Saturday, May 18, 2019

Vishnu Sahasranaama Why to perform ( ವಿಷ್ಣು ಸಹಸ್ರನಾಮವೇ ಯಾಕೆ ? )

                                                              ಸಂಗ್ರಹಿತ 
ವಿಷ್ಣು ಸಹಸ್ರನಾಮವೇ ಯಾಕೆ?
ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ. ಬೃಹಸ್ಪತಿ ಆರಾಧನೆಯಿಂದ ಬ್ರಹ್ಮವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ, ದಕ್ಷಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮೀ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು, ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ದೇವತೆಗಳಿಂದ ಸ್ವರ್ಗಪ್ರಾಪ್ತಿ, ವಿಶ್ವೇದೇವತೆಗಳಿಂದ ಭೂಸಂಪತ್ತು, ಅಶ್ವಿನಿದೇವತೆಗಳಿಂದ ಆಯುರ್ವೃದ್ಧಿ, ಗಂಧರ್ವರಿಂದ ಸ್ಪುರದ್ರೂಪ, ಸೌಂದರ್ಯ, ಊರ್ವಶಿಯಿಂದ ಸ್ತ್ರೀವಿಹಾರ, ಯಜ್ಞದಿಂದ ಕೀರ್ತಿ, ಈಶ್ವರನಿಂದ ವಿದ್ಯೆ ಹಾಗೂ ಒಳ್ಳೆಮನೋಭಾವ, ಗೌರೀಪೂಜೆಯಿಂದ ಅನ್ಯೋನ್ಯತೆ, ಸುಖದಾಂಪತ್ಯ, ಪಿತೃಗಳಿಂದ ಸಂತತಿ ವೃದ್ಧಿ ಹೀಗೆ ಒಬ್ಬೊಬ್ಬ ದೇವತೆಯಿಂದ ಒಂದೊಂದು ಸಿದ್ಧಿಯಾದರೆ, ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಈ ಎಲ್ಲ ಸಿದ್ಧಿಗಳೂ ಒಟ್ಟಿಗೆ ಸುಲಭವಾಗಿ ಲಭಿಸುವುದು.
ಪಾರಾಯಣ ಎಂದರೆ…
ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ಅದರಲ್ಲೇ ಪರಾಯಣರಾಗಿ ಪಾರಾಯಣ ಮಾಡಬೇಕು. ಪರಾಯಣ ಎಂದರೆ ಪರಮಾತ್ಮನಲ್ಲಿ ಮುಳುಗಿರಬೇಕು. ಅವನೇ ಮತಿ, ಅವನೇ ಗತಿ, ಪರಮಾನಂದ ಸ್ಥಿತಿ ಎಂಬ ಅನುಭವ ಬರಬೇಕು. ಸಾಮೂಹಿಕ ಪಾರಾಯಣ ಆಗುವಾಗ ಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸುತ್ತ ಹೃದಯದಲ್ಲಿ ದೈವಿಕ ಆನಂದದ ಅನುಭವ ತರುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ದೊರಕುತ್ತದೆ. ಹಬ್ಬ, ವ್ರತ, ಉತ್ಸವಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಲಾಗುತ್ತದೆ. ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು. ಪಾರಾಯಣ ಮಾಡುವಾಗ ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡಬೇಕು. ಸಾಮೂಹಿಕ ಅಥವಾ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹವಿರುತ್ತದೆ. ಆತ್ಮಸುಖ, ಯೋಗಕ್ಷೇಮ, ಭಾಗ್ಯಸೌಭಾಗ್ಯ, ಧೈರ್ಯ, ಆತ್ಮಸ್ಥೈರ್ಯ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೇಧಾಶಕ್ತಿ ಹಾಗೂ ಕೀರ್ತಿಗಳನ್ನು ತಂದುಕೊಡುತ್ತದೆ.
ಸಾಡೇಸಾತ್- ಶನಿಕಾಟ-ವಿಷ್ಣುಸಹಸ್ರನಾಮದವರಿಗೆ ಇರುವುದಿಲ್ಲ. ಎಲ್ಲ ತಾಪತ್ರಯ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ ಪವಿತ್ರಸಹಸ್ರನಾಮವೆಂದೇ ಇದು ವಿಶಿಷ್ಟವಾಗಿದೆ.
ಸ್ವರ ತರಂಗಗಳ ಪ್ರಭಾವ
ಬೃಹತೀಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದುಸಾವಿರ ಋಕ್ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. ಒಂದುಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೇಯವೇ ವಿಷ್ಣುಸಹಸ್ರನಾಮ ಸ್ತೋತ್ರ. ವಿಷ್ಣುಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರ ಮಾಡಿ ನಾಡೀಶುದ್ಧಿ, ದೇಹಶುದ್ಧಿ, ಮನಶುದ್ಧಿ ಮಾಡುತ್ತದೆ.
ಸಂವಿಧಾನ
