Monday, November 15, 2021

LITER Encouragement to literary leaning (ಸಾಹಿತ್ಯ ಒರತೆಗೆ ಪ್ರೋತ್ಸಾಹನ)

ಸಾಹಿತ್ಯ ಒರತೆಗೆ ಪ್ರೋತ್ಸಾಹನ  

ಅಶ್ವಿನ ಶುಕ್ಲ ದಶಮಿ ರವಿವಾರ ಉತ್ತರ ರಾತ್ರಿ  ದಿನಾಂಕ 07/10/1973  ಅತ್ಯಂತ ಪುರಾತನವಾದ ಶ್ರೀಮನ್ನಾರಾಯಣನ ಗುಡಿಯಿಂದ  ಹೊರಬಂದಾಗ ನನ್ನ ವಯಸ್ಸು ಸುಮಾರು  5 ರಿಂದ 6 ಇರಬಹುದು, ತಲೆ ತುಂಬಾ ಜಡೆ, ಮೈಮೇಲೆ ಯಾವ ಬಟ್ಟೆಗಳಿಲ್ಲ, ಕೈಯಲ್ಲಿ ಒಂದು ಚಿಕ್ಕ ಕೋಲು,  ಶರೀರದ ಮೇಲೆ ಅಲ್ಲಲ್ಲಿ ಗೋಪಿಚಂದ ಹಚ್ಚಿ ಕೊಂಡದ್ದು, ಸಮಯ ಮಧ್ಯಾಹ್ನ ವಾಗಿರಬಹುದು. ಗುಡಿಯಿಂದ ಹೊರಬಂದ ಮೇಲೆ ನೋಡಿದರೆ ಯಾರ್ಯಾರು ಇಲ್ಲ, ನಿರ್ಜನವಾದ ಪ್ರದೇಶ, ಗುಡಿಯ ಹೊರಬಾಗಿಲ ಇಕ್ಕೆಲಗಳಲ್ಲಿ ಕಲ್ಲಿನಲ್ಲಿ ಕೆತ್ತನೆಗಳಿದ್ದವು, ಅದಕ್ಕೂ ಮೇಲೆ ಜಯ ವಿಜಯ ಮುರ್ತಿಗಳಿದ್ದಂತ್ತಿತ್ತು,ಮೇಲೆ ಎಡ ಬಲಗಳಲ್ಲಿ  ನಿಂತ ಭಂಗಿಯ ಸಿಂಹ ಮೂರ್ತಿಗಳು ನೋಡನೋಡುತ್ತಲೇ ತಲೆ ಎತ್ತಿ ಎದುರಿಗೆ ಗರ್ಭ ಗುಡಿಯಲ್ಲಿ ಆಜಾನುಬಾಹು  ಮೂರ್ತಿ ಶಂಖ ಚಕ್ರ ಹಿಡಿದ ಕೈಗಳು, ಬಲಗೈ ಅಭಯ ಹಸ್ತ  ಎಡಗೈಯಲ್ಲಿ ಏನಿತ್ತೋ ಗೊತ್ತಿಲ್ಲ, ಸುಂದರವಾದ ಕಿರೀಟ ಹಳದಿ ವಸ್ತ್ರ ಪರಿಧಾನ ಮಾಡಿದ್ದು ಉಪವಸ್ತ್ರವನ್ನು ಕೊರಳಿಗೆ ಹಾಕಿದಂತಿತ್ತು.ಕಾಲಲ್ಲಿ ರುಳಿ ಹಾಕಿದ್ದರು ಎನ್ನಿಸುತ್ತದೆ, ಎಡಕ್ಕೂ ಬಲಕ್ಕೂ ಹೆಣ್ಣುಮಕ್ಕಳ ಮೂರ್ತಿಗಳಂತ್ತಿದ್ದವು, ಬಟ್ಟೆ ಹೊದಿಸಲಾಗಿತ್ತು  ದೇವರಿಗೆ ಶ್ವೇತ ಪುಷ್ಪ ವಾದರೆ ಹೆಣ್ಣುಮಕ್ಕಳಿಗೆ ಕೆಂಪು ಪುಷ್ಪಗಳು ಏರಿಸಲಾಗಿತ್ತು  ಕಾಲ್ಬಳಿಯಲ್ಲಿ ದಿನಾಲು ಊದುತ್ತಿರುವ ಶಂಖವಿರಬಹುದು ದೊಡ್ಡದಾಗಿತ್ತು, ಹಣೆಗೆ ಪಂಢರಪುರದ ಶ್ರೀ ವಿಠ್ಠಲ ದೇವರಿಗೆ ಹಚ್ಚುವಹಾಗೆ ಗೋಪಿಚಂದ ಹಚ್ಚಿದ್ದರು. ಕಲ್ಲಿನ ದೊಡ್ಡ ಸಮಯಿಯಲ್ಲಿ ಮಿಣುಕು ಮಿಣುಕಾದ ದೀಪವಿತ್ಟು. 

