Sunday, June 30, 2024

DHANURMAS ಭೀಮಸೇನ -ಧನುರ್ಮಾಸ

       ಧನುರ್ಮಾಸ - ಭೀಮಸೇನ

           ಸನಾತನ ಭಾರತೀಯ ಸಂಸ್ಕೃತಿಯ ಪವಿತ್ರ ಇತಿಹಾಸವಾದ ಮಹಾಭಾರತದಲ್ಲಿ ಕೌರವೇಶ್ವರ ಧೃತರಾಷ್ಟ್ರನು ಮೋಸದ ಆಟಕ್ಕೆ ಅವಕಾಶ ಕೊಟ್ಟಿದ್ದರಿಂದ ತನ್ನ ತಮ್ಮ ಪಾಂಡುರಾಜನ ಮಕ್ಕಳಾದ ಐದುಜನ ಕೌಂತೇಯರನ್ನು ಅವರದೇ ರಾಜ್ಯಕ್ಕೆ ದೂತ ಕ್ರೀಡೆಯಲ್ಲಿ ವಂಚನೆ ಮಾಡಿ 12 ವರ್ಷ ವನವಾಸ 13 ನೆಯ ವರ್ಷ ಅಜ್ಞಾತವಾಸಕ್ಕೆ ಅಟ್ಟಿದನು. 

ಅಜ್ಞಾತವಾಸದಲ್ಲಿ ಗುರುತಿಸಲ್ಪಟ್ಟರೆ ಅವರು ಮತ್ತೆ ವನವಾಸವನ್ನು ಅನುಭವಿಸಬೇಕು, ಮತ್ತೆ ಅಜ್ಞಾತವಾಸ, ಮತ್ತೆ ಗುರುತಿಸುವುದು ಹೀಗೆ ನಿರಂತರ ವನವಾಸವೇ ಪಾಂಡವರು ಅನುಭವಿಸುತ್ತಿರಬೇಕು ತಾವು ಕೌರವರು ಅನಾಯಾಸವಾಗಿ ರಾಜಭೋಗವನ್ನು ನಿರಂತರ ಅನುಭವಿಸಬೇಕು. ಇದು ಕೌರವೇಶ್ವರನ ದುಷ್ಟಬುದ್ಧಿ. ಪಗಡೇ ಆಟ, ಷಡ್ಯಂತ್ರ, ಯುದ್ಧ ಈ ವಿಷಯಗಳಲ್ಲಿ ಕಪಟ, ಕುಟಿಲ ನೀತಿ ಇದ್ದದ್ದೆ ಅದೇನು ಹೊಸತಲ್ಲ, ಕ್ಷತ್ರೀಯರಿಗೆ ಗೊತ್ತಿರುವ ವಿಷಯವೇ.

ಇಲ್ಲೋಂದು ಮಾತು, ಪಗಡೆ ಆಟಕ್ಕೆ, ಸ್ಪರ್ಧೆಗೆ, ಯುದ್ಧಕ್ಕೆ ಯಾರಾದರೂ ಆಹ್ವಾನಿಸಿದರೆ ಕ್ಷತ್ರೀಯರು ನಿರಾಕರಿಸುವಂತಿಲ್ಲ , ಸರಿ.. ಆದರೆ ಇದು ಮನರಂಜನೆಗಾಗಿ ಆಡುವ ಆಟವೇ ಹೊರತು ಯಾವುದನ್ನು ಯಾರನ್ನು ಪಣಕ್ಕಿಟ್ಟು ಆಡುವುದು ಸರ್ವಥಾ ಬೇಡ ಎಂದು ಖಡಾ ಖಂಡಿತವಾಗಿ ಹೇಳಬಹುದಿತ್ತು, ಧರ್ಮರಾಜನ ಧರ್ಮ ಬುದ್ಧಿ ಎಲ್ಲಿ ಹೋಗಿತ್ತು, ಇಷ್ಟೊಂದು ಧರ್ಮಜ್ಞನಾಗಿದ್ದರೇ ಇನ್ನೋಬ್ಬರನ್ನು ಪಣಕ್ಕೆ ಹಚ್ಚುವ ಅಧಿಕಾರ ಇವನಿಗೆ ಯಾರು ಕೊಟ್ಟರು, ಅವಿವೇಕದ ಪರಾಕಾಷ್ಠೆಯನ್ನೇ ತೋರ್ಪಡಿಸಿದ. ಇರಲಿ.

