ಶ್ರೀ ಶನೈಶ್ಚರ ಚರಿತಂ ೧ / ೧೨೧ ರಿಂದ ೧೪೮
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
ಪ್ರಥಮ ಸಂಧಿ (೧೨೧ ರಿಂದ ೧೪೮)
|| श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ ಒಟ್ಟು ಐದು ಸಂಧಿಗಳು )
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,
ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ ಶ್ರೀ ಶನೈಶ್ಚರ ಚಕ್ರಂ ಸಹಿತ )
ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ ಪ್ರಥಮ ಸಂಧಿ (೧೨೧ ರಿಂದ ೧೪೮)
ಇಷ್ಟ ಲಿಂಗದು ಶನೈಶ್ಚರನಿಗೆ | ನಿಷ್ಠೆಯಿಂ ಪೂಜೆಯನು ಮಾಳ್ಪರ | ಕಷ್ಟ ಸಂಕಟ ದುರಿತ ದೂರಿ ಕರಿಸುವುದು ಎಂದ ||೧೨೧||
ಕಡುಮಮತೆಯಲಿ ತಲೆಮೇಲೆ ಕೈಯನು | ಇಡುತೆ ಹರಿಸಿದ ಶುಭವನಿನಗಿದೆ | ಮೃಡನು ಅಂತರ್ಧಾನ ಗೌಪ್ಯನು ಆದನೆದರಿನಲಿ ||೧೨೨||
ಶನಿಯು ಸಾಷ್ಟಾಂಗವನೆ ಹಾಕಿದ | ಕೊನೆಗೆ ಉತ್ತರ ಪೂಜೆ ಮುಗಿಸಿಯೇ | ವಿನಯದಿಂದಲೇ ಹೊರಟು ನಡೆದನು ಮೇರುಗಿರಿಎಡೆಗೆ ||೧೨೩||
ಮಾತೃ ಸ್ಥಾನವು ಶೋಧಿಸುತೆ ಅಣು | ಮಾತ್ರ ಚಿತ್ತವು ಸುಳಿವು ಹೊಳವು ಗ - | ಳೆತ್ತಿ ಅತ್ತಲು ನೋಡುತಿರೆ ಕುರುಹೊಂದು ದೊರಕಿಹುದು ||೧೨೪||
ದೇವತೆಗಳಾ ಹೆಜ್ಜೆ ಗುರುತಿಸೆ | ಧಾವಿಸಿದ ಒಂದೆರಡು ಕಂಡವು | ಠಾವಿನಿಂ ರವಿ ಪಾದ ಎಂಬುದು ತಿಳಿದು ನಮಿಸಿದನು || ೧೨೫ ||
ಮುಂದೆ ಮುಂದೆಡ ಸಾಗುತಿರಲಾ | ನಿಂದ ತಾಯಿಯ ತಪದ ಸ್ಥಳದೊಳು | ಚಂದ್ರ ಲಾಳದ ಹೆಜ್ಜೆ ಎಂಟಡಿಗಳನು ಗುರುತಿಸಿದ ||೧೨೬||
ಲಾಳ ಗುರುತನು ಹುಡುಕಿ ನಡೆಯಲು | ಕಾಳ ವಿಂಧ್ಯದ ಕಪ್ಪು ಗಿರಿಯೆಡೆ | ನೋಳ್ಪುವುದರೋಳ್ ತಂಗಿ ಮನೆಯನು ಕಂಡ ಕ್ಷಣದೊಳಗೆ ||೧೨೭||
