Wednesday, October 02, 2024

Sudama's character ಸುದಾಮನ ಚರಿತೆ ( ಹಾಡು )

                           ಸುದಾಮನ ಚರಿತೆ 


(ಸುದಾಮನ ಹಾಡು)

ಗೋಪಿ ಗೀತಂದಿಂದ.......

ಗುರುಭ್ಯೋ ನಮಃ 

ಪತಿಯ ಪಾದಕ್ಕೆರಗಿ ಮತಿ ಬೇಡಿ ಪಾರ್ವತಿ | 

ಸುತಗೆ ವಂದನೆಯ ಮಾಡಿದಳು ||

ಅತಿ ಭಕ್ತಿಯಿಂದಲಿ ಸ್ತುತಿಸುವ  ಜನರಿಗೆ |

ಸದ್ಗತಿಯಾಗಲೆನುತ ಪೇಳಿದಳು     || 1 ||                 

ಸುದಾಮನೆಂಬೋರ್ವ ಸೂಕ್ಷ್ಮದ ಬ್ರಾಹ್ಮಣ |

ಹೊದಿಯಲಿಕ್ಕಿಲ್ಲ  ಆಶನವಿಲ್ಲ ||

ಗಡಗಡ ನಡಗುತ  ಮಧುರ ಮಾತಾಡುತ್ತಾ |

ಸದನದೊಳಿರುತಿದ್ದನಾಗ     || 2 ||

ಪ್ರಾತ:ಕಾಲದಲ್ಲೆದ್ದು ನಿತ್ಯ ಕರ್ಮವ ಮುಗಿಸಿ |

ನಾಥನ ಧ್ಯಾನ ಮಾಡುತಲಿ ||

ಪಾತ್ರರ ಮನೆಗ್ಹೋಗಿ ಯಾಚನೆಗಳ ಮಾಡಿ |

ಗ್ರಾಸ ತರುವನು ಮುಷ್ಟಿ ತುಂಬ  || 3 ||

ಪತಿವೃತೆ ಹೆಂಡತಿ ಪತಿ ತಂದದ್ದೆ ಸಾಕೆಂದು |

ಹಿತದಿಂದ ಪಾಕ ಮಾಡುವಳು  ||

ಅತಿಭಕ್ತಿಯಿಂದಲಿ  ಪತಿಗೆ ಭೋಜನ  ಬಡಿಸಿ |

ಮತಿವಂತಿ ಉಳಿದಿದ್ದುಂಬುವಳು    || 4 ||

ಹಸಿವೆ ತೃಷೆಗಳಿಂದ   ಅತಿ ಕ್ಲೇಶವಾಗಿದ್ದು  |

ಪತಿ ಕೊಡ ಮಾತನಾಡಿದಳು  ||

ಗತಿಯೇನು ನಮಗಿನ್ನು  ಹಿತದವರ್ಯಾರಿಲ್ಲೆ |

ಸದ್ಗತಿಯೇನೆನುತ  ಪೇಳಿದಳು  || 5 ||

ಪೊಡವಿಯೊಳಗೆ ನಿಮ್ಮ ಒಡಹುಟ್ಟಿದವರಿಲ್ಲೆ |

ಒಡನೆ ಆಡಿದ ಗೆಳಯರಿಲ್ಲೆ ||

ಕರೆದು ಕೊಡಿಸಿಕೊಂಡು ಬಿರುಸು ಮಾತ್ಹೇಳುವ |

ಹಿರಿಯರು ದಾರರಿಲ್ಲೆ ನಿಮಗ    || 6 ||

ಚಿಕ್ಕಂದಿಲ್ಲೋದಿಲ್ಲೆ ಹೆತ್ತವರ್ಹೇಳಿಲ್ಲೆ |

ಒತ್ತಮ ಗುರುಗಳಿಲ್ಲೇನು ||

ಹೊತ್ತುವೇಳಿಗಾಗೋ ಮಿತ್ರರು  ಯಾರಿಲ್ಲೇ |

ಮತ್ತೆ ಕೇಳಿದಳು ಕ್ಲೇಶದಲಿ       || 7 ||

ಮಡದಿ ಮಾತನು ಕೇಳಿ ಮನದಲಿ ಯೋಚಿಸಿ |

ಹುಡಗನಾಗಿರಲಿಕ್ಕೆ ಹೋಗಿ ||

ಗುರುಕುಲ ವಾಸದಲಿ ಹರಿ ನಾವು ಓದಿದ್ದು |

ಹರಿ ಹೊರ್ತು  ಇನ್ನೊಬ್ಬರಿಲ್ಲ      || 8 ||