ಈ ಮಹಾಮಂತ್ರದ ದೈವ ಮಹಾವಿಷ್ಣು, ಇದನ್ನು ನೀಡಿದ ಋಷಿ ವೇದವ್ಯಾಸರು, ಇದರ ಛಂದಸ್ಸು ಅನುಷ್ಟುಪ್, ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತೋತ್ರ, ಈ ಮಂತ್ರದ ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತೋತ್ರ. ಇದರ ಪರಮಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ, ಈ ಮಂತ್ರದ ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರೀ ಸ್ತೋತ್ರ. ಈ ಮಂತ್ರದ ಅಸ್ತ್ರಭಾಗ ಶಾಂರ್šಧನ್ವಾ ಗದಾಧರಃ ಸ್ತೋತ್ರ, ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ ಇದರ ಕವಚ ಭಾಗ ತ್ರಿಸಾಮಾಸಾಮಗಸಾಮ. ಇಡೀ ಮಂತ್ರದ ಮೂಲಪ್ರೇರಣೆ ಆನಂದಂ ಪರಬ್ರಹ್ಮ.ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. ವಿಷ್ಣುವೇ ಜಗದೊಡೆಯ ಎಂಬುವುದೇ ಧ್ಯಾನ. ಇದರ ಪಠಣ, ಜಪ, ಪಾರಾಯಣವು ವಿಷ್ಣುಪ್ರೇರಣೆಯಿಂದಾಗಿದ್ದು, ಅದರಿಂದ ವಿಷ್ಣುಪ್ರೀತನಾಗಲಿ, ಎಂಬ ಭಾವನೆಯೇ ಇದರ ಪ್ರಯೋಜನ.
ಸಕಲ ಪುರುಷಾರ್ಥ ಸಿದ್ಧಿ
ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ಇಡೀ ಜಗತ್ತಿನ ದೈವ ಯಾವುದು? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರಚಕ್ರದ ಬಂಧನದಿಂದ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ ಜಗತ್ಪ್ರಭುವೂ, ದೇವದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣುಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲ, ಅಂತಹವರು ನಿರಂತರವಾಗಿ ಪ್ರಗತಿಯ, ಅಭ್ಯುದಯದ, ಯಶಸ್ಸಿನ ಹಾದಿಯಲ್ಲಿ ಇರುತ್ತಾರೆ. ಮಂತ್ರದ್ರಷ್ಟ್ರಾರರಾದ ಋಷಿಮುನಿಗಳಿಂದ ಪರಿಪರಿಯಾಗಿ ಸ್ತುತಿಸಲ್ಪಟ್ಟ ಈ ವಿಷ್ಣುಸಹಸ್ರನಾಮದ ಪಾರಾಯಣದಿಂದ ಎಲ್ಲ ಪುರುಷಾರ್ಥಗಳೂ ಸಿದ್ಧಿಯಾಗುತ್ತವೆ.
ಜಪಗಳಲ್ಲಿ ಸರ್ವಶ್ರೇಷ್ಠ
ವಿಷ್ಣುಸಹಸ್ರನಾಮದಲ್ಲಿ ‘ಧರ್ಮರಾಜ ಕಿಂ ಜಪನ್ ಮುಚ್ಯತೇ ಜಂತುಃ ಜನ್ಮಸಂಸಾರಬಂಧನಾತ್’ ಎಂದು ಕೇಳಿದ ಪ್ರಶ್ನೆಗೆ ಜಪಗಳಲ್ಲಿ ವಿಷ್ಣುಸಹಸ್ರನಾಮ ಜಪಶ್ರೇಷ್ಠ ಎಂದು ಭೀಷ್ಮರು ಉತ್ತರಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವಾಗ ನಾಮಮಂತ್ರ ತರಂಗಗಳು ಪರಿಸರ ಶುದ್ಧಿಮಾಡಿ, ಅಪೂರ್ವ ಸನ್ನಿಧಾನ ನಿರ್ಮಾಣ ಮಾಡುತ್ತವೆ.
ಹನ್ನೊಂದರ ಮಹತ್ವ
ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೇಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಚಕ್ರದಿಂದ ಎಂದರೆ ಹನ್ನೊಂದು ದಿನ ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮ ಇಲ್ಲ. ವಿಷ್ಣುಸಹಸ್ರನಾಮ ಇದು, ಪವಿತ್ರಕ್ಕೆ ಪವಿತ್ರ, ಮಂಗಳಕ್ಕೆ ಮಂಗಳ, ಇದನ್ನು ಪಾರಾಯಣ ಮಾಡುವವರ ಮನೆ, ಮನ ಪಾವನವಾಗುತ್ತದೆ.
ವಿಷ್ಣು ಸಹಸ್ರನಾಮ ಚಕ್ರ
ಯಾರು ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. ಇದರ ಪಾರಾಯಣದಿಂದ ಯಶಸ್ಸು, ಶ್ರೇಯಸ್ಸು, ಲಭ್ಯ. ಎಲ್ಲ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ. ಶ್ರದ್ಧೆ ಭಕ್ತಿಯಿಂದ ವಿಷ್ಣು ಸಹಸ್ರನಾಮಚಕ್ರ ಪೂರೈಸಿದವರು ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃ, ಕೀರ್ತಿಗಳನ್ನು ಹೊಂದುತ್ತಾರೆ. ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ವಿಷ್ಣುಸಹಸ್ರನಾಮ ಸರ್ವಶಾಸ್ತ್ರಗಳ ಸಾರ, ಸಾರೋದ್ಧಾರ. ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರನಾಮಗಳೇ ವಿಷ್ಣುಸಹಸ್ರನಾಮ. ಅದು ಬೃಹತೀಸಹಸ್ರದ ಸಾರ.    

