▼

Tuesday, October 06, 2026

Message of the Guru's grace.. ಶ್ರೀ ಗುರ್ವಾನುಗ್ರಹ ಸಂದೇಶ

ಘಟನಾವಳಿ  #              
                ಶ್ರೀ ಗುರ್ವಾನುಗ್ರಹ ಸಂದೇಶ
                           श्री वेदेश गुरुं वंदे यादवार्यगुरोर्गुरुम
                         छांदोग्यभाष्यसट्टीकाकर्तारमहमादरात् । 
ಶ್ರೀ ಗುರುಭ್ಯೋ ನಮಃ ಹರಿ: ಓಂ 
೧೯೯೬ ನವೆಂಬರ್ ಕಾರ್ತೀಕ ಶುಕ್ಲ ಷಷ್ಠಿ ಶ್ರೀ ಶ್ರೀ ಶ್ರೀ ೧೦೦೮ ವೇದೇಶ ತೀರ್ಥರ ಸ್ವಾಮಿಗಳ ವೃಂದಾವನ ಮಣ್ಣೂರು ಕ್ಷೇತ್ರದ ಶ್ರೀ ಅಗಸ್ತ್ಯ ಮುನಿಗಳ ಕರಾರ್ಚಿತ, ಶ್ರೀ ಧೃವರಾಜರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಚೆನ್ನಕೇಶವ ದೇವರ ಸನ್ನಿಧಿಯಲ್ಲಿ ನೆರವೇರುವ ಆರಾಧನಾ ಮಹೋತ್ಸವಕ್ಕೆ  ಶ್ರೀಮದ್ ಉತ್ತರಾದಿ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸತ್ಯ ಪ್ರಮೋದ ತೀರ್ಥರನ್ನು ಆಹ್ವಾನಿಸಲಾಗಿತ್ತು  ದಿನಾಂಕ ೧೫ ಪೂರ್ವಾರಾಧನ, ದಿನಾಂಕ ೧೬ ಮಧ್ಯ ಮತ್ತು ಮುಖ್ಯ, ದಿನಾಂಕ ೧೭ ಅಂತ್ಯಾರಾಧನೆ
           ಅಕ್ಕಲಕೋಟದ ತಾಲೂಕ ನಾಯಬ ತಹಶೀಲ್ದಾರ್ ಆಗಿದ್ದ  ಶ್ರೀಅವಧಾನಿ ಮಹೋದಯರ ನೇತೃತ್ವದಲ್ಲಿ ಒಂದು ಸಮಾವೇಶ ಏರ್ಪಡಿಸಿ ಉತ್ತರಾದಿ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ೧೦೦೮ ಶ್ರೀ ಸತ್ಯ ಪ್ರಮೋದ ತೀರ್ಥರನ್ನು ಪಾದ ಪೂಜೆಯ ಪ್ರಯುಕ್ತ ಅಕ್ಕಲಕೋಟಕ್ಕೆ ಆಹ್ವಾನಿಸಬೇಕು ಎಂದು ನಿರ್ಧರಿಸಿದೆವು. ಅಕ್ಕಲಕೋಟದ ಬ್ರಹ್ಮ ವೃಂದದಿಂದ ಕೇವಲ ಒಂಭತ್ತು ಜನ ಮಾತ್ರ ಪಾದಪೂಜೆ ಮಾಡುವವರು ತಯಾರಾಗಿ ಒಂದು ಪಟ್ಟಿ ತಯಾರಿಸಿ  ಅವಧಾನಿ ಮಹೋದಯರು ಶ್ರೀ ಗಳನ್ನು ಭೆಟ್ಟಿಯಾಗಿ ದಿನ ನಿಗದಿಪಡಿಸಿಕೊಂಡು ಬಂದರು. ದಿನಾಂಕ ೧೮ ಮುಂಜಾನೆಯ ಏಳು ಗಂಟೆಗೆ ಪ್ರತಿ ಓರ್ವರು ಪಾದಪೂಜೆಯ ಮಾಡುವ ವ್ಯವಸ್ಥೆಯನ್ನು ತಮ್ಮ ತಮ್ಮ ಮನೆಯಲ್ಲಿ ಮಾಡಿಕೊಂಡಿರಬೇಕು ಎಂದು ಸರ್ವರಿಗೂ ಹೇಳಿದರು. 
