Friday, July 19, 2024

Goddess of Food ಕಡಲಿ ಕಡಬು ಹುಣ್ಣಿಮೆ

                ಕಡಲ ಕೋಡಿ ಹುಣ್ಣಿಮೆ 

         ಕಾರ ಹುಣ್ಣಿಮೆಯೆಂದು ಮಳೆ ಬಂದು ಬೇಗೆ ಆರಿಸಿ, ಮಣ್ಣೆತ್ತಿನ ಅಮಾವಾಸ್ಯೆ ಮಣ್ಣಿನ ಮಕ್ಕಳ ಬೆನ್ನೆಲುಬಾದ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಇದೀಗ ಕಡ್ಲಿಗಡಬ ಹುಣ್ಣಿಮೆಯ ಮಾಸ ಅಳಿದುಳಿದ ಕಾಳು ಕಡಿಗಳನ್ನು ಸಿರಿ ಧಾನ್ಯಗಳನ್ನು ಸಂಗ್ರಹಿಸಿ ಹಿಟ್ಟಾಗಿಸಿ ರೊಟ್ಟಿ ಮಾಡಿ ತಿನ್ನುವ ಪದ್ಧತಿ ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತದೆ. ಆಷಾಢ ಮಾಸವೂ ಇರುವುದರಿಂದ ಮನೆಗೆ ಬಂದ ಹೆಣ್ಣುಮಗಳು ಈ ಕಾರ್ಯ ಮಾಡುತ್ತಾಳಂತೆ.

ಮಕ್ಕಳಿಗೆ ದೋಸೆ ನಿವಾಳಿಸಿ ಎಸೆಯುವ ಆಚರಣೆ..

ಈ ಹುಣ್ಣಿಮೆ ದಿನದಂದು ಕೆಲವು ಕಡೆಗಳಲ್ಲಿ ಮಾಡಿದ ಮೊದಲ ದೋಸೆಯನ್ನು ಮನೆಯಲ್ಲಿನ ಮಕ್ಕಳನ್ನು ಮುಂದೆ ಕೂರಿಸಿಕೊಂಡು, ಹಿರಿಯ ಮಗುವಿನ ಬೆನ್ನಿಗೆ ಬಡಿದು ದೋಸೆಯಿಂದ ನೆದರು ತೆಗೆದು, ಹಾಗೆ ನಿವಾಳಿಸಿದ ದೋಸೆಯನ್ನು ಮನೆಯ ಛತ್ತಿನ ಮೇಲೆ ಎಸೆಯಲಾಗುತ್ತದೆ. ಪರೋಕ್ಷವಾಗಿ ಪಕ್ಷಿ ಸಂಕುಲಕ್ಕೆ ಆಹಾರ ಒದಗಿಸುವ ಕಾರ್ಯವೂ ಇದಾಗಿರಬಹುದು. ಅದಾದ ಬಳಿಕವಷ್ಟೇ ಮನೆ ಮಂದಿಗೆ ದೋಸೆಯನ್ನು ಬಡಿಸಲಾಗುತ್ತದೆ. ಇದಕ್ಕೆ ಆಷಾಢ ದೋಸೆ ಎಂದೂ ಕರೆಯುತ್ತಾರೆ.

           ದಕ್ಷಿಣ ಕನ್ನಡ ಭಾಗದಲ್ಲಿ ತುಳು ಭಾಷಿಕರ ಸಂಖ್ಯೆ ಹೆಚ್ಚು. ಆ ಭಾಷೆಯಿಂದ ಕಡ್ಲಿಕಡಬ ಎಂಬ ಪದ ಬಂದಿದೆ ಎಂದೂ ಹೇಳಲಾಗುತ್ತಿದೆ. ಈ ಸಮಯದಲ್ಲಿ ಹೆಚ್ಚಿನ ಮಳೆಯಿಂದಲೇ ಆ ಭಾಗದ ಹಳ್ಳ, ಕೊಳ್ಳ, ನದಿಗಳು ತುಂಬಿ ಕೋಡಿ ಒಡೆಯುತ್ತವೆ. ಹಾಗೆ ಕೋಡಿ ಒಡೆದ ನೀರು ಈ ಆಷಾಢದಲ್ಲಿ ಕಡಲನ್ನು ಸೇರುತ್ತದೆ. ಇದಕ್ಕೆ "ಕೋಡಿ ಹುಣ್ಣಿಮೆ" ಮತ್ತು "ಕಡಲ ಕೋಡಿ ಹುಣ್ಣಿಮೆ" ಎಂದು ಜನರ ಬಾಯಲ್ಲಿ ನುಲಿದಿದೆ. ಕಾಲ ಕ್ರಮೇಣ ಅದು ಕಡ್ಲಿಗಡಬ ಎಂದಾಗಿದೆ ಎಂಬುದು ಜನಪದ ವ್ಯಾಖ್ಯಾನ. ಅನ್ನದೇವಿಯ ಆರಾಧನೆಯ ಹುಣ್ಣಿಮೆ ಎಂದೂ ಇದನ್ನು ಕರೆಯುವುದುಂಟು.

             ಈ ತಿಂಗಳಲ್ಲಿ ಮಳೆಯ ಅಬ್ಬರ ಹೆಚ್ಚು. ರೈತಾಪಿ ವರ್ಗಕ್ಕೆ ಹೊಲದಲ್ಲಿ ಬಿತ್ತಿದ ಫಸಲಿನ ಚಿಂತೆ ಒಂದೆಡೆಯಾದರೆ, ದನುಕರುಗಳಿಗೆ ಒಟ್ಟಿದ ಬಣವೆ ಬರಿದಾಗುವ ಮತ್ತು ಕಾಳು ಕಡಿ ಸಂಗ್ರಹಿಸಿದ ಹಗೆಯೂ ಖಾಲಿಯಾಗುವ ಕಾಲವಿದೆ. ಈ ತಿಂಗಳಲ್ಲಿ ಬರುವ ಹುಣ್ಣಿಮೆಯೇ ಕಡ್ಲಿಗಡಬ. ಈ ಕಡಲೆಗಡಬಿನ ಹೆಸರು ಹೇಗೆ ಬಂತೆಂಬುದಕ್ಕೆ ನಿಖರ ಕಾರಣಗಳಿಲ್ಲ. ಆದರೆ, ಕೆಲವು ಸಂಪ್ರದಾಯ ಮತ್ತು ಆಚರಣೆಗಳನ್ನು ಕಣ್ಣಾಡಿಸಿದರೆ, ಈ ಪದಕ್ಕೆ ಒಂದಷ್ಟು ಅರ್ಥಗಳು ದಕ್ಕುತ್ತವೆ.

                                                            ಸಂಗ್ರಹ 

No comments:

Post a Comment