ತಂಗಿ ಕಂಡೊಡೆ ಹರುಷದಿಂದಲಿ | ಇಂಗಿತವು ಇದು ಏನು ಎಂದೊಳೆ | ಮಂಗಳದ ಸೂತ್ರಾಧಿಪತಿ ಕಾಳಿಂದ ಗಿರಿರಾಯ || ೧೨೮ ||
ಕಪ್ಪು ಹಸಿರಿನ ವರ್ಣ ತಿರುಗಿದ | ಒಪ್ಪು ಪತಿ ರೂಪವನು ಧರಿಸಿದ | ಇಪ್ಪ ತನ್ನಯ ಕತೆಯ ಪೇಳಿದ ಯಮುನೆ ಸೌಭಾಗ್ಯ ||೧೨೯ ||
ಅಣ್ಣ ತಿರುಗುವುದೇನು ಕಾರಣ | ಸಣ್ಣ ಮುಖವನೆ ಮಾಡಿ ಕುಳಿತಿಹೆ | ಬಣ್ಣ ಗೆಟ್ಟಿಹ ನನ್ನ ಬಗೆಗೆ ಚಿಂತೆ ನಿನಗಾಯ್ತೆ ||೧೩೦ ||
ಹಸಿರು ನೀಲಿಹ ಪತಿಯು ವರ್ಣದಿ | ರಸವಿಸಿಯೇ ಹರಿದಿಹೆನು ಬೆಳ್ಳನ | ಹಸನ ನೀರದು ಕಪ್ಪು ವರ್ಣದಿ ತಿರುಗಿ ತಿರುಗಿರುವೆ ||೧೩೧ ||
ಓಘದಲಿ ಪೋದೆಡೆ ಮುಂದೆ ಗಂ -| ಗೌಘ ಕೂಡಿದೆ ಉದಯ ಚಲದೆಡೆ | ಬಾಗಿ ಸಾಗಿದೆ ಅಷ್ಟದಿಸೆಗಳ ವ್ಯಾಪಿಸಿದೆ ಮುಂದೆ ||೧೩೨ ||
ತಂದೆ ಕೈಪಿಡಿದೆನ್ನ ಪೃಥ್ವಿಯ | ಹೊಂದಿಸಿದ ಕಾಳಿಂದಿ ನಾಮವು | ಇಂದು ಪಡೆದೆನು ಸಪ್ತ ಸಾಗರ ಕೂಡಿ ಒಡನಾಡಿ ||೧೩೩ ||
ತಂಗಿ ಯಮುನೆಯೇ ಪ್ರಮಾದವೇ ತು -| ರಂಗರಾಗಿಯೇ ತಂದೆತಾಯಿ ಗ- | ಳಂಗ ಬದಲಿಸಿ ಹೋಗಿ ತಿರುಗುತೆ ಪೋದರವರೆಲ್ಲಿ ||೧೩೪ ||
ಎಂಬುದನು ಹುಡುಕುತಲೇ ನಡೆದಿಹೆ | ಅಂಬು ದೇವಿಯೇ ನಿನ್ನ ಕಂಡೆನು | ಮುಂಬರುವ ಕುರುಹನ್ನೇ ಅರಿತಿಹೆ ನೀನೆ ಪಾವನೆಯು ||೧೩೫ ||
ಹಯದ ರೂಹನು ಬದಲಿಸಲ್ಕೆಯು | ದಯದ ಉದಕಯು ನಿನ್ನದಾಗಿದೆ | ದಯದಿ ನಿನ್ನಯ ನೆನೆದೊಡನೆ ಬರಬೇಕು ಕೇಳೆಂದ ||೧೩೬ ||
ಲಾಳ ಹೆಜ್ಜೆಯ ಹುಡುಕಿ ಬಂದೆನು | ಕಾಳ ಪರ್ವತ ರಾಜ ಕಂಡೆನು | ತಾಳಿ ಕೊಳ್ಳೌ ತಿರುಗಿ ಬರುವೆನು ಹೊರಟ ಶನಿರಾಯ ||೧೩೭ ||
ಚಿತ್ತ ಐಕ್ಯತೆ ತಾಯ ಅಡಿಯೊಳು | ಮತ್ತೆ ಮುಂದಕೆ ನಡೆದು ನೋಡುತೆ | ಸುತ್ತರಿದ ನವಖಂಡ ಪೃಥ್ವಿಯ ಪರಿಘ ತಿರುಗಿದೆನು ||೧೩೮ ||
