Monday, July 20, 2020

YOGA FOR ELDERS- 2 (ವಯಸ್ಕರಿಗೆ ಯೋಗ -2):

YOGA FOR ELDERS- 2 (ವಯಸ್ಕರಿಗೆ ಯೋಗ -2):

ನಿನ್ನೆ ಯೋಗದ ಮೊದಲಿನ ಎರಡು ಅಂಗಗಳನ್ನು ತಿಳಿದೆವು ಮತ್ತು ಸಾಮಾನ್ಯ ಪ್ರಾಣಾಯಾಮ ಮಾಡಿದೆವು.
 (ಪ್ರಾಣಾಯಾಮವನ್ನು ಎಷ್ಟು ಹೊತ್ತು ಮಾಡಮಾಡಬೇಕು ಅನ್ನುವುದನ್ನು ನಿನ್ನೆ ಹೇಳಲಿಲ್ಲ, ಕಾರಣವಿದೆ, ಅದನ್ನು ಮೊದಲು ಪ್ರತಿ ಸಲ ಐದು ನಿಮಿಷಗಳ ವರೆಗೆ ಮಾಡೋಣ, ನಂತರ ನಿಧಾನವಾಗಿ,
ನಮ್ಮ ಶಕ್ತ್ಯಾನುಸಾರ ಹೆಚ್ಚಿಸುತ್ತ ಹೋಗೋಣ. ಅಲ್ಲದೆ ಯಾವುದೇ ಯೋಗಾಭ್ಯಾಸವನ್ನು ಆಯಾಸಪಟ್ಟು ಮಾಡುವಂತಿಲ್ಲ, ನಿಧಾನವಾಗಿ ಸಾಧಿಸುತ್ತ ಹೋಗಬೇಕು. ಅಲ್ಲದೆ ನಾನು ಪ್ರಾಣಾಯಾಮದ ಭಾಗಗಳಾದ  ಪೂರಕ, ರೇಚಕ ಮತ್ತು ಕುಂಭಕಗಳ ಬಗ್ಗೆ ಹೇಳಲೇ ಇಲ್ಲ, ಅದನ್ನು ಮುಂದೆ ತಿಳಿಯೋಣ) 

ಮತ್ತು ಇವತ್ತು ಆಸನಗಳಲ್ಲಿ ಒಂದಾದ, ವಜ್ರಾಸನ ಕುರಿತು ಸ್ವಲ್ಪ ತಿಳಿದುಕೊಳ್ಳೋಣ ಮತ್ತು ಅದನ್ನು ದಿನಾಲು ಮಾಡಲು ಪ್ರಯತ್ನಿಸೋಣ.
ವಿಧಾನ: ಮಂಡಿಗಳನ್ನು ಮಡಿಸಿ ನಿತಂಬ ಅಥವಾ ಕುಂಡಿಗಳ ಮೇಲೆ ಕುಳಿತುಕೊಳ್ಳಿ. ಕಾಲ್ಬೆರಳು ಸಹಿತವಾಗಿ ಹಿಮ್ಮಡಿ ಮೇಲ್ಮುಖವಾಗಿ ಹಿಂದಕ್ಕೆ ಚಾಚಿದ್ದು, ಕಾಲುಗಳು ನಿತಂಬ ದೊಂದಿಗೆ ಅಂಟಿಕೊಂಡಿರುವಂತೆ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ, ಮೊದಮೊದಲು, ತುಂಬಾ ಹೊತ್ತು ಕೂಡಲು ಆಗುವುದಿಲ್ಲ, ಅದಕ್ಕೆ, ಒಂದು ದಪ್ಪಗಿನ ಟವೆಲ್ ಮಡಿಸಿ ಅದನ್ನು ಕಣಕಾಲಿನ ಬುಡದಲ್ಲಿ, ಹಿಮ್ಮಡಿ ಸಂದು ಅಥವಾ ಜೊಯಿಂಟಿನ ಕೆಳಗೆ ಇಟ್ಟುಕೊಂಡರೆ ಅಲ್ಲಿ ತುಂಬ ಹೊತ್ತು ಕುಳಿತರೂ ನೋವು ಬರುವದಿಲ್ಲ. ವಿಶೇಷವಾಗಿ ಹೊಸಬರಿಗೆ ಇದು ತುಂಬಾ ಉಪಯುಕ್ತ. ಮೊದಲು ಎರಡು ನಿಮಿಷ ಕುಳಿತುಕೊಳ್ಳಲು ಪ್ರಯತ್ನ ಮಾಡಿ, ನಂತರ ನಿಧಾನವಾಗಿ ಸಮಯ ಹೆಚ್ಚಿಸುತ್ತ ಹೋಗಬಹುದು.

