ಮುಹೂರ್ತ (ವೈಜ್ಞಾನಿಕ ವಿಮರ್ಶೆ)
ಪೌರ್ವಾತ್ಯ ಕಾಲಗಣನೆ ತುಂಬಾ ಸುಲಭವಾಗಿದೆ. ರಾತ್ರಿ ಹನ್ನೆರಡರಿಂದ ಹಗಲು ಹನ್ನೆರಡವರೆಗೆ ಎ.ಎಮ್. ನಂತರದ್ದು ಪಿ.ಎಮ್. ಇವುಗಳನ್ನು ಈಗ ಪೂರ್ವಾಹ್ನ ಅಪರಾಹ್ನಗಳೆಂದು ಸೂಚಿಸಲಾಗುತ್ತದೆಯಾದರೂ ಅದು ಅಷ್ಟೇನೂ ಸಮಂಜಸವಾಗಿಲ್ಲ.
ಗಡಿಯಾರವಿಲ್ಲದ ಆ ಕಾಲದಲ್ಲಿ ಸೂರ್ಯ ಚಂದ್ರರ ಚಲನೆಗಳನ್ನು ನಿಖರವಾಗಿ ಗುರುತಿಸಿ ಇದರ ಆಧಾರದ ಮೇಲೆ ರಚಿಸಿದ ಭಾರತೀಯ ಪಂಚಾಂಗಗಳ ಕಾಲಗಳು ಆಧುನಿಕರಿಗೆ ಬೇಗನೇ ಅರ್ಥವಾಗುವುದಿಲ್ಲ. ಕಲ, ವಿಕಲ, ಘಳಿಗೆ, ಪಳ, ನಿಮಿಷಗಳನ್ನು ಅರ್ಥ ಮಾಡಿಕೊಳ್ಳಲು ಸಮಯ ತಗಲುತ್ತದೆ. ಇಲ್ಲಿ ಬಳಸಲಾದ ಸಂಸ್ಕೃತ ಶಬ್ದಗಳ ನಿಖರ ಅರ್ಥಗಳು ಗೊತ್ತಿಲ್ಲದಿರುವುದೂ ಇನ್ನೊಂದು ಕಾರಣವಾಗಿದೆ.
ಪಂಚಾಂಗದ ಪ್ರಕಾರ ಒಂದು ದಿನರಾತ್ರಿಯನ್ನು (ದಿನವನ್ನು) 30 ಮುಹೂರ್ತಗಳನ್ನಾಗಿ ವಿಂಗಡಿಸಲಾಗಿದೆ. ಸೂರ್ಯೋದಯದಿಂದ ಸೂರ್ಯೋದಯದವರೆಗೆ ಒಂದು ದಿನ, ಇದರಲ್ಲಿ 15 ಮುಹೂರ್ತಗಳ ಒಂದು ಹಗಲು ಹಾಗೂ 15 ಮುಹೂರ್ತಗಳ ಒಂದು ರಾತ್ರಿ ಅಡಕವಾಗಿವೆ. 24 ಗಂಟೆಗಳ ಬದಲಾಗಿ 30 ಮುಹೂರ್ತಗಳು.
ಒಂದು ಮುಹೂರ್ತವೆಂದರೆ 48 ನಿಮಿಷಗಳು. ಒಂದು ದಿನಕ್ಕೆ 1440 ನಿಮಿಷ ಅಥವಾ 60 ನಿಮಿಷದ 24ಗಂಟೆಗಳು. ಎರಡೂ ಕರಾರುವಾಕ್ಕಾಗಿವೆ.
