Saturday, April 29, 2023

GOVINDA BHAGAVADGITE ಗೋವಿಂದ ಭಗವದ್ಗೀತೆ


  ಗೋವಿಂದ ಭಗವದ್ಗೀತೆ     
|| ಅರ್ಜುನ ವಿಷಾದ ಯೋಗ ||    
ಕುರುಕ್ಷೇತ್ರದಿ ಧರ್ಮ ಯುದ್ಧವಾಗುತ್ತಿರಲು |                          
ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಿರಲು ||
ಬಂಧು ಬಾಂಧವರ ಕಂಡು ವಿಷಾದವಾಗಲು  |
ಅರ್ಜುನನುತೊರೆದ ಧನುಷ್ಯಬಾಣಗಳ || 1 ||
|| ಸಾಂಖ್ಯ ಯೋಗ ||
ಆತ್ಮ ಶಾಶ್ವತ ದೇಹವು ನಶ್ವರ |
ಅಂತರಂಗದಿ ತಿಲಿಯುದೊಳಿತು  || 
ಹರ್ಷ ಶೋಕ ತೊರೆದು ನಿರ್ವಿಕಾರ | 
ಜ್ಞಾನಿ ಜನ ಮಾನಸದಿ ಆಚರಿಸೇ  || 2 ||
|| ಕರ್ಮ ಯೋಗ ||
ಕಿರೀಟಿಯೇ ಕರ್ಮ ಫಲವನ್ನು ಬಿಡು |   
ನಿನ್ನ ವಿಹಿತ ಕರ್ಮವನು ಆಚರಿಸು    ||
ಕರ್ಮ ಅಕರ್ಮ ಭೇಧವನೆ ಬಿಡು     |
ನಿಷ್ಕಾಮ ಕರ್ಮವನ್ನು     || 3 || 
|| ಜ್ಞಾನ ಕರ್ಮ ಸನ್ಯಾಸ ಯೋಗ ||
ಚಾತುರ್ವರ್ಣಗಳಿದ್ದರೂ ಸಹಿತ  | 
ಮಾನವ ಗುಣ ಕರ್ಮಗಳಂತಿರುತ  ||
ಜನ್ಮದಿಂದ ಎಂದಿಗೂ ನಿರ್ಣಯಿಸದೆ | 
ಕರ್ಮದಿಂದ ನಿರ್ಣಯಿಸುದೊಳಿತು  || 4 ||
|| ಕರ್ಮ ಸನ್ಯಾಸ ಯೋಗ ||
ವಿರಾಗಿ ವೃತ್ತಿಯ ಮನದಲ್ಲಿ ಇಟ್ಟು | 
ಭವಭಯ ಚಿಂತೆಗಳನೆಲ್ಲ ಬಿಟ್ಟು   || 
ಸ್ನೇಹ ದ್ವೇಷ ಗಳನೆಲ್ಲ ಬಿಟ್ಟು      | 
ಧ್ಯಾನವನು ಮಾಡು ಶ್ರೀಹರಿಯ   || 5 ||
|| ಆತ್ಮ ಸಂಯಮ ಯೋಗ ||
ತನ್ನನೇ ತಿಳಿದು ಪ್ರಾರ್ಥಿಸು ಪಾರ್ಥನೇ | 
ನಿರಂತರ ಮಾಡಲು ನಾಮ ಜಪವನೇ  ||
ಯೋಗ ಸಾಧನೆಯ ಶುದ್ಧಿಯಾಗಿ    |
ಅವನೇ ಶ್ರೇಷ್ಠ ಸರ್ವ ಕಾಲದಿ  || 6 ||
|| ಜ್ಞಾನ ವಿಜ್ಞಾನ ಯೋಗ ||
ಸೃಷ್ಟಿ ಪಾಲನೆಯು ನನ್ನಿಂದಲೇ  | 
ಚರಾಚರವ ವ್ಯಾಪಿಸಿಯೇ ಇರಲು  || 
ನನ್ನ ಚಿಂತನೆಯ ಮಾಡಿ ಅಹರ್ನಿಶ  | 
ಪರಂಧಾಮವ ಪಡೆಯೇ ಪಾತ್ರ  || 7 ||
|| ಅಕ್ಷರ ಬ್ರಹ್ಮ ಯೋಗ ||
ಭಜನೆ ಕೀರ್ತನೆಯಲಿ ಸಮಯ ಕಳೆದು | 
ನಾಮ ಸ್ಮರಣೆಯಲಿ ವೇಳೆಯ ಕಳೆದು   || 
ಶ್ರೀ ರೂಪದಲಿ ಒಂದಾಗಲು   | 
ಜನ್ಮ ಮರಣಗಳ ಬಿಡುತಲಿ   || 8 ||
|| ರಾಜ ವಿದ್ಯಾ ಗುಹ್ಯ ಯೋಗ ||
ಭಕ್ತಿಯ ಒಲವೇ ಬಹು ಮುಖ್ಯವಿರಲು  | 
ಹೂ ಹಣ್ಣು ನೈವೇದ್ಯಗಳೆಲ್ಲ ಬೇಡ   || 
ಮನದಲ್ಲಿ ಶ್ರೀ ಧ್ಯಾನ ಮಾದುತಿರಲು  | 
ಕುವಿಚಾರಗಳ ಮಾಡುವುದು ಬೇಡ  || 9 ||
|| ವಿಭೂತಿ ಯೋಗ ||
ನಾನೇ ಅನಲ ನಾನೇ ಅನಿಲ   | 
ನಾನೇ ನಿರು ಜಗದೊಳಿರುವ    ||
