Saturday, May 15, 2021

FESTI IMPORTANCE OF AKSHYA TRUTIYA (ಅಕ್ಷಯ ತೃತೀಯ ಮಹತ್ವ)

 ಅಕ್ಷಯ ತೃತೀಯ ಮಹತ್ವ

ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು  ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ. 

ಅಕ್ಷಯ ಎಂದರೆ ಕ್ಷಯಿಸದೆ,ವೃದ್ಧಿಯಾಗುವುದು ಎಂದು ಅರ್ಥ.

ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು.! 

ಅಕ್ಷರಾಭ್ಯಾಸ, ಮದುವೆ,ಉಪನಯನ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಎಲ್ಲದಕ್ಕೂ ಸುಮುಹೂರ್ತದ,

ಪಂಚಾಂಗಶುದ್ಧಿಯ ದಿನವೆಂದು ಪರಿಗಣಿಸಲ್ಪಟ್ಟಿದೆ.ಈ ದಿನಕ್ಕೆ ಕೆಲವೊಂದು ಘಟನೆಗಳು ಪುರಾಣಗಳಲ್ಲಿವೆ.

ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಲೇಖನ ಕಾರ್ಯವನ್ನು ಆರಂಭಿಸಿದರು.

ಶ್ರೀ ಮಹಾವಿಷ್ಣುವು  ಪರಶುರಾಮನಾಗಿ ಅವತಾರವೆತ್ತಿದ್ದು ಇದೇ ದಿನ.

ಶ್ರೀಕೃಷ್ಣನ ಅಣ್ಣ ಬಲರಾಮ ಜನಿಸಿದ್ದು ಅಕ್ಷಯತದಿಗೆಯಂದು.ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನಿತ್ತ ಸುದಿನ 

ಅಕ್ಷಯ ತದಿಗೆ. ಜನ್ಮಾಂತರಗಳ ಪಾಪ, ದೋಷಗಳನ್ನು ನಿವಾರಿಸುವ ಗಂಗಾಮಾತೆಯು ಪವಿತ್ರನದಿಯಾಗಿ ಸ್ವರ್ಗದಿಂದ ಧರೆಗಿಳಿದ ದಿನವಿದು.

ಸಂಪತ್ತಿನ ಒಡೆಯ, ದೇವತೆಗಳಲ್ಲಿಯೇ ಅತಿ ಶ್ರೀಮಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜನಾದ ಕುಬೇರನು ಮಹಾಲಕ್ಷ್ಮಿಯನ್ನು ಪೂಜಿಸುವ ಶುಭದಿನ ಅಕ್ಷಯತೃತೀಯ.

ತ್ರೇತಾಯುಗ ಆರಂಭವಾದುದು ಇದೇ ದಿನದಂದು ಎಂಬ  ನಂಬಿಕೆ ಜನಮಾನಸದಲ್ಲಿದೆ.

 ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜವತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ

ಲಂಕಾನಗರವು ಯಾರದು? ಎಂದು ಕೕೆಳಿದರೆ ಸಾಮಾನ್ಯವಾಗಿ ಎಲ್ಲರೂ ಕೊಡುವ ಉತ್ತರ ರಾವಣ, ಎಂದು.ವಾಸ್ತವವೆಂದರೆ ಲಂಕೆಯನ್ನು ನಿರ್ಮಿಸಿದವನು ಕುಬೇರ,ರಾವಣನ ಅಣ್ಣ.ರಾವಣ ಅಣ್ಣನಿಂದ,  ಲಂಕಾನಗರವನ್ನು ವಶಪಡಿಸಿಕೊಂಡು,

ಕುಬೇರನನ್ನು ಉತ್ತರದಿಕ್ಕಿಗೆ ಓಡಿಸಿ ತಾನು ಲಂಕೇಶನಾದ. ಕುಬೇರನು ಲಂಕಾನಗರವನ್ನು ನಿರ್ಮಾಣ ಮಾಡಿಸುವಾಗ ಅಕ್ಷಯತೃತಿಯದಂದು  ಸುವರ್ಣ ವಿಶ್ವಕರ್ಮರಿಂದ  ಭೂಮಿಪೂಜೆಯನ್ನು ಮಾಡಿಸಿದ್ದನು.

