Sunday, August 28, 2022

GULLADA GOURI HAADU ಗುಳ್ಳದ ಗೌರಿ ( ಗುಳ್ಳವ್ವನ ) ಹಾಡು

ಗುಳ್ಳದ ಗೌರಿ( ಗುಳ್ಳವ್ವನ ) ಹಾಡು 

ಭಾರತದ ಸನಾತನ ಸಂಸ್ಕೃತಿಯ ಪ್ರಕಾರ  ಮನೆಯ ಎಲ್ಲರಿಗೂ ತಮ್ಮ ಆಚಾರವನ್ನು ನಡವಳಿಕೆಗಳನ್ನು, ನಾಲ್ಕು ಜನರಲ್ಲಿ ಬೆರೆತು ಜೀವನ ಸೌಹಾರ್ದ್ಯಯುತವಾಗಿ ಸಾಗಿಸಿ ಕೊಂಡೊಯ್ಯುವ ಶಿಕ್ಷಣ ಬಾಲ್ಯ ದಿಂದಲೇ ಕೊಡುತ್ತಿದ್ದರು. ಅದರಂತೆ ಈ ಪೂಜಾ ಪದ್ಧತಿಯೂ ಇತ್ತು. 
        ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಮನೆಮನೆಗಳಲ್ಲಿ  ಮನೆಯ ಹಿರಿಯ ಹೆಣ್ಣು ಮಕ್ಕಳು ಬಾಲಕಿಯರು ಬಾಲಕರೂ ಸಹಿತ ಎಲ್ಲರೂ ಒಟ್ಟಾಗಿ ಆಚರಿವಂಥಹ ಪೂಜೆ ಆಷಾಢ ಮಾಸದ ಪ್ರತಿ ಮಂಗಳವಾರ ಆಚರಿಸಲಾಗುತ್ತದೆ. ಮೊದಲನೇ ದಿನ, ಅಥವಾ ಅದೇ ದಿನ  ಕಿರಿಯ ಹೆಣ್ಣು ಮಕ್ಕಳು ಹೊಲದ ಕಡೆಗೆ ಹೋಗಿ ಕೆಸರನ್ನಾಗಲಿ , ಮಣ್ಣನ್ನಾಗಲಿ ತರುವ ರೂಢಿ.  ಕೆಸರನ್ನಾಗಲಿ , ಮಣ್ಣನ್ನಾಗಲಿ ತರಳು ಹೋಗುವಾಗ  ಎಲ್ಲರೂ ಒಕ್ಕೊರಲಿನಿಂದ .....

" ಗುಳ್ಳವ್ವನ ಮಣ್ಣ ತರಲಿಲ್ಲ | ಗುಲಗಂಜಿ ಹಚ್ಚಿ ಆಡಲಿಲ್ಲ | ಸುಳ್ಳೇ ಬಂತಲ್ಲವ್ವಾ ನಾಗರ ಪಂಚಮಿ ಸುವ್ವನಾರೆ " ಎಂದು ಹಾಡುತ್ತ ಹೋಗಿ ಮಣ್ಣು ತರುತ್ತಾರೆ.  ಮಧ್ಯಾಹ್ನ ಆ ಮಣ್ಣಿನಿಂದ,  ಎರಡು ಹೆಣ್ಣು ಮೂರ್ತಿಗಳು, ಕೋಟೆ, ಕೊತ್ತಲ, ನವಿಲು, ಬಸವಣ್ಣ ( ಎತ್ತು ), ಕೋಣ, ತೂಗಾಡುವ ಗೊಗ್ಗವ್ವ, ಮಣ್ಣಿನ ದೀಪ ಸ್ಥಂಭ, ತಲೆ ಅಲುಗಾಡಿಸುವ ಮುತ್ಯಾ, ಒಂದು ತಲವಾರ ಇವೆಲ್ಲವೂ ಮಾಡಲಾಗುತ್ತದೆ. ಈ ಎಲ್ಲ ಮೂರ್ತಿಗಳಿಗೆ ಅರಿಶಿಣ ಕುಂಕುಮ ಜವೇ, ಕೆಂಪು, ಬಿಳಿ ಗುಲಗಂಜಿ ಹಚ್ಚಿ ಸಿಂಗರಿಸಲಾಗುತ್ತದೆ. ಗೊಗ್ಗವ್ವನ ತಲೆಯಲ್ಲಿ ದೀಪ ಹಚ್ಚಿ ಜೋತು ಬೀಳಿಸಿ ತಿರುಗಿಸುತ್ತಾರೆ.  ಸಂಜೆ ಗುಳ್ಳವ್ವಗೆ ಪೂಜೆ ಮಾಡಿ, ಮಾಡಿದ ಕೋಣನ ಕುತ್ತಿಗೆಯನ್ನು ಅಣ್ಣನ ಅಥವಾ ತಮ್ಮನ ಕಡೆಯಿಂದ ಮಣ್ಣಿನ ತಲವಾರಿನಿಂದ ಕತ್ತರಿಸಿ ಬಲಿ ಕೊಡುತ್ತಿರುವಂತೆ ಭಾವಿಸುತ್ತಾರೆ. ಜೊತೆಗೆ ಶ್ಯಾವಿಗೆ, ಮರಗುಳಿಗೆ, ಪರಡಿ, ಗೌಲಿ ಇತ್ಯಾದಿಗಳ ಪಾಯಸ ಮಾಡಿ ನೈವೇದ್ಯ ತೋರಿಸಿ ನಮಸ್ಕರಿಸುತ್ತಾರೆ. 

