Saturday, July 25, 2020

YOGA FOR ELDERS - 3 ( ವಯಸ್ಕರ ಯೋಗ ಭಾಗ 3 )

YOGA FOR ELDERS - 3
ವಯಸ್ಕರ ಯೋಗ ಭಾಗ 3:

ನಿನ್ನೆ ವಜ್ರಾಸನ ತಿಳಿದೆವು. ಇಂದು, ಪ್ರಾಣಾಯಾಮವನ್ನು ಕುರಿತು 
ಇನ್ನಷ್ಟು ತಿಳಿಯೋಣ, ಅಲ್ಲದೆ ಸೂರ್ಯ ಸ್ನಾನ (ದಿನಾಲೂ ಒಂದರ್ಧ ಗಂಟೆ ಸಾಧ್ಯವಿದ್ದಷ್ಟು ಬರಿಮೈಯಲ್ಲಿ, ಬೆಳಗಿನ ಅಥವಾ ಇಳಿಹೊತ್ತಿನಲ್ಲಿ ಬಿಸಿಲು ಕಾಯಿಸೋದು ಅಷ್ಟೇ), (ಇದನ್ನು ಕುರಿತು ನಾವು ಇಲ್ಲಿನ ವರೆಗೂ ಗಂಭೀರವಾಗಿ ಪರಿಗಣಿಸಲೇ ಇಲ್ಲ, ಇದು ನಮ್ಮ ಶರೀರದ ಆರೋಗ್ಯಕ್ಕೆ ಅತ್ಯವಶ್ಯಕವಾದ D - ವಿಟಮಿನ್ ಅಷ್ಟೇ, ಮತ್ತೇನೂ ಅಲ್ಲ. ವಿಶೇಷವಾಗಿ ಹೃದಯ ಮತ್ತು ಸಕ್ಕರೆ ಕಾಯಿಲೆಗಳ ಮೂಲ ಕಾರಣವೇ ಇದರ ಕೊರತೆ ) , ಮುಂಜಾನೆಯ ವಾಯುವಿಹಾರ, ಲಘು ವ್ಯಾಯಾಮಗಳು,  ಮುದ್ರೆಗಳನ್ನು ಮತ್ತು ಅಕ್ಯುಪ್ರೆಶರ್ ಬಗೆಗೂ ಒಂದಿಷ್ಟು ತಿಳಿಯೋಣ. ಹಾಗೆಯೇ, ವಯಸ್ಕರು ಮಾಡಲು ಸರಳವಾದ ಕೆಲವು ಮಹತ್ವದ ಲಘು ವ್ಯಾಯಾಮಗಳು ಕೂಡ ಆರೋಗ್ಯ ಕಾಪಾಡಿಕೊಳ್ಳಲು, ತನ್ಮೂಲಕ, ಅಲ್ಪಸ್ವಲ್ಪ ಕಾರಣಕ್ಕೆ ಡಾಕ್ಟರ್ ಹತ್ತಿರ ಓಡೋದನ್ನು ತಪ್ಪಿಸಿ, ನಮಗೆ ತುಂಬ ಸಹಾಯಮಾಡುತ್ತವೆ. ಇಲ್ಲಿ ನಾವು ವ್ಯವಸ್ಥಿತವಾಗಿ ಯಾವುದೇ ಒಂದನ್ನು ಕಲಿಯಲು ಸಾಧ್ಯವಿಲ್ಲವೇ ಅಂತ ಕೇಳಬೇಡಿ, ನಮಗಿಲ್ಲಿ ನಮ್ಮ ಆರೋಗ್ಯಕ್ಕೇನು ಬೇಕೋ, ಎಷ್ಟು ಬೇಕೋ ಅಷ್ಟನ್ನು ಕಲಿಯೋಣ, ಏನಂತೀರಿ!!? ಅದು ಈ ಮುಂಚೆ ಹೇಳಿದ ಮೇಲಿನ ಎಲ್ಲಾ ಪ್ರಕಾರದ ವಿಧಾನಗಳ ಕಲಸುಮೇಲೋಗರವಾಗಿದ್ದರೂ ಸರಿಯೆ, ಅದರ ಕುರಿತು ತಲೆ ಬಿಸಿ ಯಾಕೆ !? 
ಈಗ, ಪ್ರಾಣಾಯಾಮದಲ್ಲಿ ಹೇಳಿದ ವಿಷಯ, ಉಸಿರನ್ನು ಒಳಗೆ ತೆಗೆದುಕೊಳ್ಳುವುದು "ಪೂರಕ",
ಹೊರಬಿಡುವುದು "ರೇಚಕ", ಒಳಗೆ ತಗೊಂಡಿದ್ದನ್ನು ಹಾಗೆಯೇ ಹಿಡದಿಡುವುದು "ಅಂತರ ಕುಂಭಕ", ಅಂತೆಯೇ ಹೊರಬಿಟ್ಟ ಉಸಿರನ್ನು ಒಳಗೆ ತಗೊಳ್ಳದೆ ಹಾಗೆಯೇ ಇರುವುದು "ಬಾಹ್ಯ ಕುಂಭಕ". 