ಇದರಿಂದ  ಲಂಕಾನಗರವು ಸ್ವರ್ಣಲಂಕೆಯಾಯಿತು 

ಕ್ಷಯ ಅಂದರೆ ನಾಶ.  ನಾಶವಿಲ್ಲದ್ದು ಅಕ್ಷಯ. 

ನಾಶವಾಗುವದು ತಾತ್ಕಾಲಿಕ. ನಾಶವಾಗದ್ದು ಶಾಶ್ವತ. ಮಾಡುವ ಕೆಲಸವಿರಲಿ, ಬೇಡುವ ಫಲವಿರಲಿ. ಎಲ್ಲದರಲ್ಲಿಯೂ ಎರಡು ವಿಧ. - ಕ್ಷಯ ಮತ್ತು ಅಕ್ಷಯ. 

ಲೌಕಿಕ ಸಾಧನೆ, ಲೌಕಿಕ ಫಲ - ಎರಡೂ ಕ್ಷಯ - ತಾತ್ಕಾಲಿಕ. 

ಪಾರಮಾರ್ಥಿಕ ಸಾಧನೆ, ಪರಮ ಪುರುಷಾರ್ಥ ಫಲ - ಈ ಎರಡೂ ಅಕ್ಷಯ. ನಾಶವಾಗದ ಸಾಧನೆ, ಮತ್ತು  ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ.

ಅಕ್ಷಯ ತೃತಿಯಾ - ಬಂಗಾರ ಕೊಂಡಿಟ್ಟುಕೊಳ್ಳಿ ಎನ್ನುತ್ತಾರೆ ಮನೆಯಲ್ಲಿ ಹಿರಿಯರು. ಹಿರಿಯರು ಹೇಳಿದಂತೆ ಇಂದು ಬಂಗಾರ ಕೊಳ್ಳೋಣ. ಕೂಡಿಸಿ ಉಳಿಸಿ ಬೆಳೆಸೋಣ. ಹರಿನಾಮವೆಂಬ. ೨೪ ಕ್ಯಾರೆಟ್ ಗೂ ಅನಂತಮಡಿ ಮಿಗಿಲಾದ,  ದಿವ್ಯ ಬಂಗಾರ - ಉಚ್ಛರಿಸಿದವರಿಗೆ ಅಕ್ಷಯ ಸುಖ ಕೊಡುವ. ಲಕ್ಷ್ಮೀ ನರಸಿಂಹನ ನಾಮವೆಂಬ ಚೊಕ್ಕಬಂಗಾರ ಕೊಂಡಿಟ್ಟು, ಹೃದಯದಲ್ಲಿ ಉಳಿಸಿ ಬೆಳೆಸೋಣ.ಏನದು ಬಂಗಾರ? ಎಂಥ ಬಂಗಾರ?ಮತ್ತೆ ಆಭರಣದ ಬಂಗಾರವಾದರೆ - ಅದು ತಾತ್ಕಾಲಿಕ. 

ಇಂದು ನಮ್ಮದು, ನಾಳೆ ಮತ್ತೊಬ್ಬರದು. ಶಾಶ್ವತ, ನಾಶವಾಗದ ಬಂಗಾರ ಕೊಳ್ಳಿ ಎನ್ನುತ್ತಾರೆ ಜ್ಞಾನಿಗಳು.

'ರಂಗನಾಥನ ದಿವ್ಯ ಮಂಗಳ ನಾಮವೆಂಬ ಬಂಗಾರವಿಡಬಾರೆ' ಇದು ನಿನಗೊಪ್ಪುವ ಬಂಗಾರ. ಅಕ್ಷಯತೃತಿಯ ದಿನ ಸ್ವರ್ಣವನ್ನ ಖರೀದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂಬ ನಂಬಿಕೆ ಜನರಲ್ಲಿ ಇತ್ತೀಚಿಗೆ ಬಂದಿದೆ.ಮನೆಯಲ್ಲಿ ಬಂಗಾರವೂ ಅಕ್ಷಯವಾಗಲಿ ಎಂಬ ಚಿನ್ನದ ವ್ಯಾಮೋಹದ ಪರಿಣಾಮವಿದು.

ಇದನ್ನೇ ಇಡು, ತೊಡು. ಶಾಶ್ವತ ಸುಖ ಸೂರಾಡು.- ಎನ್ನುತ್ತಾರೆ ಪುರಂದರವಿಠಲನಿಗೆ ಅತಿ ಪ್ರಿಯದಾಸರು.

