ಮುಡುದೋಷ - ರಗಡಮಲ್ಲ
ಗೋವಿಂದಪುರದಿಂದ ದೇವರ ಕಟ್ಟೆಯ ಕಡೆಗೆ ಬರುವ ಎತ್ತಿನ ಗಾಡಿಯ ದಾರಿಯಲ್ಲಿ ರಗಡಮಲ್ಲನ ಭೂತಾಳ ಸಿದ್ಧನ ಅಸ್ತಿತ್ವವಿರುವ ಕಡಿದಾದ ಒತ್ತಿನಿಂದ ಎರಡಾಳು ದೂರದಲ್ಲಿ ಎಡಗಡೆಗೆ ಬಹಳ ಹಳೆಯದಾದ ಅಂಕುಡೊಂಕಾದ ಪೊಳ್ಳಾಗಿರುವ ದೊಡ್ಡ ಬೊಡ್ಡೆಯ ಹುಣಸೆ ಮರ ಒಂದಿತ್ತು. ಸುತ್ತಮುತ್ತಲಿನ ಜನ ಆ ಮರಕ್ಕೆ "ಘಾಳೀಗಿಡ". ಭೂತದ ಮರವೆಂದೇ ಕರೆಯುತ್ತಿದ್ದರು. ಶನಿವಾರ ಮತ್ತು ಅಮಾವಾಸ್ಯೆಯ ದಿವಸ ಮುಟ್ಟು ದೋಷದಿಂದ ಬಳಲುತ್ತಿರುವ ಮಕ್ಕಳನ್ನು ಹೊತ್ತ ತಾಯಂದಿರು ಮಾತ್ರ ಕಾಣುತ್ತಿದ್ದರು, ಹೊರತಾಗಿ ಆಗ ಗಿईಡದ ಕಡೆಗೆ ಯಾರೂ ಎಂದೂ ಹೋಗುತ್ತಿರಲಿಲ್ಲ.
ತಾಮ್ರದ ಬಿಂದಿಗೆಯಲ್ಲಿ ಭೀಮಾನದಿಯ ನೀರು ತೆಗೆದುಕೊಂಡು ಬಂದು ಅದರಲ್ಲಿ ಗೋಮೂತ್ರಹಾಕಿಟ್ಟು, ನದಿಯಲ್ಲಿ ಮುಳುಗು ಹಾಕಿದ ಕೂಸನ್ನು ಆ ಹುಣಸೆ ಗಿಡದ ಅಂಕುಡೊಂಕಾದ ಪೊಳ್ಳಾಗಿರುವ ಬೊಡ್ಡೆಗಳ ನಡುವೆ ಬೆತ್ತಲೆಯಾಗಿ ಕೂಡಿಸಿ ಬಿಂದಿಗೆಯಲ್ಲಿಯ ನೀರಿನಿಂದ ಚೆನ್ನಾಗಿ ಎರೆದು, ಗಿಡದ ಕೆಳಗಿರುವ ಒದ್ದೆಯಾದ ಮಣ್ಣನ್ನೆ ಮಗುವಿನ ಕೈ,ಕಾಲು, ಹೊಟ್ಟೆ ಬೆನ್ನು ಮುಖ ಎಲ್ಲಕಡೆ ಹಚ್ಚಿ ಸ್ವಲ್ಪ ನೀರು ತಲೆಯಮೇಲೆ ಹಾಕಿ ಮರಕ್ಕೂ, ರಗಡಮಲ್ಲನಿಗೂ ಕೃತಜ್ಞತೆಯಿಂದ ಪೂಜಿಸಿ ಮಗುವನ್ನು ಅಡ್ಡಹಾಕಿ ತಾವು ತಂದ ನೈವೇದ್ಯ ತೋರಿಸಿ, ಕೂಸಿಗೂ ತಿನ್ನಿಸಿ ತಾವೂ ಸವಿದು ಹಿಂತಿರುಗಿ ನೋಡಿದೆ ಮನೆ ಮುಟ್ಟುವ ರೂಢಿ, ಈ ರೀತಿ ಮೂರು ಸಲ ಮುರಡಸಿಂಗಿ ಅಂತಿರುವ ಹುಣಸೇ ಮರದ ಉಪಚಾರ ಪಡೆದ ಮಕ್ಕಳ ಮುಡುದೋಷ, ರಿಕೆಟ್ಸ್ ( Rickatts), ಸ್ಕರ್ವೀ ( Scurvy ), ಬಾಲಗ್ರಹ ರೋಗ ನಿವಾರಣೆ ಆಗುತ್ತಿತ್ತೆಂದು ಅನುಭವದ ಹಿರಿಯರ ಮಾತುಗಳಿವೆ.
