ಭೋಜನವೆಂಬುದು ಒಂದು ಯಜ್ಞರೂಪ
वदनि कवळ घेता नाम घ्या श्रीहरीचे । सहज हवन होते नाम घेता फुकाचे ।
जिवन करि जिवित्वा अन्न हे पूर्णब्रह्म । उदरभरण नोहे जाणिजे यज्ञकर्म ॥१॥
जय जय रघुवीर समर्थ सज्जनगढ़ श्री रामदास स्वामी
ನಮ್ಮ ವೈದಿಕ ಚಿಂತನೆಯಲ್ಲಿ ಬ್ರಹ್ಮಾಂಡದಿಂದ ಪಿಂಡಾಂಡದವರೆಗೆ ಯಜನ ಕ್ರಿಯೆಯ ಪರಿಕಲ್ಪನೆಯಿದೆ. ಯಜ್ಞವೆಂಬುದು ಕೇವಲ ಅಗ್ನಿಕುಂಡದಲ್ಲಿ ಗೈಯ್ಯುವ ಹವಿರ್ಭರಣಕ್ಕೆ ಮಾತ್ರ ಸೀಮಿತವಲ್ಲ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಪಂಚಪ್ರಾಣಗಳಿಗೆ ಶಕ್ತಿಯನ್ನು ತುಂಬಲು, ಯಾಗಕುಂಡದಲ್ಲಿ ಮಾಡುವ ಯಜ್ಞದಂತೆ ಭೋಜನವೂ ಒಂದು ಯಜ್ಞವಾಗಿದೆ.
ಈ ಕಾರಣದಿಂದಲೇ ಅದು 'ಪ್ರಾಣಾಗ್ನಿಹೋತ್ರ'ವೆಂದು ಕರೆಯಲ್ಪಡುತ್ತದೆ. ಈ ಪ್ರಾಣಾಗ್ನಿಹೋತ್ರವೆಂಬ ಯಜ್ಞಕ್ಕೆ ಜಠರವೇ ಅಗ್ನಿಕುಂಡ, ನಾವು ಸೇವಿಸುವ ಆಹಾರವೇ ಹವಿಸ್ಸು, ಆಹಾರವನ್ನು ಅರಗಿಸಿಕೊಳ್ಳುವ ಶಕ್ತಿಯೇ ಅಗ್ನಿ.
ಈ ಅಗ್ನಿ ನಾವು ಸೇವಿಸುವ ಆಹಾರವನ್ನು ಪಚನಗೈದು ಶರೀರಕ್ಕೆ ಶಕ್ತಿಯನ್ನು, ತೇಜಸ್ಸನ್ನು ಒದಗಿಸುವುದರಿಂದ ಅದು 'ಪಾಚಕಾಗ್ನಿ' . ಈ ಪಾಚಕಾಗ್ನಿಯು ಜಠರಾಗ್ನಿ, ಉದರಾಗ್ನಿ, ಕೋಷ್ಠಾಗ್ನಿ ಮುಂತಾದ ಪ್ರಾಸಂಗಿಕ ನಾಮಧೇಯಗಳಿಂದ ಕರೆಯಲ್ಪಟ್ಟರೂ ಅದು ಗೀತೆಯಲ್ಲಿ ವಿವರಿಸಿದಂತೆ 'ಅಹಂ ವೈಶ್ವಾನರೊ ಭುಂಕ್ತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ ' ಎನ್ನುವ ವೈಶ್ವಾನರನೆಂದು ಕರೆಯಲ್ಪಡುತ್ತದೆ.
ಭೋಜನಯಜ್ಞವೆಂಬ ಆತ್ಮಯಜ್ಞಕ್ಕೆ ಜೀವಾತ್ಮನೇ ಯಜ್ಞಪತಿ. ಯಜ್ಞಸಾಧನವಾದ ಆಹಾರರೂಪಿ ಹವಿಸ್ಸನ್ನು ನಿರ್ಮಿಸುವವನು, ಭುಂಜಿಸುವವನು ಪರಮಾತ್ಮನಾದುದರಿಂದ ಅವನೇ ಯಜ್ಞೀ, ಯಜ್ಞಪತಿ, ಯಜ್ಞಾಂಗ, ಯಜ್ಞವಾಹನ, ಯಜ್ಞಸಾಧನ. ಈ ಕಾರಣಕ್ಕಾಗಿಯೇ ಭೋಜನ ಪ್ರಾರಂಭದ ಮೊದಲು 'ಬ್ರಹ್ಮಾರ್ಪಣ'ವೆಂಬ ಪರಿಕಲ್ಪನೆ.
