Tuesday, June 04, 2019

SHUDRA was fruad REAL ? ಶೂದ್ರರೆಂದು ಅನ್ನಿಸಿಕೊಂಡವರಿಗೆ ಆದ ವಂಚನೆ ನಿಜವೇ ..... ಚಿಂತನೆ

ಸಂಗ್ರಹಿತ
ಶೂದ್ರರೆಂದು ಅನ್ನಿಸಿಕೊಂಡವರಿಗೆ ಆದ ವಂಚನೆ ನಿಜವೇ ..... ಚಿಂತನೆ
                  ಸಾಮಾನ್ಯವಾಗಿ ಭಾರತದಲ್ಲಿ ಮನುಸ್ಮೃತಿಯು ಶೂದ್ರರಿಗೆ ವೇದಗಳನ್ನು ಕಲಿಯುವ ಅಧಿಕಾರ ನೀಡಲಿಲ್ಲ. ಅವರಿಗೆ ಸಂಸ್ಕೃತದ ಜ್ಞಾನವನ್ನು  ಕೊಡಲಿಲ್ಲ. ವಿದ್ಯೆಯನ್ನು ಶೂದ್ರರಿಂದ ಮುಚ್ಚಿಡಲಾಯಿತು.  ಮೇಲ್ವರ್ಗದವರ ಮನೆಯ   ಶಗಣಿಯನ್ನು ಬಾಚುವದೇ ಅವರ ಕೆಲಸವಾಗಿತ್ತು. ಯಾವುದೇ ಉನ್ನತ ಹುದ್ದೆಗಳನ್ನು ನೀಡದೇ ಅವರನ್ನು ವಂಚಿಸಲಾಯಿತು. ಮತ್ತು ಈ ವಂಚನೆಯಲ್ಲಿ ಅಧಿಕವಾಗಿ ಬ್ರಾಹ್ಮಣರು ಭಾಗೀದಾರರು. ಸಮಾಜವೆಂಬ ಪಿರಮಿಡ್ ಆಕೃತಿಯಲ್ಲಿ ಅತ್ಯಂತ ಮೇಲೆ ಬ್ರಾಹ್ಮಣನಿದ್ದರೆ ಅತ್ಯಂತ ಕೆಳಸ್ತರದಲ್ಲಿ ಶೂದ್ರನಿದ್ದಾನೆ ಮತ್ತು ಅವನನ್ನು ವಿಶೇಷವಾಗಿ ಬ್ರಾಹ್ಮಣರು ಶೋಷಣೆ ಮಾಡಿದ್ದಾರೆ ಅನ್ನುವದು ಆಧುನಿಕ ಶಿಕ್ಷಣ ಪಡೆದವರ, ಪುರೋಗಾಮಿಗಳ  ವಾದವಾಗಿದೆ.

ಬ್ರಾಹ್ಮಣರು ಭಾರತದಲ್ಲಿ ಜಾತಿ ವ್ಯವಸ್ಥೆ  ಹುಟ್ಟು ಹಾಕಿದರು. ಇದರಿಂದ ಭಾರತದಲ್ಲಿ ಇನ್ನಿಲ್ಲದಂತೆ ಜಾತಿ ತಾರತಮ್ಯಗಳು ನಡೆದು ಶೂದ್ರರು ಎಲ್ಲದರಿಂದಲೂ ವಂಚಿತರಾಗಿ ಅತಿಯಾಗಿ ಶೋಷಿಸಲ್ಪಟ್ಟರು. ( ಇದಕ್ಕೆ ಭಗವದ್ಗೀತೆಯ ಸಾಲುಗಳಾದ “ಚಾತುರ್ವರ್ಣಂ ಮಯಾ ಸೃಷ್ಟಿಂ………” ಸಾಲುಗಳನ್ನು ಉದಾಹರಿಸುತ್ತಾರೆ ) ಹಾಗಿದ್ದರೆ ಭಾರತದಲ್ಲಿ ನಿಜವಾಗಿ ಪ್ರಾಚೀನ ಕಾಲದಿಂದ ಇವತ್ತಿನ ವರೆಗೂ ಶೂದ್ರರನ್ನು ತುಂಬಾ ಶೋಷಣೆಗೊಳಪಡಿಸಲಾಗಿದೆಯೇ  ? ಎಂಬ ಪ್ರಶ್ನೆ ನಮ್ಮನ್ನು ಕಾಡತೊಡಗುತ್ತದೆ. ಅಪರಾಧಿ ಪ್ರಜ್ನೇ  ನಮ್ಮನ್ನು ತಲೆಕೆಳ ಹಾಕುವಂತೆ ಮಾಡುತ್ತದೆ. ಹಾಗೇ ಪ್ರಾಚೀನ ಕಾಲದಿಂದ ಇವತ್ತಿನವರೆಗಿನ ಕಾಲಘಟ್ಟವನ್ನು ವೀಕ್ಷಿಸಿದಾಗ ನಮಗೆ ಇಂಥ ವಾದದಲ್ಲಿ ಹುರುಳಿಲ್ಲವೆಂದು ತೋರುತ್ತಾ ಹೋಗುತ್ತದೆ.

