ಎಲ್ಲಿಂದಲೋ ಬಂದ ಸುಮಾರು ಐದಾರು ವರ್ಷದ ಪ್ರಾಯದ ಬಾಲಕನೋರ್ವನು ದಾಸರ ಮುಂದೆಯೇ ಪಾವಟಿಗೆಯನ್ನಿಳಿದು ಸರೋವರದ ನೀರಿನಲ್ಲಿ ಆಟವಾಡಲು ಆರಂಭಿಸಿದ.
ದಾಸರು ಆ ಬಾಲಕನ ಕಡೆಗೆ ಗಮನವನ್ನೀಯದೆ ಸುಮ್ಮನೆ ಧ್ಯಾನಾಸಕ್ತರಾಗಿದ್ದರು. ನೀರಿನಿಂದ ಮೇಲೆ ಬಂದ ಬಾಲಕನು ದಾಸರನ್ನು ಮೆದುವಾಗಿ ಸ್ಪರ್ಶಿಸಿ ಓಡಿಹೋದ. ಶಾಂತ ಸ್ವರೂಪರಾದ ದಾಸರು, ಆ ಬಾಲಕನ ಅಚಾತುರ್ಯವೆಂದು ಭಾವಿಸಿ, ಪುನಃ ಸ್ನಾನಕ್ಕೆ ಇಳಿದರು, ಸ್ನಾನ ಮುಗಿಸಿ ದಾಸರು ಮೇಲೆ ಬರುವುದಕ್ಕೂ, ಆ ಬಾಲಕ ಪುನಃ ನೀರಿನ ಹತ್ತಿರ ಬರುವುದಕ್ಕೂ ಸರಿಹೋಯಿತು. ತಮ್ಮ ಆಹ್ನೀಕದ ಸ್ಥಳದಲ್ಲಿ ಕೂಡುವುದೇ ತಡ, ಆ ಬಾಲಕನು ದಾಸರ ಎಡೆಗೆ ಸರೋವರದ ನೀರನ್ನು ಚಿಮುಕಿಸಿಬಿಟ್ಟನು,
ಮಾಘಮಾಸದ ದಿನಗಳು ಚಳಿಯ ಬಗ್ಗೆ ವಿಶೇಷವಾಗಿ ಹೇಳಬೇಕೇ! ವಿಮಲ ಶಾಂತರಾದ ವಿಜಯದಾಸರು ಪುನಃ ಸ್ನಾನವನ್ನಾಚರಿಸಲು ಸರೋವರದಲ್ಲಿ ಇಳಿದರು, ಪ್ರತಿಯೊಂದು ಬಾರಿ ಸ್ನಾನವನ್ನಾಚರಿಸಿ ದಾಸರು ಮೇಲೆ ಬರುವುದೂ ಆ ಬಾಲಕನು ಎಲ್ಲಿಂದಲೋ ಬಂದು ದಾಸರನ್ನು ಸ್ಪರ್ಶಿಸಿ ಮೈಲಿಗೆಗೊಳಿಸುವುದೂ ಹಲವಾರು ಬಾರಿ ಆಯಿತು.
ಈ ಬಾರಿ ದಾಸರಾಯರು ಸ್ನಾನವನ್ನಾಚರಿಸಿ, ದೇವರ ಪೂಜೆಗೆ ಅಗ್ರೋದಕವನ್ನು ತುಂಬಿಕೊಂಡು ಮೇಲೆ ಹೊರಟರು. ಅಲ್ಲಿಯವರೆಗೆ ಸುಮಾರು ಎಂಟು-ಹತ್ತು ಬಾರಿ ಆ ಕೊರೆಯುವ ಚಳಿಯಲ್ಲಿ ಸ್ನಾನವಾಗಿ ಶ್ರಮವೂ ಆಗಿತ್ತು, ಅಲ್ಲದೇ ತಮ್ಮ ಆರಾಧ್ಯ ದೈವವಾದ ವಿಜಯವಿಠ್ಠಲ ಸ್ವಾಮಿಯ ಪೂಜೆಗೆ ತಡವಾಗುವುದೆಂಬ ಕಳವಳಿಕೆಯಿಂದ ಸರೋವರದಿಂದ ಮೇಲೆ ಬಂದರು. ಪುನಃ ಆ ಬಾಲಕ ಎದುರಾದನು. ಪೂಜೆಗೆ ತಡವಾಗುವುದು ಆದ್ದರಿಂದ ನಮ್ಮನ್ನು ಮುಟ್ಟದಿರೆಂದು ಆ ಬಾಲಕನನ್ನು ಗದರಿದರು.
