ಅರ್ಜುನನ ಭ್ರಾತೃವಾತ್ಸಲ್ಯ - ದುಃಶಲೆ
ಮಹಾಭಾರತದಲ್ಲಿ ಸಹೋದರ-ಸಹೋದರಿಯರ ಭ್ರಾತೃತ್ವ, ಒಡನಾಟದ ಘಟನೆಗಳು ಅನಾವರಣಗೊಳ್ಳುತ್ತವೆ. ಕೃಷ್ಣ-ಸುಭದ್ರೆ, ದ್ರೌಪದೀ-ದೃಷ್ಟದ್ಯುಮ್ನ, ಕೃಷ್ಣ-ದ್ರೌಪದೀ, ಇವರಂತೆಯೇ ನೂರು ಜನ ಕೌರವರ ಒಬ್ಬಳೇ ತಂಗಿಯಾದ ದುಃಶಲೆ ಕುರಿತಾದ ಒಂದು ಘಟನೆ ಮನಸ್ಸನ್ನು ಕಲಕುತ್ತದೆ. ಮಹಾಭಾರತದಲ್ಲಿ ದುಃಶಲೆ ಕಾಣಿಸಿಕೊಳ್ಳುವ ಸಂದರ್ಭ ತೀರಾ ವಿರಳ. ಅದರಲ್ಲಿ ಇದೊಂದು.
ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಹಸ್ತಿನಾಪುರಕ್ಕೆ ಹಿಂದಿರುಗಿದರು. ಯುದ್ಧದಲ್ಲಿ ಬಂಧುಮಿತ್ರರೆಲ್ಲರನ್ನು ಕಳೆದುಕೊಂಡು ದುಃಖಿತರಾಗಿದ್ದ ಭೀಮಾರ್ಜುನ ಮತ್ತು ಯುಧಿಷ್ಠಿರರಿಗೆ ಅಶ್ವಮೇಧಯಾಗವನ್ನು ಮಾಡಲು ಗುರು ಧೌಮ್ಯರು ಸೂಚಿಸಿದರು. ಯುದ್ಧದಿಂದ ಸಂಪತ್ತು, ಸೇನೆ, ಎಲ್ಲವೂ ನಷ್ಟವಾಗುವುದರಿಂದ ಪುನಃ ರಾಜ್ಯಕೋಶಗಳನ್ನು ತುಂಬಿಸುವುದು ಅನಿವಾರ್ಯವಾಗುತ್ತದೆೆ. ಯುಧಿಷ್ಠಿರನು ತಮ್ಮಂದಿರೊಡನೆ ಸಮಾಲೋಚಿಸಿ ಯಜ್ಞಾಂಗವಾದ ಅಶ್ವವನ್ನು ಹೊರಡಿಸಿ ಅದರ ರಕ್ಷಣಾರ್ಥವಾಗಿ ಅರ್ಜುನನನ್ನು ಕಳಿಸಿದ. ಪಾಂಡವರು ಈ ಹಿಂದೆ ಜಯಿಸಿದ್ದ ಎಲ್ಲ ದೇಶಗಳಲ್ಲಿಯೂ ಕುದುರೆಯು ಸಂಚರಿಸತೊಡಗಿತು. ಕುರುಕ್ಷೇತ್ರಯುದ್ಧದಲ್ಲಿ ತಮ್ಮ ಬಂಧುಗಳನ್ನು, ರಾಜರನ್ನು ಕಳೆದುಕೊಂಡಿದ್ದ ಸಾವಿರಾರು ಕ್ಷತ್ರಿಯರು ತಮ್ಮ ಸೇಡುತೀರಿಸಿಕೊಳ್ಳಲು ಅರ್ಜುನನ ಮೇಲೆ ಯುದ್ಧಮಾಡಿದರು. ಆದರ ಸವ್ಯಸಾಚಿಯನ್ನು ಮಣಿಸಲಾಗದೆ ಕಪ್ಪಕಾಣಿಕೆಗಳನ್ನು ಒಪ್ಪಿಸಲೇ ಬೇಕಾಯಿತು. ಯಜ್ಞಾಶ್ವವನ್ನು ಅಡ್ಡಗಟ್ಟಿದ ತ್ರ‍್ರಿಗರ್ತರು, ಪ್ರಾಗ್ಜ್ಯೋತಿಷಪುರದ ವಜ್ರದತ್ತನನ್ನು ಅರ್ಜುನನು ಪರಾಭವಗೊಳಿಸಿದ ನಂತರ ಕುದುರೆಯು ಸಿಂಧೂದೇಶಕ್ಕೆ ಹೋಯಿತು.