ಮೊದಲಿಗೆ ಋಷಿ ಮುನಿಗಳ ಕಾಲಕ್ಕೆ ಹೋಗೋಣ. ಅಥವಾ ಶ್ರೀ ಬಸವಣ್ಣನವರ ಒಂದು ಪ್ರಸಿದ್ಧ ವಚನದಿಂದ ನೋಡೋಣ.
ವ್ಯಾಸ ಬೋಯಿತಿಯ ಮಗ
ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು
ಕುಲವನರಸದಿರಿಂ ಭೋ
ಕುಲದಿಂದ ಮುನ್ನೇನಾದರಿಂ ಭೋ
ಸಾಕ್ಷಾತ್ ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ
ಕಶ್ಯಪ ಕಮ್ಮಾರ
ಕೌಂಡಿನ್ಯನೆಂಬ ಋಷಿ
ಮೂರುಲೋಕವನರಿದೆ ನಾವಿದ ಕಾಣಿ ಭೋ
ಹೀಗೆ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೇಳುತ್ತಾರೆ. ಇದಕ್ಕೆ ಮಾನ್ಯ ಶ್ರೀ ಭೈರಪ್ಪನವರ ‘ಪರ್ವ’ದಿಂದ ಇನ್ನಷ್ಟು ಜನರನ್ನು ಸೇರಿಸುತ್ತೇನೆ. ಭಾರದ್ವಾಜರು ಕುಂಬಾರ ಹೆಣ್ಣುಮಗಳಲ್ಲಿ ಹುಟ್ಟಿದವರು. ಕುರುಕುಲದ ಕುಲಗುರುಗಳಾದ ಕೃಪರು ಮತ್ತು ಅವರ ತಂಗಿ ಕೃಪಿಯು ಬೇಡರ ಹೆಣ್ಣುಮಗಳಲ್ಲಿ ಹುಟ್ಟಿದವರು.  ಭೈರಪ್ಪನವರ ‘ದಾಟು’ ಪ್ರಕಾರ ವಶಿಷ್ಠರ ಹೆಂಡತಿ ಅರುಂಧತಿ ಮಾದಿಗ ಹೆಣ್ಣು. ಜಮದಗ್ನಿಯ ಹೆಂಡತಿ ರೇಣುಕೆ ಕ್ಷತ್ರಿಯ ಹೆಣ್ಣು. ಪುಲಸ್ತ್ಯರ  ಹೆಂಡತಿ ರಾವಣನ ತಾಯಿ ಕೈಕಶಿ ರಾಕ್ಷಸ ಕುಲದಾಕೆ. ಸ್ವತಃ ವಿಶ್ವಾಮಿತ್ರರು ಕ್ಷತ್ರಿಯ. ಜಾಬಾಲಿಗಳು ವೇಶ್ಯೆಯ ಮಗ. ವಾಲ್ಮೀಕಿ ಬೇಡರ ಜಾತಿಯವರು. ಇವರೆಲ್ಲ ಶೂದ್ರ ಕುಲದ ಹೆಣ್ಣು ಮಕ್ಕಳಲ್ಲಿ ಹುಟ್ಟಿದ್ದಾರೆ. ಅಥವಾ ಸ್ವತಃ ಶೂದ್ರರಾಗಿದ್ದಾರೆ. ಆದಾಗ್ಯೂ ಇವರನ್ನು ಬ್ರಾಹ್ಮಣ ಸಮಾಜ ತಿರಸ್ಕರಿಸಿದ್ದು ನಮಗೆ ಕಂಡುಬಂದಿಲ್ಲ ಇಲ್ಲವೇ ಇಲ್ಲ . . ಇವರಲ್ಲಿ  ಅನೇಕರನ್ನು ಬ್ರಾಹ್ಮಣ ಸಮುದಾಯ ಗೋತ್ರೋತ್ಪನ್ನ ಋಷಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಅನೇಕರು ಬರೆದ ಮಂತ್ರಗಳನ್ನು ಬ್ರಾಹ್ಮಣ ಸಮುದಾಯ ನಿಷ್ಟೆಯಿಂದ ಗೌರವದಿಂದ ನಿತ್ಯ ಪಠಿಸುತ್ತದೆ. ಅವರ ಕಾವ್ಯಗಳು ನಮ್ಮ ನಿತ್ಯದ ಜೀವನದ ಮೇಲೆ ಪ್ರಭಾವ ಬೀರಿವೆಯೆಂದು ಗೌರವದಿಂದ ಕಾಣಲಾಗುತ್ತದೆ. ಅಂದ ಮೇಲೆ ಶೂದ್ರಾದಿಗಳಿಗೆ ಋಷಿ ಮುನಿಗಳ ಕಾಲದಲ್ಲಿ ಯಾವ ಶೋಷಣೆ ನಡೆದಿಲ್ಲವೆಂದೇ ಹೇಳಬೇಕಾಗುತ್ತದೆ.

