|| श्री शनैश्चर चरितम् ||
SHANAISHCHARA CHARITAM IV( 01- 112)
|| श्री शनैश्चर देवताभ्यो नमः ||
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ, ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್, ಶ್ರೀ ಮಹರ್ಷಿ ವೇದವ್ಯಾಸ ವಿರಚಿತ ಶ್ರೀ ಶನೈಶ್ಚರ ಚಕ್ರ ಸಹಿತ )
ಚತುರ್ಥ ಸವಿಗಥಾ ಸಂಧಿ ೪
( ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ )
ಪ್ರಥಮ ವಂದಿಪ ಸಿದ್ಧಿ ಶ್ರೀ ವರ
ಮತಿಯ ಕೊಡು ವಿವರಣೆಯ ಮಾಡಲು
ಸತಿಕುವರ ವಿಘ್ನಬರತೆರ ನೋಡಿಕೊಳ್ಳುವುದು ೧
ಬ್ರಹ್ಮನರಸಿಯೆ ಶ್ವೇತ ಕಮಲದಿ
ಬ್ರಹ್ಮ ವಿದ್ಯೆಯ ನೀಡು ಸಕಲವ
ಬ್ರಹ್ಮಾಣಿ ನಿನ್ನೊಲುಮೆ ಇರಲಿ ಗ್ರಂಥಕನುವಾಗಿ. ೨
ಸಿರಿಗುರುವೆ ಹರಿ ಬ್ರಹ್ಮ ಶಂಕರ
ನೇರ ಬುದ್ಧಿಗೆ ಮಂದ ಗ್ರಹಗತಿ
ಸಾರ ಸಂಗ್ರಹ ಸೌರಿ ಮಹತಿಯ ಕೊಡಲು ಪ್ರೇರಣೆಯ ೩
ಮೂರನೆಯ ಸವಿಗತೆಯ ಭಾಗದಿ
ವೀರ ವಿಕ್ರಮ ಹಯದ ಮೇಲ್ಗಡೆ
ಮೇರುಮಂಡಲಮೇಲೆ ಹಯವು ಹಾರಿ ಅಬಲಕವು ೪
ಹೊರಳಿಸಲು ಹೊಡೆ ಹೊಡೆಯೆ ತುರಗವು
ತಿರುಗದೆಯೆ ವೈರುಧ್ಯ ದೇರಲು
ಹರೆಯ ಬಲ ಉಡುಗಿ ಅರಸನ ಭ್ರಾಂತಿ ಹೆಚ್ಚಾಗಿ ೫
ಕ್ರಮಿಸುತಿರೆ ಆಲಂಬ ಮಾರ್ಗವ
ಭ್ರಮಿಸುತಿರೆ ಕಾಂತಾರ ಗಿಡಮರ
ಶ್ರಮಿಸಿ ಕೆಳಗಡೆ ನೋಡಲು ನದಿದಂಡೆ ಕಂಡಿತದು ೬
ಎಲ್ಲಿಯೋ ಕೆಳಗಿಳೆ ಎಲ್ಯೋ ನದಿಯೊಂದು
ಎಲ್ಲ ಗಿಡಮರ ತುರಗ ಸಹ ಪರಿ
ಇಲ್ಲದಾಗಿದೆ ಓರ್ವನೆಯೆ ಬಿದ್ದಿಹನು ಪಾಳ್ನೆಲದಿ. ೭
ಅಸ್ತನಾದನು ಸೂರ್ಯದೇವನು
ವಸ್ತವಾಯಿತು ವ್ಯಗ್ರ ಚಿತ್ತವು
ಕತ್ತಲಾಯಿತು ನಾಲ್ಕು ದಿಶೆಯೊಳು ಕಾಣದಿರೆ ಇಳೆಯು ೮
ಇಳಿದ ಸ್ಥಳದಲೆ ಉಳಿದು ಇರುಳನು
ಕಳೆದ ಮರುದಿನ ಬೆಳಗಿನೊಳು ತಾಂ-
ಬಳಿಯ ಪುರ ದಾರಿಯನು ಒಂದನು ಪಿಡಿದು ಮುನ್ನಡೆದ ೯
ಗಾವುದವು ನಾಲ್ಕಾರು ದಾಟಲು
ಆವುದೋ ಪಟ್ಟಣವು ಕಂಡೊಡೆ
ಧಾವಿಸಿದ ಪುರ ತಾಮಿಳಿಂದಾ ನಗರ ಮುಂಸಾರಿ ೧೦
ಈ ಕಡೆಗೆ ಉಜ್ಜಯಿನಿ ನಗರದಿ
ಸಾಕು ಸಾಕೆನು ತನಕ ದಾರಿಯು
ಏಕ ಚಿತ್ತದಿ ಚಿಂತೆಯಿಂದದಿ ಮಂತ್ರಿ ಮುಂತಾಗಿ ೧೧
