 

ನೀಲವಸನ ಪ್ರಿಯವಾಗಿಹ ಎಳ್ಳು ಧಾನ್ಯಗಳು. ೫೪

ಸಂಬಕ್ಕಿ ಪಾಯಸವೇ ವೇದ್ಯ ವ -

ಷ್ಟಂಭೀಸ್ಥಂಬಿ ಸಿಂಹಾಸನವು ನೈಋತ 

ನಂಬಿ ಜಪ ಹದಿನೆಂಟು ಸಾವಿರ ಮಾಳ್ಪುದುತ್ತಮವು ೫೫

ಗೋಮೇಧ ವಾರ ರನ್ನ ಮಣಿ ಘಟ 

ತಾಮಸಾಸೀಸವದ ಪ್ರತಿಮೆಯು 

ತಾಮಸನ ಕಂಡೊಡೆಯೇ ರವಿ ಶಶಿ ಗಡನೆ ನಡುಗುವರು ೫೬

ಚಂದ್ರ ನಡುಗುವ ರಾಹುವಿಗೆ ಗ್ರಹ 

ಣೆಂದು ಕಾಣ್ವುದು ಜನರು ಜರಿದರೆ 

ಅಂಡಲೆದು ತಿರಿ ತಿರಿದು ಘಾತವೆ ಮಾಳ್ಪ ಕ್ರೂರ ಗ್ರಹ ೫೭

ಎಂಟನೆಯ ಬುಧ ಪೇಳೆ ಕೇತು ವು

ಅಂತರ್ವೇದಿಯ ಸಮುದ್ಭವ ನೆಮ್ 

ಅಂತು ಜೈಮಿನಿ ಗೋತ್ರ ಮಾದಿಗನಾದ ಭಯಮುಖನು ೫೮

ಹದ್ದು ಗದ್ದಿಗೆ ಕೈಗಳೆರಡಿರೇ

ಹದಿನೇಳು ಸಾವಿರದ ಜಪವಿಹ 

ತದ್ರುಪವು ರಾಹುವಿಗೆ ಬಿಡದೆಲ್ಲಿ ಗುಣ ಧರ್ಮ ೫೯

ಹೊಗೆಯ ಬಣ್ಣದ ಕಪ್ಪು ವಸ್ತ್ರವು 

ಬಗೆಯು ಕಂಚಿನ ಪ್ರತಿಮೆ ಮಾಡಿರೆ 

ಹಗೆಯು ಸೂರ್ಯನು ಕೇತು ಕಂಡರೆ ಹೆದರಿ ನಡುಗುವನು ೬೦ 

ಲಾಸಣಿಕ ಮಣಿಯಿಂದ ವಾಯ-

ವ್ಯಾಸೀನ ಮಾಗಿರುವ ತಿಳಪ್ರಿಯ 

ಪ್ರಾಸನವು ಹುಳಿಬೋನ ಮಜ್ಜಿಗೆ ಬೋನವಾಗಿರಲು ೬೧

ಕೇತು ರಾಹುವು ಬೇರೆ ಅಲ್ಲವು 

ಹೇತು ಪೂರ್ವಕ ಪೀಡೆ ಕೊಡುತಿಹ 

ಪ್ರೀತಿಯಿಂ ಜಪ ತಪವಗೈಯ್ಯಲು ಅಲ್ಪದಯವಹರು ೬೨

ಮುಂದೆ ಗ್ರಹ ಇನ್ನಿಲ್ಲ ಶ್ರೇಷ್ಠವು

ಎಂದುಸಿರೆ ಅಸ್ತಿತ್ವ ಇಲ್ಲದ

ಇಂದ್ರ ವಾರುಣಿ ಯಮ ನಿಋತ ಮುಗಿದಾಗೆ ಕ್ಷುದ್ರಗಳು ೬೩ 

ಇದನ್ನು ಕೇಳಿದ ನವಮ ಪಂಡಿತ 

ಎದೆಯನುಬ್ಬಿಸಿ ಎದ್ದು ಹೇಳಿದ 

