Thursday, December 01, 2022

Special & Different appearance of Hanumaana -PART-I

       

ಶ್ರೀ ಹನುಮಂತದೇವರ ವಿಶೇಷ ಮತ್ತು ವಿಭಿನ್ನ ಪಾತ್ರಗಳು 

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಂ | ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಶರಣಾದ್ಭವೇತ್ ||        

ಮನೋಜವಂ ಮಾರುತ ತುಲ್ಯವೇಗಂ |ಜಿತೇ೦ದ್ರಿಯಂ ಬುಧ್ದಿಮತಾಂ ವರಿಷ್ಟಂ |ವಾತಾತ್ಮಜಂ ವಾನ್ನರಯೂಥ ಮುಖ್ಯಂ |ಶ್ರೀ ರಾಮ ದೂತಂ ಶರಣಮ್ ಪ್ರಪದ್ದ್ಯೇ ||

ಭೀಮಸೇನ ಸಮೋ ನಾಸ್ತಿ | ಸೇನಯೋರುಭಯೋರಪಿ || ಪಾಂಡಿತ್ಯೇ ಚ ಪಟುತ್ವೇ ಚ ಶೂರತ್ವೇಪಿ ಬಲೇಪಿ ಚ ||

ನ ಮಾಧವ ಸಮೊದೇವೋ ನ ಚ ಮಧ್ವ ಸಮೋ ಗುರುಃ  | ನ ತದ್ವಾಕ್ಯ ಸಮಃ ಶಾಸ್ತ್ರಂ ನ ಚ ತಸ್ಯ ಸಮಃ ಪುಮಾನ್ || 

SHRI HANUMAT STOTRAM  श्री हनुमत स्तोत्रं वे शा सं ऋग्वेद संहिता भाष्याचार्य श्री सीतारामाचार्य द्वैपायनाचार्य कट्टी उमरजकर विरचित 

ಶ್ರೀ ಭಾರತೀರಮಣ ಮುಖ್ಯ ಪ್ರಾಣ ದೇವರ ವಿಶೇಷ ಮತ್ತು ವಿಭಿನ್ನ ಪಾತ್ರಗಳ ಪರಿಚಯ ..

ಶ್ರೀ ರಾಮನ ಪಾತ್ರವನ್ನು ಪರಿಚಯುಸುವುದು  ಕವಿ ನಿಬದ್ಧ ಪ್ರೌಢೋಕ್ತಿಯಲ್ಲಿ ಸಾಕ್ಷಾತ್ ಬ್ರಹ್ಮರ್ಷಿ ನಾರದರ ನುಡಿಗಳಲ್ಲಿ ಹಾಗೆಯೇ ಹನುಮಂತನ  ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡುತ್ತಾರೆ. ಋಗ್ಯುಜುಸಾಮವೇದಗಳನ್ನೆಲ್ಲ ಚೆನ್ನಾಗಿ ತಿಳಿದವನು ವ್ಯಾಕರಣ ಪದ್ಧತಿಗಳನ್ನು, ಶಾಸ್ತ್ರಗಳಲ್ಲಿ ಪಳಗಿದವನು ರಾಜಧರ್ಮದಲ್ಲಿ ನಿಷ್ಣಾತನು, ದೌತ್ಯದ ನಯ ಕೌಶಲಗಳನ್ನು ಕರಗತ ಮಾಡಿಕೊಂಡವನು, ನುರಿತವನೂ  ಯಾವುದೇ ರೀತಿಯ ಅಪಶಬ್ದಗಳಿಲ್ಲದ, ಹಣೆ ಕಣ್ಣು ಹಾವ ಭಾವಗಳಲ್ಲಿ ಭಿನ್ನತೆ, ಮಾತಿನಲ್ಲಿ ಸುತ್ತು ಬಳಸುವಿಕೆ, ಸಂಧಿಗ್ಧತೆ, ವಿಳಂಬ ಇಂಥ ದೋಷವಿರದ ಚತುರತೆ,ಎದೆಯಿಂದಲೂ ಕಂಠ, ಮೂರ್ಧ್ನಿಗಳಿಂದಲೂ ತುಂಬಿ ಹೊಮ್ಮುವ, ಕರ್ಕಶ, ಕ್ಷೀಣವಿಲ್ಲದ ಧ್ವನಿ, ಸಂಸ್ಕಾರ ಸಂಪನ್ನನಾದ ಇವನ ವಾಣಿ ಅದ್ಭುತ ವಾಗಿಯೂ, ನಿರರ್ಗಳವಾಗಿಯೂ ಕಲ್ಯಾಣಯುತವಾಗಿಯು ಪ್ರವಹಿಸುತ್ತದೆ. ಎಂದೆಲ್ಲ ಶ್ರೀ ರಾಮನ ಮೂಲಕವೇ ವಾನರೋತ್ತಮನ ವ್ಯಕ್ತಿತ್ವದ ವರ್ಚ್ಯಸ್ಸನ್ನು ತಿಳಿಪಡಿಸುತ್ತಾರೆ.

1) ಶ್ರೀ ವಾಲ್ಮೀಕಿ ರಾಮಾಯಣದ ಪ್ರಕಾರ ಮೊಟ್ಟ ಮೊದಲ ಬಾರಿಗೆ ತೇಜಸ್ವಿ ಯುವಕರಾದ ಶ್ರೀ ರಾಮ ಲಕ್ಷ್ಮಣರು ದಂಡಕಾರಣ್ಯವನ್ನು ಪ್ರವೇಶಿಸಿದ ಕೂಡಲೇ ಗೂಢಚಾರರಿಂದ ತಿಳಿದ ಸುಗ್ರೀವ ರಾಜನು ಬಂದವರು ಯಾರೆಂಬುದನ್ನು, ಏಕೆ ಬಂದದ್ದು ಎಂಬುದನ್ನು ಕೂಲಂಕುಶವಾಗಿ ತಿಳಿದುಕೊಂಡು ಬರಲು ಮಹಾ ಬಲಾಢೄನಾದ, ಶಾಸ್ತ್ರ , ಶಸ್ತ್ರಗಳನ್ನೂ ವಾಕ್ ಚತುರತೆಯನ್ನು ಹೊಂದಿದ ಶ್ರೀ ಹನುಮಂತ ದೇವರನ್ನೇ ಕಳುಹಿಸಿದ.  

