Friday, February 24, 2023

GAJENDRA MOKSHAM ಗಜೇಂದ್ರ ಮೋಕ್ಷಮ್

ಗಜೇಂದ್ರ ಮೋಕ್ಷಮ್                                    
ಶ್ರೀನಾಥ ಪಾರ್ವತಿಯನಾಥ ಶರಣೆಂಬೆ|
ವಾಣಿ ಭಾರತಿ ಗಜ ಮುಖನ ಬಲಗೊಂಬೆ ||
ನಾನು ಬಲ್ಲಷ್ಟು ಪೇಳುವೆನು ಈ ಕಥೆಯ |
ಶ್ರೀನಾಥ ಗಜಗೊಲಿದ ಸಂಗತಿಯ || ೧ || 
ಇತ್ತ ಛಪನ್ನ ದೇಶದ ರಾಯರೊಳಗೆ |
ಉತ್ತಮದ ದೇಶ ಗೌಳದೇಶದಲ್ಲ ||
ಭಕ್ತ ವಿಷ್ಣುವಿನಲ್ಲಿ  ಇಂದ್ರದ್ಯುಮ್ನ ನೃಪನು |
ಮತ್ತೆಭೂಸುರ ಪಾಲಿಸುತ್ತಲಿ ತಾನು || ೨ ||
ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ |
ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ ||
ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ |
ಆನೆಕುದುರೆ ರಾಜ್ಯಗಳ‌ ತ್ಯಜಿಸುತ್ತ || ೩ ||
ಸರ್ಪಶಯನನ ಧ್ಯಾನದಲ್ಲಿದ್ದ ತಾನು |
ಮತ್ತೆ ತ್ರಿಕೊಟಪರ್ವತಕಾಗಿ ಬಂದು ||
ನಾಗಶಯನನ ಧ್ಯಾನದಲ್ಲಿದ್ದ ತಾನು |
ಮೇರುಮಂದರ ಸಮೀಪ ಬಂದು ||೪ ||
ಸಿದ್ಧ ಕಿನ್ನರರು ಗಂಧರ್ವರಿಗೆ ಸ್ಥಾನ |
ಎದ್ದೆದ್ದು ಕುಣಿವ ಮೃಗಖಗಗಳ ಸೀಮ ||
ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ |
ಸುತ್ತ ಸುವರ್ಣ ವಸ್ತುಗಳ ಧಾಮ || ೫ ||
ಹಲವು ನದಿಕೊಳ ಹಲವು ಸರೋವರದಿ |
ಹಲವು ಪುಷ್ಪಗಳು ಮೆರೆವ ಅಳಿಕುಲದಿ ||
ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ |
ಕುಣಿವನವಿಲು ಗಿಳಿಕೋಗಿಲೆ ಗಾನ || ೬ ||
ಬಂದು ನದಿಯಲ್ಲಿ ಸ್ನಾನವನ ಮಾಡಿದನು |
ಚಂದ ದಿಕ್ಕಿದನು ದ್ವಾದಶ ನಾಮಗಳನು ||
ಸಂಧ್ಯವಂದನೆ ಮಾಡಿ ಪದ್ಮ ಆಸನದಿ |
ಇಂದಿರಾಪತಿ ಮನದೊಳಗೆ ತಾನು || ೭ ||
ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ |
ನಿಂದಿರ್ದು ವಂದನೆಯ ಮಾಡಲಿಲ್ಲೆಂದ ||
ಎಂದೆನುತ ಮನದಿ ಕೋಪಿಸುತ ಶಾಪಿಸಿದ |
ಕುಂಜರರೂಪದಿ ಜನಿಸಹೋಗೆಂದ || ೮ ||
ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ |
ಉಶ್ಯಾಪ ಎಂದಿಗಾಗುವುದೆನುತ ಪೇಳು ||
ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ |
ಉಶ್ಯಾಪಅಂದಿಗೆಇಹುದೆಂದುಪೇಳೆ ||೯ ||
ಜ್ಞಾನವಡಗಿದವು ಅಜ್ಞಾನ ಆವರಿಸೆ |
ಸೂರ್ಯ ಮುಳುಗಿ ಕತ್ತಲೆ ಮುಸುಕಂತೆ ||
ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು |
ಅನೆಯಾದ ನೃಪ ಕ್ಷಣದಿ ತಾನು || ೧೦ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ ||
ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು |
ಕಾಡಿನೊಳ ಸಂಚರಿಸುತ್ತಿದ್ದನು || ೧೧ ||
ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ |
ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ ||
ದಟ್ಟ ಡವಿಯೊಳಗೆ ಸಂಚರವ ಮಾಡುತಲೆ |
ಬತ್ತಿಕೆರೆತೊರೆಯು ಬೇಸಗೆಬರಲು|| ೧೨ ||
ಕಂಡಕಂಡಲ್ಲಿ ಏರುತಲಿ ಇಳಿಯುತಲಿ |
ತುಂಡುತುಂಡಾಗಿ ಗಿಡವ ಮುರಿಯುತಲಿ||
ತಂಡತಂಡದಲ್ಲಿದ ತನ್ನ ಸತಿ ಸುತರು |
ಬೆಂಡಾಗಿ ಹಸಿವು ತೃಷೆಯಬಳಲಿ || ೧೩ ||
ಬಾಳೆ ಕಿತ್ತಳೆನಿಂಬೆ  ಮಾದಲವುರ|
ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು ||
ಮೇಲಾದ ಫಲಪುಷ್ಪದಿಂದ ಶೋಭಿಸಲು |
ಕೊಳದ ತಾವರೆ ಕಂಡ ಗಜರಾಜ || ೧೪ ||
ಹೊಳೆವ ನವರತ್ನ ಮಾಣಿಕ್ಯ ಸೋಪಾನ |
ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು ||
ನಲಿಯುತಿವೆ ಹಲುವ ಹಕ್ಕಿ ಹಂಸಗಳು |
ಕೊಳಪರಿಮಳಿಸೆ  ಹೊಕ್ಕ ಗಜವ ||೧೫ ||
ಹೊಡೆ ಬಡೆಯುತಲಿ ಕುಡಿಯುತಲಿ ನೀರ |
ಮಡುವಿನಲಿ ಚಲ್ಲುತಲಿ ನಲಿದುವೊಂದ ||
ಕಾಡಾನೆ ಕರಿಯಾನೆ ಮರಿಯಾನೆ ಸಹಿತ |
ಕೂಡಿಕೊಂಡಿರೆ ಸಮೃದ್ಧ ಜಲದಿ || ೧೬ ||
ಮಡುವಿನ ಮಕರಿ ಮುನಿ ಶಾಪದಲಿಂದು |
ನಡೆದೆ ಹಲಕಾಲದಿ ತಪಿಸಿ ಜೀವಿಸುತ್ತಿರೆ ||
ಮಡುವಲ್ಲಿ ಮದಗಜ ಪೊಕ್ಕು ಕಲುಕುತಲಿ |
ತಡೆಯಮಕರಿ ಹಿಡಿಯೆಕರಿಕಾಲು || ೧೭ ||
ಅತ್ತಿತ್ತ ನೋಡಿ ಸುತ್ತಲೂ ನೋಡಿದನು |
ಎತ್ತ ನೋಡಿದರೂ ಬಿಡದು ಮಕರಿ  ||
ಮತ್ತೆ ನೋಡಿ ಮಗದೊಮ್ಮೆ ನೋಡಿದನು|
ಮತ್ತೆ ನೋಡಿದರು ಬಿಡದುಮಕರಿ|| ೧೮ ||
ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ |
ತಮ್ಮ ಕೈಲಾಗದೆಂದೆನುತ ತಿರುಗಿದರು |
ಎನ್ನ ಪುಣ್ಯದ ಫಲವು ಹೋಗಿ ನೀವೆಂದ |
ದುಮ್ಮಾನದಿಂ ದೂರದಲ್ಲಿದ್ದರವರು||೧೯ ||
ಮಕರಿ ಕಚ್ಚುತಲಿ ಸೆಳೆಯುತಲೆ ಆ ಕಾಲು |
ರಕ್ತಮಯವಾಗಿ ತುಂಬಿತು ಕೊಳದ ನೀರು |
ಅಕ್ಕಟಾ ಎನಗಿನ್ನು ಗತಿಯಾರು ಎನುತ
ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜವ|| ೨೦ ||
ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ |
ಸಚ್ಚಿದಾನಂದ ಸರ್ವೇಶ್ವರನೆ ಕಾಯೋ ||
ಮೆಚ್ಚಿ ಭಕ್ತವತ್ಸಲ ಭಂಜನನೆ ನೀ ಕಾಯೋ |
ಇಚ್ಛೆ ಪಡುತೇನೆ ಕರುಣಿಸಿಕಾಯೋ||೨೧||
ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ |
ಇಂಬಿಟ್ಟ್ ಸಲಹೋ ಜಗದೀಶ ಕಾಯೋ ||
ಇಂಬು ಜಂಗಮ ಸ್ಥಾವರದಿ ಪರಿಪೂರ್ಣ |
ಎಂಬ ನೀ ಬಂಧನವ  ಬಿಡಿಸೊ || ೨೨ ||
ಇಹ ಭುವನ ಈರೇಳು  ಹೃದಯದೊಳಿಟ್ಟೆ |
ಬಹುಶ ಗಜರಾಜ ವೊರೆಯಿಟ್ಟ ಕಾದುತ್ತ  ||
ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ|
ಬಹಳನೊಂದೆನೆ ಸ್ವಾಮಿಕಾಯೆಂದ ||೨೩||
ವೇದಗಳ ಕದ್ದು ಕೊಂಡೊಯ್ದ ದಾನವನ |
ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ ||
ಆದಿ ನಿಗಮವ ತಂದು ಕಮಲಜನಿಗಿತ್ತೆ |
ವೇದಾಂತ ಮತ್ಸಾವತಾರ ಶರಣು || ೨೪ ||
ಸುರಾಸುರರು ಪಾಲ್ಗಡಲ ಮಥಿಸುತಿರಲು |
ಮರವೈರಿ ಹಾಸಿಗೆ ಹುರಿ ಮಾಡಿಕೊಂಡು ||
ಭರದಿ ಮಂದರಗಿರಿ ಇಳಿಯುತಿರೆ ಬಂದು |
ಗಿರಿಯನೆತ್ತಿದ ಕೂರ್ಮಗೆ ಶರಣು || ೨೫ ||
ಸುರುಳಿ ಸುತ್ತಿದಭೂಮಿ ದಾಡೆಯಲಿ ತಂದೆ |
ದುರುಳ ಹಿರಣ್ಯಾಕ್ಷನಬೇಗದಲಿ ಕೊಂದೆ ||
ಧರಣಿದೇವಿಯನು ಸದಮಲದೊಳು ಗೆದ್ದೆ |
ವರಹಾವತಾರ ಶ್ರೀಹರಿಗೆ ಶರಣು || ೨೬ ||
ಬಾಲಕನು ಕರೆಯಲಿಕೆ ಕಂಬದಲಿ ಬಂದೆ |
ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ ||
ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ |
ಶ್ರೀಲಕ್ಷ್ಮಿಪೊಡವಿಪ ನೃಸಿಂಹಶರಣು| ೨೭||
ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ |
ನೆಲವನೆಲ್ಲ ಮೂರು ಅಡಿಮಾಡಿ ಅಳೆದೆ ||
ಅಲೆದ ಪಾದದಲಿ ಭಾಗಿರಥಿಯ ತಂದೆ |
ಚೆಲುವ ವಾಮನಮೂರ್ತಿ ಶರಣು ||೨೮ ||
ಕ್ಷತ್ರಿಯ ನೃಪರ ಕುಲವ ಸಂಹರಿಸಿ |
ನೆತ್ತರಲಿ ಸ್ನಾನತರ್ಪಣವ ನೀ ಕೋಟ್ಟೆ ||
ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ |
ಇತ್ತ ಭಾರ್ಗವ ಹರಿಗೆ ಶರಣು || ೨೯ ||
ಹರನ ಬಿಲ್ಲನೆ ಮುರಿದು ಧರಣಿಜೆ ತಂದೆ |
ದುರುಳ ರಾವಣಶಿರಗಳ ಹತ್ತು ತರಿದೆ ||
ವರ ವಿಭೀಷಣಗವನ ರಾಜ್ಯ ಗಳನಿತ್ತೆ |
ಚರಣರಕ್ಷಕ ಸೀತಾಪತಿಯೆ ಶರಣು|| ೩೦||