ಹೊಸ ಪರಿಸರ ಕಂಡು ಸಂಭ್ರಮದಲ್ಲಿದ್ದೆ  ದಟ್ಟವಾದ ಅಡವಿ,ಎತ್ತರವಾದ ಗಿಡಗಳು ಪಶು ಪಕ್ಷಿಗಳ ಕಿಲಕಿಲಾಟವಿಲ್ಲ ಹಿಂಸ್ರ ಪಶುಗಳ ಚಿತ್ಕಾರವು ಮಾತ್ರ ಆಗಾಗ ಕೇಳಿಸುತ್ತಲಿತ್ತು, ಯಾವುದರ ಪರಿವೆಯೂ ಇಲ್ಲದೆ ಸುಮ್ಮನೆ ಹೊರಟಿದ್ದೆ, ಹಿಂತಿರುಗಿ ನೋಡಿದಾಗ  ಗುಡಿಯು ಕಾಣಿಸಲೇ ಇಲ್ಲ, ಸ್ವಲ್ಪ ಗಾಬರಿಯಾಯಿತು ಗಂಟಲು ಒಣಗಿ ಬಾಯಾರಿಕೆಯಾಯಿತು. ಎಲ್ಲಿಯೂ ನೀರು ಕಾಣಿಸಲಿಲ್ಲ, ಮುಂದಕ್ಕೆ ಹೊರಟೆ, ದೂರದಲ್ಲಿ ಒಂದು ಹಾವು ನನ್ನೆಡೆಗೆ ಬರುತ್ತಿರುವಂತೆ ಕಾಣುತ್ತಿತ್ತು, ಪುಣ್ಯಕ್ಕೆ ನನ್ನ ಕಡೆಗೆ ಬರುತ್ತಿರಲಿಲ್ಲ . 

ಅನತಿ ದೂರದಲ್ಲಿ ಬಿಳೆ ಬಟ್ಟೆ ಪರಿಧಾನ ಮಾಡಿದ ಎತ್ತರವಾದ ಶರೀರಯುಷ್ಟಿಯ ಯಾರೋ ಬರುತ್ತಿರುವಂತೆ ಕಾಣಿಸಿತು, ಧೈರ್ಯ ತಂದುಕೊಂಡೆ ಕನಸಿನಲ್ಲಿಯ ವಯಸ್ಸು ಚಿಕ್ಕದು ಆದರೆ ಬುದ್ಧಿ ವಾಸ್ತವದ್ದು ( 19 )  ನನ್ನೆಡೆಗೆ ನಾನೇ ನೋಡಿಕೊಂಡೆ ನಗು ಬಂತು ಆದರೆ ಏನು ಮಾಡುವುದು  ಪರ್ಯಾಯವಿಲ್ಲ  ಆ ವ್ಯಕ್ತಿ ಸನಿಹಕ್ಕೆ ಬಂದರು ಉಟ್ಟದ್ದು ಬಿಳೆ ವಸ್ತ್ರ ಹೊದ್ದದ್ದು ಅದೇ ವಸ್ತ್ರ ತೇಜಃ ಪುಂಜವಾದ ಮುಖ ಆಜಾನುಬಾಹು ವ್ಯಕ್ತಿಮತ್ವ  ಹಣೆಗೆ ಸಿಂಧೂರ ಮತ್ತು ಭಸ್ಮ ಹಚ್ಚಿಕೊಂಡತ್ತಿತ್ತು  ಸ್ಪಷ್ಟವಾಗಿರಲಿಲ್ಲ ಕಾಲಲ್ಲಿ ಕಟ್ಟಿಗೆಯ ಪಾದರಕ್ಷೆ ಗಳಿದ್ದವು  ಕೈಯಲ್ಲಿ ಹಗ್ಗ ಸುತ್ತಿದ ರೇವಿಗೆ ಕಾಣುತ್ತಿತ್ತು. 

