Sunday, October 27, 2024

KANNADA BHASHA FEATURE ಕನ್ನಡ ಭಾಷಾ ರುಧಿರ

                    ಕನ್ನಡ ಭಾಷಾ ರುಧಿರ 

ಧಮನಿಧಮನಿಗಳ ಅಂತರಾಳದಲಿ ಹರಿದಿದೆ ಭಾಷಾರುಧಿರ 
ವೈಜಯಂತಿಯೊಲು ಬಾಡದಂತಹ ಕನ್ನಡ ಮಾತೆ ಮಧುರ 
ಕ್ಷಣದ ಗಣವಲ್ಲ ವರುಷ ವರುಷಗಳ ಮೀರಿ ಸವೆದ ಪಯಣ 
ಮನದಧ್ವನಿ ಇದು ಶ್ರವಣ ತನಿ ಇದು ಅಲ್ಲಅಲ್ಲ ಬರೀ ಕರಣ
ಧಮನಿಧಮನಿಗಳ ಅಂತರಾಳದಲಿ ಹರಿದಿದೆ ಭಾಷಾರುಧಿರ

ಜನನಿ ಹಾಡಿದೆ ಲಾಲಿಯೊಂದಿಗೆ ಮನದಲಿ ಭಾಷಾ ಜನನ 
ಸೊಲ್ಲು  ಸೊಲ್ಲಲೆ ಬೆಳೆದ ಕಾಯದಿಂ  ಸಾಗು ಭಾವ ಮಥನ 
ಪ್ರೇಮ ಪ್ರೀತಿಗೆ ಹೇಳ್ವ ನೀತಿಗೆ ಕೋಟಿ ಕೋಟಿ ಕವಿನಮನ
ಸಭ್ಯ ಧಾಟಿಗೆ ಗ್ರಾಮ್ಯ ನಾಟಿಗೆ ಹೊಂದುವ ಸನಿ ಮಧ್ವಚನ
ಇಂಥಲತೆಯಿಂದ ಚಿಗುರಿದಂಥ ಕವಿ ಕುಸುಮವೇ ಅಮರ 

ಆದಿ ನವ್ಯ ಕವಿ ಬಾಲರೆಲ್ಲರೂ  ಕುಡಿದು ನಲಿದ ಸವಿ ಸ್ತನ್ಯಾ
ಭಾವಭಾವ್ಯಗಳ  ಕಾವ್ಯನಿಧಿ ರಚನೆ ಕಂಡ ಭೂವಿಯೆ ಧನ್ಯ 
ಪ್ರಣತಿ ಮಹತಾಯಿ ಕನ್ನಡಾಂಬೆ ತೊಳೆಯಲಿಂದು ಚರಣ
ತೋಯತಂದಿಹೆ ಗಂಧದಿಂದಲಿ ಮಾಡಿ ಸ್ತೋತ್ರ ಉದ್ಧರಣ
ನಿನ್ನ ಪೂಜೆಯಲಿ ಹಾಡಿದಂತೆ ಕವಿ ಕುಸುಮವೇ ಅಜರ
                                                       
                                                          ಜಾನಕಿ ರಾಮ 

                                  ಸೀತಾರಾಮ ಕಟ್ಟಿ ಯಲಗೂರು 

No comments:

Post a Comment