Tuesday, June 04, 2024

Kaanaka Bekaatu Paramesura. ಕಾಣಾಕ ಬೇಕಾತು ಪರಮೇಸುರಾ

            ಕಾಣಾಕ ಬೇಕಾತು ಪರಮೇಸುರಾ


ಹೊತ್ತಿತ್ತು ಗೊತ್ತಿತ್ತು
ಒಳತೀನ ಮತ್ತಿತ್ತು 
ಕೇಡೀಗ ಕುತ್ತಿತ್ತು
ಸಂತರ ಸುತ್ತಿತ್ತು 
ಆ ಕಾಲ ಏನಾತೋ ಪರಮೇಸುರಾ
ನಿನ್ನ ಕಾಣಾಕ ಬೇಕಾತು ಪರಮೇಸುರಾ

ತಂಪಾದ ಸೂರಿತ್ತು 
ಊರಾಕ ಬೇರಿತ್ತು 
ಕುಡಿದಷ್ಟು ನೀರಿತ್ತು 
ಬಾಳೊಂದು ತೇರಿತ್ತು 
ತೇರೊಳಗ ನೀನಿಲ್ಲ ಪರಮೇಸುರಾ
ನಿನ್ನ ಕಾಣಾಕ ಬೇಕಾತು ಪರಮೇಸುರಾ

ಹೊಲದಾಗ ಬೆಳಿ ಇಲ್ಲ 
ಭೂಮಿಗ ಮಳಿ ಇಲ್ಲ
ಬದಕೀಗ ಕಳಿ ಇಲ್ಲ
ಹರಿವಿರೋ ಹೊಳಿ ಇಲ್ಲ
ಏನಂಥ ತಪ್ಪಾತೋ ಪರಮೇಸುರಾ
ನಿನ್ನ ಕಾಣಾಕ ಬೇಕಾತು ಪರಮೇಸುರಾ

ಮನಸೀಗ ಮಿತಿ ಇಲ್ಲ 
ಅಳುವಿರದ ಕತಿ ಇಲ್ಲ
ತಿಳುವಳಕಿ ಮತಿ ಇಲ್ಲ
ಹೆಣಕೊಂದು ಚಿತಿ ಇಲ್ಲ 
ಹೆಂಗಿತ್ತು ಹೆಂಗಾತೋ ಪರಮೇಸುರಾ 
ನಿನ್ನ ಕಾಣಾಕ ಬೇಕಾತು ಪರಮೇಸುರಾ

ಬಳಗದ ಜೋತಿ ಇಲ್ಲ
ಕವಳಕ್ಕ ಗತಿ ಇಲ್ಲ 
ಸತಿಗೊಬ್ಬ ಪತಿಯಿಲ್ಲ
ಕೆಡಕೀಗ ಹತಿ ಇಲ್ಲ 
ಕಲಿಗಾಲ ತಲಿಮ್ಯಾಲ ಪರಮೇಸುರಾ
ನಿನ್ನ ಕಾಣಾಕ ಬೇಕಾತು ಪರಮೇಸುರಾ

                      ..... ಜಾನಕಿರಾಮ (ಸೀತಾರಾಮ ಕಟ್ಟಿ)

No comments:

Post a Comment