ಅಪಾಯ ಕೋಟಿಗಳಿಗೆ ಉಪಾಯ ಒಂದೇ - ಹರಿನಾಮ : - ಶ್ರೀ ವಿಷ್ಣು ಸಹಸ್ರ ನಾಮ. 
(ಇಷ್ಟಾರ್ಥ ಸಿದ್ಧಿಗಾಗಿ ಮಂತ್ರಗಳು)

1. ಸಂಸ್ಕೃತಿ ಸಂವರ್ಧನ ಸ್ತೋತ್ರ - ಮಕ್ಕಳ ಯಶಸ್ಸಿಗಾಗಿ
ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ | ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್‌ ಕವಿಃ || ೧೪ ||

2. ಸಿದ್ಧಿಸಂಕಲ್ಪ ಸ್ತೋತ್ರ - ಸಂಕಲ್ಪ ಸಿದ್ಧಿಗಾಗಿ
ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ | ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ || ೨೭ ||

3. ದಂಪತಿಗಳ ಅನೋನ್ಯತೆಗೆ
ಭೂತಭವ್ಯಭವನ್ನಾಥಃ ಪವನಃ ಪಾವನೋಽನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ || ೩೨ ||

4. ಉದ್ಯೋಗ ಪ್ರಾಪ್ತಿಗಾಗಿ
ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ || ೪೨ ||

5. ದಾರಿದ್ರ್ಯನಾಶನ, ಧನಪ್ರಾಪ್ತಿಗೆ
ವಿಸ್ತಾರಃ ಸ್ಥಾವರಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್ | ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ || ೪೬ ||

6. ಐಶ್ವರ್ಯ ಪ್ರಾಪ್ತಿಗೆ
ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ | ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || ೬೫ ||

7. ವಿದ್ಯೆ ಪ್ರಾಪ್ತಿಗೆ
ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ | ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್ || ೧೯ ||
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ | ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || ೮೦ ||

8. ಸಂತಾನ ಪ್ರಾಪ್ತಿಗೆ
ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ | ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || ೯೦ ||