 2) ಶ್ರೀ ರಾಮರು ಇಂದ್ರ ಪುತ್ರ ವಾಲಿಯನ್ನು ನಿಗ್ರಹಿಸಿ ಬಾಣಗಳಿಂದ ಉರುಳಿಸಿದಾಗ ವಾಲಿಯು ತನ್ನ ಹಲವಾರು ಪ್ರಶ್ನೆಗಳಿಂದ ಶ್ರೀ ರಾಮರನ್ನು ಹೀಯಾಳಿಸಿದ,ಅದಕ್ಕೆ ಪ್ರತ್ತ್ಯುತ್ತರವಾಗಿ ನಾನು ಒಬ್ಬ ಇಕ್ಷ್ವಾಕು ವಂಶದ ರಾಜ ಈ ದಂಡಕಾರಣೄವು ನನ್ನ ಆಡಳಿತ ಕಕ್ಷದಲ್ಲೇ ಬರುತ್ತಿದ್ದು ನಿನ್ನಂಥ ದುಷ್ಟ, ಅಹಂಕಾರಿ,ತಮ್ಮನ ಹೆಂಡತಿಯನ್ನೇ ಉಪಭೋಗಿಸಿದ ನೀಚ ವಾನರ ಪಶುವನ್ನು ದಂಡಿಸುವುದು ಬೇಟೆಯಾಡುವುದು ನನ್ನ ಕರ್ತವ್ಯ. ವಾಲಿಯ ಸಮಸ್ತ ಪ್ರಶ್ನೆಗಳಿಗೆ ಸಮರ್ಪಕವಾಗಿ ಮನಮುಟ್ಟುವಂತೆ ತಿಳಿ ಹೇಳಿದ ಮೇಲೆ ವಾಲಿಯು ತನ್ನ ತಪ್ಪಿನ ಅರಿವಾಗಿ ಶ್ರೀ ರಾಮರಲ್ಲಿ ಕ್ಷಮೆ ಕೇಳುತ್ತಾನೆ. ತಾರೆಯ ಬಗ್ಗೆ ನನಗೆ ಆತಂಕವಿಲ್ಲ ಅವಳು ಸಮರ್ಥಳು, ರೂಮಾಳನ್ನು ತಮ್ಮನಾದ ಸುಗ್ರೀವನು ಕರೆದೊಯ್ಯುತ್ತಾನೆ,ಅಂಗದನದೇ  ನನಗೆ ಚಿಂತೆ ಎಂದು ಹೇಳುತ್ತಲೇ ಜೀವ ಬಿಡುತ್ತಾನೆ.ಆಗ ಶ್ರೀ ಹನುಮಂತ ದೇವರು ತಾರೆಗೆ ಹೇಳಿದಮಾತು, “ ವಾಲಿಯು ಸುಗ್ರೀವನಿಂದ ಕಬಳಿಸಿದ ರಾಜ್ಯವನ್ನು ಶ್ರೀ ರಾಮಚಂದ್ರ ಪ್ರಭುಗಳು  ಸುಗ್ರೀವನಿಗೆ ಮರಳಿಸುತ್ತಾರೆ, ಆದರೇ ವಾಲಿಯದೇ ಆದ ರಾಜ್ಯಕ್ಕೆ ತಂದೆಯ ಮರಣಾನಂತರ ವಾರಸುದಾರನಾದ ಮಗ ಅಂಗದನಿಗೆ ದೊರೆಯುವುದು ನ್ಯಾಯ ಸಮ್ಮತ. ಅದಕ್ಕೆ ಅಂಗದನನ್ನು ಆದಷ್ಟು ಬೇಗನೆ ಯುವರಾಜ ಪಟ್ಟಾಭಿಷೇಕ ಮಾಡಿದರೆ ಅವನ ಪರವಾಗಿ ನಾವೆಲ್ಲರೂ ಸರ್ವವೂ ಸುಗಮವಾಗಿ ನಡೆಯುವ ವರೆಗೆ ನೋಡಿಕೊಳ್ಳುತ್ತೇವೆ ಕಾಳಜಿ ಬೇಡ ಎಂದು ಧೈರ್ಯವನ್ನು ತುಂಬಿದರು.ಶ್ರೀ ಹನುಮಂತದೇವರ ಈ ಮಾತಿಗೆ ಶ್ರೀ ರಾಮ ಲಕ್ಷ್ಮಣ ಸುಗ್ರೀವ ಸಹಿತವಾಗಿ  ಎಲ್ಲರೂ ಒಮ್ಮನಸ್ಸಿನಿಂದ ಒಪ್ಪಿಕೊಂಡದ್ದಿದೆ. ವಾಲಿಯ ದಿನ ಕರ್ಮಗಳ ನಂತರ ತಾರಾದೇವಿಯು ಅಂಗದನು ಸುಗ್ರೀವನು ಶೋಕದಲ್ಲಿ ಮುಳುಗಿದ್ದಾಗ ಅವರಿಗೆ ವಿವೇಕವನ್ನು ತಿಳಿ ಹೇಳಿ ಮುಂದಿನ ಕರ್ತವ್ಯವನ್ನು ಸೂಚಿಸಿದವರೂ ಶ್ರೀ ಹನುಮಂತ ದೇವರೇ.       3 ) ಸೀತಾದೇವಿಯನ್ನು ಹುಡುಕಲು ಸುಗ್ರೀವನು ಕೆಲವೊಂದು ವೀರರಂತೆ ಶ್ರೀ ಹನುಮಂತ ದೇವರನ್ನೂ ದಕ್ಷಿಣದ ಕಡೆಗೆ ಕಳುಹಿಸಿದ. ಹನುಮಂತದೇವರೇ ಹುಡುಕಿ ಕಂಡು ಬರುವರೆಂಬ ನಂಬಿಕೆಯಿಂದ ಶ್ರೀ ರಾಮರು ಚೂಡಾಮಣಿಯನ್ನು ಕೊಟ್ಟು ಹರಿಸಿದರು ನೂರು ಯೋಜನದುದ್ದ ಸಮುದ್ರವನ್ನು ಲಂಘಿಸುವಾಗ ಆದ ರಾಕ್ಷಸರ ಉಪಟಳವನ್ನು ಹಿಮ್ಮೆಟ್ಟಿಸಿ ಲಂಕೆಯ ಪ್ರವೇಶ ಮಾಡುವಾಗ ಪ್ರವೇಶದ್ವಾರದಲ್ಲಿರುವ ಲಂಕಿಣಿಯನ್ನು ಹೊಡೆದುರುಳಿಸಿದಾಗ ಶಾಪ ಮುಕ್ತಳಾದದ್ದು ಅಶೋಕವನವನ್ನು ಹೊಕ್ಕು ಮಾತೆ ಸೀತೆಯನ್ನು ಕಂಡು ಗುರುತಿಸಿ ಶ್ರೀ ರಾಮರು ಕೊಟ್ಟಿರುವ ಚೂಡಾಮಣಿಯನ್ನು ಕೊಟ್ಟು ಸಾಂತ್ವನ ಹೇಳಿ ಶ್ರೀ ರಾಮಚಂದ್ರ ಪ್ರಭುಗಳನ್ನು ಕರೆದುಕೊಂಡು ಬರುವೆನೆಂದು ಖಚಿತವಾಗಿ ಹೇಳಿ ಶ್ರೀ ರಾಮರಿಗೆ ತೋರಿಸಲು ತಲೆಯ ಆಭರಣವನ್ನು ಸೀತಾ ಮಾತೆಯಿಂದ ಪಡೆದುಕೊಂಡು  ಶ್ರೀ ರಾಮರ ಭಕ್ತನ ಸಮಯೋಚಿತ ಪರಾಕ್ರಮ ನಿರೂಪಿಸಿ ಹಿಂತಿರುಗಿದನು.

