Friday, October 05, 2018

CHAATURMAASYA VRATA ( ಚಾತುರ್ಮಾಸ್ಯ ವ್ರತ )

                                                                                                                                        ಸಂಗ್ರಹಿತ 

ಚಾತುರ್ಮಾಸ್ಯ ವ್ರತ- ಆಹಾರ ಕ್ರಮ 
ಯತಿಗಳ ಸಾಧು ಸಂತರ 4 ತಿಂಗಳ ಹಬ್ಬ
 ಭಾರತೀಯ ಸಂಸ್ಕೃತಿಯ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯ. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ತನಕ ಈ ವ್ರತವನ್ನು ಆಚರಿಸುತ್ತಾರೆ.
ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು ಚಾತುರ್ಮಾಸ್ಯವ್ರತದ ಸಂಕಲ್ಪ ಮಾಡುತ್ತಾರೆ.
ಅಂದು ವೇದವ್ಯಾಸ ಮುನಿಗಳನ್ನು ಆರಾಧಿಸಿ ಪೀಠಾಧಿಪತಿ, ಯತಿಗಳು, ಸಾಧು-ಸನ್ಯಾಸಿಗಳು, ಬ್ರಹ್ಮಚಾರಿಗಳು ಈ ವ್ರತವನ್ನು ಪ್ರಾರಂಭಿಸುತ್ತಾರೆ. ಚಾತುರ್ಮಾಸ್ಯ, ನಾಲ್ಕು ತಿಂಗಳ ವ್ರತ
ಚಾತುರ್ಮಾಸ್ಯದ ಹಿನ್ನೆಲೆ
ಸಾಧು, ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಅಂದರೆ ಒಂದೇ ಊರಿನಲ್ಲಿ ಮೂರು ದಿನಕ್ಕಿಂತ ಹೆಚ್ಚು ಕಾಲ ವಾಸವಾಗಿರಬಾರದು ಎಂಬ ನಿಯಮವಿದೆ. ಕಾರಣ ಹೆಚ್ಚು ದಿನ ಅಲ್ಲಿ ವಾಸವಾಗಿದ್ದರೆ ಅಲ್ಲಿನ ಜನರ ಮೇಲೆ ಮೋಹ ಬೆಳೆದು ಅದೇ ಜಾಗದಲ್ಲಿ ಇರುವ ಆಸೆ ಬರುವುದು ಎಂದು. ಆದ್ದರಿಂದ ಸನ್ಯಾಸಿಗಳು ಯಾವಾಗಲೂ ಸಂಚಾರದಲ್ಲಿರಬೇಕು.
ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕು. ಚಾತುರ್ಮಾಸ್ಯದಲ್ಲಿ ಅಹಿಂಸಾ ತತ್ವವು ಪ್ರಧಾನ.
ಮಳೆಗಾಲದಲ್ಲಿ ಭೂಮಿ ಕೆಸರಾಗಿ ಕ್ರಿಮಿ ಕೀಟ, ಹುಳ, ಹುಪ್ಪಟೆ, ಹಾವು ಹುಟ್ಟಿಕೊಳ್ಳುತ್ತವೆ.
ಆ ಸಮಯದಲ್ಲಿ ಸನ್ಯಾಸಿಗಳು ಸಂಚರಿಸಿದರೆ ಅವುಗಳಿಗೆ ಹಿಂಸೆ ಮಾಡಿದ ಹಾಗೆ ಆಗುವುದು ಹಾಗೂ ಆ ಸಮಯದಲ್ಲಿ ಮಳೆ ಗಾಳಿ ಹೆಚ್ಚು ಇರುವುದರಿಂದ ಸಂಚರಿಸುವುದು ಕಷ್ಟ ಎನ್ನುವ ಕಾರಣಕ್ಕೆ ಒಂದೇ ಸ್ಥಳದಲ್ಲಿ ವಾಸ್ತವ್ಯ ಹೂಡುವುದು ಕೂಡ ಚಾತುರ್ಮಾಸ್ಯದ ಉದ್ದೇಶ.
