(ಕನ್ನಡದಲ್ಲಿ)
ಈ ಮನುಸ್ಮೃತಿ .pdf ತೆರೆದ ಮೇಲೆ ಮೊದಲ ಎರಡು ಪುಟಗಳ ನಂತರ ಪ್ರಾರಂಭವಾಗುತ್ತದೆ
ಮನುಸ್ಮೃತಿ ಅಥವಾ "ಮನುವಿನ ನಿಯಮಗಳು"; ಮಾನವಧರ್ಮಶಾಸ್ತ್ರ ಎಂದೂ ಪರಿಚಿತವಾಗಿದೆ.[೧] ಹಿಂದೂ ಧರ್ಮದ ಧರ್ಮಶಾಸ್ತ್ರ ಪಠ್ಯ ಸಂಪ್ರದಾಯದ ಅತ್ಯಂತ ಪ್ರಮುಖ ಮತ್ತು ಅತ್ಯಂತ ಮುಂಚಿನ ಛಂದೋಬದ್ಧ ಕೃತಿ. ಮನು ಎಂಬ ಧರ್ಮಶಾಸ್ತ್ರಕಾರ ರಚಿಸಿದ ಈ ಕೃತಿ ಹಿಂದುಗಳ ಆಚಾರ ವಿಚಾರಗಳನ್ನು ನಿರ್ಧರಿಸುತ್ತದೆ. ಪಠ್ಯವು ಮನ್ವಂತರ ಕಾಲದ್ದು. ಮನ್ವಂತರವೆಂದರೆ ಐದು ವರ್ಷಗಳಿಗೊಮ್ಮೆ ಬದಲಾಗುವ ಅಧಿಕೃತ ಕಾನೂನು ಸಚಿವಾಲಯವಾಗಿತ್ತು. ಐದು ವರ್ಷಗಳಿಗೊಮ್ಮೆ ಮನುವಿನ ಸ್ಥಾನ ಬದಲಾಗುತ್ತಿತ್ತು. ಮನುವು, ಅವರಿಗೆ "ಎಲ್ಲ ಸಾಮಾಜಿಕ ವರ್ಗಗಳ ನಿಯಮ" ಹೇಳೆಂದು ಬೇಡಿಕೊಳ್ಳುವ, ಋಷಿಗಳಿಗೆ ಕೊಟ್ಟ ಒಂದು ಪ್ರವಚನದ ರೂಪದಲ್ಲಿದೆ. ಮನುಸ್ಮೃತಿಯು ಅದನ್ನು ಅನುಸರಿಸಿದ ಎಲ್ಲ ಮುಂದಿನ ಧರ್ಮಶಾಸ್ತ್ರಗಳಿಗೆ ಸ್ವೀಕಾರಾರ್ಹ ಮಾನದಂಡವಾಯಿತು.
