Monday, October 02, 2023

MATAA PITRU RUNA XVII Shraaddha ಮಾತಾಪಿತೃ ಋಣ

MATAA PITRU RUNA  ಮಾತಾಪಿತೃ ಋಣ

         ದೇವ ಋಣ  ಋಷಿ ಋಣ ಮತ್ತು ಗುರು ಋಣವನ್ನು ತೀರಿಸಬಹುದು, ಆದರೆ ಮಾತಾಪಿತೃ ಋಣ ತೀರಿಸಲು ಆಗುವುದಿಲ್ಲ ಎನ್ನುತ್ತದೆ ಶಾಸ್ತ್ರ. ಏಕೆಂದರೆ ತಾಯಿ ನಮ್ಮನ್ನು ನವ ಮಾಸಗಳು ಗರ್ಭದಲ್ಲಿ ಹೊತ್ತು, ಹೆತ್ತು, ಸಾಕಿಸಲಹುವಳು. ತಂದೆಯು ಇಡೀ ಸಂಸಾರದ ಭಾರವನ್ನು ಹೊತ್ತು ಮಕ್ಕಳ ಹಿತ ಮತ್ತು ಭವಿಷ್ಯಕ್ಕಾಗಿ ದುಡಿಯುತ್ತಾನೆ. ಇಂತಹ ತಂದೆ-ತಾಯಿಯ ಋಣವನ್ನು ತೀರಿಸಲು ಅವರು ನಿಧನವಾದ ನಂತರ ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಬೇಕು.
          ಪ್ರತಿವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನುವರು. ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗೆ. ಈ ಅವಧಿಯಲ್ಲಿ ಮದುವೆ, ಉಪನಯನ, ಚೂಡಾಕರ್ಮ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳನ್ನು ಮಾಡುವುದಿಲ್ಲ. ಈ ಹದಿನೈದು ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿರುವುದು. ಶ್ರಾದ್ಧಕರ್ಮವನ್ನು ಎಲ್ಲರೂ ಅವರವರ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸುವರು. ಈ ಶ್ರಾದ್ಧ ಸಂನ್ಯಾಸಿಗಳಿಗೆ ಮತ್ತು ಯತಿಗಳಿಗೆ ಅನ್ವಯಿಸುವುದಿಲ್ಲ. ಬ್ರಹ್ಮಪುರಾಣದಲ್ಲಿ ಶ್ರಾದ್ಧ(ಪಕ್ಷ)ದ ಬಗ್ಗೆ ಈ ರೀತಿ ಹೇಳಿದೆ:
ದೇಶೇ ಕಾಲೇ ಚ ಪಾತ್ರೇ ಚ ಶ್ರದ್ಧಯಾ ವಿಧಿನಾ ಚ ಯತ್ |
ಪಿತೃನುದ್ವಿಶ್ಯ ವಿಪ್ರೇಭ್ಯೋ ದತ್ತಂ ಶ್ರಾದ್ಧಾಮುದಾಹೃತಮ್ ||
ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ಸಮಯದಲ್ಲಿ ಶ್ರದ್ಧೆಯಿಂದಲೂ, ಶಾಸ್ತ್ರವಿಧಿಗೆ ಅನುಸಾರವಾಗಿ ಏನನ್ನು ದಾನವಾಗಿ ಕೊಡುತ್ತಾನೆಯೋ ಅದು ಶ್ರಾದ್ಧವೆನಿಸುತ್ತದೆ. ಮಾತಾ-ಪಿತೃಗಳ ನಿಧನದ ನಂತರ ಅವರು ಪಿತೃ ದೇವತೆಗಳೆನಿಸುವ ಕಾರಣ ಶ್ರಾದ್ಧವನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯದ ರೀತಿಯಲ್ಲಿ ಆತ್ಮಕ್ಕೆ ಹುಟ್ಟುಸಾವುಗಳಿಲ್ಲ. ಆದ್ದರಿಂದ ಶಂಕರಾಚಾರ್ಯರು ‘ಭಜಗೋವಿಂದಂ’ನಲ್ಲಿ ಪುನರಪಿ ಜನನಂ ಪುನರಪಿ ಮರಣಂ| ಪುನರಪಿ ಜನನೀ ಜಠರೇ ಶಯನಮ್| ಎಂದಿದ್ದಾರೆ. ಈ ಹುಟ್ಟು ಸಾವುಗಳು ನಮಗೆ ಮುಕ್ತಿ (ಮೋಕ್ಷ) ಸಿಗುವವರೆಗೂ ನಿರಂತರ ನಡೆಯುತ್ತಿರುತ್ತವೆ. ಆದ್ದರಿಂದ ಮಾತಾ-ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಿತೃಪಕ್ಷವನ್ನು ಮಾಡಬೇಕು.