ಅಧಿಕ ಶ್ರೇಷ್ಠನು ಗ್ರಹ ಬಳಗದೊಳು ಶ್ರೀ ಶನೇಶ್ವರನು ೬೪

ಮರೆತು ಕುಳಿತಿರೆ ಬಿಡುವನೆನೆ ತಾ 

ಅರಿತು ನಡೆಯಿರಿ ಬಭ್ರು ಮಹತಿಯ 

ಕರಿ ಅರಿವೆ ಕರಿ ಪೂವ ಲೋಹದ ಮೂರ್ತಿ ನೀಲಾಂಗ ೬೫

ಕಶ್ಚಪಜ ಸೌರಾಷ್ಟ್ರ ನಾಡಿಗ 

ಪಶ್ಚಿಮಸ್ಥಿತ ಪೂಜೆಗೊಳ್ಳುತ 

ತ:ಚರಣ ವಕ್ರಾಗಿ ಇರುತಿರೆ ಗೃಧ್ರವಾಹನನೇ ೬೬

ಎಳ್ಳು ಚೂರ್ಣವು ಕೂಡಿದನ್ನವು 

ಸಲ್ಲುವದು ನೈವೇದ್ಯ ಉದ್ದಿನ 

ಕಾಳು ಪ್ರಿಯನಿಹ ಪಿಂಗಲಗೆ ಈ ಎಲ್ಲ ದಾನವದು ೬೭

ಇಪ್ಪತ್ತರಿಂ ಮೇಲ್ ಮೂರುಸಾಸಿರ 

ಜಪಗಳೆಣಿಸಿರೆ ಭಕ್ತಿಯಿಂದಲಿ

ಕುಪಿತನಾಗಿಹ ಸೌರಿ ಶಾಂತಿಯ ಪಡೆದು ಕಾಯುವನು ೬೮ 

ಮಣಿ ಮುಕುಟ ನೀಲಾದ ರತ್ನವು 

ಗಾಣಿಗರ ಕುಲವೆನಿಸಿ ಶರಧನು 

ಪಾಣಿವರ ತ್ರಿಶೂಲ ಪಿಡಿದಿಹ ಚತುರ ಹಸ್ತಗಳಿಂ. ೬೯

ಕಾಲಭೈರವ ಭಜಿಸುವನು ತಾಂ 

ಹಾಳು ಗೈವನು ಸರ್ವಗ್ರಹ ದಿಕ್ 

ಪಾಲರೆಲ್ಲರೂ ಅಂಜುವರು ಶನಿರಾಯ ನೋಡಿದಡೆ ೭೦ 

ನರನ ಘಟಿತದಿ ವಿಷಮಸ್ಥಾನದಿ

ತರವು ನಾಲ್ಕು ಐದು ಎಂಟು ಹ- 

ನ್ನೆರಡನೆಯ ತಾಣಗಳಲ್ಲಿ ದುಃಖ ಕೊಡುತ್ತಿರುವ. ೭೧

ಕೃಪೆಯು ಪಡೆದರೆ ಸುಖವೂ ಐಸಿರಿ 

ಕುಪಿಸೆ ಸುಡುವುದು ಬಾಳುವೆಯು ಬರಿ 

ನೃಪತಿ ಆಲಿಸು ಪಿಪ್ಪಲಾದನ ದೃಷ್ಟಿ ಕ್ರೂರತೆಯು  ೭೨

ಹುಟ್ಟಿದೊಡನೆ ಪಿತಗೆ ಬಿಳುಮೈ  

ಕುಷ್ಟರೋಗಿಯು ಉಷ್ಣನಾದನು 

ದೃಷ್ಟಿ ತಾಗುತೆ ಏಳು ಹಯಗಳು ಆದವವು ಕುರುಡು ೭೩

ಅರುಣ ಸಾರಥಿ ಕಾಲು ಕಳೆದವು 

ತರಣಿಗೈದನು ಬಹು ಉಪಾಯವ 

ಸರಿ ಎನಿಸದಿರೆ ಸಂಜ್ಞೆ ಆತ್ಮಜ ಕುರಿತು ಪ್ರಾರ್ಥನೆಯ  ೭೪