ಆಗ ಸಾಧುಗಳು ಮಠ, ಆಶ್ರಮ, ಮಂದಿರಗಳಲ್ಲಿ ಇದ್ದು, ಅಧ್ಯಾತ್ಮ ಸಾಧನೆ ಮಾಡಿ ಸ್ವಾತ್ಮಧ್ಯಾನ, ಪಾರಾಯಣ ಮಾಡಿ ಬಂದ ಭಕ್ತರಿಗೆ ಪ್ರವಚನ ನೀಡಬೇಕು.
ಇನ್ನೊಂದು ಕಾರಣ ಮಹಾವಿಷ್ಣು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಥಾನ ದ್ವಾದಶಿಯವರಿಗೆ ಅಂತರ್ಮುಖಿಯಾಗಿ ದಿವ್ಯ ನಿದ್ರೆಯಲ್ಲಿ ಮಗ್ನನಾಗಿರುತ್ತಾನೆ.
ಆ ಸಮಯದಲ್ಲಿ ಯತಿಗಳು ಅಂತರ್ಮುಖಿಯಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯಬೇಕು. ಆದ್ದರಿಂದ ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲು ಸಾಧ್ಯ. ಅಂತಃಕರಣ ಶುದ್ಧಿಗಾಗಿ ಸುಖ, ಭೋಗಗಳನ್ನು ತ್ಯಜಿಸಿ ವೈರಾಗ್ಯದ ಮೂಲಕ ಭಗವದ್ಭಕ್ತಿ ಹೊಂದಿ ಜ್ಞಾನ ಗಳಿಸುವುದು ಹಾಗೂ ಸತ್ಕರ್ಮವನ್ನು ಮಾಡುವುದೇ ಚಾತುರ್ಮಾಸ್ಯದ ಗುರಿಯಾಗಿದೆ.
ಮೊದಲ ತಿಂಗಳ ಆಹಾರ ಕ್ರಮ
ಮೊದಲ ತಿಂಗಳ ಆಹಾರ ಕ್ರಮವನ್ನು ಶಾಕವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ತರಕಾರಿ, ಹಣ್ಣುಗಳನ್ನು ಬಳಸುವುದಿಲ್ಲ. ಪೊನ್ನಂಗಣೆ ಸೊಪ್ಪು, ತಿಮರೆ ಸೊಪ್ಪು, ಮಾವಿನಕಾಯಿ, ಪಾಪಡ್ಕ ಕಾಯಿಯನ್ನು ಬಳಸುತ್ತಾರೆ. ಹುಣಿಸೆಹುಳಿ ಬದಲು ಮಾವಿನಕಾಯಿಯನ್ನು, ಹಸಿ ಮೆಣಸು, ಒಣ ಮೆಣಸಿನ ಬದಲು ಕಾಳು ಮೆಣಸು ಬಳಸುತ್ತಾರೆ.
ಉದ್ದು, ಹೆಸರು ಬೇಳೆ ಹೊರತುಪಡಿಸಿ ಇನ್ನಾವುದೇ ಬೇಳೆಯನ್ನು ಬಳಸುವುದಿಲ್ಲ. ಒಟ್ಟಿನಲ್ಲಿ ಬೇರು (ಭೂಮಿಯಡಿ ಬೆಳೆಯುವಂಥದ್ದು), ಕಾಂಡ (ತರಕಾರಿಗಳು), ಪತ್ರ (ಪತ್ರೊಡೆಯಂತಹ ಖಾದ್ಯ ತಯಾರಿ ಎಲೆಗಳು), ಪುಷ್ಪ (ಗುಂಬಳ, ದಾಸವಾಳದಂತಹ ಹೂವು), ಹಣ್ಣುಗಳನ್ನು ಬಳಸುವುದಿಲ್ಲ.  
ಹೆಸರು ಬೇಳೆಯ ಕಾಳುಮೆಣಸು ಹಾಕಿದ ಸಾರು, ಸಾಂಬಾರು, ಪಲ್ಯ, ಹೆಸರು ಬೇಳೆ ಪಾಯಸ ಮಾಡುತ್ತಾರೆ.
ಎರಡನೆಯ ತಿಂಗಳ ವ್ರತವನ್ನು ಕ್ಷೀರ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಹಾಲಿನ ಬಳಕೆ ಇಲ್ಲ.
ಮೂರನೆಯ ತಿಂಗಳಿನ ವ್ರತವನ್ನು ದಹಿವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಮೊಸರನ್ನು ಬಳಸುವುದಿಲ್ಲ.