            ತಿಲಪರ್ಪಣ: ತರ್ಪಣ ಎಂದರೆ ‘ತೃಪ್ತಿಪಡಿಸುವಿಕೆ’ ಎಂದು. ತರ್ಪಣದಲ್ಲಿ ಜಲತರ್ಪಣ ಮತ್ತು ತಿಲತರ್ಪಣ ಎಂದು ಎರಡು ವಿಧ. ಋಷಿ, ದೇವತೆಗಳಿಗೆ ಜಲತರ್ಪಣ, ಪಿತೃದೇವತೆಗಳಿಗೆ ತಿಲತರ್ಪಣ ನೀಡಬೇಕು. ತಂದೆ-ತಾಯಿ ಇಲ್ಲದವರು, ತಾಯಿ ಜೀವಂತವಾಗಿದ್ದು, ತಂದೆ ಇಲ್ಲದವರು ಅಮಾವಾಸ್ಯೆ, ಸಂಕ್ರಾಂತಿ, ಗ್ರಹಣದ ಸಮಯದಲ್ಲಿ ಶ್ರಾದ್ಧಕರ್ಮದಲ್ಲಿ ಪಿತೃದೇವತೆಗಳಿಗೆ ತಿಲತರ್ಪಣ ಮಾಡಬೇಕು.
           ತಿಲ ಅಥವಾ ಎಳ್ಳು: ಎಳ್ಳು ಶನಿಗ್ರಹಕ್ಕೆ ಕಾರಕ. ಈತ ಜೀವನಾಡಿಗೆ ಕಾರಕನು. ಎಳ್ಳು ತೈಲ ನೀಡುವ ಧಾನ್ಯ. ನಮ್ಮ ಶರೀರದಲ್ಲಿ ವಿದ್ಯುತ್ ಉತ್ಪತ್ತಿಯಾಗುವುದು. ಅದು ಶರೀರಕ್ಕೆ ಎಷ್ಟು ಬೇಕೋ ಅಷ್ಟನ್ನು ಉಪಯೋಗಿಸಿ ಹೆಚ್ಚಾದ್ದನ್ನು ಶರೀರದಿಂದ ಹೊರಕ್ಕೆ ವಿಸರ್ಜಿಸಬೇಕಾಗುತ್ತದೆ. ವಿದ್ಯುತ್ ಉತ್ಪತ್ತಿ ಹೆಚ್ಚಾಗಿ ನಮ್ಮ ಹಸ್ತಗಳಲ್ಲಿ ಆಗುವುದು. ಆದ್ದರಿಂದ ಮಂತ್ರೋಚ್ಛಾರಣೆ ಮಾಡಿ ತಿಲ ಹಾಗೂ ನೀರನ್ನು ಉ ಪಯೋಗಿಸಿ ತರ್ಪಣ ನೀಡಬೇಕು. ನೀರು ಸಹ ಒಳ್ಳೆಯ ವಿದ್ಯುತ್​ವಾಹಕ. ತಿಲದ ಮೇಲೆ ಬಿಟ್ಟ ನೀರು ತಿಲದಲ್ಲಿರುವ ಗುಣಗಳನ್ನು ಚರ್ಮದ ಮೂಲಕ ಶರೀರಕ್ಕೆ ವರ್ಗಾಯಿಸುತ್ತದೆ. ಕರ್ತೃ ನೀಡಿದ ಪಿಂಡದಾನದ ಮೂಲದ್ರವ್ಯ ಇಲ್ಲಿಯೇ ಇದ್ದರೂ ಅದರ ಫಲ ಪರಿವರ್ತನೆ ಮೂಲಕ ಮೃತವ್ಯಕ್ತಿಗೆ ತಲುಪುವುದು- ರೇಡಿಯೋ, ಟಿ.ವಿ, ದೂರವಾಣಿ ದೂರಧ್ವನಿ ತರಂಗಗಳ ವಲಯಗಳು ತಮ್ಮದೇ  ಗಮ್ಯಸ್ಥಾನದಕಡೆಗೆ ತಲುಪುವ ಹಾಗೆ.