ಹರಿನಾಮ ತಂದು ಕೊಡುವಂಥ ಸುಖವೇ ನಿಜವಾದ ಬಂಗಾರದಂಥ ಸುಖ. ಅದಕ್ಕೂ ಮಿಗಿಲೂ ಹೌದು. ಯಾಕೆ?  

ಕಲಿಯುಗದಲ್ಲಿ ಹರಿನಾಮವೇ ಸಾಧಕ, ಮತ್ತೆ ತಾರಕ.

ಶರೀರ ನಾಶವಾಗುತ್ತದೆ. ಅದಕ್ಕಾಗಿ ಶರೀರ ವಿರುವವರೆಲ್ಲಾ  ಕ್ಷರರು.  ಲಕ್ಷ್ಮೀದೇವಿ  ಅಪ್ರಾಕೃತ ಶರೀರೆ. ನಾಶವಿಲ್ಲ ಅವಳ ಶರೀರಕ್ಕೆ.ಅವಳು 'ಅಕ್ಷರ'ಳು. ಈ ಕ್ಷರ ಅಕ್ಷರರಿಗಿಂತ ನಾನು ಉತ್ತಮ, ಪುರುಷೋತ್ತಮ. ಎಂದು ಸರ್ವೋತ್ತಮ ಶ್ರೀ ಕೃಷ್ಣ ಗೀತೆಯಲ್ಲಿ ಸಾರುತ್ತಾನೆ.  

ಶ್ರೀ ಹರಿಯೇ ಕೃಷ್ಣ. ಅದಕ್ಕಾಗಿ ಹರಿನಾಮವೇ ಶ್ರೇಷ್ಠ. ಅದುವೇ ಬಂಗಾರ. ಅದಕ್ಕಾಗಿ ಈ ಬಂಗಾರ ಕೊಂಡುಕೊಳ್ಳಿ.

ಹರಿನಾಮ ನಾಲಿಗೆ ಮೇಲಿರಲಿ ಎನ್ನುತ್ತಾರೆ ಹಿರಿಯರು.

ಮತ್ತೆ ಅಕ್ಷಯ ಫಲ ಕೊಡುವವನು ಶ್ರೀ ಹರಿಯೇ. ನಾವು ಪರಮಾತ್ಮನಿಗೆ ಕೊಡುವದು ಕ್ಷಯ ಮತ್ತು ಮಿತ. ಅದೂ ಅವನದೇ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ.

ಆದರೆ ಆತನು ಕೊಡುವದು - ಅಕ್ಷಯ, ಅಮಿತ. ಅದಕ್ಕಾಗಿ ದಾಸರು ಹೇಳಿದ್ದು - ಕೊಟ್ಟಿದುದ ಅನಂತ ಮಡಿ ಮಾಡಿ ಕೊಡುವ.

ಆಪತ್ತಿನಲ್ಲಿ ದ್ರೌಪದಿ ಕೊಟ್ಟದ್ದೇನು? ಭಕ್ತಿ ಪುಷ್ಪ. ಕೃಷ್ಣ ಮರಳಿ ಕೊಟ್ಟದ್ದು ಅಕ್ಷಯ ವಸ್ತ್ರ. 

ತೊಳೆದಿಟ್ಟ ಅಕ್ಷಯಪಾತ್ರೆಯಿಂದ ಅಕ್ಷಯ ಅಡಿಗೆ,  ದ್ರೌಪದಿಗೆ ದೊರಕಿಸಿ ಕೊಟ್ಟಿದ್ದು  ಶ್ರೀ ಕೃಷ್ಣನೇ.

ಹಿಡಿ ಅವಲಕ್ಕಿಗೆ, ಕುಚೇಲನಿಗೆ ಅಖಿಳಾರ್ಥವ ಕೊಟ್ಟ ಕರುಣಾನಿಧಿ.ತರಳ  ಧ್ರುವರಾಯನಿಗೆ, ಭಕ್ತ ವಿಭೀಷಣನಿಗೆ ಅಕ್ಷಯ ಪಟ್ಟವನ್ನಿತ್ತ. ಅಹಲ್ಯೆ ಅಕ್ಷಯ ಸೌಭಾಗ್ಯ, ಶಬರಿ ಸದ್ಗತಿ, ಪಡೆದರು.  ಹನುಮಂತ ದೇವರು ಬೇಡಿ ನಿಜ ಭಕುತಿ ಪಡೆದವರು. ಜಯ ವಿಜಯರು ಅಕ್ಷಯ ಸುಖದ ಸದ್ಗತಿ ಪಡೆದರು. ಅಕ್ಷಯ ದಾತನಿಂದ,  ಅಕ್ಷಯ ಸುಖ ಪಡೆದವರ ಪಟ್ಟಿ ಅಕ್ಷಯವಾಗಿ ಬೆಳೆಯುತ್ತದೆ.  

