ಗಂಧಮಾದನ ಋಷಿ. ( ಪೂರ್ವದಲ್ಲಿ ಗಂಧರ್ವ)
ಪಾಂಡವರು ತಮ್ಮ ಬೊಕ್ಕಸವನ್ನೂ ಮತ್ತು ರಾಜ್ಯವನ್ನು ವಿಸ್ತರಿಸಲು ಬಲಾಢ್ಯ ರಾಷ್ಟ್ರಗಳನ್ನು ಗೆದ್ದು ಮಾಂಡಲೀಕರನ್ನಾಗಿ ಮಾಡಿಕೊಂಡು ಸುಭೀಕ್ಷ ರಾಜ್ಯದ ಸಾಮ್ರಾಟರಾಗಿ ಬೆಳೆಯಲು ರಾಜಸೂಯ ಯಾಗ ಮಾಡುವುದಕ್ಕೆ ನಿರ್ಧರಿಸಿ ಕೌರವ ರಾಜ ಧೃತರಾಷ್ಟ್ರ, ಶ್ರೀ ಕೃಷ್ಣ, ಪಿತಾಮಹ ಭೀಷ್ಮ, ಗುರು ದ್ರೋಣ, ಕುಲಗುರು ಕೃಪಾಚಾರ್ಯರು, ತಾಯಿ ಕುಂತೀ ದೇವಿ ಮತ್ತು ತನ್ನ ಸಹೋದರರ ಜೊತೆ ಸಮಾಲೋಚನೆ ಮಾಡಿ ಕಾರ್ಯಕ್ಕೆ ಅಣಿಯಾದರು
ಧರ್ಮರಾಜನು ಯಜಮಾನನಾಗಿ ವ್ರತಸ್ಥನಾದ, ವೇದೋತ್ತಮ ವಿಪ್ರಮಂಡಳಿ, ಹಿರಿಯರು ಯಾಗಕ್ಕೆ ನಿಯಮಿಸಲಾಗಿದ್ದರೆ, ಬಂಧು ಬಾಂಧವರು, ಅತಿಥಿ ಅಭ್ಯಾಗತರಿಗೆ ಉಳಿದುಕೊಳ್ಳುವ, ಊಟೋಪಚಾರಗಳ ವ್ಯವಸ್ಥೆ ನೋಡಿಕೊಳ್ಳಲು ನಕುಲ ಸಹದೇವರನ್ನು ನೇಮಿಸಲಾಯಿತು. ಪೂರ್ಣ ಯಾಗದ ಉಸ್ತುವಾರಿಯನ್ನು ಪಿತಾಮಹ ಭೀಷ್ಮರಿಗೆ ವಿನಂತಿಸಿದರು.
ದಂಡಯಾತ್ರೆಗಾಗಿ ಚದುರಂಗ ಸೈನ್ಯ ಸಹಿತ ಗಾಂಢೀವಿಯನ್ನು ಪಶ್ಚಿಮ -ದಕ್ಷಿಣದ ದೇಶಗಳಿಗೂ, ಉತ್ತರ ಪೂರ್ವ ದೇಶಗಳಿಗೆ ಬಲಾಢ್ಯ ವೃಕೋದರನನ್ನು ಬೀಳ್ಕೊಡಲಾಯಿತು.
ಬಲಭೀಮನು ಸಾಮೋಚಾರದಿಂದಲೂ, ತನ್ನ ಶೌರ್ಯ ಕಾರ್ಯದ ವೈಖರಿಯಿಂದಲೇ ಸುಮಾರು ರಾಜರುಗಳು ಹೆದರಿ ಕೈವಶರಾಗಿ ಮಾಂಡಲೀಕರಾದರು. ಎದುರಿಸಿದ ನೀರನ್ನು ಹಿಮ್ಮೆಟ್ಟಿ ಅವರಿಂದ ಕಪ್ಪು ಕಾಣಿಕೆಗಳನ್ನು, ಕಾಲ್ದಳ ಸೈನಿಕರನ್ನು, ಕುದುರೆ, ಆನೆಗಳನ್ನೂ ಸವಾರರನ್ನು, ಪಶುಧನವನ್ನೂ ಅಲ್ಲದೆ ಸೇವಕ ಸೇವಕಿಯರನ್ನು ಸಹಿತ ಅಗಣಿತ ದ್ರವ್ಯ ದೊಡನೆ ದಂಡಯಾತ್ರೆ ಮುಗಿಸಿ ಹಿಂತಿರುಗಿ ಬಂದನು.