           ಕಾಗೆಗೇ ಪಿಂಡವನ್ನು ಏಕೆ ಕೊಡಬೇಕು ?  ಒಮ್ಮೆ ಮರುತ್ತ ಮಹಾರಾಜ ಎಂಬುವನು ಯಜ್ಞ ಮಾಡುತ್ತಿದ್ದಾಗ ಹೋಮಕ್ಕೆ ಅರ್ಪಿ ಸುತ್ತಿದ್ದ ಹವಿಸ್ಸನ್ನು ಸ್ವೀಕರಿಸಲು ದೇವತೆಗಳು ನಿಜರೂಪದಲ್ಲಿ ಅಲ್ಲಿಗೆ ಬಂದರು. ಅದೇ ಸಮಯದಲ್ಲಿ ಅಲ್ಲಿಗೆ ರಾವಣನೂ ಬಂದನು. ಅವನಿಗೆ ಹೆದರಿದ ದೇವತೆಗಳು ಭಯದಿಂದ ಕೆಲವು ಪ್ರಾಣಿರೂಪ ಧರಿಸಿದರು. ರಾಜನು ರಾವಣನೊಂದಿಗೆ ಯುದ್ಧ ಮಾಡಲು ಹೊರಟಾಗ ಯಜ್ಞ ದೀಕ್ಷಿತನು ಯುದ್ಧ ಮಾಡುವ ಹಾಗೇ ಇಲ್ಲ ಎಂದು ಋತ್ವಿಕರು ಮರುತ್ತನನ್ನು ತಡೆದರು. ಆಗ ರಾವಣ ನಾನೇ ಗೆದ್ದೆನೆಂದು ಹೊರಟುಹೋದನು. ದೇವತೆಗಳು ಪ್ರಾಣಿರೂಪದಿಂದ ನಿಜ ರೂಪಕ್ಕೆ ಬಂದರು. 
             ದೇವತೆಗಳು ಯಾವ ಯಾವ ರೂಪದಲ್ಲಿ ಪ್ರಾಣಿಗಳಾಗಿದ್ದರೋ ಆಯಾ ಪ್ರಾಣಿಗಳಿಗೆ ವರ ನೀಡಿದರು. ನವಿಲಿನ ರೂಪ ಧರಿಸಿದ್ದ ಇಂದ್ರನು ನವಿಲಿಗೆ ನಾನು ಮಳೆಗರೆಯುವಾಗ ನರ್ತಿಸು, ಹಂಸರೂಪ ಧರಿಸಿದ್ದ ವರುಣ ನಿನ್ನ ವರ್ಣವು ಹಾಲಿನಂತೆ ಶುಭ್ರವಾಗಿರಲಿ ಎಂಬ ವರವನ್ನು ನೀಡಿದನು. ಕಾಗೆಯ ರೂಪ ಧರಿಸಿದ್ದ ಯಮನು ಭೂಮಿಯಲ್ಲಿ ನೀನು ಒಬ್ಬರು ಹಾಕಿದ ಅನ್ನ ತಿಂದಾಗ ನನ್ನ ಲೋಕದಲ್ಲಿರುವ ಅವನ ಪಿತೃಗಳಿಗೆ ತೃಪ್ತಿಯಾಗಲಿ ಎಂಬ ವರವನ್ನು ಕರುಣಿಸಿದನು. ಹಾಗಾಗಿ ಶ್ರಾದ್ಧದಲ್ಲಿ ‘ಕಾಗೆ’ಗೆ ಅನ್ನ (ಪಿಂಡ) ಹಾಕಿದರೆ ಪಿತೃಗಳು ತೃಪ್ತಿ ಆಗುವರು ಎಂಬ ನಂಬಿಕೆ.
