ಹೊಸಗಣ್ಣು ಎನಗೆ ಹಚ್ಚಲಿಬೇಕು
ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ಪ ||
ಘಸಣಿಯಾಗುವೆ ಭವ ವಿಷಯ ವಾರುಧಿಯೊಳು | ಶಶಿಮುಖಿಯೆ ಕರುಣದಿ ಕಾಯೆ || ಅ.ಪ ||
ಪರರ ಅನ್ನವನುಂಡು ಪರರ ಧನವ ಕೊಂಡು | ಪರಿ ಪರಿಯ ಕ್ಲೇಶಗಳನುಂಡು | ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ ||ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ೧ ||
ಮಂದಹಾಸಿನಿ ಭವಸಿಂಧುವಿನೊಳಗಿಟ್ಟು | ಚಂದವೇ ಎನ್ನ ನೋಡುವುದು | ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ | ಮಂದರಧರನ ತೋರಮ್ಮ || ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ೨ ||
ಅಂದಚಂದಗಳೊಲ್ಲೆ ಬಂಧುಬಳಗ ಒಲ್ಲೆ | ಬಂಧನಕೆಲ್ಲ ಕಾರಣವು | ಇಂದಿರೇಶನ ಪಾದ ದ್ವಂದ್ವವ ತೋರಿ |ಹೃನ್ಮಂದಿರದೊಳು ಬಂದು ಬೇಗ. || ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬ | ವಸುದೇವ ಸುತನ ಕಾಂಬುದಕೆ || ೩ ||
.....ಇಂದಿರೇಶ

No comments:
Post a Comment