Saturday, May 27, 2023

GOTRA SYSTEM in INDIA ಸನಾತನರಲ್ಲಿ ಗೋತ್ರ ಪದ್ಧತಿ

 ಭಾರತದಲ್ಲಿ ಗೋತ್ರ ಪದ್ಧತಿ

ಭಾರತದಲ್ಲಿ ಅನೇಕ ಸಮುದಾಯಗಳಲ್ಲಿ ಗೋತ್ರ ಪದ್ಧತಿ ಇದೆ. ಗೋತ್ರ ಪದ್ಧತಿ ಅನುಸರಿಸುವ ಈ ಸಮುದಾಯಗಳ ಜನರ ಹತ್ತಿರ ಗೋತ್ರ ಅಂದರೇನು ಎಂದು ಕೇಳಿದರೆ ಸಮರ್ಪಕ ಉತ್ತರ ದೊರೆಯುವುದಿಲ್ಲ. ಬಹಳಷ್ಟು ಹಿರಿಯರಿಗೇ ಗೊತ್ತಿಲ್ಲ ಒಬ್ಬ ವ್ಯಕ್ತಿಯು ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡವಳಿಕೆ ಮುಂತಾದವುಗಳ ಮೂಲಕ ದೀರ್ಘ ಕಾಲ ತಪಸ್ಸು (ದೇಹ-ಮನಸ್ಸು-ಬುದ್ಧಿಗಳ ಶುದ್ಧೀಕರಣ) ಮಾಡಿದರೆ ಆತ ಋಷಿ ಎನಿಸಿಕೊಳ್ಳುತ್ತಾನೆ. ತಪಸ್ಸು ಕಠಿಣವಾಗುತ್ತ, ದೀರ್ಘವಾಗುತ್ತ ಹೋದಹಾಗೆ ಆತ ಔನ್ನತ್ಯದ ವಿವಿಧ ಮಜಲುಗಳನ್ನು ತಲುಪುತ್ತಾಹೋಗುತ್ತಾನೆ.
ಋಷಿ, ರಾಜರ್ಷಿ, ಮಹರ್ಷಿ ಇತ್ಯಾದಿ ಹಂತಗಳನ್ನು ದಾಟುತ್ತಾನೆ. ಈ ರೀತಿ ಕಠೋರ ತಪಸ್ಸಿನ ಕೊಟ್ಟಕೊನೆಯ ಹಂತ ಎಂದರೆ ಬ್ರಹ್ಮರ್ಷಿತ್ವ. ಯಾರು ಬ್ರಹ್ಮರ್ಷಿ ಪದವಿಯನ್ನು ಗಳಿಸಿಕೊಳ್ಳುತ್ತಾನೋ, ಆತ ಶುದ್ಧೀಕರಣ ಪ್ರಕ್ರಿಯೆಯ ಕೊನೆಯ ಸ್ಥಿತಿತಲುಪಿದ್ದಾನೆ, ಇನ್ನು ಶುದ್ಧಗೊಳ್ಳಲು ಏನೂ ಉಳಿದಿಲ್ಲ ಎಂದರ್ಥ.
ಋಷಿಗಳೆಂದರೆ ಸಂನ್ಯಾಸಿಗಳಲ್ಲ. ಅವರು ಸಾಮಾನ್ಯವಾಗಿ ಗೃಹಸ್ಥರೇ ಆಗಿರುತ್ತಾರೆ. ಇಂಥ ಬ್ರಹ್ಮರ್ಷಿಯ ಮಗನೂ ಬ್ರಹ್ಮರ್ಷಿಯಾದರೆ, ಆ ಮಗನ ಮಗನೂ ಬ್ರಹ್ಮರ್ಷಿಯಾದರೆ, ಈ ರೀತಿ ಒಬ್ಬರ ಬಳಿಕ ಒಬ್ಬರಂತೆ ಆ ಕುಟುಂಬದಲ್ಲಿ ಏಳು ತಲೆಮಾರುಗಳ ತನಕ ಬ್ರಹ್ಮರ್ಷಿಗಳಾದರೆ ಮೊದಲನೆಯ ಬ್ರಹ್ಮರ್ಷಿಯ ಹೆಸರಿನಲ್ಲಿ ಗೋತ್ರ ನಿರ್ಮಾಣವಾಗುತ್ತದೆ. ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಆಂಗೀರಸ, ಕಶ್ಯಪ, ಗೌತಮ, ಭಾರದ್ವಾಜ ಮುಂತಾದವರು ಗೋತ್ರ ಪ್ರವರ್ತಕರೆಂದು ಪ್ರಸಿದ್ಧರಾಗಿದ್ದಾರೆ.ಇಲ್ಲಿ ಇನ್ನೊಂದು ಸೂಕ್ಷ್ಮವೂ ಕುತೂಹಲಕಾರಿಯೂ ಆಗಿರುವ ಸಂಗತಿಯೊಂದಿದೆ. ಒಬ್ಬರ ಬಳಿಕ ಒಬ್ಬರಂತೆ ಏಳು ಜನ ಬ್ರಹ್ಮರ್ಷಿಗಳಾದುದರಿಂದ ಆ ವಂಶವೇ ಶುದ್ದತೆಯ ಪರಿಪೂರ್ಣತೆಯನ್ನು ತಲುಪಿದೆ ಎಂದರ್ಥ. ಆ ಗೋತ್ರದಲ್ಲಿ ಹುಟ್ಟಿದವರೆಲ್ಲ ತಮ್ಮ ವಂಶವಾಹಿನಿಗಳಲ್ಲಿ ತಮ್ಮ ಪೂರ್ವಜರ ಶುದ್ಧತೆಯನ್ನು ಪಡೆದುಕೊಂಡು ಬಂದಿದ್ದಾರೆಂದು ನಮ್ಮ ಪರಂಪರೆ ಭಾವಿಸುತ್ತದೆ. ಆಧುನಿಕ ವೈದ್ಯವಿಜ್ಞಾನ ಕೂಡ ಡಿ.ಎನ್.ಎ. ಹೆಸರಿನ ವರ್ಣತಂತುಗಳು ವ್ಯಕ್ತಿಯ ಪೂರ್ವಜರ ಗುಣವಿಶೇಷಗಳನ್ನು ಹೊತ್ತುತಂದಿರುತ್ತವೆ ಎಂಬ ಸಂಗತಿಯನ್ನು ಪ್ರತಿಪಾದಿಸುತ್ತದೆ. ಅಲ್ಲಿಗೆ ಅದು ಗೋತ್ರ ತತ್ವ ಏನು ಹೇಳುತ್ತದೆಯೋ ಅದನ್ನೇ ಹೇಳಿದಂತಾಯಿತು. ನಮ್ಮಲ್ಲಿ ಎಷ್ಟೋ ಜನರಲ್ಲಿ ಇರುವ ಗೊಂದಲ ಅಂದರೆ:
ಗೋತ್ರ ಎಂದರೇನು?
ಗೋತ್ರ ಪದ್ಧತಿ ನಮ್ಮಲ್ಲಿ ಯಾಕೆ ಇದೆ ?
ಯಾಕೆ ನಾವು ವಿವಾಹ ಮಾಡುವ ಮೊದಲು ಕಡ್ಡಾಯವಾಗಿ ಗೋತ್ರ ನೋಡುತ್ತೇವೆ
ಏಕೆ ? ಮಗ ಮಾತ್ರ ತಂದೆಯ ಗೋತ್ರವನ್ನು ಮುಂದುವರೆಸುತ್ತಾನೆ ಮಗಳಲ್ಲ ಏಕೇ ?
ಹೇಗೆ ಮಗಳ ಗೋತ್ರವು ಮದುವೆಯ ಬಳಿಕ ಬದಲಾಗುತ್ತದೆ ?
ಪ್ರಪ್ರಥಮವಾಗಿ  "ಗೋತ್ರ" ಎಂಬ ಶಬ್ಧವು ಸಂಸ್ಕೃತದ ಎರಡು ಅಕ್ಷರಗಳಿಂದ ಉಂಟಾಗಿದ್ದು 'ಗೋ' ಅಂದರೆ ಹಸು, 'ತ್ರಾಹಿ' ಅಂದರೆ ಕೊಟ್ಟಿಗೆ ಎಂದರ್ಥ. ಗೋತ್ರವು 'ಹಸುವಿನ ಕೊಟ್ಟಿಗೆ' ಎಂದಾಗಿದ್ದು, ಪುರುಷ ತಳಿಯ ವಾಹಕವಾಗಿದೆ. ಹಾಗಾದರೆ ನಾವೆಲ್ಲರೂ ನಮ್ಮ ಮೂಲಪುರುಷ ಯಾವುದೋ ಋಷಿ ಅಥವಾ ಅಷ್ಟ ಋಷಿಗಳಲ್ಲೊಬ್ಬರ ಅನುಯಾಯಿ ಆಗಿದ್ದು, ನಮ್ಮ ಗೋತ್ರವು ಆ ಮೂಲ ಪುರುಷ ಋಷಿಯ ಹೆಸರಿನಿಂದ ಗುರುತಿಸಿ ಕೊಳ್ಳುವೆವು. (ಸಪ್ತ ಋಷಿಗಳು: ವಸಿಷ್ಠ, ವಿಶ್ವಾಮಿತ್ರ, ಅತ್ರಿ, ಆಂಗೀರಸ, ಜಮದಗ್ನಿ, ಕಶ್ಯಪ, ಗೌತಮ ಮತ್ತು ಭಾರಧ್ವಾಜ)