ಪಚಾಮ್ಯನ್ನಂ ಚತುರ್ವಿಧಮ್ : ನಾವು ಸೇವಿಸುವ ಆಹಾರವನ್ನು ಭಕ್ಷ (ಕರಿದ ಅಥವಾ ವಿಶೇಷವಾದ ತಿಂಡಿ ತಿನಸು), ಭೋಜ್ಯ (ಕೈತುತ್ತಿಗೊದಗುವ ಖಾದ್ಯ), ಲೇಹ್ಯ ( ನಾಲಿಗೆಯಲ್ಲಿ ನೆಕ್ಕಿ ಸವಿಯುವ ಪದಾರ್ಥ), ಚೋಷ್ಯ (ಒಳರಸವನ್ನು ಹೀರಿ ಸವಿಯುವ ಖಾದ್ಯ)ಗಳೆಂದು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಇದರೊಂದಿಗೆ ನಾವು ಸೇವಿಸುವ ದ್ರವರೂಪದ ಪಾನೀಯಗಳೂ ಸೇರಿದರೆ ಅದು ಪಂಚಭಕ್ಷವಾಗುತ್ತದೆ. ಈ ಭೋಜನ ಸಾಮಗ್ರಿಗಳೇ ಪಾಚಕಾಗ್ನಿಗೆ ನೀಡುವ ಹವಿಸ್ಸುಗಳು ಮತ್ತು ಇವುಗಳ ಸೇವನೆಯ ವ್ಯವಸ್ಥಿತ ರೂಪವೇ ಭೋಜನ ವಿಧಿಯೆಂಬ ಯಜ್ಞ.
ಶುಚಿತ್ವ
ಈ ಪ್ರಾಣಾಗ್ನಿಹೋತ್ರಕ್ಕೆ ಜಠರವೆಂಬ ಯಜ್ಞಕುಂಡದಲ್ಲಿ ಕಾಲಕಾಲಕ್ಕೆ ಪಾಚಕಾಗ್ನಿಯನ್ನು ಸ್ಥಾಪಿಸಿಕೊಳ್ಳುವ ನಮ್ಮ ದೇಹವೇ ಯಜ್ಞಶಾಲೆ. ಸ್ನಾನಾದಿ ನಿತ್ಯಕರ್ಮಗಳ ಮೂಲಕ ದೇಹದ ಬಹಿರಂಗಶುದ್ಧಿ ಮತ್ತು ಭಗವನ್ನಾಮ ಸ್ಮರಣೆಯ ಮೂಲಕ ಅಂತರಂಗ ಶುದ್ಧಿ ಮತ್ತು ಪ್ರಸನ್ನವಾದ ಮನೋಸ್ಥಿತಿ, ಪ್ರಶಾಂತ ನಿರ್ಮಲ ಪರಿಸರ ಭೋಜನವಿಧಿಗೆ ಅವಶ್ಯ. ಶುದ್ಧವಾದ ಬಾಳೆಎಲೆಯಲ್ಲಿ ನೆಲದ ಮೇಲೆ ಕುಳಿತು ಮನೆಮಂದಿಯೊಂದಿಗೆ ಭೋಜನವೆಂಬ ಯಜ್ಞವನ್ನು ಕೈಗೊಳ್ಳಬೇಕು.