           ಆಗ ನಾನು ಅಕ್ಕಲಕೋಟದ ಶ್ರೀ ಸ್ವಾಮಿ ಸಮರ್ಥ ಮಠದ ಪರಿಸರದ ಹಿಂಭಾಗದ ಶ್ರೀ ಮಾನಕರಿ ವಾಡೆಯಲ್ಲಿ ಬಾಡಿಗೆ ಮನೆಯಲ್ಲಿ ಇರುತ್ತಿದ್ದೆ. 
          ಅದೇ ೧೯೯೬ ರ ಮೇ ತಿಂಗಳಲ್ಲಿ ಚಿ.ರಾಮ, ಚಿ.ಶ್ಯಾಮ ರ ಬ್ರಹ್ಮೋಪದೇಶ ಉಪನಯನ ಸಂಸ್ಕಾರ ಮಾಡಲಾಗಿತ್ತು ಕೆಲವೊಂದು ಮಂತ್ರಗಳನ್ನು ಕಂಠಪಾಠ ಮಾಡಿದ್ದರು, ಯೇ ಯಜ್ಞೇನ ಸೂಕ್ತ ಸಂತಾ ಹಾಕುತ್ತ ನಿರಂತರವಾಗಿ ಪಾಠ ಮಾಡುತ್ತಲಿದ್ದರು, ತ್ರಿವಿಕ್ರಮ ಚಿಕ್ಕ ಮಗು ಕೇಳುತ್ತಾ ಕುಳಿತು ಕೊಳ್ಳುತ್ತಿದ್ದ.
ತಾಯಿ ತಂದೆಯರು, ಪತ್ನಿ ಜಯಶ್ರೀ, ಮಕ್ಕಳಾದ ಸೀತಾರಾಮ, ಘನಶ್ಯಾಮ, ತ್ರಿವಿಕ್ರಮ,  ಸಹೋದರ ದ್ವೈಪಾಯನನ ಪತ್ನಿ ದೀಪಾ ಮತ್ತು ಪುಟ್ಟ ಮಗು ವಾದಿರಾಜ ಇಷ್ಟೇ ಜನ ಮನೆಯಲ್ಲಿ ಆಗ ಇದ್ದದ್ದು..... 
ದಿನಾಂಕ ಹದಿನೆಂಟು ಪ್ರಾತಃ ಕಾಲದ ಸಮಯ...... 
            ಮನೆಯ ಎಲ್ಲರೂ ಎಂದಿನಂತೆ ಪ್ರಾತರ್ವಿಧಿಗಳನ್ನು ಸ್ನಾನ ಸಂಧ್ಯಾವಂದನೆ ಮುಗಿಸಿ ಶುಭ್ರ ಮಡಿಬಟ್ಟೆ ಉಟ್ಟು ಊರ್ಧ್ವ ಪುಂಡ್ರ ದ್ವಾದಶ ನಾಮಾದಿಗಳ ಧರಿಸಿ ಸ್ವಾಮಿಗಳ ಸ್ವಾಗತಕ್ಕೆ ಸಜ್ಜಾದೆವು. ತಂದೆಯವರು ಮನೆಯ ಕುಲದೇವರಾದ ಶ್ರೀ ಲಕ್ಷ್ಮೀ ಗೋವಿಂದರಾಜ ದೇವರ ಪೂಜೆ ಮಾಡುತ್ತಲಿದ್ದರು. ಹೆಣ್ಣುಮಕ್ಕಳು ಶುಚಿರ್ಭೂತರಾಗಿ ದೇವರ ಪೂಜೆಗೆ, ಶ್ರೀಗಳ ಪಾದಪೂಜೆಗೆ ಪರಿಕರಗಳನ್ನು  ಹೊಂದಿಸಿ ಅಣಿಮಾಡುತ್ತಲಿದ್ದರು......