ಅರಸನನು ನೀವ್ ಹುಡುಕಿ ತನ್ನಿರಿ
ತುರಗ ವನ್ನೀಯುವುದು ಬೇಗನೆ
ಪರಪೂರಕೆ ವಾಣಿಜ್ಯ ಕಾರ್ಯಕೆ ಹೋಗಬೇಕೆಂದ ೧೨ ಶೋಧಿಸಲು ಕಳಿಸಿರಲು ದೂತರು
ಹೋದವರು ಪುರ ಪರಿಘದೊಳು ನಾ-
ಲ್ಪಾದಿಯೊಳು ನಾಲ್ಕಾರು ಹರದಾರಿಯನು ತಿರುಗಿದರು ೧೩ ಕಾರವಾನನು ಅರಸ ಹೋದಡೆ
ಆರು ಜಾವವು ಕಳೆದು ಮಂತ್ರಿಗೆ
ನೇರ ನಮ್ಮಯ ಕುದುರೆ ಇಲ್ಲವೇ ಬೆಲೆಯಬೇಕೆಂದ. ೧೪ ದೊರೆಯ ನರಸಿದರೆಷ್ಟು ಪರಿಯಿಂ
ದೊರೆಯದೆಯೆ ದೂತರುಗಳು ಬಂ-
ದೊರೆಯುತಿರೆ ದುಃಖಗಳು ನಗರವು ಮುಳುಗುತಿರುವಾಗ ೧೫
ಮಂತ್ರಿಯನು ಶನಿ ಬೆನ್ನು ಹತ್ತಿದ
ಚಿಂತೆಯಿಂದಲೇ ಹಣವು ಕೊಟ್ಟನು
ಇಂತು ಹೋಗುವೆನೆಂದು ನಡೆ ಹಯವಾನ ಶನಿದೇವ ೧೬
ಇತ್ತ ಕಡೆ ವಿಕ್ರಮನು ನಡೆಯುತ
ಪತ್ತನವು ಬರೆ ತಾಮಿಳಿಂದವು
ಸುತ್ತ ನೋಡುತೆ ಹೊಕ್ಕು ಪಗಡೆಯ ಸಂತೆಪೇಟೆಯಲಿ ೧೭
ದಣಿವು ಆರಿಸಿಕೊಳ್ವ ನೆಪದಿಂ
ವಣಿಜನೊಬ್ಬನ ಅಂಗಡಿಯ ಬದಿ
ಕೊನೆಯ ಕಟ್ಟೆಯ ಮೇಲೆ ಕೂಡ್ರಲು ಲಾಭ ವಣಿಜನಿಗೆ ೧೮
ಮಾರಾಟ ನಡೆದಿಹುದು ದ್ವಿಗುಣಿತ
ಯಾರೇ ಕಾಲ್ಗುಣವೆಂದು ನಿರುಕಿಸೆ
ದಾರಿಕಾರನು ಕಟ್ಟೆ ಮೇಲ್ಗಡೆ ಕಂಡ ಕುಳಿತುದುದ ೧೯
ಮುಚ್ಚಂಜೆಯೊಳ್ ಮುಚ್ಚಲಂಗಡಿ
ಉಚ್ಚ ವರ್ಣಿಯು ಹಿರಿ ಅನಾಮಿಕ
ನೆಚ್ಚಿ ಕರೆದನು ಮನೆ ಎಡೆಗೆ ವ್ಯಾಪಾರಿ ರಾಜನಿಗೆ ೨೦
ಆದರತೆ ತೋರುತಲೆ ಕರೆದೋ-
ಯ್ದಾದರಸಕುಲ ಗೋತ್ರಪುರಂ ಮುಂ -
ತಾದ ಸ್ಥಿತಿ ಗತಿ ವೈಶ್ಯ ಕೇಳಲು ರಾಜ ಅರುಹಿದನು ೨೧
ದೂರ ದೇಶದ ದಾರಿಕಾರನು
ವೀರ ಕುಲ ಕ್ಷತ್ರಿಯ ನಾನು
ಆರು ಬಲ್ಲರು ಹೇಳಲಸಗಳ ಕರ್ಮ ಗಹನತೆಯ ೨೨
ಅತಿಥಿ ಮನ ಇಂಗಿತವು ತಿಳಿದೊಡೆ
ಅತಿಯ ಮಾತುಗಳಾಡೆ ದೈನಿಕ
ಕೃತಿಯು ಗೈಯ್ಯಲು ಸ್ನಾನ ಸಮ್ಮಾರ್ಜನೆಯ ಮಾಡಿಸಿದ ೨೩
ಸಂಧ್ಯವಂದನೆ ಪಾಠ ಪೂಜೆ ಗ-
ಳೆಂದು ರಾಜನು ಗಯ್ಯಲನು ವಂ-
ಸಂಧಿಸಿರೆ ಪಕ್ವಾನ್ನ ಷಡ್ರಸ ಯುಕ್ತ ಮಾಡಿಸಿದ ೨೪
ಶಂಕಿಸದೆ ಭೋಜನವು ಮಾಡಲು
ಅಂಕೆಯಿಂ ವಿನುತಿಸಲು ವೈಶ್ಯನು
ಮಂಕ ಕಳೆದಂತಾಗಿ ತೃಪ್ತಿಯ ಪಟ್ಟ ಪಟ್ಟರಸ ೨೫
ವಣಿಗೆ ಸುತೆಯsಲೋಲಿಕೆಯು ಎಂ-
ಗಣಿಸಲಸದಳಚೆಲುವೆ ರಂಭೆಯು
ಪಣವನಿಟ್ಟಿಹಳೊಂದು ಮನದನ್ನನನು ವರಿಸುವುದು ೨೬