ಯಾಗಕ್ಕೆ ಆಗಮಿಸಿದ ಋಷಿಗಳು, ಬ್ರಾಹ್ಮಣರು, ಅತಿಥಿಗಳು, ಪ್ರಜೆಗಳು, ರಾಜರುಗಳ ಎಲ್ಲರ ಊಟದ ವ್ಯವಸ್ಥೆಯನ್ನು ನೋಡಲು, ಊಟಕ್ಕೆ ಬಡಿಸುವ ಕೆಲಸವನ್ನು ಭೀಮನು ತಾನೇ ಮಾಡಲು ನಿಂತನು, ತಾನು ಸ್ವತಃ ಪಾಕ ಪ್ರವೀಣನಾದ್ದರಿಂದ ಎಲ್ಲವೂ ಸಾಂಗವಾಗಿ ನೆರವೇರುತ್ತಿತ್ತು. ತನ್ನ ಕೈಯಿಂದಲೇ ಬಡಿಸುತ್ತಿದ್ದನಾದ್ದರಿಂದ ಒತ್ತಾಯಿಸಿ ಆಗ್ರಹಮಾಡುತ್ತಲೇ ಹೆಚ್ಚು ಬಡಿಸುತ್ತಿದ್ದ, ಊಟ ಮುಗಿಸಿ ತಿನ್ನದೇ ಪಾತ್ರದಲ್ಲಿ ಉಳಿಸಿ ಚೆಲ್ಲಿ ಏಳುತ್ತಿರುವವರಿಗೆ ಮಾತ್ರ ತಿನ್ನುವಂತೆ ಒತ್ತಾಯಿಸಿ ಗದರಿಸುತ್ತಿದ್ದ
ಭೀಮನ ದರ್ಪ, ಬೆದರಿಕೆಯಿಂದ ಭೀತಿಯಿಂದ ಉಳಿದ ಉಪ್ಪನ್ನು ಸಹ ಬಿಡದೆ ಬಾಳೆಎಲೆಯನ್ನೂ ಮುದುರಿ ತಿಂದೇ ಕೇಳುತ್ತಿದ್ದರು. ಇವನ ಅರ್ಭಟ ಅದರ ಪರಿಣಾಮ ಎಲ್ಲವೂ ಒಮ್ಮೆ ಶ್ರೀ ಕೃಷ್ಣನ ಕಣ್ಣಿಗೆ ಬಿತ್ತು. ಅನ್ನ ಉಳಿಸಿ ಚೆಲ್ಲಬಾರದೇನೋ ಸರಿ ಆದರೆ ಈ ರೀತಿ ಅಹಂಕಾರದಿಂದ ಗದರಿಸುವುದು ಸರಿಯಲ್ಲ ಎನಿಸಿದರೂ, ಭೀಮ ಏನೂ ಕೇಳುವವನಲ್ಲ ಆದ್ದರಿಂದ ಉಪಾಯದಿಂದ ತಿಳಿ ಹೇಳಬೇಕು ಎಂದು ಕೃಷ್ಣ ನಿರ್ಧರಿಸಿದ.