          ಹೀಗೆಯೇ ಪಾಂಡವರು ವನವಾಸದಲ್ಲಿದ್ದಾಗ ಆಗಿದ್ದ ಆಗುತ್ತಲಿರುವ, ಮುಂದೆ ಆಗಬಹುದಾದ ಕೌರವನಿಂದ ಮೋಸ, ವಂಚನೆ, ಅನಾನುಕೂಲತೆಗಳಿಗೆ ಪ್ರತಿಭಟಿಸುವ ಶಕ್ತಿ, ವಿವೇಕ ಪೂರ್ಣ ವಿಚಾರಧಾರೆ, ಧೈರ್ಯ ಮತ್ತು. ಅನಾನುಕೂಲತೆಯನ್ನೇ ಅನುಕೂಲವಾಗಿ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಕೌಶಲ್ಯ ಗಳನ್ನು ಪಡೆದರು. 

    ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ಪಾಂಡವರು ಧೌಮ್ಯ ಋಷಿಗಳನ್ನು ಕಂಡರು. ಅವರನ್ನೇ ತಮ್ಮ ಚಂದ್ರ ವಂಶದ ಕುಲಗುರುಗಳನ್ನಾಗಿ ಯೋಜಿಸಿದರು. ಅವರು ಹೇಳಿದಂತೆ, ಆದೇಶದಂತೆ ನಡೆಯಲನುವಾಗಿ ಸರ್ವಾನುಮತದಿಂದ ನಿಶ್ಚಯಿಸಿದರು, ಹೀಗಿರುವಾಗಲೇ ಅನೇಕ ಹಿತಕರ ಅಹಿತಕರ ಘಟನೆಗಳು ನಡೆದವು ಶ್ರೀ ಕೃಷ್ಣನ ಕೃಪಾ ಕಟಾಕ್ಷದಿಂದ, ಐವರು ತಮ್ಮ ಕರ್ತೃತ್ವ ಶಕ್ತಿಯಿಂದ, ಸದ್ವಿವೇಕ ಬುದ್ಧಿಯಿಂದ, ಧೈರ್ಯದಿಂದ ಭಕ್ತಿಪರಾಯಣತೆಯ ಕಾರಣದಿಂದ ಅಪಾಯಗಳಿಂದ ಪಾರಾಗಿದ್ದಿದೆ.

      ಹೀಗಿರುವಾಗ ಧನುರ್ಮಾಸ ಎಂಬ ಸನಾತನ ವ್ರತಾಚರಣೆ ಬಂತು, ಧೌಮ್ಯ ಋಷಿಗಳ ಉಪದೇಶದಂತೆ ಮಾರ್ಗಶೀರ್ಷ ಕೃಷ್ಣಪಕ್ಷದಿಂದ ಪೌಷ ಕೃಷ್ಣ ಪಕ್ಷದ ಅವಧಿಯಲ್ಲಿ ಸೂರ್ಯನ ಅಸ್ತಿತ್ವ ಮೂಲ, ಪೂರ್ವಾಷಾಢಾ,ಉತ್ತರಾಷಾಢಾ ಮೊದಲ  ಚರಣದಲ್ಲಿ ಚರಿಸುವ ಈ ಸೂರ್ಯನ ಕಾಂತಿ ವೃತ್ತಕ್ಕೆ ಧನುರ್ಮಾಸವನ್ನು ಕರೆಯುತ್ತಿದ್ದು ಆ ತಿಂಗಳು ಪೂರ್ಣ ಧನುರ್ಮಾಸದ ಆಚರಣೆ ಮಾಡಬೇಕು, ಇಲ್ಲವಾದರೆ ವೈಧೃತಿ, ವ್ಯತಿಪಾತ‌ ಯೋಗಗಳನ್ನು ನೋಡಿಕೊಂಡು ಒಂದು ದಿನವಾದರೂ ಆಚರಿಸಲೇಬೇಕೆಂಬ ಸನಾತನ ಪರಂಪರೆಯ ಉಕ್ತಿ

