Wednesday, March 18, 2026

Beginning of Era ಯುಗದಾದಿ

                       ಯುಗದಾದಿ

ಮಂದಿರವೊಂದರ ಪ್ರಾಂಗಣದಿಂದ ಘಂಟಾನಾದವು ಕೇಳುತಿದೆ 
ಹಕ್ಕಿಗಳಿಂಚರ ನಭಸವ ಮೀರಿ ಚಾರುನಿನಾದವು ಏಳುತಿದೆ 
ತೇಜೋಯಾಮವನೇರಿದ ಜೀವನ ಮೂಡಣದಲ್ಲಿ ಮೂಡುತಿದೆ
ಕೋಕಿಲ ವೀಣಾನಾದವ ನುಡಿಸುತ ಸೃಷ್ಟಿಯು ಭೂಪದಿ ಹಾಡುತಿದೆ

ಕೆಂಬಿಸಿಲಿನ ಬಿಸಿ ಬೇಗೆಯ ನಡುವೆಯು ಮಾಮರ ಚಾಮರ ಬೀಸುತಿದೆ
ಬಯಲಲಿ ಮೇಯುತ ದಣಿದಾ ದನವದು ತಂಗೊಳದಲ್ಲಿ ಈಸುತಿದೆ
ಹಾಲುಗಾಳು ಮೈತುಂಬಿಸಿಕೊಂಡ ಜೋಳದ ತೆನೆಗಳು ಕುಣಿಯತಿವೆ
ಅಲ್ಲಿ ಇಲ್ಲಿ ತುಸುನಿಂತ ನೀರಿನಲಿ ಹಕ್ಕಿ ಬಾಯಿರಿಸಿ ತಣಿಯುತಿವೆ

ಸುಂದರ ಚಿಗುರಿನ ಹಂದರಿನಡಿಯಲಿ ಹಂಗಗಳೆರಡು ಉಲಿಯುತಿವೆ 
ಸೃಷ್ಠಿಯ ಸಿಂಗರದಾಟವ ನೋಡುತ ಸಿಂಗರದಾಟದಿ ನಲಿಯುತಿವೆ 
ಕ್ಷಣಗಳು ಹುಟ್ಟುವ, ಉರುಳುವ, ಕಳೆಯುವ ಪ್ರಗಮನ ಹೊಸತನ ತರುತಲಿದೆ 
ಬನ್ನಿರಿ ಬನ್ನಿರಿ ಸಿಹಿಯನು ತನ್ನಿರಿ ನವ ಯುಗದಾದಿಯು ಬರುತಲಿದೆ 

ಜಾನಕಿರಾಮ

( ಸೀತಾರಾಮ ಸುಧೀರ ಕಟ್ಟಿ)

No comments:

Post a Comment