4 ) ಮೇಘನಾದ ಲಕ್ಷ್ಮಣರ ಯುದ್ಧದಲ್ಲಿ ಇಂದ್ರಜಿತನ ನಾಗಪಾಶದಿಂದ ನೀಲವರ್ಣಕ್ಕೆ ತಿರುಗಿ ವೈದ್ಯರಾಜ ಜಾಂಬವಂತನ ಆದೇಶದಂತೆ ಸಂಜೀವನಿ ಸಸ್ಯವನ್ನು ಹಿಮಾಲಯ ಪರ್ವತ ಶ್ರೇಣಿಗಳಿಂದ ಹುಡುಕಿ ತರಲು ಸಮರ್ಥ ವಿವೇಚನಾ ಸಾಮರ್ಥ್ಯವುಳ್ಳ, ಆ ಸಸ್ಯವು ಸಿಗಲೇ ಇಲ್ಲವೆಂದು ಬರಿಗೈಯಲ್ಲಿ ಬರದಂಥ ವ್ಯಕ್ತಿಯನ್ನು ತ್ವರಿತವಾಗಿ ನಿಯೋಜಿಸಬೇಕಾಗಿತ್ತು ಆಗ ಎಲ್ಲರಿಗೂ ನೆನಪಾದದ್ದು ಶ್ರೀ ಹನುಮಂತ ದೇವರು.

5 ) ಶ್ರೀ ರಾಮಚಂದ್ರ ದೇವರು ತಮ್ಮ ವಾನರ ಸೇನೆಯ ಸಮೇತ ಭಾರತ ವರ್ಷ ಮತ್ತು ಶ್ರೀ ಲಂಕೆಯ ಸಮುದ್ರ ತೀರಕ್ಕೆ ಬಂದ ಸಮಯದಲ್ಲಿ ತಂದೆಯಾದ ದಿವಂಗತ ದಶರಥ ಮಹಾರಾಜರ ಪ್ರತಿ ಸಾಂವತ್ಸರಿಕ ಕಾರ್ಯ ನಿರ್ವಹಿಸಬೇಕಾಗಿ ಬಂದಾಗ ಅಲ್ಲದೆ ಮುಂಬರುವ ಯುದ್ಧದಲ್ಲಿ ವಿಜಯಿಯಾಗಲು ಸ್ವಸ್ತಿ ವಾಚನವನ್ನು ಮಾಡಲು ಯೋಗ್ಯ ವೇದ ಶಾಸ್ತ್ರ ಸಂಪನ್ನರಾಗಿರುವ ಬ್ರಾಹ್ಮಣೋತ್ತಮರ ಅವಶ್ಯಕತೆ ಇತ್ತು ಆಗ ಹನುಮಂತದೇವರು ಶ್ರೀ ರಾಮರೊಡನೆ ಸಮಾಲೋಚನೆ ನಡೆಸಿ ಲಂಕೇಶನಾದ ಶ್ರೀ ದಶಕಂಠ ಪೌಲಸ್ತ್ಯರ ಹೊರತಾಗಿ ಪುರೋಹಿತರಾರೂ ಸಿಗಲಾರರು ಎಂದು ಹೇಳಿದಾಗ ವಿಪ್ರೋತ್ತಮ ಪುಲಸ್ತ್ಯ ಪುತ್ರರನ್ನು ಕರೆತರಲು ವಾಕ್ ಪಟುತ್ವವನ್ನು ಹೊಂದಿದ ಚಾಣಾಕ್ಷರಾದ ಶ್ರೀ ಹನುಮಂತ ದೇವರನ್ನೇ ಕಳುಹಿಸಿದ್ದು ಅಲ್ಲವೇ. 

6 ) ಈ ಕೆಳಗಿನ ಘಟನೆಗಳು  ಮೂಲ ವಾಲ್ಮೀಕಿ ರಾಮಾಯಣದಲ್ಲಿಲ್ಲ, ಬೇರೆ ಬೇರೆ ರಾಮಾಯಣಗಳಲ್ಲಿ ಕಾಣಸಿಗುತ್ತವೆ   

         ಅ )   ರಾವಣನ ಜೊತೆಯ ಯುದ್ಧಾ ನಂತರದ ರಾತ್ರಿಯಲ್ಲಿ ವಿಶ್ರಾಮ ಪಡೆಯಲು ಶ್ರೀ ರಾಮ ಲಕ್ಷ್ಮಣರು ಮಲಗಿದಾಗ ಶ್ರೀ ಹನುಮಂತ ದೇವರು ಸಂರಕ್ಷಣ ಕವಚವನ್ನೇ ನಿರ್ಮಿಸಿದ್ದರು. ಮಾಯಾವಿಗಳಾದ ಸರ್ಪ ರೂಪ ಧಾರಿಗಳಾದ ಪಾತಾಳದಲ್ಲಿರುವ ಸೋದರಳಿಯಂದಿರಾದ ಅಹಿರಾವಣ ಮತ್ತು ಮಹಿರಾವಣರು  ಆ ವಜ್ರ ಕವಚವನ್ನು ಭೇದಿಸಿ ಶ್ರೀ ರಾಮ ಲಕ್ಷ್ಮಣರನ್ನು ಸುರಂಗಮಾರ್ಗವಾಗಿ ಪಾತಾಳಕ್ಕೆ ಕರೆದು ಕೊಂಡು ಹೋದರು. ಅಲ್ಲಿರುವ ತಮ್ಮ ಕುಲದೇವಿಯಾದ ಕಾಡೆಮ್ಮೆ ಜಾತಿಯ ಹೆಣ್ಣು ದೇವಿಗೆ ಶ್ರೀ ರಾಮ ಲಕ್ಷ್ಮಣರನ್ನು ಬಲಿಕೊಡುವ ವ್ಯವಸ್ಥೆ ಮಾಡಲಾಗಿತ್ತು. ಅದೇ ಸುರಂಗ ಮಾರ್ಗವಾಗಿ ಶ್ರೀ ಹನುಮಂತದೇವರು ಪಾತಾಳವನ್ನು ಪ್ರವೇಶಿಸಿ ದೇವಾಲಯವನ್ನು ಕಂಡುಹಿಡಿದು, ಆ ದುಷ್ಟ ದೇವಿಯನ್ನೇ ಸಂಹರಿಸಿ ಶ್ರೀ ರಾಮ ಲಕ್ಷ್ಮಣರನ್ನು ಬಲೆಯಿಂದ ಬಿಡಿಸಿದರು.ಶರೀರದಲ್ಲಿ ಒಂದು ಹನಿ ರಕ್ತ ಇದ್ದರೂ ಸಾಕು ಮತ್ತೆ ಜೀವಂತರಾಗಿ ಯುದ್ಧ ಮಾಡುವ ಶಕ್ತಿಯನ್ನು ಪಡೆದ ಅಹಿರಾವಣ ಮಹಿರಾವಣರನ್ನು ಕಪಟನಾಟಕ ಸುತ್ರಧಾರಿಯಾಗಿ ಶ್ರೀ ರಾಮ ಲಕ್ಷ್ಮಣರಿಂದಲೇ ವಧೆಯಾಗುವಂತೆ ಮಾಡಿದ ಹಿನ್ನೆಲೆಯ ಪಾತ್ರ ಶ್ರೀ ಹನುಮಂತ ದೇವರದು.    

