Sunday, February 01, 2026

Being and being Ant. ಇರುವು ಮತ್ತು ಇರುವೆ

       ಇರುವು ಮತ್ತು ಇರುವೆ


ವಿಭಾತ ಕಾಲದಿ ಅಶ್ವತ್ಥದ ಒಣಗೆಲೆಯ ಆಸ್ತರದ
ಮೇಲೆ ಇರುವೆಯದೊಂದು ಸಾಗುತಿತ್ತು
ಕಡುಗಪ್ಪು ಮೈಬಣ್ಣ ಅಗಸೆ ಗಾತ್ರದ ದೇಹ
ತುಂಡು ವ್ರೀಹಿಯ ಹೊದ್ದುಹೋಗುತಿತ್ತು
ನೆಲಕೆ ಕಂಗಳನೆಟ್ಟು ಉಸಿರ ತುಸು ತುಸು ಬಿಟ್ಟು
ತರುವಿನಲಿ ಬ್ರಹ್ಮನನು ಪರಿಕಲ್ಪಿಸಿ
ಹೇಳಿತೆಂತಹ ಮಾತು ವಿನಯದಲಿ ತಲೆವಾಗಿ
ಮನಸಿರುವ ಮನುಜರೇ ಸರಿಯಾಲಿಸಿ

2
"ನಾನೊಂದು ಕಿರುಜೀವ ಕೀಟಯೋನಿಯ ಜಾತ
ಸಾಭಾರ ನಮನವನು ಸಲ್ಲಿಸುವೆನು
ಶ್ವಾಸಕೆ ಗಾಳಿಯನು ಹೊಟ್ಟಿಗೆ ಅನ್ನವನು
ದಾಹಕ್ಕೆ ಜಲವನ್ನು ಈದೇಹ ಆತ್ಮವನು
ವದಗಿಸಿದ ಪರಮಾತ್ಮವಂದಿಸುವೆನು
ಭಾವಗಳ ಭಾವಿಸುವ ಅರಿವಸಿರಿ ನೀಡಿರುವೆ
ವಿಹರಿಸಲು ಭೋಗಿಸಲು ಸೃಷ್ಟಿ ರಚಿಸಿರುವೆ
ನಿನ್ನ ಕರಿನೆರಳಲ್ಲಿ ಸಿಹಿ ಶಾಂತಿ ಇಟ್ಟಿರುವೆ
ಈ ತುಚ್ಛ ಜೀವದಲು ಪ್ರೀತಿ ಇಟ್ಟಿರುವೆ
ಮೂಲಮೂಲದಲಿ ಶುಂಡ ಕಾಂಡದಲೀ
ಶತ ಪತ್ರದಲಿ ಪರ್ಣಶಾಲೆಯಲ್ಲಿ
ರೆಂಬೆ ಕೊಂಬೆಯಲಿ ಫಲ್ಯ ಮಾಲ್ಯದಲಿ
ಪುಟ್ಟ ಗೂಡಿನಲಿ ದಟ್ಟ ಕಾಡಿನಲಿ
ನಿನ್ನುಸಿರ ಕಂಡಿರುವೆ ಶಿರಸಿ ನಮಿಸಿರುವೆ

ಎನಗಿತ್ತ ಭಾಗ್ಯಕೇ ನೆನೆಸುತಿಲ್ಲ ಹೇ ಭಗವನ್
ನನಗೆಂದೂ ದೊರೆಯದ ಅನ್ಯರಿಗೆ ನೀನಿತ್ತ
ದತ್ತವರಗಳಿಗಾಗಿಯೂ ನಮಿಸುತಿರುವೆ
ಭಾಗ್ಯ ಅವರವರ ಪಾಲಿಗೆ ಎಂದೆಣಿಸುತಿರುವೆ