ಚಿ.ರಾಮ, ಚಿ.ಶ್ಯಾಮ  ಮೇಧಾ ಜನನ ಸೂಕ್ತ ತಮ್ಮ ತಮ್ಮ ಶೈಲಿಯಲ್ಲಿ ಪಠಿಸುತ್ತಿದ್ದರು... (ತೈತ್ತಿರೀಯಾರಣ್ಯಕಂ 4, ಪ್ರಪಾಠಕಃ 10, ಅನುವಾಕಃ 41-44)
ಓಂ ಯಁಶ್ಛಂದ॑ಸಾಮೃಷ॒ಭೋ ವಿ॒ಶ್ವರೂ॑ಪಃ । ಛಂದೋ॒ಭ್ಯೋಽಧ್ಯ॒ಮೃತಾ᳚ಥ್ಸಂಬ॒ಭೂವ॑ । ಸ ಮೇಂದ್ರೋ॑ ಮೇ॒ಧಯಾ᳚ ಸ್ಪೃಣೋತು । ಅ॒ಮೃತ॑ಸ್ಯ ದೇವ॒ಧಾರ॑ಣೋ ಭೂಯಾಸಮ್ । ಶರೀ॑ರಂ ಮೇ॒ ವಿಚ॑ರ್​ಷಣಮ್ । ಜಿ॒ಹ್ವಾ ಮೇ॒ ಮಧು॑ಮತ್ತಮಾ । ಕರ್ಣಾ᳚ಭ್ಯಾಂ॒ ಭೂರಿ॒ವಿಶ್ರು॑ವಮ್ । ಬ್ರಹ್ಮ॑ಣಃ ಕೋ॒ಶೋ॑ಽಸಿ ಮೇ॒ಧಯಾ ಪಿ॑ಹಿತಃ । ಶ್ರು॒ತಂ ಮೇ॑ ಗೋಪಾಯ ॥
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥

          ಶ್ರೀ ಶ್ರೀ ಶ್ರೀ ೧೦೦೮ ಉತ್ತರಾದಿ ಮಠದ ಶ್ರೀ ಸತ್ಯ ಪ್ರಮೋದ ತೀರ್ಥ ಶ್ರೀಪಾದಂಗಳವರು ತಮ್ಮ ಶಿಷ್ಯಂದಿರ ಸಮೇತ ಎಂಟು ಗಂಟೆಗೆ  ಹಿತ್ತಲ ಬಾಗಿಲು ಕಡೆಯಿಂದ ಇನ್ನೇನು ಮನೆಯಲ್ಲಿ ಕಾಲಿಡುವವರಿದ್ದರು ಅಷ್ಟರಲ್ಲಿ ಹುಡುಗರು ಶ್ರೀ ಮೇಧಾ ಜನನ ಸೂಕ್ತ ಪಠಿಸುತ್ತಿರುವುದು ಕೇಳಿ ತಟಸ್ಥರಾಗಿ ಬಾಗಿಲಲ್ಲೇ ನಿಂತರು.