ಶ್ರೀ ಸೂರ್ಯನಾಥ ಕಾಮತ್ ಅವರು ತಮ್ಮ ‘ಒಕ್ಕಲುತನ ಮತ್ತು ಒಕ್ಕಲಿಗರು’ ಎಂಬ ಪುಸ್ತಕದಲ್ಲಿ ಜನಕ ಮಹಾರಾಜ ಒಕ್ಕಲಿಗನಾಗಿದ್ದನೆಂದು ತಿಳಿಸುತ್ತಾರೆ. ಯಾಕೆಂದರೆ ಹೊಲ ಹರಗುವಾಗಲೇನೇ ಸೀತೆ ಅವನ ನೇಗಿಲಿಗೆ ತಾಗಿ ಸಿಕ್ಕವಳು ಮತ್ತು ಒಕ್ಕಲಿಗರ ಗುರುತಾದ ನೇಗಿಲದ ಹೆಸರನ್ನೇ ಆಕೆಗಿಡಲಾಯಿತು. ಸೀತೆ ಅಂದರೆ ನೇಗಿಲ ಪಾಳು ಅಥವಾ ತುದಿ ಎನ್ನುತ್ತಾರೆ. ಆದ್ದರಿಂದ ಜನಕ ಮಹಾರಾಜ ಜಾತಿಯಿಂದ ಒಕ್ಕಲಿಗನಾಗಿದ್ದನೆಂದು ನಿರೂಪಿಸುತ್ತಾರೆ. ಜನಕ ಒಕ್ಕಲಿಗನಾಗಿದ್ದರೂ ವೇದ ಪಾರಂಗತನಾಗಿದ್ದನಲ್ಲದೇ ಅವನನ್ನು ರಾಜರ್ಷಿ ಎಂದು ಕರೆಯಲಾಗುತ್ತಿತ್ತು. ಇವನು ಹೆಣ್ಣು ಕೊಡುವಾಗಲೂ ಅವರು  ಇವನ ಜಾತಿಗೆ ಸೇರಿದವರೇ  ಆಗಿರಬೇಕಲ್ಲವೇ? ಆಗ ದಶರಥನೂ ಶೂದ್ರನಾಗಿರಬೇಕೆಂದು ತರ್ಕಿಸಬೇಕಾಗುತ್ತದೆ. ಜನಕನಿಗೆ ಶೂದ್ರನಾಗಿದ್ದರೂ ವೇದಾಧ್ಯಯನ ನಿರಾಕರಿಸಿರಲಿಲ್ಲ. ಮತ್ತು ಗೌರವದಿಂದ ಎಲ್ಲರೂ ಜನಕನನ್ನು ಕಂಡಿದ್ದಾರೆ. ಹಾಗೆ ರಾಮನನ್ನು ಕೂಡ ಗೌರವದಿಂದ ಕಾಣುವದಷ್ಟೇ ಅಲ್ಲದೇ ವಿಷ್ಣುವಿನ ಅವತಾರಕ್ಕೂ ಹೋಲಿಸಿದ್ದಾರೆ. ಇವನ ಕತೆ ಬರೆದ ವಾಲ್ಮೀಕಿ ಬೇಡರವನಾದರೂ ಶೂದ್ರನೊಬ್ಬನ ಕಥೆ ಬರೆದವನಾದರೂ ಅವನನ್ನು ಮತ್ತು ಅವನ ಕತೆಯನ್ನು ಬ್ರಾಹ್ಮಣ ಸಮುದಾಯ ತಲೆಯ ಮೇಲಿಟ್ಟುಕೊಂಡು ಮೆರೆಸಿದೆ.

                        ಕೃಷ್ಣನ ಕಾಲಕ್ಕೆ ಬರೋಣ. ಇಲ್ಲಿಯೂ ವಿಷ್ಣುವಿನ ಅವತಾರವೆಂದು ಕರೆಸಿಕೊಂಡು ಬ್ರಾಹ್ಮಣರಿಂದ ಪೂಜೆಗೊಳಗಾಗುತ್ತಿರುವವನು ಒಬ್ಬ ಶೂದ್ರ ರಾಜ. ಅವನೇ ಕುರುಬ, ದನಗಾಹಿ  ಅಥವಾ ಗವಳಿ ಅಥವಾ ಯಾದವನೆಂದು ಪರಿಚಿತನಾದ ಕೃಷ್ಣ. ಈ ಕಾಲದಲ್ಲಿ ಅನೇಕ ಶೂದ್ರ ರಾಜರು ಕಂಡು ಬರುತ್ತಾರೆ. ವಿರಾಟರಾಜ ಅವರಲ್ಲೊಬ್ಬ. ಇವನು ಕೌರವರ ಮೂಲ ಪುರುಷ ಶಂತನುವಿನ ಹೆಂಡತಿ ಸತ್ಯವತಿಯ ತಮ್ಮ. ಅಂದ ಮೇಲೆ ಇವನೂ ಅಂಬಿಗ ಕುಲದವನು. ಪಾಂಡವರು ಇವನ ಮಗಳ ಮದುವೆ ತಮ್ಮ ಮಗನೊಂದಿಗೆ ಮಾಡಿದ್ದಾರೆ. ಭೀಷ್ಮ, ಚಿತ್ರಾಂಗದ, ವಿಚಿತ್ರವೀರ್ಯರು ಅಂಬಿಗ ಕುಲದವರಾದ ಗಂಗೆ, ಸತ್ಯವತಿಯ ಮಕ್ಕಳು. ವ್ಯಾಸರು ಕೂಡ ಇದೇ ಸತ್ಯವತಿಯ ಮಗ. ಇವರ ಕಾಲದಲ್ಲಿ ವೇದಾಧ್ಯಯನವಾಗಲೀ ಇನ್ನಿತರ ವಿದ್ಯೆಯಾಗಲೀ ಯಾರಿಗೂ ನಿರಾಕರಿಸಲ್ಪಟ್ಟಿಲ್ಲ. ಈ ಕಾಲದ ಶ್ರೇಷ್ಟ ಧನುರ್ಧರ ಭೀಷ್ಮನಾಗಿದ್ದ. ಹಾಗೇ ದಾಸೀ ಪುತ್ರ ಸೂತ ವಿದುರ ವೇದ ಪಾರಂಗತನಾಗಿದ್ದ. ಇಲ್ಲಿ ಉಳಿದೆಲ್ಲಾ ಕೆಳಜಾತಿಯವರಿಗೆ ಕಲಿಸಿದ ಧನುರ್ವಿದ್ಯೆಯನ್ನು ಕೇವಲ ಕರ್ಣ, ಮತ್ತು ಏಕಲವ್ಯರಿಗೆ ನಿರಾಕರಿಸಲಾಯಿತೆಂದರೆ ಏನರ್ಥ? (ಕರ್ಣನು ಅಗ್ನಿವೇಷರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವಾಗ ಆತನ ಜಾತಿ ಅಡ್ಡವಾಗಿಲ್ಲದಿದ್ದುದನ್ನು ಗಮನಿಸಿ). ವಿರಾಟರಾಜ, ಕೃಷ್ಣ, ಜನಕ ಇವರುಗಳನ್ನು ನೋಡಿದಾಗ ಪ್ರಭುತ್ವವು ಶೂದ್ರರದೂ ಆಗಿತ್ತೆಂಬುದು ನಮಗೆ ತಿಳಿಯುತ್ತದೆ. ಪ್ರಭುತ್ವದಲ್ಲೇ ಅವರೇ ಅವರಿರುವಾಗ ಅವರ ಶೋಷಣೆ ನಡೆಯುತ್ತಿತ್ತು. ಅವರಿಗೆ ವಿದ್ಯೆ ಹೇಳಿಕೊಡುತ್ತಿರಲಿಲ್ಲ ಕೇವಲ ಶಗಣಿ ಬಳಿಯುವ ಕಾರ್ಯ ಮಾತ್ರ ಅವರದಾಗಿತ್ತು ಎಂದರೆ ನಂಬಲರ್ಹವಲ್ಲ.