   ಈ ಧನುರ್ಮಾಸದ ಆಚರಣೆ ಮಾಡುವುದಾಗಿ ಪಾಂಡವರು ಧೌಮ್ಯ ಋಷಿಗಳ ಆದೇಶದಂತೆ ನಿಶ್ಚಿತಪಡಿಸಿಕೊಂಡು ಶ್ರೀ ಕೃಷ್ಣನನ್ನು ಭೋಜನಕ್ಕೆ ಆಮಂತ್ರಿಸಿದರು ಮಥುರೆಯಲ್ಲಿದ್ದ ಶ್ರೀ ಕೃಷ್ಣನನ್ನು ದಂಡಕಾರಣದಲ್ಲಿದ್ದ ಪಾಂಡವರು ಹೇಗೆ ಆಮಂತ್ರಿಸಿರಬಹುದು ?  ನಿಶ್ಚಿತ ವೇಳೆಗೆ ಶ್ರೀ ಕೃಷ್ಣ ಬರುವುದೆಂತೂ ? ಸಂಪರ್ಕ ಸಾಧನಗಳಾವುವು ? ಏನಾದರೂ ಸಂಪರ್ಕ ಸಾಧನೆಗಳು ಇರಲೇಬೇಕಲ್ಲವೇ, ಇಷ್ಟೊಂದು ವೈಭವಪೇತ ನಾಗರಿಕತೆಯನ್ನು ಹೊಂದಿದ ಮಹಾಭಾರತ ಕಾಲದಲ್ಲಿ ಸಂಪರ್ಕ ಸಾಧನೆಗಳು ಏನಿದ್ದವು. ಯೋಗ ಶಕ್ತಿಯಿಂದ ಈ ಸಂಪರ್ಕ ವ್ಯವಸ್ಥೆಗಳು ಇದ್ದವು ಎಂದು ತಿಳಿದು ಬರುತ್ತದೆ, ಸೂಕ್ಷ್ಮ ದೇಹದಿಂದ ಹೋಗುವುದು,  ಸಂಪರ್ಕಿಸುವ ವ್ಯವಸ್ಥೆ ಇತ್ತು, ಸ್ಥೂಲ ದೇಹದಿಂದ ಸಂಪರ್ಕಿಸುವ, ಪ್ರತ್ಯಕ್ಷ  ಪ್ರಾದುರ್ಭವಿಸುವ ಶಕ್ತಿಯು ಕೆಲವರಲ್ಲಿ ಇತ್ತೆಂದು ತಿಳಿದು ಬರುತ್ತದೆ. ಕೇವಲ ಯೋಗ ಶಕ್ತಿ ಇದ್ದರೂ ಸಾಧ್ಯವಿಲ್ಲ ಅಹಂಕಾರ ರಹಿತ ಸಮರ್ಪಣಾ ಭಾವವು ಭಕ್ತಿಯು ಬೇಕು ಎಂಬ ಚಿಂತನೆಯು ಉಂಟು ಎಂಬ ಉಲ್ಲೇಖಗಳಿವೆ.

       ಮರುದಿನ ಉಷಃಕಾಲದಲ್ಲಿ ಎದ್ದು ಹಿರಿಯನಾದ ಧರ್ಮರಾಯನು ಎದ್ದು ತನ್ನ ಸ್ನಾನ ಸಂಧ್ಯಾದಿಗಳನ್ನು ಮುಗಿಸಿ ದೇವರ ಪೂಜೆಗೆ ಪ್ರಾರಂಭಿಸಿದ. ಅರ್ಜುನ ನಕುಲ ಸಹದೇವರು ಸಹಿತ ತಮ್ಮ ಪ್ರಾಥರ್ವಿಧಿಗಳನ್ನು ಮುಗಿಸಿ ಕಾರ್ಯಕ್ರಮದ ಉಸ್ತುವಾರಿಯಲ್ಲಿದ್ದರು. ಇತ್ತ ಭೀಮಸೇನ ಆ ದಿನದ ಅಡುಗೆ ಮತ್ತು ಧನುರ್ಮಾಸದ ಸಾಮುಗ್ರಿಗಳಾದ ಹೆಸರು ಅಕ್ಕಿಯಿಂದ ತಯಾರಿಸಿದ ನೈವೇದ್ಯ ಮತ್ತು ಮುಖ್ಯವಾಗಿ ಉರುವಲಕ್ಕಾಗಿ ಅರಣ್ಯದಿಂದ ಕಟ್ಟಿಗೆ ತಂದು ಕಡಿದು ಒಡೆದು ಅಣಿಮಾಡುತ್ತಲಿದ್ದ.