ಭೋಜನ ಸ್ವೀಕಾರಕ್ಕೂ ಮೊದಲು
1. ಪರಿಷಿಂಚನೆ
ಎಲ್ಲಾ ಪದಾರ್ಥ ವನ್ನು ಬಡಿಸಿದ ನಂತರ ಮೊದಲು ಕೈಯಲ್ಲಿ ನೀರು ತೆಗೆದುಕೊಂಡು ಗಾಯತ್ರಿ ಮಂತ್ರದಿಂದ ಪ್ರೋಕ್ಷಣೆ ಮಾಡುವುದು:
ಓಂ ಭೂರ್ಭುವಃ ಸ್ವಃ | ಸತ್ಯಂ ತ್ವರ್ತೇ ನ ಪರಿಷಿಂಚಾಮಿ || (ಹಗಲಿಗೆ)
ಓಂ ಭೂರ್ಭುವಃ ಸ್ವಃ | ಋತಂ ತ್ವಾ ಸತ್ಯೇನ ಪರಿಷಿಂಚಾಮಿ ||(ರಾತ್ರಿಗೆ)
ವಿಷ್ಣೋರನ್ನಂ ರಕ್ಷಸ್ವ
ಈ ಮಂತ್ರ ಹೇಳಿಕೊಂಡು ಪ್ರದಕ್ಷಿಣಾಕಾರವಾಗಿ ಬಾಳೆಎಲೆಯ ಸುತ್ತ ವೃತ್ತಾಕಾರದಲ್ಲಿ ನೀರು ಸುತ್ತುಗಟ್ಟುವದು.
ಇದುವೇ ಪರಿಷಿಂಚನೆ
ಪರಿಸಿಂಚನ ಎಂದರೆ
ನಮ್ಮ ಆಡುನುಡಿಯಲ್ಲಿ ಬಹಳ ಸರಳವಾಗಿ ನಾವಿದನ್ನು ಸುತ್ತುಗಟ್ಟುವುದು ಎನ್ನುತ್ತೇವೆ. ಏನನ್ನು ಸುತ್ತುಗಟ್ಟುವುದು ಮತ್ತು ಯಾಕಾಗಿ ಸುತ್ತುಗಟ್ಟುವುದು ಎಂಬ ಅರಿವಿಲ್ಲದೆ ನಡೆಸುವ ಈ ಕ್ರಿಯೆ ಬ್ರಾಹ್ಮಣರು ಸುತ್ತುಗಟ್ಟದೆ ಉಣ್ಣುವುದಿಲ್ಲ ಎಂಬಷ್ಟರ ಮಟ್ಟಿಗೆ ಯಾಂತ್ರಿಕವಾಗಿಯೇ ಉಳಿದಿದೆ. ಯಾಂತ್ರಿಕವಾಗಿಯೇಯಾದರೂ ಮಾಡುತ್ತ ಬಂದಿದ್ದಾರೆ. ಸೇಚನ, ಸಿಂಚನ ಎಂಬ ಶಬ್ದಗಳು ನೀರನ್ನು ಚಿಮುಕಿಸುವ ಕ್ರಿಯೆಯನ್ನು ಸೂಚಿಸುವಂತಹವುಗಳು. ಈ ಮೊದಲೇ ಜಲಪ್ರೋಕ್ಷಣೆಗೊಂಡು ಶುದ್ಧೀಕರಿಸಿದ ಬಾಳೆಎಲೆಯ ಮೇಲೊ ಬಡಿಸಿದ ಅನ್ನದ ಸುತ್ತ ಎಡದಿಂದ ಬಲಕ್ಕೆ ಪ್ರದಕ್ಷಿಣಾಕಾರದಲ್ಲಿ ಅಭಿಮಂತ್ರಿತ ಜಲವನ್ನು 'ಸತ್ಯಂತ್ವರ್ತೇನ ಪರಿಷಿಂಚಾಮಿ' ಎಂದು ಉಚ್ಚರಿಸುತ್ತ ಪರಿಸಿಂಚನ ಮಾಡಬೇಕು. ಇದರರ್ಥ 'ಸತ್ಯ' (ಭಗವಂತ) ಮತ್ತು 'ಋತ' (ಧರ್ಮ ಮತ್ತು ನ್ಯಾಯ)ವನ್ನು ಸ್ಮರಿಸಿ ಈ ಅನ್ನವನ್ನು ಪರಿಷೇಚನ ಮಾಡುತ್ತೇನೆ. ನಾನು ತಿನ್ನುವ ಈ ಅನ್ನಕ್ಕೆ ಪರಮಾತ್ಮನ ಮತ್ತು ಸತ್ಯಧರ್ಮಗಳ ರಕ್ಷೆಯಿದೆ. ಈ ಪರಿಸಿಂಚನವೆಂಬ ಕ್ರಿಯೆ ನಾನು ಈ ಅನ್ನವನ್ನು ಸತ್ಯ ಮತ್ತು ಧರ್ಮಗಳ ನೆಲೆಯಲ್ಲಿ ಭಗವಂತನ ಕೃಪೆಯಿಂದ ಗಳಿಸಿದ್ದೇನೆ ಎಂಬ ಘೋಷಣೆಯೂ ಹೌದು.
2) ಚಿತ್ರಾಹುತಿ ಹವಿಸ್ಸು ಸಮರ್ಪಣೆ
ಬಾಳೆ ಎಲೆಯ ಬಲ ಭಾಗದಲ್ಲಿ ಪ್ರಾರಂಭ ಮಾಡಿ ಯಮಾದಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ.
ಓಂ ಚಿತ್ರಾಯ ಸ್ವಾಹಾ |
ಓಂ ಚಿತ್ರಗುಪ್ತಾಯ ಸ್ವಾಹಾ |
ಓಂ ಯಮಾಯ ಸ್ವಾಹಾ |
ಓಂ ಯಮ ಧರ್ಮಾಯ ಸ್ವಾಹಾ |
ಈ ನಾಲ್ಕು ಮಂತ್ರದಿಂದ
ಕೆಳಗಿನಿಂದ ಮೇಲಕ್ಕೆ ಉದ್ದ ನೆಟ್ಟಗೆ ಸಾಲಾಗಿ ನಾಲ್ಕು ಸಲ ಕಿಂಚಿತ್ ಅನ್ನ ಇಡುವುದು
ಚಿತ್ರಾಯ ನಮ:
ಚಿತ್ರಗುಪ್ತಾಯ ನಮ:
ಯಮಾಯ ನಮ:
ಯಮಧರ್ಮಾಯ ನಮ:
ಈ ನಾಲ್ಕು ಮಂತ್ರದಿಂದ
ಕೆಳಗಿನಿಂದ ಮೇಲಕ್ಕೆ ಉದ್ದ ಸಾಲಾಗಿ ನಾಲ್ಕು ಕಡೆಗಳಲ್ಲಿಟ್ಟ ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು
ಕೆಲ ಒಬ್ಬರ ಪ್ರಮಾಣ ಓಂ ಚಿತ್ರಾಯ ಸ್ವಾಹಾ | ಚಿತ್ರಗುಪ್ತಾಯ ನಮ: ಎಂದು ಎರಡು ಸಲ ಕಿಂಚಿತ್ ಅನ್ನ ಇಡುವುದು ಅನ್ನದ ಮೇಲೆ ಕಿಂಚಿತ್ ನೀರು ಬಿಡುವುದು ಈ ರೀತಿ ದೇವತೆಗಳಿಗೆ ಹವಿಸ್ಸು ಸಮರ್ಪಣೆ ಮಾಡುವ ರೂಢಿಯೂ ಇದೆ
ಚಿತ್ರಾಹುತಿ ಎಂದರೆ
ಎಲೆಯ ಬಲತುದಿಯಲ್ಲಿ ನೀರಿನಿಂದ ಗೆರೆಯೆಳೆದು ನಾಲ್ಕು ಅನ್ನದ ಸಣ್ಣ ತುತ್ತುಗಳನ್ನಿರಿಸುವುದೇ ಚಿತ್ರಾಹುತಿ. ಈ ಚಿತ್ರಾಹುತಿಯನ್ನು ನೀಡುವಾಗ ಭೋಜನವೂ ಒಂದು ಯಜ್ಞವಿಧಿಯಂತೆ ಇದ್ದು, ಯಜ್ಞಕರ್ಮದಲ್ಲಿ ಪ್ರಧಾನಹೋಮ ಅಥವಾ ಪೂರ್ಣಾಹುತಿಗೆ ಮೊದಲು ಉಪದೇವತೆಗಳಿಗೆ ನೀಡುವ ಬಲಿಯ ಪ್ರತೀಕದಂತೆ ಈ ಚಿತ್ರಾಹುತಿ.
