Wednesday, October 16, 2024

Sudama's character  ಸುದಾಮ ಚರಿತೆ

                 ಸುದಾಮನ ಚರಿತೆ 


(ಸುದಾಮನ ಹಾಡು)
ಗೋಪಿ ಗೀತಂದಿಂದ.......
ಗುರುಭ್ಯೋ ನಮಃ 

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ |
ಸುತಗೆ ವಂದನೆಯ ಮಾಡಿದಳು ||
ಅತಿ ಭಕ್ತಿಯಿಂದಲಿ ಸ್ತುತಿಸುವ ಜನರಿಗೆ |
ಸದ್ಗತಿಯಾಗಲೆನುತ ಪೇಳಿದಳು || 1 ||
ಸುದಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |
ಹೊದಿಯಲಿಕ್ಕಿಲ್ಲ ಆಶನವಿಲ್ಲ ||
ಗಡಗಡ ನಡಗುತ ಮಧುರ ಮಾತಾಡುತ್ತಾ |
ಸದನದೊಳಿರುತಿದ್ದನಾಗ || 2 ||
ಪ್ರಾತ:ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |
ನಾಥನ ಧ್ಯಾನ ಮಾಡುತಲಿ ||
ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ |
ಗ್ರಾಸ ತರುವನು ಮುಷ್ಟಿ ತುಂಬ || 3 ||
ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು |
ಹಿತದಿಂದ ಪಾಕ ಮಾಡುವಳು ||
ಅತಿಭಕ್ತಿಯಿಂದಲಿ ಪತಿಗೆ ಭೋಜನ ಬಡಿಸಿ |
ಮತಿವಂತಿ ಉಳಿದಿದ್ದುಂಬುವಳು || 4 ||
ಹಸಿವೆ ತೃಷೆಗಳಿಂದ ಅತಿ ಕ್ಲೇಶವಾಗಿದ್ದು |
ಪತಿ ಕೊಡ ಮಾತನಾಡಿದಳು ||
ಗತಿಯೇನು ನಮಗಿನ್ನು ಹಿತದವರ್ಯಾರಿಲ್ಲೆ |
ಸದ್ಗತಿಯೇನೆನುತ ಪೇಳಿದಳು || 5 ||
ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ |
ಒಡನೆ ಆಡಿದ ಗೆಳಯರಿಲ್ಲೆ ||
ಕರೆದು ಕೊಡಿಸಿಕೊಂಡು ಬಿರುಸು ಮಾತ್ಹೇಳುವ |
ಹಿರಿಯರು ದಾರರಿಲ್ಲೆ ನಿಮಗ || 6 ||
ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ್ಹೇಳಿಲ್ಲೆ |
ಒತ್ತಮ ಗುರುಗಳಿಲ್ಲೇನು ||
ಹೊತ್ತುವೇಳಿಗಾಗೋ ಮಿತ್ರರು ಯಾರಿಲ್ಲೇ |
ಮತ್ತೆ ಕೇಳಿದಳು ಕ್ಲೇಶದಲಿ || 7 ||
ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |
ಹುಡಗನಾಗಿರಲಿಕ್ಕೆ ಹೋಗಿ ||