ದೃಷ್ಟಿ ರೌದ್ರಾಂತಕನ ತಿರುಗಿ ರೇ 

ನೆಟ್ಟಗಾಯಿತು ಮೂವರ್ಬುದ 

ಸ್ಪಷ್ಟ ನವಗ್ರಹಗಳಲಿ ಶ್ರೇಷ್ಠನು ಕೃಷ್ಣ ಕೋಣಸ್ಥ  ೭೫

ಗೃಹಗಳಲಿ ಶನಿ ಶ್ರೇಷ್ಠವೆಂದೆಡೆ 

ಗಹಗಹಿಸಿ ನಗು ನಗುತ ಮಿಗೆಯಿಂ

ತಿಹ ಮಗುವ ಪಡೆದೇನು ವ್ಯರ್ಥವು ನುಡಿದ ವಿಕ್ರಮನು ೭೬

ಮಗು ಅಲ್ಲವಿದು ವೈರಿ ಹಿಂದಿನ 

ಜಗದಿ ಬಂದೆಡೆ ಪೀಡೆ ಕೊಡುತಿಹ 

ಬಗೆಯ ಸುಖವೀವುದನು ತಿಳಿದಂತಾಯ್ತು ಪಿತೃ ಋಣ ೭೭

ಇಂತೆಂದು ಚಪ್ಪಾಳೆ ತಟ್ಟುತ 

ಎಂತ ಅಪವಿತ್ರಾದ ಮಗುವಿದು 

ಸಂತಸದ ರಸ ಸರಸ ನುಡಿದನು ನೃಪ ವಿನೋದದಲೀ ೭೮

ನಗೆಯು ಹೊಗೆಯಾಗುವುದು ಬಗೆಯೊಳು 

ಬಗೆಯದೆಯೇ ನಗುತಿರುವ ಭೂಪತಿ 

ವಿಗಡ ಬಂಧನದೊಳಗೆ ಮುಳುಗಿದ ನಿಂದ್ಯ ಕರ್ಮದೊಳು ೭೯

ಕಾಗೆ ಕೂಡುವ ಸಮಯಗಳು ತಾಂ-

ಟೊಂಗೆ ಮುರಿದಾ ತೆರನ ಪಿಪ್ಪಲ 

ಮುಗಿಲಿನೋಳ್ ಸಂಚಾರ ಹೊರಟಿಹ ಕೇಳಿ ಅವ ಚರ್ಚೆ ೮೦

ಇಳಿದು ಒಮ್ಮೆಲೆ ಸಭೆಯ ಮಧ್ಯದಿ 

ಗಳಿಗೆ ಉಳಿದಿಹುದಿಲ್ಲ ಮುಂಚಿನ 

ಬಳಸಿಕೊಂಡಿಹ ವ್ಯಕ್ತಿ ಎದುರುಳು ಕಂಡು ಹೆದರಿದರು ೮೧

ಜಾಣರರಿದುದರಿಂದ ಎಂದರು 

ಕೋಣಸ್ಥ ತಾ ನಿಜದಿ ಬಂದರು 

ಜಾಣಿಸಲು ನೃಪನೆದ್ದು ಮುಂದಕೆ ಬಂದು ಎರಗಿದನು ೮೨

ಆಗಲೇ ಯಾಕೆ ತಾ ಕಾಲ ಪಿಂಗಳ-

ನಾಗ ಕೋಪದಿ ಕೊಸರಿ ಕಾಲನು 

ಸಾಗಿ ಝಾಡಿಸಿ ಬೀಸಿ ಬೆದರಿಸಿ ಬಯ್ಯ ತೊಡಗಿದನು ೮೩

ಎಲೆ ನೃಪತಿ ಇದು ವ್ಯರ್ಥ ನಿಂದೆಯು 

ಬೆಲೆಯೂ ಅರಿಯದ ನಿನ್ನ ಕೃತಿ ಇದು 

ಕಲುಷ ನೀನಗಿದೆ ಕೈಯ ತೋರುವೇ ಸಾರ್ಧ ಸಪ್ತಕದ ೮೪

ಕನ್ಯೆ ರಾಶಿಗೆ ನನ್ನ ಬರುವಿದೆ 