ಭಾರತ ಯುದ್ಧದಲ್ಲಿ ಸೈಂಧವ ಜಯದ್ರಥನು ಅರ್ಜುನನ ಕೈಯಿಂದಲೇ ಹತನಾಗಿದ್ದನು. ಕೌರವರ ಒಬ್ಬಳೇ ಸೋದರಿ ದುಃಶಲೆಯು ಜಯದ್ರಥನ ಪತ್ನಿಯಾಗಿದ್ದಳು. ಕ್ಷತ್ರಿಯನಾದರೂ ಅನಾರ್ಯನಾಗಿದ್ದ ಜಯದ್ರಥ ಈ ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಯನ್ನು ಅಪಹರಿಸಲು ಪ್ರಯತ್ನಿಸಿ ಬೆನ್ನಟ್ಟಿ ಬಂದ ಪಾಂಡವರನ್ನು ಎದುರಿಸಲಾಗದೇ ಸೋತುಹೋಗಿದ್ದನು. ತಮ್ಮ ತಂಗಿಯಾದ ದುಃಶಲೆಯ ಪತಿಯಾದ ಕಾರಣದಿಂದ ಜಯದ್ರಥನನ್ನು ಕೊಲ್ಲದೇ ಅವನ ಗಡ್ಡ-ತಲೆಕೂದಲನ್ನು ಕತ್ತರಿಸಿ ವಿರೂಪಗೊಳಿಸಿ ಪಾಂಡವರು ಅವನನ್ನು ಬಿಟ್ಟುಕಳಿಸಿದ್ದರು. ಅಪಮಾನದ ಬೆಂಕಿ ಅವನನ್ನು ಸದಾ ಸುಡುತ್ತಲೇ ಇತ್ತು. ಮುಂದೆ ಜಯದ್ರಥನು ಭಾರತ ಯುದ್ಧದ ಸಮಯದಲ್ಲಿ ಕೌರವರ ಪಕ್ಷದಲ್ಲಿದ್ದು ಸೇನಾಧಿಪತ್ಯವನ್ನು ವಹಿಸಿ ಹೋರಾಡಿ ಅರ್ಜುನನನಿಂದ ಹತನಾಗಿದ್ದ. ಯಜ್ಞಾಶ್ವವು ಸಿಂಧೂದೇಶವನ್ನು ಪ್ರವೇಶಿಸಿದ ಕೂಡಲೇ ಸೈಂಧವರಾಜರೆಲ್ಲರೂ ಕುದುರೆಯನ್ನು ತಡೆದು ಅರ್ಜುನನ ಮೇಲೆ ಯುದ್ಧ ಸನ್ನದ್ಧರಾದರು. ಸೈಂಧವರು ಸಾಧಾರಣ ಯೋಧರು. ಧುರಂಧರನಾದ ಫಲ್ಗುಣನಿಗೂ ಸೈಂಧವರಿಗೂ ಯುದ್ಧ ಅನೇಕ ದಿನಗಳು ನಡೆದವು. ಅರ್ಜುನನ ಕೈಮೇಲಾಗಿ ಸೈಂಧವರೆಲ್ಲರೂ ದಣಿದು ಇನ್ನೇನು ಅವರ ಅಂತ್ಯ ಸಮೀಪಿಸಿದೆ ಎಂಬ ಸಮಯಕ್ಕೆ ಸರಿಯಾಗಿ ದುಃಶಲೆಯು ಬಾಲಕನೊಂದಿಗೆ ರಥದಿಂದ ಅಲ್ಲಿಗೆ ಬಂದಿಳಿದಳು
ಅರ್ಜುನನನ್ನು ಕಂಡೊಡನೇ ಆಕೆಯ ದುಃಖದ ಕಟ್ಟೆಯೊಡೆಯಿತು. ಆರ್ತಳಾಗಿ ಅಳುತ್ತಿದ್ದ ದುಃಶಲೆಯನ್ನು ಕಂಡೊಡನೆ ಅರ್ಜುನನು ಧನುಸ್ಸನ್ನು ಕೈಬಿಟ್ಟು ಆಕೆಯನ್ನು ಸಂತೈಸತೊಡಗಿದನು. ಇದೊಂದು ಮನಕಲಕುವ ಸನ್ನಿವೇಶ. ಭ್ರಾತೃಗಳ ಮಧ್ಯೆ ವೈಮನಸ್ಸು ದ್ವೇಷದ ಭಾವನೆಗಳು ಇದ್ದರೂ ಕೌರವರ-ಪಾಂಡವರಿಬ್ಬರಿಗೂ ಈಕೆಯೊಬ್ಬಳೇ ಸಹೋದರಿ. ಕ್ಷತ್ರಿಯಧರ್ಮ ಪಾಲನೆಗಾಗಿ ಯುದ್ಧ ನಡೆದರೂ ಆಕೆಯನ್ನು ಕಂಡಾಗ ಅರ್ಜುನನಲ್ಲಿ ಸಹಜವಾದ ಸೋದರವಾತ್ಸಲ್ಯ ಮೈದೋರಿತು. ಅರ್ಜುನನು