ಇನ್ನು ಇತಿಹಾಸ ಕಾಲಕ್ಕೆ ಬರೋಣ.
ಕ್ರಿ. ಪೂ 2 ನೇ ಶತಮಾನದಲ್ಲಿ ಮನುಸ್ಮೃತಿ ಬರೆಯಲಾಯಿತು ಮತ್ತು ಅದರಲ್ಲಿ ಶೂದ್ರ ಶೋಷಣೆಯ ಅನೇಕ ಅಂಶಗಳಿದ್ದವು. ಮನುಸ್ಮೃತಿಯಿಂದಲೇ ಭಾರತದಲ್ಲಿ ಶೂದ್ರರು ತಮ್ಮ ಸ್ಥಾನ ಮಾನ ಕಳೆದುಕೊಳ್ಳುವಂತಾಯಿತು. ಮನುಸ್ಮೃತಿಯಲ್ಲಿ ಶೂದ್ರನಿಗೆ ರಾಜ್ಯಾಧಿಕಾರ ಕೊಡಬಾರದು. ಒಂದು ವೇಳೆ ಶೂದ್ರನು ರಾಜನಾಗಿದ್ದರೆ ಅಂಥಲ್ಲಿ ಇರಬಾರದು ಎಂದು ಹೇಳಿದ್ದಾರೆ ಮತ್ತು ಶೂದ್ರ ವಿದ್ಯೆ ಕಲಿತರೆ ಅವನ ಕಿವಿಯಲ್ಲಿ ಸೀಸ ಸುರಿಯಬೇಕೆಂದು ಹೇಳಲಾಗಿದೆ. ಇದನ್ನು ಅನುಸರಿಸಿ ಬ್ರಾಹ್ಮಣರು ಶೂದ್ರನಿಗೆ ವಿದ್ಯೆ ಕಲಿಸದೇ ಮುಚ್ಚಿಟ್ಟು ವಂಚಿಸಿ ತಮ್ಮ ದಾಸರಂತೆ ಅವರನ್ನು ಕಂಡರು ಎಂದು ಹೇಳಲಾಗುತ್ತದೆ. ಅದರಿಂದ ಮನುಸ್ಮೃತಿಯನ್ನು ಒಂದು ಗ್ರಂಥ,ಪುಸ್ತಕವನ್ನು ಸುಟ್ಟುಹಾಕಲಾಯಿತು.  ಸರಿ, ಮನುಸ್ಮೃತಿಯನ್ನು ಅದರಲ್ಲಿರುವ ಹೇಳಿಕೆಯನ್ನು ಕಟ್ಟು ನಿಟ್ಟಿನಿಂದ ಬ್ರಾಹ್ಮಣ ಸಮುದಾಯ  ಅನುಸರಿಸಿದ್ದಾರೆಯೇ? ಎಂದು ನೋಡೋಣ.

ಮೊದಲನೆಯದಾಗಿ ಮನು ಸ್ಮೃತಿಯ ಪ್ರಕಾರ ಶೂದ್ರನ ರಾಜ್ಯಾಧಿಕಾರ ತಡೆಯಬೇಕು ಮತ್ತು ಶೂದ್ರ ರಾಜನಿದ್ದಲ್ಲಿ ವಾಸಿಸಬಾರದಲ್ಲವೇ? ಇದೇ ಕಾಲದ ಚಂದ್ರಗುಪ್ತ ಮೋಚಿಯಾಗಿದ್ದ. ಅವನ ಮಗ ಬಿಂದುಸಾರ ಮೊಮ್ಮಗ ಅಶೋಕ ಇವರೂ ಮೋಚಿಯೇ ಅಲ್ಲವೇ ? ಇವರನ್ನು ರಾಜರಾಗಲು ಅವತ್ತಿನ ಮನುಸ್ಮೃತಿಯಲ್ಲಿ ಹೇಳಿದ್ದನ್ನು ಕಟ್ಟುನಿಟ್ಟಾಗಿ ಪಾಲಿಸುವ ಬ್ರಾಹ್ಮಣರು ಹೇಗೆ ಬಿಟ್ಟರು. ನಂದರು ಕೂಡ ಶೂದ್ರರಲ್ಲವೇ ಅವರ ಅಧಿಕಾರಗಳನ್ನು ಅವರೇಕೆ ಒಪ್ಪಿದರು. ಅಲ್ಲದೇ ಇವರ ಆಡಳಿತದಲ್ಲಿ ಬ್ರಾಹ್ಮಣರ ಪಾಲಿತ್ತು. ಉದಾ ಚಾಣಕ್ಯ, ಅಮಾತ್ಯ ರಾಕ್ಷಸ ಇತ್ಯಾದಿ. ಇವರೇಕೆ ರಾಜ್ಯ ತ್ಯಾಗ ಮಾಡಿ ಹೋಗಲಿಲ್ಲ, ಪ್ರತಿಭಟಿಸಲಿಲ್ಲ .