ವರಗಳೆಷ್ಟೋ ವನಣಿಕ ತಂದಿರೆ
ವರಿಸದೆಯೆ ಧಿಕ್ಕರಿಸುತಿರ್ದ್ದಳು
ಸರಿ ಎನಿಪ ವರನೆನೆಸಿ ಮಗಳಿಗೆ ತಿಳಿಸಿ ಹೇಳಿದನು ೨೭
ಒಳ್ಳೆ ಸುಂದರ ಗುಣ ವಿಭೂಷಣ
ಉಳ್ಳವರ ತಂದಿಹೆನು ಮಗಳೇ
ಗುಳ್ಳು ಕಟ್ಟಲು ಯೋಗ್ಯನೆಂದನು ವಣಿಕ ಪ್ರೇಮದಲಿ ೨೮
ವೇಷ ಭೂಷಣ ಮಾತುಕಥೆಗಳ
ನ್ವೇಷಿಸುವೆ ಚತುರತೆಯ ಗುಣಗಳ
ವಾಸಿ ಬರದಿರೆ ವರಿಸಲಾರೆನು ಎಂದಳಾ ಲೋಲಿ ೨೯
ಹೇಳುವಿಕೆಯೇ ಬಹಳವಾಯಿತು
ಕಳುಹಿ ಕೊಡಿ ಪಾಂಥಿಕನ ಎಂದಳು
ಬಳಿಕ ಚಿತ್ರದ ಶಾಲೆಯನು ಸಿಂಗರಿಸಿ ಶೈಯ್ಯವನು ೩೦
ಶ್ರಮವೂ ಕಳೆಯಲು ನಿದ್ರೆ ಮಾಡುವ
ತಮಗೆ ಸ್ಥಳವಿದೆ ಇದೆ ಎಂದು ವೈಶ್ಯ ವಿ-
ಕ್ರಮಗೆ ಪೇಳಲು ಎದ್ದು ಹೋದನು ಚಿತ್ರ ಶಾಲೆಯೆಡೆ ೩೧
ನವಿಲು ಕೋಗಿಲೆ ಹಂಸ ಹರಿಣ ಗ
ಳವತರಿಸಿ ತರತರದ ಕಲೆಯವ
ಅವತೆ ಬೇಸರವೆಲ್ಲಿ ಮಾಡದೆ ತೆಗೆದ ಜೀವ ಕಳೆ ೩೨
ಎದುರು ಮಂಚಿಕೆ ರನ್ನ ಕೆಚ್ಚಿದ
ಮಿದುವು ಅದು ಸುಪ್ಪತ್ತಿ ರೇಶಿಮೆ
ಹೊದ್ದು ಮುದ್ದಾಗಿರಿಸಿದುದು ತಾಕಂಡ ಅವನೀಶ ೩೩
ಮುತ್ತು ಮಣಿಗಳ ನೇತು ಝುಂಬರ
ಬಿತ್ತರಿಪ ಬೆಳ್ ಛಾಯೆ ಎಲ್ಲೆಡೆ
ಕೇತಕೀ ಕರವೀರ ಪಾಟಲಿ ಪಾರಿಜಾತಗಳಿಂ. ೩೪
ನಾಲ್ಕು ಮೂಲೆಯ ಮೇಲೆ ಸಮಯ ಗ
ಉಲ್ಕೆ ಪರಿ ಬೆಳಗುತಿರೆ ಝಗಝಗ
ಅಳ್ಕರತೆಯಾರ ಧನ ಸಿರಿ ನೋಡಿದನು ವಿಕ್ರಮನು. ೩೫
ಯಾವ ದೇಶವೋ ಯಾವ ಕೋಶವೋ
ಆವಸ್ಥಳದಲಿ ಬಂದು ನಿಂದೆನೋ
ಭಾವ ತಿಳಿಯದೆ ಕರ್ಮಗತಿಯದು ಬಿಡದುಎಂದನವ ೩೬
ಭೋಗಿಸದೆ ಬಿಡದೀ ಪುರಾಕೃತ
ಆಗು ಹೋಗುಗಳೆಲ್ಲ ಆಗಲಿ
ರಾಗ ತಿಪ್ಪಲ ದೇವ ಮಾಡಿದ ಛಾಯೆ ಛಾಯೆ ಇದು ೩೭
ತಿಳಿದುರಾಯನು ನಿದ್ರೆ ಮಾಡುವ
ಮಲಗಿದನು ಮೇಲ್ವಾಸು ಎಳೆ ಕೊಂ
ಡಲುಗದೆಯೆ ಒಳಎಚ್ಚರದಿ ಚಿಂತೆಯೊಳಿರುತಿರಲು ೩೮
ಮಾಡುತಿರೆ ವಿಚಾರ ಅಲೆಗಳು
ತೀಡುತಿಹ ಎಷ್ಟೆಷ್ಟೋ ಬಗೆಯಿಂ
ಜಾಡಮಾಲೆಯ ಬಲೆಯ ಕೀಟಕ ನಂತೆ ತಳಮಳಿಸಿ ೩೯
ಮಂಚ ಮನೆಯೆಡೆ ಬರುತಲೋಲಿಕೆ
ಪಂಚದಾರತಿ ಎತ್ತಿ ಕೈಯೊಳು
ಈಂಚರವ ಮಾಡುತಲೇ ಸೆರಗಿನ ಬದಿಯ ಸರಿಸುತಲೆ ೪೦
ಶೃಂಗಾರ ರಸಭರಿತ ವೇಷವು
ಅಂಗ ಕಾಂತಿಯ ಬೆಳಕು ಬಿದ್ದಂ
ದಂಗುಗೊಳಿಸುವ ರತ್ನ ಮುತ್ತಿನ ಸಪ್ತ ರಂಗದಲೀ ೪೧
ಕೊರಳ ಸರ ಹಣೆಗಂಧ ಕಸ್ತೂರಿ