          ತಮಗೆ ಶುಭವಾಗಲಿ, ಆರೋಗ್ಯದಿಂದ ಇರುವಂತಾಗಲಿ, ಬಾಲಕರು ಧೈರ್ಯ ಬಲ ವಿದ್ಯಾಬುದ್ಧಿಗಳನ್ನೂ ಕನ್ಯೆಯರು ಗಂಡನಿಗಾಗಿ, ಮದುವೆಯಾದವರು ಅಖಂಡ ಸೌಭಾಗ್ಯಕ್ಕಾಗಿ, ಮನೆಯ ಜಾನುವಾರುಗಳ ಆರೋಗ್ಯಕ್ಕಾಗಿ, ಹೊಲದ ಬೆಳೆಯ ವೃದ್ಧಿಗಾಗಿ, ಮನೆತನದ ಶ್ರೇಯಕ್ಕಾಗಿ ಬೇಡಿಕೊಳ್ಳುತ್ತಾರೆ. ಆಮೇಲೆ ಮಣ್ಣಿನ ಚಿಕ್ಕ ಮಡಕೆಯ ಮೇಲ್ಭಾಗಕ್ಕೆ ಹಲವಾರು ತೂತುಗಳನ್ನೂ ಹಾಕಿದ, ಕುತ್ತಿಗೆಗೆ ದಪ್ಪ ದಾರನ್ನು ಕಟ್ಟಿ ಒಳಭಾಗದಲ್ಲಿ ಚನ್ನಾಗಿ ಎಣ್ಣೆ ಹಾಕಿದ ದೀಪವನ್ನಿಟ್ಟು  ಪರಿಚಯದವರ,ಗೆಳತಿಯರ, ಗುಳ್ಳವ್ವನ ಪೂಜೆ ಮಾಡುತ್ತಿರುವವರ ಮನೆ ಮನೆಗೆ ಹೋಗಿ ಆರತಿಮಾಡುತ್ತಾರೆ. " ಗೌರಿ ಆಡಲಾರೆಗ, ಗೌರಿ ಪಾಡಲಾರೆಗ, ಗೌರಿ ಛಾನ ಚಕ್ಕುಲೇ, ಗೌರಿ ಬಣ್ಣದ ಭಾಸಿಂಗ, ಗೌರಿ  ಲಾಲ ಭಡಕ್ "   ಅಕ್ಕೊಲಾರೆ ಇಕ್ಕೊಲಾರೆ ತಕ್ಕೋ ನನ್ನ ಕುಬಸಿನ ಘಳಿಗಿ,  ತಾ ನಿನ್ನ ಕುಬಸಿನ ಘಳಿಗಿ " ಎಂದಲೋ, ತಮಗೆ ಗೊತ್ತಿದ್ದ ಗೌರಿ ಹಾಡು ಹಾಡುತ್ತಾರೆ. ಯೋಗ ಕ್ಷೇಮ ವಿನಿಮಯ ಮಾಡಿಕೊಂಡು ಹರಟೆ ಹೊಡೆಯುತ್ತ, ಹಾಡುತ್ತ ಮನೆಗೆ ಬರುತ್ತಾರೆ.      