ಶ್ರೀ ಮದಾಚಾರ್ಯರು ಹೇಳುತ್ತಾರೆ  - 

' ಆನಂದದಶ್ಚ ಮುಕ್ತಾನಾಂ ಸ ಏವ ಏಕೋ ಜನಾರ್ದನಃ'  ಏಕಮೇವ ಅದ್ವೀತೀಯ ಜನಾರ್ಧನ - 

ಶ್ರೀ ವಿಷ್ಣುವೇ ಮುಕ್ತರಿಗೆ ಶಾಶ್ವತ ಅಕ್ಷಯ ಆನಂದ ಕೊಡುವವನು.

ವೈಶಾಖ ಶುಕ್ಲಪಕ್ಷದ ಅಕ್ಷಯ ತೃತೀಯಾದಂದು ಶ್ರೇಷ್ಠ ಜ್ಞಾನಿಗಳಾದ ಪರಮಭಕ್ತರಾದ ಭಾಗವತ ಗ್ರಂಥಕ್ಕೆ "ಪದ ರತ್ನಾವಲಿ" ಎಂಬ ವ್ಯಾಖ್ಯಾನವನ್ನು ರಚಿಸಿದ ಶ್ರೀ  ವಿಜಯಧ್ವಜತೀರ್ಥ ಶ್ರೀಪಾದಂಗಳವರ ಆರಾಧನಾ ದಿವಸ. ಅವರ ವೃಂದಾವನ ಪುಣ್ಯಕ್ಷೇತ್ರವಾದ  ಶ್ರೀ ಕಣ್ವತೀರ್ಥದಲ್ಲಿದೆ. ಅವರ ಆರಾಧನಾ ನಿಮಿತ್ತವಾಗಿ

ಪಾರಾಯಣ ಮಾಡುವವರ ಅನುಕೂಲಕ್ಕಾಗಿ ವಿಶ್ವಪತಿ ತೀರ್ಥರು ರಚಿಸಿದ ವಿಜಯಧ್ವಜಾಷ್ಟಕ -

ಅಂಜನಾಸೂನುಸಾನ್ನಿಧ್ಯಾದ್ ವಿಜಯೇನ ವಿರಾಜಿತಮ್ | ಅಜಿತಪ್ರೀತಿಜನಕಂ ಭಜೇಹಂ ವಿಜಯಧ್ವಜಮ್ || 

ಶ್ರೀವಿಜಯಧ್ವಜಯೋಗಿಯತೀಶಂ ನೌಮಿ ನಿರಂತರಮಾನಮಿತಾಂಗ: | ವಾದಿಮದೇಭವಿದಾರಣದಕ್ಷಂ ವ್ಯಾಕೃತಭಾಗವತಂ ಪರಮಾಪ್ತಮ್ ||

ಜಯವಿಜಯೌ ದಂಡಧರೌ ಭೂಯೋ ಭೂಯೋSಭಿವಾದಯೇ ಮೂರ್ಧ್ನಾ | ಭಾಗವತೀ ಟೀಕಾ ಯಾಸೌ ವರ್ಣ್ಯಂತಃ ಪ್ರವೇಷ್ಟುಮೇತಸ್ಯಾ:||

ಮಧ್ವಾಧೋಕ್ಷಜಸಂಪ್ರದಾಯಕ-ಮಹಾಶಾಸ್ತ್ರಾರ್ಥಸಂವ್ಯಂಜಕಃ ಶ್ರೀಮದ್ಭಾಗವತಾಂಬುಧೌ ವ್ಯವಹರನ್ ತಾತ್ಪರ್ಯರತ್ನಾವಲೀಮ್ | ದೃಷ್ಟಾ ಭಾಗವತಾರ್ಥದೀಪ್ತಪದಕೈಃ ಶ್ರೀಕೃಷ್ಣಪಾದಾರ್ಚನಂ ಮಾ ತ್ಯಾಕ್ಷೀದ್ವಿಜಯಧ್ವಜೋ ಭಜ ಮನಸ್ತಂ ಕಣ್ವತೀರ್ಥಸ್ಥಿತಮ್ ||