ಗುರುಕುಲ ವಾಸದಲಿ ಹಿ ನಾವು ಓದಿದ್ದು |
ಹರಿ ಹೊರ್ತು ಇನ್ನೊಬ್ಬರಿಲ್ಲ || 8 ||
ಇನ್ನಬ್ಬರೇತಕೆ ಅನ್ಯರ ಪೇಕ್ಷೇಕೆ |
ಮನ್ನಿಸಿ ಹೋಗಿ ಬರ್ರೆಂದಳು ||
ಇನ್ನೇನು ಕೊಡುತಿಹೆ ಹರಿ ಮುಂದೆ ಇಡಲಿಕ್ಕೆ |
ಚೆನ್ನಾಗಿ ಕೇಳಿದನಾಗ || 9 ||
ಗಾಬರಿಯಾದಾಳು ಸಾಗಿ ತಾ ನಡೆದಳು |
ಬೇಗ ತಂದಳು ಅವಲಕ್ಕಿ ||
 ಬಾಗಿ ವಸ್ತ್ರದೊಳು ಬೇಗ ಕಡ್ಡಿಕೊಟ್ಟು |
ಹೋಗಿ ಬರ್ರೆನುತ ಹೇಳಿದಳು || 10 ||
ಅಂಗಳವನ್ನು ಬಿಟ್ಟು ಮುಂದಕೆ ಬಂದನು |
ಮಂಗ ಹಾರಿ ಹೋದಿತೆಡಕೆ ||
 ಮಂಗಳವಾಗುವದು ರಂಗನ ದರುಶನ |
ಸಂದೇಹವಿಲ್ಲದಾಗುವದು || 11 ||
ಬಾಗಿಲವನ್ನು ಬಿಟ್ಟು ಸಾಗಿ ಮುಂದಕೆ ಬರಲು |
ಕಾಗಿ ಹಾರ್ಹೋದವು ಬಲಕೆ ||
ಆಗುವದು ನಮಗಿನ್ನು ಆಗುವದು ಶುಭಚಿನ್ನ |
 ಆಗುವದು ಹರಿಕೃಪೆಯಿಂದ || 12 ||
ಹೀಗೆಂದ ಬ್ರಾಹ್ಮಣ ಮುಂದಕೆ ನಡೆದನು |
ಕಂಡನು ಕಮಲಪುಷ್ಪಗಳ ||
ರಂಗನ ಹೆಂಡರಿಗೆ ಹೆರಳಿಗೆ ಬೇಕೆಂದು |
 ತೆಗೆದುಕೊಂಡನು ಕಮಲಪುಷ್ಪಗಳ || 13 ||
ಹರಿಉವ ಜಲವೆಲ್ಲಾ ಹರಿಯಭಷೇಕವೆಂದು |
ದ್ಹರುಷದಿಂದಲೆ ತುಂಬಿಕೊಂಡು ||
 ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ |
ಹರಿಹ್ಯಾಗೆ ದೊರಕುವನೆಂದಾ || 14 ||
ನಿಂತನು ಬ್ರಾಹ್ಮಣನಂತರೂಪದಿ ಧ್ಯಾನ |
ಅಂತರಂಗದಲ್ಲಿ ಮಾಡುತಲಿ ||
 ಸಂತೋಷದಿಂದಲಿ ಧರಸಿದ ದಶರೂಪ |
ದಿಂದ ಬಂದೆನ್ನ ಕಾಯೆಂದ || 15 ||
ಹರಕುವಸ್ತ್ರವನುಟ್ಟು ಹರಿಧ್ಯಾನ ಮಾಡುವ |
ವಿಪ್ರನ ಕಂಡು ಚಾರಕರು ||
ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ |
ತಿರುಗಿ ಹೋಗೆನುತ ಹೇಳಿದರು || || 16 ||
ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ |
ಇಂದಿರಾರಮಣಗ್ಹೇಳೆಂದ ||
ಹೆಸರು ಸುದಾಮನಂತೆ ಹಸಿದುಬಂದಾನೆಂದು |
ವಸುದೇವತನಯಗ್ಹೇಲಿದರು || || 17 ||
ಕೇಳಿದ ಹರಿಯೆದ್ದು ಬಹಳ ಹರುಷದಿಂದ |
ಬೇಗನೆ ಕರತನ್ನಿರವನ ||