"ಸಪ್ತಧಾತು ಸಮಪಿಂಡಂ ಸಮಯೋನಿ ಸಮುದ್ಭವಂ ಆತ್ಮಜೀವ ಸಮಾಯುಕ್ತಂ ಸೃಷ್ಟಿಕಾರ್ಯಂ ನಿರಂತರಂ" ತಂದೆ ಹಾಗೂ ತಾಯಿಯಿಂದ ಉತ್ಪತ್ತಿಯಾದ ಸಪ್ತಧಾತುಗಳು ಸೇರಿ, ತಾಯಿ ಗರ್ಭದಲ್ಲಿ ಸಮಪಿಂಡವಾಗಿ ಇಬ್ಬರ ಅಂಶದಿಂದ ಬಂದ ಪ್ರಾಣ, ಪ್ರಜ್ಞೆ, ಆತ್ಮಾಂಶಗಳು ಸಂಯುಕ್ತವಾಗಿ ತಂದೆಯ ಇಪ್ಪತ್ತ ಮೂರು, ತಾಯಿಯ ಇಪ್ಪತ್ತಮೂರು ವರ್ಣತಂತುಗಳ ಕೂಡುವಿಕೆಯಿಂದ ಒಂದೇ ಒಂದು ಮೂಲ ಜೀವಕೋಶ ರಚನೆಯಾಗಿ ಅದೇ ಕೋಶ ವಿಭಜನೆಗೊಂಡು ಪ್ರತಿ ಶಿಶುವು ಜನ್ಮ ತಾಳುವುದು.
  • ರಸ (ದ್ರವ) ಧಾತು -
    ಜೀರ್ಣವಾದ ಆಹಾರದಿಂದ ಪಡೆಯಲಾಗಿದೆ, ಇದು ದೇಹದ ಪ್ರತಿಯೊಂದು ಅಂಗಾಂಶ ಮತ್ತು ಕೋಶವನ್ನು ಪೋಷಿಸುತ್ತದೆ ಮತ್ತು ಪ್ಲಾಸ್ಮಾಕ್ಕೆ ಹೋಲುತ್ತದೆ. ಇದು ಪೀತ ವರ್ಣದ್ದಾಗಿದೆ.
  • ರಕ್ತ (ರಕ್ತ) ಧಾತು -
    ಜೀವನದ ಮೂಲ ಎಂದು ಪರಿಗಣಿಸಲಾಗಿದೆ, ಇದು ಪರಿಚಲನೆಯಲ್ಲಿರುವ ರಕ್ತ ಕಣಗಳಿಗೆ ಹೋಲುತ್ತದೆ. ಈ ರಕ್ತ ಕಣಗಳಿಂದ‌ ರಕ್ತಕ್ಕೆ ಕೆಂಪು ವರ್ಣವಿದೆ. ಇದು ದೇಹದ ಅಂಗಾಂಶಗಳನ್ನು ಪೋಷಿಸುತ್ತದೆ, ಆದರೆ ದೇಹಕ್ಕೆ ದೈಹಿಕ ಶಕ್ತಿ ಮತ್ತು ಬಣ್ಣವನ್ನು ನೀಡುತ್ತದೆ.
  • ಮಸ್ಮಾ ಧಾತು -
    ಸ್ನಾಯು ಅಂಗಾಂಶ, ಅದರ ಮುಖ್ಯ ಕಾರ್ಯವೆಂದರೆ ದೈಹಿಕ ಶಕ್ತಿ ಮತ್ತು ಮೇದ ಧಾತುಗಳಿಗೆ ಬೆಂಬಲವನ್ನು ಒದಗಿಸುವುದು.
  • ಮೇದ (ಕೊಬ್ಬು) ಧಾತು -
    ಅಷ್ಠ ಧಾತುಗಳಿಗೆ ಬೆಂಬಲವನ್ನು ಒದಗಿಸುವ ಅಡಿಪೋಸ್ ಅಂಗಾಂಶವನ್ನು ಒಳಗೊಂಡಿದೆ. ಇದು ದೇಹವನ್ನು ನಯಗೊಳಿಸುತ್ತದೆ.