ಇಲ್ಲಿ, ಹೊಸದಾಗಿ ಪ್ರಾಣಾಯಾಮ ಮಾಡುವವರು, ಈ ಕುಂಭಕದ ವಿಷಯ ಚಿಂತಿಸುವ ಅಗತ್ಯ ಬೇಡ. ಈಗಾಗಲೆ ಕುಂಭಕ ಮಾಡುತ್ತಿರುವವರು ಮುಂದುವರಿಸಲಿ, ಹೊಸಬರು ಪೂರಕ ರೇಚಕಗಳನ್ನು ಮಾತ್ರ ಮಾಡಲಿ. ಯಾಕೆಂದರೆ, ಕುಂಭಕವನ್ನು ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಮಾಡಬೇಕು, ಇಲ್ಲದಿದ್ದರೆ ಬ್ಲಡ್ ಪ್ರೆಶರ್ ಗೆ ಆಹ್ವಾನ ಕೊಟ್ಟಂತಾಗಬಹುದು. 
ಮೊದಲು ಮನೆಯಲ್ಲಿ ಗೋಡೆ ಗಡಿಯಾರದ ಸೆಕೆಂಡ್ ಮುಳ್ಳಿನ ಶಬ್ದದೊಂದಿಗೆ ಪ್ರಾಣಾಯಾಮ ಪ್ರಾರಂಭಿಸುವುದು ಸುಲಭ. 4 - 5 ಸೆಕೆಂಡ್ ಗಳ ಆವೃತ್ತಿಯಲ್ಲಿ ಪೂರಕ ರೇಚಕ ಗಳನ್ನು ಪ್ರಾರಂಭಿಸಬಹುದು.  ಯಾವುದಕ್ಕೂ ದೈಹಿಕ ಆಯಾಸವಾಗದಂತೆ ನೋಡಿಕೊಳ್ಳೋದು ಅತ್ಯವಶ್ಯ. 4 - 4 ಸೆಕೆಂಡ್ ಗಳ ಪೂರಕ ರೇಚಕಗಳಿಂದ 4 + 4 ಸೇರಿ 8 ಸೆಕೆಂಡ್ ಗಳಿಗೆ ಒಂದು ಉಸಿರಾಟದ ಕಾರ್ಯ ಅಂದರೆ ಒಂದು ನಿಮಿಷದಲ್ಲಿ  ಏಳೂವರೆ ಉಸಿರಾಟಗಳಾಗುತ್ತವೆ, ಅದೇ 5 + 5  ಸೆಕೆಂಡ್ ಗಳಂತೆ ಒಂದು ನಿಮಿಷದಲ್ಲಿ ಆರು ಸಲ ಉಸಿರಾಟದ ಕ್ರಿಯೆ ನಡೆಯುತ್ತದೆ. ಇದನ್ನು ನಾವು ನಮಗೆ ಆಯಾಸವಾಗದಂತೆ ನಿಧಾನವಾಗಿ ಹೆಚ್ಚಿಸುತ್ತ ಹೋಗಬಹುದು. ಅವಸರದಲ್ಲಿ, ಅಥವಾ ಇನ್ನೊಬ್ಬನನ್ನು ನೋಡಿ ಜಿದ್ದಿಗೆ ಬಿದ್ದು, ಎಂದೂ ಮಾಡಕೂಡದು. ನನ್ನದೇ ವೈಯಕ್ತಿಕ ಅನುಭವ ಹೇಳಬೇಕು ಅಂದರೆ, ನಾಲ್ಕು ವರ್ಷಗಳ ಕೆಳಗೆ 5 - 5 ಸೆಕೆಂಡ್ ಗಳಿಂದ ಪ್ರಾರಂಭಿಸಿ, ಇಂದು 10 - 10 ಸೆಕೆಂಡ್ ಗಳಿಗೆ ತಲುಪಿದ್ದೇನೆ. ಅದರಲ್ಲಿ ಕುಂಭಕಗಳೂ (ಅಂತರ್ ಮತ್ತು ಬಾಹ್ಯ ಸೇರಿವೆ) ಸೇರಿ, 10 - 8 - 10 - 4 ಅಂದರೆ 32 ಸೆಕೆಂಡ್ ಗಳಿಗೆ ಒಂದು ಉಸಿರಾಟದ ಕ್ರಿಯೆಗೆ ತಲುಪಿದ್ದೇನೆ. ಅಂದರೆ, ನಿಮಿಷಕ್ಕೆ ಹೆಚ್ಚು ಕಡಿಮೆ, ಎರಡು ಉಸಿರಾಟಗಳಿಗಿಂತಲೂ ಸ್ವಲ್ಪ ಕಡಿಮೆ ಎನ್ನಬಹುದು. ತುಂಬಾ ಮೊದಲಿನಿಂದಲೂ ಅಭ್ಯಾಸ ಮಾಡಿದವರು ಇನ್ನೂ ಹೆಚ್ಚಿನ ಸಾಧನೆ ಮಾಡಿರುತ್ತಾರೆ. ಆ ಮಾತು ಬೇರೆ, ಇರಲಿ.