ನಾನು ಮುಂಬೈ ಕರ್ನಾಟಕದ ನಾಲ್ಕನೆಯ ಈಯತ್ತೆ ಕಲಿಯುತ್ತಿದ್ದಾಗ ಕನ್ನಡ ಪಠ್ಯ ಪುಸ್ತಕದಲ್ಲಿ ವಿಜಯನಗರ ಸಾಮ್ರಾಜ್ಯದ ಕಾರಣ ಕರ್ತರು ಎಂಬ ಶೀರ್ಷಿಕೆಯ ಅಡಿಯಲ್ಲಿ ಪಾಠ ಒಂದಿತ್ತು ಆ ಪಾಠ ದಲ್ಲಿಯ ಚಿತ್ರ ನನ್ನ ಕಣ್ಮುಂದೆ ಬಂತು ಇವರೂ ಹಾಗೆಯೇ ಇದ್ದರು. ನನ್ನ ಸಮೀಪ ಬಂದು, ನೀನು ಬರುವಿ ಎಂದು ನನಗೆ ಗೊತ್ತಿತ್ತು, ನಿನ್ನದೇ ಆದ ಒಂದು ವಸ್ತುವನ್ನು ತಂದಿರುವೆ, ಅದು ನಿನ್ನದೇ ನಿನಗೇ ಒಪ್ಪಿಸುವೆ, ಎಂದು ನನ್ನ ಎತ್ತರಕ್ಕೆ ಕೆಳಗೆ ಕುಳಿತು ಮೈದಡವಿ ಹಣೆಗೆ ಏನೋ ಹಚ್ಚಿ, ತಲೆಯ ಮೇಲೆ ಕೈ ಇಟ್ಟರು. ದೊಡ್ಡದಾಗಿರುವ ಹಗ್ಗ ಸುತ್ತಿದ ಕಡಗೋಲು ನನ್ನ ಕೈಯಲ್ಲಿ ಕೊಟ್ಟರು ಅದು ನನ್ನ ಕೈಯಲ್ಲಿ ಚಿಕ್ಕದಾಯಿತು. ಅದನ್ನು ಕಂಡು ನನಗೆ ಆನಂದವಾಯಿತು ಅದನ್ನು ನಿರೀಕ್ಷಿಸುತ್ತಿದ್ದಂತೆಯೇ  “ ಮಗು, ಈ ಕಡಗೋಲು ಸ್ವತಃ ತಾನು ಬಂಧನದಲ್ಲಿದ್ದರೂ ಇದರಲ್ಲಿ ಸುದರ್ಶನದಂತೆ ತಿರುಗುತ್ತ ವಿವೇಚಿಸಿ ಯಾವುದೇ ವಸ್ತುವಾಗಿರಲಿ ವಿಶ್ಲೇಷಿಸಿ ಉತ್ತಮವಾಗಿರುವದನ್ನು ಗ್ರಹಿಸಿ ಹೊರಹಾಕುವ ಶಕ್ತಿ ಹೊಂದಿದೆ “   ಎಂದು ಪ್ರೀತಿಯಿಂದ ತಿಳಿಸಿ ತಾವೇ ಬರೆದ ಒಂದು ಕಾವ್ಯ ಭಾಗ  “ ಹಿಮವತ್ ಪರ್ವತ ರಾಜಿಕೇಶ ನಿಚಯಂ ....”  ಕಿವಿಯಲ್ಲಿ ಮೆಲ್ಲನೆ ಹೇಳಿ ಆಶೀರ್ವದಿಸಿ ಮುನ್ನಡೆದರು. ನನಗೇನು ಅರ್ಥವಾಗಲಿಲ್ಲ, ಕೈಯಲ್ಲಿರುವ ಪುಟ್ಟ ಕಡಗೋಲನ್ನು ಮಾತ್ರ ನೋಡುತ್ತಾ ನಿಂತಿದ್ದೆ. 

