Friday, April 26, 2019

WATER POT Tradition to do ( ಗಡಿಗೆ ನೀರು )

                                                                                                                                               ಸಂಗ್ರಹಿತ 
ಗಡಿಗೆ ನೀರು
*ಗಡಿಗೆನೀರು*- ಗಡಿಗೆ ಎಂದರೆ ಕುಂಭ , ಕುಂಭ ಎಂದರೆ ಭಗವಂತನು ಅನುಗ್ರಹಪೂರ್ವಕವಾಗಿ ನಮಗೆಲ್ಲರಿಗೂ ನೀಡಿದ ಈ ಸ್ಥೂಲದೇಹ , ಅರ್ಥಾತ್ ಸಾಧನ ಶರೀರ . ಈಶಾವಾಸ್ಯ ಟೀಕಾದಲ್ಲಿ   * ಆಸಮಂತಾತ್ ಪಾಲಯಂತೀತಿ ಕರ್ಮಾಣ್ಯಾಪಃ * ಎಂಬಲ್ಲಿ ನೀರು ಎಂದರೆ ಕರ್ಮಗಳು ಎಂದು ಹೇಳಿದ್ದಾರೆ .ಇದನ್ನೇ ಶ್ರೀವಾದಿರಾಜಗುರುಸಾರ್ವಭೌಮರು ತಮ್ಮ ಟೀಕಾ ಪ್ರಕಾಶದಲ್ಲಿ  * ಕರ್ಮಾಣಿತ್ಯತ್ರ ಸರ್ವಕರ್ಮಣಾಮಂತೇ ಕೃಷ್ಣಾರ್ಪಣಬುದ್ಧ್ಯಾ *
* ಅಪಾಮದೀಯಮಾನತ್ತ್ವಾತ್ , ಅಪ್ ಪದೇನ ಸರ್ವಕರ್ಮಣಾಮುಪಲಕ್ಷಣಮಿತಿ ಭಾವಃ * ಎಂದು ತಿಳಿಸುತ್ತಾ ನೀರು ಎಂದರೆ ಕರ್ಮಗಳು ಎನ್ನುವದನ್ನು ಸ್ಪಷ್ಟಪಡಿಸಿದ್ದಾರೆ . 
       ಹೀಗಾಗಿ ಗಡಿಗೆ ನೀರು ಅಂದರೆ ಸಾಧನಶರೀವಾದ ಈ ಸ್ಥೂಲದೇಹದಲ್ಲಿ ಸತ್ಕರ್ಮಗಳು ಎನ್ನುವ ನೀರನ್ನು ತುಂಬುವದು ಎಂದು ಅರ್ಥ ಈ ಅಭಿಪ್ರಾಯವನ್ನೇ ಶ್ರೀಪುರಂದರದಾಸರು - *ಕೈಯಿಲ್ಲದ ಕುಂಬಾರನು ಮಾಡಿದ ಮೂರು ಗಡಿಗೆಗಳ ಎರಡು ಒಡಕು - ಒಂದಕೆ ಬುಡವೇ ಇಲ್ಲ * ಎಂಬ ಪ್ರಯೋಗದ ಮುಖಾಂತರ ತಿಳಿಸಿದ್ದಾರೆ . 
        ಆದ್ದರಿಂದ ಈಗ ಯಾರದೇ ಉಪನಯನ ಹಾಗೂ ವಿವಾಹ ಕಾರ್ಯಗಳು ನಿರ್ಧಾರವಾದ ಮೇಲೆ ಅವರ ಬಂಧುಬಳಗದವರು ಉಪನಯನ ಇದ್ದರೆ ಉಪನಯನವಾಗುವ ಹುಡುಗ ,  ಮುಖ್ಯವಾಗಿ   ಅವನ ತಂದೆತಾಯಿ ಹಾಗೂ ಅವನ ಸಹೋದರಿ(ಕಳಸಗಿತ್ತಿ) ಇವರನ್ನು ಆಮಂತ್ರಿಸಿ ಭಗವಂತನಿಗೆ ನಿವೇದಿತವಾದ   ಬಗೆಬಗೆಯ  