ಇನ್ನಬ್ಬರೇತಕೆ ಅನ್ಯರ ಪೇಕ್ಷೇಕೆ |

ಮನ್ನಿಸಿ  ಹೋಗಿ ಬರ್ರೆಂದಳು  ||

ಇನ್ನೇನು ಕೊಡುತಿಹೆ ಹರಿ ಮುಂದೆ ಇಡಲಿಕ್ಕೆ |

ಚೆನ್ನಾಗಿ ಕೇಳಿದನಾಗ      || 9 ||

ಗಾಬರಿಯಾದಾಳು ಸಾಗಿ ತಾ ನಡೆದಳು  |

ಬೇಗ ತಂದಳು  ಅವಲಕ್ಕಿ ||

 ಬಾಗಿ ವಸ್ತ್ರದೊಳು ಬೇಗ ಕಟ್ಟಿ ಕೊಟ್ಟು |

ಹೋಗಿ ಬರ್ರೆನುತ ಹೇಳಿದಳು || 10 ||

ಅಂಗಳವನ್ನು ಬಿಟ್ಟು ಮುಂದಕೆ ಬಂದನು |

ಮಂಗ ಹಾರಿ ಹೋದಿತೆಡಕೆ ||

 ಮಂಗಳವಾಗುವದು  ರಂಗನ ದರುಶನ |

ಸಂದೇಹವಿಲ್ಲದಾಗುವದು    || 11 ||

ಬಾಗಿಲವನ್ನು ಬಿಟ್ಟು  ಸಾಗಿ ಮುಂದಕೆ ಬರಲು |

ಕಾಗಿ ಹಾರ್ಹೋದವು ಬಲಕೆ ||

ಆಗುವದು ನಮಗಿನ್ನು ಆಗುವದು ಶುಭಚಿನ್ನ |

ಆಗುವದು ಹರಿಕೃಪೆಯಿಂದ    || 12 ||

ಹೀಗೆಂದ ಬ್ರಾಹ್ಮಣ  ಮುಂದಕೆ ನಡೆದನು  |

ಕಂಡನು  ಕಮಲಪುಷ್ಪಗಳ  ||

ರಂಗನ  ಹೆಂಡರಿಗೆ  ಹೆರಳಿಗೆ ಬೇಕೆಂದು  |

ತೆಗೆದುಕೊಂಡನು ಕಮಲಪುಷ್ಪಗಳ   || 13 ||

ಹರಿಉವ ಜಲವೆಲ್ಲಾ ಹರಿಯಭಷೇಕವೆಂದು |

ಹರುಷದಿಂದಲೆ ತುಂಬಿಕೊಂಡು  ||

ಕರದಲ್ಲಿ ಹಿಡಕೊಂಡು ಪುರದ ಬಾಗಿಲ ಮುಂದೆ |

ಹರಿಹ್ಯಾಗೆ ದೊರಕುವನೆಂದಾ    || 14 ||

ನಿಂತನು ಬ್ರಾಹ್ಮಣನಂತರೂಪದಿ ಧ್ಯಾನ  |

ಅಂತರಂಗದಲ್ಲಿ ಮಾಡುತಲಿ ||

ಸಂತೋಷದಿಂದಲಿ ಧರಸಿದ ದಶರೂಪ |

ದಿಂದ ಬಂದೆನ್ನ ಕಾಯೆಂದ      || 15 ||

ಹರಕುವಸ್ತ್ರವನುಟ್ಟು ಹರಿಧ್ಯಾನ ಮಾಡುವ |

ವಿಪ್ರನ ಕಂಡು ಚಾರಕರು  ||

ಬರಬೇಡಿರೊಳಗೆ ಹಿರಿಯರಪ್ಪಣೆಯಿಲ್ಲ |

ತಿರುಗಿ ಹೋಗೆನುತ ಹೇಳಿದರು   || 16 ||

ಅಂದ ಮಾತನು ಕೇಳಿ ಅಂಜಿದ ಬ್ರಾಹ್ಮಣ  |

ಇಂದಿರಾರಮಣಗ್ಹೇಳೆಂದ ||

ಹೆಸರು ಸುದಾಮನಂತೆ ಹಸಿದುಬಂದಾನೆಂದು |

ವಸುದೇವತನಯಗ್ಹೇಲಿದರು  || 17 ||

ಕೇಳಿದ ಹರಿಯೆದ್ದು ಬಹಳ ಹರುಷದಿಂದ |

ಬೇಗನೆ ಕರತನ್ನಿರವನ ||

ಹೋಗು ಹೋಗೆಂದರೆ ಸಾಗಿ ಮುಂದಕೆ ಬಂದು |

ಬಗಿಲಕೆ ಬಂದ ಸುದಾಮ    || 18 ||