ಹೋಗು ಹೋಗೆಂದರೆ ಸಾಗಿ ಮುಂದಕೆ ಬಂದು |
ಬಗಿಲಕೆ ಬಂದ ಸುದಾಮ || || 18 ||
ಭಕ್ತನ ನೋಡಿ ಆನಂದಿದೆದ್ದು |
ವಂದಿಸಿ ಆಸನವ ಹಾಕಿದರು ||
 ಚಂದದಿಂದಲಿ ಕರವ ಹಿಡಿದು ಮಾತನಾಡುತ್ತ |
ಬಂದ ಕಾರಣವ ಕೇಳಿದರು || || 19 ||
ಮಂದಗಮನೆ ಸಹಿತ ತಂದ ಉದಕದಿಂದ |
ಚಂದದಿಂದಲಿ ಪಾದ ತೊಳೆದ ಕೃಷ್ಣ ||
ಗಂಧಕೇಶರ ಹಚ್ಚಿ ಚಂದ ಚಾಮರದಿಂದ |
ಅಂದದಿ ಗಾಳಿ ಬೀಸಿದರು || || 20 ||
ಹಸಿದು ಬಂದ಻ರೆಂದು ಹಸಿವೆಗೆ ತಕ್ಕಂಥ |
ಹಸನಾದ ಹಣ್ಣು ಸಕ್ಕರೆಯು ||
ಕುಸುಮನಾಭನು ತಾನು ಪನ್ನೀರು ತಂದಿಡೆ ||
ಉಂಡು ಕ್ಯೆ ತೊಳೆದಾ ಸುಧಾಮ || || 21 ||
ಮಂದರಧರೆಗಿನ್ನು ಸುಂದರ ಸತಿಯರು |
ತಂದರು ತಬಕ ವೀಳೆಯನು ||
ಇಂದಿರೆರಮಣನು ಬಂದ ಸುದಾಮನು |
ಚಂದದಿ ಮೆಲೆದರು ವೀಳೆಯನು || || 22 ||
ಶ್ರಮ ಬಹಳವಾಗಿದೆ ವಿಶ್ರಮಿಸಿಕೊಳ್ಳಿರೆಂದು |
ಸೆಳಮಂಚ ತಂದು ಹಾಕಿದರು ||
ಶಾಲು ಸಕಲಾತಿಯ ಮೇಲಾದ ಹಾಸಿಗೆ |
ಮೇಲೆ ಮಲಗಿದನು ಸುದಾಮ || || 23 ||
ಅಂದಿನ ರಾತ್ರಿ ಯಲಿ ಮಂದಗಮನೆಯರ ಬಿಟ್ಟು |
ಬಂದು ಮಲಗಿದನು ಶ್ರೀ ಹರಿಯು ||
ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ್ತ |
ಆನಂದದಿ ಹರಿಯು ಸುದಾಮ || || 24 ||
ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು |
ಬಂದಿರಿ ಬಹುದಿನಕೆಂದ ||
ಹೆಂಡತಿ ಮಕ್ಕಳು ಇಹರೇನು ನಿಮಗೆಂದು |
ಇಂದಿರೆ ರಮಣ ಕೇಳಿದನು || || 25 ||
ಹೆಂಡತಿ ಕಳುಹಿದಳು ರಂಗನ ದರುಶನ |
ಕೊಂಡು ಬಾರೆನುತ ಪೇಳಿದಳು ||
ತಂದದ್ದು ಕೊಡಲಿಕ್ಕೆ ಸಂದೇಹವೇತಕ |
ತಂಡುಲ ಹಿಡಿದು ಜಗ್ಗಿದನು || || 26 ||
ಮುಷ್ಠಿ ತುಂಬವಲಕ್ಕಿ ಮುಕ್ಕಿದ ಹರಿ ಬೇಗ |
ನಕ್ಕರು ಸತಿಯರು ಎಲ್ಲಾ ||
ಇಷ್ಟೆ ಸಾಕು ಎಂದು ಗಟ್ಯಾಗಿ ಕ್ಯೆ ಹಿಡಿಯೆ |
ಕೊಟ್ಟನು ಭಕ್ತಗ್ಯೆಶ್ವರ್ಯ || || 27 ||
ಹದಿನಾರು ಸಾವಿರ ಚದುರೆಯರ ಕರೆಸಿದ |
ಕೊಡಿಸಿದರೆಲ್ಲರಿಗು ತಂಡುಲವ ||