ಯಾಗದ ಅನ್ನಸಂತರ್ಪಣೆ ಪ್ರಸಾದಕ್ಕೆ ಸಾಮಾನ್ಯವಾಗಿ ಎಲ್ಲರೂ ಬಂದು ಹೋದಂತಿದೆ,ಆದರೆ ತ್ರೇತಾಯುಗದಲ್ಲಿಯ ಶ್ರೀರಾಮಚಂದ್ರ ದೇವರ ಹೆಜ್ಜೆಗುರುತುಗಳಿರುವ, ರಾಮ ಲಕ್ಷ್ಮಣರು ಸೀತೆಮಾತೆಯನ್ನು ಹುಡುಕುವಾಗ ವಿಭೀಷಣನನ್ನು ಭೇಟಿಯಾದ ಮತ್ತು ಲಂಕಾ ಯುದ್ಧಕ್ಕೆ ಯೋಜನೆ ರೂಪಿಸಿದ ಸ್ಥಳ ಮತ್ತು ಲಕ್ಷ್ಮಣದೇವರು ಮೂರ್ಛೆ ಬಿದ್ದಾಗ ಹಿಮಾಲಯದದಿಂದ ಹನುಮಂತ ದೇವರು ಹೊತ್ತು ತಂದ ಸಂಜೀವಿನಿ ಮೂಲಿಕೆಯ ಸಸ್ಯಗಳಿಂದ ತುಂಬಿದ ಆ ಪರ್ವತವೇ ದ್ವಾಪರಯುಗದ ಗಂಧಮಾದನ ಬೆಟ್ಟ ಸಾಕ್ಷಿ ಹನುಮಾನ್ ದೇವಸ್ಥಾನದ ಮತ್ತು ಸುಗ್ರೀವತೀರ್ಥದ ಹತ್ತಿರದಲ್ಲಿದ್ದ ಗಂಧಮಾದನ ಪರ್ವತ ಭಾಗದಲ್ಲಿ ವಾಸಿಸುತ್ತಿದ್ದ ಪ್ರಜೆಗಳು ರಾಜರು ಋಷಿಗಳು ವಿಶೇಷವಾಗಿ ಋಷಿ ತುಲ್ಯ ಗಂಧರ್ವನೊಬ್ಬರು ಇನ್ನೂ ಬಂದಂತಿಲ್ಲ ಅವರನ್ನೂ ಆಮಂತ್ರಿಸ ಬೇಕು. ಎಂದು ಶ್ರೀ ಕೃಷ್ಣ ಯೋಚಿಸಿ ಅದಕ್ಕೆ ಯುವರಾಜನಾದ ಭೀಮಸೇನನನ್ನೆ ಕಳಿಸುವುದು ಸೂಕ್ತ ಎಂದು ನಿರ್ಧರಿಸಿದರು.
ವಿಶಾಲಕಾಯದ, ಬಲಿಷ್ಠ ಗರಡಿಯಲ್ಲಿ ಪಳಗಿದ ಶರೀರ ದರ್ಪದಿಂದಲೂ ಆಢ್ಯತೆಯಿಂದಲೂ ತನ್ನ ಪ್ರಚಂಡ ಗದೆಯನ್ನು ಎತ್ತಿ ಅಣ್ಣನ, ಶ್ರೀ ಕೃಷ್ಣನ ಅನುಮತಿ ಪಡೆದು ದಕ್ಷಿಣಕ್ಕೆ ಹೊರಟು ಗಂಧಮಾದನ ಪರ್ವತ ಶ್ರೇಣಿಯ ಮೊದಲ ಹಂತದಲ್ಲಿ ಬಂದಾಗ ಮುಂದುವರಿದ ದಟ್ಟವಾದ ಅರಣ್ಯದ ಕಡಿದಾದ ದಾರಿಯಲ್ಲಿ ಹೋಗುವಾಗ ಭೀಮನಿಗೆ ಪಕ್ಕದಲ್ಲಿ ಒಂದು ಗುಹೆ ಕಾಣುತ್ತದೆ. ಏಕೋ ಹೊಲಸು ಮಲದ ವಾಸನೆ ಬರುತ್ತಿರುತ್ತದೆ, ಎದುರು ದೊಡ್ಡದೊಂದು ಕಲ್ಲಿನ ಮೇಲೆ ಬಲಿಷ್ಠ ಸುಂದರ ದೇಹದ ಋಷಿ ಸದೃಶ ಆಕೃತಿ ಆದರೆ ಮುಖ ಮಾತ್ರ ಹೊಲಸು ನಾರುತ್ತಿರುವ ಹಂದಿಯ ಮುಖ, ಗಾಬರಿಯಾಗಿ ಕರುಣೆಯಿಂದ ವೃಕೋದರನು ವ್ಯಕ್ತಿ ಪರಿಚಯ ಕೇಳುತ್ತಾನೆ.
