Monday, October 20, 2025

Escape from Hell ನರಕ ಚತುರ್ದಶಿ

              ನರಕ ಚತುರ್ದಶಿ

.        

              ಧರೆಯ ಮಗನಾದ ನರಕಾಸುರನು ಧರೆಯ ಮಂದಿಗೆಲ್ಲ ನರಕ ಸದೃಶನಾಗಿದ್ದ, ಶತ್ರುಗಳಿಂದ ಆಕ್ರಮಿಸಲು ಅಸಾಧ್ಯವಾದ ಭದ್ರಕೋಟೆಯನ್ನು ನಿರ್ಮಿಸಿದ್ದ. ನರಕನ ದುರ್ವರ್ತನೆಯು ಎಲ್ಲೆ ಮೀರಿದಾಗ ಭಗವಾನ್ ಶ್ರೀ ಕೃಷ್ಣನು ಸತ್ಯಭಾಮೆಯ ಒಟ್ಟಿಗೆ ಅವನ ಸಂಹಾರಕ್ಕಾಗಿ ತೆರಳಿದ ಪ್ರಾಗ್ಜೋತಿಷಪುರದಲ್ಲಿ ನರಕನು ನಿರ್ಮಿಸಿದ ದುರ್ಗಮವಾದ ದುರ್ಗಗಳನ್ನೆಲ್ಲ ದಾಟಿದ. ಕೊನೆಗೆ ಅಭೇದ್ಯಗಳಾದ ಮುರನ ಪಾಶಗಳನ್ನು ಸಮೀಪಿಸಿ ಅವುಗಳನ್ನು ಬಾಣದಿಂದ ಛೇದಿಸಿದ. ಮುರನು ಬೆದರಿ ಕಂಗಾಲಾಗಿ ಶ್ರೀಕೃಷ್ಣನ ವಿರುದ್ಧ ಹೋರಾಡಲೆಂದು ಬಂದ ಮುರನ ಉರವನ್ನು ಸೀಳಿದ. ಕೃಷ್ಣ ಮುರಾರಿ ಎಂದೇ ಖ್ಯಾತನಾದ. ಮುಂದೆ ನರಕನಿಗೂ ಶ್ರೀಕೃಷ್ಣನಿಗೂ ಭಯಂಕರ ಕದನ ನಡೆಯಿತು. ನರಕನು ಬ್ರಹ್ಮ ದತ್ತವಾದ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ಭಕ್ತರ ಸಂತುಷ್ಟಿಗೆಂಬ ಉದ್ದೇಶದಿಂದ ಮೂರ್ಛಿತಾನದಂತೆ ನಟಿಸಿದ. ಕೃಷ್ಣ ಮೂರ್ಛಿತನಾದಾಗ ಸತ್ಯಭಾಮೆಯು ಸಿಡಿದೆದ್ದು  ರೌದ್ರಾವತಾರ ತಳೆದು ಘನಘೋರ ಯುದ್ಧಮಾಡಿ ನರಕಾಸುರನನ್ನು ಸಂಹರಿಸಿದಳು.                            ಹಾಗೇ ನಮ್ಮ ಸ್ತ್ರೀ ಸಮಾಜವೂ ಜಾಗೃತಿ ವಹಿಸಬೇಕು. ನಮ್ಮ ಸನಾತನ ಹಿಂದೂ ಧರ್ಮದ ರಕ್ಷಣೆ ಸ್ತ್ರೀ ಮತ್ತು ಪುರುಷ ಇಬ್ಬರ ಕರ್ತವ್ಯವೂ ಆಗಿದೆ. ಈ ಸಂದೇಶವನ್ನು ಕೃಷ್ಣ ಮತ್ತು ಸತ್ಯಭಾಮೆಯರು ನರಕನ ಸಂಹಾರದ ಮೂಲಕ ಸೂಚಿಸಿದ್ದಾರೆ. ಅಧರ್ಮಗಾಮಿಯಾದ ತನ್ನ ಮಗನ ಸಂಹಾರದಿಂದ ಭೂದೇವಿ ಸಂತುಷ್ಟಳಾಗಿ ಭಗವಂತನನ್ನು ಸ್ತೋತ್ರ ಮಾಡುತ್ತಾಳೆ. ಮಗನು ಸತ್ತರೂ ಚಿಂತೆ ಇಲ್ಲ ಧರ್ಮ ನಾಶವಾಗಬಾರದು ಎಂಬ ಉದಾತ್ತ ಮನೋಭಾವವನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಸ್ತ್ರೀಯರು ಅರಿತುಕೊಳ್ಳಬೇಕು. ನರಕಾಸುರನು ಸಂಹೃತನಾದ ಬಳಿಕ ಭೂದೇವಿಯು ನರಕನ ಮಗನಾದ ಭಗದತ್ತನನ್ನು ಶ್ರೀಕೃಷ್ಣನ ಪಾದಾರವಿಂದಗಳಿಗೆ ಸಮರ್ಪಿಸಿದಳು. ನರಕನು ಅಪಹರಿಸಿ ತಂದಿದ್ದ ಅದಿತಿಯ ಕರ್ಣಕುಂಡಲಗಳನ್ನು ವೈಜಯಂತಿ ಮಾಲೆಯನ್ನು ಅರ್ಪಿಸಿದಳು. ಮತ್ತು ಅನೇಕ ಪದಾರ್ಥಗಳನ್ನೆಲ್ಲ ದಾನ ಮಾಡಿದಳು. ನರಕನ ಸಂಹಾರದ ಬಳಿಕ ಶ್ರೀ ಕೃಷ್ಣನು ಸಮಸ್ತ ರಾಜ್ಯವನ್ನು ತನ್ನದು ಎಂಬುದಾಗಿ ಸ್ವೀಕಾರ ಮಾಡಬಹುದಿತ್ತು, ಆದರೆ ಎಲ್ಲವನ್ನು ಕಬಳಿಸುವ ದುರ್ಮತಿಯ ರಾಜಕಾರಣಿ ಆಗದೆ ನರಕನ ಮಗನಾದ ಭಗದತ್ತನಿಗೇ ವಹಿಸಿಕೊಟ್ಟ. ಸಿಂಹಾಸನದಲ್ಲಿ ಭಗದತ್ತನನ್ನು ಕೂಡಿಸಿ ಪಟ್ಟಾಭಿಷೇಕವನ್ನಾಚರಿಸಿದ. ಶ್ರೀ ಕೃಷ್ಣನು ಅಧರ್ಮದ ನಾಶ ಧರ್ಮದ ಪುನರುತ್ಥಾನಕ್ಕಾಗಿ ಬಂದವನೇ ಹೊರತು, ಅಧಿಕಾರ ಸಾಮ್ರಾಜ್ಯ ವಿಸ್ತರಣೆ ಮುಂತಾದ ಯಾವ ದುರುದ್ದೇಶಕ್ಕಾಗಿಯೂ ಅವತಾರ ಮಾಡಿದವನಲ್ಲ. 