ಯಾಜ್ಞವಲ್ಕ್ಯ, ನಾರದ, ವಿಷ್ಣು ಇತ್ಯಾದಿ ಹತ್ತಾರು ಸ್ಮೃತಿಗ್ರಂಥಗಳಿದ್ದರೂ ಅವೆಲ್ಲಕ್ಕೂ ಹೆಚ್ಚಿನ ಪ್ರಾಮಾಣ್ಯ ಈ ಸ್ಮೃತಿಗೆ ಪರಂಪರಾಗತವಾಗಿ ಪ್ರಾಪ್ತವಾಗಿದೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ದೀರ್ಘ ಕಾಲಾವಧಿಯುದ್ದಕ್ಕೂ ಮನುಸ್ಮೃತಿ ಭಾರತೀಯ ಸನಾತನಧರ್ಮದ, ಜನಜೀವನದ ಆಚಾರ ವಿಚಾರಗಳ ಹಾಗೂ ಐಹಿಕ ಆಮುಷ್ಮಿಕ ನೆಲೆ ಬೆಲೆಗಳ ನಿಯಾಮಕ ಗ್ರಂಥವೆಂದು ಮನ್ನಣೆ ಪಡೆದಿದೆ. ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿಯೇ ಯದ್ವೈ ಮನು ರವದತ್ ತದ್ ಭೇಷಜಂ ಎಂದರೆ ಮನು ಏನು ಹೇಳಿರುವನೊ ಅದೇ ಪರಮೌಷಧ ಎಂಬ ಭಾವನೆಯಿದ್ದುದನ್ನು ನೋಡುತ್ತೇವೆ. ಬೃಹಸ್ಪತಿ ತನ್ನ ಮನುಸ್ಮೃತಿಯಲ್ಲಿ ಮಹಿಮೆಯನ್ನು ಹೀಗೆ ಕೊಂಡಾಡುತ್ತಾನೆ:
ವೇದಾರ್ಥೋಪನಿಬದ್ಧತ್ವಾತ್ ಪ್ರಾಧಾನ್ಯಂ ಹಿ ಮನೋಃ ಸ್ಮೃತೇಃ | ಮನ್ವರ್ಥವಿಪರೀತಾ ತು ಯಾ ಸ್ಮೃತಿಃ ಸಾ ನ ಶಸ್ಯತೇ ||
ವೇದಾರ್ಥವನ್ನು ಸರಿಯಾಗಿ ಒಳಗೊಂಡಿರುವುದರಿಂದಲೇ ಮನುಸ್ಮೃತಿಗೆ ಪ್ರಾಧಾನ್ಯ. ಇದರ ವಿರುದ್ಧವಾದ ಸ್ಮೃತಿವಾಕ್ಯ ಏನಿದ್ದರೂ ಅದಕ್ಕೆ ಬೆಲೆಯಿಲ್ಲ. ಪೌರಣಿಕರ ಸಂಪ್ರದಾಯದಂತೆ ಸ್ವಾಯಂಭುವ ಬ್ರಹ್ಮನ ಮಾನಸಪುತ್ರ. ಈತನೇ ಧರ್ಮ ಶಾಸ್ತ್ರಸಾರವನ್ನು ಮರೀಚೆ, ಭೃಗು ಮುಂತಾದ ಗುರು ಶಿಷ್ಯಪರಂಪರೆಯಲ್ಲಿ ಪ್ರಚಾರಕ್ಕೆ ತಂದವ. ಈಗ ಉಪಲಬ್ಧವಿರುವ ಸಂಕಲನಕ್ಕೆ ಭೃಗುಸಂಹಿತೆಯೆಂದು ಹೆಸರು. ಕಾಲದಿಂದ ಕಾಲಕ್ಕೆ ಮನುಸ್ಮೃತಿ ರೂಪಾಂತರ ತಳೆಯುತ್ತ ಹೋಗಿರಬೇಕೆಂದು ತೋರುತ್ತದೆ. ಭಾರ್ಗವೀಯ ಮನುಸಂಹಿತೆಯಂತೆ ನಾರದೀಯ ಮನುಸಂಹಿತೆಯೂ ಉಂಟು.
