Friday, September 17, 2021

BRAHMA Vishwakarma ವಿಶ್ವಕರ್ಮ


Vishwakarma  ವಿಶ್ವಕರ್ಮ ಜಯಂತಿ
ಪ್ರತಿ ವರ್ಷ ಕನ್ಯಾಸಂಕ್ರಾಂತಿ ಒದಗುತ್ತದೆ. ಅಂದು ವಿಶ್ವಕರ್ಮ ದಿನಾಚರಣೆ. ಕೆಲವರು ವಿಶ್ವಕರ್ಮ ಜಯಂತಿ ಎಂದು ಕೂಡಾ ಆಚರಿಸುತ್ತಾರೆ. ಸೂರ್ಯ ಸಿಂಹರಾಶಿಯಿಂದ  ಕನ್ಯಾರಾಶಿ ಪ್ರವೇಶಿಸಿದ್ದಾನೆ.
ಕನ್ಯಾಸಂಕ್ರಾಂತಿಯಂದು ವಿಶ್ವಕರ್ಮರು ನೇಗಿಲನ್ನು ಕಂಡುಹಿಡಿದು ಮಾನವ ಕುಲಕ್ಕೆ ತುಂಬಾ ಉಪಕಾರ ಮಾಡಿದ್ದರಿಂದ ಅವರನ್ನು ಇಡೀ ಮಾನವ ಕುಲವು ಆರಾಧಿಸುತ್ತದೆ. ಈ ಆರಾಧನೆಯು ತುಲಾಸಂಕ್ರಮಣದವರೆಗೂ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಮಹಾಲಯ ಅಮಾವಾಸ್ಯೆ ಮತ್ತು ನವರಾತ್ರಿಯ ಮೊದಲ ದಿನ ಬರುತ್ತವೆ. ಮಹಾಲಯ ಅಮಾವಾಸ್ಯೆಯು ಸಾವನ್ನೂ, ನವರಾತ್ರಿಯ ಮೊದಲ ದಿನವು ಪುನರ್ಜನ್ಮವನ್ನೂ ಸೂಚಿಸುತ್ತವೆ. ಆದ್ದರಿಂದ ವಿಶ್ವಕರ್ಮ ದಿನಾಚರಣೆಯು ಇನ್ನೂ ಹೆಚ್ಚು ಮಹತ್ವ ಪಡೆಯುತ್ತದೆ.
ವಿಶ್ವಕರ್ಮನು ಗಣೇಶ ಚತುರ್ಥಿಯ ಮರುದಿನ ಅಂದರೆ ಋಷಿಪಂಚಮಿಯ ದಿನದಂದು ತನ್ನ ಐದು ಮುಖಗಳಾದ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಹಾಗೂ ಈಶಾನಗಳಿಂದ ಮನು, ಮಯ, ತ್ವಾಷ್ಟ್ರ, ಶಿಲ್ಪ ಹಾಗೂ ವಿಶ್ವಜ್ಞ ಎಂಬ ಐದು ಜನ ಋಷಿಗಳನ್ನು ಸೃಷ್ಟಿಸಿ ಅವರನ್ನು ವಿವಿಧ ಕುಶಲ ಕಾರ್ಯಗಳ ನಿರ್ಮಾತೃವಾಗಿರುವಂತೆ ಆಶೀರ್ವದಿಸಿದ ಹಾಗೂ ಅವರ ಸಂತತಿಯೇ ಇಂದಿನ ಪಂಚಾಳರು ಎಂಬ ಐತಿಹ್ಯವಿದೆ.