3
ಸಂಹತಾಶ್ವಗಳ ವೇಗವನು ನಾ ಕಂಡೆ
ಸುಪರ್ಣನ ಕಂಡೆ ಮರುದ್ವೇಗ ಸಂಚಾರಿ
ಸೌಂದರ್ಯ ವರ್ಣಖಣಿ ಮಯೂರನ ಕಂಡೆ
ಸ್ಫೀತಗಾತ್ರ ಕರಿರಾಜನ ಶಕ್ತಿಯನೂ ನಾ ಕಂಡೆ
ಅವರವರ ಕರ್ಮಕೆ ಪುಣ್ಯಕೆ ನಿನ್ನ ದಾನವೆಂದುಕೊಂಡೆ
ತನ್ನ ಚಕ್ರ, ಬೆಂಕಿ, ಬುದ್ಧಿ, ವಿಚಾರ,ಕಲೆ ,
ಆಸೆಗಳೊಂದಿಗೆ ನರನನೂ ಕಂಡೆ ನಾ
ಬಡವನಾಗಿ ಹಸಿವ ಬೆಂಕಿಯಲಿ ಬೆಂದನರ
ಸಿರಿವಂತನಾಗಿ ನೆಮ್ಮದಿಗಾಗಿ ಹಪಹಪಿಸುವನರ
ಕಿರೀಟಗಳ ಭಾರದಲಿ ಬಾಗಿದ ಕುತ್ತಿಗೆಯನರ
ಎಲ್ಲವೂ ಬೇಕೆಂದು ಸಕಲಕೂ ದೂರವಾಗುವ ನರ
ನೋವು ಗರ್ವಗಳಿಂದ ಭರಿತ ಮಾನಸ ನರ
ಆದರೂ ಶೂನ್ಯ ...ಶೂನ್ಯನಾಗಿಹ ನರ
ಬಂಗಾರದರಮನೆಯಲಿ ರಾವಣರ ಸಾಕ್ಷಿಸಿದೆ
ದಂಡಕದ ಘನವನದಿ ರಾಮರಿರುವುದ ಕಂಡೆ
ದೇಹವಿದ್ದೂ ರುಂಡವಿಲ್ಲದ ಕಬಂಧರ ಕಂಡೆ
ಪರರ ಒಳಿತನು ಬಯಸಿ ಮನೆ ಮುರಿವ
ಕುಬ್ಜ ಮಾನಸ ಮಂಥರೆಯರ ಕಂಡೆ

4
ದಕ್ಕಿದ್ದನ್ನು ಗಳಿಸಿದ್ದನ್ನು ಉಳಿಸಿಕೊಳ್ಳಲಾಗದ ಜನರನ್ನು
ನಿತ್ಯವೆಂದು ನಂಬಿ ಮೆರೆದವರ ಗೋರಿಗಳನ್ನು
ನಿನ್ನ ಚರಣಕೆ ಅರ್ಪಣೆಗೊಂಡು ಬಾಡಿದ ಹೂಗಳನು
ನೆರಳನಿತ್ತ ಮರಗಳನು, ಜ್ಞಾನವಿತ್ತ ಗುರುಗಳನನು
ಕಂಡೆ ಎಲ್ಲವೂ ಧೂಳಾಗುವುದನು, ನಶ್ವರತೆಯನು
ಯಾವ ಮಸಿಯಲೂ ಬರೆಯದ ನಿನ್ನ ನಿಯಮಗಳಿಗೆ
ಪ್ರೀತಿ ವಿಶ್ವಾಸದಿಂದ ತಲೆಬಾಗುವುದ ಕಲಿತಿರುವೆ
ದೇಶಕಾಲದಿಂದಾಚೆ ಕಿಂಚಿತ್ ವಿಸ್ತಾರ ದೃಷ್ಟಿಸಲು
ಪರದುಃಖಾನುಭವದಿಂದ ತಿಳಿದು ಬಲಿತಿರುವೆ
ಇರುವುದೆಲ್ಲ ಸೌಭಾಗ್ಯ ಇಲ್ಲದಿರುವುದೂ ಭಾಗ್ಯ
ಎಂದು ಭಾವಿಸಿ ವ್ರೀಹಿಯನು, ಜನುಮನು ಸಾಗಿಸುತ್ತಿರುವೆ
ಧನ್ಯ ಧನ್ಯ ಹೇ ಮಹಾದೃಮ ! ಧನ್ಯ ಧನ್ಯ"

5
ವಿಚಾರದಲಿ ಮಗ್ನ ನಮ್ರತೆಯಲಿ ಸಾಗುತಿರೆ
ಓಡುತಿಹ ದನಗಳ ಗೊರಸಿನಡಿಗೆ
ಸಿಕ್ಕು ಹತವಾಯಿತು ಗತವಾಯಿತು ಪುಟ್ಟಜೀವ
ಆ ತುಂಡು ಕೆಂಪಕ್ಕಿ ಅಲ್ಲಿ ಇದೆ ಈಗಲೂ
ಭಗವಂತನಿಗೆ ವೇದ್ಯವಾಗಿ....... ನೈವೇದ್ಯವಾಗಿ

- *ಜಾನಕಿರಾಮ*

No comments:

Post a Comment