         ಬ )  ಲಂಕಾಧಿಪತಿಯಾದ ರಾವಣನ ವಧೆಯಾಗಿ ಶ್ರೀ ರಾಮಚಂದ್ರ ಪ್ರಭುಗಳು ಲಕ್ಷ್ಮಣ, ಹನುಮಂತ ಸಮೇತವಾಗಿ ಅಯೋಧ್ಯೆಗೆ ಹಿಂತಿರುಗಿದ ಮೇಲೆ ಸ್ವಲ್ಪ ಕಾಲದಲ್ಲೇ ದಶಕಂಠನ ಮೊಮ್ಮಗನಾದ  ಶತಮುಖ ರಾವಣನು ಅಯೋಧ್ಯೆಯ ಮೇಲೆ ದಂಡೆತ್ತಿ ಬರುತ್ತಾನೆ  ಶ್ರೀ ರಾಮಚಂದ್ರ ಪ್ರಭುಗಳು ಲಕ್ಷ್ಮಣ, ಹನುಮಂತ ತಮ್ಮ ಎಲ್ಲ ಸೈನ್ಯ ಪರಿಪರಿಯಾಗಿ ಹಗಲು ರಾತ್ರಿ  ಕೂಡಿಯೇ ಯುದ್ಧ ಮಾಡಿದರೂ  ಅವನು ಹಿಮ್ಮೆಟ್ಟುವ ಲಕ್ಷಣಗಳು ಕಂಡು ಬರಲಿಲ್ಲ. ಶ್ರೀ ರಾಮಚಂದ್ರ ಪ್ರಭುಗಳು ಲಕ್ಷ್ಮಣ, ಹನುಮಂತ ಮತ್ತು ಸೇನಾ ನಾಯಕರುಗಳು ಸೈನ್ಯ ಬಳಲಿದರೆ ಹೊರತು, ಶತಮುಖ ಮುಂದುವರಿಯುತ್ತಲೇ ಇದ್ದ. ಈ ಅಪಾಯದ ಸಂಕೇತವನ್ನು ಗ್ರಹಿಸಿದ ಶ್ರೀ ಹನುಮಂತ ದೇವರು ರಾಜ ಗುರುಗಳಾದ ವಶಿಷ್ಟ ಮಹರ್ಷಿಗಳ ಜೊತೆ ಆಪ್ತಾಲೋಚನೆ ನಡೆಸಿದಾಗ ಶ್ರೀ ರಾಮರು ಲಕ್ಷ್ಮಣರು ಮತ್ತು ಯಾವುದೇ ಸೈನ್ಯದಿಂದ ಅವನ ಸಂಹಾರ ಸಾಧ್ಯವಿಲ್ಲ, ಒಂದು ಹೆಣ್ಣಿನಿಂದ ಅವನ ವಧೆ ಆಗಬೇಕು ಎಂದು ಬ್ರಹ್ಮದೇವರಿಂದ ವರ ಪಡೆದಿದ್ದಾನೆ. ಯಮುನಾ ನದಿಯ ತಟ ದಲ್ಲಿರುವ ಈ ರಣರಂಗಕ್ಕೆ ಯುದ್ಧ ವಿದ್ಯೆಯನ್ನು ಬಲ್ಲ ಮಹಾರಾಣಿ ಸೀತೆಯನ್ನೇ ಕರೆತರಬೇಕು ಎಂದು ಹೇಳಿದರು. ಅವಳಿಂದಲೇ ಶತಮುಖನ ಅಂತ್ಯವಾಗಲಿದೆ 

           ಈ ವಿಷಯವನ್ನು ಶ್ರೀ ರಾಮರಿಗೆ ತಿಳಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದು ಉಚಿತ ಎಂದು ಶ್ರೀ ಹನುಮಂತ ದೇವರು ಶ್ರೀ ರಾಮ ರಲ್ಲಿ ಅರಿಕೆ ಮಾಡಿಕೊಂಡರು. ಗುರುಗಳ ಆದೇಶವನ್ನು ಒಪ್ಪಿಕೊಂಡು ಈ ಅಪರಾತ್ರಿಯ ವೇಳೆಯಲ್ಲಿ ಅಯೋಧ್ಯೆಯಿಂದ ಸೀತೆಯನ್ನು ಕರೆತರುವುದು ಹೇಗೆ ? ಅಲ್ಲಿರುವವರಿಗೆ ಅವರ ಹಲವಾರು ಪ್ರಶ್ನೆಗಳಿಗೆ ಉತ್ತರಿಸ ಬೇಕಾದ ಕಠಿಣ ಪ್ರಸಂಗವಿದೆ . ಅದಕ್ಕೆ ಮೇಧಾವಿಯಾದ ಧೃತಿ, ಸ್ಥಿತಿಯನ್ನರಿತ, ಬರಿಗೈಯಲ್ಲಿ ಹಿಂತಿರುಗಿ ಬರಲಾರದಂಥ ಸಮಯಸೂಕ್ಷ್ಮತೆಯನ್ನು ಬಲ್ಲ  ಶ್ರೀ ಹನುಮಂತ ದೇವರನ್ನೇ ಕಳುಹಿಸುವುದು ಉಚಿತ ಎಂದು ನಿರ್ಣಯಿಸಿದರು . ಮಧ್ಯರಾತ್ರಿಯಸಮಯದಲ್ಲಿ ಯಮುನಾ ನದಿಯ ತಟದಿಂದ ಶರಯೂ ನದಿಯ ತಟದಲ್ಲಿರುವ ಅಯೋಧ್ಯೆಯ ರಾಜಭವನದ ವರೆಗೆ ವೇಗವಾಗಿ ಲಂಘಿಸಿ ಸೀತಾ ಮಾತೆ ಯನ್ನು ಕರೆದು ಎಬ್ಬಿಸಲು ಪ್ರಯತ್ನಿಸಿದ ಅಲ್ಲಿರುವ ಪ್ರತಿಯೊಬ್ಬರ ಪ್ರಶ್ನೆಗಳಿಗೆ ಸೂಕ್ತವಾಗಿ ಸಮಾಧಾನಕರವಾಗಿ ಉತ್ತರಿಸಿ ಸೀತಾ ಮಾತೆಯು ಮಲಗಿದ ಅರಮನೆಯನ್ನೇ ಎತ್ತಿ ರಣಾಂಗಣಕ್ಕೆ ತಂದಿಟ್ಟ 