ಮೊದಲನೆಯ ಮುಹೂರ್ತದ ಹೆಸರು ರುದ್ರ ನಂತರ ಆಹಿ, ಮಿತ್ರ, ಪಿತೃ, ವಸು, ವಾರಾಹ, ವಿಶ್ವೇದೇವ ಹೀಗೆ ಏಳು ಮುಹೂರ್ತಗಳು ಪೂರ್ವಾಹ್ನಕ್ಕೆ ಸೇರಿವೆ. ಬೆಳಗು, ಪ್ರಾತಃಕಾಲ ಎಂದೂ ಕರೆಯಬಹುದು. ನಂತರದ ಮುಹೂರ್ತಗಳು ವಿಧಿ, ಸತಮುಖಿ, ಪುರೂಹತ, ವಾಹಿನಿ, ನಕ್ತನಕರಾ ಮುಂತಾದ ಮುಹೂರ್ತಗಳನ್ನು ಮಧ್ಯಾಹ್ನದ ಮುಹೂರ್ತಗಳೆಂದು ಗುರುತಿಸಲಾಗಿದೆ. ಅಪರಾಹ್ನದಲ್ಲಿ ವರುಣಾ, ಆರ್ಯಮನ್, ಭಗ ಮುಂತಾದ ಮುಹೂರ್ತಗಳು ಬರುತ್ತವೆ.
ಸೂರ್ಯಾಸ್ತದ ಮುಹೂರ್ತಗಳೆಂದರೆ ಗಿರೀಶ, ಅಜಪಾದ, ಅಹಿರ್ಬುಧ್ನಿ ಮುಂತಾದವುಗಳು. ಸೂರ್ಯೋದಯ 6 ಗಂಟೆಗೆ ಎಂದುಕೊಂಡರೆ ಅಪರಾಹ್ನ 3.36 ರಿಂದ 4.24ರವರೆಗೆ ಒದಗುವ ವರುಣಾ ಮುಹೂರ್ತವು ಶ್ರೇಷ್ಠವೆಂದು ಜ್ಯೋತಿಷಿಗಳ ಅಭಿಪ್ರಾಯವಾಗಿದೆ.
ಅಪರಾಹ್ನವು ಸೂರ್ಯಾಸ್ತಕ್ಕೆ ಮೊದಲು ಬರುವ ದಿನದ ಕೊನೆಯ ಭಾಗವಾಗಿದೆ. ಮನುಸ್ಮೃತಿಯ 3ನೆಯ ಅಧ್ಯಾಯದ 278ನೆಯ ಶ್ಲೋಕದಲ್ಲಿ ಪೂರ್ವಾಹ್ನ ಅಪರಾಹ್ನಗಳ ಕುರಿತು ಪ್ರಸ್ತಾಪಿಸಲಾಗಿದೆ.
ಯಾಜ್ಞವಲ್ಕ ಸ್ಮೃತಿಯ ವಿವೃತಿಯಾದ 'ಮಿತಾಕ್ಷರ'ದಲ್ಲಿ ಅಪರಾಹ್ನದ ಬಗ್ಗೆ 'ಅಪರಾಹ್ಲಾಶ್ಚ ಪಂಚಧಾವಿಭಕ್ತೇ ದಿನೇ ಚತುರ್ಥೋ ಭಾಗಸ್ತ್ರೀಮುಹೂರ್ತಃ' ಎಂದು ವಿವರಿಸಲಾಗಿದೆ. ಒಂದು ಹಗಲನ್ನು ಐದು ಸಮಭಾಗಗಳನ್ನಾಗಿ ಮಾಡಿದರೆ ಅದರ ನಾಲ್ಕನೆಯ ಭಾಗವನ್ನು ಅಪರಾಹ್ನವೆಂದು ಪರಿಗಣಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 10, 11, 12ನೆಯ ಮುಹೂರ್ತಗಳು ಅಥವಾ 6 ಗಂಟೆಗೆ ಸೂರ್ಯೋದಯವಾದರೆ ಮ. 3.36 ರಿಂದ ಸಂ. 6 ಗಂಟೆಯ ಸಮಯವನ್ನು ಅಪರಾಹ್ನವೆಂದು ಕರೆಯಬಹುದಾಗಿದೆ.
..............ಮುಂದುವರೆಯುವುದು

No comments:
Post a Comment