ಕರ್ಪೂರದ ಕೇಸರಿಯು ಅರಗಜ
ಪರಿಮಳವು ಪರಿ ಪ್ರವಹಿಸುವತೆರ ಕುಣಿಸೆ ಮನವನ್ನು ೪೨
ಕಿಂಕಿಣಿ ಪ ಕಾಲ್ಗೆಜ್ಜೆ ನಾದವು
ಕಂಕಣದ ಕೈ ಬಾಳೆ ಸುಳಿ ತೊಡೆ
ಟೊಂಕು ಕೇಸರಿ ಹರಿಣ ನಯನಗಳಿಂದ ಕೂಡಿರುವ ೪೩
ಲಕ್ಷಣವ ಮೂವತ್ತು ಎರಡಲಿ
ಸೂಕ್ಷ್ಮ ಗೊಂಬೆಯ ತೆರ ಅಲೌಲಿಕೆ
ಲಕ್ಷವಿಟ್ಟಳು ದಂಭನಿದ್ರೆಯ ಅರಸರಸವೆನಿಸೀ. ೪೪
ಎಚ್ಚರಿಸುವ ಕುರಿತು ಚಂದನ
ಪಿಚ್ಚಳಿಕೆ ಸಿಂಚನವ ಗೈಯ್ಯುತೆ
ಬಿಚ್ಚು ಮಾತನು ಆಡ ಬಯಸಿರೆ ದಾರಿ ತೋರದಿರೆ ೪೫
ಜಾಳಿಗೆಯು ಬೀಳದಿರೆ ಮೋಹದ
ಕಾಲ ಉಳಿಯಿತು ಜಾವ ಮೊದಲಿನ
ಏಳದಿರೆ ಬೇಸರಿಸಿ ಕೋಮಲೆ ಮಲಗಲುಣಿಯಾಗಿ ೪೬
ಮುತ್ತು ಮಾಲೆಯು ತೆಗೆದು ಗೂಟಕೆ
ನೇತು ಹಾಕಿಡೆ ನಿದ್ರೆ ಬರ ಸು-
ಜಾತೆ ಗೊರಕೆಯನಿಡುತ ನಿಶ್ಚಿಂತೆಯೊಳು ಒರಗಿಹಳು ೪೭
ನಿದ್ರೆ ತಳೆ ಕಾಮಿನಿಗೆ ನೃಪತಿಯು
ಹೊದ್ದಿಕೆಯ ಸರಿಸುತಲೆ ಮನದೊಳು
ಬದ್ಧನಾದೆನು ಸಾತ್ವಿಕತೆ ಉಪಕಾರಿ ಎಂಬುದಕೆ. ೪೮
ಎನ್ನ ಮನವಿದು ಪಾಪಕಂಜುವ
ಕನ್ಯೆ ಎನ್ನವಳೆಂದು ತಿಳಿದರೆ
ಇನ್ನೂ ರಂಜಿತಪ ಸೊಲ್ಲಎಂಥದು ಎಂದುನೋಡಿದನು ೪೯
ಎದ್ದು ಎಲ್ಲೆಡೆ ನೋಡುತಿರಲಾ
ಮುದ್ದುಕನ್ಯೆಯು ನಿದ್ರೆಯಲ್ಲಿರೆ
ಸದ್ದು ಇಲ್ಲದ ಚಿತ್ರ ಶಾಲೆಯ ನೋಡುತಿರಲಾಗ ೪೮
ಚಿತ್ರ ಪ್ರಾಣಿಯು ಪಕ್ಷಿ ಗಿಡ ಮರ
ತತ್ರ ಜೀವೊಡೆದೊಂದು ಹಂಸವು
ಹತ್ತಿರವೆ ಹಾರುತಲೆ ಗೂಟದ ಮೇಲೆ ಕುಳಿತಾಗ. ೪೯
ಚಂದ ಮುತ್ತಿನ ಹಾರದೊಳಗೊಂ -
ದೊಂದು ಕಾಳನು ಹಂಸೇ ನುಂಗಲು
ಮುಂದುವರಿದೊಡೆ ರಾಯ ನೋಡಿದರೇನು ಮಾಡುವುದು ೫೦
ಅಂಚೆ ಬಾಯಿಯ ತುತ್ತು ಕಸಿದರೆ
ವಂಚನೆಯು ಜೀವಿತದ ಅಶನಕೆ
ಸಂಚಿತಾರ್ಥವ ಧರ್ಮ ಪಾಪಿಯು ಎಂಬ ಕೃತಿ ಎನಿಸಿ ೫೧
ಹೆದರಿಸುವೆನಾದರೆಯು ಹಾರವು
ಕೆದಕಿದರೆ ಬಿರುದಹುದು ಬರಿಹುಷಿ
ಸದಯ ಗುಣವಿಡೆ ಚಿತ್ರ ಹಂಸಕೆ ಜೀವ ಕಳೆಯುಂಟು ೫೨
ತನಗೆ ಗ್ರಹ ದೆಶೆ ಕೆಟ್ಟುದಾದರೆ
ಅನಿಸುವುದು ಇವನೋರ್ವ ತಸ್ಕರ
ತನ್ನ ತಾನೆ ತಿಳಿದುಕೊಂಡೊಡೆ ಮುಕ್ತಿಯಹುದೆಂದ ೫೩
ಚಕಿತದಿಮ್ ನೋಡುತಿರೆ ಹಂಸವು
ಸಕಲ ಮಾಲೆಯ ಮುತ್ತು ಗಾಳನು
ಮುಕ್ಕಿ ಮುಗಿಸಿತು ಮತ್ತೆ ಚಿತ್ರವೆ ಗೋಡೆಮೇಲಾಗಿ. ೫೪
ಬಂದ ದುಃಖವೂ ಬರಲಿ ಭೋಗಿಪು