             ಶ್ರಾದ್ಧವನ್ನು ಯಾವ ಕ್ಷೇತ್ರದಲ್ಲಿ ಮಾಡಬೇಕು?: 1. ಬಿಹಾರದ ಗಯಾ. 2. ಉತ್ತರ ಪ್ರದೇಶದ ಕಾಶೀ(ವಾರಾಣಸಿ) 
3. ಗಂಗಾನದಿ ತಟ. 4. ಅಯೋಧ್ಯೆಯ ಸರಯೂ ನದಿತೀರ. 5. ಪ್ರಯಾಗದ ತ್ರಿವೇಣಿ ಸಂಗಮ. 6. ಹರಿದ್ವಾರ ಗಂಗಾತಟದ ಬ್ರಹ್ಮಕುಂಡ. 7. ಬದರಿಯ ಬ್ರಹ್ಮಕಪಾಲ. 8. ಕರ್ನಾಟಕದ ಗೋಕರ್ಣ ಹಾಗೂ ಶ್ರೀರಂಗಪಟ್ಟಣ. 9. ಮಾತೃಗಯಾ.
ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಅದಕ್ಕೆ ಪ್ರಾಯಶ್ಚಿತ್ತ ಇರುವುದು. ಆದರೆ ಪಿತೃದ್ರೋಹಿಗಳಿಗೆ ಮಾತ್ರ ಪ್ರಾಯಶ್ಚಿತ್ತ ಇಲ್ಲವೆಂದು ಶಾಸ್ತ್ರವು ಹೇಳುತ್ತದೆ. ಪಿತೃಪಕ್ಷದಲ್ಲಿ ಮಾಡುವ ಕಾರ್ಯವು ಮಾತಾಪಿತೃಗಳಿಗಲ್ಲದೆ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯರಿಗೂ ಸೇರುತ್ತದೆ ಹಾಗೂ ರಕ್ತಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಶ್ರಾದ್ಧದಲ್ಲಿ ಶ್ರದ್ಧೆ ಮುಖ್ಯವೇ ಹೊರತು ಆಡಂಬರ, ತೋರಿಕೆ ಹಾಗೂ ಪ್ರಚಾರವಲ್ಲ.
              ನಮ್ಮ ಮನೆಯಲ್ಲಿ,ನಾವಿರುವ ಮನೆಯಲ್ಲಿ ಸ್ವಾಹಾಕಾರಗಳು, ಜಪ ತಪ ವ್ರತ ಆರಾಧನೆ ಪೂಜೆ ಯಾವುದೇ ಶುಭಕಾರ್ಯಗಳು ಶುಭ ಚಿಂತನ ಕೃತಿಗಳು ಮನೆಯಲ್ಲಿಯೇ ಮಾಡುವುದು ಮನೆಗೂ, ಅಲ್ಲಿ ವಾಶಿಸುವವರಿಗೂ ಶುಭಪ್ರದ, ಮನೆಯ ಹೊರತು ಬೇರೆಲ್ಲ ಕಡೆಯಾದರೂ ಮಾಡಿದರೇ ಅನುಕೂಲವೇ ಹೊರತು ಶುಭಕರವಲ್ಲ.  ಅದೇ ರೀತಿ ಮನೆಯಲ್ಲಿ, ವಾಶಿಸುವ ಮನೆಯಲ್ಲಿ ಸ್ವಧಾಕಾರಗಳೂ ಸಹ ಮನೆಯಲ್ಲಿಯೆ ನೆರವೇರಿಸುವುದು ಉತ್ತಮ ಮತ್ತು ಆದ್ಯಕರ್ತವ್ಯ, ಅವಶ್ಯಕ. ಆಗ ಮಾತ್ರ ನಮ್ಮ ಸ್ಥಳ,ನಾವಿರುವ ಸ್ಥಳ, ನಮ್ಮ ವೈಯಕ್ತಿಕ, ಲೌಕಿಕ, ಮತ್ತು ಅಪತ್ಯಾಭಿವ್ರುದ್ಧಿಯಾಗಿ ನಮಗೆ ಶುಭಪ್ರದವಾಗಿ ಪರಿವರ್ತನೆ ಆಗುವುದರದಲ್ಲಿ ಸಂಶಯವಿಲ್ಲ.   ಧನ್ಯವಾದಗಳು

No comments:

Post a Comment