ನೀನೀಗ ಯುವರಾಜ ಪಾಂಡು ಪುತ್ರ ಪ್ರತಾಪಿ ಭೀಮಸೇನ, ನಿನ್ನನ್ನು ಶ್ರೀ ಕೃಷ್ಣದೇವರು ನನ್ನೆಡೆಗೆ ಏಕೆ ಕಳಿಸಿದ್ದಾರೆ ನನಗೆ ಎಲ್ಲವೂ ಗೊತ್ತು ಮನುಷ್ಯನಿಗೆ ಯೋಗ್ಯ ಉತ್ತಮ ಪರೋಪಕಾರ ಎಸಗುವ ಸದಭಿಮಾನ ಇರಬೇಕೆ ವಿನಃ ಶಕ್ತಿ ಇದೆ ಎಂದು ಶಿಷ್ಟರನ್ನು ಶಿಕ್ಷೆಗೆ ತಳ್ಳುವ ಶೋಷಿಸುವ ಭೀತಿಗೊಳಿಸುವ ದುರಹಂಕಾರ ಇರಬಾರದು ಇದಕ್ಕೆ ನಾನೇ ಸಾಕ್ಷಿ ನಾನು ಒಬ್ಬ ನತದೃಷ್ಟ ಗಂಧರ್ವ, ಶಾಪದಿಂದ ಭೂಲೋಕದಲ್ಲಿ ರಾಜಕುಲದಲ್ಲಿ ಜನಿಸಿದೆ, ಬಲಶಾಲಿಯೂ ಆಗಿದ್ದೆ. ಆದರೇ ಆ ಒಂದು ಅಹಂಭಾವದಿಂದ ಜನರನ್ನು, ಶಿಷ್ಟರನ್ನು, ಬ್ರಾಹ್ಮಣರನ್ನು ಅತಿಯಾಗಿ ಪೀಡಿಸುತ್ತಿದ್ದೆ.
ಒಂದು ದಿನ ಅದೇ ಸೊಕ್ಕಿನಲ್ಲಿ ಓರ್ವ ವೃದ್ಧ ತೇಜಸ್ವಿ ವಿಪ್ರನನ್ನು ಮನ ನೋಯಿಸುವ ತೆರ ಕಾಡಿಸುತ್ತಿದ್ದಾಗ ಅವರು ಕೋಪದಿಂದ 'ಎಲೈ ! ಹೊಲಸು ಬಾಯಿ ಹುಳುವೇ ಸೂಕರ ಮುಖನಾಗಿ ಹೋಗು' ಎಂದು ಶ್ರೀ ದುರ್ವಾಸ ಮಹರ್ಷಿಗಳು ಶಪಿಸಿದರು. ಅಂದಿನಿಂದ ಸಮಾಜದಿಂದ ದೂರ ಉಳಿದು ಏಕಾಂಗಿಯಾಗಿ ಏಕಾಂತದಲ್ಲಿ ಜೀವಿಸುತ್ತ ನರಕಯಾತನೆ ಅನುಭವಿಸುತ್ತಲಿರುವೆ...ಭೀಮ.. ಎಂದು ಹತಾಶರಾಗಿ ಹೇಳುತ್ತಿರುವುದನ್ನು ಕೇಳುತ್ತಾ ಶ್ರೀ ಕೃಷ್ಣನ ಸದುದ್ದೇಶವನ್ನು ಅರಿತು, ನನ್ನನ್ನು ದೋಷರಹಿತನಾಗಿಸುವ ನನ್ನ ಮೇಲೆ ಇರುವ ಆತ್ಮೀಯ ಕಾಳಜಿಯನ್ನು ನೆನೆಯುತ್ತಾ ಕೃತಜ್ಞತೆಯಿಂದ ತಲೆಬಾಗಿದ.
ಅನನ್ಯ ಭಾವದಿಂದ, ತನ್ನ ಉತ್ತರೀಯದಲ್ಲಿ ಕಟ್ಟಿಕೊಂಡ ಆಮಂತ್ರಣದ ಶ್ರೀ ಕೃಷ್ಣನು ಕೊಟ್ಟ ಮಂತ್ರಯುತ ಯಜ್ಞಾಕ್ಷತೆಗಳನ್ನು ಗಂಧಮಾದನ ಋಷಿಗಳ ಕೈಯಲ್ಲಿ ಕೊಟ್ಟು ಭೀಮನು ಸಾಷ್ಟಾಂಗ ನಮಸ್ಕಾರ ಮಾಡಿ ಮೇಲ್ನೋಡಿದಾಗ ಹಂದಿಯ ಮುಖ ಮಾಯವಾಗಿ ಸುಂದರ ಮಾನವ ಮುಖದ ಗಂಧರ್ವನಾಗಿ ಪರಿವರ್ತನೆಯಾದ ಕಾರಣ ಮುಂದಿರುವ ವಾಯುಪುತ್ರ ಕೌಂತೇಯ ವೃಕೋದರನನ್ನೇ ಆನಂದದಿಂದ ಬಿಗಿದಪ್ಪಿಕೊಂಡಾಗ ಇಬ್ಬರೂ ಕಣ್ಣುಗಳು ಒದ್ದೆಯಾಗಿದ್ದವು.

No comments:
Post a Comment