         ಶ್ರೀ ವಶಿಷ್ಟರ ಆದೇಶದಂತೆ ಶ್ರೀ ರಾಮರು ಯಮುನಾ ನದಿಯಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲಿ ತಂದಿಟ್ಟ ಅರಮನೆಯ ಮುಂದೆ ಸಾಷ್ಟಾಂಗ ನಮಸ್ಕಾರ ಹಾಕಿದ ಕೂಡಲೇ ರಭಸದಿಂದ ಒದ್ದು ಬಾಗಿಲು ತೆರೆದು ಉಗ್ರರೂಪಿಣಿಯಾದ ಮಹಾಲಕ್ಷ್ಮಿಯು ಅವತರಿಸಿದಳು . ಸಹಸ್ರ ಕೈಗಳು ಪ್ರತಿಕೈಯಲ್ಲೂ ಆಯುಧ ಅಲ್ಲದೆ ಒಂದು ಕೈಯಲ್ಲಿ ಅಗ್ನಿಯ ಪಾತ್ರೆ ಇನ್ನೊಂದು ಕೈಯಲ್ಲಿ ರಕ್ತದ ಪಾತ್ರೆ ಹಿಡಿದ ಕೆಂಪಾದ ಮುಖ, ಹಣೆಗೆ ಸಿಂಧೂರ, ಹೊರತೆಗೆದ ನಾಲಿಗೆ, ಕೂರೆಯ ಹಲ್ಲುಗಳು ಈ ಅವತಾರದಲ್ಲಿ ಗರ್ಜನೆ ಯೊಂದಿಗೆ ಹೊರಬಂದಾಗ ಸಮಸ್ತರೆಲ್ಲರ ಗುಂಡಿಗೆ ಒಂದು ಕ್ಷಣ ಕಂಪಿಸಿ ಭಯ ಹುಟ್ಟಿಸಿತು. ನನಗೆ “ ಈಗ ರಕ್ತಬೇಕು , ರಕ್ತಬೇಕು “ ಎಂದು ಗರ್ಜಿಸತೊಡಗಿದಳು. ಶ್ರೀ ಮಹರ್ಷಿ ವಶಿಷ್ಟರು ಶತಮುಖ ರಾವಣ ಮತ್ತು ಅವನ ಸೈನ್ಯದ ಕಡೆಗೆ ಕೈ ಮಾಡಿ ತೋರಿಸಿದಾಗ ಭಯಂಕರ ರೂಪದಲ್ಲಿರುವ ಹೆಣ್ಣು ಗುಡುಗುತ್ತ ಬರುತ್ತಿರುವುದನ್ನು ಕಂಡು ಗರ್ಭಗಳಿತನಾದ. ಉಗ್ರ ರೂಪಿಣಿ ಲಕ್ಷ್ಮಿಯು ಕ್ಷಣಮಾತ್ರದಲ್ಲಿ ಅವನನ್ನೂ ಅವನ ಸೈನ್ಯವನ್ನು ನುಂಗಿ ಹಾಕಿದಳು. ಇನ್ನೂ ರಕ್ತ ಬೇಕು ಎಂದು ಕೂಗಾಡಿದಾಗ ಮುಂಬರುವ ದ್ವಾಪರ ಯುಗದಲ್ಲಿ ಮತ್ತೆ ಭವಿಷ್ಯದಲ್ಲಿಯೂ ಇದೇ ಸ್ಥಳದಲ್ಲಿ ನಿನಗೆ ಸಾಕಾಗುವಷ್ಟು ರಕ್ತ ಸಿಗಬಹುದು ಎಂದು ಹೇಳಿದೊಡನೆ ಪ್ರಸನ್ನ ಚಿತ್ತಳಾಗಿ ಅರಮನೆ ಪ್ರವೇಶ ಮಾಡಿದಳು. ಆ ಅರಮನೆಯ ಭಾಗವನ್ನು ಶ್ರೀ ಹನುಮಂತ ದೇವರು ಮತ್ತೆ ಅಯೋಧ್ಯೆಗೆ ತಂದಿಟ್ಟರು. ಆದರೇ ಈ ಘಟನೆಯ ಪ್ರತೀಕವೆಂದು ಅರಮನೆ ತಂದಿಟ್ಟ ಸ್ಥಳದಲ್ಲಿ ಶ್ರೀ ಲಕ್ಷ್ಮೀ ದೇವಿಯ ಮಂದಿರವನ್ನು ಕಟ್ಟಿದರು. ಈಗಲೂ ಸಹ ಆ ಮಂದಿರವು ಯಮುನಾ ನದಿಯ ದಂಡೆಯ ಮೇಲಿದೆ ಎಂದು ಹೇಳುತ್ತಾರೆ. ಇದಲ್ಲದೆ ಈ ಪ್ರಸಂಗವನ್ನು ಭಾರತದ ಜನಪದದಲ್ಲಿ ದುರ್ಗಿ ಮತ್ತು ಸೀತೆಯ ಆಟವೆಂದು ಮರಗವ್ವನ ಆಟ ಆಡುವ ಜನಾಂಗದವರಿಂದ ನೋಡಿದ್ದು ನೆನಪಿದೆ.                                                               