ಭಾರತದಲ್ಲಿ ಬೌದ್ಧ ಮತ ಜನ್ಮ ತಾಳಿದ್ದೇ ವೈದಿಕರ ಶೋಷಣೆಯ ವಿರುದ್ಧ ಶೂದ್ರರ ಬಂಡಾಯದ ಪ್ರತೀಕವಾಗಿ. ಈ ಮಾತನ್ನು ಅನೇಕ ಕಡೆ ನಾವು ಕೇಳಿದ್ದೇವೆ. ಭಾರತದ ಅತ್ಯಂತ ಶ್ರೇಷ್ಟ ವಿದ್ಯಾಲಯ ನಳಂದ. ಇದು ಬೌದ್ಧರ ಒಡೆತನದಲ್ಲಿತ್ತು. ಇಲ್ಲಿ ಬೌದ್ಧ ಮತ ತತ್ವಗಳ ಜೊತೆಗೆ ಭೂಗೋಳ, ಖಗೋಳ, ವಿಜ್ಞಾನ ,ತಂತ್ರಜ್ಞಾನ, ಆಯುರ್ವೇದ, ರಾಜನೀತಿ, ಅರ್ಥಶಾಸ್ತ್ರ ಹಾಗು ಇನ್ನಿತರ ಎಲ್ಲಾ ವಿಷಯ ಕಲಿಸಲ್ಪಡುತ್ತಿತ್ತು. ಹೆಚ್ಚಿನ ವ್ಯಾಸಂಗಕ್ಕಾಗಿ ಅನೇಕ ವಿದೇಶದ ವಿದ್ಯಾರ್ಥಿಗಳೂ ಇಲ್ಲಿ ಬರುತ್ತಿದ್ದರು. ಕಲಿಸುವ ಶಿಕ್ಷಕರು ಬೌದ್ಧರಾಗಿದ್ದರಲ್ಲದೇ ದತ್ತಿ, ದಾನ, ದೇಣಿಗೆ ನೀಡುವ ಪ್ರಭುಗಳು ಸಹ ಬೌದ್ಧರಾಗಿದ್ದರು. ನಮ್ಮ ಆಧುನಿಕ ಶಿಕ್ಷಿತರ,ಪುರೋಗಾಮಿಗಳ  ಪ್ರಕಾರ ಬೌದ್ಧರೆಲ್ಲಾ ಶೂದ್ರರು ಮತ್ತು ವೈದಿಕರ ವಿರುದ್ಧ ಬಂಡಾಯವೆದ್ದು ಸೃಷ್ಟಿಸಿಕೊಂಡ ಮತ. ಹೀಗಿದ್ದಾಗ ನಳಂದಾದಲ್ಲಿ ಕಲಿಯುವ ಎಲ್ಲಾ ವಿದ್ಯಾರ್ಥಿಗಳು ಬೌದ್ಧರಾಗಿದ್ದರು, ಅಂದರೆ ಶೂದ್ರರಾಗಿದ್ದರು. (10% ವಿದೇಶದ, ಹಾಗೂ ಇನ್ನಿತರ ಮತದವರಿದ್ದರೆನ್ನಿ) ಹೀಗಿದ್ದಾಗ ಶ್ರೇಷ್ಠ ವಿಶ್ವವಿದ್ಯಾಲಯದಲ್ಲಿ ಶೂದ್ರರಿಗೆ ಶಿಕ್ಷಣ ದೊರೆಯುತ್ತಿತ್ತೆಂದು ತಿಳಿಯುತ್ತದೆ. ಇಷ್ಟಿದ್ದರೂ ಶೂದ್ರರನ್ನು ವಿದ್ಯೆಯಿಂದ ವಂಚಿಸಿದರೆಂದರೆ ಏನರ್ಥ?!!ಇಂಥ ಹೇಳಿಕೆಗಳು ಸರಿಯೇ! ಇಲ್ಲಿ ಶಿಕ್ಷಣ ಪಡೆದ ಶೂದ್ರರು ತಮ್ಮವರೆಲ್ಲರಿಗೂ ಶಿಕ್ಷಣ ಹೇಳಿಕೊಟ್ಟು ಅವರೆಲ್ಲರನ್ನು ಸುಶಿಕ್ಷಿತರನ್ನೇಕೆ ಮಾಡಲಿಲ್ಲ? ಮುಂದುವರಿದ ವಾಹಿನಿಯಲ್ಲಿ ತರಲು ಪ್ರಯತ್ನ ಮಾಡಲಿಲ್ಲವೋ,ಏಕೆ ಮಾಡಲಿಲ್ಲ, ಹಿಂದುಳಿದವರು ಶೂದ್ರರು ಎಂಬ ಜನಾಂಗ ಇನ್ನೂ ಅದೇ ಪರಿಸ್ಥಿತಿಯಲ್ಲಿ ಏಕೆ ಉಳಿಯಿತು,  ಸಾವಿರಾರು ವರ್ಷಗಳ ಹಿಂದೆನೇ ಶೂದ್ರರಿಗೆ ಮನುಸ್ಮೃತಿಯ ಪ್ರಭಾವ ಗಾಢವಾಗಿದ್ದ ಕಾಲದಲ್ಲೇ ಶ್ರೇಷ್ಠ ಮಟ್ಟದ ಶಿಕ್ಷಣ ಸಿಕ್ಕಿದ್ದರೂ ಸಾವಿರ ಸಾವಿರ ವರ್ಷ ಕಳೆದ ಮೇಲೂ ಶೂದ್ರರು ಹಿಂದೆ ಬೀಳಲು ಕಾರಣವೇನು?
ಈ ಮಾತು ನಿಜವೆಂದು ಅನ್ನಿಸುವುದಿಲ್ಲ.