ಒಂದು ಕಾಲದಲ್ಲಿ ಆ ಹುಣಸೆ ಮರದಲ್ಲಿ ದುಷ್ಟ ಶಕ್ತಿಗಳ ವಾಸವಿದ್ದು ದಾರಿ ಹೋಕರಿಗೆ ಅದರಲ್ಲೂ ಚಿಕ್ಕ ಮಕ್ಕಳಿಗೆ, ಹೆಣ್ಣು ಮಕ್ಕಳಿಗೆ ಭಯ, ಶಾರೀರಿಕ, ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದ ಘಟನೆ ಅನುಭವಕ್ಕೆ ಬಂದಾಗ, ಜನರು ಪರಿಸರವನ್ನು ಕಾಪಾಡುವ ಕ್ಷೇತ್ರ ಪಾಲನನ್ನು ಮೊರೆಹೊಕ್ಕರು. ಮರವನ್ನೆ ಮೂಲ ಸಹಿತ ಕಿತ್ತೆಸೆದು ಭೂತಗಳನ್ನು, ರಾಕ್ಷಸರನ್ನು ಹೊಡೆದೋಡಿಸುವ ವಿಚಾರದಿಂದ ರಗಡಮಲ್ಲನು ಬುಡದಿಂದ ಕಿತ್ತಲುನೋಡಿದ ಆಗಲಿಲ್ಲ ತನ್ನೆಲ್ಲ ಮಲ್ಲ ಶಕ್ತಿ ಉಪಯೋಗಿಸಿ ಬೊಡ್ಡೆಯನ್ನೆ ಹಿಡಿದು ತಿರುವಿ,ತಿರುವಿ ತಿರುಗಿಸಿ ಕೀಳಲು ನೋಡಿದ ಆಗಲೇ ಇಲ್ಲ. ಒಬ್ಬ ದೊಡ್ಡ ಸನ್ಯಾಸಿ ಬಂದು ಭೂತಾಳ ಸಿದ್ಧನನ್ನು ತಡೆದು, ನಿನ್ನ ಭೀಮ ಶಕ್ತಿಯಿಂದ ಮುಭ್ಭಾಗವಾದ ಮುರಡಶಿಂಗಿಯಂತಾದ ಈ ಗಿಡದ ಬೊಡ್ಡೆ, ಗಿಡ, ಗಿಡದಲ್ಲಿರುವ ದುಷ್ಟ ಹೇತುಗಳು ಯಾರಿಗೂ ಏನೂ ಪ್ರತಿಕೂಲ ಮಾಡದೆ ಅನುಕೂಲಕ್ಕೆ ತಕ್ಕಂತೆ ವರ್ತಿಸುವಲ್ಲಿ ಈ ಊರ ಪ್ರಳಯಾಂತಕ ಗ್ರಾಮದೇವತೆ ಅಂಕಿತದಲ್ಲಿ ಇಟ್ಟಿದ್ದಾನೆ. ಆತಂಕ ಬೇಡ,
ಈ ಮುರಡಶಿಂಗಿಯಂತಾದ ಮರದ ಬೊಡ್ಡೆಯ ಒಳಗಿನಿಂದ ಐದು ಸಲ ಹಾಯಿಸುತ್ತಾ, ಬಿಸಿಲಿನಿಂದ ಕಾಯ್ದ ನೀರು ಮತ್ತು ಗೋಮೂತ್ರದಿಂದ ಸ್ನಾನ ಮಾಡಿಸುತ್ತಲಿದ್ದರೇ ಮಕ್ಕಳ ಮುಟ್ಟು ದೋಷ ಮತ್ತು ಹೆಣ್ಣು ಮಕ್ಕಳ ಮುಟ್ಟಿನ ನಿವಾರಣೆಯಾಗುತ್ತದೆ, ಎಂದು ಹೇಳಿ ಆ ಆಗಂತುಕ ಸನ್ಯಾಸಿ ಮರೆಯಾದನಂತೆ. ಇದು ಪರಿಸರದ ಜನಪದದಲ್ಲಿ ಆಳವಾಗಿ ನಂಬಿದ, ಅನುಭವಿಸಿ ಗುಣಮುಖರಾದ ಜನರ ಹೇಳಿಕೆಯಂತೆ ಬರೆಯಲಾಗಿದೆ.
ವಿಚಿತ್ರ ಅವಸ್ಥೆಯಲ್ಲಿದ್ದ ಮರವನ್ನು, ಅದರಿಂದಾದ ಅನುಕೂಲಗಳನ್ನೂ ನೋಡಿದವರೂ ಅನುಭವಿಸಿದವರು ಈಗಲೂ ಇದ್ದಾರೆ, ಆದರೆ ಭೀಮಾನದಿಯ ನೀರಿನ ಒತ್ತಡದಿಂದಲೋ, ಮರಗಳ ಆಯುಷ್ಯ ಪ್ರಮಾಣದ ಅವಸಾನದಿಂದಲೋ ಆ ಅಲೌಕಿಕ ಮರ ಈಗಿಲ್ಲ, ಅದು ಈಗಿನವರ ನಮ್ಮ ಗ್ರಹಚಾರ.
ಸಸ್ಯಗಳಿಗೂ ಅಲೌಕಿಕ ಶಕ್ತಿಗಳಿವೆ, ಅರಿತಾಗ ಮಾತ್ರ " ಸರ್ವೇ ಜನಾ ಸುಖಿನೋ ಭವಂತು " ಎಂದು ಹೇಳುವ ಅಧಿಕಾರವೂ ಸಸ್ಯಗಳಿಗೆ ಮಾತ್ರ

No comments:
Post a Comment