ಓಂ ಮೇ॒ಧಾದೇ॒ವೀ ಜು॒ಷಮಾ॑ಣಾ ನ॒ ಆಗಾ᳚-ದ್ವಿ॒ಶ್ವಾಚೀ॑ ಭ॒ದ್ರಾ ಸು॑ಮನ॒ಸ್ಯ ಮಾ॑ನಾ । ತ್ವಯಾ॒ ಜುಷ್ಟಾ॑ ನು॒ದಮಾ॑ನಾ ದು॒ರುಕ್ತಾ᳚ನ್ ಬೃ॒ಹದ್ವ॑ದೇಮ ವಿ॒ದಥೇ॑ ಸು॒ವೀರಾಃ᳚ । ತ್ವಯಾ॒ ಜುಷ್ಟ॑ ಋ॒ಷಿರ್ಭ॑ವತಿ ದೇವಿ॒ ತ್ವಯಾ॒ ಬ್ರಹ್ಮಾ॑ಽಽಗ॒ತ ಶ್ರೀ॑ರು॒ತ ತ್ವಯಾ᳚ । ತ್ವಯಾ॒ ಜುಷ್ಟ॑ಶ್ಚಿ॒ತ್ರಂ-ವಿಁಂ॑ದತೇ ವಸು॒ ಸಾ ನೋ॑ ಜುಷಸ್ವ॒ ದ್ರವಿ॑ಣೋ ನ ಮೇಧೇ ॥
ಮೇ॒ಧಾಂ ಮ॒ ಇಂದ್ರೋ॑ ದದಾತು ಮೇ॒ಧಾಂ ದೇ॒ವೀ ಸರ॑ಸ್ವತೀ । ಮೇ॒ಧಾಂ ಮೇ॑ ಅ॒ಶ್ವಿನಾ॑ವು॒ಭಾ-ವಾಧ॑ತ್ತಾಂ॒ ಪುಷ್ಕ॑ರಸ್ರಜಾ । ಅ॒ಪ್ಸ॒ರಾಸು॑ ಚ॒ ಯಾ ಮೇ॒ಧಾ ಗಂ॑ಧ॒ರ್ವೇಷು॑ ಚ॒ ಯನ್ಮನಃ॑ । ದೈವೀಂ᳚ ಮೇ॒ಧಾ ಸರ॑ಸ್ವತೀ॒ ಸಾ ಮಾಂ᳚ ಮೇ॒ಧಾ ಸು॒ರಭಿ॑-ರ್ಜುಷತಾ॒ಗ್॒ ಸ್ವಾಹಾ᳚ ॥ ಆಮಾಂ᳚ ಮೇ॒ಧಾ ಸು॒ರಭಿ॑-ರ್ವಿ॒ಶ್ವರೂ॑ಪಾ॒ ಹಿರ॑ಣ್ಯವರ್ಣಾ॒ ಜಗ॑ತೀ ಜಗ॒ಮ್ಯಾ । ಊರ್ಜ॑ಸ್ವತೀ॒ ಪಯ॑ಸಾ॒ ಪಿನ್ವ॑ಮಾನಾ॒ ಸಾ ಮಾಂ᳚ ಮೇ॒ಧಾ ಸು॒ಪ್ರತೀ॑ಕಾ ಜುಷಂತಾಮ್ ॥ ಮಯಿ॑ ಮೇ॒ಧಾಂ ಮಯಿ॑ ಪ್ರ॒ಜಾಂ ಮಯ್ಯ॒ಗ್ನಿ-ಸ್ತೇಜೋ॑ ದಧಾತು॒, ಮಯಿ॑ ಮೇ॒ಧಾಂ ಮಯಿ॑ ಪ್ರ॒ಜಾಂ ಮಯೀಂದ್ರ॑ ಇಂದ್ರಿ॒ಯಂ ದ॑ಧಾತು॒, ಮಯಿ॑ ಮೇ॒ಧಾಂ ಮಯಿ॑ ಪ್ರ॒ಜಾಂ ಮಯಿ॒ ಸೂರ್ಯೋ॒ ಭ್ರಾಜೋ॑ ದಧಾತು ॥
[ ಓಂ ಹಂ॒ಸ॒ ಹಂ॒ಸಾಯ॑ ವಿ॒ದ್ಮಹೇ॑ ಪರಮಹಂ॒ಸಾಯ॑ ಧೀಮಹಿ । ತನ್ನೋ॑ ಹಂಸಃ ಪ್ರಚೋ॒ದಯಾ᳚ತ್ ]
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥

            ಶ್ರೀಗಳ ಶಿಷ್ಯಂದಿರು ಗಡಿಬಿಡಿ ಮಾಡುತ್ತಲಿದ್ದರೂ ಸಹಿತ ಅವರೆಲ್ಲರಿಗೂ ಬೆದರಿಸಿ " ಮಕ್ಕಳು ಮೇಧಾ ಜನನ ಸೂಕ್ತ ಅಂತಾರ, ಒಬ್ಬೊಬ್ಬರದು ಒಂದೊಂದು ರೀತಿ ಕೇಳಸ್ತದ, ಅಸ್ಖಲಿತ ಮತ್ತ ಛಂದ ಅಂತಾರ  ಇಲ್ಲೇ ನಿಂತು ನೋಡಿ, ಪೂರ್ಣಾ ಕೇಳಿ ಒಳಗ ಹೋಗೂಣು, ದೊಡ್ಡವಂದು ಪುಣೇರೀ ಸಣ್ಣವಂದು ದಕ್ಷಿಣ ಪದ್ಧತಿ ಅನಸ್ತದ " ಅಂತ ಹೇಳಿಖತ್ತುದ್ದು ನಾವೇಲ್ಲ ಕೇಳತಿದ್ದೇವು,  ಆದರ  ಹುಡುಗರು ಮೇಧಾಜನನ ಸೂಕ್ತ ಮುಗಿಸಿ ಅಲ್ಲೇ ಪೂಜೆ ಮಾಡುತ್ತಿದ್ದ ಅಜ್ಜರಿಗ ನಮಸ್ಕಾರ ಮಾಡಿ ಆಗಮಿಸುತ್ತಿದ್ದ ಶ್ರೀ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.
                ಒಳಗೆ ಬಂದ ಗುರುಗಳು ಅದೇ ಪೂಜೆ ಮುಗಿಸಿ ನಿಂತ ತಂದೆಯವರ ಕುಶಲೋಪರಿ ಕೇಳಿ ಮಕ್ಕಳ ಪಠ್ಯವನ್ನು ಕೊಂಡಾಡುತ್ತ ...     ಅಲ್ಲೇ ಪಾದಪೂಜೆಗೆ ತಯಾರು ಮಾಡಿಟ್ಟ ಮಣೆಯ ಮೇಲೆ ಕುಳಿತರು ಮುಂದೆ ಹಿತ್ತಾಳೆಯ ಪರಾತ ಅದರಲ್ಲಿ ತಮ್ಮ ಎರಡೂ ಪಾದಗಳಿಟ್ಟರು, ಬಲಕ್ಕೆ ಇದ್ದಲ್ಲಿಯೇ ಶೇಗಡಿಯ ಮೇಲೆ ಬಿಸಿ ನೀರು ತುಂಬಿದ ತಾಮ್ರದ ತಪೇಲಿ ಇಟ್ಟಿದ್ದೆವು  ಅವರು ಆ ನಿಗಿ ನಿಗಿಯಾದ ಅಗ್ನಿಯ ಶೇಗಡಿಯಲ್ಲಿಯೇ  ಚಕ್ರ, ಶಂಖ ಮುದ್ರೆಗಳನ್ನು ಇಟ್ಟರು. ತಂದೆಯವರು ಮತ್ತು ನಾನು ಇಬ್ಬರೂ ಕೂಡಿಯೇ ಬಿಸಿ ನೀರಿನಲ್ಲಿ ಪಾದ ತೊಳೆದು ಒರೆಸಿ ಗಂಧಾಕ್ಷತೆಯಿಂದ ಧೂಪ ದೀಪ ಅಕ್ಷತೆಗಳಿಂದ ಪೂಜಿಸಿ ನಮಸ್ಕರಿಸಿದೆವು, 
