EKACHAKRA ಏಕಚಕ್ರನಗರ -ಭೀಮಸೇನ
ಈ ಪುರಾಣೋಕ್ತಿತ ಎಂದೂ ಕಾಲಬಾಹ್ಯವಲ್ಲ " ಪಾಪಂ ಪ್ರಣಶ್ಯತಿ ವೃಕೋದರ ಕೀರ್ತನೇನ " ಎಂದು ಭೀಮಸೇನನಂತಹ ಮಹಾಶಕ್ತಿ ವಿಚಾರ ಸರಣಿಯ ಬಗ್ಗೆ ಒಂದು ಪುರಾಣೋಕ್ತಿ ಇದೆ. ಅಂದರೆ " ಭೀಮಸೇನನ ಹೆಸರನ್ನೇ ಹೇಳಿದ, ಕೇಳಿದ ಮಾತ್ರಕ್ಕೆ ಪ್ರತ್ಯಕ್ಷ ಆ ಪಾಪವೇ ಶರಣಾಗತವಾಗುತ್ತದೆ "
ಪಾಂಡವರು ಅರಗಿನ ಮನೆಯಿಂದ ತಪ್ಪಿಸಿಕೊಂಡು ತಮ್ಮ ನಿಜವೇಷಗಳನ್ನು ಮರೆಸಿಕೊಂಡಿದ್ದ ಕಾಲ. ವ್ಯಾಸರ ನಿರ್ದೇಶನದಂತೆ ಏಕಚಕ್ರ ನಗರದಲ್ಲಿ ಒಬ್ಬ ಬ್ರಾಹ್ಮಣನ ಅತಿಥಿಗಳಾಗಿ ವಾಸ. ಭಿಕ್ಷಾಟನೆಯಿಂದ ಜೀವನ, ಅಲ್ಲಿ ಬಕನೆಂಬ ರಾಕ್ಷಸನಿದ್ದ. ಅವನು ನಿತ್ಯವೂ ಧಾಂದಲೆ ನಡೆಸಿ ಆ ಊರಿನ ಎಲ್ಲರನ್ನೂ ಆಹಾರಕ್ಕಾಗಿ ಹಿಂಸಿಸುತ್ತಿದ್ದ. ಸರಿ, ಊರವರೆಲ್ಲ ಒಂದು ಒಪ್ಪಂದ ಮಾಡಿಕೊಂಡರು. ನಿತ್ಯವೂ ಒಂದು ಗಾಡಿ ಆಹಾರ ಪದಾರ್ಥಗಳು ಗಾಡಿ ಎಳೆಯುವ ಎತ್ತುಗಳು ಗಾಡಿ ನಡೆಸುವ ಮನುಷ್ಯ ಇಷ್ಟನ್ನು ಅವನಲ್ಲಿ ಕಳಿಸುವ ಒಪ್ಪಂದ , ದುರ್ಬಲರು ಇನ್ನೇನು ತಾನೇ ಮಾಡಿ ಯಾರು ನಿತ್ಯ ಅನಿಶ್ಚಿತವಾಗಿ ಯಾರು ಯಾರೋ ಸಾಯುವ ಬದಲು ಒಬ್ಬನಿಗೆ ಆಹಾರವಾಗುವುದು ಎಂದು ತೀರ್ಮಾನ. ಅಂದು ಒಂದು ದಿನ ಆ ಬ್ರಾಹ್ಮಣನ ಸರದಿ ಬಂತು. ಕುಟುಂಬದಲ್ಲಿ ಒಬ್ಬರನ್ನು ಕಳೆದುಕೊಳ್ಳಲೇ ಬೇಕಾದ ಅನಿವಾರ್ಯತೆ. ಈ ಘಟನೆ ಪ್ರಸಂಗದಲ್ಲಿ ಆ ಬ್ರಾಹ್ಮಣ ಕುಟುಂಬದ ಧರ್ಮಪ್ರಜ್ಞೆ ಸಾರ್ವಕಾಲಿಕ ಆದರ್ಶ