ಇನ್ನೂ ಜೋಕೆಯು ಬರುವ ಗಯ್ಯಳಿ-

ಯನ್ನು ಮಾಡುತ ಓಲಗದಿ ನೀ ಗರ್ವ ಮಾಡದಿರು  ೮೫

ಕುಳಿತ ಯಾನದಿ ದೇವ ಶನಿ ತಾ 

ಬಳಿಕ ಇಳೆವರ ಚರಣಕೆಗುತ 

ಗಳಿತ ಮಾನಸನಾಗಿ ನುತಿಸಿದ ಶನಿಯ ಕುರಿತೆಂದ  ೮೬

ಕ್ಷಮಿಸಿದ ತಪ್ಪಿದೆ ದೇವ ನ್ಯಾಯವೇ 

ರಮಿಸಿ ಹೊಟ್ಟೆಯೊಳಗಿಟ್ಟು ಕೊಳ್ಳಿರಿ 

ನಮಿಸಿ ರಾಜನು ಕೇಳುತಿರೆ ಶನಿ ಇದನು ಧಿ:ಕ್ಕರಿಸಿ  ೮೭

ಅನುಭವವು ನಿನಗಾಗಬೇಕೆಂ- 

ದನುಗೊಂಡು ಯಾನದೊಳು ಹೋದನು 

ಕನವರಿಸಿ ಚಿಂತೆಯಲಿ ಮುಳುಗಿದ ಅರಸ ವಿರಸಾಗಿ ೮೮

ಬುಧರಿಗೆಂದನು ಆ ಮಹಾ ಗ್ರಹ 

ಸದರವಾಯಿತು ವ್ಯರ್ಥ ಹಳಿದೆನು 

ನೆದರಿನೊಳು ಸಿಲುಕಿದೆನು ಸಂಕಟ ಸ್ವಾಗತವ ಮಾಡಿ ೮೯

ಹೇಗೆ ಮಾಡುವುದು ಈಗ ಆಗುವ 

ಆಗು ಹೋಗುಗಳಿಹವು ಬಿಡವು 

ಭೋಗಿಸಲಿ ಬೇಕಾಗಿ ಬಂದುದು ಬ್ರಹ್ಮ ಲಿಖಿತವದು  ೯೦

ವಿಮುಖ ಮಾನಸನಾಗಿ ಸಭೆಯನು 

ಗಮಿಸಿ ಅರಮನೆ ಹೊಕ್ಕು ದಿನಚರಿ 

ಕ್ರಮಿಸಿದನು ಕೋಟಲೆಯ ಸಿಲೆಯೋಳು ಸಿಲುಕಿ ಜಂತುವೊಲು. ೯೧

ತೂಗು ಪಲ್ಲಂಗದೊಳು ಎರಗಿರೇ 

ಬೇಗುದಿಯು ಒಳಗೊಳಗೆ ಇರುತಿರೆ 

ಆಗಿ ತಿಂಗಳು ಕಳೆದು ಹನ್ನೆರಡನೆಯ ಶನಿ ಬಂದು  ೯೨

ಕ್ರೂರ ಸ್ಥಾನದಲಿ ಪೀಡೆ ಬಹುಜನ 

ಆರು ಉಳಿದವರಿಲ್ಲ ದುದರಿಂ 

ಧಾರುಣಿಯ ಪತಿ ಮಾಡು ಜಪವನು ಎಂದು ಪಂಡಿತರು ೯೩

ನಕ್ಕು ಹೀಗಳೆದಿರುವುದರಿಂದ 

ಇಕ್ಕುವನು ಶನಿ ರಾಯ ಸಂಕಟ 

ಅಕ್ಕು ಪೂಜೆಯು ವ್ರತವು ಜಪ ತಪ ಶುದ್ಧ ಚಿತ್ತದಲಿ ೯೪

ತ್ರಿ ಜಗದೊಳು ಯಾರಿಗೆಯು ಬಿಡದಿರೆ 

ಭಜಕರಲಿ ಕರುಣೆಯನೆ ತೋರುವ 