           ತಾಯಿ ಮತ್ತು ಜಯಶ್ರೀ ದೀಪಾ ಮೂವರೂ  ನೀಲಾಂಜನ ಹಚ್ಚಿಟ್ಟು ದೂರಿನಿಂದಲೇ ಪೂಜಿಸಿ ನಮಸ್ಕರಿಸಿದರು. ಸರ್ವರೂ ಎದುರು ಬಂದು ಕೂರಲು ಹೇಳಿ ಎಲ್ಲರ ತಲೆಯ ಮೇಲೆ ಮಂತ್ರಾಕ್ಷತೆ ಹಾಕಿದರು.   ಎಲ್ಲರಿಗೂ ಫಲ ಮಂತ್ರಾಕ್ಷತೆ ಕೊಟ್ಟಮೇಲೆ, ತಪ್ತಮುದ್ರಾ ಧಾರಣೆಯಾಯಿತು.  ದೀಪಾ ವಾದಿರಾಜ ಮತ್ತು ತ್ರಿವಿಕ್ರಮ ತಪ್ತ ಮುದ್ರೆಗೆ ಅಂಜಿ ದೂರ ಸರಿಯುವಾಗ ವಿಕ್ರಮನನ್ನು ಹಿಡಿದು ಹೊಟ್ಟೆಗೆ ಮುದ್ರೆ ಕೊಟ್ಟೆ ಬಿಟ್ಟರು. ದೀಪಿಕಾಗೆ ದೂರಿನಿಂದಲೇ ಬಾಳೆಹಣ್ಣು,ಉತ್ತತ್ತಿ ಉಡಿಯಲ್ಲಿ ಹಾಕಿದರು. ಪಾದಪೂಜೆ ಸಂಪನ್ನವಾದ ನಂತರ ದಕ್ಷಿಣೆಯಿತ್ತು ನಮಸ್ಕರಿಸಿ ಬೀಳ್ಕೊಡುವಾಗ  ತಂದೆಯವರನ್ನು ಉದ್ದೇಶಿಸಿ .....
" ನಿಮ್ಮ ಮಕ್ಕಳಲ್ಲಿ ಒಬ್ಬನನ್ನು ಮಠಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸಿರಿ.  ಮಕ್ಕಳ ಮಂತ್ರ ಪಠಣ ಪದ್ಧತಿ  ವಿಶೇಷವಾಗಿ ಕಲಿಸಿದ್ದೀರಿ, ಒಬ್ಬನದು ವಿಗ್ರಹಿಸದೇ ಸ್ವರ ಸರಾಗವಾಗಿ ಹರಿಯುವಂತೆ ಇದ್ದರೇ ಇನ್ನೊಬ್ಬನದು ವಿಗ್ರಹ ಮಾಡಿ ಬಿಡಿಸಿ ಅದೇ ಸ್ವರಯುಕ್ತವಾಗಿ ಸ್ಫುಟವಾಗಿ ಚಲಸುತ್ತದೆ,"  ಆಸ್ವಾದಿಸಿ, ಕೇಳಿ ಆನಂದವಾಯಿತು. ಮುಂಬರುವ ಯುಗಾದಿಯ ನಂತರ ಆ ಬಗ್ಗೆ ನಿಗದಿಯಾದ ಸ್ಥಳ ಮತ್ತು ದಿವಸವನ್ನು ಶ್ರೀ ಅವಧಾನಿಯವರ ಮುಖಾಂತರ ತಿಳಿಸುತ್ತೇವೆ, ಇಷ್ಟಕ್ಕೂ ಎಲ್ಲವೂ ನಿಮ್ಮ ನಿರ್ಣಯವನ್ನು ಅವಲಂಬಿಸಿದೆ, ಎಂದು ಹೇಳಿ ಆಶೀರ್ವದಿಸಿದರು. 

No comments:

Post a Comment