       ನಕ್ಷತ್ರ ಕಾಣಿಸುವುದರೊಳಗಾಗಿ ಹೆಸರು ಹುಗ್ಗಿ ಅಭಿಗಾರ ಸಹಿತ ನೈವೇದ್ಯ‌ ಸಮರ್ಪಿಸಿ   ವೈಶ್ವದೇವ  ಬಲಿಹರಣಾದಿಗಳನ್ನು  ಸಾಂಗವಾಗಿ ನಡೆಸಿದರು. ಧೌಮ್ಯ ಋಷಿಗಳನ್ನು ಅವರ ಶಿಷ್ಯ ವೃಂದವನ್ನೂ ಭೋಜನಕ್ಕೆ ಆಮಂತ್ರಿಸಿದ್ದುವರಿಂದ ಅವರೆಲ್ಲರೂ ಬಂದರು ಆದರೆ ಶ್ರೀ ಕೃಷ್ಣನೇ ಬಂದಿರಲಿಲ್ಲ ಸೂರ್ಯೋದಯದೊಳಗಾಗಿ ಭೋಜನವಿದು ಸಂಪನ್ನಗೊಳಿಸಬೇಕು. ಎಂಬ ತುರಾತುರಿಯಲ್ಲಿ ಧರ್ಮರಾಯನು ತನ್ನ ಯೋಗ ಶಕ್ತಿಯಿಂದ ಶ್ರೀ ಕೃಷ್ಣನನ್ನು ಆಹ್ವಾನಿಸಿದನು. ಶ್ರೀ ಕೃಷ್ಣ ಬರಲಿಲ್ಲ,  ಶ್ರೀ ಕೃಷ್ಣ ಏಕೆ ಬರಲಿಲ್ಲ ಎಂದು ಎಲ್ಲರೂ ಚಿಂತೆಗಳಿಗಾದರು ಹಾಗೆ ದ್ರೌಪದಿಯು ತಾನು ಅವನ ಸಹೋದರಿ, ನಾನು ಕರೆದರೆ ಬಂದೇ ಬರುತ್ತಾನೆ ಎಂದು ತುಳಸಿ ಗಿಡದ ಹತ್ತಿರ ಧಾವಿಸಿ ತನ್ನ ಪದ್ದತಿಯಂತೆ ಶ್ರೀಕೃಷ್ಣನನ್ನು ಕರೆದಳು ಆದರೆ ಉಪಯೋಗವಿಲ್ಲ , ಮತ್ತೆ ನಾನು ಶ್ರೀ ಕೃಷ್ಣನ ಆಪ್ತಸಖ ನಾನು ಕರೆದರೆ ಬರದೇ ಇರುತ್ತಾನೆಯೇ‍ ಎಂದು ಅರ್ಜುನ ತನ್ನ ಯೋಗ ಸಾಧನೆಯಿಂದಲೂ ಕರೆದ,  ಆದರೆ ಅವನ ಸಖ ಬರಲಿಲ್ಲ ಆರಾಧ್ಯ ವ್ಯಕ್ತಿ, ಸಹೋದರ, ಸಖ ಎಂದು ಎಲ್ಲರೂ ಆತ್ಮೀಯನನ್ನು ಕರೆದರು, ಬಂದೇ ಬರುತ್ತಾನೆ, ಬರಲೇಬೇಕು ಎಂಬ ಭರವಸೆಯೂ ಕಾಣದಾಯಿತು.  ಕೊನೆಗೆ ಅಡುಗೆ ವ್ಯವಸ್ಥೆಯಲ್ಲಿರುವ ಭೀಮನ ಕಡೆಗೆ ನೋಡಿ ನಮದೆಲ್ಲವೂ ಮುಗಿಯಿತಪ್ಪ , ನೀನಾದರೂ ಕೃಷ್ಣ ಬೇಗ ಬರುತ್ತಾನೋ ನೋಡು ಸೂರ್ಯೋದಯದ ಸಮಯವಾಗುವುದರಲ್ಲಿದೆ ಭೋಜನಕ್ಕೆ ಅಣಿಯಾಗಿ ಬೇಕು ಎಂದು ಯುಧಿಷ್ಟಿರ ದ್ರೌಪದಿಯರು ಹೇಳಿದರು.