ದೊಂದೇ ನನ್ನಯ ಕರ್ಮ ಗತಿಯಿರೇ
ಎಂದು ಮಲಗಿದ ಮತ್ತೆ ಕನ್ನಿಕೆ ನೆರೆಯ ಸನ್ನಿಧಿಗೆ ೫೫
ಬೆಳಗಲದು ಕನ್ನಿಕೆಯು ಇಟ್ಟಿಹ
ಮಾಲೆ ನೋಡಲು ಗೂಟ ಬರಿದಿಹ
ಕೇಳಲೆಬ್ಬಿಸಿ ಬಿಸಿ ಉಸಿರು ಬಿಡುತಿರಲು ವಿಕ್ರಮನು ೫೬
ಕಳ್ಳನಿವ ನಮ್ಮಪ್ಪ ನಂಬಿದ
ಒಳ್ಳೆ ವರನೆಂದರಿದು ತಂದಿಹ
ಜೋಳ್ಳುಧಂಬಕ ನಿವನಪುಂಸಕ ಹಿಡಿಯೊಡನಾಟ ೫೭
ಸಿಟ್ಟಿ ನಿಂ ಕೇಳಿದಳು ಕನ್ಯೆಯು
ಇಟ್ಟಮಾಲೆಯು ಕೊಟ್ಟು ಬಿಡು ಬೆ-
ನಟ್ಟಿ ಬಂದಿದೆ ನಿನಗೆ ತಾಡನೆ ಠಕ್ಕತನಕಾಗಿ. ೫೮
ಕಳ್ಳತನದಪವಾದ ಕೆಳೆಯುವೆ
ಒಳ್ಳೆ ಮಾತಿಂ ಕೊಡಲು ಬಿಡುವೆನು
ಬೆಳ್ಳುಬೆಳುತನ ಸುಖದನಿದ್ರೆಯ ಮಾಡಿ ಈ ಫಲವೇ ?೫೯
ಕುವರಿ ಕೇಳಲು ರಾಜ ಪೇಳಿದ
ತವ ಸರವು ತೆಗೆದಿಟ್ಟುವುದಿಲ್ಲವು
ಅವತರಿಸಿ ಅಪವಾದ ನೀ ಕೊಡಬೇಡ ಎಲೆ ಕನ್ಯೆ ೬೦
ಸಿಟ್ಟಿ ನೋಳ್ ಪಿತ ಬಳಿಗೆ ಹೋಗಲು
ನಿಟ್ಟುಸಿರು ಬಿಡುತೆಲ್ಲ ಪೇಳಿರೆ
ಕೆಟ್ಟಕಳ್ಳನ ತಂದು ಇಚ್ಛೆಯ ವರನು ಎನ್ನುತಿಹೆ ೬೧
ಚೋರ ವಿದ್ಯೆಯ ನಿಪುಣ ಖಲನಾ
ಹಾರ ಕದ್ದನು ಎಂದು ತಿಳಿದೊಡೆ
ಕ್ರೂರ ರೂಪವು ತಾಳಿ ವೈಶ್ಯನು ಪಾಂಥಿಕಗೆ ಕೇಳೆ ೬೨
ಎಲವೋ ನೆಮ್ಮದಿ ದೊರೆಯಲಿಂತಹ
ಸಲುಗೆ ನಡೆಸಿದೆ ಕಳ್ಳತನದಲಿ
ಮಾಲೆ ಕೊಡದಿರೆ ಎಲುವುಗಳು ಪುಡಿಪುಡಿಯೆ ತಿಳಿ ಅಂದ ೬೩
ಏನದು ಉಪಕಾರವನು ತೀರಿಸಿ
ಮಾನಗೇಡಿಯೆ ಎನ್ನ ಕನ್ಯೆಯ
ಮುನ್ನಮಾಲೆಯನಿತ್ತು ಹೋಗು ನೀ ಬಂದ ದಾರಿಯಲಿ ೬೪
ಪೇಳಿದನು ನೃಪ ವಣಿಕ ಶ್ರೇಷ್ಠ ಗೆ
ಮಾಲೆ ತೆಗೆದುದು ಇಲ್ಲ ನೋಡಿದು
ದಿಲ್ಲ ಕರ್ಮವು ಎಳೆದು ತಂದಿದೆ ಬರಿಯ ವಿಘ್ನವನೆ ೬೫
ಸಾವುಕಾರನು ಸಿಟ್ಟಿನಿಂದಲೇ
ಸೇವಕರ ಕರೆದಿಂತು ವಿಧಿಸಿದ
ಸಾವವರೇ ಹೊಡೆಯುವುದು ನಿಷ್ಠುರತೆಯಿಂದಲೇ ೬೬
ಹೊಡೆಯದೆಯೇ ಮಾಲೆಯನು ಕೊಡನಿವ
ಕಡುಗೊಳ್ಳ ಇವನೆಂದು ಪೇಳ್ವೆಡೆ
ಹೊಡೆತಗಳ ಕೊಡುತಿಹರು ಅತಿಶಯ ಕಾಲಯಮನಂತೆ ೬೭
ಹೊಡೆ ಹೊಡೆದು ಮೇಲ್ ಮತ್ತೆ ಹೊಡೆದರು
ತಾಡನೆಯ ತಡೆಯುವರಿಲ್ಲದೆ ನೃಪ
ಮಾಡಿ ಕರ್ಮದ ಭೋಗದಲಿ ಇದ್ದುದನು ಬರಲೆಂದು ೬೮
ತಾಡನೆಯ ತಾಳಿಕೆಯ ರೂಢಿಯು
ನಾಡಗಳ್ಳರಿಗಿರುವ ಲಕ್ಷಣ
ಗುಢಚಾರರಿ ಗರಿಯದಂತಹ ಕಾಯ ದುಗುಡನಿವ. ೬೯