3) 'ಆಪೋಷನ'ವೆಂದರೆ ನೀರನ್ನು ಗುಟುಕಿಸುವುದು ಎಂದರ್ಥ. ನೀರು ನಮಗೆ ಬದುಕನ್ನು ನೀಡುವಂತಹದು. ಅದು ಅಮೃತ ಸಮಾನ. ಹಾಗಾಗಿ ನಾವು ತಿನ್ನುವ ಈ ಅನ್ನಕ್ಕೆ ಅಮೃತದ ಸವಿಯಿರಲಿ ಎಂಬ ಸಂಕಲ್ಪದೊಂದಿಗೆ ಅಮೃತೋಪರಣಮಸೀ ಸ್ವಾಹಾಃ' ಎಂದು ಆಪೋಷನಗೈಯ್ಯಬೇಕು.
4) ಅಭಿಘಾರ :
ಅಭಿಘಾರವೆಂದರೆ ನೈವೇದ್ಯಕ್ಕಾಗಿ ಹಾಕುವ ತುಪ್ಪ. ಇದು ಆಹಾರವನ್ನು ಸ್ವಾದಿಷ್ಠವಾಗಿ ಮಾಡುತ್ತದೆ. ಯಜ್ಞದಲ್ಲಿ ಹವಿಸ್ಸಿನ ಮೇಲೆ ತುಪ್ಪವನ್ನು ಹನಿಸುವಂತೆ ಈ ಭೋಜನ ಯಜ್ಞದಲ್ಲಿ ಈ ಅಭಿಘಾರ.
5) ಪ್ರಾರ್ಥನೆ
ಬಲ ಕೈಲಿ ನೀರು ಹಿಡಿದುಕೊಂಡು ಈ ಕೆಳಗಿನ ಮಂತ್ರ ಪ್ರಾರ್ಥನೆ(ಅಭಿಮಂತ್ರಣೆ) ಮಾಡಿ
ಆ ನೀರನ್ನು ಶಬ್ದ ಮಾಡದೆ ಕುಡಿಯಬೇಕು.
'ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ '
ಉತ್ತಿಷ್ಠ, ಲೋಹಿತ, ಪಿಂಗಲಾಕ್ಷ ,ಅಜಪುರುಷ, ಅಮೃತಋಷೀ, ಸತ್ಯೋದೇವತಾ,ಗಾಯತ್ರೀ ಛಂಧಃ,
ಅಮೃತೋಪಸ್ತರಣಮಸಿ ಸ್ವಾಹಾ ||
6) ಅನ್ನಪ್ರಾಶನ (ಸ್ವಾಹಾಕಾರ)
ಓಂ ಪ್ರಾಣಾಯ ಸ್ವಾಹಾ ||
ಓಂ ಅಪಾನಾಯ ಸ್ವಾಹಾ ||
ಓಂ ವ್ಯಾನಾಯ ಸ್ವಾಹಾ ||
ಓಂ ಉದಾನಾಯ ಸ್ವಾಹಾ ||
ಓಂ ಸಮಾನಾಯ ಸ್ವಾಹಾ ||
(ಅಗುಳು ನುಂಗುವುದು) ಈ ಮೇಲಿನ ಮಂತ್ರದಿಂದ
ಒಂದೊಂದು ಮಂತ್ರಕ್ಕೂ ಸ್ವಲ್ಪ ಸ್ವಲ್ಪ ಅನ್ನವನ್ನು ಭಕ್ಷಿಸುವುದು
ಸ್ವಾಹಾಕಾರ ಎಂದರೆ ಯಜ್ಞಯಾಗಾದಿಗಳಲ್ಲಿ ಪೂರ್ಣಾಹುತಿಗೆ ಮೊದಲು ಅಗ್ನಿಗೆ ಚರುವನ್ನು ಸಮರ್ಪಿಸಿದಂತೆ ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಮತ್ತು ಬ್ರಹ್ಮನಿಗೂ ಎಲೆಯಲ್ಲಿ ಬಡಿಸಿದ ಖಾರ, ಉಪ್ಪು, ಹುಳಿಗಳನ್ನು ಸೇರಿಸದ ಅನ್ನವನ್ನು (ಸಣ್ಣ ತುತ್ತು) ಸ್ವಾಹಾಕಾರಕ್ಕಾಗಿ ಭುಂಜಿಸಬೇಕು.ಈ ಸ್ವಾಹಾಕಾರವೆಂದರೆ ಜಗಿಯದೆ ನುಂಗುವ ಪ್ರಕ್ರಿಯೆ. ಈ ಪ್ರಾಣಾದಿ ಸ್ವಾಹಾಕಾರ ಪ್ರಕ್ರಿಯೆಯಲ್ಲಿ
ಪ್ರಾಣಾಯ ಸ್ವಾಹಾಕ್ಕೆ ತೊರು ಬೆರಳು ಮತ್ತು ಮಧ್ಯದ ಬೆರಳು ಮತ್ತು ಹೆಬ್ಬೆರಳು,
ಅಪಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಹೆಬ್ಬೆರಳು,
ವ್ಯಾನಾಯ ಸ್ವಾಹಾಗೆ ಉಂಗುರದ ಬೆರಳು, ಕಿರು ಬೆರಳು ಮತ್ತು ಹೆಬ್ಬೆರಳು,
ಉದಾನಾಯ ಸ್ವಾಹಾಗೆ ಮಧ್ಯದ ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳು,
ಸಮಾನ ಕ್ಕೆ ಐದೂ ಬೆರಳುಗಳನ್ನು ಬಳಸಬೇಕೆಂಬ ನಿಯಮವಿದೆ.