  • ಅಸ್ತಿ ಧಾತು -
    ಮೃದ್ವಸ್ಥಿ ಸೇರಿದಂತೆ ಮೂಳೆ ಅಂಗಾಂಶಗಳನ್ನು ಒಳಗೊಂಡಿರುವ ಇದರ ಮುಖ್ಯ ಕಾರ್ಯವೆಂದರೆ ಮಜ್ಜಾ ಧಾತುಗಳಿಗೆ ಬೆಂಬಲವನ್ನು ನೀಡುವುದು ಮತ್ತು ಮಾಸ್ಮ ಧಾತುಗಳಿಗೆ ಬೆಂಬಲವನ್ನು ನೀಡುವುದು.
  • ಮಜ್ಜಾ ಧಾತು -
    ಹಳದಿ ಮತ್ತು ಕೆಂಪು ಮೂಳೆ ಮಜ್ಜೆಯ ಅಂಗಾಂಶವನ್ನು ಸೂಚಿಸುತ್ತದೆ, ಅದರ ಮುಖ್ಯ ಕಾರ್ಯವು ಅಸ್ತಿಯನ್ನು ತುಂಬುವುದು ಮತ್ತು ದೇಹವನ್ನು ಒಲಿಯುವುದು.
  • ಶುಕ್ರ ಧಾತು -
    ಈ ಸಂತಾನೋತ್ಪತ್ತಿ ಅಂಗಾಂಶದ ಮುಖ್ಯ ಗುರಿ ಸಂತಾನೋತ್ಪತ್ತಿಗೆ ಸಹಾಯ ಮಾಡುವುದು ಮತ್ತು ದೇಹವನ್ನು ಬಲಪಡಿಸುವುದು.
ತಂದೆಯ ಇಪ್ಪತ್ತ ಮೂರು 'XY ' ತಾಯಿಯ ಇಪ್ಪತ್ತ ಮೂರು 'XX' ವರ್ಣತಂತುಗಳ ಗುಣಾಂಶ ಹಾಗೂ ವಂಶವಾಹಿನಿಯಾಗಿ ಬರುತ್ತದೆ. ಮಗುವಿಗೆ ತಾಯಿಯ ಗುಣಾಂಶ 'X' ಸಾಮಾನ್ಯವಾಗಿದ್ದು, ತಂದೆಯ 'Y' ಗುಣಾಂಶವು ತಾಯಿಯ 'XX' ಗುಣಾಂಶವನ್ನು ಮೀರಿ ತಂದೆಯಿಂದ 'Y' ಬರುವುದರಿಂದ ಮಗಳಿಗೆ ತಂದೆಯ 'Y' ಬರಲು ಅಸಾಧ್ಯವಾಗಿದ್ದು, ತಂದೆಯಿಂದ ಗೋತ್ರವು ಮಗನಿಗೆ, ಮೊಮ್ಮಗನಿಗೆ, ಮರಿಮಗನಿಗೆ ಮಾತ್ರ ಮುಂದುವರಿಯುವುದು. ಮೇಲೆ ಹೆಸರಿಸಿದ ಎಂಟು ಋಷಿಗಳಲ್ಲಿ ಎಂಟು ವಿಭಿನ್ನ 'Y' ಗುಣಾಂಶದ ವರ್ಣತಂತುಗಳಿದ್ದು, ಆ ತಳಿ ಮೂಲಾಂಶದ ವಂಶವಾಹಿನಿ ನಾವಾಗಿದ್ದೇವೆ ಹಾಗೂ ನಾವು ಯಾವ ಮೂಲ ಪುರುಷನ ಸಂತತಿ ಎಂಬುದು ತಿಳಿಯುತ್ತದೆ.
ವಿವಾಹ ವಿಚಾರದಲ್ಲಿ ನಾವು ಸ್ವಗೋತ್ರರಲ್ಲಿ ನೆಂಟಸ್ತಿಕೆ ಮಾಡಿದಲ್ಲಿ 'Y' ಗುಣಾಂಶದ ವರ್ಣತಂತುಗಳು ಭವಿಷ್ಯದಲ್ಲಿ ಮುಂದುವರೆಯಲಾಗದೆ ನಿಃಶಕ್ತ, ನಿತ್ರಾಣ, ಬೆಳವಣಿಗೆ ಕುಂಠಿತ, ರಕ್ತ ಸಂಬಂಧಿ ಕಾಯಿಲೆ, ಪುತ್ರ ವಿಹೀನ, ಸಂತಾನ ಹೀನ- ಇತ್ಯಾದಿ ಹಲವಾರು ಸಮಸ್ಯೆಗಳು ಕಾಣಿಸುತ್ತದೆ. ಹಾಗಾಗಿ ಗೋತ್ರವು 'Y' ಗುಣಾಂಶದ ವರ್ಣತಂತುಗಳ ರಕ್ಷಕನಾಗಿದೆ.