ಆಹಾರಪದಾರ್ಥಗಳನ್ನು ಅವರಿಗೆ ಉಣಬಡಿಸಿ ಅವರೆಲ್ಲರಿಗೂ ಉಡುಗೊರೆ ಕೊಟ್ಟು ಇನ್ನುಮುಂದೆ ಬ್ರಹ್ಮಚರ್ಯ ಆಶ್ರಮಕ್ಕೆ ಪಾದಾರ್ಪಣೆ ಮಾಡುವವನು ನೀನು , ನಿನ್ನ ಈ ದೇಹವೆಂಬ ಗಡಿಗೆಯಲ್ಲಿ ಸತ್ಕರ್ಮಾನುಷ್ಠಾನಗಳು ಎಂಬ ನೀರನ್ನು ತುಂಬಸ್ತಾಯಿರು ಅದಕ್ಕಾಗಿ ನಾವೆಲ್ಲರೂ ಸಹ ಭಗವಂತನ ಪರಮಾನುಗ್ರಹದಿಂದ ನಿನಗೆ ಬೆಂಬಲಿಗರಾಗಿ ಇರುತ್ತೇವೆ ಧೈರ್ಯದಿಂದ ಬ್ರಹ್ಮಚರ್ಯ ಆಶ್ರಮವನ್ನು ಸಾರ್ಥಕವಾಗಿ ಪರಿಪಾಲಿಸು ಎನ್ನುವ ಸಂದೇಶ ತುಂಬಿದ * ಗಡಿಗೆನೀರು  * ಮಾಡುತ್ತಾರೆ . 
      ವಿವಾಹದ ಪ್ರಸಂಗದಲ್ಲಿ ಹುಡುಗ ಅಥವಾ ಹುಡುಗಿ ಅವರ ತಾಯಿ ತಂದೆ  ಕಳಸಗಿತ್ತಿ ಇವರನ್ನು ಕರೆಸಿ ಇನ್ನುಮುಂದೆ 
* ಧನ್ಯೋ ಗೃಹಸ್ಥಾಶ್ರಮಃ * ಎಂದು ಶಾಸ್ತ್ರದಲ್ಲಿ ಹೇಳಿರುವಂತೆ, ರಾಜಾ ಭರ್ತೃ ಹರಿಯ ಉಕ್ತಿಯಂತೆ  , ಬ್ರಹ್ಮಚರ್ಯ ಗೃಹಸ್ಥ ವಾನಪ್ರಸ್ಥ ಸನ್ಯಾಸ ಈ ನಾಲ್ಕು ಆಶ್ರಮಗಳಲ್ಲಿ ಸಾಧನ ಮಾಡಲು ಗೃಹಸ್ಥಾಶ್ರಮವೇ ಅತ್ಯಂತ ಅನುಕೂಲರವಾದದ್ದು ಹಾಗೂ ಶ್ರೇಷ್ಠವಾದದ್ದು , ಗೃಹಸ್ಥಾಶ್ರಮದಲ್ಲಿ ಚಾಚೂತಪ್ಪದೆ ಪರಿಪಾಲಿಸಿದ ಧರ್ಮಾನುಷ್ಠಾನಗಳಿಂದ ಕೇವಲ ತನ್ನ ಪರಿವಾರ ಅಷ್ಟೇ ಅಲ್ಲಾ ಇಡೀ ತನ್ನ ೨೧ ಕುಲಗಳೇ ಉದ್ಧಾರವಾಗುತ್ತವೆ . ಹೀಗಾಗಿ ಈ ಗೃಹಸ್ಥಾಶ್ರಮದಲ್ಲಿ ವಿಧಿಸಲ್ಪಡುವ  ಧರ್ಮಕರ್ಮಾನುಷ್ಠಾನಗಳು ಎಂಬ ನೀರಿನಿಂದ ಸಾಧನಶರೀರವಾದ ಈ ಸ್ಥೂಲದೇಹವೆಂಬ ಗಡಿಗೆಯನ್ನು ಚನ್ನಾಗಿ  ತುಂಬಿಸು ಸಂಸಾರದಲ್ಲಿ ಏನೇ ತೊಂದರೆಗಳು ಬಂದಾಗ ಭಹಗವಂತನ ಅನುಗ್ರಹದಿಂದ ದಯಪಾಲಿಸಿದ ಈ ಬಾಂಧವ್ಯವನ್ನು ಮರೆಯಬೇಡಾ ನಾವೆಲ್ಲರೂ ಸಹ ನಿನ್ನ ಬೆಂಗಾವಲಾಗಿ ಇರುತ್ತೇವೆ ಎಂಬ ಸಂದೇಶ ತುಂಬಿದ *ಗಡಿಗೆನೀರು* ಎನ್ನುವ ಕಾರ್ಯಕ್ರಮ ಮಾಡುವ ಪದ್ಧತಿ ರೂಢಿಗೆ ಬಂದಿದೆ.

No comments:

Post a Comment