ವರ ಮಧುರೆಯಲಿ ಹುಟ್ಟಿ ಗೋಕುಲದಿ ಬೆಳೆದೆ |
ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ ||
ತರುವ ಕಾಯುತ ಕೊಂದೆ ಹಲವು ರಕ್ಕಸರ |
ವೀರ ಬಲರಾಮಕೃಷ್ಣಂಗೆ ಶರಣು || ೩೧ ||
ವ್ರತೆ ವ್ರತವ ತ್ರಿಪುರಸತಿಯರಪಹರಿಸಿದನೆ |
ಕಸುವಿನೋಲ್ಪೃ ಅಶ್ವತ್ಥನಾಗಿ ಮೆರೆದವನೆ ||
ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ |
ಪಶುಪತಿಪ್ರೀಯವವತಾರ ಶರಣು ||೩೨ ||
ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು |
ಬಿನ್ನಾಣದಿಂದ ತುರುಗವನೇರಿಕೊಂಡು ||
ಬನ್ನ ಪಡಿಸುತ ಹಲವು ಪಾತಕರ ಕೊಂದೆ |
ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು|೩೩||
ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ |
ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ ||
ಕರೆ ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ |
ಬರಿಕಾಣೆ ಎಂದೆನದೆ ಕರುಣಿಸಿರಕ್ಷಿಸೈ||೩೪ |
ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ |
ಆ ಯಾವ ಹರಿಬಂದು ಕಾಯ್ವನೋ ಎನ್ನ ||
ಈವ ಚೀರಿ ಕೂಗಿ ಮೊರೆಯಿಟ್ಟ ಗಜರಾಜ |
ಆವ ದೈತ್ಯಾಂತಕನೆ ಕಿವಿಗೋಟ್ಟುಕೇಳು| ೩೫|
ನೆಲಸಿದ್ಧ ಕ್ಷಿರಾಬ್ಧಿಯಲ್ಲಿ  ವೈಕುಂಠ  |
ಮೇಲೆ ಶೇಷನ ಹಾಸಿಗೆಯ ಕುಳ್ಳಿರ್ದ ||
ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು |
ಆಲೈಸಿ ಕೇಳಿದನೆ ಅಜನಪೆತ್ತವನು|| ೩೬ ||
ಶಂಕಚಕ್ರಗಳಿಲ್ಲವೆಂದು ಶಂಕಿಸದೇ |
ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ ||
ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ |
ಪಂಕಜನಾಭ ಬಂದ ಕೊಳದ ಕಡೆಗೆ|೩೭ ||
ಸಿದ್ಧ ಉಪ್ಪರಿಗೆಯಿಂದಿಳಿದು ಬರುವಾಗ |
ಸದ್ದು ವಜ್ರವು ಕದಪುಗಳು ಹೊಳೆಯೆ||
ಹೊದ್ದ ಪೀತಾಂಬರ ನೆಲಕೆ ಅಲೆಯುತಲಿ |
ಎದ್ದುಬಂದ ದಯಾಂಬುಬಂದಂತೆ|| ೩೮ ||
ಸಿಂಧುಸುತೆ ಪತಿಯೆಲ್ಲಿ ಪೋದನೆನುತ |
ಮಂದಗಮನೆ ಬರಲು ಪುರವೆಲ್ಲ ತೆರಳೆ ||
ವಂದಿಸದ ಗರುಡ ಗಂಧರ್ವರೊಗ್ಗಿನಲಿ |
ಅಂದಾಗ ಶಂಖಚಕ್ರವು ಕೂಡಿಬರಲು| ೩೯|
ಹರಿಯು ಗರುಡನನೇರಿ ಕರಿಯತ್ತ ಬರಲು |
ಹರ ಪಾರ್ವತಿ ನಂದಿಯನರಿಕೊಳುತ ||