ಇಲ್ಲಿ ಆ ಬ್ರಾಹ್ಮಣ ಕುಟುಂಬದ ಧರ್ಮಪ್ರಜ್ಞೆ ಸಾವಿನ ಅಂಚಿನಲ್ಲಿ ಇದ್ದರೂ ಅಲುಗದ ಧರ್ಮ ಶ್ರದ್ಧೆ ತ್ಯಾಗ ಎಲ್ಲರಿಗೂ ಆದರ್ಶ. ಮತ್ತೆ ತಾಯಿ ಕುಂತಿಗೆ ತನ್ನ ಮಗ ಭೀಮಸೇನನಲ್ಲಿದ್ದ ವಿಶ್ವಾಸ, ರಾಕ್ಷಸನ ಶಕ್ತಿಯ ಪರಿಚಯವಿದ್ದರೂ ಲೋಕ ಹಿತಮನಸ್ಸಿನ ಕ್ಷತ್ರಿಯ ಮಾತೆ ಅವಳು ತಾವು ಆಶ್ರಯ ಪಡೆದ ಕುಟುಂಬಕ್ಕೆ ಆ ಇಡೀ ಪ್ರದೇಶಕ್ಕೆ ರಾಕ್ಷಸನ ಉಪಟಳವನ್ನು ತಪ್ಪಿಸುವ ಲೋಕರಹಿತ ದೃಷ್ಟಿ ಎಲ್ಲವೂ ಎಲ್ಲ ಕಾಲಕ್ಕೂ ಆದರ್ಶವಲ್ಲವೇ. ನಾವು ಎರಡು ದಿನ ಇದ್ದು ಹೋಗಲು ಬಂದವರು ಊರಿನ ಉಸಾಬರಿ ನಮಗೆಕೇ ಎಂದು ಯೋಚಿಸಬಹುದಿತ್ತು ಆದರೆ ಲೋಕದಲ್ಲಿ ಯಾರು ಕಷ್ಟದಲ್ಲಿದ್ದರೂ ಅವರನ್ನು ಕಾಪಾಡುವುದು ನಮ್ಮ ಧರ್ಮ ಎಂದು ಉಪಕ್ರಮಿಸುವ ಉದಾರತೆ ಲೋಕದ ಪರಮಾದರ್ಶ. ಭೀಮಸೇನನ ಪರಾಕ್ರಮ ದುಷ್ಟರನ್ನು ಸಂಹರಿಸಿ ಲೋಕವನ್ನು ಕಾಪಾಡುವ ಅವನ ನಿಶ್ಚಯ, ಸ್ಥೈರ್ಯ, ಧೈರ್ಯ ಶಕ್ತಿ ಎಲ್ಲವೂ ಆದರ್ಶಪೂರ್ಣವೇ ಬಕಾಸುರ ಒಬ್ಬ ಧರ್ಮಕಂಟಕ, ಅವನ ಅವಸಾನವಾಗಲೇಬೇಕು. ಅವನನ್ನು ವಧಿಸಲೇಬೇಕು ಧರ್ಮ ಉಳಿಯಬೇಕಾದರೆ ಅದರ ವಿರೋಧಿಗಳು ಅಳಿಯಲೇಬೇಕು, ಹೇಗೆ ಬೆಳೆಯುಳಿಯಬೇಕಾದರೆ ಕಳೆ ಅಳಿಯಲೇಬೇಕು. ಧರ್ಮಕಂಟಕರನ್ನು ಲೋಕಕಂಟಕರನ್ನು ಮೂಲಸಹಿತ ಉಚ್ಚಾಟನೆ ಮಾಡುವುದು ಒಂದು ಧರ್ಮ ಅದನ್ನು ಪ್ರತಿಯೊಬ್ಬರೂ ದೇಶದ ಪ್ರತಿಯೊಬ್ಬ ಪ್ರಜೆಯೂ ಕಾಲಾನುಕ್ರಮದ ಬೇಡಿಕೆ ಎಂದು ಆಚರಿಸುವುದು ಆದ್ಯಕರ್ತವ್ಯ ಈ ಪ್ರಣಾಳಿಕೆ ಎಂದೂ ಕಾಲಬಾಹ್ಯವಲ್ಲ " ಪಾಪಂ ಪ್ರಣಶ್ಯತಿ ವೃಕೋದರ ಕೀರ್ತನೇನ " ಎಂದು ಭೀಮಸೇನನ ಮಹಾಶಕ್ತಿ ವಿಚಾರ ಸರಣಿಯ ಬಗ್ಗೆ ಒಂದು ಪುರಾಣೋಕ್ತಿ ಇದೆ. ಅಂದರೆ " ಭೀಮಸೇನನ ಹೆಸರನ್ನೇ ಹೇಳಿದ, ಕೇಳಿದ ಮಾತ್ರಕ್ಕೆ ಪ್ರತ್ಯಕ್ಷ ಆ ಪಾಪವೇ ಶರಣಾಗತವಾಗುತ್ತದೆ " ಹೀಗಿದ್ದಾಗ ಒಬ್ಬ ರಕ್ಕಸನು ಯಾವ ಲೆಕ್ಖ.