       ನರಕನಿಂದ ಅಪಹೃತರಾದ ಸಾವಿರಾರು ರಾಜ ಪುತ್ರಿಯರನ್ನು ಬಂಧನದಿಂದ ಬಿಡುಗಡೆ ಮಾಡಿದ. ಅಬಲೆಯರಾದ ಸ್ತ್ರೀಯರೆಲ್ಲ ಬೇರೆ ಗತಿ ಕಾಣದೆ ಶ್ರೀಕೃಷ್ಣನ ಪಾದಾರವಿಂದಗಳನ್ನೇ ಆಶ್ರಯಿಸಿದಾಗ ಅವರನ್ನು ಕರುಣೆಯಿಂದ ಸ್ವೀಕರಿಸಿದ. ಅವರೆಲ್ಲರಿಗೂ ವಿಶೇಷ ಅನುಗ್ರಹವನ್ನು ಮಾಡಿ ಪಲ್ಲಕ್ಕಿಯಲ್ಲಿ ಅವರಿಚ್ಛೆಯಂತೆಯೇ ದ್ವಾರಕೆಗೆ ಕಳುಹಿಸಿಕೊಟ್ಟ. ಆದರೇ ಅವರೆಲ್ಲರೂ ಶ್ರೀ ಕೃಷ್ಣನ ಪತ್ನಿಯರಲ್ಲ.