ಶಿರವ ಮೇಲಿನ ಗಂಗೆ ತುಳುಕಾಡುತಿರಲು |
ಹರ ಬಂದ ಕೈಲಾಸದಿಂದ ಇಳಿದು || ೪೦ ||
ತೊಡೆ ಮೇಲಿನ ಗೌರಿದೇವಿಯಳ ಸಹಿತ |
ಮುಡಿಯ ಗಂಗೆಯುತುಳುಕಾಡುತಿರಲು ||
ಮೃಡ ಪಾರ್ವತಿದೇವಿ ವೃಷಭವನೇರಿ |
ಒಡನೆ ಹರ  ಕೈಲಾಸದಿಂದಿಳಿದು || ೪೧ ||
ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ |
ದೇವಪುತ್ರಾದಿ ಸನಕಾದಿಗಳು ಕೂಡಿ ||
ದೇವ ಋಷಿ ನಾರದರಂದು ನಡೆತಂದ |
ಸರ್ವ ಸ್ವರೂಪವ ನೆರೆದರಂದು || ೪೨ ||
ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ |
ಬಂಧ ಚಕ್ರವ ಸೋಂಕಿ ಒಡನೆ ಪರಿಹರಿಸಿ|| 
ಅಂದಾಗ ತವ ಶಾಪ ಉಶ್ಯಾಪವಾಗಿ |
ಗಂಧರ್ವ ರೂಪಿ ನಿಂತಿತಾ ಮಕರಿ || ೪೩ ||
ಮದಗಜಕೆ ಸೋಕುತೆ ಹರಿಯ ದರ್ಶನವು  |
ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ ||
ಸಿದ್ಧ ಪಿತಾಂಬರವು ಕಿರೀಟ ಕುಂಡಲವು |
ಇದ್ದ ತುಳಸಿಮಾಲೆ ಕೊರಳಿಗೊಪ್ಪಿ|| ೪೪ ||
ಜಯ ಜಗನ್ನಾಥ ಜಯ ವಿಶ್ವಮೂರ್ತಿ |
ಜಯಜನಾರ್ಧನ ಜಯವಿಶ್ವರೂಪ ||
ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ |
ಜಯವೆಂದು ಪದಕೆ ಎರಗಿದನು || ೪೫ ||
ಇಂದಿವನ ಭಾಗ್ಯವ ನೋಡುವರು ಕೆಲರು |
ಇಂದಿರಾ ಪತಿಯ ಕೊಂಡಾಡಿ ಕೆಲರು ||
ಮಂದಾರ ಹೂಮಳೆಯ ಕರೆಯುತ್ತ ಸುರರ |
ದುಂದುಭಿ ವಾದ್ಯವೈಭವಗಳಲ್ಲಿ || ೪೬ ||
ಸಿರಿಸಹಿತ ಹರಿ ಗರುಡ ನೇರಿಕೊಂಡು |
ಕರಿರಾಜನೊಡನೆ ವೈಕುಂಠಕ್ಕೆ ಬರಲು ||
ಹರಪಾರ್ವತಿಯರು ಕೈಲಾಸಕೆ ತೆರಳೆ |
ತರತರದ ವಾಹನದಿ ಸುರರು ತೆರಳಿ||೪೭ ||
ನಿಸ್ಸಂಶಯದಿ ಕಥೆ ಹೇಳಿ ಕೇಳಿದವರಿಂಗೆ  |
ದುಃಸ್ವಪ್ನ ದುರ್ಬುದ್ಧಿ ದುರ್ವ್ಯಸನ ಕಳೆದು ||
ವತ್ಸಲನೆ ಸರ್ಪಾರಿ  ಧ್ಯಾನ ದೊಳಗಿರಲು |
ಸತ್ಸಂಗ ಸಾಯುಜ್ಯ ದೊರಕಲಹುದು | ೪೮ |
ಹರಿಯ ನರ ಹರಿಯ ನೆನೆ ಮನವೆ |
ಮರೆಯದೆ ಮಾಧವನ ಕಂಡ್ಯ ಮನವೆ ||
ಹರಿಯ ನೆನೆದವಗೆ ಪದವಿಯದು ಉಂಟು |
ಕರಿರಾಜವರದನ್ನ ಶರಣು ಭಜಿಸೆ|| ೪೯ ||
ಜಯತು ಧೃವರಾಜಗೇ ವರವಿತ್ತ ದೇವ |
ಜಯತು ಪ್ರಲ್ಹಾದ S ಭಯವಿತ್ತ ದೇವ ||
ಜಯತು ದ್ರೌಪದಿಮಾನ ಕಾಯ್ದ ದೇವಾ |
ಜಯತು ಹಯವದನ ವಾಸುದೇವ |೫೦ |

ಶ್ರೀ ಮದ್ವಾದಿರಾಜ ಸ್ವಾಮಿಗಳು ಶ್ರೀ ಪಾದಂಗಳವರ ವಿರಚಿತ ಗಜೇಂದ್ರ ಮೋಕ್ಷಮ್  ಸಂಪೂರ್ಣಂ 


No comments:

Post a Comment