ತಂಗಿಗೆ ನಾನು ನಿನಗಾಗಿ ಏನು ಮಾಡಲಿ? ಈ ಮಗುವಿನ ತಂದೆ ಎಲ್ಲಿ? ಎಂದ ಪ್ರಶ್ನಿಸಿದಾಗ ದುಃಶಲೆಯು ತನ್ನ ವ್ಯಥೆಯನ್ನು ತೋಡಿಕೊಳ್ಳುತ್ತಾಳೆ. ಆ ಚಿಕ್ಕಬಾಲಕ ಬೇರಾರೂ ಆಗಿರದೇ ಜಯದ್ರಥನ ಮಗ ಸುರಥನ ಮಗ, ಆಕೆಯ ಮೊಮ್ಮಗನಾಗಿದ್ದ. ಸೋದರನಾದ ಅರ್ಜುನನೆದುರು ದೀನದನಿಯಿಂದ “ಅರ್ಜುನ, ಯುದ್ಧದಲ್ಲಿ ತಂದೆಯು ಮರಣಹೊಂದಿದ ನಂತರ ಸುರಥನು ಪಿತೃಶೋಕದಿಂದ ಸಂತಪ್ತನಾಗಿದ್ದನು. ನೀನು ಯಾಗಾಶ್ವದೊಂದಿಗೆ ಹೊರಟು ಎಲ್ಲ ರಾಜರೊಂದಿಗೆ ಯುದ್ಧಮಾಡುತ್ತಿದ್ದು ನಮ್ಮ ದೇಶಕ್ಕೆ ಬಂದ ವಾರ್ತೆ ತಲುಪಿದೊಡನೆ ಭೀತಿಯಿಂದ ತನ್ನ ಪ್ರಾಣವನ್ನೇ ತೊರೆದುಬಿಟ್ಟ. ಮಗ ಪ್ರಾಣ ಬಿಟ್ಟಿದ್ದನ್ನು ನೋಡಿ ದಿಕ್ಕುತೋಚದೇ ಅವನ ಮಗನನ್ನು ಕರೆದುಕೊಂಡು ರಕ್ಷಣೆಗಾಗಿ ನಾನು ನಿನ್ನಲ್ಲಿಗೆ ಬಂದಿರುವೆ” ಎಂದು ವಿಲಪಿಸುವಾಗ ಅರ್ಜುನನು ದುಃಖ ವಿವ್ಹಲನಾದನು.
ದುಃಶಲೆಯು ಮುಂದುವರೆಯುತ್ತಾ “ಕುರುಶ್ರೇಷ್ಠನೇ, ನನ್ನ ಮಂದಬುದ್ಧಿಯ ದುಷ್ಟಅಣ್ಣನಾದ ದುರ್ಯೋಧನನನ್ನು ಮತ್ತು ದುರಾಚಾರಿಯಾಗಿದ್ದ ನನ್ನ ಪತಿಯು ಮಾಡಿದ ದುಷ್ಕಾರ್ಯವನ್ನು ಮರೆತುಬಿಡು ಕ್ಷಮಿಸು, ಕ್ರೂರಿಯಾದ ಈ ಬಾಲಕನ ಪಿತಾಮಹನನ್ನು ಮರೆತು ಈ ಮಗುವಿನ ವಿಷಯದಲ್ಲಿ ಪ್ರಸನ್ನನಾಗು. ನಿನ್ನ ಮೊಮ್ಮಗನಾದ ಪರೀಕ್ಷಿತನು ಹೇಗೋ ಹಾಗೆಯೇ ಸುರಥನ ಮಗನೂ ಕೂಡ. ಈ ನಿನ್ನ ತಂಗಿಯ ಮೊಮ್ಮಗನನ್ನು ನೋಡು, ಎಳೆ ಹಸುಳೆಯಾದ ಇವನ ವಿಷಯವಾಗಿ ಕರುಣೆ ತೋರು. ಈ ಯುದ್ಧವನ್ನು ನಿಲ್ಲಿಸಿ ” ಎಂದು ಒಂದೇ ಸಮನೆ ಕಣ್ಣೀರುಗರೆಯುತ್ತಿದ್ದ ತಂಗಿಯ ಕರುಣಾಜನಕ ಮಾತಿನಿಂದ ಅರ್ಜುನನು ದುಃಖ ಶೋಕಪೀಡಿತನಾದನು. ಪಿತೃವ್ಯ ಧೃತರಾಷ್ಟ್ರ-ಗಾಂಧಾರಿಯರ ಸ್ಮರಣೆಯುಂಟಾಗಿ ಅವನ ಕಣ್ಣಂಚು ಒದ್ದೆಯಾಯಿತು. ಇದೆಲ್ಲಕ್ಕೂ ಕಾರಣಭೂತವಾದ ಕ್ಷಾತ್ರಧರ್ಮದ ಬಗ್ಗೆ ಯೋಚಿಸಿ ತಂಗಿಯನ್ನು ಪ್ರೀತಿಯಿಂದ ಸಂತೈಸಿ ಸತ್ಕರಿಸಿ ಯುದ್ಧವನ್ನು ಅಂತ್ಯಗೊಳಿಸಿದನು.

No comments:
Post a Comment