ಸ್ವಾರಸ್ಯ ಘಟಿಸಿದ್ದೇ ಆಗ, ಆ ಬಾಲಕನು ತನ್ನ ಬಾಯಲ್ಲಿ ತುಂಬಿಕೊಂಡಿದ್ದ ನೀರನ್ನು ದಾಸರ ಮೇಲೆ ಉಗುಳಿ “ನಾನು ನಿನ್ನ ಎದುರಿದ್ದಾಗಲೂ ಬೇರೆ ಪೂಜೆಯೇ” ಎಂದು ಅದೃಶ್ಯನಾದನು. ಆ ಉಚ್ಛಿಷ್ಠದ ಸೋಕುವಿಕೆಯಿಂದ ದಾಸರಿಗೆ ತಮ್ಮೊಡನೆ ಅಲ್ಲಿಯವರೆಗೂ ಆಟವಾಡಿದ ಬಾಲಕ ಸಾಮಾನ್ಯ ಬಾಲಕನಲ್ಲ ಬಾಲಗೋಪಾಲನೆಂದು ನಿಶ್ಚಿತವಾಯಿತು.
ಬಿಗಿದ ಕಂಠದಿಂದ ಹತ್ತಿರದಲ್ಲಿಯೇ ಇದ್ದ ಕ್ಷೇತ್ರಮೂರ್ತಿಯ ಆಲಯದೆಡೆಗೆ ಧಾವಿಸಿದರು. ಮುದ್ದಾದ ಬಾಲಗೋಪಾಲನ ಉತ್ಸವವಿಗ್ರಹವನ್ನು ನೋಡುತ್ತಾ ಧಾರಾಕಾರವಾಗಿ ಅಶ್ರು ಸುರಿಸುತ್ತಾ ಮಾತು ಬಾರದೇ ಮೂಕಭಾವದಿಂದ ನಿಂತುಬಿಟ್ಟರು. ಸರೋವರದ ತಡಿಯಲ್ಲಿ ಕಂಡ ಆ ಬಾಲಕನ ರೂಪವು ಉತ್ಸವ ವಿಗ್ರಹದ ಸ್ಥಳದಲ್ಲಿ, ದಾಸರಿಗಲ್ಲದಲೇ ಅಲ್ಲಿದ್ದ ಎಲ್ಲರಿಗೂ ಗೋಚರವಾಯಿತು. ಭೋರ್ಗರೆವ ಭಕ್ತಿ ರಸ ಪ್ರವಾಹವು ದಾಸರಾಯರ ಮುಖದಿಂದ ಕೀರ್ತನೆಯಾಗಿ ಹೊರಹೊಮ್ಮಿತು.
ಆ ದೇವರನಾಮ
ರಾಗ : ತೋಡಿ ಆದಿತಾಳ
ಮಾತನ್ನಾಡೈ ಮನ್ನಾರಿ ಕೃಷ್ಣ ಮಾತನ್ನಾಡೈ |
ದಾತನು ನೀನೆಂದು ಬಯಸಿ ಬಂದೆನು
ಊದುವ ಸಿರಿಪೊಂಗೊಳಲೋ |ಜಗ| ದಾಧಾರದ ನಿಜಹೊಳಲೋ | ಪಾದದ ಪೊಂಗೆಜ್ಜೆ ಘಳಿಲೋ | ಸರ್ವ ವೇದಗಳರಸುವ ಮಹಿಮೆಯ ತಳಲೋ ||೧||
ಕಸ್ತೂರಿ ಮಾಯದ ಮೃಗವೋ | ಮುಕುಟಾ ಮಸ್ತಕದಲಿ ಝಗಜಗವೋ | ವಿಸ್ತರದಲಿ ಪೊಕ್ಕ ಜಗವೋ | ಪರ ವಸ್ತುವೆ ನಂದ ಯಶೋದೆಯ ಮಗುವೋ ||೨||
ಆನಂದ ಜ್ನಾನದ ಹೃದವೋ | ಶುದ್ಧ ಮಾನವರಿಗೆ ಬಲು ವೃದವೋ | ಆನನ ಛವಿಯೊಳ್ ವಿಧುವೋ | ಪಾಪ ಕಾನನ ದಹಿಸುವ ಪಾವಕ ಪದವೋ ||೩||
ನವನೀತ ಪಿಡಿದ ಕರವೋ | ನವ ನವಮೋಹನದ ಶೃಂಗಾರವೋ | ಅವನಿತದಾ ಸುರತರುವೋ | ದೇವ ರವಿ ಯಂದುಂಗುರವಿಟ್ಟು ತೂಗುವ ಭರವೋ ||೪||