ನಾಲ್ಕನೆಯ ತಿಂಗಳ ಆಹಾರಕ್ರಮವನ್ನು ದ್ವಿದಳ ವ್ರತ ಎನ್ನುತ್ತಾರೆ. ಈ ತಿಂಗಳಲ್ಲಿ ಯಾವುದೇ ಬೇಳೆ, ಹಸಿ ಮೆಣಸು, ಒಣಮೆಣಸನ್ನು ಬಳಸುವುದಿಲ್ಲ.
ಭೂಮಿಯಡಿ ಬೆಳೆಯುವ ಗಡ್ಡೆ ಗೆಣಸು, ಬಾಳೆ ದಿಂಡು, ಬಾಳೆಕಾಯಿ, ಬಾಳೆಕೂಂಬೆ ಬಳಸುತ್ತಾರೆ. ಹಣ್ಣುಗಳಲ್ಲಿ ಬಾಳೆ ಹಣ್ಣನ್ನು ಬಳಸಲಾಗುತ್ತದೆ. ಕಾಳು ಮೆಣಸು ಖಾರಕ್ಕಾಗಿ, ಮಾವಿನಕಾಯಿ ಹುಳಿಗಾಗಿ ಬಳಸುತ್ತಾರೆ.
 ಈ ತಿಂಗಳಲ್ಲಿ ಅರಳಿನ ಚಿತ್ರಾನ್ನ, ಪಲ್ಯ, ಅವಲಕ್ಕಿಯ ಪಾಯಸ ಮಾಡುತ್ತಾರೆ.
ಮೊದಲ ಮತ್ತು ಕೊನೆಯ ತಿಂಗಳಲ್ಲಿ ಗೋಡಂಬಿ, ದ್ರಾಕ್ಷಿ, ಲಾವಂಚ, ಏಲಕ್ಕಿಯಂತಹ ಪರಿಮಳ ದ್ರವ್ಯಗಳನ್ನು ಬಳಸುವುದಿಲ್ಲ. ಈ ವ್ರತಗಳ ಆಹಾರ ಅಭ್ಯಾಸವಿಲ್ಲದವರಿಗೆ ರುಚಿಸುವುದಿಲ್ಲ. ಹೀಗಾಗಿ ಶ್ರೀಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳಿಗೆ ಮಾಮೂಲಿ ಸಾರು, ಸಾಂಬಾರಿನ ಖಾದ್ಯಗಳನ್ನು ತಯಾರಿಸುತ್ತಾರೆ.
ನೈವೇದ್ಯಕ್ಕಾಗಿ ವ್ರತದ ಆಹಾರವನ್ನು ತಯಾರಿಸುತ್ತಾರೆ ಮತ್ತು ಈ ಆಚಾರವನ್ನು ಪಾಲಿಸುವ ವ್ರತಧಾರಿಗಳು ಚಾತುರ್ಮಾಸ್ಯ ವ್ರತದ ಆಹಾರವನ್ನು ಬಳಸುತ್ತಾರೆ. ವಿಶೇಷವಾಗಿ ಸ್ವಾಮೀಜಿಯವರು, ಆಚಾರನಿಷ್ಠ ವಿದ್ವಾಂಸರು ವ್ರತದ ಆಹಾರಕ್ರಮವನ್ನು ಅನುಸರಿಸುತ್ತಾರೆ.
ನಾಲ್ಕೂ ತಿಂಗಳು ಒಂದು ಸ್ವಲ್ಪವೂ ತಪ್ಪದೆ ಈ ಆಹಾರಕ್ರಮ ಪಾಲಿಸುವ ಆಚಾರನಿಷ್ಠರೂ ಇದ್ದಾರೆ. 
ಈ ಆಹಾರ ಕ್ರಮ ಹಿಂದೂ ಪಂಚಾಂಗದ ಪ್ರಕಾರ 6 ಋತು. ಈ ಋತುಗಳ ಸಮಯದಲ್ಲಿ ಮೈಕೈ ನೋವು ಕಾಲುಗಳು ಚರ್ಮಗಳು ಒಡೆಯುವುದು, ಗಂಟಲು ನೋವು, ಶೀತ, ಜ್ವರ ಬರುವ ಸಾಧ್ಯತೆಗಳು ಹೆಚ್ಚು. ಈ ಕಾರಣಕ್ಕಾಗಿ ಯತಿಗಳು 1ನೇ ತಿಂಗಳು ಬೇಳೆಯನ್ನು ಸೇವಿಸಬಾರದು,2ನೇ ತಿಂಗಳು ಮೊಸರು, 3ನೇ ತಿಂಗಳು ಹಾಲು, 4ನೇ ತಿಂಗಳು ಕಾಳುಗಳು ತರಕಾರಿಗಳನ್ನು ಸೇವಿಸಬಾರದು ಎಂಬ ನಿಯಮ ಇದೆ. 
ಈ ಚಾತುರ್ಮಾಸ್ಯ ವ್ರತ ಸಾವಿರಾರು ವರ್ಷಗಳಿಂದಲೂ ಆಚರಣೆಯಲ್ಲಿದೆ. ಈಗಲೂ ಸಾಧು ಸಂತರು ಲೋಕ ಕಲ್ಯಾಣಕ್ಕಾಗಿ ಆತ್ಮೋನ್ನತಿಗಾಗಿ ಈ ವ್ರತ ಆಚರಿಸುವರು .



No comments:

Post a Comment