ಭಕ್ತನ ನೋಡಿ ಆನಂದಿದೆದ್ದು  |

ವಂದಿಸಿ ಆಸನವ ಹಾಕಿದರು  ||

ಚಂದದಿಂದಲಿ  ಕರವ ಹಿಡಿದು ಮಾತನಾಡುತ್ತ |

ಬಂದ ಕಾರಣವ ಕೇಳಿದರು  ||  19 ||

ಮಂದಗಮನೆ ಸಹಿತ ತಂದ ಉದಕದಿಂದ |

ಚಂದದಿಂದಲಿ  ಪಾದ ತೊಳೆದ ಕೃಷ್ಣ ||

ಗಂಧಕೇಶರ ಹಚ್ಚಿ  ಚಂದ ಚಾಮರದಿಂದ  |

ಅಂದದಿ ಗಾಳಿ ಬೀಸಿದರು    || 20 ||

ಹಸಿದು ಬಂದ಻ರೆಂದು ಹಸಿವೆಗೆ ತಕ್ಕಂಥ |

ಹಸನಾದ ಹಣ್ಣು ಸಕ್ಕರೆಯು ||

ಕುಸುಮನಾಭನು ತಾನು ಪನ್ನೀರು ತಂದಿಡೆ ||

ಉಂಡು ಕ್ಯೆ ತೊಳೆದಾ ಸುಧಾಮ   || 21 ||

ಮಂದರಧರೆಗಿನ್ನು ಸುಂದರ ಸತಿಯರು |

ತಂದರು ತಬಕ ವೀಳೆಯನು ||

ಇಂದಿರೆರಮಣನು  ಬಂದ ಸುದಾಮನು |

ಚಂದದಿ  ಮೆಲೆದರು ವೀಳೆಯನು || 22 ||

ಶ್ರಮ ಬಹಳವಾಗಿದೆ ವಿಶ್ರಮಿಸಿಕೊಳ್ಳಿರೆಂದು |

ಸೆಳಮಂಚ ತಂದು ಹಾಕಿದರು ||

ಶಾಲು ಸಕಲಾತಿಯ ಮೇಲಾದ ಹಾಸಿಗೆ |

ಮೇಲೆ  ಮಲಗಿದನು ಸುದಾಮ  || 23 ||

ಅಂದಿನ ರಾತ್ರಿಯಲಿ ಮಂದಗಮನೆಯರ  ಬಿಟ್ಟು |

ಬಂದು ಮಲಗಿದನು  ಶ್ರೀ ಹರಿಯು ||

ಹಿಂದಿನ ವೃತ್ತಾಂತ ಒಂದೊಂದು ಸ್ಮರಿಸುತ್ತ  |

ಆನಂದದಿ ಹರಿಯು ಸುದಾಮ  || 24 ||

ಅಂದಿನ ಸ್ನೇಹವು ಇಂದೇಕೆ ನೆನಪಾಯ್ತು  |

ಬಂದಿರಿ ಬಹುದಿನಕೆಂದ ||

ಹೆಂಡತಿ ಮಕ್ಕಳು ಇಹರೇನು ನಿಮಗೆಂದು  |

ಇಂದಿರೆ ರಮಣ ಕೇಳಿದನು   || 25 ||

ಹೆಂಡತಿ ಕಳುಹಿದಳು ರಂಗನ ದರುಶನ |

ಕೊಂಡು  ಬಾರೆನುತ  ಪೇಳಿದಳು ||

ತಂದದ್ದು ಕೊಡಲಿಕ್ಕೆ ಸಂದೇಹವೇತಕ |

ತಂಡುಲ ಹಿಡಿದು ಜಗ್ಗಿದನು   || 26 ||

ಮುಷ್ಠಿ ತುಂಬವಲಕ್ಕಿ ಮುಕ್ಕಿದ  ಹರಿ ಬೇಗ  |

ನಕ್ಕರು ಸತಿಯರು ಎಲ್ಲಾ ||

ಇಷ್ಟೆ ಸಾಕು ಎಂದು ಗಟ್ಯಾಗಿ ಕ್ಯೆ  ಹಿಡಿಯೆ  |

ಕೊಟ್ಟನು ಭಕ್ತಗ್ಯೆಶ್ವರ್ಯ   || 27 ||

ಹದಿನಾರು  ಸಾವಿರ ಚದುರೆಯರ  ಕರೆಸಿದ  |

ಕೊಡಿಸಿದರೆಲ್ಲರಿಗು ತಂಡುಲವ ||

ಉಳಿಸಿದ  ಅವಲಕ್ಕಿ ಉಣಲಿಕ್ಕೆ  ಮಾರ್ಗಕ್ಕೆ |

ಬೇಕೆಂದು  ಬಿಗಿದು  ಕಟ್ಟಿದರು  || 28 ||

