Sunday, July 26, 2020

YOGA FOR ELDERS -4 ( ವಯಸ್ಕರ ಯೋಗ, ಭಾಗ 4 )

ವಯಸ್ಕರಿಗೆ ಯೋಗ, ಭಾಗ 4:

ನಿನ್ನೆ ಪ್ರಾಣಾಯಾಮವನ್ನು ಕುರಿತು ಮತ್ತಷ್ಟು ಚರ್ಚಿಸಿದೆವು. ಆದರೂ ಇನ್ನೊಂದು ಮಹತ್ವದ ವಿಷಯವೆಂದರೆ, ಪ್ರಾಣಾಯಾಮ ಮಾಡುವಾಗ ಕಣ್ಣುಗಳನ್ನು ಮುಚ್ಚಿರಬೇಕು ಮತ್ತು ಆಸನಗಳನ್ನು ಮಾಡುವಾಗ ಕಣ್ಣು ತೆರೆದಿರಬೇಕು. ಇದು ತುಂಬಾ ಮಹತ್ವದ ವಿಷಯ, ಇದಕ್ಕೆ ವೈಜ್ಞಾನಿಕ ಕಾರಣವಿದೆ. ಜೊತೆಗೆ ಪ್ರಾಣಾಯಾಮ ಮಾಡುವಾಗ ಸದಾ ಜಾಲಂಧರ ಬಂಧವನ್ನು ಹಾಕಿರಬೇಕು. ಅವೆರಡೂ ವಿಷಯಗಳನ್ನು ಇಂದು ಚರ್ಚಿಸೋಣ. ಇವು ತುಂಬ 
ಹತ್ವದ್ದಾಗಿವೆ. ಪ್ರಾಣಾಯಾಮ ಮಾಡುವಾಗ ನಮ್ಮ ದೇಹದಲ್ಲಿ ಪ್ರಾಣಶಕ್ತಿ ಯ ಹರಿವು ಸಹಜಕ್ಕಿಂತ ತುಂಬ ಹೆಚ್ಚಿರುತ್ತದೆ. ಹೀಗಾಗಿ ಅದು ದಾರಿ ಸಿಕ್ಕಂತೆ ಹೊರಬರಲು ಪ್ರಯತ್ನಿಸುವ ಸಾಧ್ಯತೆ ಹೆಚ್ಚು. ದಾರಿ ಅಂದರೆ ನವರಂಧ್ರಗಳೇ ತಾನೇ !? ಅದರಲ್ಲಿ ಕಣ್ಣು ಕೂಡ ಒಂದು. ಅದರಿಂದಾಗಿ, ಕಣ್ಣು ತೆರೆದಿದ್ದರೆ, ಅದಕ್ಕೆ ಒತ್ತಡ ಉಂಟಾಗುತ್ತದೆ, ಮತ್ತು ಕಣ್ಣುರಿ, ಕಣ್ಣು ಕೆಂಪಾಗುವುದು ಸಹಜವಾಗಿ ಆಗಬಹುದು. ಅದಕ್ಕೆ ಕಣ್ಣು ಮುಚ್ಚಿರಬೇಕು, ಅಷ್ಟೆ.