ಕನಸು ಸಂಪನ್ನಗೊಂಡು ಎಚ್ಚರವಾಗಿದ್ದು ಎದ್ದಾಗ ಬೆಳಗಿನ  04  : 15 ಆಗಲೇ ಕನಸಿನ ಸಂಪೂರ್ಣ ವಿವರ ವಿಶದವಾಗಿ ಬರೆದಿಟ್ಟಿದ್ದೆ. ತಿ. ಸ್ವ. ತಂದೆಯವರಾದ ಶ್ರೀಧರಾಚಾರ್ಯ ರವರಿಗೂ ತಿಳಿಸಿದೆ, ಕನಸಿನಲ್ಲಿ ಸನ್ಯಾಸಿಗಳ ದರ್ಶನ, ಬೆತ್ತಲ ಬಾಲ್ಯಾಅವಸ್ಥೆ,ಶ್ರೀಮನ್ ನಾರಾಯಣ ಸನ್ನಿಧಿ, ಹಿರಿಯರ ಆಶೀರ್ವಚನ ಎಲ್ಲವೂ ಉತ್ತಮ,  ಖಂಡಿತವಾಗಿ ಪ್ರಯೋಜನ ಇದ್ದರೂ ಕಾಣಬರುವುದಿಲ್ಲ, ಇದರಲ್ಲಿ ವರ್ತಮಾನದ ಪರಿಣಾಮ ನೋಡ ಸಿಗಲಾರದು, ಭವಿಷ್ಯದಲ್ಲಿರುವ ಪರಿಣಾಮ ಮಾತ್ರ  ನಿಖರವಾಗಿ ಹೇಳಲಾಗದೆ ಇದ್ದರೂ ಮುಂಬರುವ ದಿನಗಳಲ್ಲಿ ನಿಧಾನವಾಗಿ ಗೋಚರಿಸಬಹುದು  