ಇನ್ನು ಪ್ರತ್ಯಕ್ಷ ಕಥೆಗೆ ಹೋಗೋಣ ಇಲ್ಲಿ ಬ್ರಾಹ್ಮಣ ಕುಟುಂಬದ ಪ್ರತಿಯೊಬ್ಬರ ನಿಲುವು ಅನುಕರಣೀಯ
ಬ್ರಾಹ್ಮಣ. : ನಾನು ನಿಮ್ಮಲ್ಲಿ ಯಾರನ್ನಾದರೂ ಬಲಿ ಕೊಟ್ಟು ಬದುಕಿರಲಾರೆ ನೀನು ನನ್ನ ಧರ್ಮಪತ್ನಿ ಪ್ರಾಣಕ್ಕಿಂತ ಪ್ರೀಯಳಾದವಳು ಸದಾ ನನ್ನ ಸೇವೆಯಲ್ಲಿಯೇ ನಿರತರಾಗಿದ್ದು, ಮುತ್ತಿನಂತಹ ನಾಲ್ಕು ಮಕ್ಕಳನ್ನು ಹೆತ್ತು ಸಾಕಿಸಲುಹಿದ್ದಿ. ಮಕ್ಕಳೊಂದಿಗೆ ನಿನ್ನನ್ನು ನನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಖಂಡಿತ ಬಲಿ ಕೊಡಲಾರೆನು. ನನ್ನ ವಂಶೋದ್ಧಾರಕನಾಗಿ ಧರ್ಮ ಮಾರ್ಗದಲ್ಲಿ ನಡೆಯುವಂತಹ ಮಗ ಈಗ ಇನ್ನೂ ಎಳೆಯ ಬಾಲಕ. ಇವನನ್ನು ಹೇಗೆ ಬಲಿ ಕೊಡಲಾದೀತು ? ಇನ್ನೊಬ್ಬ ಸದ್ಗೃಹಸ್ಥ ನ ಮನೆ ಸೇರಿ ಅವನ ಸಂತಾನವನ್ನು ಬೆಳೆಸಲು ಸಹಾಯಕವಾಗುವ ಪ್ರಿಯ ಪುತ್ರಿ, ಇವರಲ್ಲಿ ಯಾರೊಬ್ಬರೂ ಸಾಯ ಹೋಗುವಂತಿಲ್ಲ ಹಾಗಾದರೆ ನಿಮ್ಮೆಲ್ಲರನ್ನು ಪಾಲಿಸುವ ಜವಾಬ್ದಾರಿಯನ್ನು ತೊರೆದಂತಾಗುತ್ತದೆ ನಿಮ್ಮೆಲ್ಲರ ಕ್ಷೇಮ ನನ್ನ ಕರ್ತವ್ಯ, ಹಾಗಾಗಿ ನಾನೇ ಆ ಬಕಾಸುರನಿಗೆ ಬಲಿಯಾಗುವುದು ಸರಿಯಾದ ಮಾರ್ಗ
ಬ್ರಾಹ್ಮಣ ಪತ್ನಿ : ಪಂಡಿತರಾಗಿ ಸಾಮಾನ್ಯ ಮನುಷ್ಯರಂತೆ ಏಕೆ ಮಾತನಾಡುತ್ತೀರಿ ? ಹುಟ್ಟಿದವರೆಲ್ಲ ಸಾಯಲೇಬೇಕು ಆಗಲೇಬೇಕಾಗಿರುವ ಕಾರ್ಯದ ವಿಷಯದಲ್ಲಿ ದುಃಖಿಸುವುದು ವಿವೇಕಗಳ ಲಕ್ಷಣವಲ್ಲ. ತನ್ನ ಪ್ರಾಣನಾದರೂ ತೊರೆದು ಪತಿಗೆ ಹಿತವನ್ನುಂಟು ಮಾಡುವುದೇ ನಿಜಸತಿಯ ಶ್ರೇಷ್ಠ ಕರ್ತವ್ಯ ಅದು ಸನಾತನ ಧರ್ಮ, ಲೋಕದಲ್ಲಿ ಮದುವೆಯಾಗುವ ಮುಖ್ಯ ಪ್ರಯೋಜನ ಸತ್ಸಂತಾನ ಪಡೆಯುವುದು. ಅದು ನಿನ್ನಿಂದ ಪಡೆದಾಗಿದೆ. ನಾನು ಹೋದರೂ ಮಕ್ಕಳನ್ನು ಸಾಕುವ ಸಾಮರ್ಥ್ಯ ನಿಮಗಿದೆ, ನೀವು ನಮ್ಮನ್ನು ಅಗಲಿದರೆ ನಾವು ಹೇಗೆ ಬದುಕುವುದು ? ಆಶ್ರಯದಾತನು ಇಲ್ಲದ ಮನೆಯ ಮಗಳ ರಕ್ಷಣೆಯಾದರು ಹೇಗೆ ಸಾಧ್ಯ. ನಮ್ಮ ಪಿತೃ ಪಿತಾಮಹರು ಅನುಸರಿಸಿದ ಸದಾಚಾರದಿಂದ ಹೇಗೆ ಇವಳ ವಿವಾಹ ನಾನು ಮಾಡಿಕೊಡಬಲ್ಲೆನು ಈ ನಮ್ಮ ಮಗನನ್ನು ವೇದ ವೇದಾಂಗ ಪಾರಂಗತನಾಗಿ ನಾನು ಬೆಳೆಸುವುದಾದರೆ ಹೇಗೆ ? ನೀವೊಬ್ಬರು ನಮ್ಮನ್ನಗಲಿದರೆ ನಮ್ಮ ಮೂವರ ವಿನಾಶವು ನಿಶ್ಚಿತ, ಹಾಗಾಗಿ ನಾನು ಅಲ್ಲಿಗೆ ಹೋಗುವುದು ನನಗೆ ಇಹಪರಗಳಲ್ಲಿ ಶ್ರೇಯಸ್ಸು ನನ್ನ ಕರ್ತವ್ಯವನ್ನು ನಿರ್ವಹಿಸಲು ನನಗೆ ಅಪ್ಪಣೆ ಕೊಡಿರಿ.
ಮಗಳು. ನಿಮ್ಮಗಳ ಹಿತಕ್ಕಾಗಿ ತಂದೆ ತಾಯಿಗಳ ಹಿತಕ್ಕಾಗಿಯೇ ಇರುವ ನನ್ನನ್ನೇಕೆ ನೀವು ಲೆಕ್ಕಿಸುತ್ತಿಲ್ಲ ಎಂದಾದರೂ ಒಂದು ದಿನ ಮನೆಯಿಂದ ಹೊರಗೆ ಹೋಗಬೇಕಾದವಳು ನಾನು ಇಂದೇ ಆ ಕೆಲಸ ಮಾಡಿ ನಿಮ್ಮ ಪ್ರಾಣವನ್ನು ರಕ್ಷಣೆ ಮಾಡುವುದು ನನ್ನ ಸಹಜ ಧರ್ಮ. ಇಹಲೋಕದಲ್ಲಿ ರಕ್ಷಣೆ ಪರಲೋಕದಲ್ಲಿ ಸದ್ಗತಿಗಾಗಿಯೇ ಸಂತಾನ ಇರುವುದು ಈ ಮಹತ್ತರವಾದ ಕಷ್ಟ ಪ್ರವಾಹದಲ್ಲಿ ನನ್ನನ್ನು ದೋಣಿಯಾಗಿ ಮಾಡಿಕೊಂಡು ದಾಟುವುದು ಸರಿಯಾಗಿದೆ. ಅದು ನನಗೂ ಶ್ರೇಯಸ್ಕರ
ಈ ನನ್ನ ತಮ್ಮ ಇನ್ನೂ ಬೆಳೆದು ಬಾಳಬೇಕಾದವನು ನಮ್ಮ ವಂಶವನ್ನು ಬೆಳೆಸಿ ನಮ್ಮ ಪಿತೃಗಳಿಗೆಲ್ಲ ಸದ್ದತಿ ಉಂಟು ಮಾಡಬೇಕಾದವನು. ನಮ್ಮಗಳಲ್ಲಿನ ಯಾರು ಹೋದರು ಇವನು ಬದುಕಿ ಉಳಿಯುವುದಿಲ್ಲ ಇವನನ್ನು ಕಳೆದುಕೊಂಡು ನಾನೂ ಉಳಿಯಲಾರೆ. ನಾನು ನನ್ನ ಕರ್ತವ್ಯವೆಂದು ರಕ್ಕಸನ ಬಳಿಗೆ ಹೋಗುತ್ತೇನೆ.