7 )  ಅಗ್ರತಃ ಚತುರೋ ವೇದಃ ಪ್ರುಷ್ಟತಃ ಸಶರಂ ಧನು | ಇದಂ ಬ್ರಾಹ್ಮಂಮಿದಂ ಕ್ಷಾತ್ರಮ್ ಶಾಪಾದಪಿ ಶರಾದಪಿ: ||

 ಶ್ರೀಮದ್ ಭಾರ್ಗವ ರಾಮರು ಶ್ರೀಮನ್ ಮಹರ್ಷಿ ಅಗಸ್ತ್ಯರು ದುಷ್ಟ ಸಂಹಾರಕ್ಕೆ ಶಿಷ್ಟ ಸಂರಕ್ಷಣಕ್ಕೆ ತಾವೇ ಸ್ವತಃ ಅಲ್ಲದೆ ತಮ್ಮ ಶಿಷ್ಯ ವೃಂದದಲ್ಲಿ ವೇದ ಶಾಸ್ತ್ರ ಸಂಪನ್ನರುಗಳಾಗಿದ್ದು ಗದೆ ಚಾಪ ಬಾಣಗಳನ್ನು ಹೊಂದಿ ಖಡ್ಗಾ ಯುಧರಾಗಿ ,ಮಹಾ ಬಲಿಷ್ಠರಾಗಿ ಲೋಕ ರಕ್ಷಣಾ ಕಾರ್ಯಕ್ಕೆ ತಮ್ಮನ್ನು ತಾವೇ ತೊಡಗಿಸಿಕೊಂಡು ಕಾರ್ಯ ನೆರವೇರಿಸುವ ಬಲವನ್ನೇ ನಿರ್ಮಿಸಿದರು ಈ ಕಾರ್ಯ ಪ್ರಣಾಳಿಗೆ ಶ್ರೀ ಹನುಮಂತ ದೇವರ ವೈಚಾರಿಕ ಪ್ರೇರಣೆಯೇ ಸರಿ                     

8 )  ತನ್ನದೇ ಅವತಾರವಾದ ದ್ವಾಪರ ಯುಗದಲ್ಲಿರುವ ಭೀಮಸೇನ ದೇವರಲ್ಲಿ ಅಹಂಕಾರ ದುರಭಿಮಾನ ಬಾರದೆ ಇರಲೆಂದು ಸಹಸ್ರ ಆನೆಗಳ ಶಕ್ತಿಯನ್ನು ಪರಿಚಯಿಸಿ ನಿರ್ಭಯನಾಗಿಯು, ಮಾತುಗಳಲ್ಲಿ ಚತುರತೆ ಉಳ್ಳವನು,ನಿರಂತರ ಆರೋಗ್ಯಪೂರ್ಣನು ಬುದ್ಧಿಬಲನು ಯಶವಂತನು,ಧೈರ್ಯ ಉಳ್ಳವನು,ಭಕ್ತಿ ಜ್ಞಾನ ವೈರಾಗ್ಯ ಪ್ರಜ್ಞ್ಯಾ ಮೇಧಾ, ಧೃತಿ, ಸ್ಥಿತಿ, ಯೋಗ,ಪ್ರಾಣ ಮತ್ತು ಬಲ ಪ್ರದಾನ ಮಾಡಿದವರು ಶ್ರೀ ಹನುಮಂತ ದೇವರು. “ ಪಾಪಂ ಪ್ರಣಶ್ಯತಿ ವೃಕೋದರ ಕೀರ್ತನೇನ ” ಎಂಬ ಉಕ್ತಿಯಿಂದ ಜನ ಮಾನಸದಲ್ಲಿರುವ ಪಾಪ ವಿಮೋಚನಾ ಕಾರ್ಯಕ್ಕೆ ಕಾರಣೀ ಭೂತರಾಗಿದ್ದಾರೆ. ಕುರುಕ್ಷೇತ್ರ ರಣರಂಗದಲ್ಲಿ ಕೌರವರ ಸೇನಾ ಧಿಪತಿಯಾಗಿ ಭೀಷ್ಮಾಚಾರ್ಯರು, ಪಾಂಡವರ  ಸೇನಾಧಿಪತಿಯಾಗಿ ದ್ಯುಷ್ಟದ್ಯುಮ್ನನು ಸೇನೆ ಗಳನ್ನೂ ನೋಡಿಕೊಳ್ಳುತ್ತಿದ್ದು ಹುರಿ ದುಂಬಿಸುತ್ತಿದ್ದರು  ಭೀಮನ ಕಡು ವೈರಿಯಾದ ದುರ್ಯೋಧನನು ಎರಡೂ ಸೇನೆಗಳ ಮಧ್ಯದಲ್ಲಿ ನಿಂತು ಅವಲೋಕಿಸಿ  ಹೀಗೆ ಹೇಳುತ್ತಾನೆ “ ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿ ರಕ್ಷಿತಂ | ಪರ್ಯಾಪ್ತಂ ತ್ವಿದ ಮೇ ತೇಷಾಂ ಬಲಂ ಭೀಮಾಭಿ ರಕ್ಷಿತಂ ||  

9 )  ಮಹಾಭಾರತ ಕಾಲದಲ್ಲಿ ಅರ್ಜುನನ ರಥದ ಮೇಲೆ ಶ್ರೀ ಹನುಮಂತ ದೇವರನ್ನು ಪ್ರತಿಷ್ಟ್ಹಾಪಿಸಿದ್ದಕ್ಕು ಒಂದು ಮಹತ್ವದ ಕಾರಣವಿದೆ.ಯುದ್ಧದಲ್ಲಿಯ ಎದುರಾಳಿಗಳಾದ ರಣ ಧುರಂಧರರ ಶಸ್ತ್ರ ಅಸ್ತ್ರ ಗಳಿಂದ ರಕ್ಷಣೆಯಾಗಲು, ರಥವು ಕಿಂಚಿತ್ತು ಕದಲದೆ ಇರುವಂತೆ ಅಸ್ತ್ರ ಗಳಿಂದ ರಥಕ್ಕೂ, ರಥದಲ್ಲಿರುವವರಿಗೂ ಪರೋಕ್ಷವಾದ ರಕ್ಷಣೆ ಕೊಟ್ಟವರು ಶ್ರೀ ಹನುಮಂತ ದೇವರೇ.

10 )  ಕಲಿಯುಗದಲ್ಲಿ ಶ್ರೀಮದ್ ಜಗದ್ಗುರು ಮಧ್ವಾಚಾರ್ಯರು ಲೋಕ ಕಲ್ಯಾಣಾರ್ಥವಾಗಿ ಉತ್ತರ ಭಾರತದ ಬದರೀನಾಥ, ಮುಕ್ತಿನಾಥ, ಕೇದಾರನಾಥ ಗಳಿಗೆ ಪ್ರವಾಸ ಕೈಕೊಂಡು ತಿರುಗಿ ದಕ್ಷಿಣಕ್ಕೆ ಬರುವಾಗ ಕೆಲವು ಭ್ರಷ್ಟರು, ಉಗ್ರವಾದಿಗಳು,ಆತಂಕ ಕಾರರು, ದುಷ್ಟರು ಅವರಿಗೆ ಕಿರುಕುಳ ಕೊಟ್ಟರು. ಇಂಥಹ ಜನರಿಗೆ ಯಾವುದೇ ಪವಾಡಗಳಿಂದ ಬಗ್ಗಿಸ ಲಾಗುವುದಿಲ್ಲವೆಂದು ಕಂಡುಕೊಂಡು ಬುದ್ಧಿ ಚ್ಚಾತುರ್ಯದಿಂದಲು, ತಮ್ಮ ಶರೀರ ದಾರ್ಢ್ಯದಿಂದಲೂ ಹಿಮ್ಮೆಟ್ಟಿಸಿ ಅವರನ್ನು ಅನುಯಾಯಿಗಳನ್ನಾಗಿ ಪರಿವರ್ತನೆಯಾಗುವ ಹಾಗೆ ಮಾಡಿದ್ದುದರ ಪ್ರಚೀತಿಗಳಿವೆ.

11  ) ಇನ್ನೂ ಪ್ರಚಲಿತದಲ್ಲಿ ಜಗದ್ವಂದ್ಯಾ ಚಾರ್ಯರುಗಳು ತಮ್ಮ ತಮ್ಮ ಕಾಲಘಟ್ಟದಲ್ಲಿ ಜನ ಕಲ್ಯಾಣವನ್ನೇ ಹಮ್ಮಿಕೊಂಡು ಉತ್ತರ ಭಾರತ, ದಕ್ಷಿಣ ಭಾರತ ಪ್ರವಾಸ ಮಾಡುತ್ತ ಲಿರುವಾಗ ತಮ್ಮ ಶಿಷ್ಯ ವೃಂದದಲ್ಲಿ ಶಾಸ್ತ್ರ ಗಳನ್ನು ಅರಿತ ಬ್ರಹ್ಮ ತೇಜಸ್ಸುಉಳ್ಳ ವ್ಯಕ್ತಿ ವಿಶೇಷಗಳನ್ನೇನೋ ನಿರ್ಮಿಸುತ್ತಿದ್ದರು. ಆದರೇ ಜೊತೆಜೊತೆ ಯಾಗಿ ಶಸ್ತ್ರಾತ್ರಗಳ, ಯುದ್ಧ ವಿದ್ಯೆಯನ್ನು, ಗದೆ, ಖಡ್ಗ ವಿದ್ಯೆಯನ್ನು ಬಲ್ಲ ಬಲಿಷ್ಟರಾದ ಶಸ್ತ್ರಾಧಾರಿತ, ಕ್ಷಾತ್ರ ತೇಜಸ್ಸು ಹೊಂದಿದ ದಳವನ್ನೂ ಸಹ ನಿರ್ಮಿಸ ಬೇಕಾದ ಅಗತ್ಯತೆಯನ್ನು ಕಂಡುಕೊಂಡರು. ಸಮಾನಾಂತರದಲ್ಲಿ ವೇದ ಶಾಸ್ತ್ರಗಳನ್ನು, ಶಸ್ತ್ರಾಸ್ತ್ರಗಳನ್ನು ಅವಗತ ಮಾಡಿಕೊಂಡಿರುವ ಗಾಂಭೀರ್ಯಯುಕ್ತ,ನೀತಿಯುಕ್ತರೂ, ಸಧೃಡರೂ, ಬಲವಂತರಾದ ಶರೀರ ಯುಷ್ಟಿಯನ್ನು ಹೊಂದಿದ ಮುತ್ಸದ್ದಿಗಳಾಗಿರುವ ಸ್ವಾವಲಂಬಿ ದಳಗಳನ್ನೇ ನಿರ್ಮಿಸುತ್ತ ಹೋದರು. ಆ ದಳಗಳಿಗೆ “ ರಾಮಾನಂದ ದಳ “ ಗಳೆಂದು ಹೆಸರಿಸಿ ಪ್ರತಿಯೊಬ್ಬರೂ ತಮ್ಮ ತಮ್ಮ ಕೌಶಲ್ಯಕ್ಕನುಗುಣವಾಗಿ ಆಯುಧಗಳನ್ನು ಹಿಡಿದಿರುವಂತೆ ಆದೇಶ ಕೊಟ್ಟರು. ಜನಹಿತ ಕ್ಕಾಗಿಯೇ ಪ್ರವಹಿಸಲು ಪ್ರತಿಜ್ಞೆಯನ್ನು ತೆಗೆದು ಕೊಂಡರು. ಸಿಂಧೂರವನ್ನಾಗಲಿ,ಗೋಪಿಚಂದನವನ್ನಾಗಲಿ,ಯಜ್ಞ ಭಸ್ಮವನ್ನಾಗಲಿ ಕಡ್ಡಾಯವಾಗಿ ಲೇಪಿಸಿಕೊಳ್ಳುವಂತೆ ಎಚ್ಚರಿಸಿದರು. ಆ ಎಲ್ಲ ದಳಗಳಿಗೆ ಪ್ರಧಾನಾಧಿದೇವತೆಯಾಗಿ, ಕುಲದೇವರಾಗಿ “ ಬಲಗೈಯಲ್ಲಿ ಗದೆ ಎತ್ತಿ ಎಡಗೈಯನ್ನು ಸೊಂಟದ  ಮೇಲಿಟ್ಟು ಕೊಂಡ, ವೀರಾವೇಶದ ಭಂಗಿಯಲ್ಲಿ ನಿಂತ ಶ್ರೀ ಹನುಮಂತ ದೇವರನ್ನು ಪ್ರತಿಷ್ಟಾಪಿಸಿ ಕೊಳ್ಳುವಂತೆಯು, ಆರಾಧಿಸುತ್ತಿರುವಂತೆಯು, ನಿರಂತರವಾಗಿ ನಿರ್ವಹಿಸುತ್ತಿರುವಂತೆಯೂ ಕುಲದೇವ ಸ್ಮರಣೆ ಮಾಡಿ ಪರಿಪಾಲಿಸುವ ಪ್ರತಿಜ್ಞೆಯನ್ನು ಅವರಿಂದ ಪಡೆದುಕೊಂಡರೆಂದು ಪ್ರಚೀತಿ.

