Thursday, February 09, 2023

HOLI FESTIVAL ಹೋಳಿ ಹಬ್ಬ

HOLI FESTIVAL ಹೋಳಿ ಹಬ್ಬ

ಭಾರತದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರಿಂದ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಯಾವುದೇ ಹಬ್ಬವೂ ತನ್ನದೇ ಆದ ಆಚಾರ ಸಂಪ್ರದಾಯಗಳನ್ನು ಹೊಂದಿರುತ್ತದೆ. ಅದೇ ರೀತಿ ಹೋಳಿ ಬಣ್ಣಗಳ ಹಬ್ಬವಾಗಿದ್ದು, ದೂರದ ಊರಿನವರು ತಮ್ಮ ತಾಯ್ನಾಡಿಗೆ ಬಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವನ್ನು ವಸಂತ ಮಾಸದ ಮೊದಲಲ್ಲಿ ಆಚರಿಸಲಾಗುತ್ತದೆ. ಚಳಿಗಾಲದ ಕೊನೆಯನ್ನು ವಸಂತದ ಆಗಮನವನ್ನು ಸಾರುವ ಹಬ್ಬವಾಗಿದೆ. ಜನರು ಬಣ್ಣಗಳನ್ನು ಪರಸ್ಪರ ಬಣ್ಣ ಹಚ್ಚುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ.

ಹೋಳಿ ಹಬ್ಬದ  ದಿನದಂದು ಮಕ್ಕಳಿಂದ ದೊಡ್ಡವರ ತನಕ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದ ಆಚರಣೆಯ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ ಊರಿನ ಕಾಮನ ಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳ ವಾದ್ಯಗಳನ್ನು ಊದುತ್ತಾರೆ ಅದಲ್ಲದೆ ಪರಸ್ಪರ ಮೋಜಿಗಾಗಿ ಬೈಗುಳ ಹೇಳುವುದು , ಬಣ್ಣದ ನೀರು, ಸಗಣಿಯ ಕಲಸಿದ ನೀರನ್ನು ಎರಚುತ್ತಾರೆ

ಆ ದಿನ ಮನೆಯ ಯಥಾಸಾಂಗ ಪೂಜಾ ಆರತಿಯ ಮುಗಿದ ಮೇಲೆ ಊಟಕ್ಕೆ ಕೂಡುವ ಮೊದಲು ಮನೆಯ ಎಲ್ಲರೂ ಅಂಗಳಕ್ಕೆ ಬಂದು ಐದು ಕುಳ್ಳುಗಳು,ಐದು ಕಟ್ಟಿಗೆಯ ತುಂಡುಗಳು ಒಂದಾಗಿ ಒಟ್ಟಿ, ಕೂಡಿಸಿ ಅರಿಶಿಣ ಕುಂಕುಮ ಹೂಗಳಿಂದ ಅಲಂಕರಿಸಿ  ಆರತಿ ಮಾಡಿ ದಶಾಂಗವನ್ನು ಹಚ್ಚಿ ನೈವೇದ್ಯ ತೋರಿಸಿ ಮುತೈದೆಯೋಬ್ಬಳು ಮನೆಯ ಒಲೆಯಲ್ಲಿಯ ಅಗ್ನಿಯನ್ನು ತಂದು ಕುಳ್ಳುಗಳ ಕೆಳಭಾಗದಲ್ಲಿ ಇಟ್ಟು ಮತ್ತೊಮ್ಮೆ ಅರಿಶಿಣ ಕುಂಕುಮ ಹಚ್ಚಿ ತಾನೂ ಹಚ್ಚಿಕೊಂಡು ನಮಸ್ಕರಿಸುವಳು 