ಯಜುರ್ವೇದವು ವಿಶ್ವಕರ್ಮನನ್ನು "ಅಜ" ಅಂದರೆ ಹುಟ್ಟು ಇಲ್ಲದವನು ಎಂದು ಕರೆಯುತ್ತದೆ. ಆದರೆ ಪುರಾಣಗಳಲ್ಲಿ ವಿಶ್ವಕರ್ಮನು ಅಷ್ಟವಸುಗಳಲ್ಲಿ ಕೊನೆಯವನಾದ ಪ್ರಭಾಸ ಹಾಗೂ ದೇವಗುರು ಬೃಹಸ್ಪತಿಯ ತಂಗಿ ಯೋಗಸಿದ್ಧಿಯ ಮಗ ಎಂದು ವರ್ಣಿಸಲಾಗಿದೆ.
ಕೆಲವರು ವಿಶ್ವಕರ್ಮನನ್ನು ಇಂದ್ರನಿಗೆ ಹೋಲಿಸುತ್ತಾರೆ. ಇಂದ್ರನಂತೆ ವಿಶ್ವಕರ್ಮನೂ ಗಜವಾಹನನಾಗಿ ಆನೆಯ ಮೇಲೆ ಕುಳಿತ ಚಿತ್ರಗಳು ಪ್ರಸಿದ್ಧವಾಗಿವೆ. ಆದರೆ ಕೈಯಲ್ಲಿ ಶಿಲ್ಪಕಲೆಗೆ ಬೇಕಾಗುವ ಸುತ್ತಿಗೆ, ಛಾಣ ಮುಂತಾದ ಆಯುಧಗಳಿವೆ. 
ಪಾಶ್ಚಿಮಾತ್ಯ ಸಭ್ಯತೆಗಳಲ್ಲೂ ವಿಶ್ವಕರ್ಮರನ್ನು ಹೋಲುವ ಕುಶಲಕರ್ಮಿ ದೇವತೆಗಳ ಕಲ್ಪನೆಗಳಿವೆ. ಗ್ರೀಕ್‌ನಲ್ಲಿ ಹೆಫ್ಯಾಸ್ಟಸ್ ಹಾಗೂ ರೋಮನ್ ಪುರಾಣದಲ್ಲಿ ವಲ್ಕೆನೊ ಎಂಬ ದೇವತೆಗಳು ಕುಶಲಕರ್ಮಿಗಳು. ಆದರೆ ಇವರಿಬ್ಬರೂ ಅಗ್ನಿದೇವತೆಗಳು.
ರಾವಣನ ಸ್ವರ್ಣಲಂಕೆ, ಶ್ರೀಕೃಷ್ಣನ ದ್ವಾರಕೆ, ಧರ್ಮರಾಜನ ಇಂದ್ರಪ್ರಸ್ಥ, ಪುರಿಯ ಬಲರಾಮ, ಶ್ರೀಕೃಷ್ಣ, ಸುಭದ್ರೆಯ ಮೂರ್ತಿಗಳು ಇವೆಲ್ಲವೂ ವಿಶ್ವಕರ್ಮ ನಿರ್ಮಿತವೆಂದು ಹೇಳಲಾಗುತ್ತದೆ. ಅಷ್ಟೇ ಏಕೆ? ಎಲ್ಲ ದೇವತೆಗಳ ಆಯುಧಗಳು, ರಥಗಳು ವಿಶ್ವಕರ್ಮ ನಿರ್ಮಿತ. ಕೈಯಲ್ಲಿ ಹಗ್ಗ, ಅಳತೆ ಪಟ್ಟಿ ವಿಶ್ವಕರ್ಮನ ಆಯುಧಗಳು.
ಅಲ್ಲಲ್ಲಿ ವಿಶ್ವಕರ್ಮನ ದೇವಾಲಯಗಳನ್ನು ನಾವು ನೋಡಬಹುದಾದರೂ ಆಂಧ್ರ ಪ್ರದೇಶದ ಮಚಲೀಪಟ್ಟಣ ಹಾಗೂ ಚಂಡೀಗಡದ ಜೀರಕಪುರ ವಿಶ್ವಕರ್ಮ ದೇವಾಲಯಗಳು ಸುಪ್ರಸಿದ್ಧವಾಗಿವೆ.

No comments:

Post a Comment