ಡಾ|| ಸರಜೂ ಕಾಟ್ಕರ್ ಅವರು ‘ಶಿವಾಜಿಯ ಮೂಲ ಕನ್ನಡ ನೆಲ’ ಪುಸ್ತಕದಲ್ಲಿ ಬರೆಯುತ್ತಾರೆ, “ಮಧ್ಯ ಯುಗದಲ್ಲಿನ ರಾಜರೆಲ್ಲಾ ಶೂದ್ರರೇ ಆಗಿದ್ದರು. ಅವರಿಗೆ ಬ್ರಾಹ್ಮಣರು ಗೊತ್ರ ಜಾತಿ ನೀಡಿ ಕ್ಷತ್ರಿಯರನ್ನಾಗಿಸುತ್ತಿದ್ದರು. ಹೊಯ್ಸಳರು, ಯಾದವರು, ಕುರುಬ ಅಥವಾ ಗವಳಿಗರಾಗಿದ್ದರು, ಗಂಗರು ಒಕ್ಕಲಿಗರಾಗಿದ್ದರು”.

ಕರ್ನಾಟಕ ಯುನಿವರ್ಸಿಟಿಯಲ್ಲಿ ದೊರೆತ  “ಶಾಸನಗಳಲ್ಲಿ ‘ಪುಲಿಕೇಶಿ’ ಹೆಸರನ್ನು ‘ಪೊಲ ಕೆಸ್ಸಿ’ ಅಂತಾ ಬರೆಯಲಾಗಿದೆ. ‘ಪೊಲ’ ಎಂದರೆ ಹೊಲ, ‘ಕೆಸ್ಸಿ’ ಅಂದರೆ ಮಾಡುವವ ಎಂದರ್ಥವಾಗುತ್ತದೆ. ಪುಲಿಕೇಶಿ ಇದರ ಅರ್ಥವನ್ನು ನಾವು ಹುಲಿಯಂತೆ ಕೂದಲಿರುವವ ಎಂದು ಅರ್ಥೈಸಿದ್ದೇವೆ. ಆದರೆ ಕೂದಲು (ಆಯಾಲ) ಇರುವದು ಸಿಂಹಕ್ಕೆಮಾತ್ರ , ಹುಲಿಗೆಲ್ಲಿ ಕೂದಲಿರುತ್ತೆ?” . ಇದರರ್ಥ ಚಾಲುಕ್ಯರು ಒಕ್ಕಲಿಗರೆಂದಾಯಿತು. ಅಂದರೆ ಶೂದ್ರರೆಂದು ಪ್ರತ್ಯೇಕ ಹೇಳಬೇಕಿಲ್ಲವಲ್ಲ.

ವಿಜಯನಗರದ ಅರಸರು ಬೇಡ ಕುರುಬರಾಗಿದ್ದರು. ಪಾಳೇಗಾರರು, ಮೈಸೂರು ಅರಸರು, ಕರಾವಳಿಯ ಅರಸರೆಲ್ಲಾ ಕೆಳಜಾತಿಯವರೇ ಆಗಿದ್ದರು. ಅಂದರೆ ಮಧ್ಯಯುಗದಲ್ಲೂ ಪ್ರಭುತ್ವ ಶೂದ್ರಾದಿಗಳ ಕೈಯಲ್ಲಿಯೇ ಇತ್ತು ಅಂತಾಯಿತು. ನನ್ನ ಪ್ರಶ್ನೆ ಅಧಿಕಾರ ಹಣ ತೋಳ್ಬಲ ಎಲ್ಲಾ ಇದ್ದೂ ಇವರೇಕೆ ಬ್ರಾಹ್ಮಣರ ತಾಳಕ್ಕೆ ತಕ್ಕಂತೆ ಕುಣಿದರು. ಇವರೇಕೆ  ಬ್ರಾಹ್ಮಣರ ಮಾತು ಕೇಳಿ ತಮ್ಮವರನ್ನೇ ಶೋಷಿಸಿದರು. ಹಾಗೆ ಶೋಷಣೆ ಮಾಡಿದ್ದಾರೆ ಎನ್ನುವದೇ ನಿಜವಾದರೆ ತಪ್ಪು ಯಾರದು? ಪ್ರಭುತ್ವದ್ದು ತಾನೆ? ಈಗಲಾದರೂ ಏನು ?  ಪ್ರಭುತ್ವವೇ ಬ್ರಾಹ್ಮಣೇತರ ಜನರೇ ಬ್ರಾಹ್ಮಣ ಜನಾಂಗವನ್ನು ತೀವ್ರವಾಗಿ ಅಮಾನುಷವಾಗಿ ತುಳಿಯುತ್ತಿಲ್ಲವೇ , ನಿರಂತರ ಶೋಷಿಸುತ್ತಿಲ್ಲವೇ ?