ಇದಾದ ಮೂರು ನಾಲ್ಕು ದಿನಗಳಲ್ಲಿ ತಂದೆಯವರೊಡನೆ ಮಾತನಾಡುತ್ತಿದ್ದಾಗ ಹೊರಟ ವಿಷಯಕ್ಕೆ ಅನುಸಾರವಾಗಿ ಇಬ್ಬರಿಗೂ ಏಳೂವರೆ ವರ್ಷಗಳ ಶ್ರೀ ಶನೈಶ್ಚರ ಪೀಡೆ, (ಮಿಥುನ ರಾಶಿ  ಕರ್ಕ ರಾಶಿ) ಅನುಷ್ಠಾನ, ಜಪ, ತಪ, ಪೂಜೆ ಇವೆಲ್ಲವುಗಳಿಗಿಂತ  ಹೊರತಾಗಿ ಏನಾದರೊಂದು ಹೊಸತು ಮಾಡೋಣ ಎಂದು  ವಿಚಾರಮಾಡಿ ಮೂಲ ಗುಜರಾಥಿ ಭಾಷೆಯಿಂದ ಮರಾಠಿಯಲ್ಲಿ ಭಾಷಾಂತರಗೊಂಡ ಶನಿ ಮಹಾತ್ಮೆಯನ್ನು ಕನ್ನಡದಲ್ಲಿ ಕಾವ್ಯ ರೂಪದಲ್ಲಿ ಅದೂ ಭಾಮಿನಿ ಷಟ್ಪದಿಯಲ್ಲಿ ಬರೆಯುವ ಬಗ್ಗೆ ವಿಚಾರ ವಿನಿಮಯ ಮಾಡಿದೆವು. ಬರುವ ವಿಶುವತ್ಪರ್ವ ಪ್ರದೋಷ ಪುಣ್ಯ ಕಾಲದಲ್ಲಿ ಮಂಗಲಾಚರಣ ದೊಂದಿಗೆ  ಬರವಣಿಗೆ ಪ್ರಾರಂಭಿಸಿದಾಗ ನಾನೂ ಅವರ ಜೊತೆಯಲ್ಲಿದ್ದೆ  ನನಗೆ ಕಾವ್ಯ ಗಳೆಂದರೆ  ಶಾಲೆಯ ಪುಸ್ತಕಗಳಲ್ಲಿ ಓದಿದ್ದಷ್ಟೇ ಗೊತ್ತು ಕಾವ್ಯ ಬರವಣಿಗೆಯ ಗಂಧವನ್ನೇ ಗೊತ್ತಿರದೇ ಇದ್ದರೂ ಸಹವಾಸದಿಂದ ಕಾವ್ಯ ನಿರ್ಮಾಣ,ಬಂಧನ, ಗಣ ಮಾತ್ರಾ, ಯತಿ, ಲಯ ಇತ್ಯಾದಿಗಳ ಪರಿಚಯ ವಾಗುತ್ತ ಹೋಯಿತು ಆಗ ಕಂಡುಬಂದ  ಹೊಸ ವಿಚಾರ ವೆಂದರೆ ನಮ್ಮಲ್ಲಿರುವ ಕನ್ನಡ ಸಾಹಿತ್ಯದಲ್ಲಿರುವ ಶಬ್ದ ಸಂಗ್ರಹದಮಿತಿ,ಅದರಿಂದ  ಕೆಲಸ ನಿಲ್ಲುವದೇನೋ ಅನ್ನುವಷ್ಟರ ಮಟ್ಟಿಗೆ  ಅವಸ್ಥೆ ಬಂದೊದಗಿತು, ನಾವು ಷಟ್ಪದಿಯಲ್ಲಿ ಬರೆಯದೇ ತ್ರಿಪದಿಯಲ್ಲಿ ಬರೆದರೆ ಮಿತಿಗೆ ಕಡಿವಾಣ ಹಾಕಬಹುದು,ಎಂದು ತಂದೆಯವರಲ್ಲಿ ವಿನಂತಿಸಿದೆ, ಅವರೂ ಒಪ್ಪಿದರು ಕಾವ್ಯ ನಿರ್ಮಾಣದ ಗಾಡಿಯ ಗತಿ ಹೆಚ್ಚಿತು ಕಾಶಿಖಂಡದಲ್ಲಿರುವ ಶನಿದೇವರ ಹುಟ್ಟು ಬಾಲ್ಯ ತಪಸ್ಸು, ಸಾಧನೆ  ತಂದೆ ಸೂರ್ಯನೊಡನೆ ಭಿನ್ನಾಭಿಪ್ರಾಯ ಎಲ್ಲವನ್ನೂ ಅಳವಡಿಸಿಕೊಂಡೆವು. ಮುಂದೆ ಮೂಲ ಮರಾಠಿ ಭಾಷೆಯಲ್ಲಿಯ ಶನಿಮಹಾತ್ಮೆಗೆ ಕೈ ಹಾಕಿದೆವು               