ನಿಜದಿ ಔಷದಿ ಸ್ನಾನ ನಂತರ ಪ್ರತಿಮೆ ಪೂಜೆಯನು. ೯೫

ನಿತ್ಯ ವಿಧಿಗನುಸರಿಸಿ ಮಾಡಿರೆ

ಮೃತ್ತಿಕೆಯ ಕುಂಭವನು ಸ್ಥಾಪಿಸಿ 

ಮತ್ತೆ ತೈಲಭಿಶೇಖ ಗೈದು ವಿಪ್ರಪೂಜಿಸಲು  ೯೬

ಕುದುರೆ ಕೊಳಗದ ಲಾಳ ಲೋಹದ 

ವಿಧಿಶಿ ಪ್ರಾಣ ಪ್ರತಿಷ್ಠೆ ಪ್ರತಿಮೆಯ 

ಗೈದು ಮೃತ್ತಿಕೆ ಕುಂಭ ಮೇಗಡೆ ಇರಿಸಿ ಪೂಜಿಪುದು ೯೭ ಇರ್ವತ್ತೂರು ಸಾಸಿರದ ಜಪವನು

ಪಾರ್ವರಿಂ ಗೈವುದಕೆ ತಂಬುಲ 

ಅರ್ಪಿಸಿರೆ ನಡೆಗಿರ್ದ ಅಂಶವ ಹವನ ಮಾಳ್ಪುವುದು ೯೮

ಆ ದೊಡನೇ ಜಪ ಪೂರ್ಣ ಸಂಖ್ಯೆಯ 

ವೇದವೇತ್ತರೆ ಶನೈಶ್ಚರ ರೆಂ- 

ದೊದವಿ ದಕ್ಷಿಣೆ ದಾನ ಭೋಜನವಿತ್ತು ನಮಿಸುವುದು ೯೯

ಭೂಸುರರ ತೋಷಿಸಿದರೆ ತಾ

ಕೂಸು ಪ್ರೀತಿಪ ತಾಯಿ ಅಂದದಿ 

ರೋಷ ತೊರೆ ಸಂತೋಷದಿಂದಲೇ ಕೃಪೆಯ ತೋರುವನು ೧೦೦

ಪ್ರಾಣದೇವರ ಪ್ರಣವ ಪೂರ್ವಕ 

ಧ್ಯಾನದರ್ಶನ ವದುವೆ ಶನಿ ಕೃಪೆ 

ಜಾಣ ಜ್ಯೋತಿಷಿ ಪೇಳುತಿರೆ ವಿಕ್ರಮನು ಮರುಡಿದ  ೧೦೧

ಕೋಣಸ್ಥನೇ ತಂದೆ ತಾಯಿಯು 

ಅಣ್ಣ ತಮ್ಮನು ಬಂಧು ಮಿತ್ರನು 

ಆಣೆ ಮಾಡಿರಲಿಕ್ಕೆ ಇನ್ನೆಲ್ಲಿಂದ ವ್ರತ ನಿಯಮ  ೧೦೨

ನಿಮ್ಮ ಮನೆಯೆಡೆ ನೀವು ಸಾಗಿರಿ 

ಬ್ರಹ್ಮ ಲಿಖಿತದ ಆಗುಹೋಗು ಗೆ -

ಳೆಮ್ಮ ಬಿಡದವು ಹೇಳಿಹನು ಪ್ರತ್ಯಕ್ಷನಿರಾಯ  ೧೦೩

ಕೆಲಕಾಲ ಕಳೆ ಒಂದು ದಿನದೊಳು 

ಇಳೆ ವೇಳೆ ಯೋಳು ಕಾರವಾನನ

ತಳೆದ ವೇಷದಿ ತುರಗ ಮಾರುತ ಇಳಿದ ಶನಿರಾಯ ೧೦೪

ಮಾರುವೇಷದೊಳಂದು ಹಯಗಳ 

ಮಾರುತಲೆ ನಿಂತಿಹನು ಗ್ರಾಮದಿ 

ಗಾರುಡಿಗ ನಾಟಕವನು ಹೂಡಿದ ತೆರದಿ ವಿಕ್ರಯವ  ೧೦೫