ಉಳಿಸಿದ ಅವಲಕ್ಕಿ ಉಣಲಿಕ್ಕೆ ಮಾರ್ಗಕ್ಕೆ |
ಬೇಕೆಂದು ಬಿಗಿದು ಕಟ್ಟಿದರು || || 28 ||
ರನ್ನದ ಬಾಗಿಲಿಗೆ ಚಿನ್ನದ ಚೌಕಟ್ಟು |
ಹೊನ್ನ ಹೊಸ್ತಲವ ನಿರ್ಮಿಸಿದ ||
ರನ್ನಮಾಣಿಕ್ಯ ಬಿಗಿದ ತೊಲಿ ಕಂಬ ಗಿಳಿಬೋದು |
ಪನ್ನಗಶಯನ ನಿರ್ಮಿಸಿದ || || 29 ||
ಇರಿರಿ ನಾಲ್ಕು ದಿವಸ ತ್ವರೆ ಯಾಕೆ ಮಾಡುವಿರಿ |
ಇರಲಿಕ್ಕೆ ಬಾರದೆ ಅಂದ ||
ನೆರೆಹೊರೆಯಾರಿಲ್ಲ ತರುಣಿಯೊಬ್ಬಳಿಹಳು |
ಇರಲಿ ನಾ ಹೇಗೆ ಪೇಳೆಂದ || || 30 ||
ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ |
ಬಾಗಿಲಕೆ ಬಂದ ಸುದಾಮ ||
ಹೋಗಿರಿ ಹಿಂದಕೆ ಹೋಗಿಬರುತೇನಲು |
ಬಾಗಿ ಕ್ಯೆ ಮುಗಿದ ಶ್ರೀ ಹರಿಯು || || 31 ||
ಮುಂದೆ ಬಂದನು ಇಂದೇನು ಕೊಡಲಿಲ್ಲ |
ಹೆಂಡತಿಗೆ ಹೇಳಲೇನೆಂದಾ ||
ನಿಂತನು ಓಣಿಯಲಿ ಮಂದಿರ ಸಿಗಲಿಲ್ಲಾ ||
ಹೆಂಡತಿಯ ಕಂಡ ಸುದಾಮ || || 32 ||
ಮಂದಿರವನ್ನೆಲ್ಲಾ ಕಂಡನು ಐಶ್ವರ್ಯ |
ಚಂದದಿಂದಾಭರಣ ಕಂಡಾ ||
ಇಂದಿರಾಪತಿಯನ್ನು ಕಂಡು ಬಂದುದರಿಂದ |
ಬಂದಿತಿ ಸಕಲ ಸಂಪತ್ತು || || 33 ||
ರವಿವಾರ ಹಾಡಿದವರಿಗೆ ರಾಜಕಾರ್ಯವಾಗುವದು |
ಬಂಜೆಗೆ ಮಕ್ಕಳಾಗುವವು ||
ಬರಡೆಮ್ಮೆ ಕರೆಯೋದು ಬಡತನ ಹಿಂಗುವದು |
ಗುರುವಾರ ಹಾಡಿದವರಿಗೆ || || 34 ||
ಶ್ರೀನಿವಾಸನ ಧ್ಯಾನ ಮೌನದಿಂದಲಿ ಮಾಡಿ |
ನಾನಾ ಸಂಪತ್ತು ಪಡೆದರು ||
ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು |
ಶ್ರೀ ಹರಿ ಕೊಡು ದೇವಸಿರಿಯು || 35 ||
ಇದು ಭಾಗವತವೆನ್ನಿ ಇದು ಭಾಗವತವೆನ್ನಿ |
ಇದು ಭಾಗವತಕೆ ಕೀಲುಗಳು ||
ಇದಕೆ ಪ್ರಿಯನು ನಮ್ಮ ಪುರಂದರವಿಠಲ |
ಇದರಿಂದ ಮುಕ್ತಿ ಕೊಡುವನು ಸತ್ಯ || || 36 ||
|| ಗೋಪೀಗೀತಮ್ ನಿಂದ ಆಯ್ದುಕೊಂಡದ್ದು ||
ಇತಿ ಶ್ರೀ ಪುರಂದರ ದಾಸರಿಂದ ವಿರಚಿತವಾದ "ಸುದಾಮನ ಚರಿತೆ". ಮುಕ್ತಾಯವಾಯಿತು 
ಶ್ರೀ ಕೃಷ್ಣ ಅರ್ಪಣೆಯು

No comments:

Post a Comment