Sunday, August 25, 2024

Indu Enage Govind ಇಂದು ಎನಗೆ ಗೋವಿಂದ

                          ಇಂದು ಎನಗೆ ಗೋವಿಂದ


ಶ್ರೀ ರಾಘವೇಂದ್ರ  ಸ್ವಾಮಿಗಳು ಉಡುಪಿ ಕೃಷ್ಣನನ್ನು ಕಂಡಾಗ ಸಂಪೂರ್ಣ ಶರಣಾಗತಿ ಹಾಗೂ ಭಕ್ತಿ ಭಾವದಿಂದ ರಚಿಸಿದ ಕೃತಿ  ..“ಇಂದು ಎನಗೆ ಗೋವಿಂದ|ನಿನ್ನಯ ಪಾದಾರವಿಂದವ ತೋರೋ ಮುಕುಂದನೆ...” ರಾಯರು ರಚಿಸಿದ ಏಕೈಕ ಕನ್ನಡ ಕೀರ್ತನೆ ಇದು ಎನ್ನಲಾಗಿದೆ. “ಧೀರ ವೇಣುಗೋಪಾಲ” ಎಂಬದು ಅವರ ಅಂಕಿತನಾಮ.


ಇಂದು ಎನಗೆ ಗೋವಿಂದ ನಿನ್ನಯ

ಪಾದಾರವಿಂದವ ತೋರೋ ಮುಕುಂದನೆ ||ಪ||

ಸುಂದರ ವದನನೆ ನಂದಗೋಪನ ಕಂದ

ಮಂದರೋದ್ಧಾರ ಆನಂದ ಇಂದಿರಾ ರಮಣ ||ಅಪ||


ನೊಂದೆನಯ್ಯ ಭವಬಂಧನದೊಳು ಸಿಲುಕಿ|

ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|

ಕಂದನಂತೆಂದೆನ್ನ ಕುಂದುಗಳೆಣಿಸದೆ

ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||


ಮೂಢತನದಿ ಬಹು ಹೇಡಿ ಜೀವ ನಾನಾಗಿ

ದೃಢಭಕುತಿಯನು ಮಾಡಲಿಲ್ಲವೊ ಹರಿಯೆ|

ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ|

ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ನಿನ್ನ ||೨||


ಧಾರುಣಿಯೊಳು ಭೂಭಾರಜೀವ ನಾನಾಗಿ

ದಾರಿತಪ್ಪಿ ನಡೆದೆ ಸೇರಿದೆ ಕುಜನರ|

ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ

ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|

No comments:

Post a Comment