ಗೋತ್ರ ಪ್ರವರ ಹೇಳುತ್ತೇವೆಯೇ ಹೊರತು, ಅದು ಏನು? ಅದರ ಅರ್ಥವೇನು? ಇತ್ಯಾದಿ ತಿಳಿಯದು.
ಲೋಕದಲ್ಲಿನ ಜನರು ತಾವು ಯಾರು? ಎಲ್ಲಿಂದ ಬಂದೆವು? ಯಾವ ಬುಡಕಟ್ಟಿಗೆ ಸೇರಿದವರು? ನಮ್ಮ ವಂಶದ ಪೂರ್ವಜರ ಚರಿತ್ರೆಯೇನು? ಇತ್ಯಾದಿ ವಿಷಯಗಳನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಆಸೆ ಪಡುತ್ತಾರೆ. ಗೋತ್ರ ಎಂದರೆ, ತಾನು ಹುಟ್ಟಿದ ವಂಶದ ಮೂಲಪುರುಷನ ಹೆಸರು. ಯಾವ ಋಷಿಯ ವಂಶದಲ್ಲಿ ಹುಟ್ಟಿದನೋ ಅವನ ಹೆಸರು. ಅದನ್ನೇ ಮನೆತನ, ವಂಶ ಎಂದು ಕರೆಯುವುದು. ಪ್ರವರ ಎಂದರೆ, ಆಯಾ ವಂಶದಲ್ಲಿ ಬಂದ ಪ್ರಸಿದ್ಧರಾದ ನಮ್ಮ ತಾತ ಮುತ್ತಾತಂದಿರ ಹೆಸರು. ನಾವು ಬಂದ ವಂಶದಲ್ಲಿ ಪ್ರಸಿದ್ಧರಾದವರು ಅದು ಮುತ್ತಾತ, ತಾತ, ತಂದೆಯಾಗಿರಬಹುದು. ಅಥವಾ ಮುತ್ತಾತ, ಅವರಿಂದ ಕೆಲವು ತಲೆಮಾರುಗಳು ಬಿಟ್ಟು, ಇನ್ನೊಬ್ಬ ಪ್ರಸಿದ್ಧರಾದವರ ಹೆಸರುಗಳು ಇರಬಹುದು, ಅವರಿಂದ ಮೇಲೆ ಇನ್ನೂ ಕೆಲವು ತಲೆಮಾರುಗಳು ಬಿಟ್ಟು, ಬಂದವರ ಹೆಸರುಗಳು ಇರಬಹುದು. ಅವರು ಎಲ್ಲಾ ವಿಷಯಗಳಲ್ಲೂ ಪ್ರಸಿದ್ಧರಾಗಿರಬೇಕು. ಈ ರೀತಿ ಮೂರು ಜನರ ಹೆಸರು, ಅಥವಾ ಐದು ಜನರ ಹೆಸರುಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳುವುದು. ಇದು ಬದಲಾಗಬಹುದು. ಆಗದೆಯೂ ಇರಬಹುದು.
ನಮ್ಮ ವಂಶದ ಎಲ್ಲರ ಹೆಸರುಗಳನ್ನು ಹೇಳುವುದಕ್ಕಾಗುವುದಿಲ್ಲವಾದ್ದರಿಂದ, ಪ್ರಸಿದ್ಧರಾದ ಮೂರು ಜನ, ಅಥವಾ ಐದು ಜನರ ಹೆಸರನ್ನು ಹೇಳುವುದು. ಅವರು ಜ್ಞಾನವಂತರಾದ್ದರಿಂದ ಅವರನ್ನೇ ಋಷಿ ಎಂದು ಕರೆಯುವರು. ತ್ರಯ ಋಷಿಯ, ಪಂಚ ಋಷಿಯ ಶಬ್ದದಿಂದ ಕರೆಯುತ್ತೇವೆ. ಅನಂತರ ನಮ್ಮ ಕೂಟಸ್ಥರು ಮೂಲ ಪುರುಷ ಋಷಿಯ ಹೆಸರನ್ನು ಹೇಳುವುದು. ಅದಕ್ಕೆ ಗೋತ್ರ ಎಂದು ಹೆಸರು.