ಈ ಯಾವ ಅರಸರಿಗೂ ಬ್ರಾಹ್ಮಣರು ಪುರೋಹಿತರಾಗಿರಲಿಲ್ಲ. ಅವರವರ ಜಾತಿಯದೇ ಪುರೋಹಿತರು ಎಲ್ಲರಿಗೂ ಇದ್ದರು. ಬ್ರಾಹ್ಮಣರು ಸಂಖ್ಯಾ ಬಾಹುಳ್ಯ ಉಳ್ಳವರೂ ಅಲ್ಲ. ಬಾಹುಬಲದಿಂದ ಹಿಡಿತದಲ್ಲಿ ಇಟ್ಟುಕೊಂಡಿದ್ದರೆಂದರೆ ಅದೂ ಇಲ್ಲ. ಭಾರತದ ಮೇಲೆ ಇಸ್ಲಾಮರ ಆಳ್ವಿಕೆಯೂ ಆಯಿತು , ಬ್ರಿಟಿಷರ ಆಳ್ವಿಕೆಯೂ ಆಯಿತು , ಇವರೆಲ್ಲ ಬ್ರಾಹ್ಮಣೇತರರೇ,  ಅವರಲ್ಲಿ ಬ್ರಾಹ್ಮಣರು ಗುಲಾಮರಾಗಿ ಕೆಲಸಮಾಡಿದವರು, ಹಾಗಾದರೆ ಈ ರಾಜಮಹಾರಾಜರುಗಳು ಇವರೇಕೆ ಬ್ರಾಹ್ಮಣರ ಆಧೀನರಾಗಿ ತಮ್ಮವರನ್ನು ಶೋಷಿಸುತ್ತಾರೆ. ಇನ್ನು ಕೆಲವರು ಬುದ್ಧಿ ಬಲದಿಂದ ಎಲ್ಲರನ್ನೂ ಬ್ರಾಹ್ಮಣರು ಹಿಡಿತದಲ್ಲಿ ಇಟ್ಟುಕೊಂಡಿದ್ದರೆನ್ನಬಹುದು. ಆದರೆ ಸಾವಿರ ಸಾವಿರ ವರ್ಷಗಳ ಕಾಲ ಕೇವಲ ಬುದ್ಧಿ ಬಲದಿಂದಲೇ ಒಂದು ಜನಾಂಗ ಅದೂ 2% ಜನಾಂಗ 98% ಜನರನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವೇ? ಸಾವಿರ ಸಾವಿರ ವರ್ಷ ಕಳೆದರೂ ಈ ಹುನ್ನಾರ ಶೂದ್ರರಿಗೆ ತಿಳಿಯಲೇ ಇಲ್ಲವೇ? ವರ್ಷಗಳು ಕಳೆದಂತೆ ಮಂಗ, ಚಿಂಪಾಂಜಿಗಳ ಮೆದುಳೇ ವಿಕಾಸವಾಗುತ್ತದೆಂದು ವಿಜ್ಞಾನ ಹೇಳುತ್ತದೆ. ಹಾಗಿದ್ದಾಗ ಶೂದ್ರನ ಮೆದಳು ವಿಕಾಸವೇ ಆಗಲಿಲ್ಲವೆ?! ಆತನ ಮೆದುಳಿನ ವಿಕಾಸವನ್ನೂ ಬ್ರಾಹ್ಮಣ ತಡೆ ಹಿಡಿದನೆ?!  ಹಾಗೆ ತಡೆಹಿಡಿದಿದ್ದೇ ಆದರೆ ಒಂದು ಆತನು ಮಾನವಾತೀತನೆ ಆಗಿರಬೇಕು.!! ಅಂದರೆ ಭೂಸುರನು, ಇಲ್ಲ ದೇವರಾಗಿರಬೇಕಲ್ಲವೆ?!  ಇದಕ್ಕೆ ಪ್ರಸಕ್ತ ಬ್ರಾಹ್ಮಣ ಸಮುದಾಯ ಉತ್ತರಾಧಿಕಾರಿ ಹೇಗೆ ?

ಇನ್ನು ಕೆಲವರು ಶೂದ್ರರಿಗೆ ವಿದ್ಯೆ ನಿಷಿದ್ಧವಾಗಿದ್ದರಿಂದ ಮತ್ತು ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅತೀ ಮಹತ್ವದ್ದಾಗಿದ್ದರಿಂದ ಬ್ರಾಹ್ಮಣರು ವಿದ್ಯೆಯನ್ನೇ ಮುಚ್ಚಿಟ್ಟಿದ್ದರಿಂದ ಅವರು ಶೋಷಣೆಗೆ ಒಳಗಾದರು. ಎಂದು ಹೇಳುವುದುಂಟು. ಸರಿ, ಬ್ರಾಹ್ಮಣರು ವಿದ್ಯೆಯನ್ನು ಶೂದ್ರರಿಂದ ಮುಚ್ಚಿಟ್ಟರು. ಸಂಸ್ಕೃತದಲ್ಲಿ ಅಪಾರ ಜ್ಞಾನವಿತ್ತು. ಅಂಥ ಸಂಸ್ಕೃತವನ್ನೇ ಅವರು ಮುಚ್ಚಿಟ್ಟರು ಮತ್ತು ಕಲಿತವರ ನಾಲಿಗೆ ಕತ್ತರಿಸುತ್ತಿದ್ದರು ಹಾಗು ಸೀಸ ಸುರಿಯುತ್ತಿದ್ದರು. (ಇದಕ್ಕೆ ಮಾರಮ್ಮದೇವಿ ಕತೆ ಹೇಳುತ್ತಾರೆ ಮತ್ತು ಸಿಖ್ ಮತದಲ್ಲಿ ಒಬ್ಬನ ನಾಲಿಗೆ ಕತ್ತರಿಸಿದ ಕತೆ ಹೇಳುತ್ತಾರೆ) ಹಾಗಿದ್ದರೆ ಶೂದ್ರರಾಜ ಹರ್ಷ ‘ರತ್ನಾವಳೀ ಕಲ್ಯಾಣ’ ಹೇಗೆ ಬರೆದ? ಶೂದ್ರರಾಜನಾದ ಪುಲಕೇಸಿಯ ಸೊಸೆ ವಿಜ್ಜಿಕೆ ಕವಿಯಿತ್ರಿ ಹೇಗೆ ಅನಿಸಿಕೊಂಡಳು? ಶೂದ್ರ ಕಾಳಿದಾಸ ಶ್ರೇಷ್ಟ ಕವಿ ಹೇಗಾದ? ಶೂದ್ರ ವಿಜಯನಗರದ ರಾಜ ಕೃಷ್ಣದೇವರಾಯ ‘ಆಮುಕ್ತ ಮೌಲ್ಯದ’ ಹೇಗೆ ಬರೆದ? ಶೂದ್ರ ಕಂಪಣರಾಯನ ಹೆಂಡತಿ ‘ಮಥುರಾ ವಿಜಯಂ’ ಹೇಗೆ ಬರೆದಳು? ಇವರಿಗೆಲ್ಲಾ ಏಕೆ ನಾಲಿಗೆ ಕತ್ತರಿಸಿ ಸೀಸ ಸುರಿಯಲಿಲ್ಲ.?? (ಕೆಲವು ಉದಾಹರಣೆ ನೀಡಿರುವೆ, ಇನ್ನೂ ಅನೇಕ ಉದಾಹರಣೆಗಳಿವೆ.)