ಪುಟ್ಟ ಹುಡುಗ. ಎಲ್ಲರ ಕಣ್ಣನ್ನು ಒರೆಸುತ್ತಾ ಆ ರಾಕ್ಷಸನನ್ನು ನಾನು ಕೇವಲ ದರ್ಭೆಯಿಂದಲೇ ಸಂಹರಿಸುವೆನು ಎಂದು ತೊದಲು ನುಡಿಯುತ್ತಾನೆ
ಕುಂತಿದೇವಿ. ನಿಮಗೆ ಒಬ್ಬನೇ ಮಗ, ಅದೂ ಚಿಕ್ಕವನು ಮಗಳು ಒಬ್ಬಳೇ ಆದರೆ ನನಗೆ ಐದು ಜನ ಮಕ್ಕಳಿದ್ದಾರೆ, ಅದರಲ್ಲಿ ಒಬ್ಬನು ಆಹಾರ ತೆಗೆದುಕೊಂಡು ಹೋಗುತ್ತಾನೆ ಚಿಂತಿಸಬೇಡಿ.
ಬ್ರಾಹ್ಮಣ. ಖಂಡಿತ ಆಗದು, ನಮ್ಮಗಳ ಪ್ರಾಣ ರಕ್ಷಣೆಗಾಗಿ ಅತಿಥಿಗಳಾದ ನಿಮ್ಮಲ್ಲಿಯ ಒಬ್ಬನನ್ನು ಬಲಿ ಕೊಡುವುದು ಮಹಾ ಪಾಪ, ಮೇಲಾಗಿ ಬ್ರಹ್ಮ ಹತ್ಯ ದೋಷ. ಮಕ್ಕಳು ಒಬ್ಬರಾದರೇನು ಐವರಾದರೇನು ಇಂತಹ ಕೆಲಸವನ್ನು ಆಪತ್ಕಾಲದಲ್ಲಿಯೂ ಮನಸ್ಸಿನಲ್ಲಿ ತರುವುದು ತಕ್ಕದ್ದಲ್ಲ, ನೀವು ಹಾಗೆ ಹೇಳಲೂಕೂಡದು ನಾವು ಹಾಗೆ ವರ್ತಿಸಲೂ ಕೂಡದು. ನಮ್ಮಲ್ಲೊಬ್ಬರು ಆ ರಾಕ್ಷಸನನಿಗೆ ಆಹಾರವಾಗುತ್ತೇವೆ.
ಕುಂತಿದೇವಿ. ಹಾಗೆಲ್ಲ ಏನು ಇಲ್ಲ, ನನ್ನ ಮಗ ನಿಮ್ಮನೆಯ ಪ್ರತಿನಿಧಿಯಾಗಿ ಹೋಗುತ್ತಿದ್ದಾನೆ ವಿನಹ ಬಲಿಯಾಗಲು ಅಲ್ಲ ಅವನು ಬಲಿಷ್ಠ ಮೇಲಾಗಿ ಮಂತ್ರ ಸಿದ್ಧಿ ಉಳ್ಳವನು. ಹಾಗೆಂದೇ ನೀನು ಸಂಪೂರ್ಣ ಆಹಾರವನ್ನು ಸಿದ್ಧ ಮಾಡಿರಿ ಹೀಗೆ ನಿಶ್ಚಯದ ಧ್ವನಿಯಲ್ಲಿ ಕುಂತಿ ಹೇಳಿದಳು ನಂತರ ಭೀಮನು ಬಕಾಸುರನನ್ನು ಸದೆಬಡಿದ ಕಥೆ ನಮಗೆಲ್ಲ ಗೊತ್ತಿದೆ. ಸದಾ ಲೋಕ ಹಿತವನ್ನು ಬಯಸುವ ಭೀಮಸೇನ ಬಕನನ್ನು ವಧಿಸಿದ ನಂತರ ಅಲ್ಲಿ ವಾಸಿಸುತ್ತಿದ್ದ ಎಲ್ಲ ರಕ್ಕಸರಿಗೆ ಇನ್ನೂ ಮುಂದೆ ನೀವು ನಗರದ ಕಡೆ ಕಣ್ಣುಹಾಕುವಂತಿಲ್ಲ ಹಾಗೇನಾದರೂ ಕಂಡು ಬಂದದ್ದೇ ಆದರೆ ನಿಮ್ಮದೂ ಇದೇ ಗತಿ . ಇಲ್ಲಿ ವಾಸಿಸುವಿರಾದರೆ ವಾಸಿಸಬಹುದು ಆದರೆ ಮನುಷ್ಯರಂತೆ ಎಚ್ಚರಿಕೆ ..ಎಂದೂ ಮತ್ತೊಮ್ಮೆ ತಲೆಎತ್ತದಂತೆ ಮಾಡಿ ಹೋಗಿದ್ದ.
ಸರ್ವೇ ಜನಾ ಸುಖಿನೋ ಭವಂತು
No comments:
Post a Comment