9. ಸರ್ವ ರೋಗ ನಿವಾರಣೆಗೆ
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ | ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ || ೧೦೩ ||

10. ಪಾಪ ನಾಶನಕ್ಕೆ
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ | ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ || ೧೦೬ ||

11. ಸುಖ ಪ್ರಸವಕ್ಕೆ
ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ |
ರಥಾಂಗಪಾಣಿ ರಕ್ಷೋಭ್ಯಃ ಸರ್ವ ಪ್ರಹರಣಾಯುಧಃ || ೧೦೭ ||

12. ಪ್ರೀತಿವರ್ಧನ ಸ್ತೋತ್ರ - ಕೌಟುಂಬಿಕ ಸಾಮರಸ್ಯಕ್ಕೆ
ಸತ್ತ್ವವಾನ್‌ ಸಾತ್ತ್ವಿಕಃ ಸತ್ಯಃ ಸತ್ಯಧರ್ಮ ಪರಾಯಣಃ | ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || ೯೩ ||

13. ಭಯನಾಶನ ಸ್ತೋತ್ರ
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ |
ಅಮೂರ್ತಿರನಘೋಽಚಿಂತ್ಯೋ(ಽ)ಭಯಕೃದ್ಭಯನಾಶನಃ || ೮೯ ||

14. ದುಸ್ವಪ್ನನಾಶನ ಸ್ತೋತ್ರ
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ | ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ || ೯೯ ||

15. ಸ್ವಸ್ತಿ ಮಂತ್ರ - ಮನಸ್ಸಿನಲ್ಲಿ ಮೂಡುವ ಆಸೆಗಳ ಸಿದ್ಧಿಗಾಗಿ
ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || ೯೬ ||

16. ಕೊನೆಯ ದಿನಗಳಲ್ಲಿ  - ಸದ್ಗತಿಗಾಗಿ
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ | ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ೪೪ ||
ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ || ೭೫ ||

ಈ ಮೇಲಿನವು ಕೆಲವು ಉದಾಹರಣೆ ಮಾತ್ರ. ಇನ್ನು ಅನುಸಂಧಾನದಿಂದ ಪ್ರತಿನಿತ್ಯವೂ, ಸಂಸಾರದ ಎಲ್ಲರೂ ದಿನಕ್ಕೊಮ್ಮೆಯಾದರೂ ಒಟ್ಟಾಗಿ, ಶುಚಿರ್ಭೂತರಾಗಿ ದೇವರ ಮುಂದೆ ಕುಳಿತು "ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರ" ವನ್ನು 
ಪಠಣಮಾಡುವುದರಿಂದ ಒಳಿತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ
ವಿಷ್ಣು
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂದಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕ್ರತ ಪದ ವಿಷ್ಣು 
ವಿಷ್ಣು ಅಂದರೆ ಸರ್ವಶಬ್ದ ವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಹಾಗೂ ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವ ಶಕ್ತ ಭಗವಂತ ವಿಷ್ಣು.
3) ವಷಟ್ಕಾರ
ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.
ಏಕೆ ಅವನು ವಷಟ್ಕಾರ ? ಏಕೆಂದರೆ ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ ಈ ಕೆಳಗಿನ ಆರು ಮುಖದಲ್ಲಿ ಜಗತ್ತಿನಾದ್ಯಂತ ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಜ್ಞಾನ ಶಕ್ತಿ ಇರುವವನು.
೨. ಶಕ್ತಿ-ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.
ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.
4)ಭೂತಭವ್ಯಭವತ್ಪ್ರಭುಃ

ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ) ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗು ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು ನಾವು ಒಡೆದು ನೋಡಿದಾಗ ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು , ಭವಿಗಳು ಎಂದರೆ ಸಂಸಾರಿಗಳು ಅಥವಾ ರಾಜಸರು , ಭವಂತಿ ಎಂದರೆ ಜೀವನದಲ್ಲಿ ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ ಹಾಗು ತಾಮಸರಿಗೂ ಪ್ರಭು ಎಂದರ್ಥ.
ಈ ರೀತಿ ಹಿಂದೆ ಇದ್ದವನು, ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ ಭೂತಭವ್ಯಭವತ್ಪ್ರಭು

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment