Wednesday, July 29, 2020

Shri VISHNU Chants (ಶ್ರೀ ವಿಷ್ಣು ಮಂತ್ರಗಳು)


ಶ್ರೀ ವಿಷ್ಣು ಮಂತ್ರಗಳು: ಇಲ್ಲಿದೆ ಭಗವಾನ್‌ ವಿಷ್ಣುವಿನ 10 ವಿವಿಧ ಮಂತ್ರಗಳು
ಭಗವಾನ್‌ ವಿಷ್ಣುವನ್ನು ಪೂಜಿಸುವಾಗ ಆತನಿಗೆ ಸಂಬಂಧಿಸಿದ ಮಂತ್ರಗಳನ್ನು, ಶ್ಲೋಕಗಳನ್ನು ಪಠಿಸುವುದರಿಂದ ನಮ್ಮ ಜೀವನಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಸುಖಮಯ ಜೀವನಕ್ಕೆ ಪಠಿಸಬೇಕಾದ ವಿಷ್ಣುವಿನ 10 ಪ್ರಮುಖ ಮಂತ್ರ 
ಭಗವಾನ್‌ ವಿಷ್ಣು
ಹಿಂದೂ ಧರ್ಮದಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ತ್ರಿಮೂರ್ತಿ ದೇವರುಗಳು. ವಿಷ್ಣುವಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು, ಸ್ತೋತ್ರಗಳು, ಮಂತ್ರಗಳು, ವಿಷ್ನುವಿಗಾಗಿ ಪ್ರತ್ಯೇಕ ಹಬ್ಬಗಳು ಕೂಡ ಇದೆ. ವಿಷ್ಣು ಅವತರಿಸಿದ 10 ವಿವಿಧ ಅವತಾರಗಳಿಂದ ಆತನನ್ನು ನೀತಿಕಥೆಗಳಲ್ಲಿ ನಾರಾಯಣ ಎಂದು ಕರೆಯಲಾಗುತ್ತದೆ. ಯಾವುದೇ ಓರ್ವ ವ್ಯಕ್ತಿಯು ವಿಷ್ಣು ಮಂತ್ರವನ್ನು ಜಪಿಸುವುದರಿಂದ ಆತನಿಗೆ ಸುಖ, ಶಾಂತಿ, ಸಮೃದ್ಧಿ, ಆರೋಗ್ಯ ಪ್ರಾಪ್ತವಾಗುತ್ತದೆ. ಯಾರು ಬೇಕಾದರು ಜಪಿಸಬಹುದಾದ ಸರಳ ವಿಷ್ಣು ಮಂತ್ರಗಳಿವು:
1) ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ಉಪಯೋಗ: ಸರ್ವರ ಮನಸ್ಸಿನಲ್ಲಿ ನೆಲೆಯಾಗಿರುವ ಭಗವಾನ್‌ ವಿಷ್ಣುವನ್ನು ನಮಸ್ಕರಿಸುತ್ತೇನೆ. ಈ ಮಂತ್ರವನ್ನು ಜಪಿಸುವುದರಿಂದ ನಮ್ಮಲ್ಲಿನ ಸಹಾನುಭೂತಿಯು ವೃದ್ಧಿಯಾಗುತ್ತದೆ. ಪ್ರತಿಯೊಂದು ಜೀವಿಗಳಲ್ಲಿಯೂ ದೈವಿಕ ಅಸ್ಥಿತ್ವವನ್ನು ನೆನಪಿಸಿಕೊಳ್ಳಲು ಇದು ಸಹಕಾರಿ. ಈ ಮಂತ್ರದಿಂದ ಒಬ್ಬರ ಜೀವನದ ಅಡೆತಡೆಗಳು ದೂರಾಗುತ್ತದೆ.
2) ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ ಧ್ಯಾನ ನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಉಪಯೋಗ: ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆ ವ್ಯಕ್ತಿಯಲ್ಲಿನ ಭಯವು ನಾಶವಾಗುತ್ತದೆ. ಆ ವ್ಯಕ್ತಿಯು ನಿರ್ಭಯನಾಗುತ್ತಾನೆ. ಈ ಮಂತ್ರದ ಪಠಣೆಯು ಅವಾಸ್ತವ ಲೌಕಿಕ ಸಂಬಂಧದಿಂದ ಅಥವಾ ವ್ಯವಹಾರಗಳಿಂದ ಮತ್ತು ಅದರ ಭಯದಿಂದ ಹೊರಬರಲು ಸಹಕರಿಸುತ್ತದೆ.
3) ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್‌ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ
ಉಪಯೋಗ: ಯಾವುದೇ ಓರ್ವ ವ್ಯಕ್ತಿ ಸಮಸ್ಯೆಯಲ್ಲಿದ್ದಾಗ ಅಥವಾ ಗುರು - ಹಿರಿಯರ, ತಂದೆ - ತಾಯಿಗಳ ಮಾರ್ಗದರ್ಶನದ ಅವಶ್ಯಕತೆಯಿದ್ದಲ್ಲಿ ಈ ಮಂತ್ರವನ್ನು ಪಠಿಸಬೇಕು. ಶ್ರೀ ವಿಷ್ಣು ಮಂತ್ರವನ್ನು ಪಠಿಸುವುದರಿಂದ ಒಬ್ಬ ವ್ಯಕ್ತಿಯು ಹೆಚ್ಚಿನ ಏಕಾಗ್ರತೆಯನ್ನು ಗಳಿಸುತ್ತಾನೆ ಮತ್ತು ವಿಷ್ಣು ಆತನ ಜೀವನದ ಪ್ರತಿಯೊಂದು ಕಷ್ಟದ ಹಾದಿಯಲ್ಲೂ ಮಾರ್ಗದರ್ಶನ ನೀಡುತ್ತಾರೆಂದು ಋಷಿಮುನಿಗಳು ನಂಬಿದ್ದರು.
4) ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ಉಪಯೋಗ: ಈ ಮಂತ್ರವನ್ನು ಪಠಿಸಿದ ವ್ಯಕ್ತಿಯ ಮರಣದ ನಂತರ ಆತನನ್ನು ವಿಷ್ಣು ತನ್ನ ವಾಸಸ್ಥಾನವಾದ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾನೆನ್ನುವ ನಂಬಿಕೆಯಿದೆ. ವೈಕುಂಠ ಪ್ರಾಪ್ತಿಗಾಗಿ ಪ್ರಾಚೀನ ಕಾಲದಿಂದಲು ಜನರು ಈ ಮಂತ್ರವನ್ನು ಪಠಿಸಿಕೊಂಡು ಬಂದಿದ್ದಾರೆ.
5) ವಿಷ್ಣು ಶ್ಲೋಕ:
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ
ಉಪಯೋಗ: ವಿಷ್ಣುವಿಗೆ ಸಂಬಂಧಿಸಿದ ಈ ಶ್ಲೋಕವು ಭಗವದ್ಗೀತೆ ಮತ್ತು ಮುಕುಂದಮಾಲಾದಲ್ಲಿ ಕಂಡುಬರುತ್ತದೆ. ಈ ಶ್ಲೋಕವನ್ನು ಪಠಿಸುವುದರಿಂದ ಭಗವಾನ್‌ ವಿಷ್ಣು ವ್ಯಕ್ತಿಯು ಅರಿವಿಲ್ಲದೇ ಮಾಡಿದ ಪಾಪಗಳಿಂದ, ಕರ್ಮಗಳಿಂದ ವಿಮೋಚನೆಗೊಳಿಸುತ್ತಾನೆ. ಈ ಶ್ಲೋಕದ ನಿಯಮಿತ ಪಠಣೆಯಿಂದ ವ್ಯಕ್ತಿಯ ಮಾನಸಿಕ ಒತ್ತಡವು ಕಡಿಮೆಯಾಗುತ್ತದೆ.
6) ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜ |
ಮಂಗಳಂ ಪುಂಡರೀಕಾಕ್ಷ, ಮಂಗಳಾ ತನಂ ಹರಿಹೀ ||
ಉಪಯೋಗ: ಗಣೇಶನನ್ನು ಹೊಸ ಕೆಲಸದ ಆರಂಭದಲ್ಲಿ ಹೇಗೆ ಆತನ ಮಂತ್ರಗಳಿಮದ ಪೂಜಿಸಲಾಗುತ್ತದೆಯೋ, ಹಾಗೇ ಪೂಜೆ, ಮದುವೆ, ಆರತಿ ಮುಂತಾದ ಶುಭ ಸಂದರ್ಭಗಳಲ್ಲಿ ವಿಷ್ಣುವಿನ ಈ ಮಂತ್ರವನ್ನು ಪಠಿಸಲಾಗುತ್ತದೆ. ಶುಭ ಕಾರ್ಯದಲ್ಲಿ ಶುಭ ಪಲವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ.
7) ವಿಷ್ಣು ಪುರಾಣ ಮಂತ್ರ:
ಓಂ ಅಪವಿತ್ರ: ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ: ಶುಚಿ: ||
ಉಪಯೋಗ: ವಿಷ್ಣುವಿನ ಈ ಮಂತ್ರವನ್ನು ಹಲವಾರು ಪುರಾಣಗಳಲ್ಲಿ ನಾವು ನೋಡಬಹುದಾಗಿದ್ದು, ಇದು ವಿಷ್ಣುವಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದೆ. ಈ ಮಂತ್ರವನ್ನು ಜಪಿಸುವುದರಿಂದ ಒಬ್ಬ ವ್ಯಕ್ತಿಯು ಪಾಪಗಳಿಂದ ಮುಕ್ತನಾಗುತ್ತಾನೆ. ಜೀವನದಲ್ಲಿ ನೋವನ್ನೇ ಅನುಭವಿಸುತ್ತಿದ್ದರೆ ಈ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸಿ.
8) ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್
ಉಪಯೋಗ: ವಿಷ್ಣು ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಮನಸ್ಸಿನಲ್ಲಿರುವ ಭಯವು ನಾಶವಾಗುತ್ತದೆ. ವಿಷ್ಣು ಗಾಯತ್ರಿ ಮಂತ್ರದಿಂದ ನಾವು ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.
9) ಸಶಂಖ ಚಕ್ರಂ:
ಸಶಂಖ ಚಕ್ರಂ ಸ ಕಿರೀಟ ಕುಂಡಲಂ ।
ಸಪೀತ ವಸ್ತ್ರಂ ಸರಸೀರು ಹೇಕ್ಷಣಂ ॥
ಸಹಾರ ವಕ್ಷಸ್ಥಳ ಕೌಸ್ತುಭ ಶ್ರಿಯಾಂ ।
ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ ॥
ಉಪಯೋಗ: ಈ ಮಂತ್ರವನ್ನು ಪಠಿಸಿದ ವ್ಯಕ್ತಿಯು ತ್ವರಿತಗತಿಯಲ್ಲಿ ತನ್ನ ಏಕಾಗ್ರತೆಯನ್ನು, ಬುದ್ಧಿಯನ್ನು ಹೆಚ್ಚಿಸಿಕೊಳ್ಳುವನು.
10) ವಿಷ್ಣು ಮಂತ್ರ:
ಮೇಘಶ್ಯಾಮಂ ಪೀತಕೌಶೇಯವಾಸಂ
ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಂ
ಪುಣ್ಯೋಪೇತಂ ಪುಂಡರೀಕಾಯತಾಕ್ಷಂ
ವಿಷ್ಣುಂ ವಂದೇ ಸರ್ವಲೋಕೈಕನಾಥಂ ||
ಉಪಯೋಗ: ಇದು ಕೂಡ ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಮಂತ್ರವಾಗಿದ್ದು, ಈ ಮಂತ್ರವನ್ನು ನೀವು ಭಗವಾನ್‌ ವಿಷ್ಣುವಿಗೆ ಸಂಬಂಧಿಸಿದ ಯಾವುದೇ ಪೂಜೆಯಲ್ಲಿ ಪಠಿಸಬಹುದು.
(ಸಂಗ್ರಹ )

No comments:

Post a Comment