ಹೋಗಲಿ, 12 ನೇ ಶತಮಾನದ ಬಸವಾದಿಗಳ ಚಳುವಳಿಯೂ ಶೂದ್ರ ಚಳವಳಿ ತಾನೆ? ಹಾಗಿದ್ದರೆ ಈ ಕಾಲದಲ್ಲಿ ಅನೇಕ ಶೂದ್ರಾತೀಶೂದ್ರರೂ ವಚನ ಬರೆದಿದ್ದಾರೆ? ಇವರೆಲ್ಲ ಹೇಗೆ ಕಲಿತರು? ಮುಂದೆ ತಾವು ಕಲಿತದ್ದನ್ನು ಮರೆತರೇಕೆ? ನಂತರದ 800 ವರ್ಷಗಳಲ್ಲಿ ಇವರೇಕೆ ಹಿಂದುಳಿದರು? ಔರಂಗಜೇಬನ ಅಣ್ಣ ಷಹಾಜಹಾನನ ಮಗ ದಾರಾ ಶುಕೋಹ್ ಅನ್ನುವವನು ಉಪನಿಷತ್ತುಗಳನ್ನು ಪರ್ಶಿಯನ್ ಭಾಷೆಗೆ ತುರ್ಜುಮೆ ಮಾಡಿದ. ಅವನಿಗೆ ಸಂಸ್ಕೃತ ಯಾರು ಕಲಿಸಿದರು? ಮ್ಯಾಕ್ಸ ಮುಲ್ಲರ  ವೇದಗಳನ್ನು ಅನುವಾದಿಸಿದ. ಇವನಿಗಾರು ಸಂಸ್ಕೃತ ಕಲಿಸಿದರು? ನೀವು ಹೀಗೂ ಅನ್ನಬಹುದು ಅವರು ಪ್ರಭುಗಳಾದ್ದರಿಂದ ಅಧಿಕಾರವಿದ್ದರಿಂದ ಕಲಿಸಿದರೆನ್ನುತ್ತೀರಿ. ಸರಿ ಈ ಅಧಿಕಾರವನ್ನು ಭಾರತದ ಇತಿಹಾಸದುದ್ದಕ್ಕೂ ಶೂದ್ರರೇ ಅನುಭವಿಸಿದ್ದಾರಲ್ಲಾ? ಇವತ್ತಿಗೂ ಅನುಭವಿಸುತ್ತಿರುವರಲ್ಲಾ? ಮತ್ತೇಕೆ ವಿದ್ಯೆ ಮುಚ್ಚಿಟ್ಟು ಶೋಷಣೆ ಮಾಡಿದರೆಂದು ಬ್ರಾಹ್ಮಣರನ್ನು ಇನ್ನೊಬ್ಬರನ್ನು ದೂರುವ ಅವಶ್ಯಕತೆ ಏನಿದೇ ? ಇನ್ನೂ ಎಷ್ಟೋ ಬರೆಯಬೇಕಿದೆ  ಉದಾಹರಣೆಗಳು ಕೊಡಬೇಕಿದೆ, ಪೂರ್ವಾಗ್ರಹ ಪೀಡಿತವಾದ ಪ್ರಸಕ್ತ ಬ್ರಾಹ್ಮಣೇತರ ಪುರೋಗಾಮಿ ಜನ ಸಮುದಾಯ, ಪ್ರಭುತ್ವವೂ ಸದ್ ಸದ ವಿವೇಕದಿಂದ ವಿಚಾರಮಾಡುವುದಿಲ್ಲ ,ಅವರಿಗೆ ಅದು ಬೇಕಾಗಿಯೂ ಇಲ್ಲ, ಅಸ್ತ್ರವಾಗಿ ಉಪಯೋಗಿಸಿ ತುಳಿಯ ಹೊರಟವರಿಗೆ ಏನೂ ಹೇಳಿ ಉಪಯೋಗವಿಲ್ಲ.   ಬ್ರಾಹ್ಮಣ ಸಮುದಾಯವನ್ನು ಬಲಿಪಶು ಮಾಡುವ ಹುನ್ನಾರ ಮಾತ್ರ .

ಒಟ್ಟಾರೆ ಯಾರೇ ಹಿಂದುಳಿಯಲಾಗಲೀ ಮುಂದುವರಿಯಲಾಗಲೀ ಅವರೇ ಕಾರಣ ಕರ್ತರೆ ವಿನಃ ಇನ್ನೊಬ್ಬರಲ್ಲ. ಬಡತನದಲ್ಲಿರುವ ವ್ಯಕ್ತಿ ಯಾವ ಜಾತಿಯವನೇ ಆಗಿದ್ದರೂ ಭೂತಕಾಲದಲ್ಲೂ  ಶೋಷಿತ, ವರ್ತಮಾನದಲ್ಲೂ ಮತ್ತು ಭವಿಷ್ಯದಲ್ಲೂ  ಶೋಷಿತನಾಗುತ್ತಲೆ ಇರುತ್ತಾನೆ.
“ಬಲಿಷ್ಠ ಜೀವಿಗಳ ಉಳಿವು ಅಶಕ್ತ ಜೀವಿಗಳ ಅಳಿವು ಪ್ರಕೃತಿ ನಿಯಮ” ಇದಕ್ಕೆ ಬ್ರಾಹ್ಮಣ ದೂಷಣೆ ಸಲ್ಲ.

No comments:

Post a Comment