ನಾನೇ ಹರಿ ಹರ ಬ್ರಹ್ಮ     | 
ನಾನೇ ಮಾನವ ಸೂತ್ರದಾರ  || 10 ||
|| ವಿಶ್ವರೂಪ ದರ್ಶನ ಯೋಗ ||
ದಿವ್ಯ ದೃಷ್ಟಿಯ ಕೊಡುವೆ ಅರ್ಜುನ   | 
ವಿಶ್ವ ರೂಪವನೆ ನೋಡು ನೀ  || 
ಸಹಸ್ರ ಮುಖ ಸಹಸ್ರ ಬಾಹುಗಳಿರುವ | 
ಇದು ಬಿಟ್ಟು ಮೂಲರೂಪ ಕೊಡಲು ಇಲ್ಲ || 11 ||
|| ಭಕ್ತಿ ಯೋಗ ||
ಸಗುಣ ನಿರ್ಗುಣ ಭಕ್ತಿ ದ್ವಯವದೆ   |
ಗೊಂದಲವ ಮನದಲ್ಲಿ ಇಟ್ಟು ಕೊಳದೇ   || 
ಎಲ್ಲಕ್ಕೂ ಶ್ರೇಷ್ಠ ಭಕ್ತಿ ಭೋಗವದೆ  | 
ಶ್ರಮ ವಿಲ್ಲದೆ ಸಿಗುವ ಯೋಗವದೆ  || 12 ||
|| ಕ್ಷೇತ್ರ ಕ್ಷೇತ್ರಜ್ಞ ವಿಭಾಗಯೋಗ ||
ದಶ ಇಂದ್ರಿಯಗಳು ಮತ್ತೆ ಮನಸು   | 
ಏಕಾದಶ ಇಂದ್ರಿಯಗಳ ವರ್ಣಿಸುವ ವೇದ  || 
ಪ್ರಕೃತಿ ಪುರುಷಗಳು ಅನಾದಿಯಾಗಿಸೆ   | 
ತಿಳಿದುಕೋ ಇವುಗಳಲ್ಲಿರುವ ಭೇದ   || 13 ||
|| ಗುಣತ್ರಯ ವಿಭಾಗ ಯೋಗ ||
ಆದಿ ಮಧ್ಯಂತ ನಾನೇ ಇರಲು  | 
ನಾನೇ ತ್ರಿಗುಣಾತೀತನು      ||
ನನ್ನಲ್ಲಿಯೇ ಮನಸ್ಸಿಟ್ಟಿರಲು   | 
ಖಚಿತ ಷಡ್ರಿಪು ರಹಿತನು   || 14 ||
|| ಪುರುಷೋತ್ತಮ ಯೋಗ ||
ಪಂಚ ಭೂತಗಳು ಮಾನವ ದೇಹದಲಿ |
ನಾನೇ ಇರುವ ವೈಶ್ವಾನರನು   || 
ಚಯಾಪಚಯ ನಿರ್ಮಿಸುವೆ ದೇಹದಲಿ  |  
ವ್ಯತಿರಿಕ್ತ ಅಶ್ವತ್ಥ  ವೃಕ್ಷ ನಾನೇ   || 15 ||
|| ದೇವಾಸುರ ಸಂಪದ್ವಿಭಾಗ ಯೋಗ ||
ಕಾಮಕ್ರೋಧ ಲೋಭ ಮೋಹಮತ್ಸರಗಳು  |
ಎಲ್ಲ ಅಸುರ ಲಕ್ಷಣಗಳನೆ ಬಿಟ್ಟು   || 
ಧೈರ್ಯ ಕ್ಷಮಾ ಶಾಂತಿ ಮೃದು ಶುಚಿತ್ವಗಳ | 
ಈ ಸುಲಕ್ಷಣಗಳು ಮನದಲ್ಲಿ ಇಟ್ಟು   || 16 ||
|| ಶ್ರದ್ಧಾತ್ರಯ ವಿಭಾಗ ಯೋಗ ||
ನೀರ ಕ್ಷೀರ ವಿವೇಕ ಬುದ್ಧಿಯ     | 
ಶ್ರದ್ಧಾತಪ ಹೋಮ ನಾಮಸ್ಮರಣ  || 
ಮನುಷ್ಯ ಜನ್ಮದ ಪುಣ್ಯ ಪಡೆಯೇ |  
ಮಾಡು ನೀ ಎಲ್ಲ ಕೃಷ್ಣಾರ್ಪಣ  ||17 ||
|| ಮೋಕ್ಷ ಸನ್ಯಾಸ ಯೋಗ ||
ಕಿರೀಟಿ ಎನ್ನುವನು ಕೇಶವಗೆ    | 
ಚಿರಂತನ ಸತ್ಯವದು ಮನಗಾಣಲು || 
ನಿನ್ನ ಬೋಧವದು ಹೃದಯದಲಿ ಹೋಗಿ |
ಯುದ್ಧಕ್ಕೆ ಮನ ಸನ್ನದ್ಧವಾಗಲು    || 18 ||
===============================
ಜಗದ್ವಂದ್ಯ ಗೀತೆಯನು ಶ್ರೀ ಕೃಷ್ಣ ಮುಖದಿಂದ  | 
ಇಂದುಸುತನಿಂ ಹೊರಟು ಪ್ರತಿ ದಿನದಲಿ  || 
ಜಗಚ್ಚಾಲಕ ಶ್ರೀ ಗೋವಿಂದ ದಯೆಯಿಂದ  |
ಸಂಭ್ರಮದಿ ನಮಿಸುವೆ ಚರಣ ಕಮಲ || 19 ||

         ...ಸುಧೀರಾಚಾರ್ಯ ಕಟ್ಟಿ ಯಲಗೂರು  


No comments:

Post a Comment