ತ್ರಿಜಗವ ನಿರುತ ಪಾಲಕನೋ | ಪಂಕಜನೇತ್ರಳ ನಾಯಕನೋ | ಅಜಭವಾದಿಗಳ ಜನಕನೋ | ನಮ್ಮ ವಿಜಯವಿಠ್ಠಲರೇ ಯದುಕುಮಾರಕನೋ ||೫||
ಶ್ರೀ ವಿಜಯದಾಸರ ಜೊತೆಗೆ ಇಂತಹ ಲೀಲಾವಿನೋದವನ್ನು ತೋರಿದ ಶ್ರೀ ಕೃಷ್ಣನ ಸನ್ನಿಧಿ, ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕುಂಭಕೋಣ ಕ್ಷೇತ್ರಕ್ಕೆ ಹತ್ತಿರದಲ್ಲಿ ಇರುವ ರಾಜಮನ್ನಾರುಗುಡಿ ಪಟ್ಟಣದಲ್ಲಿದೆ. ಇಲ್ಲಿನ ಕ್ಷೇತ್ರಮೂರ್ತಿ ಶ್ರೀ ರಾಜಗೋಪಾಲಸ್ವಾಮಿಯ ಉತ್ಸವ ವಿಗ್ರಹವು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ. ಒಂದುಕೈಯಲ್ಲಿ ಚಾವಟಿ ಹಾಗೂ ಇನ್ನೊಂದು ಕೈಯ್ಯಲ್ಲಿ ಗೋವಳರು ಉಪಯೋಗಿಸುವ ದೊಣ್ಣೆಯನ್ನು ಧರಿಸಿ ರುಕ್ಮಿಣೀ ಸತ್ಯಭಾಮಾ ಸಮೇತನಾದ ಮನೋಹರ ರೂಪವನ್ನು ಇಲ್ಲಿ ಕಾಣಬಹುದಾಗಿದೆ.
ದಾಸರಾಯರು ಅನುಷ್ಠಾನ ಮಾಡುತ್ತಿದ್ದ ತೀರ್ಥವು ತುಂಬಾ ವಿಸ್ತಾರವಾದ ತಟಾಕವಾಗಿದ್ದು, ಹರಿದ್ರಾ ತೀರ್ಥವೆಂದು ಕರೆಯುತ್ತಾರೆ. ಇಂದಿಗೂ ಹರಿದಾಸಕೂಟಸ್ಥರೆಲ್ಲರೂ ಈ ಸ್ಥಳವನ್ನು ದರ್ಶಿಸಿ ಪುಳಕಿತರಾಗುತ್ತಾರೆ. ವಿಜಯದಾಸರಿಗೆ ತೋರಿದ ಮಹಿಮೆಯನ್ನು ಪುನಃ ಪುನಃ ಸ್ಮರಿಸಿ ಭಾವುಕ ರಾಗುತ್ತಾರೆ. ದಾಸಸಾಹಿತ್ಯದ ಬೀಡಾದ ರಾಯಚೂರು ಸೀಮೆಯ ಹಳೆಯ ತಲೆಮಾರಿನ ವೃದ್ಧ-ವೃಧ್ಧೆಯರು ತಮ್ಮ ಮುಂದಿನ ತಲೆಮಾರಿ ನವರಿಗೆ ಈ ಕಥೆಯನ್ನು ಕೀರ್ತನೆ ಯೊಂದಿಗೆ ಹೇಳಿ ಸಂತೋಷ ಪಡುತ್ತಿದ್ದುದು ಉಂಟು. ಸುಮಾರು ೨-೩ ವರ್ಷಗಳಾದರೂ ಮಗುವಿಗೆ ಮಾತು ಬಾರದೇ ಹೋದಲ್ಲಿ ಈ ದೇವರನಾಮವನ್ನು ತಾಯಂದಿರು ಹೇಳಿಕೊಳ್ಳುತ್ತಿದ್ದ ಸಂಪ್ರದಾಯವು ಇನ್ನೂ ಇರುವುದುಂಟು.
ಸೌಜನ್ಯದಿಂದ
No comments:
Post a Comment