        ಮುಂದೆ ಆ ದಳಗಳು ಗುರುಗಳ ಆದೇಶ ವನ್ನು ಚಾಚೂ ತಪ್ಪದೆ ಶಿಷ್ಟ ಪರಿಪಾಲನೆಗಾಗಿ ಸಂಘರ್ಷಿಸುತ್ತಿದ್ದರಂತೆ ಎಂಬ ಇತಿಹಾಸಗಳಿವೆ. ಆದರೇ ಅದೇ ದಳಗಳಲ್ಲಿ ಮತ ಭೇದ ಗಳುಂಟಾಗಿ ಕೈಯಲ್ಲಿ ತ್ರಿಶೂಲ ಹಿಡಿದು ಹಣೆ ಮೈಎಲ್ಲ ಚಿತಾಭಸ್ಮವನ್ನು ಬಳಿದುಕೊಂಡು ಅಘೋರಿಗಳಾಗಿ ಪರಿವರ್ತಿತರಾದರೆಂದು ಹೇಳುತ್ತಾರೆ. ಈಗಲೂ ಸಹ ಕೆಲಒಮ್ಮೆ ಆತಂಕವಾದಿಗಳ, ಉಗ್ರವಾದಿಗಳ ವಿರುದ್ಧವಾಗಿ ಅಘೋರಿಗಳೇ ಪ್ರತಿಭಟಿಸಿ ಹೋರಾಡಿ ನಿಗ್ರಹಿಸಿದ ಬಗ್ಗೆ ಸಮಾಚಾರ ಪತ್ರಗಳಲ್ಲಿ ಕಾಣುತ್ತೇವೆ.

12 )     ಅದಲ್ಲದೆ ಭಾರತ ದೇಶದ ಉದ್ದಕ್ಕೂ ಶ್ರೀ ವಾದಿರಾಜ ಮಹಾಸ್ವಾಮಿಗಳು ಎಡಗೈ ಸೊಂಟದಮೇಲಿಟ್ಟ, ಬಲಗೈಯಲ್ಲಿ ಹೂ ಹಿಡಿದ, ಲಂಗೋಟಿ ಧರಿಸಿದ, ಸಂಜೀಪವನ್ನು ಬಿಟ್ಟ, ಬಾಲಕ್ಕೆ ಘಂಟೆ ಕಟ್ಟಿದ ಸುಮಾರು ಎಪ್ಪತೈದು ಬಾಲ ಹನುಮಂತ ದೇವರ ಮೂರ್ತಿಗಳನ್ನು ಪ್ರತಿಷ್ಟಾಪಿಸಿದ್ದಾರೆ ಎಂಬುದು ಕೇಳಿಗೊತ್ತು.                                        

 13 )     ಭರತಖಂಡದ ಚಿಕ್ಕ ,ದೊಡ್ಡ ಯಾವುದೇ ಊರುಗಳಲ್ಲಿ ,ಪಟ್ಟಣಗಳಲ್ಲಿ ,ನಗರಗಳಲ್ಲಿ ಯಾವುದೇ ದೇವ ಮಂದಿರ ಇರದಿದ್ದರೂ ಶ್ರೀ ಹನುಮಂತ ದೇವರ ಗುಡಿ ಇದ್ದೇ ಇರುವುದೇ ಅವರ ನಿರಂತರ ಜನಪ್ರಿಯತೆಯ, ಜನ ಕಲ್ಯಾಣದ, ದುಷ್ಟವಿನಾಶಕ ಕಾರ್ಯಗಳ ಜೀವಂತ ಉದಾಹರಣೆಯಾಗಿದೆ. ಅಂತೆಯೇ ಜನರೂ ಸಹ ತಮ್ಮ ತಮ್ಮ  ಭಕ್ತಿಗನುಗುಣವಾಗಿ ,ಭಯ ವಿಮೋಚನೆಗನುಗುಣವಾಗಿ ಶ್ರೀ ಹನುಮಂತ ದೇವರನ್ನು ಚಿತ್ರಿಸಿ ಕೊಂಡಿದ್ದಾರೆ .ಸೌಮ್ಯರೂಪದ, ಎದುರು ಮುಖದ, ಪಾರ್ಶ್ವಮುಖದ, ತನ್ನದೇ ವೀರಾವೇಶ ಭಂಗಿ ಯಲ್ಲಿರುವ ಶಿಲಾಮುರ್ತಿಗಳನ್ನು ಭಾರತ ದೇಶದ ಉದ್ದಕ್ಕೂ ನೋಡಬಹುದು. ವಿಶೇಷವಾಗಿ ಭಯಹುಟ್ಟಿಸುವ ,ಹಲ್ಲುಕಡಿಯುತ್ತಿರುವ ,ಯುದ್ಧ ಸನ್ನದ್ಧ ರಾಗಿರುವ, ಕೈಯಲ್ಲಿ ಗದೆ ಇರದೇ ಒರೆಹಿರಿದ ಬೆತ್ತಲೆ ಖಡ್ಗ ಹಿಡಿದ, ಪೀತಾಂಬರವನ್ನು ಉಟ್ಟ, ಕಾಲಲ್ಲಿ ಮಚ್ಚೆ ಧರಿಸಿದ, ಒಂದು ಕೈಯಲ್ಲಿ ಹಾವು ಹಿಡಿದ ಶ್ರೀ ಹನುಮಂತ ದೇವರ ಮೂರ್ತಿಗಳು ಕೆಲ ಒಂದು ದೇಶಗಳಲ್ಲೂ ಪ್ರತಿ ಊರಲ್ಲೂ ಕಾಣಸಿಗುತ್ತವೆ . ಸಜ್ಜನರಿಗೋ ,  ನಾರಿಯರಿಗೋ, ಮಕ್ಕಳಿಗೋ, ಅನ್ಯಾಯವಾದ ತಕ್ಷಣ ರಕ್ಷಣೆಗೆ ಧಾವಿಸುವ ಕರ್ಮಯೋಗಿ ಹನುಮಂತ ದೇವರಿಂದ ಕಲಿಯುವುದು ಬಹಳಷ್ಟಿದೆ.

|मातर्मे मातरिश्वन् पितरतुल गुरों भ्रातरिष्टाप्त बंधो | स्वामिन् सर्वांतरात्मन्नजर जरयइतर्जन्ममृत्या मयानां | गोविन्दे देहि भक्तिं भवति च भगवन्नूर्जितां निर्निमित्तां | निर्व्याज्यां निश्चलां सद्गुणगणबृहतीं शाश्वती माशुदेव |||

 ಶ್ರೀ ಭಾರತೀ ರಮಣ ಮುಖ್ಯ ಪ್ರಾಣ ದೇವತಾ ಭ್ಯೋ ನಮಃ ||









           









































































No comments:

Post a Comment