ಯಸ್ಯ ವಾಕ್ಕಾಮಧೇನುರ್ನ: ಕಾಮಿತಾರ್ಥಾನ್ ಪ್ರಯಚ್ಛತಿ | ಭಜೇ ಮಹೇಂದ್ರಸಚ್ಚಿಷ್ಯಂ ಯೋಗೀಂದ್ರಂ ವಿಜಯಧ್ವಜಮ್

ಸರ್ವದುರ್ವಾದಿಮಾತಂಗದಲನೇ ಸಿಂಹವಿಕ್ರಮಮ್ | ವಂದೇ ಯತಿಕುಲಾಗ್ರಣ್ಯಂ ಯೋಗೀಂದ್ರಂ ವಿಜಯಧ್ವಜಂ||

ಮಧ್ವಾರಾಧಿತಸೀತೇತ-ರಾಮಚಂದ್ರಪದಾಂಬುಜೇ | ಚಂಚರೀಕಾಯಿತಂ ವಂದೇ ಯೋಗೀಂದ್ರಂ ವಿಜಯಧ್ವಜಮ್ ||

ಶ್ರೀಮದ್ಭಾಗವತಾಭಿಧಾನಸುರಭಿಃ ಯಟ್ಟೀಕಯಾ ವತ್ಸಯಾ ಸ್ಪೃಷ್ಟಾ ಶ್ಲೋಕಪಯೋಧರೈಃ ನಿಜಮಹಾಭಾವಂ ಪಯ: ಪ್ರಸ್ನುತೇ | ಲೋಕೇ ಸಜ್ಜನತಾಪಸಂಪ್ರಶಮನಾಯೋದೀರಿತಂ ಸೂರಿಭಿಃ ಶ್ರೀಮಂತಂ ವಿಜಯಧ್ವಜಂ ಮುನಿವರಂ ತಂ ಸನ್ನಮಾಮ್ಯನ್ವಹಮ್

||  ಶ್ರೀವಿಶ್ವಪತಿತೀರ್ಥವಿರಚಿತಂ ಶ್ರೀವಿಜಯಧ್ವಜಾಷ್ಟಕಮ್ ||

ಅಕ್ಷಯ ತೃತಿಯದ ಆಚರಣೆಗಳ ಬಗ್ಗೆ ಎಲ್ಲಿ ಉಲ್ಲೇಖವಿದೆ  ? ಭವಿಷ್ಯ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯಾ ದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ.

ಶ್ಲೋಕ : ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ |ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||

ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ,ದೀಪ , ಪುಷ್ಪ ಮತ್ತು ವಿಶೇಷವಾಗಿ *ಚಂದನಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ

ಅಕ್ಷಯ ತೃತಿಯದ ಅರ್ಥ ಏನು ?

ಶ್ಲೋಕ | ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತಫಲಂ ಲಭೇತ್ ||

ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ ,ತಪಸ್ಸು , ಅಧ್ಯಯನ ,ತರ್ಪಣ ,ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ.,ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಈ ಹೆಸರು ಹೊಂದಾಣಿಕೆಯಾಗುತ್ತದೆ,

ಅಕ್ಷಯ ತೃತಿಯದ ಹಿಂದೂ ಪಂಚಾಗದ ಪ್ರಕಾರ ಯಾವಾಗ ಬರುತ್ತದೆ ?

ಶ್ಲೋಕ | ಪೂರ್ವಾಹ್ಣೇ ತು ಸದಾ ಕಾರ್ಯಾಃ ಶುಕ್ಲೇ ಮನುಯುಗಾದಯಃ |

ದೈವ್ಯೇ ಕರ್ಮಣಿ ಪಿತ್ಯ್ರೇ ಚ ಕೃಷ್ಣೇ ಚೈವಾಪರಾಹ್ಣಿಕಾಃ ||

ವೈಶಾಖಸ್ಯ ತೃತೀಯಾಂ ಚ ಪೂರ್ವವಿದ್ಧಾಂ ಕರೋತಿ ವೈ |

ಹವ್ಯಂ ದೇವಾ ನ ಗೃಹ್ಣನ್ತಿ ಕವ್ಯಂ ಚ ಪಿತರಸ್ತಥಾ ||

ವೈಶಾಖ ಮಾಸ ಶುಕ್ಲಪಕ್ಷ  ತೃತೀಯ ದಿನ ರೋಹಿಣಿ ನಕ್ಷತ್ರವು ಇದ್ದರೆ ಅಂದು ಮೂರುವರೆಗಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ.