ಇದು ವಿಹಿತ ಧರ್ಮಗಳ ಒಂದು ಸಂಹಿತೆ ಮಾತ್ರವಲ್ಲ. ಪ್ರಾಚೀನ ಸಾಹಿತ್ಯದ ಒಂದು ಶ್ರೇಷ್ಠ ಕೃತಿ ಎನಿಸಿದೆ. ಇದರಲ್ಲಿಯ ಶ್ಲೋಕಗಳು ಅನೇಕ ಮೌಲಿಕ ವಿಚಾರಗಳನ್ನೂ ಉದಾತ್ತ ಸದ್ಗುಣಗಳನ್ನೂ ಧ್ಯೇಯ ಧೋರಣೆಗಳನ್ನೂ ನಿರೂಪಿಸುತ್ತವೆ. ಇದರಲ್ಲಿ ಸುಭಾಷಿತಗಳನ್ನೂ ನೀತಿ ವಾಕ್ಯಗಳನ್ನೂ ಗಮನಿಸದೆ ಹೋದರೆ ಇದರ ಗುಣವಿವೇಚನೆ ಅಪೂರ್ಣವಾದಂತೆ. ಅಂಥ ಕೆಲವು ಉದಾಹರಣೆಗಳು:
ಕೂದಲು ಬೆಳ್ಳಗಾದವ ಹಿರಿಯನಲ್ಲ; ವಯಸ್ಸಿನಿಂದ ಹಿರಿಯನಾದರೂ ಬಹುಶ್ರುತನಾದವನನ್ನು ದೇವತೆಗಳು ಗೌರವಿಸುತ್ತಾರೆ. ನೋವಾಗದ ರೀತಿಯಲ್ಲಿ ಜನತೆಗೆ ಹಿತವನ್ನು ಬೋಧಿಸಬೇಕು. ಪುಣ್ಯವನ್ನು ಬಯಸುವವ ಸವಿಯಾದ ನುಡಿಗಳನ್ನು ಆಡಬೇಕು: ಅವಮಾನಹೊಂದಿದವ ಸುಖವಾಗಿ ಮಲಗಿ ಸುಖವಾಗಿಯೇ ಎದ್ದು ಲೋಕದಲ್ಲಿ ಸಂಚರಿಸಬಹುದು. ಅವಮಾನಪಡಿಸಿದವ ಮಾತ್ರ ಹಾಳಾಗುತ್ತಾನೆ. ತೃಪ್ತಿಯೇ ಸುಖದ ಮೂಲ, ಅದರ ಅಭಾವವೇ ದುಃಖ, ಸ್ವಾವಲಂಬವೇ ಸುಖ. ಕಷ್ಟಸಾಧ್ಯ ಎನಿಸಿದರೂ ಅಂತರಾತ್ಮ ಮೆಚ್ಚುವುದನ್ನೇ ಮಾಡಬೇಕು. ಎಲ್ಲ ಶುದ್ಧಿಗಿಂತ ಆರ್ಥಿಕ ಶುದ್ಧಿ ಮುಖ್ಯ : ಅವನೇ ನಿರ್ಮಾಲ, ನೀರು ಮೊದಲಾದವುಗಳಿಂದ ತೊಳೆದು ಕೊಂಡವನಲ್ಲ. ಧರ್ಮವೊಂದೇ ಮರಣದ ಅನಂತರ ಬರುವ ಜೊತೆಗಾರ. ಉಳಿದವೆಲ್ಲ ದೇಹದೊಂದಿಗೆ ಮಣ್ಣಾಗುವುವು. ಮನುಷ್ಯನಿಗೆ ಆತ್ಮವೇ ಸಾಕ್ಷಿ. ಅಂಥ ಆತ್ಮವನ್ನು ಕಡೆಗಣಿಸಬಾರದು.
ಮನುವಿನ ಧರ್ಮಶಾಸ್ತ್ರದಲ್ಲಿ ಪ್ರತಿಪಾದಿತವಾಗಿರುವ ಧರ್ಮ ಶಾಶ್ವತ ಸುಖದತ್ತ ಕರೆದೊಯ್ಯುವ ಹಿರಿಯಾಸೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಮನುಸ್ಮೃತಿ ಬೈಬಲಿಗಿಂತ ಹಿರಿದಾದುದು ಎಂದು ತತ್ವ್ವಶಾಸ್ತ್ರಜ್ಞ ನೀಚೆ ಹೇಳಿದರೆ ಕೀತ್ ಹೀಗೆ ಹೇಳುತ್ತಾನೆ: ಮನುಸ್ಮೃತಿ ಒಂದು ಧರ್ಮಶಾಸ್ತ್ರವೆಂಬ ದೃಷ್ಟಿಯಿಂದ ಮಾತ್ರ ಮಹತ್ತ್ವ ಪಡೆದಿಲ್ಲ. ಜೀವನದ ಒಂದು ತತ್ತ್ವಜ್ಞಾನವನ್ನು ಅಭಿವ್ಯಕ್ತಗೊಳಿಸಿದೆ ಎಂಬ ದೃಷ್ಟಿಯಿಂದ ಅದಕ್ಕೆ ಮಹತ್ತ್ವ ಬಂದಿದೆ. ಮನುಸ್ಮೃತಿಯಲ್ಲಿ ಜನತೆಯ ಜೀವಾಳವನ್ನೇ ಕಾಣುತ್ತೇವೆ. ಬೃಹಸ್ಪತಿ ತನ್ನ ಸ್ಮೃತಿಯಲ್ಲಿ ಹೀಗೆ ಹೇಳಿದ್ದಾನೆ: ಧರ್ಮಾರ್ಥ ಬೋಧಕನಾದ ಮನು ಪ್ರವೇಶ ಮಾಡುವತನಕ ಮಾತ್ರ ಉಳಿದ ಶಾಸ್ತ್ರಗಳು ಮೆರೆದಾಡಬಹುದು.