ಸೂತ್ರ ಎಂದರೆ
ವೇದ ಧರ್ಮ ತಿಳಿಯಲು, ಅದರಂತೆ ಆಚರಿಸಲು ಅನೇಕ ಸೂತ್ರಗಳು ಬರೆಯಲ್ಪಟ್ಟಿವೆ. ಅವುಗಳು:- ಆಪಸ್ತಂಭ, ಆಶ್ವಲಾಯನ, ದ್ರಾಹ್ಯಾಯಣ, ಇತ್ಯಾದಿ ಸೂತ್ರಗಳಿವೆ. ಇವುಗಳು ಇಂತಿವೆ: 
ಆಪಸ್ತಂಭ ಸೂತ್ರವು ಯಜುರ್ವೇದಕ್ಕೆ ಸೇರಿರುವುದು. 
ಆಶ್ವಲಾಯನ ಸೂತ್ರವು ಋಗ್ವೇದಕ್ಕೆ ಸೇರಿರುವುದು. 
ದ್ರಾಹ್ಯಾಯಣ ಸೂತ್ರವು ಸಾಮವೇದಕ್ಕೆ ಸೇರಿರುವುದು.
ಗೋತ್ರವನ್ನು ಹೇಳಿದ ಮೇಲೆ ಇಂಥ ವೇದಕ್ಕೆ ಸೇರಿದ ಸೂತ್ರ ಎಂದರೆ - ಗೃಹ್ಯಸೂತ್ರದ ಪ್ರಕಾರ ಷೋಡಶಕರ್ಮಕ್ಕೆ ಒಳಪಟ್ಟವನು ಎಂದರ್ಥವು. ಅನಂತರ ವೇದ ಪರಂಪರೆಯಾಗಿ ಬಂದ ಇಂತಹ ವೇದ ವಿದ್ಯೆಯನ್ನು ಅಧಿಕರಿಸುವವನು ಎಂಬರ್ಥವು.
ತ್ರಯ ಋಷಯ ಅಥವಾ ಪಂಚ ಋಷಯ ಪ್ರವರಾನ್ವಿತ . . ಸೂತ್ರ. . . . ಶಾಖಾಧ್ಯಾಯೀ ಎಂದು ಹೇಳಿ, ಗುರುಹಿರಿಯರಿಗೆ ನಮಸ್ಕರಿಸುವುದು. ಅರ್ಥಾತ್ ನೀನು ಯಾರು? ಎಂದು ಕೇಳಿದರೆ, ಇಂತಹ ಋಷಿಗಳ ವಂಶದಲ್ಲಿ ಹುಟ್ಟಿ, ಇಂತಹ ಸೂತ್ರದ ಪ್ರಕಾರ ಷೋಡಶ ಕರ್ಮಗಳಿಗೆ ಒಳಪಟ್ಟು, ಇಂಥ ವೇದವನ್ನು ಅಧಿಕರಿಸುವವನು - ಎಂದು ಹೇಳುವುದು.
ನಮ್ಮ ಸಂಸ್ಕೃತಿಯು ಪ್ರತಿಯೊಬ್ಬನೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಂದರೆ ತ್ರಿಕಾಲದಲ್ಲೂ ನಮ್ಮ ಹಿರಿಯರನ್ನು ಎಂದರೆ, ನಾವು ಬಂದ ನಮ್ಮ ಋಷಿ ಪರಂಪರೆಯಲ್ಲಿ ಮೂರು ಜನಗಳು ಅಥವಾ ಐದು ಜನಗಳನ್ನು ಜ್ಞಾಪಿಸಿಕೊಂಡು, ಅವರ ಹೆಸರನ್ನು ಹೇಳಿ, ಹಿರಿಯರಿಗೆ ಗುರುಗಳಿಗೆ ನಮಸ್ಕರಿಸಬೇಕೆಂದು ಹೇಳುವುದು. ಅದರಂತೆ ನಾವು ಸಂಧ್ಯಾವಂದನೆ, ದೇವತಾಪೂಜೆಯ ಕಾಲದಲ್ಲಿ ನಮ್ಮ ಹಿರಿಯರನ್ನು ನೆನೆಸಿಕೊಂಡು, ಗುರುಹಿರಿಯರಿಗೆ ನಮಸ್ಕರಿಸುತ್ತೇವೆ. ಅದನ್ನು ತೋರಿಸುವುದೇ ಈ ಗೋತ್ರ, ಪ್ರವರ, ಸೂತ್ರ ಎನ್ನುವುದು.