ಎಂದರಿದು ವರದಿಯನ್ನು ಒಪ್ಪಿಸಿ
ಚಂದ್ರ ಸೇನನ ಕಡೆಗೆ ವಣಿಕನು
ಸಾಂದ್ರವಾಗಿಯೇ ಅರುಹಲೆನ್ನೆಡೆ ತನ್ನಿರೆಂದವನು. ೬೯ ತಾಮಿಳಿಂದಾ ಪತಿಯ ಎದುರೊಳು
ತಾಮ್ ಅರಸ ಕೈಬಂಧಿ ವಿಕ್ರಮ
ತಾಮುಗಿದ ಕೈಗಳನು ಅರಸಗೆ ವಿನಯ ನಯದಿಂದ ೭೦
ಬಳಿಕ ಸೇನನು ಕೇಳೇ ಮಾಲೆಯ
ಮಿಳಿತವಿದೆ ಕೊಡು ಇಲ್ಲವಾದರೆ
ಗಳಿಗೆ ಬಂದಿದೆ ಮೃತ್ಯುವಿನ ಮುಖದಲ್ಲಿ ಬೀಳುವುದು ೭೧
ನಾ ತೆಗೆದುಕೊಂಡಿಲ್ಲ ರಾಯರೇ
ನೀತಿ ಭ್ರಷ್ಟತೆ ಇಲ್ಲ ಸತ್ಯಕ್ಕೆ
ಮಾತು ನಂಬುವ ತೆರದಿ ಇಲ್ಲವು ವ್ಯರ್ಥ ಪೇಳಿದೊಡೆ ೭೨
ಏನು ನುಡಿದಡೆ ನಿಜವು ಎನಿಸದು
ಎನಗೆ ಗ್ರಹ ಬಲವಿಲ್ಲ ಹೊಂದಿಕೆ
ಸಾನುಭೂತಿಯಲಿಂದ ಬರುವುದು ಏನು ಫಲವಿಲ್ಲ ೭೩
ಸರ್ವ ಅಪರಾಧವನು ನುಂಗಿಯೇ
ತೀರ್ಪು ಕೊಡುವುದು ಕೃಪೆಯ ಮಾಡಿ
ಬಾರದೆಂಬುದು ಬೇಕು ಎನಿಸಿದೆ ದೈವ ಬಲವಿಲ್ಲ ೭೪
ಮುಂದೆ ಆಗುವುದಾಗಲಿಹುದಾ
ನಿಂದೆ ಕರ್ಮವು ಕಳವು ಮಾಡೆನು
ಬಂದುದಕೆ ಭೋಗಿಸುವ ಪರಿಪರಿಯಿಂದ ಕೇಳಿದನು ೭೫
ಎಷ್ಟು ಬುದ್ಧಿಯ ಹೇಳುತಿಹ ಖಲ
ಕಷ್ಟ ಕೊಡಿರೆಂದರಸ ಕೋಪಿಸಿ
ನಷ್ಟ ಮಾಡಿರಿ ಕಡಿದು ಕೈ ಕಾಲುಗಳ ಕತ್ತರಿಸಿ ೭೬
ಊರ ಹೊರಬದಿ ಒಗೆದು ಅನ್ನವು
ನೀರು ಕೊಡದಿರಿ ಎಂದು ರಾಯರು
ನಿರ್ಮಿಸಿದ ನ್ಯಾಯವನ್ನು ಪಾಲಿಸಿ ಯಾರ ದಯವಿಲ್ಲ ೭೭
ಭಾವ ಭಕ್ತಿಯ ಕರುಣೆ ಮೂರುತಿ
ಅವನಿಲ್ಲವು ದಯಾಮಯ ಶನಿ
ದೇವ ಮುನಿದವಗಾವ ರಕ್ಷಿಪರೆನುವತೆರದಲ್ಲಿ. ೭೮
ಸೇನ ಮುಖದಲಿ ಶನಿ ಮಹಾಮತಿ
ತಾನುಡಿದನೆಂದರಿದು ಪೀಡೆಯು
ಜ್ಞಾನದಿಂದಲೇ ಸಹನೆ ಮಾಡುವುದೆಂದು ಒಳಮನದಿ ೭೯
ನಮಿಸಿ ಅಪ್ಪಣೆ ಎಂದು ಚಾಂಡಾಲ
ರಮಿತ ತೊಂದರೆ ಕೊಡುತಲೆಳೆದರು
ಕ್ರಮಿಸಿತಂದಿಹ ತಮಿಳಿಂದಾಪುರದ ಹೊರಬದಿಯ ೮೦
ಚಡಪಡಿಪ ಧಡ ವಹಿಸಿ ವಿಕ್ರಮ
ಬಿಡುತೆ ಉಸುರನು ಬಿದ್ದುಕೊಂಡಲಿ
ನಡುಗುತಿರೆ ತೊಡೆ ತೋಳ್ಗಳೆಲ್ಲವೂ ಕಡಿಯುತಿರಲಾಗಿ ೮೧
ಕಂಡವರು ಜನ ಹಿಂಡು ನೆರೆದರು
ದಂಡವೆನ್ನುತ ಜೀವನವು ಎಂ
ಅಂಡಲೆವರಲಿ ಕರಗಿ ಹೃದಯವು ನಯನ ನೀರಾಗಿ ೮೨
ಕಡಿದು ಕೈ ಕಾಲುಗಳು ಒಗೆದರು
ನಡೆದುದೆಲ್ಲವೂ ಸೇನನಿಗೆ ತಿಳಿ
ಪಡಿಸಿದರು ಕೃತಿ ವಿಕೃತಿಯ ವಿಕ್ರಮನ ಕ್ರಮವಾಗಿ ೮೩