ನೆರೆದ ಸಂದಣಿ ಕ್ರಯಿಕರೋಳ್ ನೃಪ 

ತುರಗ ಬೆಲೆಕೇಳ್ ತಿರಲು ಸೌರಿಯು 

ಅರುಹಿಧನು ಹಯಗುಣದ ಪರಿ ಪರಿಯ ಬೆಲೆಗಳನು ೧೦೬

ತುರಗಗಳ ನೇರೇರಿ ಕ್ರಯಿಕರು 

ತಿರುಗಿ ತಿರುಗಿಸಿ ಅಡಿಯ ನಡಿಗಳ 

ಪರುಕಿಸಿದ ಬಳಿ ಅರುಹುವರು ಬೆಲೆ ಬಾಳು ತಾಳಿಕೆಯ  ೧೦೭

ಬಳಿಕ ತಾ ಸಾರಂಗ ಅಶ್ವವ 

ಬಳಿಗೆ ಸಾರಲು ಸವಾರ ಚೆಬ್ಬುಕ 

ಕುಳಿತು ತಿರುಗಾಡಿಸಿದ ಹೊರಳಿಸಿ ನಾಲ್ಕು ಬದಿಗಳಿಗೆ  ೧೦೮

ವಿವಿಧ ಕುದುರೆಗಳನುವು ಗುಣಗಳ 

ಅವಿತವಿತು ಅರಿತಿರುವ ಚಬ್ಬುಕ 

ಕವನ ಕಥೆ ಹೇಳಿದನು ಹಯಗುಣ ಬೆಲೆಗಳನು ಬೇರೆ ೧೦೯

ತಾವು ಕುಳಿತರೆ ತಮಗೆ ಅನುಭವ 

ಸೇವಕನು ಕುಳಿತರೆ ತಿಳಿಯುವುದೇನು 

ಸೇವಿಸಿಯೆ ಸಕ್ಕರೆಯ ಸವಿಯನು ತಿಳಿದುಕೊಳ್ಳುವುದು ೧೧೦

ಪಿತರು ಓದಿದುದಂತೆ ಪೇಳಿದ 

ಕಥೆಯು ರಂಜಿಸುವಂತೆ ಕನ್ನಡ 

ಮತಿಯ ರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ ೧೧೧

ಇಂತಿ ಶ್ರೀ ಶನೈಶ್ಚರಚರಿ ತಾ -

ದ್ಯಂತ ಸ್ಪೂರ್ತಿಯು ನೀಡುತಿರೆ ತಾ-

ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ  ೧೧೨

ಇತಿ ಪುರಾಣೈತಿಹದ ಕಥೆಗಳು 

ಮಥಿಸಿ ಸೀತಾರಾಮ ತುಳಸಾ-

ಸುತನ ಸವಿಗತೆ ಪಂಚಮದ ಶ್ರೀ ಕೃಷ್ಣ ಅರ್ಪಣೆಯ  ೧೧೩


ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಪಂಚಮ ಸಂಧಿ ಪರಿಪೂರ್ಣಂ  ಶುಭಮಸ್ತು  ಕೃಷ್ಣಾರ್ಪಣಮಸ್ತು


















No comments:

Post a Comment