ಪ್ರಯೋಜನಗಳು: ಈ ಶ್ರೇಷ್ಠವಾದ ಆಸನವನ್ನು ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಮಾಡಬಹುದು. ವಿಶೇಷವಾಗಿ ಸಂಜೆ ಊಟವಾದ ತಕ್ಷಣ ಮಾಡುವುದು ಸರ್ವರಿಗೂ ಉತ್ತಮ. ಇದರಿಂದಾಗಿ ಉಂಡ ಆಹಾರವು ಶೀಘ್ರ ಪಚನವಾಗುತ್ತದೆ. ಯಾವುದೇ ಆಸನವನ್ನು ಖಾಲಿ ಹೊಟ್ಟೆಯಲ್ಲಿ ಮಾತ್ರ ಮಾಡಬೇಕು, ಆದರೆ ವಜ್ರಾಸನ ಅದಕ್ಕೆ ಅಪವಾದ, ಇದನ್ನು ಊಟ ಮಾಡಿದ ತಕ್ಷಣ ಕೂಡಾ ಮಾಡಬಹುದು. ಅಲ್ಲದೆ, ಇದು ಧ್ಯಾನಕ್ಕೆ  ತುಂಬ ಪ್ರಶಸ್ತ, ಮತ್ತು ಆಮ್ಲಪಿತ್ತ, ಗ್ಯಾಸ್, ಮಲಬದ್ಧತೆ, ಮಂಡಿನೋವು ಇತ್ಯಾದಿಗಳಿಗೆ ಕೂಡ ಉತ್ತಮ.
ಮತ್ತು ಇವತ್ತು, ಯೋಗದ ಮುಂದಿನ ಭಾಗಗಳ ಬಗ್ಗೆ ತಿಳಿಯೋಣ.

ಅಂಗ 3: ಆಸನಗಳು. 
ಉಸಿರಾಟ ಮತ್ತು ದೇಹದ ಸಂಯೋಜನೆಗೆ ಮನಸ್ಸನ್ನು ತೊಡಗಿಸುವುದು.
ಆಸನಗಳು ತುಂಬಾ ಇದ್ದು ಅವುಗಳಲ್ಲಿ ನಮ್ಮ ಶರೀರ ಮತ್ತು ಪ್ರಕೃತಿಗೆ ಯೋಗ್ಯವಾದ ಆಸನಗಳನ್ನು ಅಳವಡಿಸಿಕೊಂಡು ನಿಯಮಿತವಾಗಿ ಅಭ್ಯಸಿಸಬೇಕು.
ಆಸನಗಳಲ್ಲಿ, ವಜ್ರಾಸನ, ಪದ್ಮಾಸನ, ಸಿದ್ಧಾಸನ, ಶೀರ್ಷಾಸನ, ಸರ್ವಾಂಗಾಸನ, ಭುಜಂಗಾಸನ, ಉತ್ತಾನಪಾದಾಸನ, ಹಲಾಸನ, ಪವನಮುಕ್ತಾಸನ, ನೌಕಾಸನ, ಪಶ್ಚಿಮೋತ್ತಾಸನ, ಮರ್ಕಟಾಸನ, ಧನುರಾಸನ, ಸೂರ್ಯನಮಸ್ಕಾರ, ಶವಾಸನ ಇತ್ಯಾದಿ ನೂರಾರು ಇವೆ. ನಾವು ಇವುಗಳಲ್ಲಿ ಆಯಾಸವಿಲ್ಲದೆ ಮಾಡಬಹುದಾದ ಹಲವು ಸರಳ ಆಸನಗಳನ್ನು ಕಲಿಯೋಣ.

ಅಂಗ 4: ಪ್ರಾಣಾಯಾಮ: 
ಉಸಿರಾಟದ ಸರಿಯಾದ ಕ್ರಮವೇ ಪ್ರಾಣಾಯಾಮ. ನಾವು ಸಹಜವಾಗಿ ಮಾಡುವ ಉಸಿರಾಟದ ಪ್ರಕ್ರಿಯೆ ಸರಿ ಅಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಹೌದು ಎಂದರೆ ನಿಮಗೆ ಆಶ್ಚರ್ಯ ವಾಗಬಹುದು. ಯಾಕೆಂದರೆ, ತಂತಾನೇ ನಡೆಯುವ ಉಸಿರಾಟದ ಕ್ರಿಯೆಯಲ್ಲಿ, ಶ್ವಾಸಕೋಶಗಳು ಸಂಪೂರ್ಣ ತುಂಬಿಕೊಳ್ಳುವಷ್ಟು ಉಸಿರನ್ನು ನಾವು ಎಂದೂ ತೆಗೆದುಕೊಳ್ಳುವುದಿಲ್ಲ ಹಾಗಾಗಿ ಎಲ್ಲಾ ಕೋಶಗಳಿಗೆ ಪ್ರಾಣಶಕ್ತಿ ತಲುಪುವುದಿಲ್ಲ. ಅಲ್ಲದೆ ಸಹಜ ಉಸಿರಾಟದ ವೇಗವೂ ಹೆಚ್ಚು (ನಿಮಿಷಕ್ಕೆ ಸುಮಾರು ಹದಿನಾಲ್ಕು ಸಲ). ಅಲ್ಲದೆ ಸಹಜ ಉಸಿರಾಟಕ್ಕಿಂತ ಪ್ರಾಣಾಯಾಮದಿಂದ ಆರು ಪಟ್ಟು ಹೆಚ್ಚು ಪ್ರಾಣವಾಯು ಒಳಹೋಗುತ್ತದೆ!!? ಮತ್ತು ಸರ್ವರೋಗಗಳಿಗೆ ಪ್ರಾಣಾಯಾಮ ರಾಮಬಾಣ.

ಪ್ರಾಣಾಯಾಮಗಳಲ್ಲಿ ಹಲವಾರು ಪ್ರಕಾರಗಳಿದ್ದು ನಂತರ ಅವುಗಳನ್ನು ವಿವರವಾಗಿ ತಿಳಿಯೋಣ.

No comments:

Post a Comment