    " ಅವನನ್ನು ಊಟಕ್ಕೆ ಕರೆದಿದ್ದೇವೆ, ಮತ್ತೇನು ಕೆಲಸ ಹೇಳುತ್ತಿಲ್ಲವಲ್ಲ ಅವನಿಗೆ ಏನಾಯಿತು ಬರದಿರಲು, ನೀವೆಲ್ಲಾ ಕರೆದಾಯಿತೇ ?  ಏಕೆ ಬರಲಿಲ್ಲ, ನಾನೇನು ಬೇರೆ ಕರೆಯಬೇಕೇ ? ಹಿರಿಯನಾದ ನೀನು ಮತ್ತು ಅವನ ತಂಗಿಯೂ  ಸ್ವತಃ ಆತ್ಮೀಯ ಮಿತ್ರನೂ ಕರೆದಾಗ ಬರದೇ ಇರಲು ಅವನಿಗೆ ಏನು ಬಂತು ." ಎಂದು ಅನ್ನುತ್ತಾ ಅಡಿಗೆ ಕೆಲಸವನ್ನು ನಿಲ್ಲಿಸಿದ. 

      ಭೋಜನ ಸ್ಥಳಕ್ಕೆ ರಂಗೋಲಿ, ಕುಡಿಯಲು ನೀರು,  ಬಾಳೆಎಲೆ ಹಾಕಿ ಊಟಕ್ಕೆ ಬಡಿಸಿರಿ, ನಾನು ಕೈ ಕಾಲು ಮುಖ ತೊಳೆದು ಕೊಂಡು ಬರುತ್ತೇನೆ ಎಂದು ಹೇಳಿದನು. ತನ್ನ ಅಘಾದವಾದ ಭಾರದ ಗದೆಯನ್ನು ಎತ್ತಿ ತುರಾತುರಿಯಿಂದ ಅಂಗಳಕ್ಕೆ ಹೊರಟಿದ್ದು ನೋಡಿ ಎಲ್ಲರೂ ಕಂಗಾಲಾದರು.

     ಪ್ರಾಂಗಣದಲ್ಲಿ ವೀರಾಸನದಲ್ಲಿ ನಿಂತು ಶ್ರೀ ಕೃಷ್ಣ ಆಗಮಿಸುವಂತೆ ಸಂಕಲ್ಪಿಸಿ ತನ್ನ ಗದೆಯನ್ನು ಬಿರುಸಾಗಿ ವೇಗವಾಗಿ ತಿರುಗಿಸಿ ತಿರುಗಿಸಿ ರಭಸದಿಂದ ಮೇಲಕ್ಕೆ ಧೃವ ಮಂಡಲಕ್ಕೆ ಎಸೆದ, ಎಸೆದ ರಭಸಕ್ಕೆ ಗದೆಯು ಮೇಲಕ್ಕೆ ಹೋಗಿ ತಿರುಗಿ ವೇಗೋತ್ಕರ್ಷದಿಂದ ಬರುತ್ತಿರುವಾಗ ಕೆಳಗೆ ನೇರವಾಗಿ ಟೊಂಕದ ಮೇಲೆ ಕೈ ಇಟ್ಟು ನಿಂತುಕೊಂಡು " ಶ್ರೀ ಕೃಷ್ಣ,  ನಮ್ಮ ನಿಮಂತ್ರಣ ನೀನು ಸ್ವೀಕರಿಸಿಯಾಗಿದೆ, ಎಲ್ಲರೂ ಕರೆದಾಗಿದೆ,  ಈಗ ಮೇಲಿರುವ ಗದೆ ನನ್ನ ತಲೆಯ ಮೇಲೆ ಬೀಳಬೇಕು ಒಂದು,  ಇಲ್ಲವಾದರೆ ಆ ಗದೆಯನ್ನು  ನನ್ನ ತಲೆಯ ಮೇಲೆ ಬೀಳದಂತೆ ನೀನೇ ತಡೆಯಬೇಕು, ಕೇವಲ ಈ ಎರಡು ವಿಕಲ್ಪಗಳಲ್ಲಿ ನೀನು ಆರಿಸಿದಂತೆ ಆಗಲಿ " ಎಂದು ನಿಂತಲ್ಲೇ ಯೋಗ ಧ್ಯಾನಸ್ಥನಾದ.