ಈಗಿನ ಮನುಸ್ಮೃತಿಯಲ್ಲಿ ಅಧ್ಯಾಯಗಳು ಒಟ್ಟು 2,694 ಶ್ಲೋಕಗಳೂ ಇವೆ. ಮನು ನಿರೂಪಿಸಿರುವ ವಿಷಯಗಳ ವ್ಯಾಪ್ತಿ ಹೀಗಿದೆ:
1. ಬ್ರಹ್ಮನ ಉತ್ಪತ್ತಿ ಮತ್ತು ಪ್ರಪಂಚ ಸೃಷ್ಟಿಯ ವಿಚಾರ, ಚಾತುರ್ವಣ್ಯಗಳ ಉತ್ಪತ್ತಿ, ಮನ್ವಂತರಗಳು, ಚತುರ್ಯುಗಗಳು, ಆಯಃಪ್ರಮಾಣ, ಚಾತುರ್ವಣ್ಯಗಳ ವಿಹಿತ ಕರ್ಮಗಳು.
2. ಧರ್ಮದ ಸಾಮಾನ್ಯ ಲಕ್ಷಣವನ್ನು ಮನು ನಾಲ್ಕು ರೀತಿಯಲ್ಲಿ ವಿವರಿಸಿದ್ದಾನೆ:
ವೇದಃಸ್ಮೃತಿ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ
ಏತಚ್ಚತುರ್ವಿಧಂ ಪ್ರಾಹುಃ ಸಾಕ್ಷಾದ್ಧರ್ಮಸ್ಯ ಲಕ್ಷಣಂ
ಎಂದರೆ ವೇದ, ಸ್ಮೃತಿ, ಸಜ್ಜನರ ಆಚರಣೆ, ತನ್ನ ಆತ್ಮಸಂತೋಷ ಈ ನಾಲ್ಕು ಧರ್ಮದ (ಸ್ವರೂಪದ) ಲಕ್ಷಣಗಳು. ಭಾರತ ದೇಶವೇ ಧರ್ಮಭೂಮಿ. ಧಮಾಚರಣೆಯ ಪಾಠವನ್ನು ಈ ದೇಶದ ಜನರಿಂದಲೇ ಪ್ರಪಂಚದ ಎಲ್ಲ ಮಾನವರೂ ಕಲಿಯುವಂತಿರುತ್ತದೆ.
ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಂ ಸರ್ವಮಾನವಾಃ
ಗರ್ಭಾದಾನ ಇತ್ಯಾದಿ 16 ಸಂಸ್ಕಾರಗಳು, ವೇದಾಧ್ಯಯನ ವಿಧಿ, ಪ್ರಣವ ಪ್ರಶಂಸೆ, ಆಚಾರ್ಯ, ಉಪಾಧ್ಯಾಯ, ಗುರುಗಳ ಪ್ರಶಂಸೆ, ವಾಣಿಯ ಪ್ರಶಂಸೆ, ಗುರು ಶುಶ್ರೂಷೆ, ಮಾತಾಪಿತೃ ಸೇವೆ ಇತ್ಯಾದಿಗಳ ಪ್ರಶಂಸೆ.
