ಜಯ ಮಧ್ವವಲ್ಲಭ ಜಯ ಶುದ್ಧ ಸುಲಭ
ಜಯ ಪದ್ಮನಾಭ ಉಡುಪಿನ ||
ಜಯ ಪದ್ಮನಾಭ ಉಡುಪಿನ ಶ್ರೀಕೃಷ್ಣ
ಜಯ ದುರ್ಜನರಿಗೆ ಅತಿದೂರ || ಸುವ್ವಿ ಸುವ್ವಿ ಸುವ್ವಾಲೆ || ಪಲ್ಲ ||
ಸುರರ ಶಿರೋರನ್ನ ಗರುಡವಾಹನನೆ
ಕರುಣಾಸಂಪನ್ನ ಉಡುಪಿನ ||
ಕರುಣಾಸಂಪನ್ನ ಉಡುಪಿನ ಶ್ರೀಕೃಷ್ಣ
ಶರಣಾಗೊ ಧನ್ಯ ಜನರಿಗೆ || 1 || ಸುವ್ವಿ ಸುವ್ವಿ ಸುವ್ವಾಲೆ
ಮೇಲೆ ಸತ್ಯಲೋಕ ಆಳುವ ಧೀರನೆ
ಶ್ರೀಲೋಲನಂಘ್ರಿ ಭ್ರಮರನೆ ||
ಶ್ರೀಲೋಲನಂಘ್ರಿ ಭ್ರಮರನೆ ಮುಖ್ಯಪ್ರಾಣ
ಇಳಾದೇವಿ ರಮಣಗೆರಗುವೆ || 2 || ಸುವ್ವಿ ಸುವ್ವಿ ಸುವ್ವಾಲೆ
ರಾಮನಂಘ್ರಿ ಸೇವೆಯ ಪ್ರೇಮದಿ ಮಾಡಿದ
ಶ್ರೀಮಂತ ನಮ್ಮ ಹನುಮಂತ ||
ಶ್ರೀಮಂತ ನಮ್ಮ ಹನುಮಂತನೆಂದವಗೆ
ಕಾಮಿತಾರ್ಥಗಳ ಕೊಡುವನು || 3 || ಸುವ್ವಿ ಸುವ್ವಿ ಸುವ್ವಾಲೆ
ಭಾರತ ಯುದ್ಧದಲಿ ಬಾಹುಬಲತೋರಿದ
ಧಾರಣೀಶ್ವರ ತಿಲಕನೆ ||
ಧಾರಣೀಶ್ವರ ತಿಲಕನೆ ಶ್ರೀ ಭೀಮ
ಸಾರಿದ ಜನರ ಸಲಹುವ || 4 || ಸುವ್ವಿ ಸುವ್ವಿ ಸುವ್ವಾಲೆ
ಶುದ್ಧ ಶಾಸ್ತ್ರಗಳಿಂದ ಗೆದ್ದು ವಾದಿಗಳ ಹೊo-
ದ್ದಿದ ಜನರ ಸಲಹುವ ||
ಹೊoದ್ದಿದ ಜನರ ಸಲಹುವ ಶ್ರೀಗುರು
ಶ್ರೀಮಧ್ವಮುನಿಪನ ಭಜಿಸುವೆ || 5 || ಸುವ್ವಿ ಸುವ್ವಿ ಸುವ್ವಾಲೆ
ಹರಿಯ ಕರುಣದಿಂದ ಕರುಣಂಗಳೊಡನೆ
ದುರುಳ ವಾದಿಗಳ ಗೆಲಿದನೆ ||
ದುರುಳ ವಾದಿಗಳ ಗೆಲಿದನೆ ಹೃಷಿಕೇಶ
ಗುರುಗಳಂಘ್ರಿಗೆ ನಮಿಸುವೆ || 6 || ಸುವ್ವಿ ಸುವ್ವಿ ಸುವ್ವಾಲೆ
ದೇಶದೇಶoಗಳೊಳು ದೋಷಿವಾದಿಗಳ
ದೂಷಿಸಿ ಹರಿಯ ಮಹಿಮೆಯ ||
ದೂಷಿಸಿ ಹರಿಯ ಮಹಿಮೆಯ ಮೆರೆಸಿದ
ಶ್ರೀ ನೃಸಿಂಹತೀರ್ಥ ಯತಿರಾಯ || 7 || ಸುವ್ವಿ ಸುವ್ವಿ ಸುವ್ವಾಲೆ
ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪ
ಮಧ್ವಮಾರ್ಗವನು ಜಗಕೆಲ್ಲ ||
ಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-
ನಾರ್ದನ ತೀರ್ಥ ಯತಿರಾಯ || 8 || ಸುವ್ವಿ ಸುವ್ವಿ ಸುವ್ವಾಲೆ
ಇಂದಿರೆಯರಸನ ಎಂದೆಂದು ಪೂಜಿಸಿ
ಮಂದ ಮಾಯಿಗಳ ಕುಮತವ
ಮಂದಮಾಯಿಗಳ ಕುಮತವ ಗೆಲಿದ ಉ-
ಪೇಂದ್ರತೀರ್ಥ ಯತಿರಾಯ || 9 || ಸುವ್ವಿ ಸುವ್ವಿ ಸುವ್ವಾಲೆ
ಈ ಮಹಿಯೊಳಗುಳ್ಳ ತಾಮಸ ಜನರನ್ನು
ಶ್ರೀಮಧ್ವ ಮುನಿಪನ್ನ ಮತದಿಂದ ||
ಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿ
ವಾಮನ ತೀರ್ಥರೆಸೆದರೆ || 10 || ಸುವ್ವಿ ಸುವ್ವಿ ಸುವ್ವಾಲೆ
ಧೀರ ತಾಪಸರಾಗಿ ಗುರುಮಧ್ವಮುನಿಯ
ಚಾರು ಚರಣಂಗಳ ಪಿಡಿದಿದ್ದ ||
ಚಾರು ಚರಣಂಗಳ ಪಿಡಿದಿದ್ದ ಶ್ರೀವಿಷ್ಣು
ತೀರ್ಥರಡಿಗೆ ನಮಿಸುವೆ || 11 || ಸುವ್ವಿ ಸುವ್ವಿ ಸುವ್ವಾಲೆ
ಕಾಮನನೆರೆಅಟ್ಟಿ ಶ್ರೀ ಮಹಾವಿಷ್ಣುವೇ
ಸ್ವಾಮಿ ಎಂಬುದನು ಜಗಕ್ಕೆಲ್ಲ ||
ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ
ರಾಮತೀರ್ಥರೆಸೆದರೆ || 12 || ಸುವ್ವಿ ಸುವ್ವಿ ಸುವ್ವಾಲೆ
ಮನುಮಥನಯ್ಯನ ಘನತೆಯ ತೋರಿಸಿ
ಜನರ ಮೋಹoಗಳ ಬಿಡಿಸಿದ ||
ಜನರ ಮೋಹoಗಳ ಬಿಡಿಸಿದ ಅಧೋಕ್ಷಜ
ಮುನಿಕುಲಾಗ್ರಣಿಗೆ ನಮಿಸುವೆ || 13 || ಸುವ್ವಿ ಸುವ್ವಿ ಸುವ್ವಾಲೆ
ಮಧ್ವಕಿಂಕರರಾದ ಪದ್ಮನಾಭಾರ್ಯರ
ವಿದ್ಯಾವೈಭವಗಳ ಪೊಗಳುವ
ವಿದ್ಯಾವೈಭವಗಳ ಪೊಗಳುವ ಕವಿಯಾರು
ಶುದ್ಧ ಮುನಿಗಳಿಗೆ ಅಳವಲ್ಲ || 14 || ಸುವ್ವಿ ಸುವ್ವಿ ಸುವ್ವಾಲೆ
ಸ್ವದೇವ ಹಯವದನನ ಆವಾಗಲೂ ಪೂಜಿಪ
ಪಾವನ್ನ ಮಧ್ವ ಮುನಿಪನ
ಪಾವನ್ನ ಮಧ್ವ ಮುನಿಪನ ಶಿಷ್ಯರಾದ
ದೇವತಾಂಶಗಳ ಮೊರೆ ಹೊಕ್ಕೆ || 15 || ಸುವ್ವಿ ಸುವ್ವಿ ಸುವ್ವಾಲೆ
ಹಯವದನ
No comments:
Post a Comment