ರನ್ನದ ಬಾಗಿಲಿಗೆ ಚಿನ್ನದ  ಚೌಕಟ್ಟು |

ಹೊನ್ನ ಹೊಸ್ತಲವ ನಿರ್ಮಿಸಿದ ||

ರನ್ನಮಾಣಿಕ್ಯ ಬಿಗಿದ ತೊಲಿ  ಕಂಬ ಗಿಳಿಬೋದು |

ಪನ್ನಗಶಯನ ನಿರ್ಮಿಸಿದ     || 29 ||

ಇರಿರಿ ನಾಲ್ಕು ದಿವಸ ತ್ವರೆ ಯಾಕೆ  ಮಾಡುವಿರಿ |

ಇರಲಿಕ್ಕೆ ಬಾರದೆ ಅಂದ ||

ನೆರೆಹೊರೆಯಾರಿಲ್ಲ  ತರುಣಿಯೊಬ್ಬಳಿಹಳು |

ಇರಲಿ ನಾ ಹೇಗೆ  ಪೇಳೆಂದ   || 30 ||

ಪಾದಕೆ ಎರಗಿ ತಾ ಸಾಗಿ ಮುಂದಕೆ ಬಂದ |

ಬಾಗಿಲಕೆ ಬಂದ  ಸುದಾಮ ||

ಹೋಗಿರಿ ಹಿಂದಕೆ  ಹೋಗಿಬರುತೇನೆನಲು |

ಬಾಗಿ ಕ್ಯೆ ಮುಗಿದ  ಶ್ರೀ ಹರಿಯು.   || 31 ||

ಮುಂದೆ ಬಂದನು  ಇಂದೇನು ಕೊಡಲಿಲ್ಲ |

ಹೆಂಡತಿಗೆ  ಹೇಳಲೇನೆಂದಾ ||

ನಿಂತನು ಓಣಿಯಲಿ ಮಂದಿರ ಸಿಗಲಿಲ್ಲಾ ||

ಹೆಂಡತಿಯ ಕಂಡ ಸುದಾಮ   || 32 ||

ಮಂದಿರವನ್ನೆಲ್ಲಾ ಕಂಡನು  ಐಶ್ವರ್ಯ  | 

ಚಂದದಿಂದಾಭರಣ ಕಂಡಾ ||

ಇಂದಿರಾಪತಿಯನ್ನು ಕಂಡು  ಬಂದುದರಿಂದ |

ಬಂದಿತಿ ಸಕಲ ಸಂಪತ್ತು.     || 33 ||

ರವಿವಾರ ಹಾಡಿದರೇ  ರಾಜಕಾರ್ಯವಾಗುವದು  |

ಬಂಜೆಗೆ ಮಕ್ಕಳಾಗುವವು ||

ಬರಡೆಮ್ಮೆ  ಕರೆಯೋದು ಬಡತನ ಹಿಂಗುವದು |

ಗುರುವಾರ ಹಾಡಿದವರಿಗೆ        || 34 ||

ಶ್ರೀನಿವಾಸನ  ಧ್ಯಾನ ಮೌನದಿಂದಲಿ  ಮಾಡಿ  |

ನಾನಾ ಸಂಪತ್ತು ಪಡೆದರು ||

ಅದರ ವಿಷಯ ತಿಳಿದು ಗತಿ ಮೋಕ್ಷ ಇರಲೆಂದು |

ಶ್ರೀ ಹರಿ ಕೊಡು ದೇವಸಿರಿಯು       || 35 ||

ಇದು ಭಾಗವತವೆನ್ನಿ ಇದು ಭಾಗವತವೆನ್ನಿ |

ಇದು ಭಾಗವತಕೆ ಕೀಲುಗಳು ||

ಇದಕೆ ಪ್ರಿಯನು ನಮ್ಮ  ಪುರಂದರವಿಠ್ಠಲ |

ಇದರಿಂದ ಮುಕ್ತಿ ಕೊಡುವನು ಸತ್ಯ   || 36 ||

||  ಗೋಪೀಗೀತಮ್ ನಿಂದ ಆಯ್ದುಕೊಂಡದ್ದು ||

ಇತಿ ಶ್ರೀ ಪುರಂದರ ದಾಸರಿಂದ ವಿರಚಿತವಾದ  "ಸುದಾಮನ ಚರಿತೆ". ಮುಕ್ತಾಯವಾಯಿತು 

ಶ್ರೀ ಕೃಷ್ಣ ಅರ್ಪಣೆಯು

     ಜಯ ಜಯ ಪಾಂಡುರಂಗ ಜಾನಕಿ ಮೋಹನಾಂಗ


 

 


No comments:

Post a Comment