3. ಗೃಹಸ್ಥಾಶ್ರಮ ಪ್ರಶಂಸೆ, ಕನ್ಯಾ ಲಕ್ಷಣ ಪ್ರಶಂಸೆ, ಸವರ್ಣ ಸ್ತ್ರೀ ಪ್ರಶಂಸೆ, ವಿವಾಹ ಪ್ರಶಂಸೆ, ಎಂಟು ಬಗೆಯ ವಿವಾಹವಿಧಿಗಳು, ಕನ್ಯಾವಿಕ್ರಯದೋಷ, ಸಾಲಂಕೃತ ಕನ್ಯಾದಾನ, ಪಂಚಮಹಾ ಯಜ್ಞಗಳು, ನಿತ್ಯಶ್ರಾದ್ಧ ಇತ್ಯಾದಿಗಳ ವಿವರಣೆ.
4. ಜೀವನೋಪಾಯಗಳು, ಸಂತೋಷ ಪ್ರಶಂಸೆ, ಸೋಮಾದಿಯಾಗಗಳು, ಸ್ವಾಧ್ಯಾಯ, ಅನಧ್ಯಾಯ, ಆತ್ಮಗೌರವ, ಸದಾಚಾರಗಳ ಪ್ರಶಂಸೆ, ಪರಾಧೀನ ಸೇವೆಯ ನಿಂದೆ, ಸುಖದುಃಖಗಳ ವಿವೇಚನೆ, ಅನ್ನದಾನ ಪ್ರಶಂಸೆ ಇತ್ಯಾದಿ.
ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಂ
ಇನ್ನೊಬ್ಬರ ಅಧೀನವಾಗಿರುವುದೇ ದುಃಖ, ಸ್ವಾತಂತ್ರ್ಯವೇ ಸುಖ. ಅಧರ್ಮ, ಹಿಂಸೆ, ಅನ್ಯಾಯದಿಂದ ದುಡ್ಡು ಮಾಡಿದವ ಎಂದೂ ಸುಖವಾಗಿ ಬಾಳಲಾರ ಎಂಬುದು ಮನುವಿನ ಸಿದ್ಧಾಂತ.
ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಂ
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖ ಮೇಧತೇ
5. ಮಾಂಸದಲ್ಲಿ ಭಕ್ಷ ಅಭಕ್ಷ್ಯಗಳು : ಸಪಿಂಡರ ವಿಚಾರ, ಆಶೌಚ ನಿರ್ಣಯ, ಸ್ತ್ರೀ ಧರ್ಮಗಳು.
6. ವಾನಪ್ರಸ್ಥಾಶ್ರಮದ ನಿಯಮಗಳು, ಫಲಮೂಲಗಳ ಆಹಾರ, ಪಂಚಯಜ್ಞಗಳು, ಅತಿಥಿಚರ್ಯೆ, ಸಂನ್ಯಾಸಿಯ ಧರ್ಮಗಳು, ಧ್ಯಾನಯೋಗ, ಮೋಕ್ಷಸಾಧಕ ಕರ್ಮಗಳು ಇತ್ಯಾದಿಗಳ ವಿವರಣೆ.
7. ರಾಜಧರ್ಮ, ರಾಜಪ್ರಶಂಸೆ, ದಂಡನೀತಿ ಪ್ರಶಂಸೆ, ರಾಜಕೃತ್ಯಗಳು, ಸಚಿವ, ದೂತ, ಸೇನಾಪತಿ, ಪುರೋಹಿತರ ವಿವೇಚನೆ, ದುರ್ಗರಕ್ಷಣೆ, ಕರಗ್ರಹಣ, ಸಂಧಿ ವಿಗ್ರಹಾದಿ ಕರ್ತವ್ಯ, ಮಿತ್ರರ ಗುಣಗಳು ಇತ್ಯಾದಿಗಳ ವಿವರಣೆ.