ಈ ಗೋತ್ರ,ಪ್ರವರ ವಿಷಯದಲ್ಲಿ ಅನೇಕ ಪಂಡಿತರು ವಿಮರ್ಶನಾತ್ಮಕ ಗ್ರಂಥಗಳನ್ನು ಬರೆದಿರುವರು. ಕಮಲಾಕರಭಟ್ಟ ಬರೆದ ಗ್ರಂಥವಿದೆ. "ಗೋತ್ರ, ಪ್ರವರ,ನಿರ್ಣಯ" ಎಂಬ ಗ್ರಂಥವೂ ಇರುವುದು. ಆ ಗ್ರಂಥಗಳನ್ನು ಓದಿ ತಿಳಿಯುವುದು ಕಷ್ಟ. ಪಂಡಿತರು, ತಿಳಿದವರು ಗೋತ್ರ, ಪ್ರವರ, ಸೂತ್ರ ವಿಚಾರವಾಗಿ ನಮ್ಮ ಮಕ್ಕಳಿಗೆ ಮನದಟ್ಟಾಗುವಂತೆ ವಿಮರ್ಶಾತ್ಮಕವಾಗಿ ಬರೆಯಬೇಕು.
ಗೋತ್ರ,ಋಷಿಗಳ ಆವಿರ್ಭಾವ:- ಚತುರ್ಮುಖ ಬ್ರಹ್ಮನಿಂದ ಪರಂಪರೆಯಾಗಿ ಏಳು ಮಂದಿ ಋಷಿ ಪುಂಗವರು ಜನಿಸಿದರು. 
ಭೃಗು
ಆಂಗೀರಸ
ಮರೀಚಿ
ಅತ್ರಿ
ಪುಲಹ
ಪೌಲಸ್ತ್ಯ
ವಸಿಷ್ಠ
ಎಂಬುದಾಗಿ ಏಳುಮಂದಿ ಋಷಿಗಳು ಉದಯಿಸಿದರು. ಇವರಲ್ಲಿ ಐದನೆಯವರಾದ ಪುಲಹ ಋಷಿಯಿಂದ ರಾಕ್ಷಸರ ಉತ್ಪನ್ನವಾಯಿತು. ಆರನೆಯವರಾದ ಪೌಲಸ್ತ್ಯರಿಂದ ಪೈಶಾಚರು ಉತ್ಪನ್ನರಾದರು. ಏಳನೆಯವರಾದ ವಸಿಷ್ಠರು ಮೃತರಾಗಿ ಮೂರನೆಯವರಾದ ಮರೀಚಿಗೆ ಉತ್ತರಾಧಿಕಾರಿಯಾಗಿ ಏರ್ಪಟ್ಟರು. ಆದ್ದರಿಂದ ಈಗಿರುವ ಅಖಿಲಬ್ರಾಹ್ಮಣ ಸಮೂಹವೆಲ್ಲವೂ ಮೊದಲು ತಿಳಿಸಿದಂತೆಯೇ ಇರುತ್ತದೆ 
ಭೃಗು
ಆಂಗೀರಸ
ಮರೀಚಿ
ಅತ್ರಿ 
ಈ ನಾಲ್ಕು ಋಷಿಗಳ ಪರಂಪರೆಗೆ ಸೇರಿದವರು.
ಈ ನಾಲ್ಕು ಋಷಿಗಳು ಸೇರಿ ಸಮುದಾಯ ಅಥವಾ ಮನೆತನ ಅಥವಾ ವಂಶಪರಂಪರೆ ಎಂಬುದಾಗಿ ನಾಲ್ಕು ಭಾಗ ಮಾಡಿದರು. ಈ ರೀತಿ ಮಾಡಿದುದರಲ್ಲಿ ಎಂಟು ಪರಂಪರೆ ವಂಶಗಳಾದವು. ಅವರನ್ನೇ ಗೋತ್ರಕಾರರೆಂದು ಕರೆಯಲಾಯಿತು. ಆ ಎಂಟು ಜನ ಗೋತ್ರಕಾರರ ಮೂಲಪುರುಷರು:
೧. ಜಮದಗ್ನಿ - ಭೃಗು ವಂಶಸ್ಥರು (೧)
೨. ಭರದ್ವಾಜ - ಆಂಗೀರಸ ವಂಶಸ್ಥರು (೨)
೩. ಗೌತಮ - ಮೇಲಿನಂತೆ
೪. ಕಾಶ್ಯಪ - ಮರೀಚಿ ವಂಶಸ್ಥರು (೩)
೫. ವಸಿಷ್ಠ - ಮೇಲಿನಂತೆ
೬. ಅಗಸ್ತ್ಯ - ಮೇಲಿನಂತೆ
೭. ಅತ್ರಿ - ಅತ್ರಿಯೇ ಮೂಲಪುರುಷರು ಅಥವಾ ಅವರ ವಂಶಸ್ಥರು (೪)
೮. ವಿಶ್ವಾಮಿತ್ರ - ಅತ್ರಿ ಋಷಿಯ ವಂಶಸ್ಥರು
ಈ ರೀತಿ ನಾಲ್ಕುಜನ ಮೂಲಪುರುಷರಿಂದ ಉತ್ಪನ್ನರಾದ ಗೋತ್ರಕಾರರು ಅವರವರ ವಂಶದಲ್ಲಿ (ಸಗೋತ್ರ) ಹೆಣ್ಣು ಕೊಟ್ಟು ತರುವುದು ನಿಷೇಧವು. ಒಂದು ಗೋತ್ರದವರು ಇನ್ನೊಂದು ಗೋತ್ರದವರಲ್ಲಿ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ಮಾಡಬಹುದು.