                  ನಾನೂ ತಂದೆಯವರಿಗೆ ಸಹಾಯ ಮಾಡುತ್ತಲೆ ಬೇರೆಯಾಗಿ ವಾರ್ಧಕ ತ್ರಿಪದಿ ಯಲ್ಲಿ ಶ್ರೀ ಶನೈಶ್ಚರ ಸ್ತೋತ್ರವನ್ನೂ, ಮತ್ತು ನನಗೆ  ಅಜ್ಜನವರಾದ ಪೂಜ್ಯ ಶ್ರೀ ಸೀತಾರಾಮಾಚಾರ್ಯರು ನನ್ನ ಚಿಕ್ಕಂದಿನಲ್ಲಿ ಹೇಳಿದ ಶನೈಶ್ಚರ ದೇವರಿಗೆ ಸಂಬಧಪಟ್ಟ ಪ್ರಚಲಿತ ಶನಿ ಮಹಾತ್ಮೆಯಲ್ಲಿಲ್ಲದ  ಉಮರಜ ಗ್ರಾಮದ ಮಠದ ಹಳೆಯ ಕಡತಗಳಲ್ಲಿ ದೊರೆತ “ ಕುಷ್ಮಾಂಡ  ಪುರಾಣ “ ಎಂಬ ಕಥೆಯ ಸನ್ನಿವೆಶಗಳನ್ನು ಅಳವಡಿಸಿಕೊಂಡು ಸಮಗ್ರ ಚರಿತೆಯ ನಿರ್ಮಾಣಕ್ಕೆ ಪ್ರಾರಂಭಿಸಿದೆವು                                                                                               1974 ರ ಕೊನೆಯ ಹಂತದಲ್ಲಿ  ನಮ್ಮ ಮೊದಲ ಪೌರಾಣಿಕ ಗ್ರಂಥವು ಮುಕ್ತಾಯ ಗೊಂಡಿತು. ಆಗ ಗ್ರಂಥದಲ್ಲಿದ್ದದ್ದು ಆರು ಅಧ್ಯಾಯಗಳು ಮಾತ್ರ  ಒಮ್ಮೆಲೇ ತಂದೆ ಯವರಿಗೆ ನೆನಪಾಗಿ, ನೀನು ಬೇರೆಯಾಗಿಯೇ ಬರೆದಿರುವ ಬರವಣಿಗೆಯನ್ನು ಕಂಡಿದ್ದೇನೆ ಕೊಡು ನೋಡೋಣ ಎಂದಾಗ  ಸ್ವಲ್ಪ ಗಾಬರಿಯಿಂದಲೇ  ವಾರ್ಧಕ ತ್ರಿಪದಿಯಲ್ಲಿ ಶ್ರೀ ಶನೈಶ್ಚರ ಸ್ತೋತ್ರವನ್ನೂ, ಮತ್ತು ಭಾಮಿನಿ ತ್ರಿಪದಿಯಲ್ಲಿ ಬರೆಯಲು ಪ್ರಯತ್ನಿಸಿದ  “ ಕುಷ್ಮಾಂಡ  ಪುರಾಣ “ ಎಂಬ ಕಥೆಯ ಸನ್ನಿವೆಶಗಳ ಕಾವ್ಯ ಪ್ರಯೋಗದ ಕಚ್ಚಾ ಪ್ರತಿಗಳನ್ನು ಒಪ್ಪಿಸಿದೆ.  ಗ್ರಂಥವಾದರೋ ಸಂಪನ್ನ ಗೊಂಡಿತ್ತು ಬರವಣಿಗೆ ಕೆಲಸ ಇರಲಿಲ್ಲ, ಒಂದು ವಾರವಾದರೂ ತಂದೆ ಯವರಿಂದ ಯಾವ ಪ್ರತಿಕ್ರಿಯೆ ಬಂದಿರಲಿಲ್ಲ, ನಾನೂ ಏನನ್ನೂ ಕೇಳಲು ಹೋಗಿರಲಿಲ್ಲ 