8. ವ್ಯವಹಾರಗಳು, 18 ರೀತಿಯ ವಿವಾದಗಳು. ಸಾಕ್ಷಿಗಳು, ಸತ್ಯಪ್ರಶಂಸೆ, ಅಸತ್ಯದಪಾಪ, ಶಪಥ, ಗಡಿ ವ್ಯಾಜ್ಯಗಳು, ವಾಕ್ಪಾರುಷ್ಯಕ್ಕೆ ದಂಡ, ವಿಕ್ರೇಯ ವಸ್ತುಗಳ ವ್ಯವಹಾರ, 17 ಪ್ರಕಾರದ ದಾಸರು, ಆಯವ್ಯಯ ವಿವೇಚನೆ.
9. ಸ್ತ್ರೀರಕ್ಷಣೆ, ಸ್ತ್ರೀ ಸ್ವಭಾವ, ಸ್ತ್ರೀ ಧರ್ಮ, ದಾಯಭಾಗ, ಸ್ತ್ರೀಧನ, ಆಸ್ತಿಹಂಚಿಕೆ, ವಿವಿಧ ಅಪರಾಧಗಳಿಗೆ ದಂಡನೆ, ಬ್ರಹ್ಮ ಕ್ಷೇತ್ರಗಳ ಪರಸ್ಪರ ಸಹಕಾರದ ಅಗತ್ಯ ಇತ್ಯಾದಿಗಳ ವಿವರಣೆ.
10. ವರ್ಣಸಂಕರ, ವ್ರಾತ್ಯ, ದಸ್ತು, ಚಂಡಾಲ, ತ್ರೈ ವರ್ಣಿಕರ ಕರ್ತವ್ಯಗಳು, ಆಪದ್ಧರ್ಮ, ಪರಧರ್ಮದಿಂದ ಜೀವಿಕೆ ಮಾಡುವುದಕ್ಕೆ ನಿಷೇಧ, ಧನಾರ್ಜನೆಯ ಏಳು ಪ್ರಕಾರಗಳು, ಹತ್ತು ಜೀವನವೃತ್ತಿಗಳು ಇತ್ಯಾದಿ.
11. ಸ್ನಾತಕರ ಪ್ರಕಾರಗಳು. ಸೋಮಯಾಗಕ್ಕೆ ಅಧಿಕಾರಿ, ದೇವಬ್ರಾಹ್ಮಣರ ವಿತ್ತಾಪಹಾರಕ್ಕೆ ಪ್ರಾಯಶ್ಚಿತ್ತ, ಪಂಚಮಹಾಪಾತಕಗಳು, ಸುರಾಪಾನಕ್ಕೆ ಪ್ರಾಯಶ್ಚಿತ್ತ, ಪ್ರಾಜಾಪತ್ಯಾದಿ ವ್ರತಗಳು ಇತ್ಯಾದಿ.