ಅಗ್ನಿಯಿಂದ ಹೊತ್ತಿ ಜ್ವಾಲೆಯಾಗಿ ಕಾಣಿಸಿದ ನಂತರ ಮನೆಯ ಹಿರಿಯ ಮತ್ತು ಮಕ್ಕಳು ಒಟ್ಟಾಗಿ ಪೂರ್ವಕ್ಕೆ ಮುಖಮಾಡಿ ಅಗ್ನಿಗೆ ಐದು ಸುತ್ತು ಹಾಕುತ್ತ ಬೊಬ್ಬೆ ಇಡುವ ಸಾಂಪ್ರದಾಯವಿದೆ. ಇದು ಹೋಲಿಕೆಯನ್ನು ಸುಡುವುದರ ಸಂತಾಪ ವ್ಯಕ್ತಪಡಿಸುವುದರ ದ್ಯೋತಕವಾಗಿದೆ. ಆ ಅಗ್ನಿಯಲ್ಲಿ ಕಡಲೆ, ಕೊಬ್ಬರಿಗಳನ್ನೂ ಅರ್ಧಂಬರ್ಧ ಸುಟ್ಟು ತಿನ್ನುವುದಿದೆ. ಇದರಿಂದ ಹಲ್ಲುಗಳು, ಜಠರ ಸಂಬಧಿತ ದೋಷಗಳು ದೂರಾಗುತ್ತವೆ  ಎಂಬ ನಂಬುಗೆಯು ಬೇರೂರಿದೆ             

ಹೋಳಿಯ ಇತಿಹಾಸ

ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದನು. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದನು. ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ್ದನು. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ್ದನು. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ.

ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಈ ವೇಳೆ ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ.

ಮತ್ತೊಂದು ಕಥೆ:

ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾ ಇದ್ದಳು. ಹಿರಣ್ಯಕಶಿಪು ತನ್ನ ರಾಜ್ಯದಲ್ಲಿ ದೇವರನ್ನು ಪೂಜಿಸುವುದನ್ನು ನಿಷೇಧಿಸಿದ್ದು, ತನ್ನನ್ನೇ ದೇವರೆಂದು ಪೂಜಿಸುವಂತೆ ಆದೇಶಿಸಿದ್ದನು. ಆದರೆ ಆತನ ಮಗ ಪ್ರಹ್ಲಾದ ವಿಷ್ಣು ದೇವರ ಪರಮ ಭಕ್ತನಾಗಿದ್ದನು. ತಾನು ಎಷ್ಟೆ ಪ್ರಯತ್ನ ಮಾಡಿದರು ಮಗನಿಂದ ವಿಷ್ಣು ದೇವರ ಆರಾಧಾನೆಯನ್ನು ನಿಲ್ಲಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಹಿರಣ್ಯಕಶಿಪು ತನ್ನ ಮಗನನ್ನು ದಂಡಿಸಲು ತೀರ್ಮಾನಿಸುತ್ತಾನೆ. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ ತನ್ನ ತಂಗಿ ಹೋಲಿಕಾಳ ಸಹಾಯವನ್ನು ಹಿರಣ್ಯಕಶಿಪು ಪಡೆಯುತ್ತಾನೆ. ಹಿರಣ್ಯಕಶಿಪು ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕೂರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಹೋಲಿಕಾ ಅಣ್ಣನ ಆಜ್ಞೆಯಂತೆ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾಳೆ. ಆದರೆ ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ, ಆಕೆಯ ವರ ನಿಷ್ಫಲವಾಗುತ್ತದೆ. ಇದರಿಂದ ಹೋಲಿಕಾ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರಬರುತ್ತಾನೆ. ಅದಕ್ಕಾಗಿ ಪ್ರತೀ ವರ್ಷ ಹೋಲಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕಾಳನ್ನು ಸುಡುತ್ತಾರೆ.

ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಸಾರ ಈ ಹಬ್ಬದ ಹಿಂದಿದೆ. ಹೋಲಿಕಾಳಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ

       ಹೋಳೀ ಹುಣ್ಣಿಮೆಯಿಂದ ಐದನೇ ದಿನದಂದು ಪರಸ್ಪರ ಬಣ್ಣ ಬಳೆಯುವ, ಬಣ್ಣದ ನೀರು ಎರಚುವ ಕಾರ್ಯಕ್ರಮ

.


No comments:

Post a Comment