      ತತ್ ಕ್ಷಣದಲ್ಲಿ ಶ್ರೀಕೃಷ್ಣನು ಪ್ರಕಟಗೊಂಡು " ಇದೇನು ಹುಚ್ಚುತನ ಏನಾದರೂ ಅಘಟಿತವಾಗಿದ್ದರೆ ಏನು ಮಾಡುತ್ತಿದ್ದಿ? "  ನಾನೇನು ಮಾಡುವುದಿಲ್ಲ ನೀನೇ ಮಾಡುವುದೆಲ್ಲ ನಿನ್ನ ಇಚ್ಛೆಯಂತೆ ಆಗಬೇಕಲ್ಲ " ನಾವೆಲ್ಲ ಪಾಮರವರು, ನಮಗ್ಯಾರು ಕೇಳಬೇಕು, ನಡೆ ಊಟಕ್ಕೆ, ನಿನಗೆ ಬೇರೆ ಯಾವ ಕೆಲಸ ಹಚ್ಚುವುದಿಲ್ಲ ಊಟಕ್ಕಾದರೂ ಕರೆದಿದ್ದೇವೆ ನೀನು ಇಷ್ಟೊಂದು ಹಗರಣ ಮಾಡುತ್ತಿ ಎಂದು ಗೊತ್ತಿದ್ದರೆ ...

       ತೀರ್ಥ ಗಂಧ ಅಕ್ಷತೆಗಳನ್ನು ಕೊಟ್ಟು ಸಂಕಲ್ಪ ಹೇಳಿರಿ,  ಬಂದೆ,  ಎಂದು ಅಡುಗೆ ಮನೆಯ ಕಡೆಗೆ ಊಟ ಬಡಿಸುವ ವ್ಯವಸ್ಥೆ ನೋಡಿಕೊಳ್ಳಲು ಹೋದ 

   ಶ್ರೀ ಲಕ್ಷ್ಮೀ ರಮಣ ಗೋವಿಂದ ಗೋವಿಂದ,  ಶ್ರೀ ರಮಾರಮಣ ಗೋವಿಂದ ಗೋವಿಂದ , ಶ್ರೀ ಭಕ್ತ ವತ್ಸಲ ಗೋವಿಂದ ಗೋವಿಂದ  ಶ್ರೀ ಕೃಷ್ಣಾರ್ಪಣಮಸ್ತು

     ಸಮಸ್ತರ ಭೋಜನಾ ನಂತರ ಎಲ್ಲರೂ ಅಂಗಳಕ್ಕೆ ಬಂದು ಧೌಮ್ಯ ಋಷಿಗಳು, ಅವರ ಶಿಷ್ಯ ಸಮೂಹಕ್ಕೆ, ಶ್ರೀಕೃಷ್ಣನಿಗೆ ಅಕ್ಷತೆಕೊಟ್ಟು ಆಶೀರ್ವಾದ ಪಡೆದ ಮೇಲೆ   ಸಹೋದರಿ ದ್ರೌಪದಿಯು " ಕೃಷ್ಣ ನೀನು ಬರಲು ಏಕೆ ತಡ ಮಾಡಿದೆ " ಎಂದು ಕೇಳಿದಳು ಯಾವುದೇ ಕಾರ್ಯ ನೆರವೇರಲು ಭಕ್ತಿಪೂರ್ಣ ಸಮರ್ಪಣಾ ಭಾವದ ಅವಶ್ಯಕತೆ ಇರುತ್ತದೆ ಅದರಲ್ಲಿ ಅಹಂ ಭಾವನೆ ಇರಲೇ ಕೂಡದು ಎಂದು ಹೇಳಿದ ಸರ್ವರೂ ಕೂಡಿ ಶ್ರೀ ಕೃಷ್ಣನನ್ನು ಬಿಳ್ಕೊಟ್ಟರು

ಸರ್ವೇ ಜನಾ ಸುಖಿನೋ ಭವಂತು




No comments:

Post a Comment