ಈ ಎಲ್ಲ ಪೂರ್ವ ಪೀಠಿಕೆಯ ನಂತರ ಭೋಜನವನ್ನು ಆತುರ, ಅಸಹನೆ, ಸಿಟ್ಟು ಇಲ್ಲದೆ ಶಾಂತಮನಸ್ಸಿನಿಂದ ತನಗೆ ಬೇಕಾದಷ್ಟು ಸ್ವೀಕರಿಸಬೇಕು. ಅತಿ ಭುಂಜನವು ದೈಹಿಕ ಆರೋಗ್ಯದ ಮೇಲೆ ವಿಕೃತ ಪರಿಣಾಮವನ್ನು ಬಿರಬಲ್ಲದೆಂಬ ಎಚ್ಚರವಿರಬೇಕು. ಈ ರೀತಿಯ ಭೋಜನವೇ ಪ್ರಾಣಾಗ್ನಿಹೋತ್ರದ ಪೂರ್ಣಾಹುತಿ.
7). ಉತ್ತರ ಆಪೋಶನ :
ಊಟ ಆದಮೇಲೆ ಆಪೋಶನ.
ಬಲ ಕೈಗೆ ನೀರು ಹಾಕಿಕೊಂಡು ಈ ಮಂತ್ರ ಹೇಳಿ ಕುಡಿಯುವುದು.
ಅಮೃತಾಪಿಧಾನಮಸಿ ಸ್ವಾಹಾ ||
ಉತ್ತರಾಪೋಶನ :
ಉತ್ತರಾಪೋಶನವೆಂದರೆ ಭೋಜನದ ಅಂತ್ಯದಲ್ಲಿ ನೀರು ಕುಡಿಯುವುದು. ಯಜ್ಞದಲ್ಲಿ ಪೂರ್ಣಾಹುತಿ ನಂತರ ವಸೋರ್ಧಾರ ಎಂಬ ಹೆಸರಿನಲ್ಲಿ ಹವಿಸ್ಸಿನ ಮೇಲೆ ಆವರಣವಾಗುವ ಹಾಗೆ ತುಪ್ಪದ ಧಾರೆಯನ್ನು ಹರಿಸುತ್ತಾರೆ. ಅದೇ ರೀತಿ ಈ ಭೋಜನ ಯಜ್ಞದ ನಂತರ ಈ ಉತ್ತರಾಪೋಶನವು ನಾವು ಭುಂಜಿಸಿದ ಭೋಜನವನ್ನು ಅಮೃತವನ್ನಾಗಿಸಲಿ ಎಂಬ ಆಶಯದೊಂದಿಗೆ 'ಅಮೃತಾ ಪಿಧಾನಮಸಿ ಸ್ವಾಹಾ' ಎನ್ನುತ್ತ ಆಪೋಷನವನ್ನು ಮಾಡಬೇಕು. ಪಿಧಾನವೆಂದರೆ ಮುಚ್ಚಳವೆಂತಲೂ ಅಮೃತ ಪಿಧಾನವೆಂದರೆ ಅಮೃತದ ಆವರಣವೆಂತಲೂ ಅರ್ಥ. ಈ ಆಪೋಶನದಲ್ಲಿ ಭೋಜನದ ಮೇಲೆ ಅಮೃತದ ಅವರಣವಾಗಲಿ ಎಂಬ ಆಶಯವಿದೆ. ಪೂರ್ವಾಪೋಶನವು ಭೋಜನಕ್ಕೆ ಅಮೃತದ ವೇದಿಕೆಯಾದರೆ ಉತ್ತರಾಪೋಶನವು ಭೋಜನಕ್ಕೆ ಇರಿಸುವ ಅಮೃತದ ಮುಚ್ಚಳವಾಗಿದೆ. ಹೀಗೆ ಪೂರ್ವಾಪೋಶನ ಮತ್ತು ಉತ್ತರಾಪೋಶನವೆಂಬ ಎರಡು ಅಮೃತಸ್ತರಗಳ ನಡುವೆ ನಾವು ಭುಂಜಿಸಿದ ಭೋಜನ ಅಮೃತಮಯವಾಗಲಿ ಎಂಬ ಹಾರೈಕೆ ಇಲ್ಲಿಯದು.
