Sunday, February 01, 2026

Renuka's anger ರೇಣುಕಾ ರುದನ

      ರೇಣುಕಾ ರೋಧನ 

ತಾಯ ತಾಳಿಕೊಳಚುತಿದೆ ಫರಶು ಧರನೆ ಧಾವಿಸು
ಜನಕನುಸಿರು ನಿಲ್ಲುತಿರೆ ಸ್ಥಿತಿಯ ಪರಿಯೆ ಭಾವಿಸು 

ಯಾವ ದ್ವೇಷ ಭೂಪತಿಗೋ ಕುಲಗಳ ಕಂಡರೆ 
ಏನು ಹೊಟ್ಟೆ ಕಿಚ್ಚು ಕಾಣೆ ಪುಟ್ಟ ಮಕ್ಕಳುಂಡರೆ 
ನೂರು ಸಲದಿ ಆಶ್ರಮವ ಕಿತ್ತು ಕಟ್ಟಿ ನಿಂತೆವು 
ರಾಜನಾಕ್ರಮಣ ಧಗೆಯ ತಡೆದು ತಡೆದು ಸೋತೆವು

ವಿಪ್ರರಾಗಿ ಶಸ್ತ್ರವಲ್ಲ ಶಾಸ್ತ್ರವೆಮಗೆ ಶೋಭನ 
ಕ್ಷಾತ್ರ ಜನಕೆ ವಿದ್ಯೆ ಇತ್ತು ಬಾಳುವುದಾರಾಧನ 
ಎಂದು ನಿನ್ನ ತಂದೆ ನಂಬಿ ಬದುಕಿದುದರ ಲಾಭವು 
ಮಲಗಿಸಿಹುದು ರುಧಿರದಲ್ಲಿ ಅವನಿಪತಿಯ ಲೋಭವು 

ಭೂರಮಣನೇ ಹೊಂದಬೇಕು ಎಲ್ಲ ಶ್ರೇಷ್ಠ ಭಾಗ್ಯವ 
ಎಂದು ಕಿತ್ತುಕೊಳ್ಳಲೆಂದು ಬಂದ ಕಾಮಧೇನವ 
ತಿಳಿಯ ಹೇಳೆ ಹೋದ ಮುನಿಯ ಘಾತ ಮಾಡಿದಾತನ 
ದರ್ಪತೋರಿ ಹೋದನಿಂದು ಕಾರ್ತ್ಯವೀರ್ಯ ಅರ್ಜುನ 

ಮೊಳಗಲೇಳು ವೀರರಸದಿ ವಿಪ್ರ ಸಮರ ಶಂಖವು 
ದಹಿಸಬೇಕು ರಾಜದರ್ಪ ಪ್ರತಿಶೋಧದ ಶಾಖವು 
ಸಿಡಿದು ಪ್ರಳಯ ರುದ್ರನಾಗು ತಿರುಗಿನೀಡು ಭಾಧನ
ಕೇಳಿಸದೇ ಕೇಳಿಸದೇ ಈ ರೇಣುಕೆ ರೋದನ ?

ತಾಯ ತಾಳ್ಮೆ ಕಳಚುತಿದೆ ಫರಶು ಧರನೆ ಧಾವಿಸು
ದುಷ್ಟ ಜನರ ರಕ್ತವನ್ನು ಕಾಳಿಯಂತೆ ಸೇವಿಸು 

                                                      ಜಾನಕಿರಾಮ 
                             ಸೀತಾರಾಮ ಕಟ್ಟಿ ಯಲಗೂರು



No comments:

Post a Comment