Sunday, February 01, 2026

BALI PRATIPADA ಬಲಿ ಪ್ರತಿಪದೆ

ಬಲಿ ಪ್ರತಿಪದೆ
ದೀಪಾವಳಿಯ ಸಂಕೇತ


ಬಲಿ ಚಕ್ರವರ್ತಿಯ ಬಳಿ‌ ಎಲ್ಲವೂ ಇತ್ತು. ಆತ ಇಂದ್ರನನ್ನೇ ಸೋಲಿಸಿ ತಾನೇ‌ ಮೂರು ಲೋಕಗಳ ಅಧಿಪತಿಯಾಗಿದ್ದ. ಆದರೂ ಆತನಿಗೆ ಸಮಾಧಾನವಿರಲಿಲ್ಲ. ಇನ್ನೂ ಬೇಕು, ಮತ್ತೂ ಬೇಕು ಎಂಬ‌ ಮನಸ್ಸು; ತನಗಾಗಿಯಲ್ಲ, ತನ್ನನ್ನು ನಂಬಿದ ಪ್ರಜೆಗಳಿಗಾಗಿ. ಇದರಿಂದಾಗಿ ಕಳೆದುಕೊಳ್ಳುವ ಭಯ ಅವನನ್ನಾವರಿಸಿತ್ತು. ಅದಕ್ಕಾಗಿ ಯಜ್ಞಗಳನ್ನೂ‌ ಮಾಡುತ್ತಿದ್ದ.

ಮಹಾವಿಷ್ಣುವಿನ‌ ಪರಮ ಭಕ್ತನಾದ ಪ್ರಹ್ಲಾದನ‌ ಮೊಮ್ಮಗನಾದ ಬಲಿಯೂ ಮಹಾ ವಿಷ್ಣುಭಕ್ತನೇ. ಭಕ್ತ‌ಪರಾಧೀನನಾದ‌ ಮಹಾವಿಷ್ಣು ಬಲಿಗೆ ಮಾನಸಿಕ‌ ಸ್ಥಿರತೆಯನ್ನು ಕೊಡಲು ಸಂಕಲ್ಪಿಸಿದ. ಮನಸ್ಸು ಸ್ಥಿರವಾಗಿದ್ದಾಗ ಮಾತ್ರ ಆಸೆ ಮತ್ತು ಭಯಗಳಿಂದ‌ ನಿವೃತ್ತಿ ಪಡೆದು ತನ್ನ ಆರಾಧ್ಯದೈವದ ಪಾದವನ್ನು ಸೇರುವುದು ಸಾಧ್ಯ. ಆದುದರಿಂದ ವಿಷ್ಣುವು ವಾಮನನ‌ ರೂಪದಲ್ಲಿ ಬಂದು ಮೂರು ಪಾದಗಳ ಅಳತೆಯ ಜಾಗವನ್ನು ದಾನವಾಗಿ ಕೊಡುವಂತೆ‌ ಬೇಡಿಕೊಳ್ಳುತ್ತಾನೆ. ಸಂಸ್ಕೃತದಲ್ಲಿ‌ ಪಾದ ಎಂದರೆ‌‌ ಭಾಗ. ವಾಮನ‌ ಕೇಳಿದ್ದು ಕಾಲದ‌ ಮೂರು ಭಾಗಗಳು‌ - ಭೂತ, ವರ್ತಮಾನ ಮತ್ತು ಭವಿಷ್ಯ.

ಬಲಿಯು ಭೂತಕಾಲದ‌ ಸಂಕೇತವಾದ ಅಧೋಲೋಕವನ್ನು ನೀಡುತ್ತಾನೆ, ನಂತರ‌ ಭವಿಷ್ಯತ್ ಕಾಲದ ಸಂಕೇತವಾದ ಊರ್ಧ್ವಲೋಕವನ್ನೂ ಸಮರ್ಪಿಸುತ್ತಾನೆ. ಮನಸ್ಸಿನಿಂದ‌ ಭೂತಕಾಲದ ನೆನಪುಗಳು ಮತ್ತು ಭವಿಷ್ಯದ ಆತಂಕಗಳು‌ ಕಳೆದಾಗ ವರ್ತಮಾನದ‌ ಖಾಲಿ ಜಾಗ ಮನಸ್ಸಿನಲ್ಲುಳಿಯಿತು. ಮಹಾವಿಷ್ಣುವಿಗೆ ಪ್ರವೇಶ ಮಾಡಲು ಅವಕಾಶವುಂಟಾಯಿತು. ಬಲಿಯ ಆಸೆ ಆತಂಕಗಳು ಮಾಯವಾಗಿ ಮನಸ್ಸು ಸ್ಥಿರವಾಯಿತು. ಮನಸ್ಸಿನ ಈ ಸ್ಥಿತಿಯೇ ಸುತಲ; ಸುಂದರವಾದ ಸ್ಥಿರವಾದ ಮಂಗಲಮಯವಾದ  ತಲ. ಇದೇ ಈಗ ಮಹಾಬಲಿಯ ಶಾಶ್ವತ ಸ್ಥಾನ.

ಭೂತ ಭವಿಷ್ಯಗಳನ್ನು ಮರೆತು ವರ್ತಮಾನದಲ್ಲಿ ಬದುಕುವುದು. ವರ್ತಮಾನವನ್ನು ಜ್ಞಾನದ‌ ದೀಪದಿಂದ ಬೆಳಗುವುದು. ಗೋವು ಎಂದರೆ ಜ್ಞಾನ. ಜ್ಞಾನದ ಗೋವನ್ನು ಆರಾಧಿಸಿ ದೀಪಾವಳಿಯನ್ನು ಸಂಭ್ರಮಿಸಿ. ಮನಸ್ಸಿನಿಂದ ಭೂತ ಭವಿಷ್ಯಗಳ ಚಿಂತೆ ಆತಂಕಗಳು ದೂರವಾದಾಗ ಅದು ಸತ್ ಚಿತ್ ಆನಂದದ ನೆಲೆಯಾಗುತ್ತದೆ. ಇಡೀ ಜಗತ್ತು ಸಂತೋಷದ ದೀಪಗಳಿಂದ ಜಗಮಗಿಸತೊಡಗುತ್ತದೆ.



No comments:

Post a Comment