ಮೇಲೆ ತಿಳಿಸಿದ ಎಂಟುಜನ ಗೋತ್ರಕಾರರು ಸ್ಥಿರಪಟ್ಟಮೇಲೆ ಹೊಸದಾಗಿ ಇನ್ನು ಹತ್ತು ಋಷಿ ವಂಶಸ್ಥರನ್ನು ಸೇರಿಸಲಾಯಿತು. ಈ ರೀತಿಯಲ್ಲಿ ಹೊಸದಾಗಿ ಬಂದ ಬ್ರಾಹ್ಮಣರು ಕ್ಷತ್ರಿಯಕುಲಕ್ಕೆ ಸೇರಿದವರಾಗಿ ಅನಂತರ ಕಾಲದಲ್ಲಿ ಪುನಃ ಬ್ರಾಹ್ಮಣಕುಲಕ್ಕೆ ಸೇರಿದವರಾದರು. ಎಂದರೆ ಭೃಗುವಂಶ ಅಥವಾ ಆಂಗೀರಸ ವಂಶಕ್ಕೆ ಸೇರಿದವರಾದರು. ಇಂತಹವರನ್ನೆಲ್ಲಾ ಕೇವಲರು ಅಥವಾ ಪ್ರತ್ಯೇಕಿಸಲ್ಪಟ್ಟ ಭಾರ್ಗವರು ಅಥವಾ ಆಂಗೀರಸರು ಎಂದು ಕರೆಯಲ್ಪಟ್ಟವರಾದರು. ಇವರೆಲ್ಲಾ ಮೇಲೆ ತಿಳಿಸಿದವರೊಂದಿಗೆ ಹೆಣ್ಣು ಕೊಟ್ಟು ವಿವಾಹಾದಿಗಳನ್ನು ನಡೆಸಬಹುದೆಂದು ಎಲ್ಲರೂ ಒಪ್ಪಿದವರಾದರು. ಆ ಹತ್ತು ಮಂದಿ ಈ ರೀತಿಯಲ್ಲಿದ್ದಾರೆ:-
೧. ವೀತಹವ್ಯ - ಭೃಗು ವಂಶವನ್ನವಲಂಬಿಸಿದವರು
೨. ಮೈತ್ರೇಯ - ಮೇಲಿನಂತೆ
೩, ಶುನಕ - ಮೇಲಿನಂತೆ
೪, ವೇನ - ಮೇಲಿನಂತೆ
೫. ರಥೀತರ - ಆಂಗೀರಸ ಗೋತ್ರವನ್ನವಲಂಬಿಸಿದವರು
೬. ಮುದ್ಗಲ - ಮೇಲಿನಂತೆ
೭. ವಿಷ್ಣುವೃದ್ಧ - ಮೇಲಿನಂತೆ
೮. ಹಾರೀತ - ಮೇಲಿನಂತೆ
೯. ಕಣ್ವ - ಮೇಲಿನಂತೆ
೧೦.ಸಂಕೃತಿ -ಮೇಲಿನಂತೆ
ಪ್ರಕೃತ ಕಾಲದಲ್ಲಿ ಭರತಖಂಡದ ಅಖಿಲ ಬ್ರಾಹ್ಮಣರೆಲ್ಲರೂ ೧೮ ಗುಂಪುಗಳಾಗಿ ವಿಭಾಗಿಸಲ್ಪಟ್ಟಿರುವರು. ಇವರೆಲ್ಲರೂ ಒಂದು ಗುಂಪಿನವರು ಇನ್ನೊಂದು ಗುಂಪಿನೊಂದಿಗೆ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸಬಹುದು. ಆದರೆ ತಮ್ಮ ತಮ್ಮ ಗುಂಪಿನಲ್ಲೇ ಹೆಣ್ಣು ಕೊಟ್ಟು ತಂದು ವಿವಾಹಾದಿಗಳನ್ನು ನಡೆಸುವುದು ನಿಷೇಧಿಸಲ್ಪಟ್ಟಿರುವುದು

No comments:

Post a Comment