ಈ ಉಸಿರಾಟದ ಆವೃತ್ತಿಗಳಲ್ಲಿ ಸಮಯದ ಅವಧಿಯನ್ನು ಹೆಚ್ಚಿಸುತ್ತ ಹೋಗುವುದು ಮಹತ್ವದ್ದು. ದೇವರು ಈ ಶರೀರವೆನ್ನುವ ಮಶಿನ್ ಸೃಷ್ಟಿ ಮಾಡುವಾಗ ಶ್ವಾಶಕೋಶವನ್ನು ಹುಟ್ಟಿ ನಿಂದ ಸಾವಿನ ವರೆಗೆ ಉಸಿರಾಟದ ಇಷ್ಟು ಆವೃತ್ತಿಗಳಿಗೆ ಯೋಗ್ಯ ವೆಂದು ಇರುತ್ತದೆ. ಅದರ ಮೇಲೆ ನಮ್ಮ ಆಯುಷ್ಯ ನಿಶ್ಚಿತ ವಾಗಿರುತ್ತದೆ. ಉದಾಹರಣೆಗೆ, ನಾಯಿಯನ್ನು ನೋಡಿ, ಅದು ತುಂಬಾ ತ್ವರಿತವಾಗಿ ಉಸಿರಾಟ ಮಾಡುತ್ತದೆ ಮತ್ತು ಸುಮಾರು 14 - 15 ವರ್ಷ ಬದುಕುತ್ತದೆ. ಅದೇ ಆಮೆಯನ್ನು ನೋಡಿ, ತುಂಬ ನಿಧಾನವಾಗಿ ಉಸಿರಾಟ ಮಾಡುತ್ತದೆ ಮತ್ತು 150 ರಿಂದ 300 ವರ್ಷ ಬದುಕುತ್ತದೆ (ಹಲವು ಆಮೆಗಳು 500 ವರ್ಷಗಳ ವರೆಗೂ ಬದುಕಿದ್ದೂ ಉಂಟು). ಇಲ್ಲಿ, ನಾಯಿಗಿಂತ ನಿಧಾನವಾಗಿ ಮತ್ತು ಆಮೆಗಿಂತ ತ್ವರಿತವಾಗಿ ಉಸಿರಾಡುವ ಆರೋಗ್ಯ ಪೂರ್ಣ ಮನುಷ್ಯನ ಗರಿಷ್ಠ ವಯೋಮಿತಿ ಸಾಮಾನ್ಯವಾಗಿ 100 ವರ್ಷಗಳು.
ತಾತ್ಪರ್ಯ ಇಷ್ಟೇ, ಎಷ್ಟು ನಿಧಾನವಾಗಿ ಉಸಿರಾಟ ಮಾಡುತ್ತೀಯೋ ಅಷ್ಟು ದೀರ್ಘಕಾಲ ಬದುಕುತ್ತಿ.
ಹೊಸಬರು 4 ಅಥವಾ 5 ಸೆಕೆಂಡ್ ಗಳ ಅವಧಿಯ ಪೂರಕ, ಮತ್ತು ಅಷ್ಟೇ ಅವಧಿಯ ರೇಚಕ ಗಳಿಂದ ಪ್ರಾರಂಭಿಸಿದರೆ ಸಾಕು, ಅದನ್ನು ನಿಧಾನವಾಗಿ ಹೆಚ್ಚಿಸುತ್ತ, ಸುಮಾರು ಆರು ತಿಂಗಳಲ್ಲಿ 10 ಸೆಕೆಂಡ್ ಗಳಿಗೆ ಸರಳವಾಗಿ ತಲುಪಲು ಸಾಧ್ಯ. ಅಂದರೆ ಕುಂಭಕ ಇಲ್ಲದೇ ಪೂರಕ 10 ಸೆಕೆಂಡ್ ಮತ್ತು ರೇಚಕ 10 ಸೆಕೆಂಡ್ ಮಾಡಿದರೆ, ಒಂದು ನಿಮಿಷದಲ್ಲಿ 20 ಸೆಕೆಂಡ್ ಗಳ ಮೂರು ಉಸಿರಾಟದ ಆವೃತ್ತಿಗಳಾಗುತ್ತವೆ. ಸಹಜವಾಗಿ ನಡೆಯುವ 14 ರಿಂದ 3 ಕ್ರಿಯೆಗಳಿಗೆ ತಲುಪಲು ಸಾಧ್ಯ.

No comments:

Post a Comment