ಡಿಂಬದಲ್ಲಿರುವ ಜೀವ ಕಂಬಸೂತ್ರ
ಎಂದಿಗಾದರೊಂದು ದಿನ ಸಾವು ತಪ್ಪದೂ…|
ಎಂದಿಗಾದರೊಂದು ದಿನ ಸಾವು ತಪ್ಪದು…
|| ಡಿಂಬದಲ್ಲಿರುವ ||
ಹುಟ್ಟುತೇನು ತರಲಿಲ್ಲ ಸಾಯುತೇನು ಒಯ್ಯಲಿಲ್ಲ|
ಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ|
ಹೊಟ್ಟೆ ಬಲುಕೆಟ್ಟದೆಂದು ಎಷ್ಟು ಕಷ್ಟ ಮಾಡಿದರು |
ಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು|
||ಡಿಂಬದಲ್ಲಿರುವ||
ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರ|
ಅರ್ಥಕ್ಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು|
ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆ|
ಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ|
||ಡಿಂಬದಲ್ಲಿರುವ||
ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲ|
ಅಣ್ಣತಮ್ಮ ತಾಯಿ ತಂದೆ ಬಯಸಲಾಗದು|
ಅನ್ನ ವಸ್ತ್ರ ಭೋಗಕ್ಕಾಗಿ ತನ್ನ ಸುಖವ ಕಾಣಲಿಲ್ಲ|
ಮಣ್ಣುಪಾಲು ಆದಮೇಲೆ ಯಾರಿಗಾಹುದೊ|
||ಡಿಂಬದಲ್ಲಿರುವ||
ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು|
ಚಳ್ಳಪಿಳ್ಳ ಗೊಂಬೆಯಂತೆ ಆಡಿ ಹೋದೆನೆ|
ಹಳ್ಳ ಹರಿದು ಹೋಗುವಾಗ ಗುಳ್ಳೆ ಒಂದು ಒಡೆಯುವಂತೆ|
ಗುಳ್ಳೆ ಪೊರೆಯಂತೆ ಕಾಣೊ ಸಂಸಾರದಾಟ|
||ಡಿಂಬದಲ್ಲಿರುವ||
ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯ|
ವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು|
ಕರ್ತೃ ಕಾಗಿನೆಲೆಯಾದಿ ಕೇಶವನ ಚರಣಕಮಲ|
ನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ |
||ಡಿಂಬದಲ್ಲಿರುವ||
ಕನಕದಾಸರು ( ಕಾಗಿನೆಲೆಯಾದಿ ಕೇಶವ )
No comments:
Post a Comment