12. ಶುಭಾಶುಭ ಕರ್ಮಗಳಿಗೆ ಫಲಗಳು. ತ್ರಿವಿಧ ಮಾನಸ ಕರ್ಮಗಳು. ಚತುರ್ವಿಧ ವಾಚಿಕ ಕರ್ಮಗಳು. ತ್ರಿವಿಧ ಶಾರೀರಿಕ ಕರ್ಮಗಳು ಕ್ಷೇತ್ರಜ್ಞ, ಜೀವಾತ್ಮ, ತ್ರಿಗುಣಲಕ್ಷಣ, ಮೋಕ್ಷಪ್ರಾಪ್ತಿ,
ಮನ್ವಂತರದ ಪರಿಕಲ್ಪನೆಗೂ, ದೇಶದ ರಾಜಕೀಯ ವ್ಯವಸ್ಥೆಗೂ ಸಂಬಂಧವಿದೆ. ಒಂದು ನಿರ್ಧಿಷ್ಟ ಅವಧಿಯವರೆವಿಗೂ ಒಂದು ನಿಯೋಗದ ಕೈಯಲ್ಲಿ ಪ್ರಭುತ್ವ ಇರುತ್ತದೆ. ಈ ನಿಯೋಗದ ಅಧಿಕಾರಿ ಮನು. ಇವರೊಂದಿಗೆ ಸಪ್ತರ್ಷಿಗಳು ,ಸ್ವರ್ಗಲೋಕದ ಅಧಿಪತಿ ಇಂದ್ರ ಇರುತ್ತಾನೆಂದು ನಂಬುತ್ತಾರೆ. ಈ ಅವಧಿಯ ಹೆಸರೇ ಮನ್ವಂತರ ಯುಗ. ಒಬ್ಬ ಮನುವಿನ ಅವಧಿ ಮುಗಿದ ಬಳಿಕ ಮತ್ತೊಬ್ಬ ಮನು ಅಧಿಕಾರಕ್ಕೆ ಬರುತ್ತಾನೆ. ಹೀಗೆ ಹದಿನಾಲ್ಕು ಮನ್ವಂತರಗಳಿಗೆ ಒಂದು ಕಾಲ ಚಕ್ರ ಮುಗಿಯುತ್ತದೆ.
ಸ್ವಾಯಂಭುವ ಮನು -ಧರ್ಮಸೂತ್ರದ ಕರ್ತೃ
ಸ್ವಾರೋಚಿತ ಮನು
ಔತ್ತಮಿ ಮನು
ರೈವತ ಮನು
ವೈವಸ್ವತ ಮನು
ಚಾಕ್ಷುಷ ಮನು
ಸುಮತಿ ಭಾರ್ಗವ ಇವನೇ 'ಮನುಸ್ಮೃತಿ'ಯ ಕರ್ತೃ.
ಮನುಸ್ಮೃತಿ (ಅಥವಾ ಮನುವಿನ ನಿಯಮಗಳು) ಹಿಂದೂ ಧರ್ಮದ "ಧರ್ಮಶಾಸ್ತ್ರ" ಸಾಹಿತ್ಯದ ಒಂದು ಭಾಗವಾಗಿದೆ. ಇದನ್ನು ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ನಡುವೆ ಸಂಸ್ಕೃತದಲ್ಲಿ ಬರೆಯಲಾಗಿದೆ. ಇದು ಕರ್ತವ್ಯಗಳು, ಕಾನೂನುಗಳು, ಮತ್ತು ನಡವಳಿಕೆಗಳ ಕುರಿತು ಮನುವು ನೀಡಿದ ಉಪದೇಶವಾಗಿ ಪ್ರಸ್ತುತಪಡಿಸುತ್ತದೆ. ಈ ಪಠ್ಯವು ಧರ್ಮ, ಅರ್ಥಶಾಸ್ತ್ರ, ಮತ್ತು ರಾಜನೀತಿಗಳ ಬಗ್ಗೆ ಚರ್ಚಿಸುತ್ತದೆ. ಇತಿಹಾಸದಲ್ಲಿ, ಮನುಸ್ಮೃತಿಯು ಭಾರತೀಯ ಸಮಾಜದ ಮೇಲೆ ಗಣನೀಯ ಪ್ರಭಾವ ಬೀರಿದೆ, ಆದರೆ ಜಾತಿವಾದ, ಲಿಂಗ ತಾರತಮ್ಯ, ಮತ್ತು ಅಸ್ಪೃಶ್ಯತೆ ಮುಂತಾದ ವಿವಾದಾತ್ಮಕ ವಿಷಯಗಳನ್ನು ಒಳಗೊಂಡಿರುವುದರಿಂದ ಇದು ವಿಮರ್ಶೆಗೆ ಒಳಗಾಗಿದೆ.
ಸರ್ವೇ ಜನಾ ಸುಖಿನೋ ಭವಂತು

No comments:
Post a Comment