ಜಾಲಂಧರ ಬಂಧ: ಇದು ಬಂಧತ್ರಯಗಳಲ್ಲಿ ಒಂದು. (ಮಿಕ್ಕವುಗಳು, ಉಡ್ಡಿಯಾನ ಬಂಧ ಮತ್ತು ಮೂಲಬಂಧ) ಬೆನ್ನು ನೇರವಾಗಿ ಯಾವುದೇ ಅನುಕೂಲಕರ ಆಸನದಲ್ಲಿ ಕುಳಿತಂತೆಯೆ, ಎದೆ ಮೂಳೆ ಮತ್ತು ಪಕ್ಕೆಲುಬು ಕೋಶದ ಮುಂಭಾಗವನ್ನು ಮೇಲೆತ್ತಿ, ಹೆಚ್ಚು ಕಷ್ಟಪಡದೆ ಕತ್ತನ್ನು ನೀಳಮಾಡಿ ಭುಜಗಳನ್ನು ಸಡಿಲುಬಿಡಿ, ಮುಂಡ ಮತ್ತು ಕಂಠಭಾಗದ ಬೆನ್ನು ಹುರಿಯನ್ನು ಸೆಳಿದಿಟ್ಟು, ತಲೆಯನ್ನು ಕತ್ತಿನ ಹಿಂಭಾಗದಿಂದ ಮುಂದಕ್ಕೆ, ಕೆಳಕ್ಕೆ ಬಗ್ಗಿಸಿ, ಗಂಟಲು ಮತ್ತು ಕಂಠದ ಮಾಂಸಖಂಡಗಳನ್ನು ಕುಗ್ಗಿಸಕೂಡದು. ಕತ್ತು, ಗಂಟಲಿನ ಮಾಂಸಖಂಡಗಳಲ್ಲಿ ಎಳೆತವಿಲ್ಲದ ಶಾಂತಸ್ಥಿತಿ ಮೂಡಲಿ. ಗದ್ದವು ಎದೆಯ ಮೇಲ್ಭಾಗದ ಕಾಲರ್ ಬೋನ್ ಗಳ ತಗ್ಗಿನಲ್ಲಿ ವಿಶ್ರಮಿಸಲು ಅನುವಾಗುವಂತೆ ತಲೆಯನ್ನು ತುಸು ಬಾಗಿಸಿ. ಅಂದ್ರೆ ಗದ್ದವನ್ನು ಎದೆಯ ಮೇಲೆ ಬಲವಂತವಾಗಿ ಒತ್ತಬೇಡಿ, ಆದರೆ ಎದೆಯ ಮೇಲೆ ವಿಶ್ರಮಿಸಲಿ. ಎಲ್ಲಿಯೂ ಯಾವುದೇ ರೀತಿಯ ಒತ್ತಡವಿರಬಾರದು. ಇದೇ ಜಾಲಂಧರ ಬಂಧ. (ಇಲ್ಲಿ. ಹೊಸಬರಿಗೆ ಉಬ್ಬಿಸಿದ ಎದೆಯಮೇಲೆ ಗದ್ದವನ್ನು ಹೇರಲು ಸಾಧ್ಯವಾಗದಿದ್ದಲ್ಲಿ, ಒಂದು ಬಟ್ಟೆಯ ತುಂಡನ್ನು ಮಡಿಸಿ ಗದ್ದದ ಕೆಳಗೆ ತಾತ್ಕಾಲಿಕವಾಗಿ ಇಟ್ಟುಕೊಂಡು ಅಭ್ಯಾಸ ಮಾಡಬಹುದು.)

ಪ್ರಯೋಜನಗಳು: ಉಸಿರಾಟ ಸಲೀಸು, ಸೌರಜಾಲದ (ಜಠರಾಗ್ನಿಯ) ಕುಳಿಗಳು ಸೊಂಟದ ಮಧ್ಯ ಭಾಗದಲ್ಲಿವೆ. ಚಂದ್ರಜಾಲವು ತಲೆಯಲ್ಲಿ ಮೆದುಳಿನ ಮಧ್ಯಭಾಗದಲ್ಲಿದೆ. ಇದು ಮನಃಶಾಂತಿ ನೀಡುವ ಸ್ಥಳ. ಇದರಲ್ಲಿನ ತಣ್ಣಗಿರುವ ರಸಗಳು ಅಪವ್ಯಯವಾಗದಂತೆ, ಸೌರಜಾಲದ ಕುಳಿಗಳ ನರಗಳು ಉತ್ಪಾದಿಸುವ ಉಷ್ಣಾಂಶದಿಂದ ಇಂಗಿಹೋಗದಂತೆ ಕತ್ತಿನ ನಾಡಿಗಳನ್ನು ಬಿಗಿಗೊಳಿಸಿ, ಜಾಲಂಧರ ಬಂಧವು ತಡೆಯುತ್ತದೆ. ಜೀವನ ಸಂಜೀವಿನಿ ಎನಿಸಿದ ಈ ಚೈತನ್ಯ ಶಕ್ತಿ ಕಾಪಾಡಲ್ಪಡುವುದರಿಂದ ದೀರ್ಘಾಯುಷ್ಯ ಲಭ್ಯ. ಈ ಬಂಧವು ಇಡಾ, ಪಿಂಗಳ ನಾಡಿಗಳನ್ನು ಒತ್ತಿ ಹಿಡಿಯುತ್ತದೆ ಮತ್ತು ಸುಷುಮ್ನಾ ನಾಡಿಗೆ ಪ್ರಾಣಶಕ್ತಿ ಹರಿಯಲು ಸಹಾಯವಾಗುತ್ತದಂತೆ. ಅಲ್ಲದೆ ಮೂಗಿನ ಹೊಳ್ಳೆಗಳ ಅಡೆತಡೆಗಳನ್ನು ನಿವಾರಿಸಿ ಥೈರಾಯಿಡ್ ಗ್ರಂಥಿಗಳಿಗೂ ಪ್ರಾಣಶಕ್ತಿ ನೀಡುತ್ತದೆ‌. ಮೆದುಳಿಗೆ ವಿಶ್ರಾಂತಿ ನೀಡುವುದಲ್ಲದೆ ಮನ ಬುದ್ಧಿಗಳ ಅಹಂಕಾರವನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ.

ಇನ್ನು, ಯೋಗದ ಅಷ್ಟಾಂಗಗಳ ಪೈಕಿ, ಉಳಿದ ಇನ್ನು ನಾಲ್ಕು ಅಂಗಗಳನ್ನು, ವಿವರವಾಗಿ ಅಲ್ಲದಿದ್ದರೂ, ಸಂಕ್ಷಿಪ್ತವಾಗಿ ಈಗ ತಿಳಿದುಕೊಳ್ಳೋಣ. ಯಾಕೆಂದರೆ, ವಯೋವೃದ್ಧರಾದ ನಾವುಗಳು, ಅವುಗಳನ್ನು ಅಭ್ಯಾಸ ಮಾಡುವುದು ತುಂಬಾ ಕಷ್ಟ ಸಾಧ್ಯ !!?? ಅಲ್ಲದೆ, ಯೋಗದ ಈ ಎಂಟು ಪ್ರಕಾರ ಗಳಲ್ಲಿ ನಾವು ಇಲ್ಲಿನ ವರೆಗೆ ತಿಳಿದುಕೊಂಡ ನಾಲ್ಕು ಅಂಗಗಳಿಗೆ ಬಹಿರಂಗ ಯೋಗವೆನ್ನುತ್ತಾರೆ. ಮುಂದಿನವು ಸಂಪೂರ್ಣವಾಗಿ ಅಂತರಂಗ ಯೋಗವೆನ್ನುತ್ತಾರೆ.
(ಇವು ಆತ್ಮ ಮತ್ತು ಪರಮಾತ್ಮನ ನಡುವಿನ ಅರ್ಥಾತ್ ಪರಿಶುದ್ಧ ಆಧ್ಯಾತ್ಮಿಕ ವಿಷಯವೆಂದರೆ ಹೆಚ್ಚು ಸಮಂಜಸವೆನಿಸುತ್ತದೆ !!)

ಅಂಗ 5: ಪ್ರತ್ಯಾಹಾರ.
ಇಂದ್ರಿಯಗಳನ್ನು ವಿಷಯವಸ್ತುಗಳಿಂದ ಹಿಂದಿರುಗಿಸಿ ಅಂತರ್ಮುಖಗೊಳಿಸುವ ಪ್ರಯತ್ನವೇ ಪ್ರತ್ಯಾಹಾರ. ಇದು ಅಂತರಿಕ ಮತ್ತು ಬಹಿರಂಗ ಯೋಗಗಳ ನಡುವಿನ ಸೇತುವೆ.

ಅಂಗ 6: ಧಾರಣ : 
ಪ್ರಯತ್ನ ಪೂರ್ವಕವಾಗಿ ಮನಸ್ಸನ್ನು ಧ್ಯೇಯವಸ್ತುವಿನ ಕಡೆಗೆ ಕೇಂದ್ರೀಕರಿಸುವುದು ಧಾರಣ.

ಅಂಗ 7 : ಧ್ಯಾನ  ಮತ್ತು,
ಅಂಗ 8 : ಸಮಾಧಿ :
ಧಾರಣ ಹೆಚ್ಚು ಸಮಯ ಮುಂದುವರಿದರೆ ಅದೇ ಧ್ಯಾನ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಿರಾಯಾಸವಾಗಿ ಮನಸ್ಸನ್ನು ಧ್ಯೇಯವಸ್ತುವಿನಲ್ಲಿ ಏಕಾಗ್ರಗೊಳಿಸುವುದು ಧ್ಯಾನ. ಈ ಸ್ಥಿತಿಯನ್ನು ವರ್ಣನೆ ಮಾಡುವುದು ತುಂಬ ಕಷ್ಟ. ಅದು ವರ್ಣನಾತೀತ.

ಮನಸ್ಸು ಏಕಾಗ್ರತೆ ಸಾಧಿಸಿ, ಧ್ಯಾನಿಸುವ ವಸ್ತುವಿನೊಂದಿಗೆ ತನ್ಮಯತೆಯನ್ನು ಹೊಂದುವ ಸ್ಥಿತಿಯೇ ಸಮಾಧಿ. ಇದುವೇ ಸಾಧಕನ ಪರಮಗುರಿ.

No comments:

Post a Comment