                     ಹಟಾತ್ತಾಗಿ ಒಂದು ರವಿವಾರ ಸಂಜೆ ನನ್ನ  ಕಚ್ಚಾ ಪ್ರತಿ ತೆಗೆದುಕೊಂಡು ನನಗೆ ಮುಂದೆ ಕುಳ್ಳಿರುವಂತೆ ಹೇಳಿ “ ಸಾಹಿತ್ಯ ಬಂಧನ ಕಥೆಯ ಒಕ್ಕಣಿಕೆ ,ವರ್ಣನೆ ಪ್ರಾಸ ಮಾತ್ರೆಗಳ ಎಣಿಕೆ ಚನ್ನಾಗಿದೆ, ಆದರೆ ಕಥೆ ಹೇಳುವ ರೀತಿ ನೀರಸವಾಗಬಾರದು ಎಂದು ಪ್ರಸ್ತುತಿಕರಣದಲ್ಲಿ ವಾಕ್ಯ ಪ್ರಯೋಗದಲ್ಲಿ ಅಲ್ಲಲ್ಲಿ ಸೂಕ್ತ ತಿದ್ದುಪಡಿ  ಬದಲಾವಣೆ ಮಾಡಿದ್ದೇನೆ.”  ಸ್ತೋತ್ರವಂತು ಅದ್ಭುತವಾಗಿದೆ  ಈಗ ನಮ್ಮ ಶ್ರೀ ಶನೈಶ್ಚರ ಚರಿತಂ ಗ್ರಂಥ ಏಳು ಅಧ್ಯಾಯಗಳ ಗ್ರಂಥವಾಗಿ ಮಾರ್ಪಾಡಾಯಿತು ಹೀಗೆ ಹೇಳುತ್ತಿದ್ದಂತೆ ಅವರ ಕಣ್ಣಲ್ಲಿ ನೀರು ಕಂಡೆ.  ವಿಷಯ ಹಳೆಯದೇ ಇರಲಿ, ಹೊಸತೆ ಇರಲಿ, ಪುರಾತನವೇ ಇರಲಿ ಪುರೋಗಾಮಿಯೇ ಇರಲಿ, ಹೊಸತು ಹೊಸತಾಗಿ ಬರೆಯುತ್ತ ಹೋಗು, ಯಾರೇ ಹೊಗಳಿದರೂ ತೆಗಳಿದರು ಪ್ರಚೋದಿಸಿದರೂ ಪ್ರಚೋದಿಸದೆ ಇದ್ದರೂ ನಮ್ಮ ಆತ್ಮ ಶಾಂತಿಗಾಗಿ ಬರೆಯುತ್ತಲಿರುವುದು ಮುಖ್ಯ. ಜೀವನದ ಕೊನೆಯ ಉಸಿರಿರುವವರೆಗೂ ಬರೆಯುತ್ತ ಹೋಗು  ಅದೇ ನಮ್ಮ ಧ್ಯೇಯವಾಗಿರಲಿ  “ ಎಂದು ಆಶೀರ್ವದಿಸಿದ್ದು  ಇನ್ನು ನೆನಪಿದೆ.  

                   ಸಂಸ್ಕೃತದಲ್ಲಿ ಬರೆದ ಗದ್ಯ ಪದ್ಯ ಸ್ತೋತ್ರ ರಚನೆಗಳೂ ಚನ್ನಾಗಿ ಬಂದಿವೆ, ಆದರೆ ನಿರೂಪಣೆ ಯಾರದ್ದೋ ತೆಗೆದುಕೊಂಡತೆ ಆಗಬಾರದು ಅದಕ್ಕೆ ಸಂಸ್ಕೃತವನ್ನು ಅಧಿಕೃತವಾಗಿ ಕಲಿಯುವುದು ಆವಶ್ಯಕ ಎಂದು ಹೇಳಿ ಕೆಲಸಮಯ ಕಣ್ಣು ಮುಚ್ಚಿ ಕುಳಿತದ್ದು ಮನಮುಟ್ಟು ವಂಥ ಸಂಗತಿ.  ಹೀಗೆ  ನನ್ನ ಕನ್ನಡ ಸಂಸ್ಕೃತ ಸಾಹಿತ್ಯ ನಿರ್ಮಾಣವು  ನಡೆದು ಬಂದ ರೀತಿ.  ಧನ್ಯವಾದಗಳು 

ಸರ್ವೇ ಜನಾಃ ಸುಖಿನೋ ಭವಂತು ...ಸುಧೀರಾಚಾರ್ಯ ಶ್ರೀಧರಾಚಾರ್ಯ ಕಟ್ಟಿ

ಯಲಗೂರ ತಾ; ಮುದ್ದೇಬಿಹಾಳ ಜಿ: ಬಿಜಾಪುರ


No comments:

Post a Comment