ಕಟ್ಟಕಡೆಯಲಿ ಉದಯಚಲದಡಿ | ದಿಟ್ಟಿ ಇಡುತಿರೆ ಎದುರು ಹಯಗಳು | ತಟ್ಟನೆಯೇ ನೆನೆ ತಂಗಿ ಯಮುನೆ ಹರಿದು ಬಂದಿಹಳು ||೧೩೯||
ಯಮುನೆ ಹರಿಯುತ ಒಲವಿನಿಂದಲಿ | ಶಮನ ಗೈದಳು ಹಯದ ರೂಹವ | ನಮನ ಗೈದರು ಶನಿಯುಯಮುನೆಯು ತಂದೆತಾಯರಿಗೆ ||೧೪೦||
ತಾಯಿ ಸಂಜ್ನೆಯ ಅಪ್ಪಿ ಶನಿ ತಾ - | ಕಾಯ ಕಲ್ಪ ತರುವನ್ನು ನಂಬಿದ | ಪ್ರಿಯ ನಿನ್ನಯ ಪಾದ ಲಾಳವೇ ನನ್ನ ಮೂರುತಿಯು ||೧೪೧ ||
ಅಮರರೆಲ್ಲರು ಅಮರಪುರಿಯಿಂ | ಸುಮನ ವೃಷ್ಟಿಯ ಮಾಡಿ ಜಯ ಜಯ | ಚಮರವಾಡಿಸಿ ಸಂಜ್ಞಸುತ ಸಂಸ್ತುತನ ಕೊಂಡಾಡಿ ||೧೪೨||
ಶನಿಯ ನೆನವಿಗೆ ಅವನ ಲೋಕವೇ | ವನಿತೆ ಶತ ಕಂಕಣೆಯ ಕೂಡಿಯೇ | ಘನತೆಯಿಂ ಬಾಳಿದನು ದೇವತೆಗಳಿಗೆ ಮಿಗಿಲಾಗಿ ||೧೪೩||
ತಂದೆ ತಾಯಿಯ ಸೇವೆ ಗೈದನು | ಇಂದುಧರ ಪ್ರಸನ್ನ ಪಡೆದನು | ಸಂಡಿದನು ಶಿವ ಸನ್ನಿಧಾನದಿ ಶ್ರೇಷ್ಠ ಗ್ರಹನೆಂದು ||೧೪೪||
ವಿರಹಿಗಳಿಗಿದು ಒಂದು ಮಾಳ್ಪುದು | ತರುಳರೊಳು ನಿಷ್ಟೆಯನು ಪುಟ್ಟಿಪ ದುರುಳರಿಂ ರಕ್ಷಿಪುದು ಕೇಳೆ ಕಥೆಯು ಶನಿ ಜನುಮ ||೧೪೫||
ಸರಳಗನ್ನಡ ಭಾಷೆಯಲಿ ಕಥೆ | ಬರೆಹದಿಂ ವರ್ಣಿಸಿದೆ ನ್ಯೂನತೆ - | ಬರದತೆರ ಅರ್ಥವನು ಬುದ್ಧಿಗೆ ನೀಡಿ ಶನಿದೇವ ||೧೪೬||
ಇಂತಿಶ್ರೀ ಶನೈಶ್ಚರ ಚರಿ ತಾ - | ದ್ಯಂತ ಸ್ಫೂರ್ತಿಯ ನೀಡುತಿರೆ ತಾ - | ನಾಂತು ಮಹತಿಯು ಗೈಮೆ ಶ್ರೀ ಗೋವಿಂದರಾಜಮರ ||೧೪೭||
ಇತಿ ಪುರಾತಿಹದ ಕಥೆಗಳು | ಮಥಿಸಿ ಸೀತಾರಾಮ ತುಳಸಾ - | ಸುತನಸವಿಗತೆ ಪ್ರಥಮದ ಶ್ರೀ ಕೃಷ್ಣ ಅರ್ಪಣೆಯು ||೧೪೮||
ಇಂತಿ ಶ್ರೀ ಶನೈಶ್ಚರ ಚರಿತಂ ಪುರಾಣದೋಳ್ ಪ್ರಥಮ ಸವಿಗಥಾ ಸಂಧಿ ಒಂದಕ್ಕುಂ ಪರಿಪೂರ್ಣಂ
ಮುಂದಿನ ಸಂಚಿಕೆಯಲ್ಲಿ ದ್ವಿತೀಯ ಸಂಧಿ ಪ್ರಾರಂಭ ಕ್ರಮಶಃ
No comments:
Post a Comment