           ನಾವೆಲ್ಲರೂ ಇಂದು ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನವಿದೆ. ಅವರಿಗೆ ಎಂದಿಗೂ ಅಪಮಾನ ಆಗಬಾರದೆಂದೇ . ನರಕನು ರಾಜರ ಕುವರಿಯರನ್ನು ಬಲಾತ್ಕಾರದಿಂದ ಅಪಹರಿಸಿ ಅವರ ಮಾನಹರಣದ ಘೋರಕೃತ್ಯಕ್ಕೆ ಆಲೋಚನೆ ಮಾಡಿದಾಗ ಅವನನ್ನು ಸಂಹರಿಸಿದ. ಅವರೆಲ್ಲರಿಗೂ ರಕ್ಷಣೆ ನೀಡಿದ ಮಾನನೀಯರ ಮಾನ ಸಂರಕ್ಷಣೆ ಮಾಡಿದ. ಇದನ್ನು ಸಂಕೇತಿಸಲು ಹಬ್ಬದ ಆಚರಣೆ ಈ ಮೂಲಕ ಶ್ರೀ ಕೃಷ್ಣನು ಮತ್ತು ವಿಶೇಷವಾಗಿ ಸತ್ಯಭಾಮೆಯಂತೆ ಮಹಿಳೆಯರ ರಕ್ಷಣೆ ಮನುಕುಲದ ಕರ್ತವ್ಯ.                            ಅವರೆಂದೂ ಅನ್ಯಾಯ ಅತ್ಯಾಚಾರಗಳಿಗೆ ಗುರಿಯಾಗದಂತೆ ಎಚ್ಚರ ವಹಿಸಬೇಕು ಎನ್ನುವುದನ್ನು ಸಾವಿರಾರು ಸ್ತ್ರೀಯರನ್ನು ರಕ್ಷಿಸಿ ಸೂಚಿಸಿದ್ದಾರೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಹಬ್ಬವನ್ನು ಆಚರಿಸಿದ ನಮ್ಮ ಹಬ್ಬದ ಸವಿಯೂಟ ಪಟಾಕಿ ಸಂಭ್ರಮ ನೂತನ ವಸ್ತ್ರಗಳ ಧಾರಣೆ ಆನಂದದ ಉದ್ಗಾರ ಎಲ್ಲವೂ ಅರ್ಥಪೂರ್ಣ ವೆನಿಸುತ್ತದೆ. 

       ಪಟಾಕಿ ಹಾರಿಸಿ ಸಂಭ್ರಮಿಸುವುದು ಭಾರತದ ಸಾಂಪ್ರದಾಯಿಕ ಸನಾತನ ಆಚರಣೆಯ ಸಾಂಕೇತಿಕವಾಗಿ ವರ್ಷಕ್ಕೊಮ್ಮೆ ಬರುವ ನರಕ ಚತುರ್ದಶಿಯಂದು ಪ್ರತಿಯೊಬ್ಬರು ಸಂಭ್ರಮಿಸುತ್ತಾರೇ ಹೊರತು ಜಗತ್ತಿನ ಪರ್ಯಾವರಣವನ್ನು ದೂಷಿತವಾಗಿಸುವ ಉದ್ದೇಶದಿಂದ ಅಲ್ಲ ಎಂಬುದನ್ನು ಸಮಸ್ತರೂ ತಿಳಿದುಕೊಳ್ಳುವುದು ಅವಶ್ಯಕ. 

       ಹಾಗೆಯೇ ಅಭ್ಯಂಗ ಸ್ನಾನವನ್ನು ಮಾಡಿ, ನೂತನ ವಸ್ತ್ರವನ್ನು ಧರಿಸಿ ಸತ್ಯಭಾಮೆ ಸಮೇತ ಶ್ರೀ ಕೃಷ್ಣ ಪರಮಾತ್ಮನನ್ನು ವಿಶೇಷವಾಗಿ ಅರ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.  

ಸರ್ವೇ ಜನಾ ಸುಖಿನೋ ಭವಂತು 


No comments:

Post a Comment