ಪಾರಂಪಾರಿಕ ಗುಳ್ಳದ ಗೌರಿ( ಗುಳ್ಳವ್ವನ ) ಹಾಡು  ಪ್ರಾರಭ                   

ಹರನ ಪಾರ್ವತಿ  ದೇವಿ, 

ಪರಮ ಸಂತೋಷದಲಿ 

ಸರಸವಾಡುತ ತನ್ನ ಪುರುಷರೊಡನೆ

ವರ ಆಷಾಢ ಮಂಗಳವಾರ ದಿವಸ

ಅರಸರೇ ತೌರಿಗೇ ಹೋಗಿ  ಬರುವೆ     || 1 ||

ಇಲ್ಲಿಂದ ಹೋದರೆ ಅಲ್ಲಿ ನಿನಗ್ಯಾರುಂಟು 

ಚೆಲ್ವ ಕಂಗಳ ನೀರೆ  ತಿಳಿದು ಪೇಳೆ

ಎಲ್ಲರ್ಯಾತಕೆ ಸ್ವಾಮಿ, ಮೂರು ದಿನವಿದ್ದುನಾ 

ಮ್ಮೆಲ್ಲರಾ ಸೇವೆಗೊದಗಿ ಬರುವೆ            || 2 ||  

ಮೂರು ದಿನ, ಐದು ದಿನ ಮೀರಿದರೆ ಏಳು ದಿನ 

ದಾರಿ ನೋಡುತಲಿರುವೆ  ಕೇಳು

ಬಾರದಿದ್ದರೆ ನೀನು ಮೀರಿದೊಳೆನಿಸಿದೆ 

ಮೂರ್ತಿಯ ಕರಿಮುಖನ ಒಡಗೊಂಡು     || 3 ||

ಕರೆವುದಕೆ ಬರುತೇನೆ ತಿರುಗಿ ಉಪ

ಚಾರಗಳುಂಟೆ ಎನಗೆ

ತಿರಿದು ತುಂಬಿರೆ ಮೂರು  ಲೋಕವೆಲ್ಲವೆ ಸ್ವಾಮಿ

ಕರಿಯ ಚರ್ಮದ ಹೊದಿಕೆ ಭಸ್ಮಾಂಗವು      || 4 ||

ಮಡದಿಯ ಮಾತಿಗೆ ಮೃಡ ತಾನು ನಸು ನಕ್ಕು 

ಪೊಡವಿಯಾಳಗೆಲ್ಲ , ನಿನ್ನವರ ಪೆಸರ ಪೇಳೆ

ಬಡತನವ ಬಿಟ್ಟು ಬಹಳ, ಭಾಗ್ಯವಾ ತೊಟ್ಟ 

ಸಡಗರದಿಂದ ಲೋಲಾಡೆ             || 5 ||

ಹಳ್ಳದಲಿ, ಮಡಿಯುಟ್ಟು , ಒಳ್ಳೆ ಮಡಿಯನೆ ಉಟ್ಟು 

ಮೆಲ್ಲನೆ ಶಿವ ಪೂಜೆಗಣಿ ಮಾಡುತಾ

ಕಳ್ಳತನದಲಿ ಬಂದು ಶಿವನಿಗೆಂಡತಿಯಾದ 

ಗುಳ್ಳೇದಾ ಗೌರಿಗಾರತಿ ಎತ್ತಿರೆ              || 6 ||

ನಾಗಭೂಷಣ ತಾನು ನಗುತ ಗೌರಿಯ ಕಂಡು 

ಹೋಗಿ ಬಂದ್ಯಾ ನಿಮ್ಮ ತವರು ಮನೆಗೆ

ಈಗ ಏನಿತ್ತರೂ, ಇನ್ನೇ ಇದ್ದರು ನೀವರೂ 

ಬೇಗದಲಿ ಹೇಳೆಂದಾನರಿಯೂ             || 7 ||

ಅಂದ ಮಾತಿಗೆ ದೇವಿ ಒಂದು ಮಾತಾಡಿದಳು, 