ಸತ್ತನೇನವನೆಂದು ನೃಪ ಕೇಳ್
ಉತ್ತರಿಸಿ ಚಂಡಾಲರೆಲ್ಲರೂ
ತುತ್ತುಅನ್ನವು ಇರದೆಯೇ ಉಳಿಯುವದೆಂತು ಜೀವಾತ್ಮ ೮೪
ಕರ ಚರಣ ರಹಿತಾಗಿ ಒಗೆದೆವು
ಹರಣ ಉಳಿಯಿತು ಹೃದಯ ಬದಿಯಲಿ
ಕರಮುಗಿದು ತಾಂ ಹೇಳಿಹೋದರು ಭೃತ್ಯ ಹತ್ಯಕರು ೮೫
ಅನ್ನ ನೀರುಗಳಿಲ್ಲದಿರೆ ಜನ
ರಿನ್ನು ಹಾಕಲು ಅರಸನಾಣತಿ
ಯನ್ನು ಪಾಲಿಸದಿರಲು ತಪ್ಪದು ಶಿಕ್ಷೆ ಅಂಜಿಕೆಯ ೮೬
ದಾರಿಗರು ನೋಡುತಲೆ ಮರುಗುವ
ಘೋರವಿದು ಪರಮೇಶ ಕಷ್ಟವು
ಕಾರುಣ್ಯದಲಿ ಮಾತನಾಡುವ ಎಲ್ಲರೊಳು ದುಃಖ ೮೭
ದಾರಿ ಹೋಕರ ಬಾಯಿ ಮಾತಿಗೆ
ಭೂರಿಯಾದೆನು ಎಂದು ವಿಕ್ರಮ
ಸಾರಸಾರ ವಿಚಾರ ಮಾಡುತ ನೆನೆದ ಪಿಪ್ಪಲನ ೮೮
ಮೊಂಡು ಮುಂಡಿಕನಾಗೆ ವಿಕ್ರಮ
ಕಂಡು ಕಾಕವು ಶುನಕ ಹೆಣದಿನಿ
ಹಿಂಡುಬರುತಿರೆ ಕುಕ್ಕಲುಕ್ಕವ ದುಃಖ ಸಹಿಸಿದನು ೮೯
ರಕ್ತ ಹರಿಯುವುದನ್ನು ತಡೆಯದೆ
ಶಕ್ತನಾಗಿರೇ ಚಿತ್ರಹತವು ವಿ-
ರಕ್ತವಾಯಿತು ಜೀವ ಬಂಧನ ನರಕವಿದು ಆಗೇ ೯೦
ಮೀನ ಮಿಡುಕಾಟದೊಳು ಉರುಳುತ
ಹೀನತರ ತಾಪವನು ಸಹಿಸುತ
ದೀನವದನವು ಆತ್ಮ ಸಂರಕ್ಷಣೆಗೆ ಮುಖ್ಯವದು ೯೧
ನೇತಿ ನೇತಿಯು ಎಂದು ಸಾರಿರೆ
ಘಾತ ಕೃತಿಗಿಳಿಯುವದಯೋಗ್ಯವು
ಹೇತು ಜೀವನಕಹುದು ಕರ್ಮವು ಭೋಗಿಸಿರೆ ಮುಕ್ತ ೯೨
ಗ್ರಹಗಳತೀ ಬಲ ಬಭ್ರುದೇವನೇ
ಸಹನೆ ಮೀರಿತು ಕರುಣೆಯಂ ಸ-
ಲಹುದು ಕೈಮುಗಿಯುವೆನು ಸೌರಿಯೇ ಶಾಂತಿಯನ್ನೀಯು ೯೩
ಅಂಗವಿಕಲತೆಗಳದಿಹೇನು ನಾ
ಭಂಗ ಸಂಸ್ತುತ ದೇವನೊಳು ಬರೇ
ಇಂಗಿತವು ನಿನ್ನ ನಾಮವೇ ಆಧಾರ ತಿಳಿದಿರಲು ೯೪
ಚ್ಯುತಿಯು ಪಿಂಗಲರಾಯನಲಿ ಬಾ-
ರತೆರ ನಡೆಯಲು ನಿಷ್ಠೆ ಬಿಡನೈ
ಅತಿಯ ಶ್ರದ್ಧೆಯ ಒಂದು ತಿಂಗಳು ಉರುಳಿ ತಪವಾಗಿ ೯೫
ಅನಿಸಿ ಸತ್ವದ ಅಳತೆ ತಿಳಿಯಲು
ಶನಿದೇವರೊಳು ಕರುಣೆ ಹುಟ್ಟಿತು
ಕೊನೆಯು ಮುಟ್ಟಿತು ಸಾಕು ಸಾಕೆಂದೆನಿಸಿ ಪ್ರೀತಿಯಲಿ ೯೬
ಅಳತೆ ಮೀರಿತು ಕಾಡುವುದು ಕಳ
ಕಳಿಕೆಯಿಂದಲೇ ಪಿಂಗಳಗೆ ದಯೆ
ಇಳೆಯಒಡೆಯನ ಒಳಗೆ ಪ್ರೇರಣೆಮಾಡಿ ಮಾರ್ಪಾಟು ೯೭
ಪೀಡಿಪುದು ಸಾಕಿನ್ನು ಪ್ರೇರಿಸಿ
ನಾಡ ನಾಳುವ ಚಂದ್ರಸೇನನ
ಮೋಡಿಆಟದ ಗೊಂಬೆಮಾಡಿದ ಶನಿಯು ಮಾರ್ಪಾಟು ೯೮
ಕಳ್ಳನುಳಿದಿಹ ವ್ಯಂಗವಾಗಿಯೇ