ಅಕ್ಷಯ ತೃತಿಯದ ಮುಹೂರ್ತದ ಮಹತ್ವ?

ಗೃಹ ಪ್ರವೇಶ , ಮದುವೆ, ಹೊಸ ಉದ್ಯಮಗಳು, ಹೂಡಿಕೆ ಗಳನ್ನು ಪ್ರಾರಂಭಿ ಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.

ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಬಹುದೇ ?

ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯತೃತೀಯಾ .ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನವನ್ನು ಮಾಡಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ.

ಅಕ್ಷಯ ತೃತಿಯದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ ಇದೆಯಾ ? 

ಮಹಾಭಾರತದಲ್ಲಿ ದ್ರೌಪದಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆ ಯನ್ನು ಕೊಟ್ಟು ಅದರಿಂದ ಅವನು ಊಟ ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿದಂತಹ ಘಟನೆ ನಿಮಗೆ ಗೊತ್ತಿರ ಬಹುದು. ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಅತ್ಯಂತ ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ. 

ಪುರಾಣಗಳಲ್ಲಿ ಅಕ್ಷಯ ತೃತಿಯದ ದಿನದ ಮಹತ್ವ?

ವಿಷ್ಣುವಿನ ಅವತಾರವಾದ ಪರಶು ರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು 

ಶ್ರೀ ಕೃಷ್ಣ ಪರ ಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲ ಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯ ವಾದಂ ತಹ ಐಶ್ವರ್ಯ ಪ್ರಾಪ್ತಿ ಗಳು 

ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣ ವನ್ನು ವ್ಯಾಸರು ರಚಿಸಿದ ಸುಮುಹೂರ್ತವೆ ಅಕ್ಷಯ ತೃತೀಯ. 

ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತಿಯ

ಈ ದಿನವು ತ್ರೇತ ಯುಗದ ಆರಂಭವನ್ನು ಸೂಚಿಸುತ್ತದೆ.ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು, 

ದಾನವೀರ  ಕರ್ಣನು ಜನಿಸಿದ್ದು, 

ಮಹಾಲಕ್ಷ್ಮಿ ಯನ್ನು ಆರಾಧಿಸಿ ಕುಬೇರನು ಅಷ್ಟೈಶ್ವರ್ಯವ ಪ್ರಾಪ್ತಿ ಪಡೆದದ್ದು ,

ಅಕ್ಷಯ ತೃತಿಯದ ಹೇಗೆ ಆಚರಿಸಬೇಕು ? ಹಾಗೂ ಅದರ ಫಲಗಳೇನು ?

ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದು ಕೊಳ್ಳ ಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು 

ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.

ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡ ಬಹುದು ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ.

ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿ ನಗಳು ದೂರವಾಗುತ್ತದೆ

ಹಣ್ಣು ಹಂಪಲುಗಳನ್ನು ದಾನ ಮಾಡಿ ದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.

ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.

ಮಜ್ಜಿಗೆ ಮೊಸರು ದಾನಮಾಡಿದರೆ ಮಾಡಿದ ಪಾಪಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ

ಬೆಳಿಗ್ಗೆ ಗೋ ಮಾತೆಗೆ ಪೂಜೆ ಪುನಸ್ಕಾರಗಳನ್ನು ಮಾಡಿ ನೆನೆಸಿದ  ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದರಿಂದ ಮಹಾ

ಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ. ಅಕ್ಷಯ ತದಿಗೆಯು ಸರ್ವರಿಗೂ ಸುಖ-ಸಂತೋಷ- ಶಾಂತಿ-ಆರೋಗ್ಯ-ಸಂಪತ್ತು

ಸ್ನೇಹ-ಪ್ರೀತಿಗಳನ್ನು ಅಕ್ಷಯವಾಗಿಸಲಿ.

ಸರ್ವೇ ಜನಾಃ ಸುಖಿನೋ ಭವಂತು.



No comments:

Post a Comment