ವಸೋರ್ಧಾರೆಯು ಹವಿಸ್ಸನ್ನು ಪೂರ್ಣವಾಗಿ ಪಚನ ಮಾಡಲು ಯಜ್ಞಾಗ್ನಿಗೆ ಸಹಾಯಕವಾಗುವಂತೆ ಉತ್ತರಾಪೋಶನವು ನಾವು ಸೇವಿಸಿದ ಭೋಜನವನ್ನು ಪಚನ ಮಾಡಲು ಜಠರಾಗ್ನಿಗೆ ನೆರವಾಗುತ್ತದೆ
ನಮ್ಮ ಹಿರಿಯರು ಭೋಜನ ವಿಧಿಯನ್ನೂ ಕೂಡ ಒಂದು ಯಜ್ಞವೆಂದು ಪರಿಗಣಿಸುವುದರ ಜತೆಗೆ ನಮ್ಮ ದೇಹಕ್ಕೆ ವೈಜ್ಞಾನಿಕ ಕ್ರಮದಲ್ಲಿ ಆಹಾರವನ್ನು ಪೂರಣಗೊಳಿಸಿ ಪಂಚಪ್ರಾಣಗಳ ಊರ್ಜೆಯನ್ನು ವೃದ್ಧಿಗೊಳಿಸಿ ತನ್ಮೂಲಕ ಆತ್ಮಶಕ್ತಿಯನ್ನು ಸದಾ ಜಾಗೃತಗೊಳಿಸುವ ಯಾಜ್ಞಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ. ಭೋಜನವೆಂಬುದು ಹಸಿವಾದೊಡನೆ ಬರಿಯ ಉಣ್ಣುವ ಕ್ರಿಯೆಯಲ್ಲ. ಅದು ಯಾಜ್ಞಿಕ, ಯೋಗಿಕಗಳನ್ನೊಳಗೊಂಡ ಒಂದು ಸಂಸ್ಕಾರಯುತ ಪ್ರಕ್ರಿಯೆ. ನಮ್ಮ ದುಡಿಮೆಯ ಫಲವಾದ ಭೋಜನವನ್ನು ಯಜ್ಞಕರ್ಮಗಳಿಗೆ ಹೋಲಿಸಿ ಭೋಜನವಿಧಿಯನ್ನು ಇಷ್ಟೊಂದು ಕ್ಲಿಷ್ಠಗೋಸಬೇಕಿತ್ತೆ ಎಂಬ ಪ್ರಶ್ನೆಯೊಂದು ಉದ್ಭವಿಸುವುದು ಸಹಜವೆ. ನಮ್ಮ ಬದುಕಿನ ಎಲ್ಲ ಸಂಗತಿಗಳಲ್ಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿದ್ದರು. ಹಾಗಾಗಿ ಜೀವಧಾರಣ, ಶರೀರದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳನ್ನು ಕಾಪಾಡುವಲ್ಲಿ ಅವರು ಭೋಜನ ವಿಧಿಗೂ ಒಂದು ವೈಜ್ಞಾನಿಕ ಸೂತ್ರವನ್ನು ಅಳವಡಿಸಿದರು.
No comments:
Post a Comment