ಉಳ್ಳ ಜೀವಿಗೆ ಅನ್ನ ನೀರನು
ಸಲ್ಲಿಸಿದ ಅವಗಾವ ಶಿಕ್ಷೆಯು ವಿಧಿಸಲಾಗಿಲ್ಲ ೯೯
ಪುರದ ಜನರಿಗೆ ರಾಜ್ಯ ತಿಳಿಸಿದ
ಕರುಣೆ ತೋರಿದ ಕ್ಷಣದಿ ಜನ ಆ-
ಗರವು ಆಹಾರವನೇ ಈಯಲು ತೃಪ್ತಿ ಮುಂಡಕಗೆ ೧೦೦
ಸಂಕಟವು ಬಹುಪರಿಯು ನಡೆಯಿತು
ರಂಕನಾಗಿರೆ ರಾಯ ಲಕ್ಷಣ
ಶಂಕಿಸಲು ಚೆಲುವಾದ ಮೂರ್ತಿಯು ಕೊಬ್ಬಿಕೊಂಡಿರಲು ೧೦೧
ಅನ್ನ ನೀರಿನ ಚಿಂತೆ ಇಲ್ಲದೆ
ಅನ್ಯರತಿಥಿಯು ದಿನವೂ ಅರಿತಿಹ
ನ್ಯೂನತೆಯು ಕಡು ಕಷ್ಟವೆನಿಸಿತು ರಾಯ ವಿಕ್ರಮಗೆ ೧೦೨
ಧರ್ಮಾನ್ನವ ಭಕ್ಷ ಮಾಡುತ
ಕರುಮಾತ್ಮದ ರಕ್ಷಣೆಯ ಕೃತಿ
ತೀರ್ಮಾನದೊಳೆರಡು ವರುಷಗಳುರುಳಿ ಕಳೆದಿಹವು ೧೦೩
ಕಾಯಕ್ಲೇಶವು ಕಾಯಕದ ಕೃತಿ
ಬಾಯಿ ನುಡಿ ವಾಚಿಕದ ಪಾಪಕೆ
ನ್ಯಾಯದೊರೆತರು ಮಾನಸಿಕದೃಢವಿರಲು ಪುಣ್ಯವದು ೧೦೪
ಮಾನಸಿಕ ದೃಢವಿರುವ ವಿಕ್ರಮ
ತಾನೇ ಗ್ರಹಪ್ರಿಯನಾದ ಅನ್ನವು
ಪಾನಪಡೆಯಲು ಪುಣ್ಯಸಂಗ್ರಹ ಬಲವೇ ಮುಂದಾಗಿ ೧೦೫
ಗ್ರಹವೇ ಪ್ರತ್ಯಕ್ಷದಲಿ ಹೇಳಿರೆ
ಮಹತಿ ಮಾನಸ ನಿಷ್ಠೆ ನಿಗ್ರಹ
ವಿಹುದೇಕೊನೆ ಆಧಾರಕತೆಯಂ ಬೋಧೆತಿಳಿಯುವುದು ೧೦೬
ಪಾಪನಾಶನವಹುದು ನಿಂದೆ
ಲೇಪ ಫೋಪುದು ಕೊನೆಗೆ ನೈಜವು
ತಾಪವಿತ್ರವು ಅಹುದು ಆಲಿಸೆ ಪುಣ್ಯ ಖಣಿಯಾಗಿ ೧೦೭
ತಾತಾರ್ಯ ಮಹಿಪತಿಯು ಮಹರಠಿ
ಹೇತು ಪೂರ್ವಕವಾಗಿ ಕನ್ನಡ
ಮಾತಿನಿಂ ರೂಪಿಸಿದ ತುಳಸಾತ್ಮಜನು ಸಿರಿರಾಯ ೧೦೮
ಸರಳಗನ್ನಡ ಭಾಷೆಯಲಿ ಕಥೆ
ಬರೆಹದಿಮ್ ವರ್ಣಿಸಿದೆ ನ್ಯೂನತೆ
ಬರದ ತೆರೆ ಅರ್ಥವನು ಬುದ್ಧಿಗೆ ನೀಡು ಶನಿದೇವ ೧೦೯
ಪಿತರು ಓದಿದುದಂತೆ ಪೇಳಿದ
ಕಥೆಯು ರಂಜಿಸುವಂತೆ ಕನ್ನಡ
ಮತಿಯರಸ ಭಾಷೆಯಲಿ ಲೇಖಿಸಿ ಇತ್ತ ಸಿರಿರಾಯ ೧೧೦
ಇಂತಿ ಶ್ರೀ ಶನೈಶ್ಚರಚರಿ ತಾ -
ದ್ಯಂತ ಸ್ಪೂರ್ತಿಯು ನೀಡುತಿರೆ ತಾ-
ಆಂತು ಮಹತಿಯು ಗೈಮೆ ಶ್ರೀ ಗೋವಿಂದರಾಜ ಮರ ೧೧೧
ಇತಿ ಪುರಾಣೈತಿಹದ ಕಥೆಗಳು
ಮಥಿಸಿ ಸೀತಾರಾಮ ತುಳಸಾ-
ಸುತನ ಸವಿಗತೆ ಚತುರ್ಥದ ಶ್ರೀ ಕೃಷ್ಣ ಅರ್ಪಣೆಯ ೧೧೨
ಇಂತಿ ಶ್ರೀ ಶನೇಶ್ಚರ ಚರಿತ ಪುರಾಣದೊಳು ಚತುರ್ಥ ಸಂಧಿ ಪರಿಪೂರ್ಣಂ ಶುಭಮಸ್ತು ಕೃಷ್ಣಾರ್ಪಣಮಸ್ತು
No comments:
Post a Comment