ಬಂಧು ಬಳಗದವರೆಲ್ಲ ಸುಖದಲಿಹರು

ತಂದೆ ಗಿರಿರಾಯ ಬಹಳ ಬಡವನು ವೃದ್ಧ  

ಇಂದೇನು ಕೊಡುವರ್ಹೀಗೆಂದಳು          || 8 ||

ಅಲ್ಪಸ್ವಲ್ಪದಿ ಮಾತ್ರ ಕೊಪ್ಪರಿಗೆ ಹಣವಿತ್ತು  

ಇಪ್ಪತ್ತು ಆನೆ ಕುದುರೆಗಳನ್ನಿತ್ತರು

ಬಪ್ಪದಲಿ ಬಳಸೆಂದು ಹೊನ್ನ ಕಳಶವನೇ 

ಇತ್ತರು ನಮ್ಮೂರ ಬಡವರ ಇವರು           || 9 ||

ಐದು ಪಟ್ಟಿ ಸೀರೆ ಐದು ಬಣ್ಣದ ಸೀರೆ ಮೇಲೆ 

ಐದು ಶಾಲು ಮತ್ತೆೈದು ಸಕಲಾತಿ

ಐದು ರತ್ನದಾ ಕಂಬಳಿ, ಪಟ್ಟೆ ಮಂಚವನೇಪಟ್ಟೆ  

ಇತ್ತರು ನಮ್ಮೂರ ಬಡವರ ಇವರು         || 10 ||

ಕರೆವ ಪಶುಗಳ  ಹದಿನಾರು, 

ಕಾಲಾಳುಗಳು ನೂರು ಜನ

ಕರೆವ ಎಮ್ಮೆ ಎಂಟು, ಅದರ ಕರುಗಳೆಂಟು , 

ಕರೆದು ಕಾಸಿ ಕೊಡುವುದಕೆ                 

ದಾಸಿಯನೆ ಇತ್ತರು, ನಮ್ಮೂರ ಬಡವರೇ ಇವರು | 11 ||

ನೂರು ಸೇರು ಸಣ್ಣಕ್ಕಿ, ನೂರು ಏಳು ಬೆಲ್ಲ , ನೂರು ಸೇರು ಅಡಿಕೆ

ನೂರು ಕಾಯಿತ್ತರು, ಹಣ್ಣು ವೀಳೆದೆಲೆಯನ್ನೆಲ್ಲವನು ಇತ್ತರು

ನಮ್ಮೂರ ಬಡವರ ಇವರು                        || 12 ||

ಇಷ್ಟೆಲ್ಲ ನಿನಗಿತ್ತರೂ, ಒಂದಿಷ್ಟಾದರೂ ಎನಗಿಲ್ಲವೇ?

ಇಷ್ಟು ಎನಗಿತ್ತರು, ಎನ್ನ ನಿಮಗಿತ್ತರು ಕೇಳೆಂದಳಾಗ ಪಾರ್ವತಿಯು

ಮಂಗಳಂ ಜಯ ಮಂಗಳಂ

ಮಂಗಳಂ ಶುಭ ಮಂಗಳಂ                      || 13 ||

||  ಶ್ರೀ ಗೌರಿ ದೇವ್ಯಾರ್ಪಣಮಸ್ತು  ||

ಹೀಗೆ ಒಕ್ಕೊರಲಿನಿಂದ ಈ ಹಾಡನ್ನು ಹಾಡಿ ಗೌರಿಗೆ ಮಡಿಲು ತುಂಬಿ, ಆರತಿ ಬೆಳಗಿ, ಸಂಭ್ರಮಪಡುತ್ತಿದ್ದುದುಂಟು.

For  ಗುಳ್ಳದ ಗೌರಿ( ಗುಳ್ಳವ್ವನ ) ಆರತಿ ಹಾಡು  Click Here  








No comments:

Post a Comment